ಧಾರವಾಡ, ಫೆಬ್ರವರಿ 26: ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗಾಗಿ ಫೆಬ್ರವರಿ 24ರಂದು ಧಾರವಾಡದಲ್ಲಿ (Dharwad) ಬಿಜೆಪಿ (BJP) ಆಯೋಜಿಸಿದ್ದ ಪ್ರತಿಭಟನೆ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಉದ್ಯೋಗಾಕಾಂಕ್ಷಿಗಳ ಪರವಾಗಿ ಕರೆ ನೀಡಿದ್ದ ಈ ಹೋರಾಟ ಶ್ರೀನಗರ ವೃತ್ತದಿಂದ ಜಯನಗರ ಮಾರ್ಗವಾಗಿ ಮಿಚಗಿನ್ ಕಂಪೌಂಡ್ ವರೆಗೆ ಜಾಥಾ ರೂಪದಲ್ಲಿ ನಡೆದಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಫೋಟೊಗಳೇ ಇರಲಿಲ್ಲ ಎಂಬುದು ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಬ್ಯಾನರ್‌ಗಳ ಮೇಲ್ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.
ಬ್ಯಾನರ್‌ಗಳ ಕೆಳಭಾಗದಲ್ಲಿ ಎಡಗಡೆ ಶಾಸಕ ಅರವಿಂದ ಬೆಲ್ಲದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಚಿತ್ರಗಳನ್ನು ಬಳಸಲಾಗಿತ್ತು. ಆದರೆ ಯಾವುದೇ ಬ್ಯಾನರ್‌ನಲ್ಲೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವಚಿತ್ರ ಕಾಣಿಸದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪಕ್ಷದ ಅಧಿಕೃತ ಹೋರಾಟದ ಬ್ಯಾನರ್‌ಗಳಲ್ಲಿ ರಾಜ್ಯಾಧ್ಯಕ್ಷರ ಚಿತ್ರಕ್ಕೆ ಕತ್ತರಿ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಶಾಸಕ ಅರವಿಂದ ಬೆಲ್ಲದ ಉದ್ದೇಶಪೂರ್ವಕವಾಗಿಯೇ ವಿಜಯೇಂದ್ರ ಫೋಟೊ ಕೈಬಿಟ್ಟಿದ್ದಾರೆ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ವಿಪಕ್ಷ ನಾಯಕ ಅಶೋಕ್ ಸ್ಫೋಟಕ ಆರೋಪ
ಈ ಘಟನೆ ಬಿಜೆಪಿ ಒಳಜಗಳವನ್ನು ಬಿಂಬಿಸುತ್ತಿದೆಯಾ? ಅಥವಾ ಸ್ಥಳೀಯ ಮಟ್ಟದ ಆಯೋಜನಾ ನಿರ್ಲಕ್ಷ್ಯವೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.
