All posts by nagaraj11081993

ಜೂನ್​ನಲ್ಲಿ ಬುಧ ಸಂಚಾರದಿಂದ ಅಪರೂಪದ ಸಂಯೋಜನೆ; 12 ರಾಶಿಗಳ ಮೇಲೆ ಪ್ರಭಾವ ಹೇಗಿರಲಿದೆ? – Kannada News

ಬುಧ ಸಂಚಾರದಿಂದ ಅಪರೂಪದ ಸಂಯೋಜನೆImage Credit source: Pinterest

ಜೂನ್ ತಿಂಗಳಿನಲ್ಲಿ ಬುಧನು ಚಂದ್ರ ಮತ್ತು ಶುಕ್ರನ ತ್ರಿಂಶಾಂಶದಲ್ಲಿ ಇರುವುದರಿಂದ, ಈ ತಿಂಗಳು ತಾರ್ಕಿಕ ಆಲೋಚನೆಗಿಂತ ಭಾವನಾತ್ಮಕ ಬುದ್ಧಿವಂತಿಕೆ ಕಲ್ಪನಾ ಶಕ್ತಿ, ಮತ್ತು ಭೌತಿಕ ಸುಖ-ವಿಲಾಸಗಳ ಕಡೆಗೆ ಮನಸ್ಸು ಹೆಚ್ಚು ಹರಿಯುವುದು. ಅದರಲ್ಲಿಯೂ ಚಂದ್ರನ ಅಂಶದಲ್ಲಿಯೇ ಹೆಚ್ಚಿ ಸಮಯವಿರುವ ಕಾರಣ ಅನೇಕ ವೈಪರೀತ್ಯಗಳು ಆಗಲಿವೆ. ಅಪರೂಪದ ಸಂಯೋಜನೆ ಇದಾಗಿರಲಿದೆ.

​ಮೇಷ ರಾಶಿ:

​ಬುಧನ ಈ ಸ್ಥಿತಿಯು ನಿಮಗೆ ಮಿಶ್ರಫಲ ನೀಡಲಿದೆ. ಚಂದ್ರನ ವರ್ಗದ ಪ್ರಭಾವದಿಂದ ಮನಸ್ಸಿನಲ್ಲಿ ಅಸ್ಥಿರತೆ ಇರಬಹುದು. ಕೌಟುಂಬಿಕ ಸುಖ ವೃದ್ಧಿಯಾಗಲಿದೆ. ಆದರೆ ತಾಯಿಯ ಆರೋಗ್ಯದ ಕಡೆ ಗಮನವಿರಲಿ. ಶುಕ್ರನ ತ್ರಿಂಶಾಂಶದ ಪ್ರಭಾವದಿಂದ ಮನೆಗೆ ಹೊಸ ಅಲಂಕಾರಿಕ ವಸ್ತುಗಳ ಖರೀದಿಯಾಗಬಹುದು. ಪ್ರಯಾಣದಿಂದ ಲಾಭವಿದೆ.

​ವೃಷಭ ರಾಶಿ:

ನಿಮ್ಮ ರಾಶ್ಯಾಧಿಪತಿ ಶುಕ್ರನ ತ್ರಿಂಶಾಂಶದಲ್ಲಿ ಬುಧನಿರುವುದು ನಿಮಗೆ ಅನುಕೂಲಕರವಾಗಿದೆ. ಕಲೆ, ಸಾಹಿತ್ಯ ಮತ್ತು ಸಂವಹನ ರಂಗದಲ್ಲಿ ಇರುವವರಿಗೆ ಅತ್ಯುತ್ತಮ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಧನಲಾಭದ ಯೋಗವಿದೆ. ಸಹೋದರ ಮತ್ತು ಸಹೋದರಿಯರೊಂದಿಗೆ ಸೌಹಾರ್ದತೆ ಹೆಚ್ಚಲಿದ್ದು, ಹಳೆಯ ಹೂಡಿಕೆಗಳಿಂದ ಲಾಭ ಸಿಗಲಿದೆ.

ಮಿಥುನ ರಾಶಿ:

ನಿಮ್ಮ ರಾಶ್ಯಾಧಿಪತಿಯಾದ ಬುಧನು ಚಂದ್ರನ ವರ್ಗಗಳಲ್ಲ ಪ್ರಭಾವಿತನಾಗಿರುವುದರಿಂದ ಮಾನಸಿಕವಾಗಿ ಸ್ವಲ್ಪ ಸೂಕ್ಷ್ಮತೆ ಹೆಚ್ಚಿರುತ್ತದೆ. ಮಾತಿನಲ್ಲಿ ಮೃದುತ್ವ ಮತ್ತು ಆಕರ್ಷಣೆ ಇರಲಿದೆ. ಆರ್ಥಿಕವಾಗಿ ಇದು ಉತ್ತಮ ಸಮಯವಾಗಿದ್ದರೂ, ಅನಗತ್ಯ ಖರ್ಚುಗಳಿಗೆ ಆಸ್ಪದ ನೀಡಬೇಡಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದು ಹೋಗಬಹುದು, ತಾಳ್ಮೆಯಿರಲಿ.

ಕರ್ಕಾಟಕ ರಾಶಿ :

ಬುಧನು ನಿಮ್ಮದೇ ರಾಶಿಯ ಬಹುತೇಕ ವರ್ಗಗಳಲ್ಲಿ ಇರುವುದರಿಂದ ನಿಮ್ಮ ಮೇಲೆ ಇದರ ಪ್ರಭಾವ ಅತ್ಯಂತ ಗಾಢವಾಗಿರುತ್ತದೆ. ಬುದ್ಧಿಶಕ್ತಿ ತೀಕ್ಷ್ಣವಾಗಲಿದ್ದರೂ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಸೌಂದರ್ಯ ಮತ್ತು ಐಷಾರಾಮಿ ಜೀವನದ ಕಡೆಗೆ ಒಲವು ಹೆಚ್ಚುತ್ತದೆ. ವ್ಯಾಪಾರದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಇದು ಸಕಾಲ.

ಸಿಂಹ ರಾಶಿ :

​ಬುಧನ ಈ ಸ್ಥಿತಿಯು ನಿಮಗೆ ಹ‌ನ್ನೆರಡನೇ ಮನೆಯ ಪ್ರಭಾವವನ್ನು ಹೆಚ್ಚಿಸಬಹುದು. ಶುಭ ಕಾರ್ಯಗಳಿಗಾಗಿ ಮತ್ತು ಪ್ರಯಾಣಕ್ಕಾಗಿ ವೆಚ್ಚಗಳು ಹೆಚ್ಚಾಗಲಿವೆ. ವಿದೇಶಿ ಸಂಪರ್ಕಗಳಿಂದ ಲಾಭವಾಗುವ ಸಾಧ್ಯತೆ ಇದೆ. ಚಂದ್ರನ ಹೋರೆ ಮತ್ತು ನವಾಂಶದ ಪ್ರಭಾವದಿಂದಾಗಿ ನಿದ್ರಾಹೀನತೆ ಅಥವಾ ಅತಿಯಾದ ಆಲೋಚನೆಗಳು ನಿಮ್ಮನ್ನು ಕಾಡಬಹುದು.

ಕನ್ಯಾ ರಾಶಿ:

ನಿಮ್ಮ ರಾಶ್ಯಾಧಿಪತಿ ಬುಧನಿಗೆ ಚಂದ್ರ ಮತ್ತು ಶುಕ್ರನ ವರ್ಗಗಳ ಸಂಬಂಧ ದೊರೆತಿರುವುದರಿಂದ ಲಾಭ ಸ್ಥಾನ ಬಲಗೊಳ್ಳುತ್ತದೆ. ಆರ್ಥಿಕ ಪ್ರಗತಿ ಉತ್ತಮವಾಗಿರುತ್ತದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದ್ದು, ಮನೋಕಾಮನೆಗಳು ಈಡೇರಲಿವೆ.

ತುಲಾ ರಾಶಿ:

​ಶುಕ್ರನ ತ್ರಿಂಶಾಂಶ ಮತ್ತು ಚಂದ್ರನ ವರ್ಗಗಳು ನಿಮ್ಮ ವೃತ್ತಿ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಸೃಜನಶೀಲ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ಪ್ರಗತಿ ಇದೆ. ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದ್ದು, ಹೊಸ ಜವಾಬ್ದಾರಿಗಳು ಸಿಗಬಹುದು.

ವೃಶ್ಚಿಕ ರಾಶಿ :

ಬುಧನ ಈ ಸ್ಥಿತಿಯು ನಿಮ್ಮ ಭಾಗ್ಯೋದಯಕ್ಕೆ ಕಾರಣವಾಗಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೂರದ ಪ್ರಯಾಣ ಅಥವಾ ಪುಣ್ಯಕ್ಷೇತ್ರ ದರ್ಶನದ ಯೋಗವಿದೆ. ತಂದೆಯವರೊಂದಿಗೆ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಿ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ.

ಧನು ರಾಶಿ :

​ಬುಧನು ಚಂದ್ರನ ವರ್ಗಗಳಲ್ಲಟ್ಟಿರುವುದು ನಿಮಗೆ ಸ್ವಲ್ಪ ಜಾಗರೂಕತೆಯ ಸಂದೇಶವನ್ನು ನೀಡುತ್ತದೆ. ಹಠಾತ್ ಧನಲಾಭದ ಯೋಗವಿದ್ದರೂ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕು. ಚರ್ಮ ಅಥವಾ ಉದರ ಸಂಬಂಧಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸಾಲ ನೀಡುವಾಗ ಅಥವಾ ತೆಗೆದುಕೊಳ್ಳುವಾಗ ಎಚ್ಚರಿಕೆ ಅಗತ್ಯ. ಮಾತು ನಿಯಂತ್ರಣದಲ್ಲಿರಲಿ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಮಕರ ರಾಶಿ:

​ನಿಮ್ಮ ಸಪ್ತಮ ಭಾವದಲ್ಲಿ ಬುಧನ ಈ ವರ್ಗಗಳ ಪ್ರಭಾವ ಹೆಚ್ಚಿರುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗಲಿದೆ. ಸಂಗಾತಿಯ ಹೆಸರಿನಲ್ಲಿ ಮಾಡುವ ವ್ಯವಹಾರಗಳು ಲಾಭ ತರಲಿವೆ. ಹೊಸ ಪಾಲುದಾರಿಕೆ ವ್ಯವಹಾರಕ್ಕೆ ಇದು ಸೂಕ್ತ ಸಮಯ. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚುತ್ತದೆ.

