ಪುಣೆ, ಜೂನ್ 24: ಯುವತಿ ತನ್ನ ಭಾವಿ ಪತಿಯ ಕೊಲೆ ಮಾಡಿ, ನನ್ನ ಹುಟ್ಟುಹಬ್ಬದಂದೇ ನೀನು ಹೊರಟು ಹೋದೆ, ಇಲ್ಲೇ ಎಲ್ಲೋ ಇದ್ದೀಯ ನನ್ನ ಹೃದಯಕ್ಕೆ ಅದು ಗೊತ್ತು ಎಂದು ಇನ್‌ಸ್ಟಾಗ್ರಾಂ ಸ್ಟೇಟಸ್ ಹಾಕಿದ್ದಳು. ಮಹಾರಾಷ್ಟ್ರದ ಲೋಹಗಡ್ ಕೋಟೆಯಲ್ಲಿ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣದಲ್ಲಿ ಸಿಯಾ ಗೋಯಲ್ ಇನ್‌ಸ್ಟಾಗ್ರಾಂ ಸ್ಟೇಟಸ್ ಹಾಕಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ತಾನೇ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿ, ಜಗತ್ತಿನ ಎದುರು ಕಣ್ಣೀರು ಹಾಕಿದ್ದ ಆಕೆಯ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ತನಿಖೆಯ ಪ್ರಮುಖ ಸಾಕ್ಷಿಯಾಗಿದೆ.
ಕೊಲೆ ಮಾಡಿದ ದಿನವೇ ಇನ್‌ಸ್ಟಾಗ್ರಾಮ್‌ನಲ್ಲಿ ಕಣ್ಣೀರಿನ ಪೋಸ್ಟ್
ಜೂನ್ 18 ರಂದು ಸಿಯಾ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಕೇತನ್‌ನನ್ನು ಕೋಟೆಯಿಂದ ತಳ್ಳಿ ಕೊಂದಿದ್ದಳು. ಆ ದಿನವೇ ಆಕೆಯ ಹುಟ್ಟುಹಬ್ಬವೂ ಆಗಿತ್ತು. ಕೊಲೆ ನಡೆದ ಬೆನ್ನಲ್ಲೇ ತನಗೇನೂ ತಿಳಿಯದಂತೆ ನಾಟಕವಾಡಿದ್ದ ಸಿಯಾ, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿಕೇತನ್ ಜೊತೆಗಿನ ರೊಮ್ಯಾಂಟಿಕ್ ಡ್ಯಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದಳು.
ನನ್ನ ಹುಟ್ಟುಹಬ್ಬದಂದೇ ನೀನು ನನ್ನನ್ನು ಬಿಟ್ಟು ಹೋದೆ, ನಾವು ಮದುವೆಯಾಗುವ ದಿನ ಹತ್ತಿರ ಬಂದಾಗ ನೀನು ನನ್ನನ್ನು ಏಕೆ ಬಿಟ್ಟು ಹೋದೆ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನನ್ನ ಕಣ್ಣುಗಳಲ್ಲಿ ನೂರಾರು ಕನಸುಗಳಿದ್ದವು, ಆದರೆ ಈಗ ಎಂದಿಗೂ ಉತ್ತರ ಸಿಗದ ಪ್ರಶ್ನೆಗಳು ಮಾತ್ರ ಉಳಿದಿವೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೆ, ನೀನು ನನಗೆ ಯಾಕೆ ಹೀಗೆ ಮಾಡಿದೆ? ಎಂದು ಬರೆದಿದ್ದಳು.
ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ
ಅಷ್ಟೇ ಅಲ್ಲದೆ, ಆಕೆ ಆ ವಿಡಿಯೋಗೆ ನೀನು ಇಲ್ಲೇ ಎಲ್ಲೋ ಇದ್ದೀಯಾ ಅದು ನನ್ನ ಹೃದಯಕ್ಕೆ ಗೊತ್ತು, ವಾಪಸ್ ಬಂದುಬಿಡು ಎಂದು ಭಾವನಾತ್ಮಕವಾಗಿ ಬರೆದಿದ್ದಳು.
