ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಹಣ ಸಂಪಾದಿಸಬಹುದು ಎಂದು ಬಹಳ ಜನರು ಹೇಳುವುದನ್ನು ಕೇಳಿರುತ್ತೀರಿ. ಹಾಗೆಯೇ, ಷೇರುಗಳ ಹಿಂದೆ ಹೋಗಿ ನಷ್ಟ ಮಾಡಿಕೊಂಡವರನ್ನೂ ನೋಡಿರುತ್ತೀರಿ. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಭವಿಷ್ಯ ಇದೆ ಎಂದು ಭಾವಿಸಿ ಕಣ್ಣಿಗೆ ಸಿಕ್ಕ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳ ಷೇರನ್ನು ಖರೀದಿಸಿ ಕೈಸುಟ್ಟುಕೊಂಡವರೆಷ್ಟೋ. ಹೀಗಾಗಿ, ಯಾವ ಷೇರುಗಳನ್ನು ಆಯ್ದುಕೊಳ್ಳಬೇಕು, ಯಾವ ಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಅನೇಕರಲ್ಲಿ ಇರುತ್ತದೆ. ಷೇರು ಮಾರುಕಟ್ಟೆಯ ದಿಗ್ಗಜ ಹಾಗೂ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ಸಹ-ಸ್ಥಾಪಕರಾದ ರಾಮದೇವ್ ಅಗರ್ವಾಲ್ (Raamdeo Agrawal) ಅವರು ಯಾವುದೇ ಕಂಪನಿಯ ಷೇರುಗಳನ್ನು ಖರೀದಿಸುವ ಮುನ್ನ ಪ್ರತಿಯೊಬ್ಬ ಹೂಡಿಕೆದಾರರೂ ಕಡ್ಡಾಯವಾಗಿ ಪರಿಶೀಲಿಸಬೇಕಾದ 10 ಪ್ರಮುಖ ಆರ್ಥಿಕ ಸೂಚಕಗಳನ್ನು (Financial Indicators) ತಿಳಿಸಿದ್ದಾರೆ:
1. ಮಾರಾಟದ ಬೆಳವಣಿಗೆ (Sales Growth)
ಕಂಪನಿಯ ವ್ಯವಹಾರ ಮತ್ತು ಆದಾಯವು ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆಯೇ ಎಂಬುದನ್ನು ಇದು ತೋರಿಸುತ್ತದೆ. ಮಾರಾಟದಲ್ಲಿ ಸ್ಥಿರವಾದ ಬೆಳವಣಿಗೆ ಇರುವ ಕಂಪನಿಗಳು ದೀರ್ಘಾವಧಿಯಲ್ಲಿ ಉತ್ತಮ ಲಾಭ ನೀಡುತ್ತವೆ.
2. ಲಾಭದ ಮಾರ್ಜಿನ್ (Operating Profit Margin)
ಕಂಪನಿಯು ತನ್ನ ಪ್ರಮುಖ ವ್ಯವಹಾರದಿಂದ ಎಷ್ಟು ಪರಿಣಾಮಕಾರಿಯಾಗಿ ಲಾಭ ಗಳಿಸುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಹೆಚ್ಚಿನ ಆಪರೇಟಿಂಗ್ ಮಾರ್ಜಿನ್ ಎಂದರೆ ಕಂಪನಿಯು ತನ್ನ ವೆಚ್ಚಗಳನ್ನು ಚೆನ್ನಾಗಿ ನಿಯಂತ್ರಿಸುತ್ತಿದೆ ಎಂದರ್ಥ.
3. ಲಾಭದ ಬೆಳವಣಿಗೆ (Net Profit Growth)
ಎಲ್ಲಾ ವೆಚ್ಚಗಳು, ತೆರಿಗೆಗಳು ಮತ್ತು ಬಡ್ಡಿಗಳನ್ನು ಕಳೆದ ನಂತರ ಕಂಪನಿಯ ಕೈಯಲ್ಲಿ ಉಳಿಯುವ ನಿಜವಾದ ಲಾಭದ (Net Profit) ಬೆಳವಣಿಗೆಯ ದರ ಇದಾಗಿದೆ. ಇದು ನಿರಂತರವಾಗಿ ಹೆಚ್ಚುತ್ತಿರಬೇಕು.
