ಕೆಲವು ದಿನಗಳ ಹಿಂದೆ ನಡೆದಿದ್ದ ಅಂಡರ್ 19 ವಿಶ್ವಕಪ್ ಫೈನಲ್ನಲ್ಲಿ ಸಿಡಿಲಬ್ಬರದ ಶತಕ ಬಾರಿಸಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಇದೀಗ ದೇಶಿ ಟೂರ್ನಿಯಲ್ಲಿ ಮತ್ತೊಮ್ಮೆ ರನ್ಗಳ ಮಳೆ ಹರಿಸಿದ್ದಾರೆ. ಕೇವಲ 14 ವರ್ಷಕ್ಕೆ ವಿಶ್ವ ಕ್ರಿಕೆಟ್ನಲ್ಲಿ ತಮ್ಮ ಆಟದ ಮೂಲಕವೇ ಸಂಚಲನ ಮೂಡಿಸಿರುವ ವೈಭವ್ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ.
ಪ್ರಸ್ತುತ ಭಾರತದಲ್ಲಿ ಡಿವೈ ಪಾಟೀಲ್ ಟೂರ್ನಮೆಂಟ್ ನಡೆಯುತ್ತಿದ್ದು, ಈ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿಗೆ ಆಡುತ್ತಿರುವ ವೈಭವ್ ಸೂರ್ಯವಂಶಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ನವಿ ಮುಂಬೈನಲ್ಲಿ ನಡೆಯುತ್ತಿರುವ ಟಿ20 ಟೂರ್ನಮೆಂಟ್‌ನಲ್ಲಿ, ಡಿವೈ ಪಾಟೀಲ್ ಬ್ಲೂ ತಂಡದ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ, ತಮ್ಮ ಮೊದಲ ಪಂದ್ಯದಲ್ಲೇ ಎದುರಾಳಿ ತಂಡದ ಬೌಲರ್‌ಗಳನ್ನು ಹೈರಾಣಾಗಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ನೌಕಾಪಡೆ ತಂಡ 4 ವಿಕೆಟ್‌ಗಳ ನಷ್ಟಕ್ಕೆ 219 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಡಿವೈ ಪಾಟೀಲ್ ಬ್ಲೂ ತಂಡದ ಪರ ಓಪನಿಂಗ್ ಮಾಡಿದ ವೈಭವ್, ಏಕಾಂಗಿಯಾಗಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟರು.
ಇದರ ಪರಿಣಾಮವಾಗಿ ವೈಭವ್ ಕೇವಲ 14 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ವೈಭವ್ ಬೌಂಡರಿಯೊಂದಿಗೆ ಐವತ್ತರ ಗಡಿ ದಾಟಿದ್ದು, ಸ್ಮರಣೀಯವಾಗಿತ್ತು. ಏಳನೇ ಓವರ್‌ನಲ್ಲಿ ವೈಭವ್ ಔಟಾದರಾದರೂ ಆ ಹೊತ್ತಿಗೆ ತಂಡವನ್ನು 97ರನ್ಗಳಿಗೆ ಕೊಂಡೊಯ್ದಿದ್ದರು.
ವೈಭವ್ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 19 ಎಸೆತಗಳನ್ನು ಎದುರಿಸಿ ಬರೋಬ್ಬರಿ 63 ರನ್ ಬಾರಿಸಿದರು. ಆ 19 ಎಸೆತಗಳಲ್ಲಿ 12 ಬೌಂಡರಿಗಳು (7 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳು) ಸೇರಿದ್ದವು. ಅವರ ಸ್ಟ್ರೈಕ್ ರೇಟ್ 331.58 ಆಗಿದ್ದು, ಇದು ಯಶಸ್ವಿ ರನ್ ಚೇಸ್‌ಗೆ ಅಡಿಪಾಯ ಹಾಕಿತು.
ಪಂದ್ಯದ ಬಗ್ಗೆ ಹೇಳುವುದಾದರೆ, ವೈಭವ್ ಅವರ ಇನ್ನಿಂಗ್ಸ್ ನಂತರ, ಅರ್ಜುನ್ ತೆಂಡೂಲ್ಕರ್ ಕೂಡ ತಮ್ಮ ಬ್ಯಾಟಿಂಗ್‌ನಿಂದ ವಿನಾಶಕಾರಿ ಪ್ರದರ್ಶನ ನೀಡಿ ಕೇವಲ 29 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿ ತಂಡವನ್ನು ಕೇವಲ 19.1 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿಸಿದರು. ಅರ್ಜುನ್ ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
Published On – 5:50 pm, Thu, 26 February 26
