ಗೃಹಲಕ್ಷ್ಮೀ ಯೋಜನೆImage Credit source: karnataka.gov.in
ಬೆಂಗಳೂರು, ಜೂನ್ 25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ (gruhalakshmi) ಯೋಜನೆಯಲ್ಲಿ 225 ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ಸಿಎಜಿ ವರದಿ ಬಹಿರಂಗ ಬೆನ್ನಲ್ಲೇ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ಪಷ್ಟೀಕರಣ ನೀಡಲಾಗಿದೆ. ಇಲಾಖೆಯು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಮೂರು ತಾಂತ್ರಿಕ ಅಂಶಗಳನ್ನು ಪತ್ತೆಹಚ್ಚಿದ್ದು, ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಮೂಲಕವೇ ಗೃಹಲಕ್ಷ್ಮೀ ಹಣ ವಿತರಿಸಲಾಗುತ್ತಿದೆ ಎಂದು ತಿಳಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪತ್ತೆ ಹಚ್ಚಿರುವ ಮೂರು ಅಂಶಗಳು ಯಾವವು?
-
ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವ ಬಹು ಫಲಾನುಭವಿಗಳು
ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವ ಬಹು ಫಲಾನುಭವಿಗಳು ಎಬಿಪಿಎಸ್ ವ್ಯವಸ್ಥೆಯಲ್ಲಿ ಆಧಾರ್ ಸಂಖ್ಯೆಯನ್ನು ಹಣಕಾಸಿನ ವಿಳಾಸವಾಗಿ ಬಳಸಲಾಗುತ್ತದೆ. ಪಾವತಿ ಕಡತದಲ್ಲಿರುವ ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಸಂಬಂಧಿತ ಬ್ಯಾಂಕ್‌ಗೆ ಕಳುಹಿಸಲಾಗುತ್ತದೆ. ಬ್ಯಾಂಕ್ ತನ್ನ ಸಿಬಿಎಸ್ ವ್ಯವಸ್ಥೆಯಲ್ಲಿ ಆಧಾರ್ ಜೋಡಣೆಯನ್ನು ಪರಿಶೀಲಿಸಿ, ಫಲಾನುಭವಿಯ ಖಾತೆಗೆ ಹಣವನ್ನು ಜಮೆ ಮಾಡಿ, ಪ್ರತಿಕ್ರಿಯಾ ಕಡತದ ಭಾಗವಾಗಿ ಬ್ಯಾಂಕ್ ಖಾತೆಗಳ ವಿವರಗಳನ್ನು ಹಂಚಿಕೊಳ್ಳುತ್ತದೆ.
ಇದನ್ನೂ ಓದಿ: ವಿವರಗಳೇ ಇಲ್ಲದ 23,262 ಖಾತೆಗಳಿಗೆ 46.52 ಕೋಟಿ ರೂ. ಪಾವತಿ: ಸಿಎಜಿ ವರದಿ ತೆರೆದಿಟ್ಟ ಪ್ರಲ್ಹಾದ ಜೋಶಿ
ಇನ್ನು ಒಂದೇ ಬ್ಯಾಂಕ್ ಖಾತೆ ಸಂಖ್ಯೆಯಡಿ ಬಹು ಫಲಾನುಭವಿಗಳು ಕಂಡುಬರುವುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೇಯದು ಜಂಟಿ ಬ್ಯಾಂಕ್ ಖಾತೆಯಿದ್ದಲ್ಲಿ ಒಂದೇ ಬ್ಯಾಂಕ್ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಸರ್ಕಾರಿ ಸೌಲಭ್ಯ ಜಮೆಯಾಗಿರಬಹುದು. ಎರಡನೇಯದು ಫಲಾನುಭವಿಯು ಖಾತೆ ಹೊಂದಿರುವ ಬ್ಯಾಂಕ್‌ನ ತಾಂತ್ರಿಕ ದೋಷದಿಂದ ತಪ್ಪಾದ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದಲ್ಲಿ ಹಂಚಿಕೆಯಾಗಿರಬಹುದು.
