ಹಿಂಡು ಹಿಂಡಾಗಿ ನಾಡಿಗೆ ಲಗ್ಗೆ ಇಟ್ಟ ‘ಬೀಟಮ್ಮ’ ಗ್ಯಾಂಗ್Image Credit source: tv9
ಚಿಕ್ಕಮಗಳೂರು, ಫೆಬ್ರವರಿ 26: ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಭಾಗದಿಂದ ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಗೆ ಕಾಡಾನೆಗಳ ದೊಡ್ಡ ಗುಂಪು ಎಂಟ್ರಿ ನೀಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ‘ಬೀಟಮ್ಮ’ ಮತ್ತು ‘ಭುವನೇಶ್ವರಿ’ ಗ್ಯಾಂಗ್‌ಗಳಾಗಿ ಗುರುತಿಸಲ್ಪಟ್ಟಿರುವ ಈ ಹಿಂಡುಗಳು ಬೇಲೂರು ಮಾರ್ಗವಾಗಿ ಜಿಲ್ಲೆಗೆ ಪ್ರವೇಶಿಸಿವೆ. ಭೀಮಾ ನೇತೃತ್ವದಲ್ಲಿ ಸುಮಾರು 25 ಕಾಡಾನೆಗಳ ಗುಂಪು ಚಿಕ್ಕಮಗಳೂರು ಕಡೆಗೆ ಬಂದಿದ್ದು, ಒಟ್ಟಾರೆ 45 ಕಾಡಾನೆಗಳೊಂದಿಗೆ ಬಂದಿದ್ದ ಬೀಟಮ್ಮ ಗ್ಯಾಂಗ್, ನಂತರ 20 ಕಾಡಾನೆಗಳೊಂದಿಗೆ ಬೇಲೂರು ಕಡೆಗೆ ಹಿಂತಿರುಗಿವೆಯೆಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಆದರೆ, ಮೂಡಿಗೆರೆ–ಬೇಲೂರು ಗಡಿ ಭಾಗದ ತೋಟ ಪ್ರದೇಶಗಳಲ್ಲಿ ಬೀಟಮ್ಮ ಮತ್ತು ಇನ್ನೂ 20 ಕಾಡಾನೆಗಳು ಬೀಡುಬಿಟ್ಟಿರುವುದರಿಂದ ಆತಂಕ ಮುಂದುವರಿದಿದೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 22 ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಕಸ್ಕೆಬೈಲು ಗುಡ್ಡದಲ್ಲಿ ತಂಗಿವೆ. ಬಾರದಹಳ್ಳಿ ಗ್ರಾಮದಲ್ಲಿ ಸಲಗ ಓಡಾಟ ನಡೆಸಿದ ಘಟನೆ ಕೂಡ ದಾಖಲಾಗಿದೆ. ಇದೇ ವೇಳೆ, ಎರಡು ಕಾಡಾನೆಗಳು ಚಿಕ್ಕಮಗಳೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿರುವುದು ಜನರನ್ನು ಆತಂಕಕ್ಕೆ ಈಡುಮಾಡಿದೆ.
ಇಲ್ಲಿದೆ ಕಾಡಾನೆಗಳು ನಾಡಿಗೆ ಲಗ್ಗೆ ಇಟ್ಟ ವಿಡಿಯೋ
ಬಾರದಹಳ್ಳಿ, ಚಟ್ಟನಹಳ್ಳಿ, ಕಲ್ಲು ಗುಡ್ಡ, ವಾಟೆಗಂಡಿ, ಹುಲಿಹಂಡ್ಲು ಸೇರಿದಂತೆ ಹಲವಾರು ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಗೋಣಿಬೀಡು ವ್ಯಾಪ್ತಿಯಲ್ಲಿ ಒಟ್ಟು 33 ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ರಾತ್ರಿ ವೇಳೆ ಹೊರಗೆ ಸಂಚರಿಸಲು ಹೆದರುತ್ತಿದ್ದಾರೆ.
ಅರಣ್ಯ ಇಲಾಖೆ ಹೈ ಅಲರ್ಟ್: ಕಾರ್ಮಿಕರಿಗೆ ಎಚ್ಚರಿಕೆ
ಅರಣ್ಯ ಇಲಾಖೆಯ ಅಧಿಕಾರಿಗಳು ಮೂಡಿಗೆರೆ ಮತ್ತು ಚಿಕ್ಕಮಗಳೂರು ವಲಯದಲ್ಲಿ ಅಲರ್ಟ್ ಘೋಷಿಸಿದ್ದು, ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳದಂತೆ ತಾತ್ಕಾಲಿಕ ಸೂಚನೆ ನೀಡಿದ್ದಾರೆ. ಜನರು ಎಚ್ಚರಿಕೆಯಿಂದಿರಬೇಕು, ಗುಂಪುಗಳಲ್ಲಿ ಮಾತ್ರ ಸಂಚರಿಸಬೇಕು ಹಾಗೂ ಕಾಡಾನೆಗಳು ಕಂಡುಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕಾಫಿನಾಡಿನಲ್ಲಿ ಮರುಕಳಿಸುತ್ತಿರುವ ಕಾಡಾನೆಗಳ ಹಾವಳಿ ರೈತರು ಹಾಗೂ ತೋಟಗಾರರಿಗೆ ತಲೆನೋವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಇದನ್ನೂ ಓದಿ: ಕಿಲ್ಲರ್ ಕಾಡಾನೆ ಸೆರೆಯಾದರೂ ಮುಂದುವರಿದ ಆತಂಕ; ಚಿಕ್ಕಮಗಳೂರಿನ 12 ಗ್ರಾಮಗಳಿಗೆ ಗ್ರಾಮಗಳಲ್ಲಿ ನಿಷೇಧಾಜ್ಞೆ !
ಕಾಡಾನೆಗಳ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಒಟ್ಟು 12 ಗ್ರಾಮಗಳಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಏತನ್ಮಧ್ಯೆ, ಕಾಡಾನೆ ದಾಳಿಗಳಿಗೆ ಒಂದೇ ವಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
