ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ – Kannada News | Davangere’s BIET Civil Topper Anchal Kumari Becomes Jain Nun, Inspiring Renunciation

ದಾವಣಗೆರೆ, ಫೆ.7: ದಾವಣಗೆರೆಯ ಬಿಐಇಟಿ (BIET) ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ಟಾಪರ್ ಆಂಚಲ್ ಕುಮಾರಿ ಅವರು ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಚರ್ಚೆಗೂ ಕಾರಣವಾಗಿದೆ. 26ನೇ ವಯಸ್ಸಿನಲ್ಲಿ ಅವರು ಕೈಗೊಂಡಿರುವ ಈ ನಿರ್ಧಾರ ಆಧುನಿಕ ಜಗತ್ತಿನಲ್ಲಿ ಅಧ್ಯಾತ್ಮದ ಸೆಳೆತ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆಂಚಲ್ ಕುಮಾರಿ ದಾವಣಗೆರೆಯ ಚೌಕಿಪೇಟೆಯ ನಿವಾಸಿಗಳಾದ ಮುಖೇಶ್ ಕುಮಾರ್ ಹಾಗೂ ಸುನೀತಾ ದಂಪತಿಯ ಪುತ್ರಿ. ಪ್ರತಿಷ್ಠಿತ ಬಿಐಇಟಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಟಾಪರ್ ಆಗಿದ್ದರು. ಲಕ್ಷಾಂತರ ರೂಪಾಯಿ ಸಂಬಳ ಬರುವ ಉದ್ಯೋಗದ ಅವಕಾಶಗಳನ್ನು ಬದಿಗೊತ್ತಿ ಅಧ್ಯಾತ್ಮದ ಹಾದಿ ಹಿಡಿದಿರುವುದು ಎಲ್ಲರಿಗೂ ಅಚ್ಚರಿಯನ್ನು ತಂದಿದೆ.

ಗುಜರಾತ್ ರಾಜ್ಯದ ಸೂರತ್‌ನಲ್ಲಿ ವಿಜೃಂಭಣೆಯಿಂದ ದೀಕ್ಷಾ ಕಾರ್ಯಕ್ರಮ ನಡೆಯಿತು. ಜೈನ ಧರ್ಮದ ಗುರುಗಳಾದ ಕುಲಚಂದ್ರ ಸುರೇಶ್ವರ್ಜಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಆಂಚಲ್ ದೀಕ್ಷೆ ಪಡೆದರು. ಕೋಟಿ ಕೋಟಿ ಮೌಲ್ಯದ ಆಸ್ತಿ, ಕುಟುಂಬ ಮತ್ತು ಭೌತಿಕ ಸುಖಗಳನ್ನು ತ್ಯಜಿಸಿ ಈಗ ಅವರು ಅಧಿಕೃತವಾಗಿ ಜೈನ ಸನ್ಯಾಸಿನಿಯಾಗಿದ್ದಾರೆ. ಸನ್ಯಾಸಿಗಳ ಮುಖದಲ್ಲಿರುವ ಆಂತರಿಕ ಶಾಂತಿ ಮತ್ತು ಅವರ ಸರಳ ಜೀವನ ಶೈಲಿ ಆಂಚಲ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವದಲ್ಲಿ ಸಿಗುವ ನೆಮ್ಮದಿ ಶ್ರೇಷ್ಠವಾದುದು ಎಂಬುದು ಅವರ ಅಚಲ ನಂಬಿಕೆಯಾಗಿದೆ. ಕಾಲೇಜು ದಿನಗಳಿಂದಲೇ ಅಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ಹೊಂದಿದ್ದರು.

ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪೋಷಕರು ವಿರೋಧಿಸುತ್ತಾರೆ. ಆದರೆ ಆಂಚಲ್ ಅವರ ಪೋಷಕರು ಮಗಳ ನಿರ್ಧಾರವನ್ನು ಗೌರವಿಸಿ, ಒಪ್ಪಿಗೆ ನೀಡಿದ್ದಾರೆ. ಇಂಜಿನಿಯರಿಂಗ್‌ನಂತಹ ವೃತ್ತಿಪರ ಶಿಕ್ಷಣದಲ್ಲಿ ಅಗ್ರಸ್ಥಾನ ಪಡೆದ ಯುವತಿಯೊಬ್ಬರು ಹೀಗೆ ಸನ್ಯಾಸತ್ವ ಸ್ವೀಕರಿಸಿರುವುದು ಸಾರ್ವಜನಿಕರಲ್ಲಿ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ಜೈನ ಧರ್ಮದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಕ-ಯುವತಿಯರು ಅಧ್ಯಾತ್ಮದ ಕಡೆಗೆ ಆಕರ್ಷಿತರಾಗುತ್ತಿರುವುದು ಹೆಚ್ಚುತ್ತಿದೆ.

ಇದನ್ನೂ ಓದಿ: ಊರಿಗೆಲ್ಲ ಊಟ ಹಾಕಿಸಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ

ಗುಜರಾತ್‌ನ ‘ಮಹಾಸಂಯಮ’ ದೀಕ್ಷಾ ಸಂಭ್ರಮ:

ಇತ್ತೀಚೆಗೆ ಗುಜರಾತ್‌ನ ಸೂರತ್ ಮತ್ತು ಅಹಮದಾಬಾದ್‌ನಲ್ಲಿ ನಡೆದ ದೀಕ್ಷಾ ಕಾರ್ಯಕ್ರಮಗಳಲ್ಲಿ ಕೇವಲ ಒಬ್ಬಿಬ್ಬರಲ್ಲ, ಬದಲಿಗೆ ಹತ್ತಾರು ಯುವಕ-ಯುವತಿಯರು ಮತ್ತು ಉದ್ಯಮಿಗಳು ಒಟ್ಟಾಗಿ ಸನ್ಯಾಸತ್ವ ಸ್ವೀಕರಿಸಿದರು. ಇದರಲ್ಲಿ ಅನೇಕರು ಕೋಟ್ಯಧಿಪತಿ ಉದ್ಯಮಿಗಳ ಮಕ್ಕಳು, ಚಾರ್ಟರ್ಡ್ ಅಕೌಂಟೆಂಟ್ (CA)ಗಳು ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಇದ್ದದ್ದು ವಿಶೇಷ. ಇಂತಹ ಕಾರ್ಯಕ್ರಮಗಳನ್ನು ‘ಮಹಾಸಂಯಮ’ ಅಥವಾ ‘ದೀಕ್ಷಾ ಮಹೋತ್ಸವ’ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಂಸಾರಿಕ ಜೀವನದ ಐಷಾರಾಮಿಗಳನ್ನು ತ್ಯಜಿಸಿ, ಗುರುಗಳ ಸಮ್ಮುಖದಲ್ಲಿ ಬಿಳಿ ವಸ್ತ್ರ ಧರಿಸಿ ಅಧ್ಯಾತ್ಮದ ಹಾದಿಗೆ ಕಾಲಿಡುತ್ತಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *