ಚಿಕ್ಕಮಗಳೂರು, ಜೂನ್ 16: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮೋಹನ್ ಅವರ ನಿವಾಸ, ಕಚೇರಿ ಹಾಗೂ ನಿರ್ಮಾಣ ಹಂತದ ಮನೆ ಸೇರಿದಂತೆ ಐದು ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪ ಹಾಗೂ ಆಸ್ತಿ ದುರ್ಬಳಕೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ನಗರದ ಕಲ್ಯಾಣನಗರದಲ್ಲಿರುವ ಎಸಿಎಫ್ ಮೋಹನ್ ಅವರ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಲಕ್ಷಾಂತರ ರೂಪಾಯಿ ನಗದು ಮತ್ತು ಅಪಾರ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿವೆ. ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಅಅಧಿಕಾರಿಯ ಆಸ್ತಿಪಾಸ್ತಿಗಳ ಕುರಿತು ಕೂಲಂಕಷ ತನಿಖೆ ನಡೆಸಲಾಗುತ್ತಿದೆ.
ಮನೆಯಲ್ಲಿ ಜರಿ ಕಾಣಿಸಿಕೊಂಡರೆ ಶುಭವೋ?Image Credit source: Pinterest
ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಜರಿ (Centipede) ಕಾಣಿಸಿಕೊಳ್ಳುವುದು ಕೇವಲ ಒಂದು ಸಾಧಾರಣ ಕೀಟದ ಭೇಟಿಯಲ್ಲ. ಜನಪದದಲ್ಲಿ ಇದನ್ನು “ಲಕ್ಷ್ಮಿ ಚೇಳು” ಎಂದೂ ಕರೆಯಲಾಗುತ್ತದೆಯಾದರೂ, ಜ್ಯೋತಿಷ್ಯದಲ್ಲಿ ಇದನ್ನು ಮುಖ್ಯವಾಗಿ ರಾಹು ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಜರಿ ಕಾಣಿಸಿಕೊಂಡರೆ ಅದು ಶುಭವೇ ಅಥವಾ ಅಶುಭವೇ ಎಂಬುದು ಅದು ಮನೆಯ ಯಾವ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಯಾವ ಸ್ಥಿತಿಯಲ್ಲಿದೆ ಎಂಬುದರ ಮೇಲೆ ಸಂಪೂರ್ಣವಾಗಿ ನಿರ್ಧಾರವಾಗುತ್ತದೆ.
ಸಾಮಾನ್ಯವಾಗಿ ಮನೆಯ ನೆಲದ ಮೇಲೆ ಜರಿ ಓಡಾಡುವುದು ಕಂಡರೆ ಅದನ್ನು ಅದೃಷ್ಟದ ಸಂಕೇತ ಎನ್ನಲಾಗುತ್ತದೆ. ಅದರಲ್ಲೂ ವಿಶೇಷವಾಗಿ ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಜರಿ ಕಂಡುಬಂದರೆ, ಅದು ಅತ್ಯಂತ ಶುಭ ಮುನ್ಸೂಚನೆಯಾಗಿದೆ. ಇದು ಮನೆಯಲ್ಲಿ ಧನ-ಧಾನ್ಯ ವೃದ್ಧಿಯಾಗುವುದನ್ನು ಮತ್ತು ಶೀಘ್ರದಲ್ಲೇ ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಸುಧಾರಣೆಯಾಗುವುದನ್ನು ತೋರ್ಪಡಿಸುತ್ತದೆ. ಒಂದು ವೇಳೆ ಜರಿ ಕಣ್ಣಿಗೆ ಬಿದ್ದು, ನೀವು ಅದನ್ನು ಹೊರಗೆ ಹಾಕುವ ಮುನ್ನವೇ ಅದು ತಾನಾಗಿಯೇ ಮಾಯವಾದರೆ, ನಿಮ್ಮ ಜಾತಕದಲ್ಲಿ ರಾಹು ಶುಭನಾಗಿದ್ದಾನೆ ಮತ್ತು ನಿಂತುಹೋಗಿರುವ ಕೆಲಸಗಳು ಯಶಸ್ವಿಯಾಗಲಿವೆ ಎಂದರ್ಥ.
