ತುಂಗಭದ್ರಾ ಜಲಾಶದ ಹೊರಭಾಗದ ನೋಟImage Credit source: tv9
ಕೊಪ್ಪಳ, ಜೂನ್ 25: ತುಂಗಭದ್ರಾ ಜಲಾಶಯವು (Tungabhadra Dam) ಇತಿಹಾಸದಲ್ಲೇ ಇಂದು ಅತ್ಯಂತ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ. 2024ರ ಆಗಸ್ಟ್ ತಿಂಗಳಲ್ಲಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಸೃಷ್ಟಿಯಾಗಿದ್ದ ಆತಂಕಕ್ಕೆ ಶಾಶ್ವತ ಪರಿಹಾರ ಸಿಕ್ಕಿದ್ದು, ಬರೋಬ್ಬರಿ 51 ಕೋಟಿ ರೂಪಾಯಿ ವೆಚ್ಚದಲ್ಲಿ ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್ಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇಂದು (ಜೂನ್ 25) ಬೆಳಗ್ಗೆ 10 ಗಂಟೆಗೆ ಈ ನೂತನ ಗೇಟ್ಗಳ ಭವ್ಯ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ದಶಕಗಳ ಬಳಿಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಒಂದೇ ವೇದಿಕೆಯಲ್ಲಿ ಒಂದಾಗುತ್ತಿದ್ದಾರೆ.
ಗೇಟ್ 19 ದುರಂತ ಮತ್ತು ಪುನರ್ನಿರ್ಮಾಣದ ಇತಿಹಾಸ
1953ರಲ್ಲಿ ಅಳವಡಿಸಲಾಗಿದ್ದ 20 ಅಡಿ ಎತ್ತರ, 60 ಅಡಿ ಅಗಲ ಹಾಗೂ 48.50 ಟನ್ ತೂಕದ ಹಳೆಯ ಗೇಟ್ಗಳು ಸಂಪೂರ್ಣ ಸವಕಳಿಯಾಗಿದ್ದವು. 2024ರ ಆಗಸ್ಟ್ನಲ್ಲಿ 19ನೇ ಗೇಟ್ ಕೊಚ್ಚಿಹೋದಾಗ ಡ್ಯಾಂ ಸುರಕ್ಷತಾ ತಂಡ ಹಾಗೂ ಕೇಂದ್ರ ಜಲಶಕ್ತಿ ಆಯೋಗ ಇಡೀ ವ್ಯವಸ್ಥೆಯನ್ನು ಪರಿಶೀಲಿಸಿ, ಎಲ್ಲಾ 33 ಗೇಟ್ಗಳನ್ನು ಬದಲಾಯಿಸಲು ಸೂಚಿಸಿತ್ತು. ಅದರಂತೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ನೂತನ ಗೇಟ್ಗಳನ್ನು ಅಳವಡಿಸಲಾಗಿದೆ.
ಒಂದೇ ವೇದಿಕೆಯಲ್ಲಿ ಮೂವರು ಸಿಎಂಗಳು
ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಎ ರೇವಂತ್ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಈ ಗೇಟ್ಗಳನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.
ನವಲಿ ಜಲಾಶಯ, ಹೂಳು ಎತ್ತುವ ಯೋಜನೆಗೆ ಚಾಲನೆ?
ಬೆಳಗ್ಗೆ 11 ಗಂಟೆಗೆ ಮುನಿರಾಬಾದ್ನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಸುಮಾರು 20 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ. ಇದೇ ವೇದಿಕೆಯಲ್ಲಿ ಮೂರೂ ರಾಜ್ಯಗಳ ನಾಯಕರು ಜಲಾಶಯದಲ್ಲಿ ತುಂಬಿರುವ ಹೂಳು ಮತ್ತು ಬಹುಕಾಲದ ಬೇಡಿಕೆಯಾದ ‘ನವಲಿ ಸಮಾನಾಂತರ ಜಲಾಶಯ’ ನಿರ್ಮಾಣದ ಕುರಿತು ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ತುಂಗಭದ್ರಾದ ಹೊಸ ಕ್ರಸ್ಟ್ಗೇಟ್ಗಳ ಲೋಕಾರ್ಪಣೆ: ಜೂ 25ರಂದು ಶಾಲೆಗಳಿಗೆ ರಜೆ ಘೋಷಣೆ
ಈ ಹಿಂದೆ ಕರ್ನಾಟಕ ಸರ್ಕಾರವು ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳಿಗೆ ಮಾತುಕತೆಗೆ ಮನವಿ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಇಂದಿನ ವೇದಿಕೆ ಈ ಯೋಜನೆಗೆ ಮರುಜೀವ ನೀಡುವ ಸಾಧ್ಯತೆ ಇದೆ. ಹೈವೋಲ್ಟೇಜ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಲಾಶಯದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