ಕುಂಭ ರಾಶಿ :

ಬುಧನ ಈ ಸ್ಥಿತಿಯು ನಿಮಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯವನ್ನು ತಂದುಕೊಡಲಿದೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಆದರೆ ಚಂದ್ರನ ವರ್ಗಗಳ ಪ್ರಭಾವದಿಂದಾಗಿ ಸಣ್ಣಪುಟ್ಟ ವಿಷಯಗಳಿಗೂ ಆತಂಕ ಪಡುವ ಸ್ವಭಾವ ಹೆಚ್ಚಾಗಬಹುದು. ನೌಕರಿಯಲ್ಲಿರುವವರಿಗೆ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ.

ಮೀನ ರಾಶಿ :

ಬುಧನು ಪಂಚಮ ಸ್ಥಾನದ ಪ್ರಭಾವದಲ್ಲಿರುವುದರಿಂದ ಅತ್ಯಂತ ಶುಭ ಫಲಗಳನ್ನು ನಿರೀಕ್ಷಿಸಬಹುದು. ಕಲ್ಪನಾಶಕ್ತಿ ಮತ್ತು ಸೃಜನಶೀಲತೆ ಅದ್ಭುತವಾಗಿರುತ್ತದೆ. ಲೇಖಕರು, ಶಿಕ್ಷಕರು ಮತ್ತು ಸಲಹೆಗಾರರಿಗೆ ಅತ್ಯಂತ ಲಾಭದಾಯಕ ಸಮಯ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯೋಚಿಸಿ ಮುನ್ನಡೆಯಿರಿ.

​- ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​: ಯಾರಿಗೆಲ್ಲ ಧನ್ಯವಾದ ಹೇಳಿದ್ರು ನೋಡಿ – Kannada News

ಬೆಂಗಳೂರು, ಜೂನ್​​ 03: ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಾ. ಜಿ. ಪರಮೇಶ್ವರ್ ಅವರು, ತಮ್ಮನ್ನು ಈ ಮಹತ್ವದ ಹುದ್ದೆಗೆ ಆಯ್ಕೆ ಮಾಡಿದ ಪಕ್ಷದ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ. ತನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ತಾನು ಆಭಾರಿಯಾಗಿರುವುದಾಗಿ ಡಾ. ಪರಮೇಶ್ವರ್ ತಿಳಿಸಿದ್ದು, ಇದೊಂದು ಸುವರ್ಣಾವಕಾಶ ಎಂದು ಬಣ್ಣಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸೌರವ್ ಗಂಗೂಲಿಗೆ ಬಿಗ್ ಶಾಕ್ ನೀಡಿದ ಪಶ್ಚಿಮ ಬಂಗಾಳ ಸರ್ಕಾರ – Kannada News

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಹೀನಾಯವಾಗಿ ಸೋಲಿಸಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸುವೆಂದು ಅಧಿಕಾರಿ ನೇತೃತ್ವದ ಬಿಜೆಪಿ (BJP) ಸರ್ಕಾರ ತನ್ನ ಕ್ರಾಂತಿ ಕಾರಿ ನಿರ್ಧಾರಗಳ ಮೂಲಕ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಗಳನ್ನು ತರಲಾರಂಭಿಸಿದೆ. ಈಗಾಗಲೇ ಆ ರೀತಿಯ ಕಾರ್ಯಗಳು ಶುರುವಾಗಿವೆ. ಇದೀಗ ಮತ್ತೊಂದು ಕೆಲಸಕ್ಕೆ ಕೈಹಾಕಿರುವ ಸರ್ಕಾರ, ವಿಐಪಿಗಳಿಗೆ (VIP) ನೀಡುತ್ತಿದ್ದ ಭದ್ರತೆಗಳಲ್ಲೂ ಬದಲಾವಣೆಗಳನ್ನು ತಂದಿದೆ. ಆ ಪ್ರಕಾರ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರಿಗೆ ಇಷ್ಟು ದಿನ ನೀಡುತ್ತಿದ್ದ ‘Z’ ಕ್ಯಾಟಗರಿ ಭದ್ರತೆಯನ್ನು ‘Y’ ಕ್ಯಾಟಗರಿಗೆ ಇಳಿಸಲಾಗಿದೆ.

