ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ (Amitabh Bachchan) ಈಗ 83 ವರ್ಷ ವಯಸ್ಸು. ಅವರಿಗೆ ನಾನಾ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಅವನ್ನು ಮೆಟ್ಟಿ ನಿಂತು ಸಿನಿಮಾ ಕೃಷಿ ಮಾಡುತ್ತಿದ್ದಾರೆ. ಅಮಿತಾಭ್ ಮಾಡಿರುವ ಹೊಸ ಬ್ಲಾಗ್ ಪೋಸ್ಟ್ ಈಗ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಅವರು ಆಸ್ಪತ್ರೆ ಸೇರಿರುವ ಬಗ್ಗೆ ಮತ್ತು ಸರ್ಜರಿ ಆಗಿರುವ ಬಗ್ಗೆ ಬರೆದುಕೊಂಡಿದ್ದಾರೆ. ಆದರೆ ಇದು ಅವರದ್ದೇ ಆರೋಗ್ಯದ ಬಗ್ಗೆಯೋ ಅಥವಾ ಸಾಮಾನ್ಯವಾಗಿ ಬ್ಲಾಗ್ ಬರೆದಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.
ಬಿಗ್ ಬಿ ಬ್ಲಾಗ್‌ನಲ್ಲೇನಿದೆ?
ಚಿಕಿತ್ಸೆಗಿಂತ ಮನೆಗೆ ಮರಳಿದ ನಂತರದ ದಿನಗಳು ಎಷ್ಟು ಕಷ್ಟ ಎಂಬ ಬಗ್ಗೆ ಅಮಿತಾಭ್ ಬಚ್ಚನ್ ಬರೆದಿದ್ದಾರೆ. ಚೇತರಿಸಿಕೊಳ್ಳುವ ಸಮಯದಲ್ಲಿ ಪಡುವ ದೈಹಿಕ ಮತ್ತು ಮಾನಸಿಕ ನೋವಿನ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ಇದು ಆತಂಕ ಮೂಡಲು ಪ್ರಮುಖ ಕಾರಣ.
‘ಆಸ್ಪತ್ರೆಯಲ್ಲಿ ಸರ್ಜರಿ ಮುಗಿಸಿ, ಐಸಿಯುನಲ್ಲಿದ್ದು ಮನೆಗೆ ಮರಳುವುದು ದೊಡ್ಡ ಸವಾಲು. ಈ ಸಮಯವು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಕಷ್ಟದ ಹಂತವಾಗಿರುತ್ತದೆ. ನೀವು ಚಾಂಪಿಯನ್ ಆಗಿದ್ದರೂ ಒಂದು ದಿನ ಸೋಲನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಇದು ಜೀವನದ ಅತ್ಯಂತ ಕಷ್ಟದ ಸಮಯ’ ಎಂದು ಅಮಿತಾಭ್ ಬರಹ ಆರಂಭಿಸಿದ್ದಾರೆ.
‘ಕೆಲವರು ಧೈರ್ಯವಾಗಿ ಎದುರಿಸುತ್ತಾರೆ. ಇನ್ನು ಕೆಲವರು ಶರಣಾಗುತ್ತಾರೆ. ಧೈರ್ಯದಿಂದ ಹೋರಾಡುವವರು ಯಾವಾಗಲೂ ಚಾಂಪಿಯನ್ ಆಗಿ ಉಳಿಯುತ್ತಾರೆ. ಉಳಿದವರು ಹಳೆಯ ನೆನಪುಗಳಲ್ಲೇ ಬದುಕುತ್ತಾರೆ. ಇವೆರಡೂ ಅವರವರ ವೈಯಕ್ತಿಕ ಆಯ್ಕೆಗಳಷ್ಟೇ’ ಎಂದು ಅವರು ನೇರವಾಗಿ ಪೋಸ್ಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಮತ್ತೊಂದು ನಿಗೂಢ ಪೋಸ್ಟ್
ಬ್ಲಾಗ್ ಬರೆದ ಮರುದಿನವೇ ಅಮಿತಾಭ್ ಬಚ್ಚನ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ‘ಆಟ ಮುಗಿದಿದೆ, ಆದರೆ ಕೆಲಸ ಇನ್ನೂ ನಡೆಯುತ್ತಿದೆ’ ಎಂದು ಬರೆದಿದ್ದಾರೆ.
T 5806 – खेल समाप्त हो गया ! पर काम चल रहा है
— Amitabh Bachchan (@SrBachchan) July 20, 2026
ಈ ನಿಗೂಢ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ. ಅವರ ಆರೋಗ್ಯದ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲೂ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳು ಕೇಳಿ ಬಂದಿದ್ದವು. ಆದರೆ ಅವರು ಕೇವಲ ರೆಗ್ಯುಲರ್ ಹೆಲ್ತ್ ಚೆಕಪ್‌ಗಾಗಿ ನಾನಾವತಿ ಆಸ್ಪತ್ರೆಗೆ ಹೋಗಿದ್ದರು ಎಂದು ನಂತರ ತಿಳಿದುಬಂದಿತ್ತು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಜಾಗ ಖರೀದಿಗೆ ರಾತ್ರೋರಾತ್ರಿ 15 ಕೋಟಿ ರೂಪಾಯಿ ಕೊಟ್ಟಿದ್ದ ಅಮಿತಾಭ್ ಬಚ್ಚನ್
ಇತ್ತೀಚೆಗಷ್ಟೇ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಿಂಚಿದ್ದ ಬಿಗ್ ಬಿ, ಸದ್ಯ ‘ಕೌನ್ ಬನೇಗಾ ಕರೋಡ್‌ಪತಿ’ ಹೊಸ ಸೀಸನ್‌ಗಾಗಿ ರೆಡಿಯಾಗುತ್ತಿದ್ದಾರೆ. ಇದಲ್ಲದೆ, ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ನಲ್ಲೂ ನಟಿಸುತ್ತಿದ್ದಾರೆ.
ಪ್ರಶ್ನೆ: ಅಮಿತಾಭ್ ಬಚ್ಚನ್ಗೆ ವಯಸ್ಸೆಷ್ಟು?
ಉತ್ತರ: 83
ಪ್ರಶ್ನೆ: ಅಮಿತಾಭ್ ಬಚ್ಚನ್ ಮುಂದಿನ ಸಿನಿಮಾ ಯಾವುದು?
ಉತ್ತರ: ಕಲ್ಕಿ 2898 ಎಡಿ ಸೀಕ್ವೆಲ್
ಪ್ರಶ್ನೆ: ಅಮಿತಾಭ್ ಬಚ್ಚನ್ ನಡೆಸಿಕೊಡೋ ಶೋ ಹೆಸರೇನು?
ಉತ್ತರ: ಕೌನ್ ಬನೇಗಾ ಕರೋಡ್‌ಪತಿ