ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿಲ್ಲ ಎಂಬುದೇ ಅಚ್ಚರಿ. ಈ ಮೊದಲು ಟಿ20 ತಂಡಕ್ಕೆ ಆಯ್ಕೆಯಾಗಿದ್ದ ಸಿರಾಜ್ ಅವರನ್ನು ವಿಶ್ರಾಂತಿಯ ಕಾರಣ ಹೊರಗುಳಿಯುವಂತೆ ಸೂಚಿಸಲಾಗಿತ್ತು. ಅದರಂತೆ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಂದ ಸಿರಾಜ್ ಹೊರಗುಳಿದಿದ್ದಾರೆ. ಆದರೆ ಇದೀಗ ಏಕದಿನ ಸರಣಿಗೆ ಪ್ರಕಟಿಸಲಾದ ತಂಡದಿಂದ ಅವರನ್ನು ಕೈ ಬಿಡಲಾಗಿದೆ. ಆಯ್ಕೆಗಾರರ ಈ ನಿರ್ಧಾರಕ್ಕೆ ಭಾರತ ತಂಡದ ಮಾಜಿ ನಾಯಕ ಜಿ.ಆರ್. ವಿಶ್ವನಾಥ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಸೇರಿದಂತೆ ಹಲವು ದಿಗ್ಗಜರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದರುವ ಕೃಷ್ಣಮಾಚಾರಿ ಶ್ರೀಕಾಂತ್, ಯಾವುದೇ ರೀತಿಯಲ್ಲೂ ನೋಡಿದರೂ ಹರ್ಷಿತ್ ರಾಣಾ ಅವರಿಗಿಂತ ಮೊಹಮ್ಮದ್ ಸಿರಾಜ್ ಉತ್ತಮ ಆಯ್ಕೆಯಾಗಿದ್ದರು ನೇರವಾಗಿ ಹೇಳಿದ್ದಾರೆ.
ಏಕೆಂದರೆ ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಚೆಂಡು ಸ್ವಿಂಗ್ ಆಗುತ್ತದೆ. ಈ ಹಿಂದೆ ಅಲ್ಲಿನ ಪಿಚ್‌ಗಳಲ್ಲಿ ಆಡಿದ ಅನುಭವ ಸಿರಾಜ್ಗೆ ಇದೆ. ಹೀಗಾಗಿ ಅವರಂತಹ ಅನುಭವಿ ಬೌಲರ್ ಟೀಮ್ ಇಂಡಿಯಾಗೆ ಅಗತ್ಯವಿತ್ತು ಎಂದು ಶ್ರೀಕಾಂತ್ ವಾದಿಸಿದ್ದಾರೆ.
ನನ್ನ ಪ್ರಕಾರ ಮೊಹಮ್ಮದ್ ಸಿರಾಜ್ ತಂಡದಲ್ಲಿರಬೇಕಿತ್ತು. ಇಲ್ಲಿ ಗುರ್ನೂರ್ ಬ್ರಾರ್ರನ್ನು ಆಯ್ಕೆ ಮಾಡಿರುವುದು ಹೊಸಬರನ್ನು ಪ್ರೋತ್ಸಾಹಿಸುವ ಒಂದು ಮಾರ್ಗವಾಗಿದೆ. ಆದರೆ ಏಕದಿನ ಪಂದ್ಯಗಳಲ್ಲಿ ಅರ್ಷದೀಪ್ ಸಿಂಗ್ ಪ್ರದರ್ಶನ ಅಷ್ಟಕ್ಕಷ್ಟೇ. ಅವರ ಆಯ್ಕೆ ಯಾಕೆ? ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ ಸಿರಾಜ್ ಅವರನ್ನು ಕೇವಲ ‘ಟೆಸ್ಟ್ ಸ್ಪೆಷಲಿಸ್ಟ್’ ಆಗಿ ಬಿಂಬಿಸಿ, ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ದೂರ ಇಡುತ್ತಿರುವುದು ಸರಿಯಲ್ಲ ಎಂಬುದನ್ನು ಕೂಡ ಕೃಷ್ಣಮಾಚಾರಿ ಶ್ರೀಕಾಂತ್ ಒತ್ತಿ ಹೇಳಿದ್ದಾರೆ.
ಕೃಷ್ಣಮಾಚಾರಿ ಶ್ರೀಕಾಂತ್ ಹೀಗೆ ಹೇಳಲು ಮುಖ್ಯ ಕಾರಣ, ಸಿರಾಜ್ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡಿ ಆ ಬಳಿಕ ತಂಡದಿಂದ ಕೈ ಬಿಟ್ಟಿರುವುದು. ಇಲ್ಲಿ ಟಿ20 ಸರಣಿಗಳಿಂದ ಕೈ ಬಿಡಲು ನೀಡಿದ ಕಾರಣ ವಿಶ್ರಾಂತಿ. ಈ ವಿಶ್ರಾಂತಿಯ ಬಳಿಕ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಬೇಕಿತ್ತಲ್ವಾ? ಎಂಬ ಪ್ರಶ್ನೆಯನ್ನು ಇದೀಗ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳು ಮುಂದಿಡುತ್ತಿದ್ದಾರೆ.
ಇಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈ ಬಿಟ್ಟು ಆಯ್ಕೆ ಮಾಡಿರುವುದು ಹರ್ಷಿತ್ ರಾಣಾ ಅವರನ್ನು. ಅಂದರೆ 2026ರ ಟಿ20 ವಿಶ್ವಕಪ್ ವೇಳೆ ಗಾಯಗೊಂಡಿದ್ದ ಹರ್ಷಿತ್ ಕಳೆದ 4 ತಿಂಗಳುಗಳಿಂದ ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯವಾಡಿಲ್ಲ. ಇದಾಗ್ಯೂ ಅವರನ್ನು ಟಿ20 ಹಾಗೂ ಏಕದಿನ ಸರಣಿಗಳಿಗೆ ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ಬಿಸಿಸಿಐ ಕಡೆಯಿಂದ ಯಾವುದೇ ಉತ್ತರವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಇಂಗ್ಲೆಂಡ್‌ನಂತಹ ಸ್ವಿಂಗ್ ಮತ್ತು ಸೀಮ್ ಬೌಲಿಂಗ್‌ಗೆ ಸಹಕಾರಿಯಾದ ಪಿಚ್‌ಗಳಲ್ಲಿ ಮೊಹಮ್ಮದ್ ಸಿರಾಜ್ ಅವರಂತಹ ಅನುಭವಿ ಬೌಲರ್ನನ್ನು ಕೈಬಿಟ್ಟಿರುವುದು ತಪ್ಪು ನಿರ್ಧಾರ ಎನ್ನಬಹುದು. ಇಲ್ಲಿ ಭವಿಷ್ಯದ ಹಿತದೃಷ್ಟಿಯಿಂದ ತಂಡ ಕಟ್ಟುತ್ತಿದ್ದರೂ, ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡಬಲ್ಲ ಅನುಭವಿ ಆಟಗಾರರ ಅಗತ್ಯವಿರುತ್ತದೆ ಎಂಬ ವಿಚಾರವನ್ನು ಬಿಸಿಸಿಐ ಆಯ್ಕೆ ಸಮಿತಿ ಮರೆತಂತಿದೆ.
ಇದನ್ನೂ ಓದಿ: ಅದು ಮುಗಿದ ಅಧ್ಯಾಯ… ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ ವಿರಾಟ್ ಕೊಹ್ಲಿ
Published On – 8:58 am, Tue, 23 June 26