ಗಂಗೂಲಿಗೆ ಬಿಗ್ ಶಾಕ್

ಸೌರವ್ ಗಂಗೂಲಿಗೆ ದೇಶದಲ್ಲಿ ಮಾತ್ರವಲ್ಲದೆ ಪಶ್ಚಿಮ ಬಂಗಾಳದಲ್ಲೂ ಅಪಾರ ಕ್ರೇಜ್ ಇದೆ. ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಬಂಗಾಳ ಸರ್ಕಾರವು 2023 ರಲ್ಲಿ ಗಂಗೂಲಿಗೆ ನೀಡುತ್ತಿದ್ದ ಭದ್ರತೆಯನ್ನು ‘Y’ ಕ್ಯಾಟಗರಿಯಿಂದ ‘Z’ ಕ್ಯಾಟಗರಿಗೆ ಏರಿಸಿತ್ತು. ಇದೀಗ ಬಂಗಾಳದಲ್ಲಿ ನೂತನ ಸರ್ಕಾರ ಬಂದ ಬಳಿಕ ರಾಜ್ಯದ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು ನಡೆಸಿದ ವಿಐಪಿ ಭದ್ರತೆ ಪರಿಶೀಲನೆಯಲ್ಲಿ ಗಂಗೂಲಿಗೆ ‘Z’ ಕ್ಯಾಟಗರಿಯ ಭದ್ರತೆ ಅಗತ್ಯವಿಲ್ಲ ಎಂಬುದು ತಿಳಿದು ಬಂದಿದೆ. ಗಂಗೂಲಿಗೆ ಯಾವುದೇ ನೇರ ಬೆದರಿಕೆ ಇಲ್ಲದ ಕಾರಣ ಭದ್ರತೆಯನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.

‘Y’ ಕ್ಯಾಟಗರಿ ಭದ್ರತೆ ಹೇಗಿರಲಿದೆ?

ಇಲ್ಲಿಯವರೆಗೆ ‘Z’ ಕ್ಯಾಟಗರಿಯ ಭದ್ರತೆಯಲ್ಲಿದ್ದ ಗಂಗೂಲಿ ಅವರನ್ನು ಸುಮಾರು 8 ರಿಂದ 10 ವಿಶೇಷ ಸಶಸ್ತ್ರ ಪೊಲೀಸರು ನಿರಂತರವಾಗಿ ಕಾವಲು ಕಾಯುತ್ತಿದ್ದರು. ಕೋಲ್ಕತ್ತಾದ ಬಹಾಲಾದಲ್ಲಿರುವ ಅವರ ನಿವಾಸದಲ್ಲಿದ್ದಾಗಲೆಲ್ಲಾ ಅವರನ್ನು ಸಶಸ್ತ್ರ ಪಡೆಗಳು ಗಸ್ತು ತಿರುಗುತ್ತಿದ್ದವು. ಇದಲ್ಲದೆ, ಅವರು ರಾಜ್ಯದಲ್ಲಿ ಎಲ್ಲಿಗೆ ಪ್ರಯಾಣಿಸಿದರೂ ವಿಶೇಷ ಬೆಂಗಾವಲು ವಾಹನಗಳು ಅವರೊಂದಿಗೆ ಇರುತ್ತಿದ್ದವು. ಇದೀಗ ‘Y’ ಕ್ಯಾಟಗರಿ ಭದ್ರತೆ ಅಡಿಯಲ್ಲಿ, ವಿಶೇಷ ಶಾಖೆಯ ಮೂವರು ಪೊಲೀಸರು ಗಂಗೂಲಿ ಅವರ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಅಲ್ಲದೆ, ಅವರ ನಿವಾಸದಲ್ಲಿ ಇನ್ನೂ ಮೂವರು ಸಿಬ್ಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕ್ರಿಕೆಟ್ ಜೊತೆಗೆ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಕ್ಕೂ ಅಂತ್ಯ ಹಾಡಬೇಕು; ಸೌರವ್ ಗಂಗೂಲಿ

ಬಂಗಾಳ ಸರ್ಕಾರ ನೀಡಿದ ಸ್ಪಷ್ಟನೆ ಏನು?

ಈ ಭದ್ರತಾ ಕಡಿತವು ಸೌರವ್ ಗಂಗೂಲಿಗೆ ಮಾತ್ರವಲ್ಲ, ರಾಜ್ಯಾದ ಹಲವು ವಿಐಪಿಗಳಿಗೆ ನೀಡುತ್ತಿದ್ದ ಭದ್ರತೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬಂಗಾಳ ಸರ್ಕಾರದ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೊಸ ಸರ್ಕಾರವು ವ್ಯಕ್ತಿಯ ಅಧಿಕೃತ ಸ್ಥಾನಮಾನ, ಪ್ರಸ್ತುತ ಸಾಂವಿಧಾನಿಕ ಸ್ಥಾನಮಾನ ಮತ್ತು ಅವರು ಎದುರಿಸುತ್ತಿರುವ ಬೆದರಿಕೆಯ ಮಟ್ಟವನ್ನು ಆಧರಿಸಿ ಭದ್ರತಾ ವ್ಯಾಪ್ತಿಯನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಗಂಗೂಲಿ ಪ್ರಸ್ತುತ ಯಾವುದೇ ಸಕ್ರಿಯ ಅಧಿಕೃತ ಹುದ್ದೆಗಳನ್ನು ಹೊಂದಿಲ್ಲದ ಕಾರಣ ಭದ್ರತಾ ವ್ಯವಸ್ಥೆಗಳನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.

Source link

ಆನ್‌ಲೈನ್ ಜೂಜಿಗೆ ಬಿತ್ತು ಬ್ರೇಕ್: 127 ಹೋಸ್ಟಿಂಗ್ ಏಜೆನ್ಸಿಗಳ ಸಹಾಯ ಕೋರಿದ ಕರ್ನಾಟಕ ಸೈಬರ್ ಪೊಲೀಸರು! – Kannada News

ಬೆಂಗಳೂರು, ಜೂನ್ 03: ರಾಜ್ಯದಲ್ಲಿ ದಿನೇ ದಿನೇ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಅಕ್ರಮ ಆನ್‌ಲೈನ್ ಜೂಜು (Online Gambling) ಮತ್ತು ಬೆಟ್ಟಿಂಗ್ ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಕರ್ನಾಟಕ ಸೈಬರ್ ಕಮಾಂಡ್ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಇಂಟರ್ನೆಟ್‌ನಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ನೂರಾರು ಜೂಜಿನ ವೆಬ್‌ಸೈಟ್‌ಗಳು ಹಾಗೂ ಆ್ಯಪ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು (Block) ಮತ್ತು ಅವುಗಳ ಡಿಜಿಟಲ್ ಹೆಜ್ಜೆಗುರುತುಗಳನ್ನು ಅಳಿಸಿಹಾಕಲು ದೇಶ ಹಾಗೂ ವಿದೇಶಗಳ ಒಟ್ಟು 127 ಪ್ರಮುಖ ವೆಬ್ ಹೋಸ್ಟಿಂಗ್ ಏಜೆನ್ಸಿಗಳ ಅಧಿಕೃತ ನೆರವನ್ನು ಕರ್ನಾಟಕ ಸೈಬರ್ ಕಮಾಂಡ್ ಮತ್ತು ಇನ್ಫಾರ್ಮೇಶನ್ ಸೆಕ್ಯುರಿಟಿ ಡಿವಿಷನ್ (CCISD) ಕೋರಿದೆ.

ಮುಖ್ಯಾಂಶಗಳು

  • ಅಕ್ರಮ ಆನ್‌ಲೈನ್ ಜೂಜು ತಡೆಯಲು ಕರ್ನಾಟಕ ಸೈಬರ್ ಕಮಾಂಡ್ ಭರ್ಜರಿ ಕಾರ್ಯಾಚರಣೆ.
  • ಕಾನೂನುಬಾಹಿರ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು 127 ಹೋಸ್ಟಿಂಗ್ ಏಜೆನ್ಸಿಗಳ ಸಹಾಯಕ್ಕೆ ಕೋರಿಕೆ.
  • ಸಾರ್ವಜನಿಕರ ಹಣ ವಂಚಿಸುವ ಬೆಟ್ಟಿಂಗ್ ಆ್ಯಪ್‌ಗಳ ಸರ್ವರ್‌ಗಳನ್ನೇ ಸಂಪೂರ್ಣ ಮುಚ್ಚಿಸಲು ಕ್ರಮ.

ಹೋಸ್ಟಿಂಗ್ ಏಜೆನ್ಸಿಗಳಿಗೆ ಪತ್ರ

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಹಣವನ್ನು ದೋಚುತ್ತಿರುವ ಇಂತಹ ವಂಚಕ ಜೂಜಿನ ಅಪ್ಲಿಕೇಶನ್‌ಗಳ ಸರ್ವರ್‌ಗಳು ಹೆಚ್ಚಾಗಿ ವಿದೇಶಿ ಅಥವಾ ಖಾಸಗಿ ಹೋಸ್ಟಿಂಗ್ ಸಂಸ್ಥೆಗಳ ಸರ್ವರ್‌ಗಳಲ್ಲಿ ಇಂಟರ್ನೆಟ್ ಜಾಗವನ್ನು ಪಡೆದುಕೊಂಡಿರುತ್ತವೆ. ಇದರಿಂದಾಗಿ ಕೇವಲ ಲಿಂಕ್‌ಗಳನ್ನು ಬ್ಲಾಕ್ ಮಾಡಿದರೆ ಸಾಲದು, ಅವುಗಳ ಮೂಲ ಬೇರನ್ನೇ ಕತ್ತರಿಸಬೇಕಾದ ಅಗತ್ಯವಿದೆ. ಇದನ್ನರಿತ ಸೈಬರ್ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆಯಾ ವೆಬ್‌ಸೈಟ್‌ಗಳಿಗೆ ಸರ್ವರ್ ಬ್ಯಾಕಪ್ ನೀಡುತ್ತಿರುವ 127 ಹೋಸ್ಟಿಂಗ್ ಏಜೆನ್ಸಿಗಳನ್ನು ಗುರುತಿಸಿ, ಅವುಗಳಿಗೆ ನೋಟಿಸ್ ಮಾದರಿಯ ಅಧಿಕೃತ ಪತ್ರಗಳನ್ನು ಬರೆದಿದ್ದಾರೆ. ಈ ಸಂಸ್ಥೆಗಳ ಸಹಯೋಗದೊಂದಿಗೆ ಅಕ್ರಮ ಸೈಟ್‌ಗಳನ್ನು ಸರ್ವರ್ ಮಟ್ಟದಲ್ಲೇ ಡಿಲೀಟ್ ಮಾಡಿಸುವುದು ಸೈಬರ್ ಕಮಾಂಡ್‌ನ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಪೊಲೀಸರ ಕಾರ್ಯಾಚರಣೆ: 8,750 ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಬ್ಲಾಕ್!

ಹಿರಿಯ ಪೊಲೀಸ್ ಅಧಿಕಾರಿಗಳ ವಿನಂತಿ

ಇಂಟರ್ನೆಟ್ ಸೇವಾ ಪೂರೈಕೆದಾರರು (ISPs) ಹಾಗೂ ಈ ಗ್ಲೋಬಲ್ ಹೋಸ್ಟಿಂಗ್ ಸಂಸ್ಥೆಗಳು ಒಟ್ಟಾಗಿ ಕೈಜೋಡಿಸಿದರೆ, ರಾಜ್ಯದ ಸಾರ್ವಜನಿಕರಿಗೆ ಇಂತಹ ಯಾವುದೇ ಬೆಟ್ಟಿಂಗ್ ಸೈಟ್‌ಗಳು ಸಿಗದಂತೆ ಸಂಪೂರ್ಣವಾಗಿ ನಿಯಂತ್ರಿಸಬಹುದು. ಹಣದ ಆಸೆಗೆ ಬಿದ್ದು ಇಂತಹ ಅನಧಿಕೃತ ಹಾಗೂ ನಕಲಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಜನರಲ್ಲಿ ವಿನಂತಿಸಿದ್ದಾರೆ. ಅಲ್ಲದೆ, ಇಂಟರ್ನೆಟ್‌ನಲ್ಲಿ ಯಾವುದೇ ಸಂಶಯಾಸ್ಪದ ಬೆಟ್ಟಿಂಗ್ ಅಥವಾ ಜೂಜಿನ ಜಾಹೀರಾತುಗಳು, ಲಿಂಕ್‌ಗಳು ಕಂಡುಬಂದಲ್ಲಿ ತಕ್ಷಣವೇ ಸೈಬರ್ ಕ್ರೈಮ್ ವಿಭಾಗಕ್ಕೆ ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಡಿಜಿಟಲ್ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಇಟ್ಟಿರುವ ಈ ಮಹತ್ವದ ಹೆಜ್ಜೆ ಸದ್ಯ ಸೈಬರ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shiva Puja: ಶಿವಪೂಜೆಯಲ್ಲಿ ಶಂಖ ಏಕೆ ಬಳಸಬಾರದು? ಇದರ ಹಿಂದಿನ ಪೌರಾಣಿಕ ಮತ್ತು ಆಧ್ಯಾತ್ಮಿಕ ರಹಸ್ಯ ಇಲ್ಲಿ ತಿಳಿಯಿರಿ – Kannada News

ಹಿಂದೂ ಧರ್ಮದಲ್ಲಿ ಶಂಖದ ಧ್ವನಿಯನ್ನು ಅತ್ಯಂತ ಮಂಗಳಕರ ಮತ್ತು ಧನಾತ್ಮಕ ಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದರೆ, ಶ್ರಾವಣ ಮಾಸವಿರಲಿ ಅಥವಾ ಮಹಾಶಿವರಾತ್ರಿಯಿರಲಿ, ಶಿವನಿಗೆ ಜಲಾಭಿಷೇಕ ಮಾಡುವಾಗ ಅಥವಾ ಪೂಜಿಸುವಾಗ ಶಂಖವನ್ನು ಬಳಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.

ಪೌರಾಣಿಕ ಕಾರಣ:

ಶಿವಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಹಿಂದೆ ‘ಶಂಖಚೂಡ’ ಎಂಬ ಪ್ರಬಲ ರಾಕ್ಷಸನಿದ್ದನು. ಆತನ ಕಾಟದಿಂದ ದೇವತೆಗಳೆಲ್ಲರೂ ತತ್ತರಿಸಿದಾಗ, ಭಗವಾನ್ ಶಿವನು ತನ್ನ ತ್ರಿಶೂಲದಿಂದ ಆತನನ್ನು ಸಂಹರಿಸುತ್ತಾನೆ. ಶಂಖಚೂಡನ ದೇಹವು ಭಸ್ಮವಾಗಿ ಸಮುದ್ರದಲ್ಲಿ ಬಿದ್ದಾಗ, ಅದರಿಂದ ‘ಶಂಖ’ ಉದ್ಭವವಾಯಿತು ಎಂದು ಹೇಳಲಾಗುತ್ತದೆ.

ಕೆಲವು ಧರ್ಮಗ್ರಂಥಗಳಲ್ಲಿ ಶಂಖವನ್ನು “ಮೃತಜ” (ಮೃತದೇಹದಿಂದ ಹುಟ್ಟಿದ್ದು) ಎಂದು ಕರೆಯಲಾಗಿದೆ. ಶಿವನು ತಾನು ವಧಿಸಿದ ರಾಕ್ಷಸನ ಭಾಗದಿಂದ ಉತ್ಪನ್ನವಾದ ವಸ್ತುವನ್ನು ಪೂಜೆಯಲ್ಲಿ ಸ್ವೀಕರಿಸುವುದಿಲ್ಲ. ಆದ್ದರಿಂದಲೇ, ಶಿವಲಿಂಗಕ್ಕೆ ಶಂಖದಿಂದ ನೀರು ಅಥವಾ ಹಾಲನ್ನು ಅರ್ಪಿಸುವುದು ನಿಷಿದ್ಧವಾಗಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಶಂಖವು ಶ್ರೀಹರಿಯ ಆಯುಧ ಮತ್ತು ವೈಷ್ಣವ ಸಂಕೇತ:

ಶಂಖವು ಲಕ್ಷ್ಮಿ ದೇವಿಯ ಸೋದರ (ಸಮುದ್ರ ಮಂಥನದಿಂದ ಜನಿಸಿದ್ದು) ಹಾಗೂ ಭಗವಾನ್ ವಿಷ್ಣುವಿನ ಪರಮ ಪ್ರಿಯವಾದ ಆಯುಧವಾಗಿದೆ. ಇದು ಮುಖ್ಯವಾಗಿ ವೈಷ್ಣವ ಸಂಪ್ರದಾಯ ಮತ್ತು ಲೌಕಿಕ ಸಮೃದ್ಧಿಗೆ ಸಂಬಂಧಿಸಿದ್ದಾಗಿದೆ. ಶಂಖದ ಧ್ವನಿಯು ವಿಜಯ, ವೈಭವ ಮತ್ತು ಐಶ್ವರ್ಯವನ್ನು ಪ್ರತಿನಿಧಿಸುತ್ತದೆ. ಆದರೆ, ಶಿವನು ಎಲ್ಲವನ್ನೂ ತ್ಯಜಿಸಿದ ವೈರಾಗ್ಯ ಮೂರ್ತಿ.

ಶಿವನು ನಿರ್ಲಿಪ್ತತೆಯ ಹಾಗೂ ಮೌನದ ದೇವರು:

ಶ್ರೀಹರಿ ವಿಷ್ಣುವು ಜಗತ್ತಿನ ಪಾಲಕನಾಗಿದ್ದು, ಆತನ ಆರಾಧನೆಯು ವೈಭವದಿಂದ ಕೂಡಿರುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ, ಶಿವನು ಕೈಲಾಸದಲ್ಲಿ ಅಥವಾ ಶ್ಮಶಾನದಲ್ಲಿ ವಾಸಿಸುವ ತಪಸ್ವಿ. ಶಿವನನ್ನು ಯೋಗ, ಧ್ಯಾನ, ಮೌನ ಮತ್ತು ಏಕಾಗ್ರತೆಯ ಮೂಲಕ ಪೂಜಿಸಲಾಗುತ್ತದೆ. ಶಂಖದ ತೀವ್ರವಾದ ಧ್ವನಿಯು ಧ್ಯಾನಸ್ಥನಾಗಿರುವ ಶಿವನ ಮೌನಕ್ಕೆ ಭಂಗ ತರುತ್ತದೆ ಎಂಬ ನಂಬಿಕೆಯಿದೆ.

ಶಿವನ ಆರಾಧನೆಯಲ್ಲಿ ಬಾಹ್ಯ ಅಬ್ಬರಕ್ಕಿಂತ ಆಂತರಿಕ ಶಾಂತಿ ಮತ್ತು ಮೌನ ಧ್ಯಾನಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಮೌನವಾಗಿ ಮಾಡುವ ಶಿವಸ್ಮರಣೆಯು ಕೋಟಿ ಪಟ್ಟು ಹೆಚ್ಚು ಫಲಪ್ರದ ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪದ್ದಿಗೆ ಈ ಹೀರೋನೇ ನನ್ನ ಮೊದಲ ಆಯ್ಕೆ’; ಮೌನ ಮುರಿದ ನಿರ್ದೇಶಕ – Kannada News

ಜೂನಿಯರ್ ಎನ್​​ಟಿಆರ್​-ರಾಮ್ ಚರಣ್

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ (Peddi Movie) ಜೂನ್ 4ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ತೆಲುಗು ಭಾಷೆಯ ಜೊತೆಗೆ ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ರಾಮ್ ಚರಣ್ ಹೀರೋ. ಆದರೆ, ಈ ಚಿತ್ರದ ಕಥೆಯನ್ನು ಮೊದಲು ಜೂನಿಯರ್ ಎನ್​​ಟಿಆರ್​​ಗಾಗಿ ಸಿದ್ಧಪಡಿಸಲಾಗಿತ್ತು ಎಂಬ ಮಾತಿದೆ. ಈ ವಿಷಯದ ಕುರಿತು ಬುಚ್ಚಿ ಬಾಬು ಸನಾ ಅವರು ಮಾತನಾಡಿದ್ದಾರೆ.

