ಚಂದ್ರನಾಥ್ ರಥ್ ಮತ್ತು ಸುವೇಂದು ಅಧಿಕಾರಿ ಚಿತ್ರImage Credit source: ANI
ಕೋಲ್ಕತಾ, ಮೇ 11: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಕಳೆದ ಬುಧವಾರ (ಮೇ 6) ರಾತ್ರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ವಿಶಾಲ್ ಶ್ರೀವಾಸ್ತವ, ರಾಜ್ ಸಿಂಗ್ ಮತ್ತು ಮಯಂಕ್ ಮಿಶ್ರಾ ಎನ್ನುವ ಶಂಕಿತರನ್ನು ಬಂಧಿಸಿದ್ದಾರೆ. ಈ ಹೈ ಪ್ರೊಫೈಲ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT), ಆರೋಪಿಗಳು ಬಳಸಿದ ವಾಹನವನ್ನು ಪತ್ತೆಹಚ್ಚಲು ಮುಂದಾದಾಗ ಮಹತ್ವದ ಸುಳಿವು ಲಭ್ಯವಾಗಿದೆ.
ಕೋಲ್ಕತ್ತಾದ ಮಧ್ಯಾಮಗ್ರಾಮ್ ಸಮೀಪದ ಜೆಸೋರ್ ರಸ್ತೆಯಲ್ಲಿ ಚಂದ್ರನಾಥ್ ಅವರು ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿತ್ತು. ಕೊಲೆಗಡುಕರು ಬಳಸಿದ್ದ ಸಿಲ್ವರ್ ಬಣ್ಣದ ನಿಸ್ಸಾನ್ ಮೈಕ್ರಾ (Nissan Micra) ಕಾರು ಕೋಲ್ಕತ್ತಾ ಸಮೀಪದ ಬಾಲಿ ಟೋಲ್ ಪ್ಲಾಜಾವನ್ನು ಹಾದುಹೋಗಿತ್ತು. ಅಲ್ಲಿ ಕಾರಿನಲ್ಲಿದ್ದವರು ಯುಪಿಐ (UPI) ಮೂಲಕ ಟೋಲ್ ಹಣ ಪಾವತಿಸಿದ್ದರು. ಈ ಡಿಜಿಟಲ್ ಹಣ ವರ್ಗಾವಣೆಯ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಆ ಹಣ ಯಾರ ಖಾತೆಯಿಂದ ಹೋಗಿದೆ ಎಂಬ ಮಾಹಿತಿ ಸಿಕ್ಕಿದೆ. ಯುಪಿಐ ಪಾವತಿಯ ಸಮಯ ಮತ್ತು ಟೋಲ್ ಗೇಟ್‌ನ ಸಿಸಿಟಿವಿ ದೃಶ್ಯಗಳನ್ನು ಹೋಲಿಕೆ ಮಾಡಿದಾಗ ಆರೋಪಿಗಳ ಚಲನವಲನ ಸ್ಪಷ್ಟವಾಗಿದೆ.
ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ
ಯುಪಿ ಮತ್ತು ಬಿಹಾರ ಕನೆಕ್ಷನ್
ಕಾರಿನ ನಂಬರ್ ಪ್ಲೇಟ್ ಆಧರಿಸಿ ತನಿಖೆ ನಡೆಸಿದಾಗ, ಅದು ಸಿಲಿಗುರಿಯ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವುದು ತಿಳಿದುಬಂದಿದೆ. ಆ ವ್ಯಕ್ತಿ ಕಾರನ್ನು ಮಾರಾಟಕ್ಕಿಟ್ಟಾಗ ಉತ್ತರ ಪ್ರದೇಶದ (UP) ಕೆಲವು ವ್ಯಕ್ತಿಗಳು ಸಂಪರ್ಕಿಸಿದ್ದರು. ಸದ್ಯ ಪೊಲೀಸರ ತಂಡಗಳು ಯುಪಿ ಮತ್ತು ಬಿಹಾರಕ್ಕೆ ಧಾವಿಸಿದ್ದು, ಈ ಕೊಲೆಯನ್ನು ವೃತ್ತಿಪರ ಶೂಟರ್‌ಗಳ ಮೂಲಕ ಮಾಡಿಸಲಾಗಿದೆ ಎಂದು ಶಂಕಿಸಲಾಗಿದೆ.
ಚಂದ್ರನಾಥ್ ಕೊಲೆ ನಡೆದ ರೀತಿ
ಚಂದ್ರನಾಥ್ ರಥ್ ಅವರು ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ಸಂಚರಿಸುತ್ತಿದ್ದಾಗ, ಮೈಕ್ರಾ ಕಾರಿನ ಮೂಲಕ ಅವರ ದಾರಿ ತಡೆಯಲಾಗಿತ್ತು. ನಂತರ ನಾಲ್ಕು ಮೋಟಾರ್ ಸೈಕಲ್‌ಗಳಲ್ಲಿ ಬಂದ ಎಂಟು ಮಂದಿ ಸಶಸ್ತ್ರಧಾರಿಗಳು ಅತಿ ಸಮೀಪದಿಂದ ಎಂಟು ಸುತ್ತು ಗುಂಡು ಹಾರಿಸಿದ್ದರು. ಚಂದ್ರನಾಥ್ ಅವರ ಎದೆ ಮತ್ತು ತಲೆಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ
ಈ ಕೊಲೆಯನ್ನು ಬಿಜೆಪಿಯು “ರಾಜಕೀಯ ಪ್ರೇರಿತ ಸಂಚು” ಎಂದು ಕರೆದಿದ್ದು, ತೃಣಮೂಲ ಕಾಂಗ್ರೆಸ್ (TMC) ಮೇಲೆ ಆರೋಪ ಮಾಡಿದೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿಹಾಕಿದ್ದು, ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದೆ.
ಸದ್ಯ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಪ್ರಮುಖ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
