ಬರೋಬ್ಬರಿ 11 ವರ್ಷದ ಬಳಿಕ ಕರ್ನಾಟಕ (Karnataka) ಕ್ರಿಕೆಟ್ ತಂಡ ರಣಜಿ ಟ್ರೋಫಿ (Ranji Trophy) ಫೈನಲ್ ಪ್ರವೇಶಿಸಿದೆ. ಉತ್ತರಾಖಂಡ(Uttarakhand) ವಿರುದ್ಧದ ಸೆಮಿಫೈನಲ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿದ್ದರಿಂದ ಕರ್ನಾಟಕ ಸುಲಭವಾಗಿ ಫೈನಲ್ ಪ್ರವೇಶಿಸಿದ್ದು, ಫೆಬ್ರವರಿ 24 ರಿಂದ ಹುಬ್ಬಳ್ಳಿಯಲ್ಲಿ ನಡೆಯಲಿರುವ ಫೈನಲ್ (Final) ಪಂದ್ಯದಲ್ಲಿ ಜಮ್ಮು ಕಾಶ್ಮೀರ (Jammu Kashmir) ತಂಡವನ್ನು ಎದುರಿಸಲಿದೆ. ಹೀಗಾಗಿ ಅಂತಿಮ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಟೀಂನಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಸೆಮಿಫೈನಲ್ ಆಡಿದ ತಂಡವೇ ಫೈನಲ್ ನಲ್ಲಿ ಕಣಕ್ಕಿಳಿಯಲಿದೆ.
ಫೈನಲ್ ಮ್ಯಾಚ್ಗೆ ಪ್ರಕಟಿಸಲಾದ 15 ಆಟಗಾರರ ತಂಡವನ್ನು ನೋಡಿದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಲಿಷ್ಠವಾಗಿದೆ. ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟ್ ಬೀಸಲಿದ್ದಾರೆ. ಹೀಗೆ ಸಾಲು ಸಾಲು ದಾಂಡಿಗರು ಇದ್ದಾರೆ.
ಲಕ್ನೋನ ಎಕಾನ ಮೈದಾನದಲ್ಲಿ ಉತ್ತರಾಖಂಡದ ವಿರುದ್ಧದ ಸೆಮೀಸ್ನಲ್ಲಿ ಮೊದಲು ಬ್ಯಾಟಿಂಗ್ಗಿಳಿದ ಕರ್ನಾಟಕ ತಂಡ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿತು. ನಾಯಕ ದೇವದತ್ ಪಡಿಕ್ಕಲ್ ಡಬಲ್ ಸೆಂಚುರಿ ಬಾರಿಸಿದ್ರೆ, ಕೆ.ಎಲ್ ರಾಹುಲ್, ಸ್ಮರಣ್ ರವಿಚಂದ್ರನ್ ಶತಜ ಸಿಡಿಸಿ ಮಿಂಚಿದ್ದರು. ಕೃತಿಕ್ ಕೃಷ್ಣ, ವಿದ್ಯಾದರ್ ಪಾಟೀಲ್ ಆಫ್ ಸೆಂಚುರಿ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಹೀಗೆ ಕರ್ನಾಟಕ ಬ್ಯಾಟ್ಸ್ಮನ್ಗಳು ಫಾರ್ಮ್ನಲ್ಲಿದ್ದು, ಫೈನಲ್ನಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
ಇನ್ನು ಕರ್ನಾಟಕ ಬೌಲಿಂಗ್ ವಿಭಾಗದಲ್ಲೂ ಸಹ ಸ್ಟ್ರಾಂಗ್ ಆಗಿದೆ. ಸೆಮೀಸ್ನಲ್ಲಿ ವಿಧ್ಯಾದರ್ ಪಾಟೀಲ್, ವೈಶಾಕ್ ವಿಜಯ್ ಕುಮಾರ್ ಬಿರುಗಾಳಿಯ ದಾಳಿ ಸಂಘಟಿಸಿದ್ರೆ, ಶ್ರೇಯಸ್ ಗೋಪಾಲ್ ಸ್ಪಿನ್ ಮ್ಯಾಜಿಕ್ ಮಾಡಿದ್ದರು. ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ ಕೂಡ ಬ್ಯಾಟರ್ಸ್ಗೆ ಕಾಟ ಕೊಟ್ಟಿದ್ದರು. ಇದರಿಂದ ಕನ್ನಡಿಗರ ಸಂಘಟಿತ ದಾಳಿಗೆ ಉತ್ತರಾಖಾಂಡ ಉಡೀಸ್ ಆಯ್ತು. ಇದೇ ಪರ್ಫಾಮೆನ್ಸ್ ಫೈನಲ್ನಲ್ಲೂ ತೋರಿದರೆ ಕರ್ನಾಟಕ ಪ್ರಶಸ್ತಿಗೆ ಮುತ್ತಿಕ್ಕುವುದು ಗ್ಯಾರಂಟಿ.
ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಕೆವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್, ವಿಜಯಕುಮಾರ್ ವೈಶಾಕ್.
ಹುಬ್ಬಳ್ಳಿಯಲ್ಲಿ ಫೈನಲ್ ಕದನ
ಈ ಸೀಸನ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಕರ್ನಾಟಕ ತಂಡ ಬರೋಬ್ಬರಿ 11 ವರ್ಷಗಳ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಅತ್ತ ರಣಜಿ ಟ್ರೋಫಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರ ತಂಡ ಫೈನಲ್ಗೆ ಬಂದಿದೆ. ಕರ್ನಾಟಕ ತಂಡ 9ನೇ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ರೆ, ಜಮ್ಮು ಕಾಶ್ಮೀರ ಚೊಚ್ಚಲ ಟ್ರೋಫಿ ಗೆಲುವಿನ ಕನವರಿಕೆಯಲ್ಲಿದೆ. ಹೀಗಾಗಿ ಹುಬ್ಬಳ್ಳಿಯ ರಾಜ್ನಗರ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಕದನ ರೋಚಕತೆ ಪಡೆಯಲಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಪಕ್ಕಾ.
Published On – 6:11 pm, Fri, 20 February 26