4. ಇಕ್ವಿಟಿ ಮೇಲಿನ ಆದಾಯ (Return on Equity – ROE)
ಹೂಡಿಕೆದಾರರು (ಷೇರುದಾರರು) ಹೂಡಿದ ಹಣವನ್ನು ಬಳಸಿ ಕಂಪನಿಯು ಎಷ್ಟು ಪ್ರಮಾಣದ ಲಾಭವನ್ನು ಸೃಷ್ಟಿಸುತ್ತಿದೆ ಎಂಬುದನ್ನು ROE ತಿಳಿಸುತ್ತದೆ. ಸಾಮಾನ್ಯವಾಗಿ 15% ಕ್ಕಿಂತ ಹೆಚ್ಚಿನ ROE ಹೊಂದಿರುವ ಕಂಪನಿಗಳನ್ನು ಉತ್ತಮ ಎನ್ನಲಾಗುತ್ತದೆ.
ಇದನ್ನೂ ಓದಿ: ಮುಂಬರುವ ವರ್ಷಗಳಲ್ಲಿ ಬಹಳ ಬಳಕೆಯಾಗುವ ಟಾಪ್-10 ತಂತ್ರಜ್ಞಾನಗಳು; ಡಬ್ಲ್ಯುಇಎಫ್ನಿಂದ ಪಟ್ಟಿ ಬಿಡುಗಡೆ
5. ಬಂಡವಾಳದ ಮೇಲಿನ ಆದಾಯ (Return on Capital Employed – ROCE)
ಕಂಪನಿಯು ತನ್ನ ಒಟ್ಟು ಬಂಡವಾಳವನ್ನು (ಷೇರುದಾರರ ಹಣ + ಸಾಲ ಎರಡನ್ನೂ ಸೇರಿಸಿ) ಎಷ್ಟು ದಕ್ಷತೆಯಿಂದ ಬಳಸಿಕೊಂಡು ಲಾಭ ಗಳಿಸುತ್ತಿದೆ ಎಂಬುದನ್ನು ಇದು ಅಳೆಯುತ್ತದೆ. ಕಂಪನಿಯ ದಕ್ಷತೆಯನ್ನು ತಿಳಿಯಲು ಇದು ಪ್ರಮುಖವಾಗಿದೆ.
6. ಸಾಲ ಮತ್ತು ಇಕ್ವಿಟಿ ಅನುಪಾತ (Debt-to-Equity Ratio)
ಕಂಪನಿಯು ಸ್ವಂತ ಹಣಕ್ಕೆ ಹೋಲಿಸಿದರೆ ಎಷ್ಟು ಸಾಲವನ್ನು ಮಾಡಿದೆ ಎಂಬುದನ್ನು ಇದು ತೋರಿಸುತ್ತದೆ. ಅತಿಯಾದ ಸಾಲ ಇರುವ ಕಂಪನಿಗಳು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅಪಾಯಕ್ಕೆ ಸಿಲುಕಬಹುದು. ಆದ್ದರಿಂದ ಕಡಿಮೆ ಸಾಲವಿರುವ ಕಂಪನಿಗಳು ಹೆಚ್ಚು ಸುರಕ್ಷಿತ.
7. ಮುಕ್ತ ನಗದು ಹರಿವು (Free Cash Flow – FCF)
ಕಂಪನಿಯು ತನ್ನ ದಿನನಿತ್ಯದ ವೆಚ್ಚಗಳು ಮತ್ತು ಬಂಡವಾಳ ಹೂಡಿಕೆಗಳ (Capital Expenditure) ನಂತರ ಕೈಯಲ್ಲಿ ಉಳಿಸಿಕೊಳ್ಳುವ ನಿಜವಾದ ನಗದು ಹಣ ಇದಾಗಿದೆ. ಮುಕ್ತ ನಗದು ಹರಿವು ಹೆಚ್ಚಿರುವ ಕಂಪನಿಗಳು ಲಾಭಾಂಶ (Dividend) ನೀಡಲು ಮತ್ತು ಸಾಲ ತೀರಿಸಲು ಶಕ್ತವಾಗಿರುತ್ತವೆ.
