ಚೆನ್ನೈ, ಮೇ 04: ಪಂಚರಾಜ್ಯ ಚುನಾವಣೆಯಲ್ಲಿ ಕೇರಳ ಒಂದನ್ನು ಹೊರತುಪಡಿಸಿದರೆ ಉಳಿದೆಡೆ ಕಾಂಗ್ರೆಸ್ ಸಾಧನೆ ಹೇಳಿಕೊಳ್ಳುವ ಮಟ್ಟಿಗೆ ಏನೂ ಆಗಿಲ್ಲ. ಈ ನಡುವೆ ತಮಿಳುನಾಡು ಚುನಾವಣೆ ಸಂಬಂಧ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದ್ದು, ರಾಹುಲ್ ಗಾಂಧಿ ಹೇಳಿದ್ದ ಮಾತು ಕೇಳದೆ ಹೋಗಿದ್ದೇ ತಮಿಳುನಾಡಲ್ಲಿ ಕಾಂಗ್ರೆಸ್ನ ಕಳಪೆ ಸಾಧನೆಗೆ ಕಾರಣವಾ? ಎಂಬ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಹಿರಿಯರ ಸಲಹೆ ಎಂದು ರಾಹುಲ್ ಸುಮ್ಮನಾಗಿದ್ದೇ ತಮಿಳುನಾಡಲ್ಲಿ ಕಾಂಗ್ರೆಸ್ ಪಾಲಿಗೆ ಮುಳುವಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ರಾಹುಲ್ ಏನು ಹೇಳಿದ್ದರು?
ತಮಿಳುನಾಡು ವಿಧಾನಸಭೆ ಚುನಾವಣೆಗೆ ನಟ ದಳಪತಿ ವಿಜಯ್ ನೇತೃತತ್ವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ರಾಹುಲ್ ಗಾಂಧಿ ಸೂಚಿಸಿದ್ದರು. ಆದರೆ ಟಿವಿಕೆ ಜತೆ ಮೈತ್ರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಿ.ಚಿದಂಬರಂ ಒಪ್ಪಿರಲಿಲ್ಲ. ಬದಲಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಜೊತೆಗೆ ಹೋಗೋಣ ಎಂದು ಅವರು ಸೂಚಿಸಿದ್ದರು. ಈ ವೇಳೆ ಹಿರಿಯರ ಮಾತಿಗೆ ಬೆಲೆ ಕೊಟ್ಟು ರಾಹುಲ್ ಗಾಂಧಿ ಕೂಡ ಸುಮ್ಮನಾಗಿದ್ದರು. ಹೀಗಾಗಿ ಖರ್ಗೆ, ಚಿದಂಬರಂ ನಿರ್ಧಾರದಿಂದ ಕಾಂಗ್ರೆಸ್ಗೆ ಸೋಲು ಎಂಬ ಚರ್ಚೆ ಪಕ್ಷದಲ್ಲಿಯೇ ಶುರುವಾಗಿದೆ ಎಂದು ಎಐಸಿಸಿ ಮೂಲದ ನಾಯಕರಿಂದಲೇ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ದಳಪತಿ ಕಿಂಗ್ ಮೇಕರ್ ಅಲ್ಲ, ಕಿಂಗ್; ತಮಿಳುನಾಡಿಗೆ ವಿಜಯ್ ಮುಂದಿನ ಸಿಎಂ?
ಟಿವಿಕೆ-ಕಾಂಗ್ರೆಸ್ ಮೈತ್ರಿಗೆ ವಿಜಯ್ ತಂದೆಯ ಬೆಂಬಲ
234 ಸದಸ್ಯರ ಬಲವನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯ ಅಧಿಕಾರ ಹಿಡಿಯಲು 118 ಸ್ಥಾನಗಳ ಅಗತ್ಯವಿದೆ. ನಟ ದಳಪತಿ ವಿಜಯ್ ನೇತೃತತ್ವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಬಹುಮತಕ್ಕೆ ಬೆರಳೆಣಿಕೆಯ ಸೀಟ್ಗಳು ಕೊರತೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಚುನಾವಣಾ ಫಲಿತಾಂಶ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ಸರ್ಕಾರ ರಚಿಸಲು ಅನ್ಯರ ಬೆಂಬಲ ಅನಿವಾರ್ಯವಾದರೆ ವಿಜಯ್ ಯಾರ ಜೊತೆ ಕೈಜೋಡಿಸಲಿದ್ದಾರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ನಡುವೆ ಮೈತ್ರಿ ಸಂಬಂಧ ಕಾಂಗ್ರೆಸ್ ಟಿವಿಕೆ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದ್ದು, ವಿಜಯ್ ತಂದೆಯೂ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
ಚುನಾವಣಾ ಫಲಿತಾಂಶದ ಲೈವ್ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 2:47 pm, Mon, 4 May 26
