ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಆಟಗಾರರ ನಡುವೆ ಅಹಿತಕರ ಘಟನೆ ನಡೆದಿದೆ. ಕರ್ನಾಟಕ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ಪರ ನಾಯಕ ಪರಸ್ ಡೋಗ್ರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅದರಂತೆ 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದ ಪರಸ್ ಹಾಗೂ ಕರ್ನಾಟಕ ಆಟಗಾರ ಕೆವಿ ಅನೀಶ್ ನಡುವೆ ವಾಗ್ವಾದ ನಡೆದಿದೆ.
ಈ ವಾಗ್ವಾದವು ತಾರಕ್ಕೇರುತ್ತಿದ್ದಂತೆ ಪರಸ್ ಡೋಗ್ರಾ ಕೆವಿ ಅನೀಶ್ ತಲೆಗೆ ಹೆಲ್ಮೆಟ್‌ನಿಂದ ಡಿಚ್ಚಿ ಹೊಡೆದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸ್ಲೆಡ್ಜಿಂಗ್ ಅಥವಾ ಮೌಖಿಕ ನಿಂದನೆ ಎಂದು ವರದಿಯಾಗಿದೆ.
ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅನೀಶ್ ಅವರು ಡೋಗ್ರಾ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು. “ನೀವು 10,000 ರನ್ ಹೇಗೆ ಗಳಿಸಿದಿರಿ? ನಿಮಗೆ ಬ್ಯಾಟ್ ಕೂಡ ಹಿಡಿಯಲೂ ಕೂಡ ಬರುವುದಿಲ್ಲ” ಎಂಬಂತಹ ವೈಯಕ್ತಿಕ ಟೀಕೆಗಳು ಮತ್ತು ಅವಾಚ್ಯ ಶಬ್ದಗಳ ಬಳಕೆಯು ಡೋಗ್ರಾ ಅವರ ಆಕ್ರೋಶಕ್ಕೆ ಕಾರಣವಾಯಿತು.
ಈ ಸ್ಲೆಡ್ಜಿಂಗ್ ಬೆನ್ನಲ್ಲೇ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದ ಡ್ರೋಗ್ರಾ ನೇರವಾಗಿ ಅನೀಶ್ ಅವರ ಬಳಿ ಹೋಗಿ ಮಾತಿನ ಚಕಮಕಿ ನಡೆಸಿದರು. ಈ ವಾಗ್ವಾದವು ತಾರಕ್ಕೇರುತ್ತಿದ್ದಂತೆ ತಮ್ಮ ಹೆಲ್ಮೆಟ್‌ನಿಂದ ಅನೀಶ್ ಅವರ ತಲೆಗೆ ಗುದ್ದಿದ್ದಾರೆ.
ತಕ್ಷಣವೇ ಮೈದಾನದಲ್ಲಿದ್ದ ಅಂಪೈರ್‌ಗಳು ಮತ್ತು ಕರ್ನಾಟಕದ ಹಿರಿಯ ಆಟಗಾರರಾದ ಮಾಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದೀಗ ಈ ಅಶಿಸ್ತಿನ ವರ್ತನೆಗಾಗಿ ಬಿಸಿಸಿಐ ಪರಸ್ ಡೋಗ್ರಾ ಅವರಿಗೆ ಪಂದ್ಯದ ಸಂಭಾವನೆಯ ಶೇ. 50 ರಷ್ಟು ದಂಡ ವಿಧಿಸಿದೆ. ಅಲ್ಲದೆ ಎರಡು ಡಿಮೆರಿಟ್ ಅಂಕಗಳನ್ನು ನೀಡಿದೆ.
ಇದೀಗ ರಣಜಿ ಟೂರ್ನಿ ಇತಿಹಾಸದಲ್ಲೇ 10 ಸಾವಿರಕ್ಕೂ ಅಧಿಕ ರನ್ಗಳಿಸಿದ ಆಟಗಾರನ ಸಾಮರ್ಥ್ಯವನ್ನು ಪ್ರಶ್ನಿಸಿ ನಿಂದಿಸಿರುವ ಕೆವಿ ಅನೀಶ್ ಅವರ ನಡೆಯ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಏಕೆಂದರೆ ರಣಜಿ ಟೂರ್ನಿ ಇತಿಹಾಸದಲ್ಲಿ 10 ಸಾವಿರಕ್ಕೂ ಅಧಿಕ ರನ್ ಕಲೆಹಾಕಿರುವುದು ಕೇವಲ ಇಬ್ಬರು ಬ್ಯಾಟರ್ಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ದಾಂಡಿಗ ವಾಸಿಂ ಜಾಫರ್ (12,038). ಇದಾದ ಬಳಿಕ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಪರಸ್ ಡೋಗ್ರಾ.
ಇಂತಹ ಸಾಧನೆ ಮಾಡಿದ ಆಟಗಾರನನ್ನು “ನೀವು 10,000 ರನ್ ಹೇಗೆ ಗಳಿಸಿದಿರಿ? ನಿಮಗೆ ಬ್ಯಾಟ್ ಕೂಡ ಹಿಡಿಯಲೂ ಕೂಡ ಬರುವುದಿಲ್ಲ” ಎಂದು ಅನೀಶ್ ನೇರವಾಗಿ ನಿಂದನೆ ಮಾಡಿರುವುದು ಎಷ್ಟು ಸರಿ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
