ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸಾಕ್ಷಿ ವಿಚಾರಣೆ ವಿಳಂಬ ಆಗುತ್ತಿದೆ ಎಂದು ನಟ ದರ್ಶನ್ ಅವರು ಆರೋಪಿಸಿದ್ದರು. ಇದೇ ಕಾರಣ ನೀಡಿ ಸುಪ್ರೀಂಕೋರ್ಟ್ನಲ್ಲಿ ಜಾಮೀನು ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು. ಇದೇ ವೇಳೆ ಅವರು ಸುದೀರ್ಘ ಜೈಲುವಾಸದಿಂದ ಜೀವನೋಪಾಯಕ್ಕೂ ಸಮಸ್ಯೆ ಆಗುತ್ತಿದೆ ಎಂದು ಆರೋಪಿಸಿದ್ದರು. ಏನೇ ಹೇಳಿದರೂ ಕೋರ್ಟ್ ಮಾತ್ರ ದರ್ಶನ್ ಮನವಿಯನ್ನು ಪರುಸ್ಕರಿಸಿಲ್ಲ. ಮುಂದಿನ ಒಂದು ವರ್ಷ ದರ್ಶನ್ (Darshan) ಜಾಮೀನು ಕೇಳುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಇದರಿಂದ ದರ್ಶನ್ ವೃತ್ತಿ ಜೀವನಕ್ಕೆ ಸಂಕಷ್ಟ ಎದುರಾಗಿದೆ.
ಜಾಮೀನು ಅರ್ಜಿವಿಳಂಬ ಆಗುತ್ತಿದೆ ಎಂದು ಹೇಳುವುದರ ಜೊತೆಗೆ ತಮ್ಮ ಸಿನಿಮಾಗಳ ಬಗ್ಗೆಯೂ ಸ್ಪಷ್ಟವಾಗಿ ಬರೆದಿದ್ದರು. ಜಾಮೀನು ಅರ್ಜಿಯಲ್ಲಿ ದರ್ಶನ್ ಅವರು ತಮ್ಮ ವೃತ್ತಿಜೀವನದ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ‘ನಾನು ಪ್ರತಿ ವರ್ಷ ಸರಾಸರಿ 2 ರಿಂದ 3 ಸಿನಿಮಾಗಳನ್ನು ಮಾಡುತ್ತಿದ್ದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮೀಡಿಯಾ ಹೌಸ್ ಸ್ಟೂಡಿಯೋಸ್ ಅಂತಹ ದೊಡ್ಡ ಸಂಸ್ಥೆಗಳ ಚಿತ್ರಗಳಿಗೆ ಈಗಾಗಲೇ ಸಹಿ ಮಾಡಿದ್ದೇನೆ. ನಿರ್ಮಾಪಕರು ಸುಮಾರು 6 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಸುದೀರ್ಘ ಜೈಲುವಾಸವು ನನ್ನ ಸಿನೆಮಾ ಭವಿಷ್ಯಕ್ಕೆ ಮರಣಗಂಟೆಯಾಗಲಿದೆ’ ಎಂದು ಅವರು ಅಲವತ್ತುಕೊಂಡಿದ್ದರು. ಆದರೆ ಕೋರ್ಟ್ ಈ ವಾದವನ್ನು ಪುರಸ್ಕರಿಸಿಲ್ಲ.
2028ರವರೆಗೂ ಸಿನಿಮಾ ಬರುವುದು ಅನುಮಾನ?
ಕೋರ್ಟ್ ಆದೇಶದ ಪ್ರಕಾರ ದರ್ಶನ್ ಇನ್ನೂ ಒಂದು ವರ್ಷ ಜೈಲಿನಲ್ಲೇ ಇರಬೇಕು. ಒಂದು ವೇಳೆ ಮುಂದಿನ ವರ್ಷ ಅವರು ಬಿಡುಗಡೆಯಾದರೂ, ಅವರು ಮತ್ತೆ ಫಿಟ್ ಆಗಿ, ಶೂಟಿಂಗ್ ಆರಂಭಿಸಿ, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸಿನಿಮಾ ತೆರೆಗೆ ಬರಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಮುಂದಿನ ಎರಡು ವರ್ಷಗಳ ಕಾಲ ದರ್ಶನ್ ಅವರ ಯಾವುದೇ ಹೊಸ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಇದು ಅವರ ವೃತ್ತಿಜೀವನಕ್ಕೆ ಮತ್ತು ಅವರ ಮೇಲೆ ಕೋಟಿಗಟ್ಟಲೆ ಹಣ ಹೂಡಿರುವ ನಿರ್ಮಾಪಕರಿಗೆ ಭಾರಿ ಹೊಡೆತ ನೀಡಿದೆ.
ಇದನ್ನೂ ಓದಿ: ದರ್ಶನ್ಗೆ ಕನಿಷ್ಟ ಒಂದು ವರ್ಷ ಜೈಲು ಖಾಯಂ
ಈ ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದಾರೆ. ಕಳೆದ 8 ತಿಂಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಇಷ್ಟು ನಿಧಾನಗತಿಯಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಪ್ರಕರಣ ಶೀಘ್ರವಾಗಿ ಮುಕ್ತಾಯಗೊಳ್ಳುವ ಲಕ್ಷಣಗಳಿಲ್ಲ. ಇದೇ ಅಂಶವನ್ನು ದರ್ಶನ್ ಅವರು ಜಾಮೀನು ಪಡೆಯಲು ಪ್ರಮುಖ ಅಸ್ತ್ರವಾಗಿ ಬಳಸಿದ್ದರು. ‘ಒಂದು ವರ್ಷದ ಒಳಗೆ 60 ಸಾಕ್ಷ್ಯಗಳ ವಿಚಾರಣೆ ಮುಗಿಸಿ, ಆ ಬಳಿಕ ವಿಚಾರಣಾ ನ್ಯಾಯಾಲಯದಲ್ಲಿಯೇ ಆರೋಪಿ (ದರ್ಶನ್) ಜಾಮೀನಿಗೆ ಅರ್ಜಿ ಸಲ್ಲಿಸಬಹುದು’ ಎಂದು ಕೋರ್ಟ್ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
