ಬೆಂಗಳೂರು, ಮಾರ್ಚ್ 29: ನಗರದಲ್ಲಿ ರೌಡಿಶೀಟರ್ ಮಚ್ಚು ಹಿಡಿದು ಡ್ಯಾನ್ಸ್ ಮಾಡಿದ ವೀಡಿಯೋ ವೈರಲ್ ಆದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ರಂಜಿತ್ ಅಲಿಯಾಸ್ ರಂಜು ಮತ್ತು ನಂದೀಶ್ ಬಂಧಿತರು. ಕರಗದ ವೇಳೆ ಬಳಸುವ ದೇವಿಯ ಹಾಡಿಗೆ ಎಣ್ಣೆ ಪಾರ್ಟಿಯಲ್ಲಿ ಮಚ್ಚು ಹಿಡಿದು ಸ್ಟೆಪ್ಸ್ ಹಾಕಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ರಂಜಿತ್ ವಿರುದ್ಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಹಲವು ಪ್ರಕರಣಗಳಿದ್ದು, ಕೊಲೆ ಪ್ರಕರಣವೂ ಸೇರಿದೆ. ಆರೋಪಿಗಳು ವೀಡಿಯೋ ಹಳೆಯದು ಎಂದು ಹೇಳಿದರೂ, ಪೊಲೀಸರು ಗಂಭೀರವಾಗಿ ಪರಿಗಣಿಸಿ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರು ‘ಸ್ವಚ್ಛತೆಗಾಗಿ ನಾನೂ ಸಹಭಾಗಿ’ ಎಂಬ ಅಭಿಯಾನವನ್ನು ಕಳೆದ ಐದು ವರ್ಷಗಳಿಂದ ಮಾಡುತ್ತಿದ್ದಾರೆ. ಎಲ್ಲಿಯೇ ಕಸದ ರಾಶಿ ಕಂಡರೂ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಸಮಸ್ಯೆ ಪರಿಹಾರ ಆಗಬೇಕು ಎಂಬ ಉದ್ದೇಶದಿಂದ ಜನರಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಸಿನಿಮಾ, ಸೀರಿಯಲ್ ಕೆಲಸಗಳ ನಡುವೆಯೂ ಅವರು ಈ ಸ್ವಚ್ಛತೆಯ ಅಭಿಯಾನ ನಿಲ್ಲಿಸಿಲ್ಲ. ಈಗ ಬೆಂಗಳೂರಿನ ‘ಡಾ. ವಿಷ್ಣುವರ್ಧನ್ ರಸ್ತೆ’ಯಲ್ಲಿ ಬಿದ್ದ ಕಸದ ರಾಶಿಯ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಕಸ ಹಾಕಬಾರದು ಎಂಬ ಎಚ್ಚರಿಕೆ ಫಲದ ಎದುರಲ್ಲೇ ಜನರು ಕಸ ಸುರಿದಿರುವುದನ್ನು ಅನಿರುದ್ಧ್ ಅವರು ಟೀಕಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಸಂಬಂಧಪಟ್ಟವರು ಕ್ರಮ ತೆಗೆದುಕೊಂಡಿದ್ದಾರೆ.
ಐಡಿಬಿಐ ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವನ್ನು ಒದಗಿಸುತ್ತಿದೆ. ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ತಜ್ಞ ಅಧಿಕಾರಿ (Specialist Officer) ಹುದ್ದೆಗಳ ಭರ್ತಿಗೆ ಬ್ಯಾಂಕ್ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಮೂಲಕ ಅವಕಾಶ ಕಲ್ಪಿಸಲಾಗಿದೆ.
ಒಟ್ಟು 33 ತಜ್ಞ ಅಧಿಕಾರಿ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯುತ್ತಿದ್ದು, ಇದರಲ್ಲಿ ಐಟಿ & ಎಂಐಎಸ್ ವಿಭಾಗಕ್ಕೆ 19 ಹುದ್ದೆಗಳು, ಭದ್ರತಾ ಅಧಿಕಾರಿ (ಗ್ರೇಡ್-ಡಿ) ವಿಭಾಗಕ್ಕೆ 8 ಹುದ್ದೆಗಳು, ಅಪಾಯ ನಿರ್ವಹಣೆ – ಮಾಹಿತಿ ವ್ಯವಸ್ಥೆ ವಿಭಾಗಕ್ಕೆ 4 ಹುದ್ದೆಗಳು ಹಾಗೂ ಆಡಿಟ್ – ಮಾಹಿತಿ ವ್ಯವಸ್ಥೆಗಳ (ಗ್ರೇಡ್-ಸಿ) ವಿಭಾಗಕ್ಕೆ 2 ಹುದ್ದೆಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 25 ರಿಂದಲೇ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತರು ಏಪ್ರಿಲ್ 8, 2026ರ ಒಳಗೆ ಐಡಿಬಿಐ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ idbibank.in ಗೆ ಭೇಟಿ ನೀಡಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕಿದೆ.
