T20 World Cup 2026: ಟಿ20 ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಭಾರತ, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಝಿಂಬಾಬ್ವೆ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಸೂಪರ್-8 ಹಂತಕ್ಕೇರಿದೆ. ಇನ್ನು ನಮೀಬಿಯ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಪಾಕಿಸ್ತಾನ್ ತಂಡ ಕೂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.
ಇದಾಗ್ಯೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೂಪರ್-8 ಸುತ್ತಿನಲ್ಲಿ ಮುಖಾಮುಖಿಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಐಸಿಸಿ ನಿಗದಿಪಡಿಸಿರುವ ಸೀಡಿಂಗ್ ಸಿಸ್ಟಂ.
ಟಿ20 ವಿಶ್ವಕಪ್ನ ಆರಂಭದಲ್ಲೇ ಐಸಿಸಿ ಸೀಡಿಂಗ್ ವ್ಯವಸ್ಥೆಯನ್ನು ರೂಪಿಸಿದೆ. ಈ ಮೂಲಕ ಪಂದ್ಯಾವಳಿಗೂ ಮುನ್ನವೇ ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಅವುಗಳು ಮುಂದಿನ ಹಂತದಲ್ಲಿ (Super 8) ಯಾವ ಗುಂಪಿನಲ್ಲಿ ಇರಬೇಕೆಂಬುದನ್ನು ಎಂಬುದನ್ನು ನಿರ್ಧರಿಸಲಾಗಿದೆ.
ಅಂದರೆ ಗುಂಪು ಹಂತದಲ್ಲಿ ಒಂದು ತಂಡ ಮೊದಲ ಸ್ಥಾನ ಪಡೆಯಲಿ ಅಥವಾ ಎರಡನೇ ಸ್ಥಾನ ಪಡೆಯಲಿ, ಅದು ತನ್ನ ಸೀಡಿಂಗ್‌ಗೆ ನಿಗದಿಯಾದ ಸೂಪರ್ 8 ಗುಂಪನ್ನೇ ಸೇರುತ್ತದೆ. ಉದಾಹರಣೆಗೆ, ಭಾರತವು ತನ್ನ ಗುಂಪಿನಲ್ಲಿ ಎಷ್ಟನೇ ಸ್ಥಾನದಲ್ಲಿದ್ದರೂ ಸೂಪರ್ 8ರಲ್ಲಿ ‘X1’ ಸ್ಥಾನವನ್ನೇ ಪಡೆಯುತ್ತದೆ. ಅತ್ತ ಪಾಕಿಸ್ತಾನಕ್ಕೆ Y3 ಸ್ಥಾನವನ್ನು ನೀಡಲಾಗಿದೆ.
ಹೀಗಾಗಿ ಸೂಪರ್-8 ಹಂತದಲ್ಲಿ ಭಾರತ ತಂಡವು ಗ್ರೂಪ್- 1 ರಲ್ಲಿ ಕಣಕ್ಕಿಳಿದರೆ, ಪಾಕ್ ತಂಡವು ಅರ್ಹತೆ ಪಡೆದರೆ ಗ್ರೂಪ್-2 ನಲ್ಲಿ ಕಣಕ್ಕಿಳಿಯಲಿದೆ.
ಸೀಡಿಂಗ್ ಸಿಸ್ಟಂ ಯಾಕೆ?
ವಾಣಿಜ್ಯ ಮತ್ತು ಸಾರಿಗೆ ಅನುಕೂಲಕ್ಕಾಗಿ ಟಿ20 ವಿಶ್ವಕಪ್ನ ಆರಂಭದಲ್ಲೇ ಸೀಡಿಂಗ್ ಸಿಸ್ಟಂ ಪರಿಚಯಿಸಲಾಗಿದೆ. ಇದರಿಂದ ಪ್ರಸಾರಕರು ಮತ್ತು ಅಭಿಮಾನಿಗಳಿಗೆ ಯಾವ ತಂಡ ಯಾವ ದಿನ ಎಲ್ಲಿ ಆಡಲಿದೆ ಎಂಬುದು ಮೊದಲೇ ತಿಳಿಯಲು ಸಹಾಯ ಮಾಡುತ್ತದೆ. ಇದರಿಂದ ಟಿಕೆಟ್ ಬುಕ್ಕಿಂಗ್ ಹಾಗೂ ಪ್ರಯಾಣ ಕೂಡ ಸುಲಭವಾಗುತ್ತದೆ.
ಹೀಗಾಗಿ ಈ ಬಾರಿ ಸೂಪರ್-8 ಸುತ್ತಿಗೆ ಸೀಡಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅದರಂತೆ ಗ್ರೂಪ್- 1 ರಲ್ಲಿ ಕಣಕ್ಕಿಳಿಯುವ ತಂಡಗಳು ತನ್ನೆಲ್ಲಾ ಪಂದ್ಯಗಳನ್ನು ಭಾರತದಲ್ಲೇ ಆಡಲಿದೆ. ಹಾಗೆಯೇ ಗ್ರೂಪ್-2 ನಲ್ಲಿರುವ ತಂಡಗಳ ಪಂದ್ಯಗಳು ಶ್ರೀಲಂಕಾದಲ್ಲಿ ಜರುಗಲಿದೆ.
ಸೂಪರ್-8 ಗ್ರೂಪ್:
- ಗ್ರೂಪ್ 1 (X): ಭಾರತ (X1), ಝಿಂಬಾಬ್ವೆ (X2), ವೆಸ್ಟ್ ಇಂಡೀಸ್ (X3), ಸೌತ್ ಆಫ್ರಿಕಾ (X4).
- ಗ್ರೂಪ್ 2 (Y): ಇಂಗ್ಲೆಂಡ್ (Y1), ನ್ಯೂಝಿಲೆಂಡ್ (Y2), ಪಾಕಿಸ್ತಾನ್ (ಅರ್ಹತೆ ಪಡೆದರೆ) (Y3), ಶ್ರೀಲಂಕಾ (Y4).
ಈ ಎಂಟು ತಂಡಗಳು ಸೂಪರ್-8 ಸುತ್ತಿನಲ್ಲಿ ಗ್ರೂಪ್ ತಂಡಗಳ ವಿರುದ್ಧ ಸೆಣಸಲಿದೆ. ಅಂದರೆ ಭಾರತ ತಂಡವು ತನ್ನ ಗ್ರೂಪ್ನಲ್ಲಿರುವ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಲಿದೆ.
ಇತ್ತ ಪಾಕಿಸ್ತಾನ್ ತಂಡವು ಸೂಪರ್-8 ಸುತ್ತಿಗೆ ಪ್ರವೇಶಿಸಿದರೆ ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಸೆಣಸಬೇಕಿದೆ.
ಇದನ್ನೂ ಓದಿ: ಭಾರತದಲ್ಲಿ ‘ಬಿಗ್ ಬ್ಯಾಷ್ ಲೀಗ್’
ಇಲ್ಲಿ ಗ್ರೂಪ್ನಲ್ಲಿನ ತಂಡಗಳ ನಡುವೆ ಪಂದ್ಯ ನಡೆಯುವುದರಿಂದ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುವುದಿಲ್ಲ. ಇದಾಗ್ಯೂ ಉಭಯ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿದರೆ ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಹೀಗಾಗಿ ಇಂಡೊ-ಪಾಕ್ ಕದನವನ್ನು ಮತ್ತೆ ವೀಕ್ಷಿಸಲು ಸೆಮಿಫೈನಲ್ ಅಥವಾ ಫೈನಲ್ವರೆಗೆ ಕಾಯಲೇಬೇಕು.
