ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ವಿಮಾನ ನಿಲ್ದಾಣ, ಹೈಕೋರ್ಟ್, ಕೆಂಪುಕೋಟೆಗೆ ಬಾಂಬ್ ಬೆದರಿಕೆ! – Kannada News | Delhi airport, High Court and Red Fort gets bomb threats ahead of Independence Day

ನವದೆಹಲಿ, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆಗೆ (Independence Day) ಕೇವಲ ಒಂದು ದಿನ ಬಾಕಿ ಇರುವಾಗ, ಶುಕ್ರವಾರ ಸಾಲು ಸಾಲು ಬಾಂಬ್ ಬೆದರಿಕೆ ಕರೆಗಳಿಂದ ರಾಷ್ಟ್ರ ರಾಜಧಾನಿ ದೆಹಲಿ ಆತಂಕಕ್ಕೊಳಗಾಗಿದೆ. ದೆಹಲಿ ಕೆಂಪುಕೋಟೆ ಹಾಗೂ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಟರ್ಮಿನಲ್ 3 ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಥಳದಲ್ಲೂ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಇಮೇಲ್‌ನಲ್ಲಿ ದೆಹಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು, ಕೆಂಪುಕೋಟೆ ಹಾಗೂ ದೆಹಲಿಯ ರೈಲುಗಳನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೆ, ದೆಹಲಿಯನ್ನು ‘ಖಾಲಿಸ್ತಾನ್’ನ ಭಾಗವಾಗಿ ಮಾಡುವುದಾಗಿಯೂ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. “ಮಧ್ಯಾಹ್ನ 2:11ಕ್ಕೆ ದೆಹಲಿ ಹೈಕೋರ್ಟ್‌ನಲ್ಲಿ ಬಾಂಬ್ ಸ್ಫೋಟ” ಎಂದು ಇ-ಮೇಲ್​ನಲ್ಲಿ ಬರೆಯಲಾಗಿದ್ದು, 1984ರ ಸಿಖ್ ವಿರೋಧಿ ದಂಗೆ ಸೇರಿದಂತೆ ಸಿಖ್ಖರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ದೆಹಲಿ ಹೈಕೋರ್ಟ್ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೂಡ ಆರೋಪಿಸಲಾಗಿದೆ. ಇದನ್ನೇ ದಾಳಿಯ ಬೆದರಿಕೆಗೆ ಕಾರಣವೆಂದು ಬಿಂಬಿಸಲು ಯತ್ನಿಸಲಾಗಿದೆ.

ಇದನ್ನೂ ಓದಿ: Independence Day 2026: 79 ಅಥವಾ 80? ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕಾಚಾರದಲ್ಲಿ ನಿಮಗೂ ಗೊಂದಲವಿದೆಯೇ? ಇಲ್ಲಿದೆ ಸ್ಪಷ್ಟ ಉತ್ತರ!

ಬಾಂಬ್ ಬೆದರಿಕೆ ಬಂದ ಇತರ ಸ್ಥಳಗಳು:

ಇಮೇಲ್‌ನಲ್ಲಿ ಉಲ್ಲೇಖಿಸಲಾದ ಸ್ಥಳಗಳ ಜೊತೆಗೆ, ಜಾಮ್ ನಗರ ಹೌಸ್, ಜಂಡೇವಾಲನ್‌ನಲ್ಲಿರುವ FLATED ಕಟ್ಟಡ, ಎಂ.ಬಿ ಸಾಕೆಟ್‌ನಲ್ಲಿರುವ ಡಿಎಂ ಕಚೇರಿ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ಮತ್ತು ದೆಹಲಿ ಕಾಂಟೋನ್ಮೆಂಟ್‌ನಲ್ಲಿರುವ ಎಸ್‌ಡಿಎಂ ಕಚೇರಿ ಸೇರಿದಂತೆ ಇತರೆ ಹಲವು ಸಂಸ್ಥೆಗಳಿಗೂ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

ಬೆದರಿಕೆ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿಯನ್ನು ಎಲ್ಲಾ ಸ್ಥಳಗಳಲ್ಲೂ ನಿಯೋಜಿಸಲಾಗಿದೆ. ಆದರೆ, ತನಿಖೆಯ ವೇಳೆ ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲನ್ನು ತೀವ್ರಗೊಳಿಸಿವೆ.

ಇದನ್ನೂ ಓದಿ: Independence Day 2026: ಭಾರತದಂತೆಯೇ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು

19 ಜನ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ:

ಈ ವಾರದ ಆರಂಭದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು, ಖಾಲಿಸ್ತಾನಿ ಬೆಂಬಲಿತ ಗ್ರೂಪ್‌ಗಳು ಮತ್ತು ದಿಢೀರ್ ಪ್ರತಿಭಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು. ಹೆಚ್ಚುವರಿ ಭದ್ರತಾ ಯೋಜನೆಯ ಭಾಗವಾಗಿ, ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಮತ್ತು ಖಾಲಿಸ್ತಾನಿ ಗುಂಪುಗಳಿಗೆ ಸೇರಿದ 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಫೋಟೋಗಳನ್ನು ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗಿತ್ತು.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹಾಗೂ ಖಾಲಿಸ್ತಾನಿ ಶಕ್ತಿಗಳಿಂದ ಬೆದರಿಕೆ ಇರುವ ಬಗ್ಗೆ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಚರಣೆಗೆ ಧಕ್ಕೆ ತರಬಹುದಾದ ತಡರಾತ್ರಿ ಅಥವಾ ದಿಢೀರ್ ಪ್ರತಿಭಟನೆಗಳ ಮೇಲೆಯೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *