ವಿರಾಟ್ ಕೊಹ್ಲಿಯೊಂದಿಗೆ ಗೌತಮ್ ‘ಗಂಭೀರ’ – Kannada News | Virat Kohli and Gambhir ‘Cold War’ Rumours Spark Amid India vs England Series

ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲವೇ? ಅದರಲ್ಲೂ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಮೂಡಿದೆಯೇ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು ಬರ್ಮಿಂಗ್​ಹ್ಯಾಮ್​ನಲ್ಲಿ ಕಂಡುಬಂದ ದೃಶ್ಯಗಳೇ ಮುಖ್ಯ ಕಾರಣ.

ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ತರಬೇತಿ ಶಿಬಿರದ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಪರಸ್ಪರ ಮಾತನಾಡದೆ ದೂರ ಉಳಿದಿರುವುದು ಕಂಡು ಬಂದಿದೆ. ಇದರ ಬೆನ್ನಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಹುಟ್ಟಿಕೊಂಡಿವೆ.

ನೆಟ್ಸ್‌ನಲ್ಲಿ ನಡೆದಿದ್ದೇನು?

ವರದಿಗಳ ಪ್ರಕಾರ, ಇಡೀ ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವೆ ಯಾವುದೇ ನೇರ ಸಂಭಾಷಣೆ ನಡೆದಿಲ್ಲ. ಕೋಚ್ ಗಂಭೀರ್ ಅವರು ನಾಯಕ ಶುಭ್​ಮನ್ ಗಿಲ್, ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರೊಂದಿಗೆ ಸುದೀರ್ಘವಾಗಿ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುತ್ತಿದ್ದರು.

ಆದರೆ, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ವಿರಾಟ್ ಕೊಹ್ಲಿ ಕೇವಲ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರೊಂದಿಗೆ ಮಾತ್ರ ಸುದೀರ್ಘವಾಗಿ ಮಾತನಾಡುತ್ತಾ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ಅಲ್ಲದೆ ಬ್ಯಾಟಿಂಗ್ ಕೋಚ್ ಕೊಟಕ್ ಅವರೇ ಇಬ್ಬರ (ಕೊಹ್ಲಿ-ಗಂಭೀರ್) ನಡುವೆ ಸಂದೇಶ ರವಾನಿಸುವ ಕೊಂಡಿಯಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿವಾದದ ಹಿನ್ನೆಲೆ ಮತ್ತು ಪ್ರಸ್ತುತ ಸ್ಥಿತಿ:

ಐಪಿಎಲ್ ಪಂದ್ಯಗಳ ವೇಳೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ನಡೆದಿದ್ದ ಮೈದಾನದ ಜಗಳಗಳು ಎಲ್ಲರಿಗೂ ತಿಳಿದಿವೆ. ಇತ್ತೀಚೆಗೆ ಗಂಭೀರ್ ಕೋಚ್ ಆಗಿ ನೇಮಕಗೊಂಡಾಗ ಇಬ್ಬರೂ ಭಿನ್ನಾಭಿಪ್ರಾಯ ಮರೆತಿದ್ದಾರೆ ಎನ್ನಲಾಗಿತ್ತಾದರೂ, ಪ್ರಸ್ತುತ ಘಟನೆ ಹಳೆಯ ಕಹಿ ಘಟನೆಯನ್ನು ಮತ್ತೆ ನೆನಪಿಸಿದೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಸತತ ಸೋಲು ಕಂಡಿರುವ ಕಾರಣ ಗಂಭೀರ್ ಸದ್ಯ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಹೀಗಾಗಿ ಏಕದಿನ ಸರಣಿ ಅವರ ಕೋಚಿಂಗ್ ಭವಿಷ್ಯಕ್ಕೆ ಅತ್ಯಂತ ಪ್ರಮುಖವಾಗಿದೆ. ಇದರ ನಡುವೆ ಕೊಹ್ಲಿಯೊಂದಿಗಿನ ಮುನಿಸಿನ ವದಂತಿ ಮಹತ್ವ ಪಡೆದುಕೊಂಡಿದೆ.

ಏನೇ ವದಂತಿಗಳಿದ್ದರೂ, ನಾಯಕ ಶುಭ್​ಮನ್ ಗಿಲ್ ಅವರು 2027ರ ಏಕದಿನ ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ತಂಡದ ಪ್ರಮುಖ ಭಾಗವಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು

ಬಿಸಿಸಿಐ ಮೌನ:

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಲ್‌ಚಲ್ ಸೃಷ್ಟಿಯಾಗಿದ್ದರೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಗಲಿ ಅಥವಾ ಕೊಹ್ಲಿ-ಗಂಭೀರ್ ಜೋಡಿಯಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದೀಗ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯವಾಡಲು ಸಜ್ಜಾಗಿ ನಿಂತಿದ್ದು, ಈ ಪಂದ್ಯ ವೇಳೆಯಾದರೂ ಇಬ್ಬರು ಮುನಿಸು ಮರೆತು ಪರಸ್ಪರ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Published On – 8:42 am, Thu, 16 July 26

Source link

Leave a Reply

Your email address will not be published. Required fields are marked *