ಅರ್ಹತಾ ಮಾನದಂಡಗಳ ಕುರಿತು ನೋಡುವುದಾದರೆ, ಐಟಿ ಮತ್ತು ಎಂಐಎಸ್ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್, ಐಟಿ ಅಥವಾ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದಿರುವುದು ಕಡ್ಡಾಯವಾಗಿದ್ದು, ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅನುಭವದ ವಿಚಾರದಲ್ಲಿ, ಗ್ರೇಡ್ ಡಿ ಹುದ್ದೆಗೆ 10 ವರ್ಷ, ಗ್ರೇಡ್ ಸಿ ಗೆ 7 ವರ್ಷ ಮತ್ತು ಗ್ರೇಡ್ ಬಿ ಗೆ 4 ವರ್ಷಗಳ ವೃತ್ತಿ ಅನುಭವ ಅಗತ್ಯವಿರುತ್ತದೆ. ಇನ್ನು ಸೆಕ್ಯುರಿಟಿ ಆಫೀಸರ್ ಹುದ್ದೆಗೆ 12ನೇ ತರಗತಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯೊಂದಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕನಿಷ್ಠ 15 ವರ್ಷಗಳ ಕಾಲ ಜೆಸಿಒ ಆಗಿ ಸೇವೆ ಸಲ್ಲಿಸಿ ನಿವೃತ್ತರಾದವರು ಅರ್ಹರಾಗಿರುತ್ತಾರೆ. ಅಪಾಯ ನಿರ್ವಹಣೆ ಮತ್ತು ಆಡಿಟ್ ವಿಭಾಗದ ಹುದ್ದೆಗಳಿಗೆ ಸಂಬಂಧಿತ ತಾಂತ್ರಿಕ ಪದವಿ ಹಾಗೂ ನಿಗದಿಪಡಿಸಿದ ವರ್ಷಗಳ ವೃತ್ತಿ ಅನುಭವವನ್ನು ಕೇಳಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 25 ರಿಂದ 45 ವರ್ಷದೊಳಗಿರಬೇಕು. ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಶುಲ್ಕದ ವಿಚಾರವಾಗಿ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದವರಿಗೆ 1050 ರೂಪಾಯಿ ನಿಗದಿಪಡಿಸಲಾಗಿದ್ದು, ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಕೇವಲ 250 ರೂಪಾಯಿ ಶುಲ್ಕವಿರುತ್ತದೆ. ಆಯ್ಕೆ ಪ್ರಕ್ರಿಯೆಯು ಮೊದಲು ಅಭ್ಯರ್ಥಿಗಳ ಕಿರುಪಟ್ಟಿ (Shortlisting) ತಯಾರಿಸುವುದರೊಂದಿಗೆ ಆರಂಭವಾಗುತ್ತದೆ. ನಂತರ ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಮೂಲಕ ಅಂತಿಮ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1,24,000 ರೂಪಾಯಿಯಿಂದ ಹಿಡಿದು 1,97,000 ರೂಪಾಯಿಯವರೆಗೆ ಆಕರ್ಷಕ ವೇತನ ದೊರೆಯಲಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದ ಮೂಲಕವೇ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಕೇವಲ 38 ಎಸೆತಗಳಲ್ಲಿ 69 ರನ್ ಸಿಡಿಸುವ ಮೂಲಕ. ಈ 69 ರನ್ಗಳೊಂದಿಗೆ ಕಿಂಗ್ ಕೊಹ್ಲಿ ಬರೆದಿರುವ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
4000 ರನ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಚೇಸಿಂಗ್ನಲ್ಲಿ 4000 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್ ಐಪಿಎಲ್‌ನಲ್ಲಿ ಚೇಸಿಂಗ್ ವೇಳೆ 4 ಸಾವಿರ ರನ್ಗಳ ಗಡಿ ಮುಟ್ಟಿಲ್ಲ ಎಂಬುದು ವಿಶೇಷ.
ಟಾಪ್ ಸ್ಕೋರರ್: ಐಪಿಎಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ತಂಡದ ಪರ ಅತ್ಯಧಿಕ ರನ್ ಗಳಿಸಿದ ದಾಖಲೆ ಕೂಡ ವಿರಾಟ್ ಕೊಹ್ಲಿ ಪಾಲಾಗಿದೆ. ಈ ಹಿಂದೆ ಈ ದಾಖಲೆ ಡೇವಿಡ್ ವಾರ್ನರ್ (66) ಹೆಸರಿನಲ್ಲಿತ್ತು. ಇದೀಗ 67ನೇ ಬಾರಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮುವ ಮೂಲಕ ಕೊಹ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಗೆಲುವಿನ ಸರದಾರ: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 50+ ಸ್ಕೋರ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಡೇವಿಡ್ ವಾರ್ನರ್ (41) ಹೆಸರಿನಲ್ಲಿತ್ತು. ಇದೀಗ ಆರ್‌ಸಿಬಿ ಗೆದ್ದ ಪಂದ್ಯಗಳಲ್ಲಿ ಕೊಹ್ಲಿ 42 ಬಾರಿ 50+ ಸ್ಕೋರ್ಗಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅಜೇಯ ದಾಂಡಿಗ: ಐಪಿಎಲ್‌ನಲ್ಲಿ 50+ ಸ್ಕೋರ್ಗಳಿಸಿ ಅತ್ಯಧಿಕ ಬಾರಿ ಅಜೇಯರಾಗಿ ಉಳಿದ ಬ್ಯಾಟರ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಎಬಿ ಡಿವಿಲಿಯರ್ಸ್ (23) ಹೆಸರಿನಲ್ಲಿತ್ತು. ಇದೀಗ 24ನೇ ಬಾರಿ ಅಜೇಯರಾಗಿ ಉಳಿಯುವ ಮೂಲಕ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.
ಚೇಸಿಂಗ್ನಲ್ಲಿ ಫಿಫ್ಟಿ: ಯಶಸ್ವಿ ಚೇಸಿಂಗ್ ವೇಳೆ ಅತೀ ಹೆಚ್ಚು ಬಾರಿ 50+ ಸ್ಕೋರ್ಗಳಿಸಿದ ದಾಖಲೆ ಕೂಡ ಕಿಂಗ್ ಕೊಹ್ಲಿಯ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಡೇವಿಡ್ ವಾರ್ನರ್ (20) ಹಾಗೂ ಶಿಖರ್ ಧವನ್ (20) ಹೆಸರಿನಲ್ಲಿತ್ತು. ಇದೀಗ 21ನೇ ಬಾರಿ ಯಶಸ್ವಿ ಚೇಸಿಂಗ್ನಲ್ಲಿ 50 ಕ್ಕಿಂತ ಅಧಿಕ ಸ್ಕೋರ್ಗಳಿಸಿ ಕೊಹ್ಲಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್‌ಆರ್‌ಹೆಚ್ ವಿರುದ್ಧ ಅತ್ಯಧಿಕ ರನ್: ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅತಿ ಹೆಚ್ಚು ರನ್ (874) ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಸಿಕ್ಸರ್ ಸರದಾರ: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಭಾರತೀಯ ಓಪನರ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕೆಎಲ್ ರಾಹುಲ್ (179) ಹೆಸರಿನಲ್ಲಿತ್ತು. ಇದೀಗ 181 ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಸಿಕ್ಸರ್ ಸರದಾರ ಎನಿಸಿಕೊಂಡಿದ್ದಾರೆ.
ಅತ್ಯುತ್ತಮ ಸ್ಟ್ರೈಕ್ ರೇಟ್: ಐಪಿಎಲ್ ಇತಿಹಾಸದಲ್ಲಿ 150+ ಸ್ಟ್ರೈಕ್ ರೇಟ್ನಲ್ಲಿ ಅತಿ ಹೆಚ್ಚು ಬಾರಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕಿಂಗ್ ಕೊಹ್ಲಿ 150 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ 31ನೇ ಬಾರಿ 50+ ಸ್ಕೋರ್ ಗಳಿಸುವ ಮೂಲಕ ರೋಹಿತ್ ಶರ್ಮಾ (30) ಅವರ ದಾಖಲೆ ಮುರಿದಿದ್ದಾರೆ.
ಇದಲ್ಲದೆ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ಪರ 19 ಸೀಸನ್ ಆಡಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಎಸ್‌ಆರ್‌ಹೆಚ್ ವಿರುದ್ಧ ಗಳಿಸಿದ 69 ರನ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ಸದ್ಯ 13,612 ರನ್ಗಳೊಂದಿಗೆ ಆರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 951 ರನ್ಗಳಿಸಿದರೆ ಕ್ರಿಸ್ ಗೇಲ್ ( 14562) ವಿಶ್ವ ದಾಖಲೆ ಮುರಿದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಬಾಗಲಕೋಟೆ, ಮಾರ್ಚ್ 29: ಉಪಚುನಾವಣಾ ಕಣ ರಂಗೇರಿದ್ದು, ಎಲ್ಲಾ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರು ತಮ್ಮ ಸಹೋದರನ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿರುವುದು ವಿಶೇಷವಾಗಿದೆ. ಮಲ್ಲಿಕಾರ್ಜುನ ಚರಂತಿಮಠ ಅವರು ತಮ್ಮ ಪ್ರಚಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಉಮೇಶ್ ಮೇಟಿ ಅವರಿಗೆ ಅವರ ತಂದೆಯವರ ಅಕಾಲಿಕ ಮರಣದಿಂದಾಗಿ ಒಂದು ಸಹಾನುಭೂತಿಯ ಅಲೆ ಇದೆ. ಜನ ಅವರಿಗೆ ಮತ ಹಾಕಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ಐದು ದಿನಗಳ ಕಾಲ ಬಾಗಲಕೋಟೆಯಲ್ಲಿ ಪ್ರಚಾರ ನಡೆಸಲು ಬರುತ್ತಿದ್ದು, ಇದು ಪಕ್ಷಕ್ಕೆ ಮತ್ತಷ್ಟು ಬಲ ತರಲಿದೆ ಎಂದು ತಿಳಿಸಿದ್ದಾರೆ.
ಚೆನ್ನೈ, ಮಾರ್ಚ್ 29: ತಮಿಳುನಾಡು ಚುನಾವಣೆ(Tamil Nadu Election)ಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 23ರಂದು ನಡೆಯಲಿರುವ ಚುನಾವಣೆಯಲ್ಲಿ ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ದಳಪತಿ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಜತೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ಸಿ ಜೋಸೆಫ್ ವಿಜಯ್ ಅವರು ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವದಿಂದ ಸ್ಪರ್ಧಿಸಲಿದ್ದಾರೆ, ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೂ ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಟಿ ನಗರದಿಂದ ಎನ್ ಆನಂದ್, ಮೈಲಾಪುರದಿಂದ ವೆಂಕಟ್ ರಾಮನ್, ವಿಲ್ಲಿವಕ್ಕಂನಿಂದ ಆಧವ್ ಅರ್ಜುನ, ಗೋಬಿಚೆಟ್ಟಿಪಾಳ್ಯಂನಿಂದ ಕೆಎ ಸೆಂಗ್ಕೊಟ್ಟೈಯನ್, ತಿರುಚೆಂಗೋಡ್ನಿಂದ ಕೆ ಜಿ ಅರುಣ್ರಾಜ್ ಮತ್ತು ತಿರುಪ್ಪರಂಕುಂದ್ರಂನಿಂದ ಸಿಟಿಆರ್ ನಿರ್ಮಲ್ ಕುಮಾರ್ ಈ ಪಟ್ಟಿಯಲ್ಲಿದ್ದಾರೆ.
ಥೌಸಂಡ್ ಲೈಟ್ಸ್‌ನಿಂದ ಜೆಸಿಡಿ ಪ್ರಭಾಕರ್, ಕೊಳತ್ತೂರಿನಿಂದ ವಿಎಸ್ ಬಾಬು ಮತ್ತು ಆರ್‌ಕೆ ನಗರದ ಡಾ. ಮಾರಿಯಾ ವಿಲ್ಸನ್ ಅವರುಗಳು ಹೆಸರಿಸಲಾದ ಇತರ ಅಭ್ಯರ್ಥಿಗಳಾಗಿದ್ದಾರೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವವರನ್ನು ನಾನು ಆಯ್ಕೆ ಮಾಡಿದ್ದೇನೆ ಎಂದು ಹೇಳಿದ್ದು, ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಸ್ಪರ್ಧೆಯನ್ನು ನೇರ ಹೋರಾಟ ಎಂದು ಹೇಳುತ್ತಾ, ಇದು ನಮ್ಮ ಮತ್ತು ಸ್ಟಾಲಿನ್ ಸರ್ ಮೈತ್ರಿಕೂಟದ ನಡುವೆ ಮಾತ್ರ ಎಂದು ವಿಜಯ್ ಹೇಳಿದರು.
ಉದ್ಯೋಗ ಪಡೆಯಲು ಸಾಧ್ಯವಾಗದ 29 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಿಂಗಳಿಗೆ 4,000 ರೂ. ಮತ್ತು ಡಿಪ್ಲೊಮಾ ಹೊಂದಿರುವವರಿಗೆ 2,500 ರೂ. ನೀಡುವುದಾಗಿ ಪಕ್ಷ ಭರವಸೆ ನೀಡಿತು. 12 ನೇ ತರಗತಿಯಿಂದ ಪಿಎಚ್‌ಡಿ ಹಂತದವರೆಗೆ 20 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಲ ಖಾತರಿಗಳನ್ನು ಸಹ ಇದು ಪ್ರಸ್ತಾಪಿಸಿದೆ.
ನಾವು ಎಂದಿಗೂ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಅಥವಾ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ. ನಾವು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುತ್ತೇವೆ, ಮಾದಕವಸ್ತು ಮುಕ್ತ ತಮಿಳುನಾಡನ್ನು ಸೃಷ್ಟಿಸುತ್ತೇವೆ ಮತ್ತು ಕಠಿಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತೇವೆ ಎಂದು ಭರವಸೆ ನೀಡಿದರು. ನಾನು ನಿಮಗೆ ಭರವಸೆ ನೀಡುತ್ತೇನೆ, ನಾವು ಎಂದಿಗೂ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವುದಿಲ್ಲ. ಇದು ನನ್ನ ಭರವಸೆ. ನಮಗೆ ಒಂದು ಅವಕಾಶ ಕೊಟ್ಟು ನೋಡಿ ಎಂದರು.
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಶನ್‌ನ ಬಹುನಿರೀಕ್ಷಿತ ಹಾರರ್-ಕಾಮಿಡಿ ಚಿತ್ರ ‘ಭೂತ್ ಬಂಗ್ಲ’ (Bhooth Bangla) ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಹಿಂದೆ ಘೋಷಿಸಿದಂತೆ ಏಪ್ರಿಲ್ 10ರಂದು ತೆರೆಗೆ ಬರಬೇಕಿದ್ದ ಈ ಚಿತ್ರ, ಈಗ ಏಪ್ರಿಲ್ 17ಕ್ಕೆ ಮುಂದೂಡಲ್ಪಟ್ಟಿದೆ ಎಂಬ ಮಾಹಿತಿ ಕೇಳಿಬಂದಿದೆ. ಅಂದಹಾಗೆ, ಈ ಬದಲಾವಣೆಗೆ ಕಾರಣ ಆಗಿರುವುದು ‘ಧುರಂಧರ್ 2’ (Dhurandhar 2) ಸಿನಿಮಾದ ಅಬ್ಬರ. ಈ ಸಿನಿಮಾದ ಆರ್ಭಟಕ್ಕೆ ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ಹೀರೋ ಕೂಡ ಸೈಲೆಂಟ್ ಆಗಬೇಕಾಗಿದೆ.
ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಸುನಾಮಿ ಎಬ್ಬಿಸಿದೆ. ಚಿತ್ರಮಂದಿರಗಳಲ್ಲಿ ಬಹುತೇಕ ಸ್ಕ್ರೀನ್‌ಗಳನ್ನು ಈ ಚಿತ್ರವೇ ಆಕ್ರಮಿಸಿಕೊಂಡಿದೆ. ಆದ್ದರಿಂದ, ಹೊಸ ಸಿನಿಮಾಗಳಿಗೆ ಜಾಗ ಸಿಗುವುದು ಕಷ್ಟವಾಗಿದೆ. ಹಾಲಿವುಡ್ ಸ್ಟಾರ್ ಹೀರೋ ರಿಯಾನ್ ಗೋಸ್ಲಿಂಗ್ ಅವರ ‘ಪ್ರಾಜೆಕ್ಟ್ ಹೇಲ್ ಮೇರಿ’ ಚಿತ್ರ ಕೂಡ ಈ ಕಾರಣದಿಂದ ಪ್ರದರ್ಶನ ಕಾಣಲು ಪರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ‘ಭೂತ್ ಬಂಗ್ಲ’ ತಂಡ, ಬಿಡುಗಡೆಯನ್ನು ಒಂದು ವಾರ ಮುಂದಕ್ಕೆ ಹಾಕಿದೆ.
ಇದು ಅತ್ಯಂತ ಬುದ್ಧಿವಂತಿಕೆಯ ನಿರ್ಧಾರ ಎಂಬ ಅಭಿಪ್ರಾಯ ಕೇಳಿಬಂದಿದೆ. ದೊಡ್ಡ ಚಿತ್ರಗಳ ನಡುವೆ ಪೈಪೋಟಿಗಿಂತ ಲಾಭ ಮುಖ್ಯ. ಈ ಹಿಂದೆ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಕೂಡ ‘ಧುರಂಧರ್ 2’ ಜೊತೆಗಿನ ಸಂಘರ್ಷವನ್ನು ತಪ್ಪಿಸಿತ್ತು. ಈಗ ‘ಭೂತ್ ಬಂಗ್ಲ’ ಮುಂದಕ್ಕೆ ಹೋಗುತ್ತಿರುವುದಕ್ಕೆ ಈ ಸಿನಿಮಾದ ನಿರ್ಮಾಪಕರು ಕೂಡ ಸಮ್ಮತಿಸಿದ್ದಾರೆ ಎಂದು ವರದಿ ಆಗಿದೆ.
ವಿಶೇಷವೆಂದರೆ, ಏಪ್ರಿಲ್ 17ರಂದು ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ ‘ಮಾತೃಭೂಮಿ’ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಆ ಚಿತ್ರದ ಕೆಲಸಗಳು ವಿಳಂಬವಾಗಿ ಮುಂದೂಡಲ್ಪಟ್ಟಿದೆ. ಈಗ ಆ ದಿನಾಂಕವನ್ನು ‘ಭೂತ್ ಬಂಗ್ಲಾ’ ಆಕ್ರಮಸಿಕೊಳ್ಳುತ್ತಿದೆ. ಸದ್ಯಕ್ಕಂತೂ ಎಲ್ಲ ಚಿತ್ರಮಂದಿರಗಳಲ್ಲಿ ‘ಧುರಂಧರ್ 2’ ಸಿನಿಮಾದ ಹವಾ ಜೋರಾಗಿದೆ. ಹಾಗಾಗಿ ಹೊಸ ಸಿನಿಮಾಗಳ ಬಿಡುಗಡೆಗೆ ಹಿಂದೇಟು ಹಾಕುವಂತಾಗಿದೆ.
‘ಭೂತ್ ಬಂಗ್ಲ’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದ್ದರಿಂದ ಟ್ರೇಲರ್ ಬಿಡುಗಡೆಯಲ್ಲೂ ಬದಲಾವಣೆಯಾಗಿದೆ. ಈ ಮೊದಲು ಮಾರ್ಚ್ 30ರಂದು ಟ್ರೇಲರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಅದರ ಬದಲು ಏಪ್ರಿಲ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಆಲೋಚಿಸಿದೆ ಎನ್ನಲಾಗಿದೆ. ಈಗಾಗಲೇ ಟೀಸರ್ ಗಮನ ಸೆಳೆದಿದೆ.
ಬೆಂಗಳೂರು, ಮಾರ್ಚ್ 29: ರಾಜ್ಯದಲ್ಲಿ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ (Road Accidents) ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಬೆಳಕಿಗೆ ಬಂದಿದೆ. ರಾಯಚೂರಿನಲ್ಲಿ ಟ್ಯಾಕ್ಟರ್ ಅಪಘಾತದಲ್ಲಿ ಇಬ್ಬರು, ಚಿಕ್ಕಬಳ್ಳಾಪುರದಲ್ಲಿ ಕ್ಯಾಂಟರ್ ಡಿಕ್ಕಿ ಹೊಡೆದು ಇಬ್ಬರು ಹಾಗೂ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಇಬ್ಬರು ಸೇರಿ ಒಟ್ಟೂ ಆರು ಜನ ಸಾವನ್ನಪ್ಪಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಅವಘಡ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನಾಲ್ಕು ಮೈಲ್ ಕ್ಯಾಂಪ್ ಸಮೀಪ ಅಪಘಾತ ನಡೆದಿದೆ. ಜಮೀನಿಗೆ ತಿಪ್ಪೆಗೊಬ್ಬರ ಸಾಗಿಸುತ್ತಿದ್ದ ಟ್ಯಾಕ್ಟರ್ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿರೂಪಾಪುರ ಗ್ರಾಮದ ಸುಕುಮುನಿ (31) ಹಾಗೂ ಅರಳಹಳ್ಳಿ ನಿವಾಸಿ ವಿರೂಪನಗೌಡ (42) ಮೃತ ದುರ್ದೈವಿಗಳು. ಘಟನೆ ಬಗ್ಗೆ ಮಾಹಿತಿ ತಿಳಿದು ಸಿಂಧನೂರು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೇಗವಾಗಿ ಬಂದ ಕ್ಯಾಂಟರ್ಗೆ ಬೈಕ್ ಡಿಕ್ಕಿ
ಇನ್ನೊಂದು ಭೀಕರ ಅಪಘಾತ ಚಿಕ್ಕಬಳ್ಳಾಪುರ ತಾಲೂಕಿನ ಸಾದಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ವೇಗವಾಗಿ ಬಂದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನರಸಿಂಹಪ್ಪ (45) ಮತ್ತು ನಾರಾಯಣಸ್ವಾಮಿ (44) ಮೃತರು. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ನಿವಾಸಿಗಳಾಗಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ಜಖಂ ಆಗಿದ್ದು, ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಒನ್‌ವೇಲಿ ಬಂದ ಕಾರು
ಬೆಂಗಳೂರಿನಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಒನ್‌ವೇ ನಿಯಮ ಉಲ್ಲಂಘಿಸಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ನಗರದ ವಕ್ಫ್ ಬೋರ್ಡ್ ಸಮೀಪ ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ. ಜುಬೇರ್ ಅಹಮದ್ (42) ಮತ್ತು ಅಬ್ದುಲ್ ಮುನ್ವಿರ್ ಪಾಷಾ (16) ಮೃತರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ, ಪಿಂಜಾರ್ ಹೆಗ್ಡಾಳ್ ಬಳಿ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿದೆ. ಬಸ್ ಹಗರಿಬೊಮ್ಮನಹಳ್ಳಿಯಿಂದ ಹೊಸಪೇಟೆ ಕಡೆ ಹೊರಟಿದ್ದ ಸಮಯದಲ್ಲೇ ಘಟನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆ ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪ್ರಯಾಣಿಕರು ಕೂಡ ಸುರಕ್ಷಿತರಾಗಿದ್ದಾರೆ.
ಯಾದಗಿರಿ, ಮಾರ್ಚ್ 29: ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣ ಅಂತ್ಯ ಕಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಕೃಷಿ ಹೊಂಡದ ನೀರಲ್ಲಿ ಮುಳುಗಿ ಕಿರಣ್(6), ಬಸಮ್ಮ(11), ಶರತ್(6), ಹನುಮೇಶ್(7) ಮೃತಪಟ್ಟಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಒಟ್ಟಾಗಿ ಈಜಲು ಹೋಗಿದ್ದರು ಎನ್ನಲಾಗಿದೆ.
ಈಜಲು ಹೋಗಿ 4 ಮಕ್ಕಳು ಜಲಸಮಾಧಿ ವಿಷಯ ತಿಳಿದು ಪೋಷಕರು ಮತ್ತು ಸಂಬಂಧಿಕರಿಗೆ ತೀವ್ರ ಆಘಾತವಾಗಿದೆ. ಮೃತ ಮಕ್ಕಳೆಲ್ಲರೂ ತೀರಾ ಚಿಕ್ಕ ವಯಸ್ಸಿನವರಾಗಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳ ಉತ್ತಮ ಭವಿಷ್ಯದ ಕನಸು ಕಂಡು, ನೂರಾರು ಆಸೆ,ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದ ಹೆತ್ತವರೀಗ ಅಕ್ಷರಶಃ ಕಂಗಾಲಾಗಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಇದು 2026ರ ಮಾರ್ಚ್ ನ ಕೊನೆಯ ವಾರ ಹಾಗೂ ಏಪ್ರಿಲ್ ನ ಮೊದಲ ವಾರವಾಗಿದ್ದು ಎಲ್ಲದಕ್ಕೂ ಆರುರಾತುರ ಪಡುವ ಬದಲು ಸಮಯಕ್ಕೆ ಕಾಯಬೇಕು. ಆಗ ಮಾತ್ರ ಬೆಲೆ, ನಿಮಗೂ ವಸ್ತುವಿಗೂ. ಅಡ್ಡದಾರಿ ನಿಮ್ಮನ್ನು ಕೈಬೀಸಿ ಕರೆಯುವುದು. ದುರಭ್ಯಾಸವನ್ನು ಮುಚ್ಚಿಡುವ ಪ್ರಯತ್ನ ಪ್ರಗತಿಯಲ್ಲಿ ಇರಲಿದೆ. ಆದರೂ ಪ್ರಕಟವಾಗುವುದು. ವಿರುದ್ಧ ಸೆಣಸಾಟ ಬರಬಹುದು ಜಾಗರೂಕತೆಯಿಂದ ವಾರವನ್ನು ಕಳೆಯಿರಿ. ಶುಭವಾಗಲಿ.
ಮೇಷ ರಾಶಿ :
ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ಆರ್ಥಿಕ ಲಾಭ ಉತ್ತಮವಾಗಿದ್ದರೂ ಖರ್ಚಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನಹರಿಸಿ.
ವೃಷಭ ರಾಶಿ :
ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದೂರ ಪ್ರಯಾಣದ ಯೋಗವಿದ್ದು, ಹಿರಿಯರ ಮಾರ್ಗದರ್ಶನದಿಂದ ಸಂಕಷ್ಟಗಳು ದೂರಾಗುತ್ತವೆ. ವ್ಯಾಪಾರದಲ್ಲಿ ಲಾಭದಾಯಕ ವಾರವಿದು. ಸಂಗಾತಿಯೊಂದಿಗೆ ಸುಖದ ಸಮಯ ಕಳೆಯುವಿರಿ.
ಮಿಥುನ ರಾಶಿ :
ಮಿಶ್ರ ಫಲಗಳು ಕಂಡುಬರಲಿವೆ. ಅನಗತ್ಯ ಚರ್ಚೆಗಳಿಂದ ದೂರವಿರುವುದು ಒಳಿತು. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ವಾರದ ಅಂತ್ಯಕ್ಕೆ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಮಾನಸಿಕ ಶಾಂತಿಗಾಗಿ ದೈವದತ್ತ ಗಮನ ನೀಡಿ.
ಕರ್ಕಾಟಕ ರಾಶಿ:
ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಯಿದೆ. ಸಾಮಾಜಿಕ ಗೌರವ ಹೆಚ್ಚಾಗಲಿದೆ. ಆಸ್ತಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಗೆ ಇದು ಸೂಕ್ತ ಸಮಯ. ಮಕ್ಕಳ ಶಿಕ್ಷಣದ ವಿಚಾರದಲ್ಲಿ ಪ್ರಗತಿ ಕಂಡುಬರಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಸಿಂಹ ರಾಶಿ:
ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಶತ್ರುಗಳ ಮೇಲೆ ಜಯ ಸಾಧಿಸುವಿರಿ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೊಸ ಹೂಡಿಕೆಗೆ ಅವಕಾಶಗಳಿವೆ. ಉದ್ಯೋಗಿಗಳಿಗೆ ಅಧಿಕಾರಿಗಳ ಬೆಂಬಲ ದೊರೆಯುತ್ತದೆ.
ಕನ್ಯಾ ರಾಶಿ:
ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಕಂಡುಬರುತ್ತದೆ. ಸೃಜನಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಸಾಲದ ಹೊರೆ ಕಡಿಮೆಯಾಗುವ ಸಂಭವವಿದೆ. ಆರೋಗ್ಯ ಸ್ಥಿರವಾಗಿರಲಿದೆ.
ತುಲಾ ರಾಶಿ :
ಮನೆ ಅಥವಾ ವಾಹನ ಖರೀದಿ ಯೋಗವಿದೆ. ತಾಯಿಯ ಕಡೆಯಿಂದ ಸಹಕಾರ ಸಿಗಲಿದೆ. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ವೃಶ್ಚಿಕ ರಾಶಿ:
ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಲಿದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಲಿದೆ. ಸಹೋದರರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ವೃತ್ತಿಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಸಕಾಲ.
ಧನು ರಾಶಿ:
ಆರ್ಥಿಕವಾಗಿ ಲಾಭದಾಯಕ ವಾರ. ಮಾತಿನ ಮೇಲೆ ಸಂಯಮವಿರಲಿ, ಇದರಿಂದ ಕೌಟುಂಬಿಕ ಕಲಹ ತಪ್ಪಿಸಬಹುದು. ಕಣ್ಣಿನ ಸಮಸ್ಯೆ ಅಥವಾ ಹಲ್ಲು ನೋವು ಕಾಣಿಸಿಕೊಳ್ಳಬಹುದು, ಜಾಗ್ರತೆ ವಹಿಸಿ. ನೆಮ್ಮದಿಯ ವಾರವಿದು.
ಮಕರ ರಾಶಿ :
ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮಾನ್ಯತೆ ಸಿಗಲಿದೆ. ಸ್ಥಗಿತಗೊಂಡ ಕೆಲಸಗಳು ಪುನಾರಂಭಗೊಳ್ಳಲಿವೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಲಿದೆ.
ಕುಂಭ ರಾಶಿ:
ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ, ಬಜೆಟ್ ಬಗ್ಗೆ ಗಮನವಿರಲಿ. ವಿದೇಶಿ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ದೊರೆಯಲಿದೆ. ನಿದ್ದೆಯ ಕೊರತೆಯಾಗದಂತೆ ನೋಡಿಕೊಳ್ಳಿ. ದಾನ ಧರ್ಮ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಮೀನ ರಾಶಿ:
ಆದಾಯದ ಮೂಲಗಳು ಹೆಚ್ಚಾಗಲಿವೆ. ಹಳೆಯ ಬಾಕಿ ಹಣ ವಾಪಸ್ ಬರಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದ್ದು, ಗೆಳೆಯರೊಂದಿಗೆ ಮೋಜಿನ ಸಮಯ ಕಳೆಯುವಿರಿ. ಎಲ್ಲ ಕೆಲಸಗಳಲ್ಲೂ ಅದೃಷ್ಟ ನಿಮ್ಮ ಪರವಾಗಿರಲಿದೆ.