8. ಪ್ರೊಮೋಟರ್ಗಳ ಷೇರು ಅಡಮಾನ (Promoter Pledge)
ಕಂಪನಿಯ ಪ್ರವರ್ತಕರು (Promoters/Owners) ತಮ್ಮ ಬಳಿ ಇರುವ ಷೇರುಗಳನ್ನು ಬ್ಯಾಂಕುಗಳಲ್ಲಿ ಅಡಮಾನವಿಟ್ಟು ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಪ್ರವರ್ತಕರು ತಮ್ಮ ಷೇರುಗಳನ್ನು ಅತಿಯಾಗಿ ಅಡವಿಟ್ಟಿದ್ದರೆ ಅಂತಹ ಕಂಪನಿಗಳಿಂದ ದೂರವಿರುವುದು ಒಳ್ಳೆಯದು.
ಇದನ್ನೂ ಓದಿ: ಕಲ್ಪಾಕ್ಕಂನಲ್ಲಿ ವಿದ್ಯುತ್ ಬದಲು ಪರಮಾಣು ರಿಯಾಕ್ಟರ್ನ ಶಾಖ ಬಳಸಿ ಹೈಡ್ರೋಜನ್ ಉತ್ಪಾದಿಸುವ ವಿಶ್ವದ ಮೊದಲ ಘಟಕ
9. ಪಿ/ಇ ಅನುಪಾತ (Price-to-Earnings Ratio – P/E)
ಕಂಪನಿಯ ಷೇರಿನ ಬೆಲೆ ಸದ್ಯ ದುಬಾರಿಯಾಗಿದೆಯೇ ಅಥವಾ ಅಗ್ಗವಾಗಿದೆಯೇ (Valuation) ಎಂಬುದನ್ನು ತಿಳಿಯಲು ಪಿ/ಇ ಅನುಪಾತವನ್ನು ನೋಡಲಾಗುತ್ತದೆ. ಆದರೆ, ಇದನ್ನು ಅದೇ ವಲಯದ ಇತರ ಕಂಪನಿಗಳೊಂದಿಗೆ ಹೋಲಿಸಿ ನೋಡಬೇಕು.
10. ವರ್ಕಿಂಗ್ ಕ್ಯಾಪಿಟಲ್ ಸೈಕಲ್ (Working Capital Cycle)
ಇದು ಬಂಡವಾಳ ವಾಪಸಾಗಿ ಚಕ್ರ. ಅಂದರೆ, ಕಂಪನಿಯು ಕಚ್ಚಾ ವಸ್ತುಗಳನ್ನು ಖರೀದಿಸಿ, ಉತ್ಪನ್ನವನ್ನು ಮಾರಿ, ಆ ಹಣವನ್ನು ಮರಳಿ ತನ್ನ ಕೈಗೆ ಪಡೆಯಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಈ ಚಕ್ರವು ಎಷ್ಟು ಕಡಿಮೆ ದಿನಗಳದ್ದಾಗಿದೆಯೋ, ಕಂಪನಿಯ ನಗದು ನಿರ್ವಹಣೆ ಅಷ್ಟು ಉತ್ತಮವಾಗಿದೆ ಎಂದರ್ಥ.
ರಾಮದೇವ್ ಅಗರ್ವಾಲ್ ಅವರ ಹೂಡಿಕೆ ಮಂತ್ರ (QGLP)
ರಾಮದೇವ್ ಅಗರ್ವಾಲ್ ಅವರು ತಮ್ಮ ಹೂಡಿಕೆಗೆ Quality (ಗುಣಮಟ್ಟ), Growth (ಬೆಳವಣಿಗೆ), Longevity (ದೀರ್ಘಾಯುಷ್ಯ), ಮತ್ತು Price (ಸರಿಯಾದ ಬೆಲೆ) ಎಂಬ ಸೂತ್ರವನ್ನು ಬಳಸುತ್ತಾರೆ. ಮೇಲೆ ತಿಳಿಸಿದ 10 ಸೂಚಕಗಳು ಈ ನಾಲ್ಕು ಅಂಶಗಳನ್ನು ಮೌಲ್ಯಮಾಪನ ಮಾಡಲು ಹೂಡಿಕೆದಾರರಿಗೆ ಸಹಾಯ ಮಾಡುತ್ತವೆ ಎಂಬುದು ಅವರ ಭಾವನೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
