ಬೆಂಗಳೂರು, (ಆಗಸ್ಟ್ 13): ಸರಕಾರಿ ಆವರಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೋಂದಾಯಿತವಲ್ಲದ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ‘ಕರ್ನಾಟಕ ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ವಿಧೇಯಕ-2026’ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆರ್‌ಎಸ್‌ಎಸ್‌ನ ಪಥಸಂಚಲನ ಹಾಗೂ ಸಮಾವೇಶಗಳಿಗೆ ತಡೆ ಒಡ್ಡುವ ಉದ್ದೇಶ ಹೊಂದಿರುವ ಈ ವಿಧೇಯಕದಲ್ಲಿ ಸಾರ್ವಜನಿಕ ಸ್ಥಳ ಬಳಕೆಗೆ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ನಿಯಮ ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲು ನಿರ್ಧರಿಸಲಾಗಿದೆ.ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಧೇಯಕದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ವಿಪಕ್ಷಗಳು ವಿಧೇಯಕವನ್ನು ಓದಿದ್ದಾರಾ? ವಿಧೇಯಕದ ಚರ್ಚೆ ಮಾಡಲಿ, ಏನಾದರೂ ತಪ್ಪಿದ್ರೆ ನೋಡೋಣ. ಈ ವಿಧೇಯಕದಲ್ಲಿ ಆರ್ಎಸ್ಎಸ್ ಬಗ್ಗೆ ಇದೆಯಾ? ಸರ್ಕಾರಿ ಜಾಗವನ್ನು ಉಪಯೋಗಿಸುವುದಕ್ಕೆ ಅನುಮತಿ ಬೇಕಲ್ವಾ? ಇದರಲ್ಲಿ ಸಮಸ್ಯೆ ಏನಿದೆ? ನಮ್ಮ ಪಕ್ಷ 140 ವರ್ಷ ಹಳೆಯದ್ದು, ಆದ್ರೂ ಅನುಮತಿ ಪಡೆಯುತ್ತೇವೆ. ಈ ವಿಧೇಯಕಕ್ಕೂ ನೋಂದಣಿ ಆಗದಿರುವುದಕ್ಕೂ ಸಂಬಂಧವಿಲ್ಲ. ನೀವು ಸಲಹೆ ಕೊಡಿ ನಾವು ಸ್ವಾಗತ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
