ಬೆಂಗಳೂರು, (ಜುಲೈ 01): ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (krishna byre gowda) ಸೂಚನೆ ಮೇರೆಗೆ ಜಿಬಿಎ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದು, ರಾಜಧಾನಿಯಲ್ಲಿ ಇಂದಿನಿಂದ ಫುಟ್ಪಾತ್ (footpath) ಒತ್ತುವರಿ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ. ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೀತಿದೆ. ಫುಟ್ಪಾತ್ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡ್ತಿರುವವರು, ಹೋಟೆಲ್, ಕೆಫೆ, ಸಣ್ಣ ಪುಟ್ಟ ಅಂಗಡಿಗಳಿಗೆ ಅಧಿಕಾರಿಗಳು ಚುರುಕು ಮುಟ್ಟಿಸಿದ್ದಾರೆ. ಇನ್ನು ಕೆಲವವೆಡೆ ಹೈಡ್ರಾಮಾಗಳೇ ನಡೆದಿವೆ. ಫುಟ್ಪಾತ್ ತೆರವು ಮಾಡಲ್ಲ.ನೀವು ತೆಗೆದರೆ ಮತ್ತೆ ಇಲ್ಲೇ ವ್ಯಾಪಾರ ಮಾಡುತ್ತೇವೆ. ಈ ಸ್ಥಳ ಬಿಟ್ಟು ಹೋಗಲ್ಲ ಎಂದು ಬೀದಿ ವ್ಯಾಪಾರಿಗಳು ಹಠಕ್ಕೆ ಬಿದ್ದಿದ್ದಾರೆ.
ಇನ್ನು ಈ ಫುಟ್ಪಾತ್ ಒತ್ತುವರಿ ತೆರವು ಬಗ್ಗೆ ವಿಕಾಸಸೌಧದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಕೃ್ಣಭೈರೇಗೌಡ, ‘ಸುಪ್ರೀಂ ಕೋರ್ಟ್’ ಆದೇಶದ ಮೇರೆಗೆ ತೆರವು ಕಾರ್ಯ ಮಾಡುತ್ತಿದ್ದೇವೆ. ಇದರಿಂದ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಫುಟ್ಪಾತ್ ತೆರವು ಮಾಡ್ತಿದ್ದೇವೆ. ಕೇವಲ ಶೇ.15ರಷ್ಟು ಫುಟ್ಪಾತ್ ತೆರವು ಮಾಡುತ್ತಿದ್ದೇವೆ. ಬೆಂಗಳೂರು ನಗರದಲ್ಲಿ 15 ಸಾವಿರ ಕಿ.ಮೀ. ಫುಟ್ಪಾತ್ ಇದೆ. ಆದ್ರೆ, ನಾವು 2000 ಕಿ.ಮೀ. ಮಾತ್ರ ತೆರವುಗೊಳಿಸಿ ಅಂತಾ ಹೇಳಿದ್ದೇವೆ. ಹೆಚ್ಚು ಜನರು ಓಡಾಡುವ ಕಡೆ ಮಾತ್ರ ತೆರವು ಮಾಡುತ್ತಿದ್ದೇವೆ. ಫುಟ್ಪಾತ್ ಒತ್ತುವರಿಯಿಂದಾಗಿ ಅಪಘಾತ ಸಂಭವಿಸುತ್ತಿದ್ದು, ಫುಟ್ಪಾತ್ ತೆರವುಗೊಳಿಸುವಂತೆ ಜನರು ಕೇಳುತ್ತಿದ್ದಾರೆ ಎಂದು ಹೇಳಿದರು.