ಆದರೆ, ಇದೇ ಜರಿ ಮನೆಯ ಕೆಲವು ನಿರ್ದಿಷ್ಟ ಜಾಗಗಳಲ್ಲಿ ಕಾಣಿಸಿಕೊಂಡರೆ ಅದು ಅಶುಭ ಫಲಗಳನ್ನು ನೀಡುತ್ತದೆ. ಉದಾಹರಣೆಗೆ, ಅಡುಗೆ ಮನೆಯಲ್ಲಿ ಜರಿ ಕಂಡರೆ ಅದು ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರಾಗುವುದನ್ನು ಮತ್ತು ವಾಸ್ತು ದೋಷವನ್ನು ಎತ್ತಿ ತೋರಿಸುತ್ತದೆ. ಅದೇ ರೀತಿ ಶೌಚಾಲಯ ಅಥವಾ ಸ್ನಾನದ ಗೃಹದಲ್ಲಿ ಜರಿ ಕಾಣಿಸಿಕೊಂಡರೆ, ಜಾತಕದಲ್ಲಿ ರಾಹುವಿನ ಪ್ರಭಾವ ದುರ್ಬಲವಾಗಿದ್ದು, ಅನಗತ್ಯ ಧನಹಾನಿ ಮತ್ತು ಮಾನಸಿಕ ಒತ್ತಡ ಎದುರಾಗಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಇನ್ನು ಜರಿ ಗೋಡೆಯಿಂದ ಕೆಳಗೆ ಬಿದ್ದರೆ ಅಥವಾ ಮುಖ್ಯ ದ್ವಾರದ ಬಳಿ ಕಂಡರೆ, ಅದು ಆಸ್ಪತ್ರೆ ಖರ್ಚುಗಳು ಹೆಚ್ಚಾಗುವ ಮುನ್ಸೂಚನೆಯಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಇರುವ ಅತ್ಯಂತ ಮುಖ್ಯವಾದ ನಿಯಮವೆಂದರೆ, ಮನೆಯೊಳಗೆ ಜರಿ ಕಂಡಾಗ ಅದನ್ನು ಯಾವುದೇ ಕಾರಣಕ್ಕೂ ಕೊಲ್ಲಬಾರದು. ಜರಿಯನ್ನು ರಾಹುವಿನ ರೂಪವೆಂದು ನಂಬುವುದರಿಂದ, ಅದನ್ನು ಸಾಯಿಸಿದರೆ ಜಾತಕದಲ್ಲಿ ರಾಹು ದೋಷ ಉಂಟಾಗಿ ಕಷ್ಟಗಳು ಮತ್ತು ಮಾನಸಿಕ ನೆಮ್ಮದಿ ಭಂಗವಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ, ಜರಿ ಕಂಡಾಗ ಅದನ್ನು ಕೊಲ್ಲದೆ ಜಾಗರೂಕತೆಯಿಂದ ಪೊರಕೆ ಅಥವಾ ಯಾವುದಾದರೂ ವಸ್ತುವಿನ ಸಹಾಯದಿಂದ ಯಾರಿಗೂ ಕಚ್ಚದಂತೆ ಮನೆಯಿಂದ ಹೊರಗೆ ಹಾಕುವುದು ಅತ್ಯುತ್ತಮ ಪರಿಹಾರವಾಗಿದೆ.
ಗಮನಿಸಿ: ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳು ಏನೇ ಇದ್ದರೂ, ಜರಿ ಒಂದು ವಿಷಪೂರಿತ ಕೀಟವಾಗಿರುವುದರಿಂದ ಪ್ರಾಯೋಗಿಕವಾಗಿ ಎಚ್ಚರಿಕೆ ವಹಿಸುವುದು ಅಗತ್ಯ. ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅಥವಾ ಸುರಕ್ಷತೆಯ ದೃಷ್ಟಿಯಿಂದ ಮನೆ ಸ್ವಚ್ಛವಾಗಿಟ್ಟುಕೊಂಡು ಜರಿಗಳು ಬರದಂತೆ ತಡೆಯುವುದು ಮುಖ್ಯ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭೀವಂಡಿ, ಜೂನ್ 16: ಆಟವಾಡುವಾಗ ಐದು ವರ್ಷದ ಬಾಲಕ(Boy) ತೆರೆದಿದ್ದ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಭೀವಂಡಿ ನಗರದ ಫರೀದ್ ಬಾಗ್ ಪ್ರದೇಶದಲ್ಲಿ ನಡೆದಿದೆ. ಮೊಹಮ್ಮದ್ ಅಹ್ಮದ್ ಮೃತ ಬಾಲಕ. ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದೆ. ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಕಟ್ಟಡದ ಆವರಣದಲ್ಲಿ ಕೆಲವು ಮಕ್ಕಳು ಆಟವಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಸೆಪ್ಟಿಕ್ ಟ್ಯಾಂಕ್ ಬಳಿ ಬಂದ ಬಾಲಕ ಮೊಹಮ್ಮದ್, ಟ್ಯಾಂಕ್‌ನ ಮುಚ್ಚಳವನ್ನು ಸರಿಯಾಗಿ ಮುಚ್ಚದ ಕಾರಣ ಆಕಸ್ಮಿಕವಾಗಿ ಸಮತೋಲನ ಕಳೆದುಕೊಂಡು ನೇರವಾಗಿ ಟ್ಯಾಂಕ್ ಒಳಗಡೆ ಬಿದ್ದಿದ್ದಾನೆ.
ಬಾಲಕ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಕುಟುಂಬಸ್ಥರು ತಕ್ಷಣವೇ ಮಗುವನ್ನು ಟ್ಯಾಂಕ್‌ನಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ.
ಸೆಪ್ಟಿಕ್ ಟ್ಯಾಂಕ್‌ನ ಮುಚ್ಚಳವನ್ನು ಸುರಕ್ಷಿತವಾಗಿ ಮುಚ್ಚದೇ ಇರುವುದೇ ಮುಗ್ಧ ಬಾಲಕನ ಸಾವಿಗೆ ನೇರ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಭೀವಂಡಿ ಪ್ರದೇಶದಲ್ಲಿ ಇಂತಹ ನಿರ್ಲಕ್ಷ್ಯದ ಘಟನೆಗಳು ಇದೇ ಮೊದಲಲ್ಲ, ಈ ಹಿಂದೆಯೂ ಸಹ ತೆರೆದ ಹೊಂಡ ಹಾಗೂ ಟ್ಯಾಂಕ್‌ಗಳಿಗೆ ಬಿದ್ದು ಹಲವು ಜೀವಗಳು ಬಲಿಯಾಗಿವೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ವಸತಿ ಸಂಕೀರ್ಣಗಳಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಸಾರ್ವಜನಿಕರು ಆಡಳಿತವನ್ನು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಜಾರ್ಖಂಡ್‌ನ ಜಂಶೇದ್ಪುರದ ಆಸ್ತಾ ಸಿಟಿ ಎಂಬಲ್ಲಿಯೂ ಇಂತಹುದೇ ಹೃದಯವಿದ್ರಾವಕ ಘಟನೆ ನಡೆದಿತ್ತು. ಅಲ್ಲಿ ತಂದೆಯ ಜೊತೆ ಕೆಲಸದ ಜಾಗಕ್ಕೆ ಹೋಗಿದ್ದ 5 ವರ್ಷದ ಆದರ್ಶ್ ಕುಮಾರ್ ಎಂಬ ಬಾಲಕ ತೆರೆದಿದ್ದ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದ.
ಇಂತಹ ಸರಣಿ ದುರಂತಗಳು ವಸತಿ ಸಂಕೀರ್ಣಗಳಲ್ಲಿ ಮುಚ್ಚದ ನೀರಿನ ಹೊಂಡಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳು ಮಕ್ಕಳ ಪಾಲಿಗೆ ಎಷ್ಟು ಅಪಾಯಕಾರಿ ಎಂಬುದನ್ನು ನೆನಪಿಸುತ್ತವೆ. ಆಡಳಿತ ಮಂಡಳಿಗಳು ಹಾಗೂ ಪೋಷಕರು ಇಂತಹ ಜಾಗಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಉತ್ತಮ.
ಫ್ರಾನ್ಸ್, ಜೂನ್ 16: ಫ್ರಾನ್ಸ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೂನ್ 17 ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ, ಸುಂಕಗಳು ಮತ್ತು ಹಾರ್ಮುಜ್ ಜಲಸಂಧಿಯ ಇರಾನ್ ಬಿಕ್ಕಟ್ಟಿನ ಕುರಿತು ನಿರ್ಣಾಯಕ ಚರ್ಚೆಗಳು ನಡೆಯಲಿವೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಔಪಚಾರಿಕವಾಗಿ ಸ್ವಾಗತಿಸಲಿದ್ದಾರೆ. ಭಾರತವು ಜಿ7 ಒಕ್ಕೂಟದ ಖಾಯಂ ಸದಸ್ಯ ರಾಷ್ಟ್ರವಲ್ಲದಿದ್ದರೂ, ಜಾಗತಿಕ ನಿರ್ಧಾರಗಳಲ್ಲಿ ಭಾರತಕ್ಕಿರುವ ಪ್ರಭಾವದಿಂದಾಗಿ ಸತತ 7ನೇ ಬಾರಿಗೆ ಪ್ರಧಾನಿ ಮೋದಿ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ನಿರ್ಮಾಣ ಎಂಬ ವಿಷಯದ ಕಾರ್ಯಕಾರಿ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಮತ್ತೆ ಶ್ವೇತಭವನಕ್ಕೆ ಮರಳಿದ ನಂತರ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಮೊದಲ ಮುಖಾಮುಖಿ ಸಭೆ ಇದಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತ-ಅಮೆರಿಕ ನಡುವೆ ವ್ಯಾಪಾರ ಸುಂಕಗಳು ಹಾಗೂ ರಷ್ಯಾದೊಂದಿಗಿನ ಭಾರತದ ಇಂಧನ ಸಂಬಂಧಗಳ ಕಾರಣದಿಂದ ಕೆಲವು ಭಿನ್ನಾಭಿಪ್ರಾಯಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ, ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಸ್ತಾವಿತ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಇಬ್ಬರೂ ನಾಯಕರು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.
ಕಳವಳ ಮೂಡಿಸಿರುವ ಇರಾನ್ ಸಂಘರ್ಷ
ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಬಳಿ ಇತ್ತೀಚೆಗೆ ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗಳು ಮತ್ತು ಅದರಲ್ಲಿ ಭಾರತೀಯ ನಾವಿಕರು ಸಿಲುಕಿರುವ ವಿಷಯದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು, ಸಂಯಮ ಮತ್ತು ಸಂವಾದದ ಮೂಲಕ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ವಾಷಿಂಗ್ಟನ್ ಜೊತೆ ಭಾರತ ಚರ್ಚಿಸಲಿದೆ.
ಇತರ ವಿಶ್ವ ನಾಯಕರೊಂದಿಗೆ ಸರಣಿ ಸಭೆಗಳು
ಅಧ್ಯಕ್ಷ ಟ್ರಂಪ್ ಮಾತ್ರವಲ್ಲದೆ, ಪ್ರಧಾನಿ ಮೋದಿ ಅವರು ಶೃಂಗಸಭೆಯ ಹೊರತಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೂ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇವೆಲ್ಲದರ ನಂತರ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಆಯೋಜಿಸಿರುವ ಭವ್ಯ ಗಾಲಾ ಡಿನ್ನರ್‌ನಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.
ರಾಯಚೂರು, ಜೂನ್ 16: ರಾಯಚೂರು ತಾಲ್ಲೂಕಿನ ವಿಜಯನಗರ ಕ್ಯಾಂಪ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಜೀವಭಯದಲ್ಲೇ ಪಾಠ ಕಲಿಯುವಂತಾಗಿದೆ. 2002ರಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಕೇವಲ 24 ವರ್ಷಗಳಲ್ಲೇ ಕುಸಿಯುವ ಹಂತಕ್ಕೆ ಬಂದಿದೆ. ಶಾಲೆಯ ಮೇಲ್ಛಾವಣಿ ಪದೇ ಪದೇ ಕುಸಿಯುತ್ತಿದ್ದು, ಸಣ್ಣ ಮಳೆ ಬಂದರೂ ನೀರು ಸೋರುತ್ತದೆ. ಇದರಿಂದ ಮಕ್ಕಳು ಹಾಗೂ ಶಿಕ್ಷಕರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿಕ್ಷಕರು ಅವರನ್ನು ಶಾಲಾ ಕೊಠಡಿಗಳಿಂದ ಹೊರಗೆ, ಮರದ ಕೆಳಗೆ ಕುಳ್ಳಿರಿಸಿ ಪಾಠ ಮಾಡುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯೂ ಇಲ್ಲಿ ಎದ್ದು ಕಾಣುತ್ತದೆ. ವಿದ್ಯುತ್ ಸಮಸ್ಯೆ, ಹಾಳಾದ ಫ್ಯಾನ್‌ಗಳಿಂದ ಬೇಸಿಗೆಯಲ್ಲಿ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ದೂರಿದ್ದಾರೆ. ಜಿಲ್ಲಾಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಈ ಮಾರ್ಗದಲ್ಲಿ ಓಡಾಡಿದರೂ ಶಾಲೆಯ ದುಸ್ಥಿತಿ ಅವರ ಕಣ್ಣಿಗೆ ಬೀಳದಿರುವುದು ಆಶ್ಚರ್ಯಕರವಾಗಿದೆ. ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಕುಸಿದಿರುವ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಶೀಘ್ರ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಸ್ಥಳೀಯರು ಮತ್ತು ಪೋಷಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು, ಜೂನ್ 16: ದಟ್ಟಗಳ್ಳಿಯಲ್ಲಿರುವ ಫಾಕ್ಸ್ ಡೆನ್ ರೆಸ್ಟೋ ಬಾರ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಗ್ನಿ ದುರಂತದ ಕುರಿತು ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ರೆಸ್ಟೋ ಬಾರ್ ಅನ್ನು ನಿಯಮಬಾಹಿರವಾಗಿ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪಕ್ಕದಲ್ಲೇ ಈ ಪಬ್ ಕಾರ್ಯನಿರ್ವಹಿಸುತ್ತಿದ್ದು, 100 ಮೀಟರ್ ಅಂತರದಲ್ಲಿ ಆಸ್ಪತ್ರೆ, ಶಾಲೆ, ದೇವಸ್ಥಾನಗಳಿರಬಾರದು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ಪಬ್‌ಗೆ ಕೇವಲ ಒಂದೇ ಕಿರಿದಾದ ಪ್ರವೇಶದ್ವಾರ ಇದ್ದು, ತಾತ್ಕಾಲಿಕ ರಚನೆಯನ್ನು ಮಾಡಲಾಗಿತ್ತು. ಅಲ್ಲದೆ, ಬೆಂಕಿಗೆ ಸುಲಭವಾಗಿ ಆಹುತಿಯಾಗುವಂತಹ ಹುಲ್ಲು ಮತ್ತು ಬಿದಿರಿನಂತಹ ವಸ್ತುಗಳನ್ನು ಬಳಸಲಾಗಿದ್ದು, ಇದು ಬೆಂಕಿ ವೇಗವಾಗಿ ಹರಡಲು ಕಾರಣವಾಯಿತು. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸನಾತನ ಹಿಂದೂ ಧರ್ಮದ ಆಚರಣೆಗಳಲ್ಲಿ ಯಜ್ಞ, ಯಾಗಾದಿ ಹೋಮ ಹವನಗಳಿಗೆ ಅತ್ಯಂತ ಪ್ರಾಮುಖ್ಯತೆ ಇದೆ. ನಮ್ಮ ಪಾಪ ಕರ್ಮಗಳನ್ನು ನಿವಾರಿಸಲು, ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆಯಲು, ದೇವತಾರಾಧನೆಯ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು, ಹಾಗೂ ಇಷ್ಟಾರ್ಥ ಸಿದ್ಧಿಗಳಿಗಾಗಿ ಇಂತಹ ಪವಿತ್ರ ಕ್ರಿಯೆಗಳನ್ನು ಆಚರಿಸಲಾಗುತ್ತದೆ. ಈ ಯಜ್ಞಗಳಲ್ಲಿ ಸಮಿತ್ತುಗಳ ಬಳಕೆಯು ಅವಿಭಾಜ್ಯ ಅಂಗವಾಗಿದೆ. ಸಮಿತ್ತುಗಳು ಎಂದರೆ ಅಗ್ನಿಯಲ್ಲಿ ಅರ್ಪಿಸುವ ಪವಿತ್ರ ಮರದ ತುಂಡುಗಳು ಅಥವಾ ಉರವಲುಗಳು. ಈ ಸಮಿತ್ತುಗಳು ಯಜ್ಞದ ಫಲವನ್ನು ಪರಿಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಶಾಸ್ತ್ರಗಳ ಪ್ರಕಾರ, ಯಜ್ಞವನ್ನು ನಡೆಸುವ ಕರ್ತನು, ಅಂದರೆ ಯಾರು ಸಂಕಲ್ಪ ಮಾಡಿ ಹೋಮವನ್ನು ಮಾಡಿಸುತ್ತಾರೋ, ಅವರು ಕನಿಷ್ಠ ಒಂದೆರಡು ಸಮಿತ್ತುಗಳನ್ನಾದರೂ ಸ್ವತಃ ತಮ್ಮ ಕೈಯಾರೆ, ಶ್ರಮ ವಹಿಸಿ ಸಂಗ್ರಹಿಸಿ ಹೋಮಕ್ಕೆ ಅರ್ಪಿಸಬೇಕು ಎಂದು ಹೇಳಲಾಗಿದೆ. ಅನೇಕ ಬಾರಿ ನಾವು ಎಲ್ಲ ಹೋಮದ ಸಾಮಗ್ರಿಗಳನ್ನು ಅಂಗಡಿಯಿಂದ ಖರೀದಿಸಿ ತರುತ್ತೇವೆ ಅಥವಾ ಪುರೋಹಿತರಿಗೆ ವಹಿಸಿ ಅವರೇ ಎಲ್ಲವನ್ನೂ ತಂದು ಮಾಡಿಸಲಿ ಎಂದು ಹೇಳುತ್ತೇವೆ. ಆದರೆ, ಶಾಸ್ತ್ರಗಳು, ಯಜ್ಞದ ನಿಜವಾದ ಫಲಕ್ಕಾಗಿ, ಕರ್ತನು ಸ್ವತಃ ಒಂದಷ್ಟು ಶಾರೀರಿಕ ಶ್ರಮವನ್ನು ವಹಿಸಬೇಕು ಎಂದು ಒತ್ತಿಹೇಳುತ್ತವೆ.
ವಿವಿಧ ದೇವತೆಗಳು ಮತ್ತು ನವಗ್ರಹಗಳಿಗೆ ನಿರ್ದಿಷ್ಟ ಸಮಿತ್ತುಗಳನ್ನು ಅರ್ಪಿಸುವುದರಿಂದ ವಿಶೇಷ ಫಲ ದೊರೆಯುತ್ತದೆ. ಉದಾಹರಣೆಗೆ:
ಸೂರ್ಯನಿಗೆ – ಮದರ (ಎಕ್ಕದ ಕಡ್ಡಿ)
ಚಂದ್ರನಿಗೆ – ಪಲಾಶ (ಮುತ್ತುಗದ ಕಡ್ಡಿ)
ಮಂಗಳನಿಗೆ – ಕಗ್ಗಲಿ
ಬುಧನಿಗೆ – ಉತ್ತರಾಣಿ
ಗುರುವಿಗೆ – ಅರಳಿಮರ
ಶುಕ್ರನಿಗೆ – ಅತ್ತಿಮರ
ಶನಿಗೆ – ಶಮಿಮರ
ರಾಹುವಿಗೆ – ದೂರ್ವಾ (ಗರಿಕೆ)
ಕೇತುವಿಗೆ – ಕುಶ (ದರ್ಬೆ)
ಅಶ್ವತ್ಥ ವೃಕ್ಷ (ಅರಳಿ), ತುಳಸಿ, ಬಿಲ್ವ, ಗಂಧ, ಹೊಂಗೆಯಂತಹ ಮರಗಳ ಸಮಿತ್ತುಗಳೂ ಕೂಡ ಯಜ್ಞದಲ್ಲಿ ಬಳಸಲ್ಪಡುತ್ತವೆ. ನಮ್ಮ ಕೈಯಲ್ಲಿ ಲಭ್ಯವಿರುವ, ಉದಾಹರಣೆಗೆ ಅರಳಿ ಮರ ಅಥವಾ ಬಿಲ್ವ ಮರದ ಸಮಿತ್ತುಗಳನ್ನಾದರೂ, ಒಂದು ದಿನ ಮುಂಚಿತವಾಗಿ ನಾವೇ ಹೋಗಿ ಸಂಗ್ರಹಿಸಿ ತರುವುದು ಹೆಚ್ಚು ಫಲಕಾರಿಯೆಂದು ಹೇಳಲಾಗಿದೆ.
ಇದಕ್ಕೆ ಒಂದು ಐತಿಹಾಸಿಕ ಉದಾಹರಣೆಯೆಂದರೆ ನಮ್ಮ ಪುರಾತನ ಋಷಿಮುನಿಗಳು. ಅವರು ಯಜ್ಞಕ್ಕೆ ಬೇಕಾಗುವ ದರ್ಬೆಗಳು, ಸಮಿತ್ತುಗಳು, ಮತ್ತು ಇತರ ಸಾಮಗ್ರಿಗಳಿಗಾಗಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ, ಉಪವಾಸವಿದ್ದು, ಅವುಗಳನ್ನು ಹುಡುಕುತ್ತಿದ್ದರು. ಅಷ್ಟೇ ಅಲ್ಲದೆ, ಸಂಗ್ರಹಿಸಿದ ವಸ್ತುಗಳು ಭೂಮಿಗೆ ಸ್ಪರ್ಶಿಸದಂತೆ ಬಹಳ ಎಚ್ಚರಿಕೆಯಿಂದ ತಂದು ಯಜ್ಞ ಯಾಗಾದಿಗಳನ್ನು ನಿರ್ವಹಿಸಿ, ಪರಿಪೂರ್ಣ ಫಲವನ್ನು ಪಡೆಯುತ್ತಿದ್ದರು. ಇದು ಯಜ್ಞದ ಕಡೆಗೆ ಅವರಿದ್ದ ಅಚಲ ಶ್ರದ್ಧೆ ಮತ್ತು ಸಮರ್ಪಣೆಯನ್ನು ತೋರಿಸುತ್ತದೆ.
ಇಂದು ಯಾವುದೇ ವೃತ್ತಿಯಲ್ಲಿದ್ದರೂ, ರೈತರಾಗಿರಲಿ, ಅಧಿಕಾರಿಗಳಾಗಿರಲಿ, ಅಥವಾ ಯಾವುದೇ ವೃತ್ತಿ ಮಾಡುವವರಾಗಿರಲಿ, ಯಜ್ಞ ಯಾಗಾದಿ ಹೋಮ ಹವನಗಳನ್ನು ಮಾಡಿಸುವಾಗ, ಕೇವಲ ಎಲ್ಲವನ್ನೂ ದುಡ್ಡು ಕೊಟ್ಟು ಮಾಡಿಸುವುದು ಯಜ್ಞದ ಪರಿಪೂರ್ಣತೆಯನ್ನು ಸೂಚಿಸುವುದಿಲ್ಲ. ಬದಲಾಗಿ, ನಾವೇ ಒಂದಷ್ಟು ಶ್ರಮ ವಹಿಸಿ, ನಮ್ಮ ಕೈಯಾರೆ ಒಂದೆರಡು ಸಮಿತ್ತುಗಳನ್ನು ತಂದು ಅರ್ಪಿಸಿದಾಗ, ಆ ಅಗ್ನಿ ಯಜ್ಞವು ಹೆಚ್ಚು ಪರಿಪೂರ್ಣವಾಗಿ, ಬೇಗನೆ ಇಷ್ಟಾರ್ಥ ಫಲಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳು ಸಾರುತ್ತವೆ. ಇದು ಕೇವಲ ನಂಬಿಕೆ ಆಧಾರಿತವಲ್ಲದೆ, ನಮ್ಮ ಭಕ್ತಿ ಮತ್ತು ಕರ್ತವ್ಯ ನಿಷ್ಠೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಗದಗ, ಜೂನ್ 16: ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆ ನಿರ್ಮಿಸಲಾಗಿದ್ದರೂ ವೈದ್ಯರು ಮತ್ತು ಸಿಬ್ಬಂದಿ ಕೊರತೆಯ ಕಾರಣ ರೋಗಿಗಳು ಪರದಾಟ ನಡೆಸುತ್ತಿರುವ ಸ್ಥಿತಿ ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಕಂಡುಬಂದಿದೆ. ಕೇಂದ್ರ ಸರ್ಕಾರ ಎನ್ಎಚ್ಎಂ ಯೋಜನೆಯಲ್ಲಿ 2 ಕೋಟಿಗೂ ಅಧಿಕ ಮೊತ್ತದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಭಡ್ತಿ ಪಡೆದಿದೆಯಾದರೂ, ವೈದ್ಯರ ಕೊರತೆಯಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಮಾತ್ರ ಮರಿಚೀಕೆಯಾಗಿಯೇ ಉಳಿದಿದೆ.
ಆಸ್ಪತ್ರೆಗೆ ಒಬ್ಬನೇ ವೈದ್ಯ!
ಪ್ರತಿನಿತ್ಯ ನೂರಾರು ಮಂದಿ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆಯಾದರೂ ಇಲ್ಲಿ ಲಭ್ಯವಿರೋದು ಮಾತ್ರ ಕೇವಲ ಒಬ್ಬ ವೈದ್ಯರು. ಅವರು ಕೂಡ ದಂತ ವೈದ್ಯರಾಗಿರುವ ಕಾರಣ, ಉಳಿದ ರೋಗಿಗಳ ಪಾಡು ಹೇಳತೀರದಾಗಿದೆ. ಅಲ್ಲದೆ ಕೋಟ್ಯಾಂತರ ಹಣ ಖರ್ಚು ಮಾಡಿ ನಿರ್ಮಿಸಿರುವ ಆಸ್ಪತ್ರೆಯ ನಿರ್ವಹಣೆಗೆ ಸಿಬ್ಬಂದಿಯ ಕೊರತೆಯೂ ಇರುವ ಕಾರಣ ಕಟ್ಟಡ ಪಾಳುಬಿದ್ದ ಬಂಗಲೆಯಂತಾಗಿದ್ದರೆ, ಯಂತ್ರೋಪಕರಣಗಳು ಉಪಯೋಗವಿಲ್ಲದೆ ಧೂಳು ಹಿಡಿಯುತ್ತಿವೆ. 30 ಹಾಸಿಗೆ ಸಾಮರ್ಥ್ಯವಿರುವ ಈ ಆಸ್ಪತ್ರೆಗೆ 6 ವೈದ್ಯರ ಅಗತ್ಯವಿದೆ. ನರ್ಸ್ಗಳು ಸೇರಿದಂತೆ 30 ಸಿಬ್ಬಂದಿ ಬೇಕಿದೆ. ಹೀಗಿದ್ದರೂ ಆಡಳಿತ ನಡೆಸುತ್ತಿರುವವರು ಮಾತ್ರ ಇತ್ತ ಗಮನಹರಿಸಲ್ಲ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗದಗ ಡಿಎಚ್ಒ ಎಸ್. ಎಸ್. ನಿಲಗುಂದ, ಆಸ್ಪತ್ರೆಗೆ ಬೇಕಿರುವ ವೈದ್ಯರು, ಸಿಬ್ಬಂದಿ ನೇಮಕಾತಿ ಹಾಗೂ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಅದೇನೇ ಇದ್ದರೂ ಶೀಘ್ರವೇ ಆಸ್ಪತ್ರೆಗೆ ಅಗತ್ಯ ವೈದ್ಯರ ನೇಮಕ ಆಗಬೇಕು. ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ (Vijay Raghavendra) ಮತ್ತು ಶ್ರೀಮುರಳಿ ಅವರ ತಾಯಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಇಂದು (ಜೂನ್ 16) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಜಯಮ್ಮ ಅವರು ಕೇವಲ ಒಂದು ಸ್ಟಾರ್ ಕುಟುಂಬದ ಗೃಹಿಣಿಯಾಗಿರಲಿಲ್ಲ. ಬದಲಿಗೆ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳ ಚಿತ್ರರಂಗದ ಸುದೀರ್ಘ ಪಯಣಕ್ಕೆ ದೊಡ್ಡ ಬೆನ್ನೆಲುಬಾಗಿ ನಿಂತವರು. ಪತಿ ಚಿನ್ನೇಗೌಡರು ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಳ್ಳಲು ಹಾಗೂ ಇಬ್ಬರು ಗಂಡುಮಕ್ಕಳು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಬೆಳೆಯಲು ಜಯಮ್ಮ ಅವರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ನೈತಿಕ ಬೆಂಬಲ ಅಪಾರವಾಗಿತ್ತು. ಸದಾ ತೆರೆಯ ಮರೆಯಲ್ಲೇ ಇದ್ದು ಇಡೀ ಕುಟುಂಬವನ್ನು ಮುನ್ನಡೆಸಿದ ಶಕ್ತಿ ಅವರಾಗಿದ್ದರು.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ‘ಚಿನ್ನಾರಿ ಮುತ್ತ’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹೆಮ್ಮೆ ವಿಜಯ್ ರಾಘವೇಂದ್ರ ಅವರದ್ದು. ನಂತರ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟರಾಗಿ, ರಿಯಾಲಿಟಿ ಶೋಗಳ ನೆಚ್ಚಿನ ಜಡ್ಜ್ ಆಗಿ ಗುರುತಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.
‘ಚಂದ್ರ ಚಕೋರಿ’ ಚಿತ್ರದ ಮೂಲಕ ಚಾಕೊಲೇಟ್ ಹೀರೊ ಆಗಿ ಎಂಟ್ರಿ ಕೊಟ್ಟ ಶ್ರೀಮುರಳಿ, ಆ ಬಳಿಕ ‘ಉಗ್ರಂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದರು. ಆ್ಯಕ್ಷನ್ ಪ್ಯಾಕ್ಡ್ ಸಿನಿಮಾಗಳ ಮೂಲಕ ‘ರೋರಿಂಗ್ ಸ್ಟಾರ್’ ಆಗಿ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದಾರೆ. ಇವರಿಬ್ಬರ ಸಿನಿ ಜರ್ನಿಗೆ ಜಯಮ್ಮ ಅವರ ಬೆಂಬಲ ಇತ್ತು.
ಚಿತ್ರರಂಗದ ಖ್ಯಾತ ನಟ ರಾಜ್‌ಕುಮಾರ್ ಕುಟುಂಬದ ಸಂಬಂಧಿಕರಾಗಿರುವ ಚಿನ್ನೇಗೌಡರ ಕುಟುಂಬದ ಬೆನ್ನೆಲಬು ಇಲ್ಲದಂತಾಗಿರುವುದು ಎಲ್ಲರಿಗೂ ನೋವನ್ನು ಉಂಟುಮಾಡಿದೆ. ಜಯಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಣ ಪಂದ್ಯದ ಬಳಿಕ ನಡೆದ ದೈಹಿಕ ಘರ್ಷಣೆ ಹಿನ್ನಲೆ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ ವಿರುದ್ಧ ಐಸಿಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯತೆಯಿದೆ. ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.2 ಓವರ್ಗಳಲ್ಲಿ 265 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ 50 ಓವರ್ಗಳಲ್ಲಿ 265 ರನ್ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು.
ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ಶ್ರೀಲಂಕಾ ಬ್ಯಾಟರ್ಗಳು 16 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 6 ಎಸೆತಗಳಲ್ಲಿ ಕೇವಲ 9 ರನ್ಗಳಿಸಿ 7 ರನ್ಗಳಿಂದ ಸೋಲೊಪ್ಪಿಕೊಂಡಿದ್ದರು.
ಈ ಸೋಲಿನ ಬಳಿಕ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದ ವೈಭವ್ ಸೂರ್ಯವಂಶಿಯನ್ನು ಗುರಿಯಾಗಿಸಿ ಶ್ರೀಲಂಕಾ ಆಟಗಾರ ವಿಶೇನ್ ಹಾಲಂಬಾಗೆ ಅದೇನೋ ಹೇಳಿದ್ದಾರೆ. ಇದರಿಂದ ಕೆರಳಿದ ವೈಭವ್ ಸೂರ್ಯವಂಶಿ ಲಂಕಾ ಆಟಗಾರನತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದ್ದರು.
ಈ ವಾಗ್ವಾದದ ನಡುವೆ ವೈಭವ್ ಸೂರ್ಯವಂಶಿ ವಿಶೇನ್ ಹಾಲಂಬಾ ಅವರನ್ನು ಕೈಯಿಂದ ತಳ್ಳುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನಲೆಯಲ್ಲಿ ಐಸಿಸಿ ವೈಭವ್ ಸೂರ್ಯವಂಶಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
Vaibhav got into a heated argument with Sri Lankan players after the super over pic.twitter.com/wnGyEF6Nvw
ಐಸಿಸಿ ಕ್ರಿಕೆಟ್ ನಿಯಮಾವಳಿಗಳ ಪ್ರಕಾರ ಮೈದಾನದಲ್ಲಿ ಎದುರಾಳಿ ಆಟಗಾರರ ಮೇಲೆ ದೈಹಿಕವಾಗಿ ಕೈಮಾಡುವುದು ಅಥವಾ ತಳ್ಳುವುದು “ಲೆವೆಲ್-2” ಅಥವಾ “ಲೆವೆಲ್-3” ಮಾದರಿಯ ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ.
ರೆಫರಿ ತನಿಖೆ: ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಅವರು ಈ ಇಡೀ ಘಟನೆಯ ವಿಡಿಯೋ ಸಾಕ್ಷ್ಯಗಳು ಮತ್ತು ಆನ್-ಫೀಲ್ಡ್ ಅಂಪೈರ್‌ಗಳ ವರದಿಯನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.
ಸಂಭವನೀಯ ಶಿಕ್ಷೆ: ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ವೈಭವ್ ಸೂರ್ಯವಂಶಿ ಅವರಿಗೆ ಪಂದ್ಯ ಶುಲ್ಕದ 100% ವರೆಗೆ ದಂಡ ವಿಧಿಸಬಹುದು.
ಪಂದ್ಯ ನಿಷೇಧ: ಮ್ಯಾಚ್ ರೆಫರಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರೆ ವೈಭವ್ ಸೂರ್ಯವಂಶಿ ಅವರನ್ನು ಕೆಲವು ಪಂದ್ಯಗಳಿಂದ ನಿಷೇಧಿಸಬಹುದು.
ಇದೀಗ ಮೈದಾನದಲ್ಲಿ ಅಶಿಸ್ತು ತೋರಿದ ಶ್ರೀಲಂಕಾದ ವಿಶೇನ್ ಹಾಲಂಬಾ ಹಾಗೂ ವೈಭವ್ ಸೂರ್ಯವಂಶಿ ವಿರುದ್ಧ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದೇ ಸದ್ಯದ ಕುತೂಹಲ.