
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ‘ಭೂತ್ ಬಂಗ್ಲಾ’ (Bhooth Bangla) ಸಿನಿಮಾದ ಬಿಡುಗಡೆಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ರಿಲೀಸ್ ಆಗಲಿದೆ. ಬಿಡುಗಡೆಗೂ ಮುನ್ನ ಅವರು ದೇವರ ಮೊರೆಹೋಗಿದ್ದಾರೆ. ಬುಧವಾರ (ಏಪ್ರಿಲ್ 1) ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆ ಅವರ ಅತ್ತೆ, ಹಿರಿಯ ನಟಿ ಡಿಂಪಲ್ ಕಪಾಡಿಯಾ ಸಾಥ್ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಕ್ಷಯ್ ಕುಮಾರ್, ‘ದರ್ಶನ ತುಂಬಾ ಚೆನ್ನಾಗಿ ಆಯಿತು. ಇಡೀ ದೇಶ ಮತ್ತು ನನ್ನ ಕುಟುಂಬದ ಏಳಿಗೆಗಾಗಿ ನಾನು ಪ್ರಾರ್ಥಿಸಿದ್ದೇನೆ. ನಮ್ಮ ದೇಶವು ಯಾವಾಗಲೂ ಉನ್ನತ ಮಟ್ಟಕ್ಕೆ ಏರಲಿ ಮತ್ತು ಸದಾ ಪ್ರಗತಿ ಹೊಂದಲಿ ಅಂತ ಶಿವನಲ್ಲಿ ಬೇಡಿಕೊಂಡಿದ್ದೇನೆ’ ಎಂದು ತಿಳಿಸಿದರು.
ಶಿಪ್ರಾ ನದಿಯ ದಡದಲ್ಲಿರುವ ಈ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದ ವೇಳೆ ಅಕ್ಷಯ್ ಕುಮಾರ್ ಬಿಳಿ ಬಣ್ಣದ ಕುರ್ತಾ-ಪೈಜಾಮ ಧರಿಸಿದ್ದರು. ಡಿಂಪಲ್ ಕಪಾಡಿಯಾ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ‘ಎಎನ್ಐ’ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ಇಬ್ಬರೂ ತಾರೆಯರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿದೆ.
#WATCH | Ujjain, MP: After the prayers, actor Akshay Kumar says, “It was really good…I prayed for the entire country and my family. I prayed that may our country always excel and progress.” https://t.co/xUwoYsIfWl pic.twitter.com/rpZMgroK1E
— ANI (@ANI) April 1, 2026
ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಸುಮಾರು 14 ವರ್ಷಗಳ ಸುದೀರ್ಘ ಬಿಡುವಿನ ನಂತರ ‘ಭೂತ್ ಬಂಗ್ಲಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ‘ಹೇರಾ ಫೇರಿ’, ‘ಭೂಲ್ ಭುಲಯ್ಯ’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಈ ಜೋಡಿಯ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾರರ್-ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ: ‘ಧುರಂಧರ್ 2’ ಆರ್ಭಟಕ್ಕೆ ಬೆದರಿದ ‘ಭೂತ್ ಬಂಗ್ಲ’: ಅಕ್ಷಯ್ ಕುಮಾರ್ ಚಿತ್ರದ ಬಿಡುಗಡೆ ಮುಂದೂಡಿಕೆ
‘ಭೂತ್ ಬಂಗ್ಲಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಟಬು, ಪರೇಶ್ ರಾವಲ್, ರಾಜ್ಪಾಲ್ ಯಾದವ್, ಜಿಸ್ಸು ಸೇನ್ಗುಪ್ತಾ, ಅಸ್ರಾನಿ ಮತ್ತು ವಾಮಿಕಾ ಗಬ್ಬಿ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.