Headlines

ಹಾವೇರಿಯಲ್ಲಿ ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣ ಹೆಚ್ಚಳ: 2025-26ರಲ್ಲಿ 42 ಕೇಸ್​​! – Kannada News | Alarming Trend in Haveri: 42 Minor Pregnancy Cases Reported in 2025 26; 11 Cases Recorded in First Quarter of 2026 27

ಅಪ್ರಾಪ್ತೆಯರ ಗರ್ಭಧಾರಣೆ ಪ್ರಕರಣ ಹೆಚ್ಚಳ

ಹಾವೇರಿ, ಆಗಸ್ಟ್​​ 09: ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಹೆಚ್ಚಳ ಕಂಡಿದ್ದು, ವಿಚಾರವೀಗ ಆತಂಕಕ್ಕೆ ಕಾರಣವಾಗಿವೆ. 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 42 ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ದಾಖಲಾಗಿದ್ದರೆ, 2026-27ನೇ ಸಾಲಿನ ಮೊದಲ ಮೂರು ತಿಂಗಳಲ್ಲಿ, ಅಂದರೆ ಜೂನ್‌ ಅಂತ್ಯದವರೆಗೆ, 11 ಪ್ರಕರಣಗಳು ವರದಿಯಾಗಿವೆ. ರಿಪ್ರೊಡಕ್ಟಿವ್‌ ಆ್ಯಂಡ್‌ ಚೈಲ್ಡ್‌ ಹೆಲ್ತ್‌ (RCH) ಪೋರ್ಟಲ್‌ನ ಅಂಕಿಅಂಶಗಳ ಪ್ರಕಾರ, 2025-26ರಲ್ಲಿ ರಾಣೇಬೆನ್ನೂರು ತಾಲೂಕಿನಲ್ಲಿ ಅತಿ ಹೆಚ್ಚು 10 ಪ್ರಕರಣಗಳು ದಾಖಲಾಗಿವೆ. ಹಾವೇರಿ ಮತ್ತು ಹಾನಗಲ್‌ ತಾಲೂಕುಗಳಲ್ಲಿ ತಲಾ 8, ಹಿರೇಕೆರೂರು 6, ಬ್ಯಾಡಗಿ ಮತ್ತು ಸವಣೂರು ತಾಲೂಕುಗಳಲ್ಲಿ ತಲಾ 5 ಪ್ರಕರಣಗಳು ವರದಿಯಾಗಿವೆ.

ಪ್ರಸಕ್ತ ಸಾಲಿನಲ್ಲಿ ಹಾವೇರಿಯೊಂದರಲ್ಲೇ 9 ಪ್ರಕರಣ!

ಪ್ರಸಕ್ತ ಸಾಲಿನಲ್ಲಿ ಪರಿಸ್ಥಿತಿ ಮತ್ತಷ್ಟು ಆತಂಕಕಾರಿ ಎನಿಸಿದೆ. ಜೂನ್‌ ಅಂತ್ಯದವರೆಗೆ ದಾಖಲಾಗಿರುವ 11 ಪ್ರಕರಣಗಳ ಪೈಕಿ ಹಾವೇರಿ ತಾಲೂಕೊಂದರಲ್ಲೇ 9 ಪ್ರಕರಣಗಳು ವರದಿಯಾಗಿವೆ. ರಾಣೇಬೆನ್ನೂರು ಮತ್ತು ಸವಣೂರು ತಾಲೂಕುಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ರಾಜ್ಯದ ವಿವಿಧೆಡೆ ಶಾಲಾ ಬಾಲಕಿಯರು ಹಾಗೂ ಹಾಸ್ಟೆಲ್‌ಗಳಲ್ಲಿ ವಾಸಿಸುವ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವ ಹಲವು ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಹಾವೇರಿಯ ಅಂಕಿಅಂಶಗಳು ಕಳವಳ ಮೂಡಿಸಿವೆ. ಇಂತಹ ಪ್ರಕರಣಗಳು ಬಾಲಕಿಯರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬರಗಾಲದ ಮಧ್ಯೆ ಹಾವೇರಿ ರೈತರಿಗೆ ಮತ್ತೊಂದು ಸಂಕಷ್ಟ: ಕಂಗಾಲಾದ ಅನ್ನದಾತ!

ಅಪ್ರಾಪ್ತರ ಗರ್ಭಧಾರಣೆಗೆ ಕಾರಣಗಳೇನು?

ಹದಿಹರೆಯದವರಿಗೆ ಲೈಂಗಿಕ ಶಿಕ್ಷಣದ ಕೊರತೆ, ಬಾಲ್ಯವಿವಾಹ, ಬಡತನ, ಲೈಂಗಿಕ ದೌರ್ಜನ್ಯ ಹಾಗೂ ಶಾಲೆ ತೊರೆಯುವಿಕೆ ಸೇರಿದಂತೆ ಹಲವು ಕಾರಣಗಳು ಅಪ್ರಾಪ್ತ ಬಾಲಕಿಯರ ಗರ್ಭಧಾರಣೆಗೆ ಕಾರಣವಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಕೇವಲ ಆರೋಗ್ಯ ಸಮಸ್ಯೆಯಲ್ಲ. ಇದರ ಹಿಂದೆ ಬಾಲ್ಯವಿವಾಹ, ಲೈಂಗಿಕ ಶೋಷಣೆ, ಶಿಕ್ಷಣದಿಂದ ವಂಚಿತವಾಗುವಿಕೆ ಮತ್ತು ಸಾಮಾಜಿಕ ಅಸಮಾನತೆಯಂತಹ ಗಂಭೀರ ಸಾಮಾಜಿಕ ಸಮಸ್ಯೆಗಳೂ ಅಡಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಹಲವು ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆಯ (POCSO Act) ಅಡಿಯಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಪ್ರತಿಯೊಂದು ಪ್ರಕರಣವನ್ನೂ ಎಚ್ಚರಿಕೆಯಿಂದ ತನಿಖೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಬಾಲ್ಯವಿವಾಹ ತಡೆಗಟ್ಟಲು ಹಾಗೂ ಹದಿಹರೆಯದವರ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆಗಳು ಜಂಟಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಆದರೆ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕುಟುಂಬಗಳು, ಶಾಲೆಗಳು, ಸಮುದಾಯಗಳು ಮತ್ತು ಆಡಳಿತ ವ್ಯವಸ್ಥೆ ನಿರಂತರವಾಗಿ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *