ರಾಯಚೂರು, ಜೂನ್ 28: ಜಿಲ್ಲೆಯ ದೇವದುರ್ಗ ತಾಲೂಕಿನ ಗುಂಟ್ರಾಳ ಗ್ರಾಮದ ಸರ್ಕಾರಿ ಶಾಲೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಅನೈತಿಕ ಚಟುವಟಿಕೆ ನಡೆಸದಂತೆ ಬುದ್ಧಿವಾದ ಹೇಳಿದ್ದಕ್ಕೆ ಕೃತ್ಯ ಎಸಗಲಾಗಿದೆ. ಶಾಲೆಯ ಆವರಣದಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಲ್ಲಿ ತೊಡಗಿದ್ದರು. ಅಲ್ಲದೆ, ಇತ್ತೀಚೆಗೆ ಶಾಲೆಯ ಬೀಗ ಒಡೆದು ಒಳಗಡೆ ಮಲಗಿದ್ದರು. ಈ ಬಗ್ಗೆ ಶಾಲೆಯ ಎಸ್ಡಿಎಂಸಿ ಸದಸ್ಯರು ಮತ್ತು ಶಿಕ್ಷಕರು ಅವರಿಗೆ ತಾಕೀತು ಮಾಡಿದ್ದರು. ಈ ಬುದ್ಧಿವಾದವನ್ನು ಸಹಿಸದ ಕಿಡಿಗೇಡಿಗಳು ನಿನ್ನೆ ರಾತ್ರಿ ಶಾಲೆಯ ಬೀಗ ಮುರಿದು ಒಳನುಗ್ಗಿ, ಬೆಂಕಿ ಹಚ್ಚಿದ್ದು ಬಡ ಮಕ್ಕಳ ಸ್ಕೂಲ್ ಸಮವಸ್ತ್ರಗಳು, ಪಠ್ಯಪುಸ್ತಕಗಳು ಬೆಂಕಿಗೆ ಆಹುತಿ ಆಗಿವೆ. ಈ ದುಷ್ಕೃತ್ಯದಿಂದ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಗಬ್ಬೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