ಇನ್‌ಸ್ಟಾಗ್ರಾಮ್ ಸ್ಟೋರಿಯಿಂದಲೇ ಪೊಲೀಸರಿಗೆ ಬಂದಿತ್ತು ಅನುಮಾನ
ಆರಂಭದಲ್ಲಿ ಸಿಯಾ ಪೊಲೀಸರ ಬಳಿ ಬಂದು, ಕೋಟೆಯ ಮೇಲೆ ಜೋರಾಗಿ ಗಾಳಿ ಬೀಸುತ್ತಿತ್ತು, ಹಾಗಾಗಿ ಕೇತನ್ ಕಾಲು ಜಾರಿ ಬಿದ್ದರು ಎಂದು ಕಥೆ ಕಟ್ಟಿದ್ದಳು. ಪೊಲೀಸರು ಕೂಡ ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿದ್ದರು. ಆದರೆ, ಕೊಲೆಯಾದ ದಿನವೇ ಇಷ್ಟೊಂದು ಪ್ಲಾನ್ ಮಾಡಿ ಇನ್‌ಸ್ಟಾಗ್ರಾಮ್ ವಿಡಿಯೋ ಎಡಿಟ್ ಮಾಡಿ ಹಾಕಿರುವುದನ್ನು ಗಮನಿಸಿದ ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಮತ್ತು ಅವರ ತಂಡಕ್ಕೆ ಸಿಯಾ ಮೇಲೆ ತೀವ್ರ ಅನುಮಾನ ಮೂಡಿತು.
ಮದುವೆ ಇಷ್ಟ ಇರಲಿಲ್ಲ
ಫೆಬ್ರವರಿಯಲ್ಲಿ ಇಬ್ಬರ ನಿಶ್ಚಿತಾರ್ಥವಾಗಿತ್ತು ಮತ್ತು ನವೆಂಬರ್‌ನಲ್ಲಿ ಉದಯಪುರದ ಅರಮನೆಯಲ್ಲಿ ಅದ್ದೂರಿ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ ಸಿಯಾಳಿಗೆ ತನ್ನ ಬಿಸಿನೆಸ್ ಪಾರ್ಟ್‌ನರ್ ಚೇತನ್ ಚೌಧರಿ ಜೊತೆ ಅಕ್ರಮ ಸಂಬಂಧವಿತ್ತು. ಆಕೆಗೆ ಕೇತನ್‌ನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ.
ಜೂನ್ 18 ರಂದು ಸಿಯಾ ಪ್ಲಾನ್ ಮಾಡಿ ಕೇತನ್‌ನನ್ನು ಐತಿಹಾಸಿಕ ಲೋಹಗಡ್ ಕೋಟೆಗೆ ಕರೆದೊಯ್ದಿದ್ದಾಳೆ. ಅಲ್ಲಿಗೆ ಮೊದಲೇ ಬಂದಿದ್ದ ಪ್ರಿಯಕರ ಚೇತನ್ ಜೊತೆ ಸೇರಿ, ಕೇತನ್‌ನನ್ನು ಹಿಂದಿನಿಂದ ತಳ್ಳಿ ಕೊಂದಿದ್ದಾಳೆ.
ಪ್ರಸ್ತುತ ಮೃತನ ತಂದೆ ವಿಶಾಲ್ ಅಗರ್ವಾಲ್ ನೀಡಿದ ದೂರಿನ ಮೇರೆಗೆ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಇಬ್ಬರನ್ನೂ ಕೊಲೆ ಹಾಗೂ ಕ್ರಿಮಿನಲ್ ಪಿತೂರಿ ಕಾಯ್ದೆಯಡಿ ಬಂಧಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
