ಸಂಜು ಸ್ಯಾಮ್ಸನ್​ ಡ್ರಾಪ್ ಅಥವಾ ರೆಸ್ಟ್? ಅಚ್ಚರಿಯ ಹೇಳಿಕೆ ನೀಡಿದ ಬಿಸಿಸಿಐ! – Kannada News | Why Sanju Samson Was Dropped From Team India

ಝಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ 15 ಸದಸ್ಯರುಗಳ ತಂಡದಲ್ಲಿ ಸಂಜುಗೆ ಸ್ಥಾನ ನೀಡಲಾಗಿಲ್ಲ. ಇದರ ಬೆನ್ನಲ್ಲೇ ಬಿಸಿಸಿಐ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಇದು “ಡ್ರಾಪ್” ಅಲ್ಲ ಬದಲಿಗೆ “ವಿಶ್ರಾಂತಿ” ಎಂದು ತಿಳಿಸಿದೆ.

ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, “ಸಂಜು ಸ್ಯಾಮ್ಸನ್‌ಗೆ ಝಿಂಬಾಬ್ವೆ  ಸರಣಿ ವೇಳೆ ವಿಶ್ರಾಂತಿ ನೀಡಿರುವುದರಲ್ಲಿ ಆಶ್ಚರ್ಯ ಪಡಲು ಏನಿದೆ? ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಭಾರತ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ ಎಂಬುದು ಟೀಕಿಸುವವರಿಗೆ ತಿಳಿದಿರಬೇಕು” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

2026ರ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಂಜು, ಇದ್ದಕ್ಕಿದ್ದಂತೆ ತಂಡದಿಂದ ಹೊರಗುಳಿಯಲು ಬಿಸಿಸಿಐ ಆಯ್ಕೆ ಸಮಿತಿ ಹಾಕಿಕೊಂಡಿರುವ ಮಹತ್ವದ ಯೋಜನೆಗಳು ಕೂಡ ಕಾರಣ ಎನ್ನಲಾಗುತ್ತಿದೆ.

ಕಾರ್ಯಭಾರ ನಿರ್ವಹಣೆ:

ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನ ಭಾರತೀಯ ಬಲಿಷ್ಠ ಟಿ20 ತಂಡದಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಸದಸ್ಯರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸುದೀರ್ಘ ಸರಣಿಯ ಬೆನ್ನಲ್ಲೇ ಸತತ ಪ್ರಯಾಣ ಮತ್ತು ಪಂದ್ಯಗಳ ಒತ್ತಡವನ್ನು ಕಡಿಮೆ ಮಾಡಲು ಆಯ್ಕೆಗಾರರು ಅವರಿಗೆ ಈ ಹೊತ್ತಿನಲ್ಲಿ ಬ್ರೇಕ್ ನೀಡಲು ನಿರ್ಧರಿಸಿದ್ದಾರೆ.

ಯುವ ಪ್ರತಿಭೆಗಳಿಗೆ ವೇದಿಕೆ:

ಝಿಂಬಾಬ್ವೆ ಪ್ರವಾಸದಂತಹ ಸಣ್ಣ ಸರಣಿಗಳನ್ನು ಬಿಸಿಸಿಐ ಯುವ ಆಟಗಾರರ ಪರೀಕ್ಷಾ ಕಣವಾಗಿ ಬಳಸಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಅತಿ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, ಐಪಿಎಲ್‌ನಲ್ಲಿ ಮಿಂಚಿದ ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಹರ್ಷ್ ದುಬೆ ಅವರಂತಹ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮುಕ್ತವಾಗಿ ಆಡಲು ಅವಕಾಶ ಕಲ್ಪಿಸುವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ.

ಬೆಂಚ್ ಕಾಯಿಸುವುದನ್ನು ತಪ್ಪಿಸುವ ತಂತ್ರ:

ಸದ್ಯ ಭಾರತದ ಟಿ20 ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಯುವ ಆಟಗಾರರ ಪೈಪೋಟಿ ಜೋರಾಗಿದೆ. ಒಂದು ವೇಳೆ ಸಂಜು ಝಿಂಬಾಬ್ವೆಗೆ ಪ್ರಯಾಣ ಬೆಳೆಸಿದ್ದರೂ, ಅವರು ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ. ಸಂಜು ಸ್ಯಾಮ್ಸನ್ ಅವರಂತಹ ಸೀನಿಯರ್ ಆಟಗಾರನನ್ನು ಪ್ರವಾಸಕ್ಕೆ ಕರೆದೊಯ್ದು ಕೇವಲ ಬೆಂಚ್ ಮೇಲೆ ಕೂರಿಸುವುದು ಸೂಕ್ತವಲ್ಲ ಎಂದು ಆಯ್ಕೆ ಸಮಿತಿ ಭಾವಿಸಿದೆ.

ಫಾರ್ಮ್ ಏರಿಳಿತ:

ವಿಶ್ವಕಪ್ ಹೀರೊ ಆಗಿದ್ದರೂ, ಇತ್ತೀಚಿನ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ.ಆಡಿದ 3 ಪಂದ್ಯಗಳಲ್ಲಿ ಅವರು ಕಲೆಹಾಕಿದ್ದು ಕೇವಲ 5, 0, 1 ರನ್ ಮಾತ್ತ. ಹೀಗಾಗಿ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅವರ ಬದಲಿಗೆ ಸೂರ್ಯವಂಶಿ ಅವರಿಗೆ ಆರಂಭಿಕನಾಗಿ ಅವಕಾಶ ನೀಡಲಾಗಿತ್ತು. ಈ ಕಳಪೆ ಫಾರ್ಮ್​​ನಿಂದ ಅವರು ಏಷ್ಯನ್ ಗೇಮ್ಸ್​ಗೂ ಮುನ್ನ ಹೊರಬರಬೇಕಿದೆ. ಅಂದರೆ  ದೇಶೀಯ ಕ್ರಿಕೆಟ್​ನಲ್ಲಿ ಆಡಿ ಫಾರ್ಮ್ ಕಂಡು ಕೊಳ್ಳುವುದು ಸೂಕ್ತ ಎಂದು ಆಯ್ಕೆ ಸಮಿತಿ ನಿರ್ಧರಿಸಿದಂತಿ.

ಈ ಎಲ್ಲಾ ಕಾರಣಗಳಿಂದಾಗಿ ಸಂಜು ಸ್ಯಾಮ್ಸನ್ ಅವರನ್ನು ಝಿಂಬಾಬ್ವೆ ವಿರುದ್ಧದ ಸರಣಿಗೆ ಪರಿಗಣಿಸಲಾಗಿಲ್ಲ. ಇದಾಗ್ಯೂ ಅವರು ಮುಂಬರುವ ಏಷ್ಯನ್ ಗೇಮ್ಸ್ ತಂಡದ ಭಾಗವಾಗಿದ್ದಾರೆ. ಹೀಗಾಗಿ ಕಳಪೆ ಫಾರ್ಮ್​ನಿಂದ ಹೊರಬಂದರೆ ಅವರು ಏಷ್ಯನ್ ಗೇಮ್ಸ್​ನಲ್ಲಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು.

ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

ಝಿಂಬಾಬ್ವೆ ಸರಣಿಗೆ ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

Source link

Leave a Reply

Your email address will not be published. Required fields are marked *