ರಾಮ ಮಂದಿರ ದೇಣಿಗೆ ಹಗರಣಕ್ಕೆ ಭಾರಿ ತಿರುವು, ಎಸ್‌ಐಟಿಯಿಂದ 15 ಪುಟಗಳ ವರದಿ ಸಲ್ಲಿಕೆ, ಏನೇನಿದೆ? – Kannada News | Ram Mandir Donation Scam: SIT Uncovers Massive Irregularities in Ayodhya Temple Funds

ಅಯೋಧ್ಯೆ, ಜೂನ್ 24: ಅಯೋಧ್ಯೆಯ ಶ್ರೀ ರಾಮ ಮಂದಿರ(Ram Mandir)ದ ಕಾಣಿಕೆ ಹಣದ ದುರುಪಯೋಗ ಮತ್ತು ಕಳ್ಳತನದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತನ್ನ 15 ಪುಟಗಳ ಮೊದಲ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ದೇವಸ್ಥಾನದ ಇಡೀ ದೇಣಿಗೆ ವ್ಯವಸ್ಥೆಯಲ್ಲಿ ನಡೆದಿರುವ ಭೀಕರ ಅಕ್ರಮಗಳನ್ನು ಬಯಲಿಗೆಳೆಯಲಾಗಿದ್ದು, ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳ ನಡೆ ಈಗ ತೀವ್ರ ಸಂಶಯದ ಸುಳಿಗೆ ಸಿಲುಕಿದೆ.

ಎಸ್‌ಐಟಿ ಪತ್ತೆಹಚ್ಚಿದ ದೋಷಗಳು
ಚಿನ್ನ-ಬೆಳ್ಳಿಗೆ ದಾಖಲೆಯೇ ಇಲ್ಲ: ದೇವಸ್ಥಾನದ ಬ್ಯಾಂಕ್ ಖಾತೆಗಳ ಪ್ರಕಾರ, ಪ್ರತಿ ತಿಂಗಳು ಸರಾಸರಿ 25 ಲಕ್ಷ ಭಕ್ತರು ಹಾಗೂ ಕುಂಭಮೇಳದ ಸಮಯದಲ್ಲಿ ಬರೋಬ್ಬರಿ 1 ಕೋಟಿ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಭಕ್ತರು ನೀಡಿದ ಧಾನ್ಯ, ಎಣ್ಣೆ, ತುಪ್ಪ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳಿಗೆ ಟ್ರಸ್ಟ್‌ನಲ್ಲಿ ಯಾವುದೇ ನಿರ್ದಿಷ್ಟ ರಶೀದಿ ಅಥವಾ ಪುರಾವೆಗಳೇ ಸಿಕ್ಕಿಲ್ಲ.

ಹೆಚ್ಚಿದ ಭಕ್ತರು, ಕುಸಿದ ಆದಾಯ: ಹಲವಾರು ತಿಂಗಳುಗಳಲ್ಲಿ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದರೂ, ಬ್ಯಾಂಕಿಗೆ ಜಮೆಯಾದ ಕಾಣಿಕೆ ಹಣ ಮಾತ್ರ ತೀವ್ರವಾಗಿ ಕುಸಿದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಆ ತಿಂಗಳುಗಳಲ್ಲಿ ಭಕ್ತರು ನೋಟುಗಳಿಗಿಂತ ನಾಣ್ಯಗಳನ್ನೇ ಹೆಚ್ಚು ಹಾಕಿದ್ದರು ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ.

ದೇವಸ್ಥಾನದ ಅನೇಕ ಉದ್ಯೋಗಿಗಳು ಯಾವುದೇ ಲಿಖಿತ ಆದೇಶ ಅಥವಾ ಅಧಿಕೃತ ನೇಮಕಾತಿ ಪತ್ರಗಳಿಲ್ಲದೆಯೇ ಹಣಕಾಸಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಪತ್ತೆಯಾಗಿದೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆಯಲ್ಲಿ ಭಾರಿ ಲೋಪ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸತ್ಯಗಳು ಬಯಲು

ಚಂಪತ್ ರಾಯ್ ಸಮಿತಿಯ ಭಾರಿ ನಿರ್ಲಕ್ಷ್ಯ
ಕಾಣಿಕೆ ಎಣಿಕೆ ಮಾಡುವ ಮತ್ತು ದೇಣಿಗೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊತ್ತಿದ್ದ ಸಮಿತಿಯು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ವರದಿ ಹೇಳಿದೆ. ಟ್ರಸ್ಟ್‌ನ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ನೌಕರರ ಪಾತ್ರ ಈ ಹಗರಣದಲ್ಲಿ ಶಂಕಾಸ್ಪದವಾಗಿದೆ ಎಂದು ಎಸ್‌ಐಟಿ ನೇರವಾಗಿ ಬೆರಳು ತೋರಿಸಿದೆ.

ಎಸ್‌ಐಟಿ ಈಗಾಗಲೇ 60 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ದೇವಸ್ಥಾನದಲ್ಲಿ ಕೆಲಸ ಮಾಡುವ ಹಲವಾರು ಸಾಮಾನ್ಯ ಉದ್ಯೋಗಿಗಳ ಆಸ್ತಿ ಮತ್ತು ವೈಯಕ್ತಿಕ ಆದಾಯ ಕಳೆದ 5 ವರ್ಷಗಳಲ್ಲಿ ದಿಢೀರನೆ ಹಲವು ಪಟ್ಟು ವೇಗವಾಗಿ ಹೆಚ್ಚಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಮುಂದಿನ ನಡೆ: ಟ್ರಸ್ಟ್‌ನ ಆಡಳಿತವನ್ನು ಬಲಪಡಿಸಲು ಹಲವು ಕಟ್ಟುನಿಟ್ಟಿನ ಸಲಹೆಗಳನ್ನು ನೀಡಿರುವ ಎಸ್‌ಐಟಿ, ಕೇವಲ ಒಂದು ವಾರದಲ್ಲಿ ಪ್ರಾಥಮಿಕ ತನಿಖಾ ವರದಿಯನ್ನು ಪೂರ್ಣಗೊಳಿಸಿದ್ದು, ಮುಂದಿನ 15 ದಿನಗಳಲ್ಲಿ ಇಡೀ ಹಗರಣದ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *