ಮುಂಬೈ, ಆಗಸ್ಟ್ 4: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ (Sunetra Pawar) ಅವರ ಸಾರ್ವಜನಿಕ ಭೇಟಿಗಳು ಹಾಗೂ ನಡವಳಿಕೆಯನ್ನು ವಿಮರ್ಶಿಸುವ ವೇಳೆ ಮಹಾರಾಷ್ಟ್ರ ಕಾಂಗ್ರೆಸ್ ಅವರನ್ನು “ಗೂಂಗಿ ಗುಡಿಯಾ” (ಮೂಕ ಬೊಂಬೆ) ಎಂದು ಟೀಕಿಸಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ವಿವಾದ ಹುಟ್ಟುಹಾಕಿದೆ. ಈ ಹೇಳಿಕೆಗೆ ಎನ್‌ಸಿಪಿ ಅಜಿತ್ ಪವಾರ್ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ, ಕಾಂಗ್ರೆಸ್ ಮಹಿಳೆಯರಿಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಸುನೇತ್ರಾ ಪವಾರ್ ಅವರ ಇತ್ತೀಚಿನ ಪತ್ರಿಕಾಗೋಷ್ಠಿಯನ್ನು ಲೇವಡಿ ಮಾಡಿದ್ದ ಕಾಂಗ್ರೆಸ್ ‘ಸುನೇತ್ರಾ ಅವರೇ ಇನ್ನೆಷ್ಟು ದಿನ ಮೂಕ ಗೊಂಬೆಯ ತರಹ ಇರುತ್ತೀರಿ?’ ಎಂದು ಕೆಣಕಿತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ವಿಷಯಗಳ ಕುರಿತು ಸುನೇತ್ರಾ ಪವಾರ್ ವಹಿಸುತ್ತಿರುವ ಮೌನವನ್ನು ಕಾಂಗ್ರೆಸ್ ಟೀಕಿಸಿತ್ತು. ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕರು ಈ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ- ಶರದ್ ಪವಾರ್ ಭೇಟಿ; ಎನ್‌ಡಿಎ ಸೇರಲು ಒಪ್ಪಿತಾ ಎನ್‌ಸಿಪಿ?
ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿರುವ ಎನ್‌ಸಿಪಿ ನಾಯಕರು, ಒಂದು ಕಾಲದಲ್ಲಿ ಕಾಂಗ್ರೆಸ್ ಉತ್ತಮ ರಾಜಕೀಯ ಸಂಸ್ಕೃತಿ ಮತ್ತು ಸಾರ್ವಜನಿಕ ಸಂವಹನದಲ್ಲಿ ಘನತೆಯನ್ನು ಕಾಯ್ದುಕೊಂಡಿತ್ತು, ಆದರೆ, ಈಗ ತನ್ನ ಸಿದ್ಧಾಂತ ಮತ್ತು ಮೌಲ್ಯಗಳಿಂದ ದೂರ ಸರಿದಿದೆ ಎಂದು ಕಿಡಿಕಾರಿದ್ದಾರೆ. ಮಹಿಳಾ ನಾಯಕಿಯೊಬ್ಬರ ವಿರುದ್ಧ ಇಂತಹ ಭಾಷೆಯನ್ನು ಬಳಸುವ ಮೂಲಕ ಕಾಂಗ್ರೆಸ್ ಮಹಿಳೆಯರಿಗೆ ಅಗೌರವ ತೋರಿದೆ. ಈ ಪದಬಳಕೆಯು ಕಾಂಗ್ರೆಸ್‌ನ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಎನ್‌ಸಿಪಿ ಆರೋಪಿಸಿದೆ. ಎನ್‌ಸಿಪಿಯ ಎರಡು ಬಣಗಳ ವಿಲೀನದ ಕುರಿತು ಚರ್ಚೆಗಳು ತೀವ್ರಗೊಳ್ಳುತ್ತಿರುವ ಸಮಯದಲ್ಲಿಯೇ ಈ ವಿವಾದ ಮುನ್ನೆಲೆಗೆ ಬಂದಿದೆ.
ಕಾಂಗ್ರೆಸ್ಗೆ ಇಂದಿರಾ ಗಾಂಧಿಯನ್ನು ನೆನಪಿಸಿದ ಎನ್‌ಸಿಪಿ:
ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಕುರಿತು ಮಹಾರಾಷ್ಟ್ರದ ಕಾಂಗ್ರೆಸ್ ಮಾಡಿದ “ಗೂಂಗಿ ಗುಡಿಯಾ” (ಮೂಕ ಬೊಂಬೆ) ಟೀಕೆಯನ್ನು ವಿರೋಧಿಸಿ ರಾಷ್ಟ್ರವಾದಿ ಕಾಂಗ್ರೆಸ್ (NCP) ನಾಯಕರು ಮುಂಬೈನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಗೆ ದಿಢೀರ್ ನುಗ್ಗಿ ಪ್ರತಿಭಟನೆ ನಡೆಸಿದರು. ಎನ್‌ಸಿಪಿ ನಾಯಕರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಅವರಿಂದ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿದರು.
ಇದನ್ನೂ ಓದಿ: ರಾಜೀನಾಮೆ ಬೆದರಿಕೆ ಹಾಕಿದವರು ಯಾರು? ಸಿಎಂಗೇ ನೇರ ಕರೆ ಮಾಡಿ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ಈ ಹಿಂದೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಬಳಸಲಾಗುತ್ತಿದ್ದ ಅದೇ ನಿಂದನಾತ್ಮಕ ಪದವನ್ನು ಈಗ ಕಾಂಗ್ರೆಸ್ ಬೆಂಬಲಿಸುತ್ತಿದೆಯೇ? ಎಂದು ಎನ್‌ಸಿಪಿ ನಾಯಕರು ಆಕ್ರೋಶದ ಪ್ರಶ್ನೆ ಎತ್ತಿದ್ದಾರೆ. ಮಹಾರಾಷ್ಟ್ರದ ಮೊದಲ ಮಹಿಳಾ ಉಪ ಮುಖ್ಯಮಂತ್ರಿಯ ವಿರುದ್ಧ ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದಕ್ಕೆ ಕಾಂಗ್ರೆಸ್ ನಾಚಿಕೆಪಡಬೇಕು. ಇದು ರಾಜ್ಯದ ಇಡೀ ಮಹಿಳಾ ಕುಲಕ್ಕೆ ಮಾಡಿದ ಅಪಮಾನ ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಿಡಿಕಾರಿದ್ದಾರೆ.
ಎನ್‌ಸಿಪಿ ನಾಯಕ ಹಾಗೂ ಸುನೇತ್ರಾ ಪವಾರ್ ಅವರ ಸೋದರಳಿಯ ರೋಹಿತ್ ಪವಾರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ದಿವಂಗತ ಇಂದಿರಾ ಗಾಂಧಿಯವರನ್ನು ಅವರ ವಿರೋಧಿಗಳು ‘ಗೂಂಗಿ ಗುಡಿಯಾ’ ಎಂದು ಕರೆಯುತ್ತಿದ್ದರು. ಆದರೆ ಅವರು ತಮ್ಮ ದಕ್ಷ ಕೆಲಸದ ಮೂಲಕ ಆ ಮಾತನ್ನು ಸುಳ್ಳು ಎಂದು ಸಾಬೀತುಪಡಿಸಿದರು. ಸುನೇತ್ರಾ ಅವರು ಕೂಡ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ” ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
