ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶ ಹೊರಬಿದ್ದಿದ್ದು, ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಯಾರೂ ಊಹಿಸದ ರೀತಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ವಿಜಯ್ (Thalapathy Vijay) ಅವರದ್ದೇ ಹವಾ. ಈ ನಡುವೆ, ವಿಜಯ್ ಅವರ ಈ ಭರ್ಜರಿ ಗೆಲುವಿನ ಬಗ್ಗೆ ನಟಿ ಪೂಜಾ ಹೆಗ್ಡೆ (Pooja Hegde) ಅವರು ಬಹಳ ಹಿಂದೆಯೇ ನುಡಿದಿದ್ದ ಭವಿಷ್ಯ ಈಗ ಅಕ್ಷರಶಃ ನಿಜವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
1. ವೈರಲ್ ಆದ ಹಳೆಯ ವಿಡಿಯೋದಲ್ಲಿದೆ ಪೂಜಾ ಹೆಗ್ಡೆ ಭವಿಷ್ಯವಾಣಿ.
2. ಯಾರು ಚುನಾವಣೆ ಗೆಲ್ತಾರೆ ಎನ್ನೋದನ್ನು ಮೊದಲೇ ಹೇಳಿದ್ದ ನಟಿ.
3. ವಿಜಯ್ ಜತೆ ‘ಬೀಸ್ಟ್’, ‘ಜನ ನಾಯಗನ್’ ಚಿತ್ರದಲ್ಲಿ ಪೂಜಾ ನಟನೆ.
ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ಜನ ನಾಯಗನ್’ ಚಿತ್ರದ ಶೂಟಿಂಗ್ ಸೆಟ್‌ನ ಹಳೆಯ ವಿಡಿಯೋವೊಂದನ್ನು ಪೂಜಾ ಅವರು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅಲ್ಲಿನ ಬೋರ್ಡ್ ಒಂದರ ಮೇಲೆ ‘ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?’ ಎಂದು ಬರೆಯಲಾಗಿತ್ತು. ಆಗ ಪೂಜಾ ಹೆಗ್ಡೆ ಅವರು ತಮಾಷೆಯಾಗಿ ತಮ್ಮ ಪಕ್ಕದಲ್ಲೇ ನಿಂತಿದ್ದ ವಿಜಯ್ ಅವರತ್ತ ಬೆರಳು ಮಾಡಿ ತೋರಿಸಿದ್ದರು. ಪೂಜಾ ಅವರ ಈ ಮಾತಿಗೆ ವಿಜಯ್ ಅವರು ಮುಗುಳ್ನಗುತ್ತಾ ನಾಚಿಕೊಂಡಿದ್ದರು.
ಅಂದು ಪೂಜಾ ಹೆಗ್ಡೆ ತಮಾಷೆಯಾಗಿ ನುಡಿದಿದ್ದ ಈ ಭವಿಷ್ಯವಾಣಿ ಇಂದು ನಿಜವಾಗಿದೆ. ವಿಜಯ್ ಅವರ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಸರ್ಕಾರ ರಚಿಸಲು ಸಜ್ಜಾಗಿದೆ. ವಿಜಯ್ ಅವರಿಗೆ ರಾಜಕೀಯದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಅದಕ್ಕಾಗಿ ಅವರು ತೆರೆಮರೆಯಲ್ಲಿ ತಯಾರಿ ಮಾಡಿಕೊಂಡಿದ್ದರು. ಈಗ ಫಲ ಸಿಕ್ಕಿದೆ.
ಪೂಜಾ ಹೆಗ್ಡೆ ಹಂಚಿಕೊಂಡ ವಿಡಿಯೋ ಇಲ್ಲಿದೆ:
ತಮಿಳುನಾಡು ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಹೊಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಭದ್ರಕೋಟೆಯನ್ನು ವಿಜಯ್ ಪುಡಿಪುಡಿ ಮಾಡಿದ್ದಾರೆ. ‘ಬೀಸ್ಟ್’ ಸಿನಿಮಾ ನಂತರ ಪೂಜಾ ಮತ್ತು ವಿಜಯ್ ಜೋಡಿಯಾಗಿ ನಟಿಸುತ್ತಿರುವ ಎರಡನೇ ಸಿನಿಮಾ ‘ಜನ ನಾಯಗನ್’. ಈ ಸಿನಿಮಾದ ಶೀರ್ಷಿಕೆಗೆ ತಕ್ಕಂತೆಯೇ ವಿಜಯ್ ಇಂದು ನಿಜವಾದ ಜನನಾಯಕನಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಟಿವಿಕೆ ಜಯಭೇರಿ: ದಳಪತಿ ವಿಜಯ್ ಗೆಲುವಿಗೆ ರಿಷಬ್ ಶೆಟ್ಟಿ ಅಭಿನಂದನೆ
ವಿಜಯ್ ಅವರ ಈ ಅಪ್ರತಿಮ ಸಾಧನೆಗೆ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ನಯನತಾರಾ, ಹೇಮಾ ಮಾಲಿನಿ, ಟೈಗರ್ ಶ್ರಾಫ್, ನಾನಿ, ರಜನಿಕಾಂತ್, ರಿಷಬ್ ಶೆಟ್ಟಿ, ಶಿವರಾಜ್ಕುಮಾರ್ ಸೇರಿದಂತೆ ಹಲವು ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿಜಯ್ ಅವರ ರಾಜಕೀಯ ಯಶಸ್ಸನ್ನು ಕೊಂಡಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
