ಬಾಲಿವುಡ್‌ನ ಪ್ರತಿಭಾವಂತ ನಟ ವಿಕ್ರಾಂತ್ ಮಾಸ್ಸಿ (Vikrant Massey) ಸದ್ಯ ಯಶಸ್ಸಿನ ಅಲೆಯಲ್ಲಿದ್ದಾರೆ. ‘ಪ್ರೀತಮ್ ಆ್ಯಂಡ್ ಪೆಡ್ರೋ’ ಸರಣಿ ಮೆಚ್ಚುಗೆ ಪಡೆದಿದೆ. ಇದರಲ್ಲಿ ವಿಲನ್ ಶೇಡ್ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಈಗ ಅವರು ಮತ್ತೊಂದು ದೊಡ್ಡ ಸಿನಿಮಾಗೆ ಸಜ್ಜಾಗಿದ್ದಾರೆ. ಅವರ ನಟನೆಯ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ‘ವೈಟ್’ ಚಿತ್ರದ ಡಬ್ಬಿಂಗ್ ಕೆಲಸಗಳು ಈಗ ಅಧಿಕೃತವಾಗಿ ಪೂರ್ಣಗೊಂಡಿವೆ. ಚಿತ್ರದಲ್ಲಿ ವಿಕ್ರಾಂತ್ ಮಾಸ್ಸಿ ಅವರು ಜಾಗತಿಕ ಆಧ್ಯಾತ್ಮ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.
ಗುರು ಪೂರ್ಣಿಮೆಯ ದಿನದಂದೇ ‘ವೈಟ್’ ಚಿತ್ರದ ಡಬ್ಬಿಂಗ್ ಮುಕ್ತಾಯಗೊಂಡಿರುವುದು ವಿಶೇಷ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಮಹಾವೀರ್ ಜೈನ್ ಅವರು ಸಿನಿಮಾದ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಪ್ರಸ್ತುತ ಜಗತ್ತು ಯುದ್ಧ ಮತ್ತು ಸಂಘರ್ಷಗಳಿಗೆ ಪರಿಹಾರವನ್ನು ಹುಡುಕುತ್ತಿದೆ. ಇಂತಹ ಸಮಯದಲ್ಲಿ ‘ವೈಟ್’ ಸಿನಿಮಾ ಬಿಡುಗಡೆಯಾಗುತ್ತಿರುವುದು ಸೂಕ್ತವಾಗಿದೆ. ಈ ಚಿತ್ರವು ಜಗತ್ತಿಗೆ ಶಾಂತಿಯ ಮಾರ್ಗವನ್ನು ತೋರಿಸಲಿದೆ. ಇದು ಭಾರತದಿಂದ ಇಡೀ ವಿಶ್ವಕ್ಕೆ ಸಿಗಲಿರುವ ಒಂದು ಅಪೂರ್ವ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಒಂದು ಬಯೋಪಿಕ್ ಮಾಡಬೇಕು ಎಂದರೆ ಎಚ್ಚರಿಕೆ ಬೇಕು. ನಟನೆ ಪರಿಪೂರ್ಣತೆಯಿಂದ ಕೂಡಿರಬೇಕು. ಇದನ್ನು ವಿಕ್ರಾಂತ್ ಯಶಸ್ವಿಯಾಗಿ ನಟಿಸಿದ್ದಾರೆ ಎಂಬ ಭರವಸೆಯನ್ನು ನಿರ್ಮಾಪಕರು ಹೊರಹಾಕಿದ್ದಾರೆ. ಅವರ ಈ ಶಕ್ತಿಶಾಲಿ ಅಭಿನಯ ಮತ್ತು ಚಿತ್ರದ ಕಥೆ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ ಎಂದು ನಿರ್ಮಾಪಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿತ್ರದ ಹಿನ್ನೆಲೆ ಏನು?
ವಿಶ್ವದ ಅತ್ಯಂತ ದೀರ್ಘಾವಧಿಯ ಮತ್ತು ಭೀಕರ ಸಂಘರ್ಷವಾದ ಕೊಲಂಬಿಯಾದ ಆಂತರಿಕ ಯುದ್ಧದ ಕಥೆಯನ್ನು ಇದು ಒಳಗೊಂಡಿದೆ. ಭಾರತದ ಆಧ್ಯಾತ್ಮಿಕ ಗುರು ರವಿಶಂಕರ್ ಅವರು ತಮ್ಮ ಜ್ಞಾನದ ಮೂಲಕ ಈ ಯುದ್ಧವನ್ನು ಹೇಗೆ ಬಗೆಹರಿಸಿದರು ಎಂಬುದು ಚಿತ್ರದ ಪ್ರಮುಖ ಕಥಾವಸ್ತು.
ಇದನ್ನೂ ಓದಿ: ‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ
ಅಂತರರಾಷ್ಟ್ರೀಯ ತಾರಾಗಣ:
ಈ ಚಿತ್ರದಲ್ಲಿ ಜಾಗತಿಕ ಮಟ್ಟದ ತಂತ್ರಜ್ಞರು ಮತ್ತು ಕಲಾವಿದರು ಕೆಲಸ ಮಾಡಿದ್ದಾರೆ. ‘ನಾರ್ಕೋಸ್’ ಸರಣಿ ಖ್ಯಾತಿಯ ಜುವಾನ್ ಕಾರ್ಲೋಸ್ ಗಿಲ್ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದಾರೆ. ಮೆಕ್ಸಿಕನ್ ನಟ ಡಾರಿಯೊ ಯಾಜ್ಬೆಕ್ ಬರ್ನಾಲ್ ಮತ್ತು ಪನಾಮದ ನಟ ಜೈಮ್ ನ್ಯೂಬಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಖ್ಯಾತ ಆ್ಯಡ್ ಫಿಲ್ಮ್ ಮೇಕರ್ ಮೊಂಟೂ ಬಸ್ಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್ ಆನಂದ್, ಪೀಸ್‌ಕ್ರಾಫ್ಟ್ ಪಿಕ್ಚರ್ಸ್ ಮತ್ತು ಮಹಾವೀರ್ ಜೈನ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ವರ್ಷದ ಕೊನೆಯ ಭಾಗದಲ್ಲಿ ‘ವೈಟ್’ ಸಿನಿಮಾವು ಹಲವು ಅಂತರರಾಷ್ಟ್ರೀಯ ಮತ್ತು ಭಾರತೀಯ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 11:59 am, Tue, 28 July 26