ಈ ಎರಡು ಕಾರಣಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರಿಶೀಲನೆ ಮಾಡಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಇಂತಹ ಪ್ರಕರಣಗಳ ಕುರಿತು ಅಧಿಕಾರಿಗಳ ಮೂಲಕ ಭೌತಿಕವಾಗಿ ಕ್ಷೇತ್ರ ಭೇಟಿ ನಡೆಸಿ ಪರಿಶೀಲನೆ ಜಂಟಿ ಖಾತೆ ಇರುವಂತಹ ಫಲಾನುಭವಿಗಳ ಉದಾಹರಣಗೆ ಅತ್ತೆ-ಸೊಸೆ, ತಾಯಿ-ಮಗಳ ಬ್ಯಾಂಕ್ ಖಾತೆಗೆ ಅನುದಾನ ಪಾವತಿಯಾಗಿರುವುದು ಕಂಡುಬಂದಿದೆ. ಸದರಿ ಫಲಾನುಭವಿಗಳು ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿರುವುದರಿಂದ ಇಬ್ಬರು ಫಲಾನುಭವಿಗಳ ಧನಸಹಾಯ ಮೊತ್ತವು ಒಂದೇ ಖಾತೆಗೆ ಪಾವತಿಯಾಗಿದೆ.
-
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನ ಹೊಂದಿರುವ ಫಲಾನುಭವಿಗಳು
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸುವ ಜವಾಬ್ದಾರಿಯೂ ಅವರದ್ದೇ. ಫಲಾನುಭವಿ ಸರ್ಕಾರಿ ಸೌಲಭ್ಯ ಪಡೆಯಲು ತಾನು ಬಯಸುವ ಯಾವುದೇ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು. ಅಗತ್ಯವಿದ್ದಲ್ಲಿ ಲಿಖಿತ ಒಪ್ಪಿಗೆಯ ಮೂಲಕ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಬಹುದು. NPCI Mapperನಲ್ಲಿ ಈ ಬದಲಾವಣೆ ನವೀಕರಿಸಿದ ನಂತರ ಸರ್ಕಾರಿ ಸೌಲಭ್ಯ ಹೊಸದಾಗಿ ಜೋಡಿಸಲಾದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಬ್ಯಾಂಕ್ ಮೇಲ್ಕಂಡ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಅನುಸರಿಸಿ ಈ ಬದಲಾವಣೆ ಮಾಡುತ್ತದೆ. ಇದರಲ್ಲಿ ಸರ್ಕಾರ ಅಥವಾ ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಒಂದೇ ಫಲಾನುಭವಿಯ ವಿವಿಧ ಖಾತೆಗಳಿಗೆ ಬೇರೆ ಬೇರೆ ತಿಂಗಳ ಹಣ ಪಾವತಿ ಮಾಡುವ ಅವಕಾಶವಿದೆ. ಆದರೆ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ ಎಂದು ತಿಳಿಸಿದೆ.
-
ಬ್ಯಾಂಕ್ ಖಾತೆ ವಿವರಗಳಿಲ್ಲದ ಫಲಾನುಭವಿಗಳಿಗೆ ಪಾವತಿ
ABPS ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದ ಭಾಗವಾಗಿ ಲಭ್ಯವಾಗಬೇಕು. ಆದರೆ ಕೆಲವೊಮ್ಮೆ ಫಲಾನುಭವಿಗಳ ಬ್ಯಾಂಕಿನ ತಾಂತ್ರಿಕ ಸಮಸ್ಯೆಯಿಂದ ಖಾತೆ ವಿವರಗಳಿಲ್ಲದ ಪ್ರತಿಕ್ರಿಯೆ ಕಳುಹಿಸಬಹುದು. ಈ ಕುರಿತು ಪರಿಶೀಲನೆಗಳನ್ನು ನಡೆಸಿದಾಗ, ನಂತರದ ತಿಂಗಳುಗಳಲ್ಲಿ ಬ್ಯಾಂಕ್ ಖಾತೆ ವಿವರಗಳೊಂದಿಗೆ ಪ್ರತಿಕ್ರಿಯಾ ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡುಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.