ರೈಲ್ವೆ ಇಲಾಖೆ ಕಚೇರಿ ಜಪ್ತಿImage Credit source: Tv9 Kannada
ಹುಬ್ಬಳ್ಳಿ, ಫೆಬ್ರವರಿ 23: ರೈತರಿಗೆ ಭೂ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯದ ಆದೇಶದ ಅನ್ವಯ ಹುಬ್ಬಳ್ಳಿ ನಗರದಲ್ಲಿರುವ ರೈಲ್ವೆ ಇಲಾಖೆಯ ಡೆಪ್ಯೂಟಿ ಚೀಫ್ ಎಂಜಿನಿಯರ್ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನೈರುತ್ಯ ರೈಲ್ವೆ ವಿಭಾಗಕ್ಕೆ ಸೇರಿದ ಕಚೇರಿಯಲ್ಲಿನ ಟೇಬಲ್, ಕಂಪ್ಯೂಟರ್ ಸೇರಿ ಅನೇಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. 2017ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ರೈಲು ನಿಲ್ದಾಣಕ್ಕೆಂದು ಇಲಾಖೆ 16 ರೈತರಿಂದ 12.5 ಎಕರೆ ಭೂಮಿಯನ್ನು ನೈರುತ್ವ ರೈಲ್ವೆ ಸ್ವಾಧೀನಪಡಿಸಿಕೊಂಡಿತ್ತು. ಸ್ವಾಧಿನ ಪಡಿಸಿಕೊಳ್ಳಲಾದ ಜಾಗ ಕೃಷಿ ಜಮೀನಾಗಿದ್ದ ಹಿನ್ನೆಲೆ ಒಂದು ಎಕರೆಗೆ 18 ಲಕ್ಷ ಪರಿಹಾರ ನಿಗದಿ ಮಾಡಿ ನೀಡಲಾಗಿತ್ತು. ಆದರೆ ನೀಡಿರುವ ಪರಿಹಾರ ಕಡಿಮೆ ಆಗಿದೆ ಎಂದು ರೈತರು ಕೋರ್ಟ್ ಮೊರೆ ಹೋಗಿದ್ದರು.
ಭೂಸ್ವಾಧೀನ ಸಂಬಂಧ ವಿಚಾರಣೆ ನಡೆಸಿದ್ದ ಕೊಪ್ಪಳ ಜಿಲ್ಲಾ ನ್ಯಾಯಾಲಯ ಪ್ರತಿ ಚದರ್ ಅಡಿಗೆ 800 ರೂಪಾಯಿ ನಿಗದಿ ಮಾಡಿ ಮಾರ್ಚ್ 31, 2023ರಲ್ಲಿ ಆದೇಶ ಮಾಡಿತ್ತು. ನಂತರ ಪ್ರಕರಣವನ್ನು ಹುಬ್ಬಳ್ಳಿ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ನಡುವೆ ಕೊಪ್ಪಳ ಜಿಲ್ಲಾ ನ್ಯಾಯಲಯದ ಈ ಆದೇಶದ ವಿರುದ್ಧ ಧಾರವಾಡ ಹೈಕೋರ್ಟ್ ಪೀಠಕ್ಕೆ ನೈರುತ್ಯ ರೈಲ್ವೆ ಇಲಾಖೆ ಮೇಲ್ಮನವಿ ಸಲ್ಲಿಸಿದ್ದು, ಶೇಕಡಾ 50ರಷ್ಟು ಹಣ ಪಾವತಿ ಮಾಡುವಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಆದರೆ ರೈಲ್ವೆ ಇಲಾಖೆ ಈ ಆದೇಶವನ್ನು ಕೂಡ ಪಾಲನೆ ಮಾಡಿರಲಿಲ್ಲ. ಹೀಗಾಗಿ ಹುಬ್ಬಳ್ಳಿ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆದೇಶದ ಹಿನ್ನೆಲೆ ಜಪ್ತಿ ಕಾರ್ಯ ನಡೆದಿದೆ. ಒಟ್ಟು 9 ಪ್ರಕರಣಗಳಲ್ಲಿ 90 ಕೋಟಿ ರೂಪಾಯಿ ಹಣವನ್ನು ಇಲಾಖೆ ನೀಡಬೇಕಿದ್ದರೂ ಕೇವಲ 7 ಕೋಟಿಯನ್ನಷ್ಟೇ ಜಮೆ ಮಾಡಿತ್ತು ಎನ್ನಲಾಗಿದೆ.
ಇದನ್ನೂ ಓದಿ: 60 ಸಾವಿರದ ಕ್ಯಾಮರಾ ಆರ್ಡರ್ ಮಾಡಿದ್ದ ಉದ್ಯಮಿಗೆ ಶಾಕ್; ಬಾಕ್ಸ್ನಲ್ಲಿ ಬಂದಿದ್ದು ವಾಷಿಂಗ್ ಪೌಡರ್!
ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಕಾಲುವೆ ನಿರ್ಮಾಣಕ್ಕೆ ಜಮೀನು ನೀಡಿದ್ದ ರೈತರಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ, ವಿಜಯಪುರದ 1ನೇ ಹೆಚ್ಚುವರಿ ನ್ಯಾಯಾಲಯದ ಆದೇಶದಂತೆ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ವ್ಯವಸ್ಥಾಪಕ ನಿರ್ದೇಶಕರ (MD) ಕಚೇರಿಯನ್ನು ಮೊನ್ನೆ ಮೊನ್ನೆಯಷ್ಟೇ ಜಪ್ತಿ ಮಾಡಲಾಗಿತ್ತು. ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ರೈತ ಮಹಾದೇವ ಲಿಗಾಡೆ ಹಾಗೂ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಅಕ್ರುಸಾಬ ಮುಲ್ಲಾ ಸೇರಿದಂತೆ ಹಲವಾರು ರೈತರ ಜಮೀನನ್ನು ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ವರ್ಷಗಳು ಕಳೆದರೂ ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿರಲಿಲ್ಲ. ಈ ಘಟನೆ ಬೆನ್ನಲ್ಲೇ ಮತ್ತೊಂದು ಅದೇ ಮಾದರಿಯ ಪ್ರಕರಣ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
