ಮುಂಬರುವ ತಿಂಗಳುಗಳಲ್ಲಿ ತೆರೆಕಾಣಲಿರುವ ಭಾರತೀಯ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ಜಗತ್ತಿನ ಹೆಸರಾಂತ ಸಿನಿಮಾ ವೆಬ್‌ಸೈಟ್ ಐಎಂಡಿಬಿ (IMDb) 2026ರ ದ್ವಿತೀಯಾರ್ಧದ ‘ಟಾಪ್ 20 ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ’ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ ಅವರ ‘ಕಿಂಗ್’ ಅಥವಾ ಆಲಿಯಾ ಭಟ್ ಅವರ ‘ಆಲ್ಫಾ’ ಚಿತ್ರಗಳನ್ನು ಹಿಂದಿಕ್ಕಿ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್‌ನ ‘ರಾಮಾಯಣ: ಪಾರ್ಟ್ 1’ (Ramayana: Part 1) ಮೊದಲ ಸ್ಥಾನ ಪಡೆದುಕೊಂಡಿದೆ. ವಿಶೇಷ ಎಂದರೆ, ಈ ಪಟ್ಟಿಯ ಟಾಪ್ 3 ಸ್ಥಾನಗಳಲ್ಲಿ ಕನ್ನಡದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಎರಡು ಸಿನಿಮಾಗಳು ಸ್ಥಾನ ಪಡೆದುಕೊಂಡಿವೆ.
2026ರ ಮೊದಲಾರ್ಧದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಭಾಷೆಗಳ ಕೆಲವು ಸಿನಿಮಾಗಳು ಅಬ್ಬರಿಸಿವೆ. ರಣವೀರ್ ಸಿಂಗ್ ನಟನೆಯ ‘ಧುರಂಧರ್’, ಸೂರ್ಯ ಅಭಿನಯದ ‘ಕರುಪ್ಪು’, ಸನ್ನಿ ಡಿಯೋಲ್ ಅವರ ‘ಬಾರ್ಡರ್ 2’ ಮುಂತಾದ ಬಿಗ್ ಬಜೆಟ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ. ಈಗ ವರ್ಷದ ದ್ವಿತೀಯಾರ್ಧದ ಸರದಿ.
ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ ‘ರಾಮಾಯಣ: ಪಾರ್ಟ್ 1’ ಸಿನಿಮಾ ನಂಬರ್ ಸ್ಥಾನದಲ್ಲಿದ್ದು, ದೇಶಾದ್ಯಂತ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿದೆ. ಆಲಿಯಾ ಭಟ್ ಮತ್ತು ಶರ್ವರಿ ಮುಖ್ಯ ಪಾತ್ರದಲ್ಲಿರುವ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಆ್ಯಕ್ಷನ್ ಥ್ರಿಲ್ಲರ್ ‘ಆಲ್ಫಾ’ ಸಿನಿಮಾ ಎರಡನೇ ಸ್ಥಾನದಲ್ಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಿರುವ ಪ್ಯಾನ್-ಇಂಡಿಯಾ ಗ್ಯಾಂಗ್‌ಸ್ಟರ್ ಡ್ರಾಮಾ ‘ಟಾಕ್ಸಿಕ್’ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಶಾರುಖ್ ಖಾನ್, ಸುಹಾನಾ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಕಿಂಗ್’ ಸಿನಿಮಾ 4ನೇ ಸ್ಥಾನದಲ್ಲಿದ್ದರೆ, ಅಜಯ್ ದೇವಗನ್ ಅವರ ಕಾಮಿಡಿ ಎಂಟರ್‌ಟೈನರ್ ‘ಧಮಾಲ್ 4’ ಚಿತ್ರವು 5ನೇ ಸ್ಥಾನ ಪಡೆದಿದೆ. ಅಜಯ್ ದೇವಗನ್ ಮತ್ತು ಟಬು ನಟನೆಯ ‘ದೃಶ್ಯಂ 3’ ಸಿನಿಮಾ 6ನೇ ಸ್ಥಾನದಲ್ಲಿದೆ. ತಮಿಳು ನಟ ಸೂರ್ಯ ಅವರ ‘ವಿಶ್ವನಾಥ್ ಆ್ಯಂಡ್ ಸನ್ಸ್’ 7ನೇ ಸ್ಥಾನದಲ್ಲಿದೆ.
ಒಟಿಟಿಯಲ್ಲಿ ಧೂಳೆಬ್ಬಿಸಿ ಈಗ ಬೆಳ್ಳಿಪರದೆಗೆ ಬರಲಿರುವ ಪಂಕಜ್ ತ್ರಿಪಾಠಿ ಅವರ ‘ಮಿರ್ಜಾಪುರ್: ದಿ ಮೂವೀ’ 8ನೇ ಸ್ಥಾನ ಪಡೆದಿದೆ. ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ 9ನೇ ಸ್ಥಾನ ಹಾಗೂ ಶ್ರದ್ಧಾ ಕಪೂರ್ ಅವರ ‘ಈಠಾ’ ಚಿತ್ರವು 10ನೇ ಸ್ಥಾನ ಪಡೆದುಕೊಂಡಿವೆ. ಇಮ್ರಾನ್ ಹಶ್ಮಿಯ ನಟನೆಯ ‘ಆವಾರಪನ್ 2’ ಸಿನಿಮಾಗೆ 11ನೇ ಸ್ಥಾನ ಸಿಕ್ಕಿದೆ.
ಇದನ್ನೂ ಓದಿ: ಮುಂದಿನ ಚಿತ್ರದಲ್ಲಿ ಯಶ್ಗೆ ಪೊಲೀಸ್ ಪಾತ್ರ? ಐಎಂಡಿಬಿಯಲ್ಲಿ ಲೀಕ್ ಆಯ್ತು ಕಥೆ
ಸನ್ನಿ ಡಿಯೋಲ್ ಅವರ ‘ಇಕ್ಕಾ’ (12ನೇ ಸ್ಥಾನ), ತಮಿಳು ನಟ ಸಿಂಬು ಅವರ ‘ಅರಸನ್’ (13ನೇ ಸ್ಥಾನ), ಪೃಥ್ವಿರಾಜ್ ಸುಕುಮಾರನ್ ಅವರ ‘ಖಲೀಫಾ’ (14ನೇ ಸ್ಥಾನ) ಮತ್ತು ದುಲ್ಕರ್ ಸಲ್ಮಾನ್ ಅವರ ‘ಐ ಆಮ್ ಗೇಮ್’ (15ನೇ ಸ್ಥಾನ) ಪಡೆದಿವೆ. ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಯ ‘ರಣಬಾಲಿ’ 16ನೇ ಸ್ಥಾನದಲ್ಲಿದ್ದರೆ, ಮ್ಯಾಡಾಕ್ ಹಾರರ್ ಯೂನಿವರ್ಸ್‌ನ ‘ಶಕ್ತಿ ಶಾಲಿನಿ’ 17ನೇ ಸ್ಥಾನದಲ್ಲಿದೆ. ಕೊನೆಯ ಮೂರು ಸ್ಥಾನಗಳಲ್ಲಿ ‘ಹೃದಯಂ ಮುರಳಿ’, ‘ಸಿಗ್ಮಾ’ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ವನ್: ಫೋರ್ಸ್ ಆಫ್ ದಿ ಫಾರೆಸ್ಟ್’ ಸಿನಿಮಾಗಳಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
