2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಮೂರು ದೇಶಗಳು ಆತಿಥ್ಯವಹಿಸುತ್ತಿವೆ ಎಂಬುದು ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೂರು ದೇಶಗಳ ಯಾವ್ಯಾವ ನಗರಗಳು ಈ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯವಹಿಸುತ್ತಿವೆ ಎಂಬುದನ್ನು ಐಸಿಸಿ ಇಂದು ಬಹಿರಂಗಪಡಿಸಿದೆ. ಮುಂದಿನ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದ ಮೂರು ದೇಶಗಳಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುತ್ತಿದೆ. ಈ ಮೂರು ದೇಶಗಳ ಒಟ್ಟು 12 ನಗರಗಳಲ್ಲಿ 54 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿವೆ.
12 ನಗರಳಲ್ಲಿ ಆಯೋಜನೆ
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ 12 ಸ್ಥಳಗಳನ್ನು ಬಹಿರಂಗಪಡಿಸಲಾಯಿತು. ಇವುಗಳಲ್ಲಿ, ಜೋಹಾನ್ಸ್ಬರ್ಗ್ ಮತ್ತು ಕೇಪ್ ಟೌನ್ ಸೇರಿದಂತೆ ಎಂಟು ಸ್ಥಳಗಳು ದಕ್ಷಿಣ ಆಫ್ರಿಕಾದಲ್ಲಿದ್ದರೆ, ಜಿಂಬಾಬ್ವೆಯ ಮೂರು ನಗರಗಳು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತವೆ. ನಮೀಬಿಯಾದ ಒಂದು ನಗರದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
24 ವರ್ಷಗಳ ನಂತರ ಏಕದಿನ ವಿಶ್ವಕಪ್
2027 ರ ವಿಶ್ವಕಪ್ ಅಕ್ಟೋಬರ್ 4 ರಿಂದ ನವೆಂಬರ್ 21, 2027 ರವರೆಗೆ ನಡೆಯುವ ನಿರೀಕ್ಷೆಯಿದೆ. ಈ ಬಾರಿಯ ವಿಶ್ವಕಪ್ನ ವಿಶೇಷತೆ ಏನೆಂದರೆ 24 ವರ್ಷಗಳ ನಂತರ ಪುರುಷರ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು ಅಂದರೆ 2003 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು. ಆದಾಗ್ಯೂ, ಈ ಬಾರಿ ಕೀನ್ಯಾ ಬದಲಿಗೆ ನಮೀಬಿಯಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.
ಅದರಂತೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್, ಸೆಂಚುರಿಯನ್, ಡರ್ಬನ್, ಗ್ಕೆಬರ್ಹಾ, ಕುಗೊಂಪೊ ಸಿಟಿ, ಕೇಪ್ ಟೌನ್, ಪಾರ್ಲ್ ಮತ್ತು ಬ್ಲೂಮ್ಫಾಂಟೈನ್ನಲ್ಲಿ 2027 ರ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ವಾಂಡರರ್ಸ್ ಅಥವಾ ನ್ಯೂಲ್ಯಾಂಡ್ಸ್ನಲ್ಲಿ ನಡೆಯಲಿದೆ. ಜಿಂಬಾಬ್ವೆಯ ಹರಾರೆ, ಬುಲವಾಯೊ ಮತ್ತು ವಿಕ್ಟೋರಿಯಾ ಫಾಲ್ಸ್ 7 ರಿಂದ 10 ಪಂದ್ಯಗಳನ್ನು ಆಯೋಜಿಸುತ್ತವೆ. ಉಳಿದಂತೆ ನಮೀಬಿಯಾದ ವಿಂಡ್ಹೋಕ್ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಹಾಗೆಯೇ ಬೆನೋನಿ ಮತ್ತು ಪೊಚೆಫ್ಸ್ಟ್ರೂಮ್ ಕ್ರೀಡಾಂಗಣಗಳನ್ನು ಅಭ್ಯಾಸಕ್ಕಾಗಿ ಬಳಸುವುದರ ಜೊತೆಗೆ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಸಹ ಇಲ್ಲಿ ಆಯೋಜಿಸುವ ಸಾಧ್ಯತೆಯಿದೆ.
ಪಂದ್ಯಗಳು ನಡೆಯಲಿರುವ ನಗರಗಳ ಪಟ್ಟಿ
ದಕ್ಷಿಣ ಆಫ್ರಿಕಾ
- ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್ಬರ್ಗ್ (ದಕ್ಷಿಣ ಆಫ್ರಿಕಾ)
- ಸೆಂಚುರಿಯನ್ ಕ್ರೀಡಾಂಗಣ, ಶ್ವಾನೆ (ದಕ್ಷಿಣ ಆಫ್ರಿಕಾ)
- ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನ, ಕೇಪ್ ಟೌನ್ (ದಕ್ಷಿಣ ಆಫ್ರಿಕಾ)
- ಕಿಂಗ್ಸ್ಮೀಡ್ ಕ್ರಿಕೆಟ್ ಮೈದಾನ, ಡರ್ಬನ್ (ದಕ್ಷಿಣ ಆಫ್ರಿಕಾ)
- ಸೇಂಟ್ ಜಾರ್ಜ್ ಪಾರ್ಕ್, ಗ್ಬೆರೆಖಾ (ದಕ್ಷಿಣ ಆಫ್ರಿಕಾ)
- ಮಾಗೌಂಗ್ ಓವಲ್, ಬ್ಲೂಮ್ಫಾಂಟೈನ್ (ದಕ್ಷಿಣ ಆಫ್ರಿಕಾ)
- ಬೋಲ್ಯಾಂಡ್ ಪಾರ್ಕ್, ಪಾರ್ಲ್ (ದಕ್ಷಿಣ ಆಫ್ರಿಕಾ)
- ಬಫಲೋ ಪಾರ್ಕ್, ಕುಗೊಂಪೊ ನಗರ – ಪೂರ್ವ ಲಂಡನ್ (ದಕ್ಷಿಣ ಆಫ್ರಿಕಾ)
ಜಿಂಬಾಬ್ವೆ
- ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ (ಜಿಂಬಾಬ್ವೆ)
- ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ (ಜಿಂಬಾಬ್ವೆ)
- ಫೇಲ್ ಮೋಸಿ-ಓ-ತುನ್ಯಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, (ಜಿಂಬಾಬ್ವೆ)
ನಮೀಬಿಯಾ
- ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್ಹೋಕ್ (ನಮೀಬಿಯಾ)