ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿImage Credit source: tv9
ಬೆಳಗಾವಿ, ಜುಲೈ 21: ಬೆಳಗಾವಿ (Belagavi) ನಗರದ ರಾಮದೇವ ಗಲ್ಲಿಯಲ್ಲಿರುವ ವಿಪಿ ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಅಂಗಡಿಯ ಮಾಲೀಕ ಕೃಷ್ಣಾನಂದ ವೇರ್ಣೇಕರ ಅವರೇ ವಿಮೆ ಹಣ ಪಡೆಯುವ ಉದ್ದೇಶದಿಂದ ಹಾಗೂ ಅಡವಿಟ್ಟಿದ್ದ ಚಿನ್ನವನ್ನು ಅಕ್ರಮವಾಗಿ ತಮ್ಮ ವಶಕ್ಕೆ ಪಡೆಯಲು ಕಳ್ಳತನದ ನಾಟಕ ರೂಪಿಸಿದ್ದಾಗಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತನ್ನದೇ ಅಂಗಡಿಯಿಂದ 65.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ
ಆರೋಪಿ ಕೃಷ್ಣಾನಂದ ವೇರ್ಣೇಕರ ತನ್ನ ಅಂಗಡಿಯಿಂದ ಸುಮಾರು 65.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳುವಾಗಿದೆ ಎಂದು ಖಡೇಬಜಾರ್ ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ವಾನದಳದೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಕಳ್ಳತನಕ್ಕೂ ಮುನ್ನ ಸಿಸಿಟಿವಿ ಸ್ಥಗಿತಗೊಳಿಸಲು ಯತ್ನಿಸಿದ್ದ ಆರೋಪಿ
ಕಳ್ಳತನಕ್ಕೂ ಮುನ್ನ ಸಿಸಿಟಿವಿ ಸ್ಥಗಿತಗೊಳಿಸಲು ಆರೋಪಿ ಯತ್ನಿಸಿದ್ದ. ಆದರೆ ಡಿಸ್ಪ್ಲೇ ಮಾತ್ರ ಆಫ್ ಆಗಿ, ಕ್ಯಾಮೆರಾ ರೆಕಾರ್ಡಿಂಗ್ ಮುಂದುವರಿದ ಕಾರಣ, ಚಿನ್ನಾಭರಣ ಮತ್ತು ನಗದನ್ನು ತೆಗೆದು ತನ್ನ ಸ್ಕೂಟಿಯ ಡಿಕ್ಕಿಯಲ್ಲಿ ಇಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಸಾಕ್ಷ್ಯದ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಮೊಬೈಲ್ ವಾಪಸ್ ನೀಡಿಲ್ಲವೆಂದು ದೇವಸ್ಥಾನದಲ್ಲೇ ಗೆಳೆಯನ ಕೊಲೆ! ಆರೋಪಿ ಅರೆಸ್ಟ್
ಆರೋಪಿಯಿಂದ 519.8 ಗ್ರಾಂ ಚಿನ್ನಾಭರಣ (₹62.60 ಲಕ್ಷ), 31 ಗ್ರಾಂ ಬೆಳ್ಳಿ ಆಭರಣ (₹60 ಸಾವಿರ), ₹2.83 ಲಕ್ಷ ನಗದು ಹಾಗೂ ₹45 ಸಾವಿರ ಮೌಲ್ಯದ ಬೈಕ್ ಸೇರಿದಂತೆ ಒಟ್ಟು ಸುಮಾರು ₹65.95 ಲಕ್ಷ ಮೌಲ್ಯದ ಸ್ವತ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಡೇಬಜಾರ್ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