ಶ್ರೀನಗರ ಕಿಟ್ಟಿ ನಟನೆಯ ‘ವೇಷಗಳು’ ಸಿನಿಮಾದ ವಿಶೇಷ ಹಾಡು ಬಿಡುಗಡೆ – Kannada News | Srinagar Kitty Veshagalu Movie Special Song released Film based on Ravi Belagere Story

ನಟ ಶ್ರೀನಗರ ಕಿಟ್ಟಿ (Srinagar Kitty) ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಆ ಪ್ರಯುಕ್ತ ಮೂರು ಸಿನಿಮಾಗಳ ಸುದ್ದಿಗೋಷ್ಠಿಯನ್ನು ಒಟ್ಟಿಗೆ ನಡೆಸಲಾಯಿತು. ‘ವೇಷಗಳು’, ‘ಲವ್ ಕೇಸ್’ ಹಾಗೂ ‘ಮದರ್ ಲವ್’ ಚಿತ್ರತಂಡಗಳು ಒಂದೇ ವೇದಿಕೆಯಲ್ಲಿ ಸೇರಿದ್ದವು. ಪತ್ರಕರ್ತ ರವಿ ಬೆಳಗೆರೆ ಅವರು ಜೋಗತಿಯರ ಬದುಕಿನ ಬಗ್ಗೆ ಬರೆದ ‘ವೇಷಗಳು’ (Veshagalu) ಕಥೆಯನ್ನಾಧರಿಸಿ‌ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ವಿಶೇಷ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಹಾಡಿಗೆ ಶ್ರೀನಗರ ಕಿಟ್ಟಿ ಅವರು ಧ್ವನಿ ನೀಡಿದ್ದಾರೆ.

ಕಿಶನ್ ರಾವ್ ದಳವಿ ಅವರು ‘ವೇಷಗಳು’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬಕ್ಕೆ ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿತ್ತು. ಈಗ ಸಾಂಗ್ ರಿಲೀಸ್ ಜೊತೆಗೆ ಶೂಟಿಂಗ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಭಾವನಾ ಬೆಳಗೆರೆ ಅರ್ಪಿಸುವ ‘ವೇಷಗಳು’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ಬಸಪ್ಪ ಮತ್ತು ಬಸಮ್ಮ ಜೋಗತಿ ಎಂಬ ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ.

‘ವೇಷಗಳು’ ಚಿತ್ರದ ಹಾಡು:

ಮೊದಲ ಹಂತದ ಶೂಟಿಂಗ್ ಮುಗಿಸಿದ ‘ವೇಷಗಳು’:

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರು ಮಾತನಾಡಿದರು. ‘ವೇಷಗಳು ಸಿನಿಮಾದಲ್ಲಿ ಜೋಗತಿಯರ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಕುರಿತಂತೆ ಹೇಳಲಾಗುತ್ತಿದೆ. ಈಗಾಗಲೇ 12 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಪ್ರಮುಖ ಭಾಗ ಇನ್ನೂ ಆರಂಭವಾಗಿಲ್ಲ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಹಾಗೂ ಉತ್ತರ ಭಾರತದ ಮಹಾಕಾಲೇಶ್ವರ ಮುಂತಾದ ಕಡೆಗಳಿಗೆ ಹೋಗಬೇಕಾಗಿದೆ. ಚಿತ್ರದಲ್ಲಿ ಬಹುತೇಕ ಬಳ್ಳಾರಿ ಕನ್ನಡ ಭಾಷೆಯನ್ನು ಬಳಸಲಾಗಿದೆ’ ಎಂದು ಅವರು ಹೇಳಿದರು.

3 ಚಿತ್ರತಂಡಗಳ ಬಗ್ಗೆ ಶ್ರೀನಗರ ಕಿಟ್ಟಿ ಸಂತಸ:

ಹುಟ್ಟುಹಬ್ಬಕ್ಕೆ ಮೂರು ಚಿತ್ರತಂಡಗಳು ಒಂದೆಡೆ ಸೇರಿದ್ದು ಶ್ರೀನಗರ ಕಿಟ್ಟಿ ಅವರಿಗೆ ಖುಷಿ ತಂದಿತು. ‘ಈ ಮೂರೂ ಚಿತ್ರಗಳು ಬಹಳ ಚೆನ್ನಾಗಿ ಮೂಡಿಬರುತ್ತಿವೆ. ಅದರಲ್ಲೂ ವೇಷಗಳು ತುಂಬಾ ವಿಶೇಷವಾದ ಸಿನಿಮಾ. ಎರಡನೇ ಹಂತದ ಚಿತ್ರೀಕರಣದಲ್ಲಿ ನಾನು ಭಾಗವಹಿಸುತ್ತಿದ್ದೇನೆ’ ಎಂದು ಅವರು ಹೇಳಿದರು. ಸಿನಿಮಾ ಮೂಡಿಬರುತ್ತಿರುವ ರೀತಿಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜೋಗತಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ; ‘ವೇಷಗಳು’ ಸಿನಿಮಾದ ಟೀಸರ್ ಬಿಡುಗಡೆ

ಬಹುತೇಕ ಆವರಿಸಿಕೊಂಡಿದೆ ‘ಬಸಪ್ಪ’ ಪಾತ್ರ:

‘ವೇಷಗಳು’ ಸಿನಿಮಾದಲ್ಲಿ ಬಸಪ್ಪ ಪಾತ್ರವೇ ಬಹುತೇಕ ಆವರಿಸಿಕೊಂಡಿದೆ. ಶ್ರೀನಗರ ಕಿಟ್ಟಿ ಅವರು ಜೋಗತಿ ಪಾತ್ರಕ್ಕಾಗಿ ಬಹಳ ಮಾಹಿತಿ ಪಡೆದುಕೊಂಡು ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ, ಹಾಡಿನ ಬಗ್ಗೆ ಮಾಹಿತಿ ನೀಡಿದರು. ‘ಕಿಟ್ಟಿ ಅವರು ಕೇವಲ‌ 3 ಗಂಟೆಯೊಳಗೆ ಈ ಹಾಡನ್ನು ಹಾಡಿದರು‌’ ಎಂದು ಅವರು ಹೇಳಿದರು. ರಾಜ್ ಗುರು ದತ್ತರಾಜ್ ಅವರು ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಅಕ್ಷಯ್ ಪಿ. ರಾವ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *