All posts by nagaraj11081993

ನಾಲ್ಕು ಕ್ರೂರ ಗ್ರಹರು ಒಂದೇ ರಾಶಿಯಲ್ಲಿ!! ಯಾರಿಗೆಲ್ಲ ಇದರಿಂದ ಅಪಾಯ…

ನಾಲ್ಕು ಕ್ರೂರ ಗ್ರಹರು ಒಂದೇ ರಾಶಿಯಲ್ಲಿ!! ಯಾರಿಗೆಲ್ಲ ಇದರಿಂದ ಅಪಾಯ…

ಮೀನ ರಾಶಿಯಲ್ಲಿ ಶನಿ, ಕುಜ, ರವಿ ಮತ್ತು ಬುಧ – ಈ ನಾಲ್ಕು ಪ್ರಬಲ ಗ್ರಹಗಳ ಯುತಿ ನಡೆಯುತ್ತಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ ವಿದ್ಯಮಾನವಾಗಿದೆ. ಈ ಚತುರ್ಗ್ರಹಿ ಯೋಗವು ದ್ವಾದಶ ರಾಶಿಗಳ ಮೇಲೆ ವೈವಿಧ್ಯಮಯ ಪರಿಣಾಮಗಳನ್ನು ಬೀರುತ್ತದೆ. ಈ ಸಂಯೋಗವು ಏಪ್ರಿಲ್ 11ರಿಂದ ಆರಂಭವಾಗಿ ಏಪ್ರಿಲ್15ರವರೆಗೆ ಇರಲಿದೆ. ಅಲ್ಪಾವಧಿಯಾದರೂ ಗ್ರಹಗಳು ತಮ್ಮ ಕಾರ್ಯವನ್ನು ಮಾಡಿ ಮುಂದಡಿಯಿಡುತ್ತವೆ.

​ಶುಭ ಫಲದ ರಾಶಿಗಳು:

​ವೃಷಭ ರಾಶಿ:

ನಿಮಗೆ ಈ ಸಂಯೋಗವು ಲಾಭ ಸ್ಥಾನದಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಉತ್ತಮ ಪ್ರಗತಿ ಕಂಡುಬರಲಿದೆ. ಹಳೆಯ ಬಾಕಿ ಹಣ ವಾಪಸ್ ಬರಬಹುದು ಮತ್ತು ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.

​ಮಿಥುನ ರಾಶಿ:

ಕರ್ಮ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದ್ದು, ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

​ಕರ್ಕಾಟಕ ರಾಶಿ:

ಭಾಗ್ಯ ಸ್ಥಾನದಲ್ಲಿ ಈ ಯುತಿ ಇರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ದೂರದ ಪ್ರಯಾಣದಿಂದ ಲಾಭವಾಗಲಿದ್ದು, ತಂದೆಯ ಕಡೆಯಿಂದ ಬೆಂಬಲ ಸಿಗಲಿದೆ.

​ವೃಶ್ಚಿಕ ರಾಶಿ:

ಬುದ್ಧಿವಂತಿಕೆಯಿಂದ ಕಠಿಣ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದ್ದು, ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆ ಇದೆ.

​ಮಿಶ್ರ ಫಲದ ರಾಶಿಗಳು:

​ಮೇಷ ರಾಶಿ:

ವ್ಯಯ ಸ್ಥಾನದಲ್ಲಿ ಈ ಸಂಯೋಗವಿರುವುದರಿಂದ ಖರ್ಚುಗಳು ಹೆಚ್ಚಾಗಬಹುದು. ಆದರೆ ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ಸಿಗಲಿದೆ. ಆರೋಗ್ಯದ ಕಡೆ ಗಮನವಿರಲಿ.

​ಸಿಂಹ ರಾಶಿ:

ಅಷ್ಟಮ ಸ್ಥಾನದ ಈ ಯುತಿಯು ಹಠಾತ್ ಧನಲಾಭ ತರಬಹುದು, ಆದರೆ ವಾಹನ ಚಲಾಯಿಸುವಾಗ ಮತ್ತು ಸಂವಹನದಲ್ಲಿ ಜಾಗ್ರತೆ ಅಗತ್ಯ.

​ತುಲಾ ರಾಶಿ:

ಶತ್ರುಗಳ ಮೇಲೆ ಜಯ ಸಾಧಿಸುತ್ತೀರಿ. ಸಾಲದ ಹೊರೆ ಕಡಿಮೆಯಾಗಲಿದೆ, ಆದರೆ ಗುಪ್ತ ರೋಗಗಳು ಅಥವಾ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳ ಬಗ್ಗೆ ಎಚ್ಚರವಿರಲಿ.

​ಧನು ರಾಶಿ:

ಸುಖ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಮನೆ ಅಥವಾ ಆಸ್ತಿ ಖರೀದಿಗೆ ಯೋಗವಿದೆ. ಆದರೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಬಹುದು.

​ಅಶುಭದ ರಾಶಿಗಳು

​ಕನ್ಯಾ ರಾಶಿ:

ಸಪ್ತಮ ಸ್ಥಾನದಲ್ಲಿ ಈ ಸಂಯೋಗವಿರುವುದರಿಂದ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

​ಮಕರ ರಾಶಿ:

ತೃತೀಯ ಸ್ಥಾನದಲ್ಲಿ ಈ ಯುತಿ ಇರುವುದರಿಂದ ಧೈರ್ಯ ಹೆಚ್ಚಾಗುತ್ತದೆ, ಆದರೆ ಒಡಹುಟ್ಟಿದವರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಸಣ್ಣ ಪ್ರಯಾಣಗಳು ಅಡೆತಡೆಗಳಿಂದ ಕೂಡಿರಬಹುದು.

​ಕುಂಭ ರಾಶಿ:

ಎರಡನೇ ಮನೆಯಲ್ಲಿ ಈ ಗ್ರಹಗಳಿರುವುದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಕಲಹವಾಗದಂತೆ ನೋಡಿಕೊಳ್ಳಿ. ಕಣ್ಣಿನ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ.

​ಮೀನ ರಾಶಿ:

ನಿಮ್ಮದೇ ರಾಶಿಯಲ್ಲಿ ಈ ನಾಲ್ಕು ಗ್ರಹಗಳಿರುವುದರಿಂದ ಮಾನಸಿಕ ಒತ್ತಡ ಹೆಚ್ಚಿರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಶನಿ ಮತ್ತು ಕುಜನ ಪ್ರಭಾವದಿಂದಾಗಿ ಕೋಪದ ಮೇಲೆ ಹತೋಟಿ ಇರಲಿ.

– ಲೋಹಿತ ಹೆಬ್ಬಾರ್

Source link

ವಾಹನ ಸವಾರರಿಗೆ ಗಮನಕ್ಕೆ: ಸದ್ಯಕ್ಕೆ ಬೆಂಗಳೂರಿನ ಪೀಣ್ಯ ಫ್ಲೈಓವರ್ ಬಂದ್ ಇಲ್ಲ

ಬೆಂಗಳೂರು, ಏಪ್ರಿಲ್​ 12: ನಾಳೆಯಿಂದ ಅಂದರೆ ಏಪ್ರಿಲ್​ 13ರಿಂದ 5 ದಿನ ಬಂದ್​ ಆಗಲಿದೆ ಎನ್ನಲಾಗಿದ್ದ ಪೀಣ್ಯ ಫ್ಲೈಓವರ್ (Peenya Elevated Flyover)​​ ಸದ್ಯ ನಾಳೆಯಿಂದ ಎಂದಿನಂತೆ ವಾಹನ ಸಂಚಾರಕ್ಕೆ ತೆರೆಯಲಾಗಿದೆ. ಕಾರಣಾಂತರಗಳಿಂದ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಲೋಡ್ ಟೆಸ್ಟಿಂಗ್​​ ಪ್ರಕ್ರಿಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದೂಡಿದೆ. ಹೀಗಾಗಿ ನಾಳೆಯಿಂದ ಫ್ಲೈಓವರ್ ಬಂದ್ ಮಾಡುತ್ತಿಲ್ಲ. ವಾಹನ ಸಂಚಾರ ಇರಲಿದೆ ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರು ನಗರ ಸಂಚಾರ ವಿಭಾಗ ಪೊಲೀಸರು ಟ್ವೀಟ್ ಮಾಡಿದ್ದು, ಪೀಣ್ಯ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಫೈಓವರ್​ನಲ್ಲಿನ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಅವುಗಳ ಸಮಗ್ರತೆಯ ಪರಿಶೀಲನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತಿಮ ಲೋಡ್ ಟೆಸ್ಟಿಂಗ್​​ ಪ್ರಕ್ರಿಯೆ ನಡೆಸಲು ಮುಂದಾಗಿತ್ತು.

ಬೆಂಗಳೂರು ನಗರ ಸಂಚಾರ ಪೊಲೀಸ್​ ಟ್ವೀಟ್

ಈ ಸಂಬಂಧ ಏಪ್ರಿಲ್​ 13ರಂದು ಬೆಳಿಗ್ಗೆ 05:00 ಗಂಟೆಯಿಂದ ಏಪ್ರಿಲ್​ 17ರಂದು ಬೆಳಿಗ್ಗೆ 11 ಗಂಟೆಯವರೆಗೆ ಪೀಣ್ಯ ಎಲಿವೇಟೆಡ್ ಫೈಓವ‌ರ್ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವುದಾಗಿ ಹೇಳಲಾಗಿತ್ತು. ಆದರೆ ಸದ್ಯ ಕಾರಣಾಂತರಗಳಿಂದ ಉದ್ದೇಶಿತ ಅಂತಿಮ ಲೋಡ್ ಟೆಸ್ಟಿಂಗ್​ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹೀಗಾಗಿ ಮೇಲ್ವೇತುವೆಯು ಎಂದಿನಂತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿರುತ್ತದೆ ಎಂದು ಬೆಂಗಳೂರು ನಗರ ಸಂಚಾರ ವಿಭಾಗ ಪೊಲೀಸರು ತಿಳಿಸಿದ್ದಾರೆ.

ಇನ್ನು ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಮಂಡ್ಯಗೆ ಭೇಟಿ ನೀಡಲಿದ್ದಾರೆ. ಅವರು ಆದಿಚುಂಚನಗಿರಿ ಮಠದ ಭೈರವೈಕ್ಯ ಮಂದಿರ ಉದ್ಘಾಟನೆಗಾಗಿ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್​​ ವರದಿ ಮಾಡಿದೆ.

ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ: ಪೀಣ್ಯ ಫ್ಲೈಓವರ್ 5 ದಿನ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ!

ಪೀಣ್ಯ ಪೊಲೀಸ್ ಠಾಣೆ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಏಪ್ರಿಲ್ 11ರಿಂದ ಏಪ್ರಿಲ್ 14ರ ವರೆಗೆ ಸರ್ಕಾರಿ ಮತ್ತು ಶಾಲೆಗಳಿಗೆ ರಜೆ ಇದೆ. ಈ ಸಮಯದಲ್ಲಿ ಫ್ಲೈಓವರ್ ಬಂದ್​ ಮಾಡಿದರೆ,​ಪ್ರತಿ ಗಂಟೆಗೆ ಸುಮಾರು 4 ಸಾವಿರದಿಂದ 5 ಸಾವಿರ ವಾಹನಗಳು ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಹಾಗೂ 8ನೇ ಮೈಲಿಯಲ್ಲಿ ಸಂಚಾರ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಭಾರೀ ಟ್ರಾಫಿಕ್ ದಟ್ಟಣೆ ಉಂಟಾಗುವುದಷ್ಟೇ  ಅಲ್ಲ, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದ ಆಶಾ ಭೋಸ್ಲೆ (Asha Bhosle) ಅವರು ಮುಂಬೈನಲ್ಲಿ ನಿಧನರಾದರು. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (ಏಪ್ರಿಲ್ 12) ಕೊನೆಯುಸಿರೆಳೆದಿದ್ದಾರೆ. ಆಶಾ ಭೋಸ್ಲೆ ನಿಧನದ ಬಗ್ಗೆ ಮಾಹಿತಿ ನೀಡಿದ ಡಾ. ಪ್ರತೀತ್, ‘ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಇಂದು ನಿಧನರಾಗಿರುವುದು ಅತ್ಯಂತ ದುಃಖದ ಸಂಗತಿ. ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಬಹುಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ’ ಎಂದು ಖಚಿತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಆಶಾ ಭೋಸ್ಲೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (ಟ್ವಿಟರ್) ಮೂಲಕ ಸಂತಾಪ ಸೂಚಿಸಿದ್ದಾರೆ. ‘ಆಶಾ ಭೋಸ್ಲೆ ಅವರ ನಿಧನದಿಂದ ತೀವ್ರ ದುಃಖವಾಗಿದೆ. ದಶಕಗಳ ಕಾಲ ಸಾಗಿದ ಅವರ ಅಸಾಧಾರಣ ಸಂಗೀತ ಪಯಣವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ ಮತ್ತು ಪ್ರಪಂಚದಾದ್ಯಂತ ಅಸಂಖ್ಯಾತ ಹೃದಯಗಳನ್ನು ಸ್ಪರ್ಶಿಸಿದೆ’ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.

‘ಅವರೊಂದಿಗೆ ನಾನು ನಡೆಸಿದ ಸಂವಾದಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಆಶಾ ಭೋಸ್ಲೆ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಮತ್ತು ಸಂಗೀತ ಪ್ರೇಮಿಗಳಿಗೆ ನನ್ನ ತೀವ್ರ ಸಂತಾಪಗಳು. ಅವರು ಮುಂಬರುವ ಪೀಳಿಗೆಗಳಿಗೂ ಸ್ಫೂರ್ತಿಯಾಗಿ ಮುಂದುವರಿಯುತ್ತಾರೆ ಮತ್ತು ಅವರ ಹಾಡುಗಳು ಜನರ ಜೀವನದಲ್ಲಿ ಎಂದೆಂದಿಗೂ ಅನುರಣಿಸುತ್ತಿರುತ್ತವೆ’ ಎಂದು ಮೋದಿ ಬರೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆಶಾ ಭೋಸ್ಲೆ ಅವರ ಗಾಯನವು ಭಾಷೆ ಮತ್ತು ಪ್ರಾಂತ್ಯಗಳ ಗಡಿ ಮೀರಿ ಬೆಳೆದಿತ್ತು ಎಂದು ಅವರು ಬಣ್ಣಿಸಿದ್ದಾರೆ. ಹೆಚ್‌.ಡಿ. ಕುಮಾರಸ್ವಾಮಿ ಕೂಡ ಸಂತಾಪ ಸೂಚಿಸಿದ್ದಾರೆ.

‘ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಲೋಕದ ಅಪ್ರತಿಮ ದಂತಕಥೆ. ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೇನೆ. ಅವರು ಕಲಾವಿದರಿಗೆ ಸದಾ ಸ್ಫೂರ್ತಿ. ಅವರ ಆತ್ಮಕ್ಕೆ ಶಾಂತಿಸಿಗಲೆಂದು ಪ್ರಾರ್ಥಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಿನಿಮಾ, ರಾಜಕೀಯ, ಕ್ರೀಡೆ ಉದ್ಯಮ ಮುಂತಾದ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Optical Illusion: ನಿಮ್ಮ ಕಣ್ಣು ಶಾರ್ಪ್ ಇದ್ರೆ ಈ ಚಿತ್ರದಲ್ಲಿರುವ ಹುಡುಗಿ ಮುಖವನ್ನು ಗುರುತಿಸಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳನ್ನು ಬಿಡಿಸುವುದು ಹೇಳಿದಷ್ಟು ಸುಲಭವಲ್ಲ. ಈ ಚಿತ್ರಗಳತ್ತ ಕಣ್ಣಾಯಿಸಿದರೆ ಇದು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವುದೇ ಹೆಚ್ಚು. ನೀವೀಗ ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ರೆಡಿ ಇದ್ದೀರಾ. ಇದೀಗ ಇಂತಹದ್ದೇ ಟ್ರಿಕ್ಕಿ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಮರೆಮಾಡಲಾಗಿರುವ ಹುಡುಗಿಯ ಮುಖವನ್ನು ಪತ್ತೆ ಹೆಚ್ಚಬೇಕು. ನಿಮ್ಮದು ಹದ್ದಿನ ಕಣ್ಣಾಗಿದ್ರೆ ಮಾತ್ರ ಹತ್ತು ಸೆಕೆಂಡುಗಳೊಳಗೆ ಈ ಒಗಟನ್ನು ಬಿಡಿಸಲು ಸಾಧ್ಯ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಕಾಣಿಸುವುದು ಒಂದು, ಅದರಲ್ಲಿ ಇರುವುದು ಮತ್ತೊಂದು ಆಗಿರುತ್ತದೆ. ಈ ಚಿತ್ರದಲ್ಲಿ ನದಿಯ ಮಧ್ಯದಲ್ಲಿ ಒಬ್ಬ ಹುಡುಗಿ ನಿಂತಿದ್ದಾಳೆ. ಇಲ್ಲಿ ಮರಗಳು ಹಾಗೂ ಸೇತುವೆವೊಂದಿದೆ. ಆದರೆ ಇಲ್ಲಿ ಹುಡುಗಿಯ ಮುಖವೂ ಇದೆ. ನೀವು ಹತ್ತಿರದಿಂದ ನೋಡಿದರೆ ಮಾತ್ರ ಆ ಮುಖವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಈ ಸುಂದರವಾದ ಹುಡುಗಿ ಮುಖವನ್ನು 10 ಸೆಕೆಂಡುಗಳೊಳಗೆ ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ.

ಇದನ್ನೂ ಓದಿ: ಕಳ್ಳಿ ಸಸ್ಯಗಳ ನಡುವೆ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯಬಲ್ಲಿರಾ

ಹುಡುಗಿ ಮುಖ ನಿಮ್ಮ ಕಣ್ಣಿಗೆ ಕಾಣಿಸಿತೇ?

ಮರಗಿಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಹುಡುಗಿ ಮುಖ ನಿಮ್ಮ ಕಣ್ಣಿಗೆ ಕಾಣಿಸದೇ ಇರಬಹುದು. ಹೆಚ್ಚಿನವರಿಗೆ ಇದೇ ರೀತಿ ಆಗಿದೆ. ಈ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ  ನೀವು ತಲೆ ಕೆಡಿಸಿಕೊಳ್ಳಬೇಡಿ. ನಾವೇ ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರ ನೋಡಿ ನಿಮ್ಮ ಕಣ್ಣಿಗೆ ಹುಡುಗಿ ಮುಖ ಕಾಣಿಸುತ್ತದೆ.

 

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Akshaya Tritiya: ಅಕ್ಷಯ ತೃತೀಯಂದು ಚಿನ್ನವೇ ಖರೀದಿಸಬೇಕೆಂದಿಲ್ಲ, ಈ 5 ಅಗ್ಗದ ವಸ್ತು ಮನೆಗೆ ತಂದರೂ ಒಲಿಯಲಿದೆ ಲಕ್ಷ್ಮಿ ಕೃಪೆ!

ಭಾರತೀಯ ಸಂಸ್ಕೃತಿಯಲ್ಲಿ ‘ಅಕ್ಷಯ ತೃತೀಯ‘ಕ್ಕೆ ವಿಶೇಷ ಮಹತ್ವವಿದೆ. ಈ ದಿನ ಏನೇ ಮಾಡಿದರೂ ಅದು ‘ಅಕ್ಷಯ’ (ಅಳಿಯದ) ಫಲ ನೀಡುತ್ತದೆ ಎಂಬುದು ನಂಬಿಕೆ. ಅಕ್ಷಯ ತೃತೀಯ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಚಿನ್ನ-ಬೆಳ್ಳಿಯ ಖರೀದಿ. ಆದರೆ, ಇಂದಿನ ಕಾಲದಲ್ಲಿ ಎಲ್ಲರಿಗೂ ಚಿನ್ನ ಖರೀದಿಸಲು ಸಾಧ್ಯವಾಗದಿರಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೇವಲ ಚಿನ್ನ ಮಾತ್ರವಲ್ಲ, ಅತಿ ಕಡಿಮೆ ಬೆಲೆಯಲ್ಲಿ ಸಿಗುವ ಕೆಲವು ಪವಿತ್ರ ವಸ್ತುಗಳನ್ನು ಮನೆಗೆ ತರುವುದರಿಂದಲೂ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.

ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಆ ೫ ವಸ್ತುಗಳು ಇಲ್ಲಿವೆ:

ಉಪ್ಪು: ನಕಾರಾತ್ಮಕತೆ ದೂರ ಮಾಡುವ ಸಂಕೇತ

ಅಕ್ಷಯ ತೃತೀಯದಂದು ಉಪ್ಪು ಖರೀದಿಸುವುದು ಚಿನ್ನ ಖರೀದಿಸುವುದಕ್ಕಿಂತಲೂ ಶ್ರೇಷ್ಠ ಎಂದು ಜ್ಯೋತಿಷ್ಯ ವಿದ್ವಾಂಸರು ಹೇಳುತ್ತಾರೆ. ಉಪ್ಪು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಲಾಗಿದೆ. ಈ ದಿನ ಉಪ್ಪನ್ನು ಮನೆಗೆ ತರುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ, ಧನಾತ್ಮಕತೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.

ಮಣ್ಣಿನ ಪಾತ್ರೆ: ಯಶಸ್ಸಿನ ಮೆಟ್ಟಿಲು

ಹೊಸ ಮಣ್ಣಿನ ಪಾತ್ರೆ ಅಥವಾ ಮಡಿಕೆಯನ್ನು ಈ ದಿನ ಖರೀದಿಸುವುದು ಅತ್ಯಂತ ಶುಭದಾಯಕ. ಮಣ್ಣಿನ ಪಾತ್ರೆ ಖರೀದಿಸಿ ಅದರಲ್ಲಿ ನೀರು ತುಂಬಿಸಿಡುವುದು ಜೀವನದ ಹಿನ್ನಡೆಗಳನ್ನು ನೀಗಿಸಿ, ಉನ್ನತ ಸ್ಥಾನಕ್ಕೇರಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ಶಾಂತಿ ಮತ್ತು ಸಮೃದ್ಧಿಯ ಸಂಕೇತ.

ತುಳಸಿ ಗಿಡ: ಸಾಕ್ಷಾತ್ ಲಕ್ಷ್ಮಿಯ ಆಗಮನ

ಮನೆಯಲ್ಲಿ ತುಳಸಿ ಗಿಡ ಇಲ್ಲದವರು ಅಕ್ಷಯ ತೃತೀಯದಂದು ಹೊಸ ಗಿಡವನ್ನು ಖರೀದಿಸಿ ನೆಡುವುದು ಶ್ರೇಯಸ್ಕರ. ತುಳಸಿಯನ್ನು ಮನೆಗೆ ತರುವುದು ಎಂದರೆ ಸಾಕ್ಷಾತ್ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡಂತೆ. ಇದರಿಂದ ಮನೆಯಲ್ಲಿ ಅಶಾಂತಿ ದೂರವಾಗಿ ಸದಾ ಮಂಗಳ ಉಂಟಾಗುತ್ತದೆ.

ಅರಿಶಿನ-ಕುಂಕುಮ: ಸೌಭಾಗ್ಯದ ಸಂಕೇತ

ಅತಿ ಕಡಿಮೆ ವೆಚ್ಚದಲ್ಲಿ ಸಿಗುವ ಅರಿಶಿನ ಮತ್ತು ಕುಂಕುಮ ಸೌಭಾಗ್ಯದ ಸಂಕೇತಗಳಾಗಿವೆ. ಅಕ್ಷಯ ತೃತೀಯದಂದು ಇವುಗಳನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ನೀವು ಮಾಡುವ ಎಲ್ಲಾ ಶುಭ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.

ಪುಸ್ತಕಗಳು: ಜ್ಞಾನ ಮತ್ತು ಐಶ್ವರ್ಯದ ಮಿಲನ

ವಿದ್ಯೆಯೇ ಮಹಾಧನ. ಈ ದಿನ ಪುಸ್ತಕಗಳನ್ನು ಖರೀದಿಸುವುದು ಜ್ಞಾನದೇವತೆ ಸರಸ್ವತಿ ಮತ್ತು ಐಶ್ವರ್ಯದೇವತೆ ಲಕ್ಷ್ಮಿಯ ಆಶೀರ್ವಾದವನ್ನು ಒಟ್ಟಿಗೆ ನೀಡುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಫಲ ನೀಡುತ್ತದೆ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ ಕಂಡುಬರಲು ಅಕ್ಷಯ ತೃತೀಯದಂದು ಪುಸ್ತಕ ಅಥವಾ ಲೇಖನ ಸಾಮಗ್ರಿಗಳನ್ನು ಖರೀದಿಸುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕಾರ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಬಿಗ್ ಶಾಕ್

ಬೆಂಗಳೂರು, (ಏಪ್ರಿಲ್ 12): ದಾವಣಗೆರೆ ದಂಗಲ್ ತೀವ್ರ ಸ್ವರೂಪ ಪಡೆದುಕೊಂಡಿದೆ.  ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ (Davanagere South By Election Row) ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಸ್ಲಿಂ ನಾಯರ ನಡುವಿನ ಅಸಮಧಾನ ಸ್ಫೋಟಗೊಂಡಿದ್ದು, ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜಬ್ಬಾರ್ ರಾಜೀನಾಮೆ ನೀಡಿದ್ದು, ಇದೀಗ ಈ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅಂಗೀಕರಿಸಿದ್ದಾರೆ. ಅಲ್ಲದೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ (KPCC Minority Department )ವಿಸರ್ಜಿಸಿ ಆದೇಶ ಹೊರಡಿಸಿದ್ದು, ಈ ಬೆಳವಣಿಗೆ ಕಾಂಗ್ರೆಸ್​​ನಲ್ಲಿ ಭಾರೀ ಸಂಚನಲನ ಮೂಡಿಸಿದೆ.

ರಾಜೀನಾಮೆ ಪರ್ವ ಬೆನ್ನಲ್ಲೇ ಅಲ್ಪಸಂಖ್ಯಾತರ ಘಟಕ ವಿಸರ್ಜನೆ

ಅಬ್ದುಲ್ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ರಾಜೀನಾಮೆ ಪರ್ವ ಶುರುವಾಗಿದೆ. ಮಹಮ್ಮದ್ ಸಿರಾಜ್ ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ಘಟಕ ಉಪಾಧ್ಯಕ್ಷ ಹಾಗೂ ವಕ್ಫ ಮಂಡಳಿ ಮಾಜಿ ಅಧ್ಯಕ್ಷ. ಇನ್ನೂ ಮೂರು ಜನ ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕ ಕಾರ್ಯದರ್ಶಿಗಳಾದ ಅಬ್ದುಲ್ ಗನಿ ತಾಹೀರ್, ನೂರ್ ಅಹ್ಮದ್, ಹುಸೇನ್ ಉಕ್ಕಡಗಾತ್ರಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ಡಿಕೆ ಶಿವಕುಮಾರ್ ಇಡೀ ಅಲ್ಪಸಂಖ್ಯಾತರ ಘಟಕವನ್ನೇ ವಿಸರ್ಜನೆ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಟ್ವಿಸ್ಟ್​​: ಸ್ವ ಇಚ್ಛೆಯಿಂದ ಹುದ್ದೆ ತೊರೆದಿದ್ದೇನೆ ಎಂದ ಪರಿಷತ್​​ ಸದಸ್ಯ

ದಾವಣಗೆರೆ ದಕ್ಷಿಣ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗದವರ ತಲೆತಂಡಕ್ಕೆ ಕಾಂಗ್ರೆಸ್​ ಹೈಕಮಾಂಡ್ ಮುಂದಾಗಿದ್ದು, ಈಗಾಗಲೇ ಕೆಪಿಸಿಸಿ ಅಲ್ಪಸಂಖ್ಯಾತ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ತಲೆದಂಡಕ್ಕೂ ಹೈಕಮಾಂಡ್ ಮುಂದಾಗಿದೆ. ಈ ಸಾಲಿನಲ್ಲಿ ಜಮೀರ್ ಅಹಮ್ಮದ್ ಖಾನ್ ಇದ್ದು, ಅವರ ಸಚಿವ ಸ್ಥಾನಕ್ಕೂ ಕುತ್ತು ಬಂದಿದೆ. ಈ ಎಲ್ಲಾ ಬೆಳವಣಿಗಳ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಇದು ಅಚ್ಚರಿಗೆ ಕಾರಣವಾಗಿದೆ.

ಮುಸ್ಲಿಂ ನಾಯಕರಲ್ಲಿ ಭಿನ್ನಮತ ಸ್ಫೋಟ

ದಾವಣಗೆರೆ ದಕ್ಷಣ ಬೈ ಎಲೆಕ್ಷನ್ ಸಂಬಂಧ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಅಲ್ಲದೇ ಬಣ ರಾಜಕೀಯ ಸಹ ಶುರುವಾಗಿದೆ. ಡಿಕೆ ಶಿವಕುಮಾರ್ ಬಣದ ರಿಜ್ವಾನ್ ಅರ್ಷದ್, ಸಲೀಂ ಅಹಮ್ಮದ್ ಸುದ್ದಿಗೋಷ್ಠಿ ನಡೆಸಿ ತಮ್ಮದೇ ಸಮುದಾಯದ ನಾಯಕರ ವಿರುದ್ಧ ಬಹಿರಂಗವಾಗಿ ಗಂಭೀರ ಆರೋಪ ಮಾಡಿದ್ದಾರೆ. ದಾವಣಗೆರೆ ಬೈ ಎಲೆಕ್ಷನ್ ನಮ್ಮ ಪಕ್ಷದ ಹಿರಿಯರು ಕೆಲಸ ಮಾಡಿಲ್ಲ ಎಂದು ಪರೋಕ್ಷವಾಗಿ ಸಚಿವ ಜಮೀರ್ ಅಹಮ್ಮದ್ ಖಾನ್, ಅಬ್ದುಲ್ ಜಬ್ಬರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಹೈಕಮಾಂಡ್​​ಗೂ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಅಬ್ದುಲ್ ಜಬ್ಬರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರೊಂದಿಗೆ ಇದೀಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣ ರಾಜಕೀಯಲ್ಕೆ ಮುನ್ನುಡಿ ಬರೆದಂತಾಗಿದೆ.

ಮೊನ್ನೆಯಷ್ಟೇ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದರು.. ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧವೇ ಷಡ್ಯಂತ್ರ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳು ನಡೆದಿವೆ ಎಂಬ ಆರೋಪ ಕೇಳಿಬಂದಿತ್ತು.. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಆಂತರಿಕ ಬೆಳವಣಿಗೆ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಂಡಿತ್ತು.. ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಬಿಷೇಕ್ ದತ್ ವರದಿ ನೀಡಿದ್ರು. ಈ ವರದಿ ಕೈ ಸೇರುತ್ತಿದ್ದಂತೆ ಹೈಕಮಾಂಡ್ ಆ್ಯಕ್ಷನ್ ತೆಗೆದುಕೊಂಡಿದೆ. ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಮತ್ತು ಜಮೀರ್ ಆಪ್ತರು ಆಗಿರೋ ನಜೀರ್ ಅಹ್ಮದ್‌ಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ತಾಕೀತು ಮಾಡಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಇಬ್ಬರು ಜಮೀರ್ ಆಪ್ತರು. ಹೀಗಾಗಿ ಮುಂದಿನ ಆ್ಯಕ್ಷನ್ ಜಮೀರ್ ವಿರುದ್ಧವೇ ಎಂದ ಹೇಳಲಾಗ್ತಿದೆ.. ಯಾಕಂದ್ರೆ, ಜಮೀರ್ ಸೇರಿ ಹಲವು ಮುಸ್ಲಿಂ ಮುಖಂಡರು ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ ಅನ್ನ ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದರು. ಆದ್ರೆ, ಸಮರ್ಥ್​ಗೆ ಟಿಕೆಟ್​ ಸಿಕ್ಕ ಕಾರಣ ಬೇಸರಗೊಂಡಿದ್ದ ಜಮೀರ್, ಪ್ರಚಾರದಿಂದ ದೂರ ಉಳಿದಿದ್ದರು. ಈಗ ಕ್ಷೇತ್ರದಲ್ಲಿ ಪ್ರಚಾರ ಮಾಡದ ಆರೋಪದಲ್ಲಿ ಜಮೀರ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಸಚಿವ ಸಂಪುಟ ಪುನಾರಚನೆ ವೇಳೆ ಜಮೀರ್ ತಲೆತಂಡ ಖಚಿತ ಎನ್ನಲಾಗಿದೆ.

ಒಟ್ಟಿನಲ್ಲಿ ದಾವಣಗೆರೆ ದಕ್ಷಿಣದ ಉಪ ಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್‌ ಮುಸ್ಲಿಂ ನಾಯಕರಲ್ಲಿ ಒಳಗಿನ ಬೇಗುದಿ ಸ್ಫೋಟಗೊಂಡಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿಕ್ ಮಾಡಿ

Source link

Viral Video: ಈ ನಾಯಿ ರೊಟ್ಟಿ ತಗೊಂಡು ಹೋಗ್ತಿರೋದು ಎಲ್ಲಿಗೆ ನೋಡಿ

ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳಿಗೇ ಮಾನವೀಯತೆ ಇರುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಸಾಮಾನ್ಯವಾಗಿ ಮನುಷ್ಯರಿಗೆ ಏನಾದರೂ ಕೊಟ್ಟರೆ ಸ್ವಾಭವಿಕವಾಗಿ ತಾವೇ ತಿನ್ನುತ್ತಾರೆ. ಆದರೆ ಈ ನಾಯಿಗೆ ರೊಟ್ಟಿ ಕೊಟ್ಟರೆ ಅದನ್ನು ತೆಗೆದುಕೊಂಡು ಹೋಗಿ ಹಸುವಿಗೆ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಮನುಷ್ಯರು ಪರಸ್ಪರ ಸಹಾಯ ಮಾಡಲು ಹಿಂಜರಿಯುತ್ತಿರುವಾಗ, ಮೂಕ ಪ್ರಾಣಿಯೊಂದು ತೋರಿದ ನಿಸ್ವಾರ್ಥ ಪ್ರೇಮದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರಿಂದ ಶಹಬ್ಬಾಸ್ ಎನಿಸಿಕೊಂಡಿದೆ.

ವೈರಲ್ ಆಗಿರುವ ಈ ವೀಡಿಯೊದಲ್ಲಿ, ಒಂದು ಸಣ್ಣ ಕಪ್ಪು ನಾಯಿ ತನ್ನ ಬಾಯಿಯಲ್ಲಿ ಒಂದು ರೊಟ್ಟಿಯ ತುಂಡನ್ನು ಕಚ್ಚಿಕೊಂಡು ರಸ್ತೆಯಲ್ಲಿ ಹೋಗುತ್ತಿರುತ್ತದೆ. ವೀಡಿಯೊ ಚಿತ್ರೀಕರಿಸುತ್ತಿದ್ದ ವ್ಯಕ್ತಿಗೆ ಮೊದ ಮೊದಲು ಆ ನಾಯಿ ತನ್ನ ಆಹಾರವನ್ನು ತಿನ್ನಲು ಎಲ್ಲೋ ಸುರಕ್ಷಿತ ಜಾಗ ಹುಡುಕುತ್ತಿದೆ ಎಂದು ಅನ್ನಿಸಿತ್ತು. ಆದರೆ ಆ ನಾಯಿಯ ಗುರಿಯೇ ಬೇರೆಯಾಗಿತ್ತು.ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ನೇರವಾಗಿ ಹಸುವಿನ ಬಳಿಗೆ ಹೋದ ಆ ನಾಯಿ, ಅತ್ಯಂತ ಗೌರವದಿಂದ ತನ್ನ ಬಾಯಲ್ಲಿದ್ದ ರೊಟ್ಟಿಯನ್ನು ಅದರ ಮುಂದೆ ಇಟ್ಟಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚೆಲ್ಲಾ ಪಿಲ್ಲಿಯಾದ ಜೀವನ, ಕೈಹಿಡಿದ ಸಂಗೀತ: ಆಶಾ ಭೋಸ್ಲೆ ಎಂಬ ಫೀನಿಕ್ಸ್ ಹಕ್ಕಿ

ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದ ದಿಗ್ಗಜ ಗಾಯಕಿ ಆಶಾ ಭೋಸ್ಲೆ (Asha Bhosle) ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. 92 ವರ್ಷದ ತುಂಬು ಜೀವನವನ್ನು ಅವರು ಕಳೆದಿದ್ದಾರೆ. ಸಂಗೀತ ಲೋಕದ ಸರಸ್ವತಿ ಎಂದೇ ಕರೆಯಲಾಗುವ ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಸ್ಲೆ. ಐದು ಮಂದಿ ಮಕ್ಕಳಲ್ಲಿ ಮೂರನೇಯವರು ಆಶಾ. ಇಡೀ ಮನೆಯೇ ಸಂಗೀತ ಲೋಕಕ್ಕೆ ಅಗತ್ಯವಾದ ಸಂಸ್ಕಾರ, ಶಿಸ್ತಿನ ಗುಣಗಳನ್ನು ಮೈಗೂಡಿಸಿಕೊಂಡಿತ್ತು. ಆದರೆ ಆಶಾ ಮಾತ್ರ ತುಸು ಭಿನ್ನ. ಆದರೆ ಅವರ ಇದೇ ಗುಣದಿಂದ ಜೀವನದ ಕೆಲ ವರ್ಷಗಳನ್ನು ಬಹುತೇಕ ನರಕವಾಸದಂತೆ ಕಳೆದಿದ್ದರು ಆಶಾ ಭೋಸ್ಲೆ. ಆದರೆ ಕಡೆಗೆ ಅವರ ಕೈಹಿಡಿದಿದ್ದು ಸಂಗೀತ.

ಆಶಾ ಭೊಸ್ಲೆ ಅವರ ತಂದೆ ದೀನಾನಾಥ್ ಮಂಗೇಶ್ಕರ್, ಮರಾಠಿ ನಾಟಕದ ಖ್ಯಾತ ಗಾಯಕ, ನಟ, ನೃತ್ಯಗಾರರಾಗಿದ್ದರು. ಆದರೆ ಮದ್ಯದ ಅಮಲಿಗೆ ಬಿದ್ದು ಬಹುಬೇಗನೆ ಇಹಲೋಕ ತ್ಯಜಿಸಿದರು. ಮನೆಗೆ ಆಸರೆಯಾಗಿದ್ದ ತಂದೆ ನಿಧನವಾದಾಗ ಆಶಾಗೆ ಇನ್ನೂ 9 ವರ್ಷ ವಯಸ್ಸು. ಅಕ್ಕ ಲತಾ ಮಂಗೇಶ್ಕರ್ ಅವರು ಇಡೀ ಕುಟುಂಬದ ಜವಾಬ್ದಾರಿ ಹೆಗಲಿಗೆ ಏರಿಸಿಕೊಂಡರು.

ಇಡೀ ಕುಟುಂಬಕ್ಕೆ ಬಳುವಳಿಯಾಗಿ ಬಂದಿದ್ದ ಗಾಯನದಿಂದಲೇ ಮನೆ ನಡೆಯುತ್ತಿತ್ತು. ಆಶಾ ಭೋಸ್ಲೆ ಸಹ ಮರಾಠಿ ರಂಗಭೂಮಿ ಬಳಿಕ ಸಿನಿಮಾಗಳಿಗೂ ಹಾಡಲು ಪ್ರಾರಂಭಿಸಿದರು. ತಮ್ಮ 15ನೇ ವಯಸ್ಸಿಗೆ ಆಶಾ ಭೊಸ್ಲೆ ಸಿನಿಮಾಗಳಲ್ಲಿ ಹಾಡಲು ಪ್ರಾರಂಭಿಸಿದ್ದು ಮಾತ್ರವೇ ಅಲ್ಲದೆ, ಬಹು ಬೇಗನೆ ಬೇಡಿಕೆಯನ್ನೂ ಪಡೆದುಕೊಂಡರು. ಆ ಸಮಯದಲ್ಲಿ ಆಶಾ ಅವರಿಗೆ ಸಹಾಯ ಮಾಡುತ್ತಿದ್ದಿದ್ದು 31 ವರ್ಷದ ಗಣಪತ್​ ರಾವ್ ಭೋಸ್ಲೆ. 16 ವರ್ಷದ ಆಶಾ, ತನ್ನ ಸಹಾಯಕ ಆಗಿದ್ದ ಗಣಪತ್ ರಾವ್ ಭೋಸ್ಲೆ ಜೊತೆ ಓಡಿ ಹೋಗಿ ಮದುವೆ ಆಗಿಬಿಟ್ಟರು, ಮನೆಯಲ್ಲಿ ಯಾರಿಗೂ ತಿಳಿಸದೆ. ಅಲ್ಲಿಂದ ಅವರ ನರಕ ದರ್ಶನ ಆರಂಭವಾಯ್ತು.

ಇದನ್ನೂ ಓದಿ:ಆಶಾ ಭೋಸ್ಲೆಯ ‘ಆಂಖೋ ಕೀ ಮಸ್ತಿ’ ಹಾಡಿದ ಗಿಲ್ಗಿಟ್ ಬಲ್ಟಿಸ್ತಾನ್​ನ ತರುಣಿ

ಪತಿ ಮತ್ತು ಪತಿಯ ಮನೆಯರಿಂದ ಸತತ ಹಿಂಸೆ ಅನುಭವಿಸಿದರು ಆಶಾ ಭೋಸ್ಲೆ. ಕೊನೆಗೆ ಪತಿ ಗಣ್​ಪತ್ ರಾವ್ ಆಶಾ ಭೋಸ್ಲೆಯನ್ನು ಮಕ್ಕಳ ಸಮೇತ ಮನೆಯಿಂದ ಹೊರಗಟ್ಟಿದರು. ಕಂಕುಳಲ್ಲಿ ಇಬ್ಬರು ಪುಟ್ಟ ಮಕ್ಕಳು ಮತ್ತು ಹೊಟ್ಟೆಯಲ್ಲಿ ಒಂದು ಮಗುವನ್ನು ಇರಿಸಿಕೊಂಡು ಮತ್ತೆ ತಮ್ಮ ಮನೆಗೆ ಮರಳಿದರು ಆಶಾ. ದಯಾಮಯಿ ಅಕ್ಕ, ಲತಾ ಮಂಗೇಶ್ಕರ್ ತಂಗಿಯನ್ನು ಮತ್ತೆ ಮನೆಗೆ ಸೇರಿಸಿಕೊಂಡರು. ತಮ್ಮ ಜೀವನ ಕತೆಯನ್ನು ಈ ವಿಷಯ ಬರೆದುಕೊಂಡಿರುವ ಆಶಾ, ‘ನನ್ನ ಪತಿ ಒಬ್ಬ ಸ್ಯಾಡಿಸ್ಟ್ ಆಗಿದ್ದ, ವಿನಾಕಾರಣ ನೋವು ನೀಡುತ್ತಿದ್ದ, ಒಂದು ಸಮಯದಲ್ಲಿ ನಾನು ಆತ್ಮಹತ್ಯೆಗೆ ನಿರ್ಧರಿಸಿ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದೆ, ಆಗ ನಾನು ನಾಲ್ಕು ತಿಂಗಳ ಗರ್ಭಿಣಿ ಆದರೆ ನಾನು ಸಾಯಲಿಲ್ಲ. ನನ್ನ ಮಕ್ಕಳ ಮೇಲಿನ ಪ್ರೀತಿ ನನ್ನನ್ನು ಬದುಕಿಸಿತು’ ಎಂದಿದ್ದಾರೆ.

ನರಕ ನೋಡಿ ಬಂದಿದ್ದ ಆಶಾ ಭೋಸ್ಲೆಗೆ ಸಂಗೀತವೊಂದೇ ಆಸರೆಯಾಗಿತ್ತು. ಸತತವಾಗಿ ಸಿನಿಮಾಗಳಿಗೆ ಹಾಡಿದರು. ಯಾವ ಮಟ್ಟಿಗೆಂದರೆ 1950ರ ದಶಕದಲ್ಲಿ ಒಂದು ವರ್ಷ ಅಕ್ಕ ಲತಾ ಮಂಗೇಶ್ಕರ್ ಅವರಿಗಿಂತಲೂ ಹೆಚ್ಚು ಹಾಡುಗಳನ್ನು ಹಾಡಿದರು. ಅವರೇ ಹೇಳಿಕೊಂಡಿರುವಂತೆ, ಅಕ್ಕ ಲತಾ ಹಾಗೂ ಆಶಾ ಅವರ ಧ್ವನಿ ಶೈಲಿ ಒಂದೇ ರೀತಿ ಇತ್ತಂತೆ. ಇದೇ ಕಾರಣಕ್ಕೆ ಆಶಾ ಅವರಿಗೆ ಯಾರೂ ಅವಕಾಶಗಳನ್ನು ನೀಡುತ್ತಿರಲಿಲ್ಲವಂತೆ. ಬಳಿಕ ಅವರು ಶೈಲಿ ಬದಲಿಸಿದ ಮೇಲೆ ಅವರಿಗೆ ಅವಕಾಶಗಳು ಬರಲು ಆರಂಭವಾದವಂತೆ. ‘ನನ್ನ ಅಕ್ಕ ನನಗಿಂತಲೂ ಬಹಳ ಪ್ರತಿಭಾವಂತೆ’ ಎಂದಿದ್ದರು ಆಶಾ.

ಆಶಾ ಭೋಸ್ಲೆ ಅವರಿಗೆ ಮೂವರು ಮಕ್ಕಳು. ಮೊದಲೇ ಮಗ ಹೇಮಂತ್ ಭೋಸ್ಲೆ ಪೈಲೆಟ್ ಆಗಿದ್ದರು ಬಳಿಕ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿ, 2015 ರಲ್ಲಿ ಕ್ಯಾನ್ಸರ್​​ನಿಂದ ನಿಧನ ಹೊಂದಿದರು. ಮಗಳು ವರ್ಷಾ 2012 ರಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದರು. ಅವರು ಪತ್ರಕರ್ತೆಯಾಗಿ, ಸಂಗೀತಗಾರ್ತಿಯಾಗಿದ್ದರು. ಆಶಾ ಅವರ ಕೊನೆಯ ಪುತ್ರ ಆನಂದ್ ಭೋಸ್ಲೆ. ಇವರು ಕೊನೆಯ ವರೆಗೂ ಅಮ್ಮನ ಜೊತೆಗಿದ್ದರು, ಅಮ್ಮನ ಪರ್ಸಲನ್ ಅಸಿಸ್ಟೆಂಟ್, ಕೇರ್ ಟೇಕರ್ ಎಲ್ಲವೂ ಆಗಿದ್ದರು.

1980 ರಲ್ಲಿ ಆಶಾ ಭೋಸ್ಲೆ ಅವರು ಖ್ಯಾತ ಸಂಗೀತ ನಿರ್ದೇಶಕ ಆರ್​​ಡಿ ಬರ್ಮನ್ ಅವರನ್ನು ವಿವಾಹವಾದರು. ಬರ್ಮನ್ ಅವರು ಆಶಾ ಅವರಿಗಿಂತಲೂ ಆರು ವರ್ಷ ಕಿರಿಯರಾಗಿದ್ದರು. ಇವರ ವಿವಾಹಕ್ಕೆ ಬರ್ಮನ್ ಅವರ ತಾಯಿ ತೀವ್ರ ವಿರೋಧ ಮಾಡಿದ್ದರು. ಆದರೂ ಇಬ್ಬರು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು. ಬರ್ಮನ್ ಅವರು 1994 ರಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರ ಅಂತ್ಯ ಕೆಟ್ಟದಾಗಿತ್ತು, ಕೊನೆಯ ಸಮಯದಲ್ಲಿ ಆರ್ಥಿಕ ಸಂಕಷ್ಟಗಳಿಗೆ ಬರ್ಮನ್ ಸಿಕ್ಕಿದ್ದರು, ಅದು ಆಶಾ ಅವರ ಮೇಲೂ ಸಾಕಷ್ಟು ಪರಿಣಾಮ ಬೀರಿತ್ತು.

ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರೂ ಸಹ ಆಶಾ ಭೋಸ್ಲೆ ಹಾಡು ನಿಲ್ಲಿಸಲಿಲ್ಲ ಅವರ ಅದ್ಭುತ ಕಂಠಕ್ಕೆ ಅವಕಾಶಗಳು ಕಡಿಮೆ ಆಗಲೇ ಇಲ್ಲ. ತಮ್ಮ 90ರ ವಯಸ್ಸಿನಲ್ಲೂ ಸಹ ಆಶಾ ಭೋಸ್ಲೆ ಅವರು ಲೈವ್ ಸಿಂಗಿಂಗ್ ಶೋ ನೀಡುತ್ತಿದ್ದರು. ಗಂಟೆಗಳ ಕಾಲ ವೇದಿಕೆ ಮೇಲೆ ನಿಂತು ಹಾಡುತ್ತಿದ್ದರು. ಆಶಾ ಭೋಸ್ಲೆ ಬಹಳ ಚೆನ್ನಾಗಿ ಅಡುಗೆ ಸಹ ಮಾಡುತ್ತಿದ್ದರು. ಅದರಲ್ಲೂ ಕಪೂರ್ ಕುಟುಂಬಕ್ಕೆ ಆಶಾ ಮಾಡಿದ ಅಡುಗೆಗಳೆಂದರೆ ಬಹಳ ಪ್ರೀತಿ ಇತ್ತಂತೆ. ಮುಂದೆ ‘ಆಶಾ‘ಸ್’ ಹೆಸರಿನ ರೆಸ್ಟೊರೆಂಟ್ ಚೇನ್ ಅನ್ನು ಸಹ ಆಶಾ ಅವರು ತೆರೆದರು, ದುಬೈ, ಕುವೈಟ್ ಇನ್ನೂ ಹಲವು ಕಡೆ ಸುಮಾರು 15ಕ್ಕೂ ಹೆಚ್ಚು ಬ್ರ್ಯಾಂಚ್​​ಗಳು ಇವೆ.

ಆಶಾ ಅವರ ಗಾಯನಕ್ಕೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಎರಡು ರಾಷ್ಟ್ರಪ್ರಶಸ್ತಿ, ಜೀವಮಾನ ಸಾಧನೆ ಸೇರಿ ಸುಮಾರು 10 ಫಿಲಂಫೇರ್ ಪ್ರಶಸ್ತಿ, 17 ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, ಹಲವಾರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಹಲವಾರು ಪ್ರಶಸ್ತಿ, ಗೌರವಗಳು ಅವರಿಗೆ ಸಂದಿವೆ. ಪದ್ಮ ವಿಭೂಷಣ, ಮಹಾರಾಷ್ಟ್ರ ಭೂಷಣ್, ಗ್ರಾಮಿ ಜೀವಮಾನ ಸಾಧನೆ ಪ್ರಶಸ್ತಿ ಇನ್ನೂ ಹಲವಾರು ಗೌರವಗಳು ಅವರಿಗೆ ಲಭಿಸಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB vs RR ಪಂದ್ಯದ ವೇಳೆ ಮೊಬೈಲ್ ಬಳಕೆ: ಹೊಸ ವಿವಾದ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯವು ಒಂದು ಅನಿರೀಕ್ಷಿತ ವಿವಾದಕ್ಕೆ ಸಾಕ್ಷಿಯಾಗಿದೆ. ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಡಗೌಟ್‌ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಘಟನೆಯ ವಿವರ:

ಏಪ್ರಿಲ್ 10, ಶುಕ್ರವಾರದಂದು ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡ ಗುರಿ ಬೆನ್ನಟ್ಟುತ್ತಿದ್ದಾಗ 11ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪಕ್ಕದಲ್ಲಿ ಕುಳಿತು ಮೊಬೈಲ್‌ನಲ್ಲಿ ಏನನ್ನೋ ಟೈಪ್ ಮಾಡುತ್ತಿರುವುದು ಲೈವ್ ಟಿವಿಯಲ್ಲಿ ಪ್ರಸಾರವಾಯಿತು.

ನಿಯಮ ಏನು ಹೇಳುತ್ತದೆ?

ಬಿಸಿಸಿಐನ (BCCI) ಭ್ರಷ್ಟಾಚಾರ ವಿರೋಧಿ ಘಟಕದ (ACSU) ನಿಯಮಗಳ ಪ್ರಕಾರ, ಪಂದ್ಯ ನಡೆಯುವಾಗ ‘ಪ್ಲೇಯರ್ಸ್ ಅ್ಯಂಡ್ ಮ್ಯಾಚ್ ಅಫಿಶಿಯಲ್ಸ್ ಏರಿಯಾ’ (PMOA) ಅಂದರೆ ಡಗೌಟ್ ಮತ್ತು ಮೈದಾನದ ಆಸುಪಾಸಿನಲ್ಲಿ ಮೊಬೈಲ್ ಫೋನ್ ಸೇರಿದಂತೆ ಯಾವುದೇ ಸಂವಹನ ಸಾಧನಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮ್ಯಾನೇಜರ್‌ಗಳಿಗೆ ಲಾಜಿಸ್ಟಿಕ್ಸ್ ಉದ್ದೇಶಗಳಿಗಾಗಿ ಫೋನ್ ಇಟ್ಟುಕೊಳ್ಳಲು ಅನುಮತಿ ಇದೆಯಾದರೂ, ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತ್ರ ಬಳಸಬೇಕು.

ಲಲಿತ್ ಮೋದಿ ಆಕ್ರೋಶ:

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದು ಅಕ್ಷಮ್ಯ ಅಪರಾಧ. ಆ್ಯಂಟಿ-ಕರಪ್ಷನ್ ಅಧಿಕಾರಿಗಳು ಅಲ್ಲಿ ಏನು ಮಾಡುತ್ತಿದ್ದರು?” ಎಂದು ಅವರು ಪ್ರಶ್ನಿಸಿದ್ದಾರೆ.

ಸಂಭವನೀಯ ಕ್ರಮಗಳು:

ಈ ಗಂಭೀರ ನಿಯಮ ಉಲ್ಲಂಘನೆಯ ಬಗ್ಗೆ ಬಿಸಿಸಿಐ ತನಿಖೆ ಆರಂಭಿಸಿದೆ ಎನ್ನಲಾಗುತ್ತಿದೆ. ಒಂದು ವೇಳೆ ತಪ್ಪಿತಸ್ಥರೆಂದು ಸಾಬೀತಾದರೆ…

  • ರೋಮಿ ಭಿಂದರ್ ಅವರಿಗೆ ಭಾರೀ ದಂಡ ವಿಧಿಸಬಹುದು.
  • ಮುಂದಿನ ಕೆಲವು ಪಂದ್ಯಗಳಿಗೆ ಅವರಿಗೆ ನಿಷೇಧ ಹೇರಬಹುದು.
  • ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಎಚ್ಚರಿಕೆ ಅಥವಾ ದಂಡ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2026: ಸತತ ಸೋಲುಗಳಿಂದ ಕಂಗೆಟ್ಟ KKRಗೆ ಸಿಕ್ತು ಗುಡ್ ನ್ಯೂಸ್

ಪಂದ್ಯದ ಫಲಿತಾಂಶ:

ಈ ವಿವಾದದ ನಡುವೆಯೂ ರಾಜಸ್ಥಾನ್ ರಾಯಲ್ಸ್ ತಂಡವು ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. 15 ವರ್ಷದ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 78 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಪ್ರಕರಣವು ಮುಂಬರುವ ದಿನಗಳಲ್ಲಿ ಐಪಿಎಲ್‌ನ ಶಿಸ್ತು ಕ್ರಮಗಳ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

ರಾಜ್ಯದಲ್ಲಿ ಮೂರು ಪ್ರತ್ಯೇಕ ಅಪಘಾತಗಳು: ಇಬ್ಬರಿಗೆ ಗಂಭೀರ ಗಾಯ, ಓರ್ವ ಸಾವು!

ಬೆಂಗಳೂರು, ಏಪ್ರಿಲ್ 12: ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ರಸ್ತೆ ಅಪಘಾತಗಳು (Accidents) ನಡೆದಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಬೆಂಗಳೂರು, ಬಳ್ಳಾರಿ ಮತ್ತು ನೆಲಮಂಗಲದಲ್ಲಿ ಈ ಅಪಘಾತಗಳು ನಡೆದಿದ್ದು, ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಪತ್ನಿಯ ಎದುರೆ ಪ್ರಾಣಬಿಟ್ಟ ಪತಿ!

ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ದುರಂತದಲ್ಲಿ 45 ವರ್ಷದ ಶ್ಯಾಮ್ ದೊರೆ ಮೃತಪಟ್ಟಿದ್ದಾರೆ. ತಮಿಳುನಾಡಿಗೆ ತೆರಳಿ ಹಿಂದಿರುಗಿದ್ದ ಅವರು ಪತ್ನಿ ಜಯಶ್ರೀ ಎದುರೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ ಅಪರಿಚಿತ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು, ಅಲ್ಲೇ ನಿಂತಿದ್ದ ಬ್ಲಡ್ ಬ್ಯಾಂಕ್ ಬಸ್ ಹಾಗೂ ಕಾರಿನ ನಡುವೆ ಸಿಲುಕಿದ ಶ್ಯಾಮ್ ದೊರೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾಟರಾಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ

ಇನ್ನೊಂದೆಡೆ, ಬಳ್ಳಾರಿ ತಾಲೂಕಿನ ಕಾರೇಕಲ್ಲು ಗ್ರಾಮದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸುರೇಶ್ ಮತ್ತು ಶರಣಮ್ಮ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಗಾಯಾಳುಗಳನ್ನು ಟ್ರಾಮಾ ಕೇರ್ ಸೆಂಟರ್‌ಗೆ ಕಳುಹಿಸಿದ್ದಾರೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೆಲಮಂಗಲ ತಾಲೂಕು ಕಚೇರಿ ಎದುರು ಐಶಾರಾಮಿ ಕಾರು ಚಾಲಕ ಪಾರ್ಕಿಂಗ್ ನೆಪದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಸಂಪೂರ್ಣ ಹಾನಿಗೊಳಗಾಗಿದ್ದು, ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link