‘ಪೆದ್ದಿ’ ಸಿನಿಮಾ ಪಕ್ಕಾ ಕ್ರೀಡಾಧಾರಿತ ಚಿತ್ರ. ಸಿನಿಮಾದ ಟ್ರೇಲರ್​​ನಲ್ಲಿ ತೋರಿಸಿದಂತ ರಾಮ್ ಚರಣ್ ಅವರು ಹಲವು ರೀತಿಯ ಕ್ರೀಡೆಗಳನ್ನು ಆಡುತ್ತಾರೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಕೂಡ ನಟಿಸಿದ್ದಾರೆ. ಈ ಸಿನಿಮಾದ ಕಥೆಯನ್ನು ಜೂನಿಯರ್ ಎನ್​​ಟಿಆರ್ ಅವರನ್ನು ಇಟ್ಟುಕೊಂಡು ಮಾಡಲಾಗಿತ್ತು ಎಂಬ ವರದಿ ಇದೆ. ಆದರೆ, ಕಾಲ್​​ಶೀಟ್ ಸಿಗದ ಕಾರಣ ರಾಮ್ ಚರಣ್ ಮೊರೆ ಹೋಗಬೇಕಾಯಿತು ಎಂದು ವರದಿ ಆಗಿತ್ತು.

ಆದರೆ, ಇದನ್ನು ಬುಚ್ಚಿ ಬಾಬು ಸನಾ ಅವರು ಅಲ್ಲಗಳೆದಿದ್ದಾರೆ. ಸಂಪೂರ್ಣವಾಗಿ ರಾಮ್ ಚರಣ್ ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಕಥೆ ಇದಾಗಿದೆ. ಜೂನಿಯರ್ ಎನ್​​​ಟಿಆರ್ ಸಿಕ್ಕಿಲ್ಲ, ಅದಕ್ಕೆ ರಾಮ್ ಚರಣ್​​ಗೆ ಕಥೆ ಹೇಳಬೇಕಾಯಿತು ಎಂಬುದೆಲ್ಲ ಸುಳ್ಳು ಎಂಬುದನ್ನು ಬುಚ್ಚಿ ಬಾಬು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ಗೆ ಹೆದರಿದ ವರುಣ್ ಧವನ್ ಸಿನಿಮಾ? ಮೊದಲ ದಿನವೇ ಟಿಕೆಟ್​ ಮೇಲೆ ಶೆ.50 ಆಫರ್

‘ಪೆದ್ದಿ’ ಸಿನಿಮಾಗೆ ಮತ್ತೊಂದು ಟ್ರೇಲರ್ ಬರಲಿದೆ ಎಂದು ಕೂಡ ವರದಿ ಆಗಿತ್ತು. ಆದರೆ, ನಿರ್ಮಾಪಕರಿಗೆ ಸದ್ಯಕ್ಕಂತೂ ಆ ರೀತಿಯ ಯೋಜನೆ ಇಲ್ಲ. ಈ ಚಿತ್ರದಲ್ಲಿ ದಿವ್ಯೇಂದು ಶರ್ಮ, ಜಾನ್ವಿ ಕಪೂರ್, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ತೆಲುಗು ಜೊತೆಗೆ ಹಿಂದಿ ಭಾಷೆಯಲ್ಲೂ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಹಿಂದಿ ಭಾಷೆಯ ಸಿನಿಮಾಗಳಿಗೂ ‘ಪೆದ್ದಿ’ ಸ್ಪರ್ಧೆ ನೀಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:40 pm, Wed, 3 June 26

Source link

ಕರ್ನಾಟಕ ಹೈಕೋರ್ಟ್​​ಗೆ ಜಡ್ಜ್​​ಗಳಾಗಿ 6 ವಕೀಲರ ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು – Kannada News

ಕರ್ನಾಟಕ ಹೈಕೋರ್ಟ್​​Image Credit source: dinamalar.com

ನವದೆಹಲಿ/ ಬೆಂಗಳೂರು, ಜೂನ್​​ 03: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಆರು ವಕೀಲರನ್ನು ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಜೂನ್ 2ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,  ಶಿಫಾರಸ್ಸು ಮಾಡಿದ ಆರು ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, ಕರ್ನಾಟಕ ಹೈಕೋರ್ಟ್‌ನ ಕಾರ್ಯನಿರ್ವಹಣಾ ನ್ಯಾಯಮೂರ್ತಿಗಳ ಸಂಖ್ಯೆ 54ಕ್ಕೆ ಏರಿಕೆಯಾಗಲಿದೆ.

ಶಿಫಾರಸ್ಸಿನಲ್ಲಿ ಇರುವ ಹೆಸರುಗಳು ಯಾವವು?

  1. ರಾಘವೇಂದ್ರ ಸೀತಾರಾಂ ಶ್ರೀವತ್ಸ: ಭಾರತದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ದೇಶಾದ್ಯಂತ ಖ್ಯಾತಿ ಪಡೆದಿದ್ದಾರೆ.
  2. ಹೇಮಾ ಕುಲಕರ್ಣಿ: ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ದೀರ್ಘಕಾಲ ವಕಾಲತ್ತು ನಡೆಸಿರುವ ಇವರು, ಕಾನೂನು ಕ್ಷೇತ್ರದಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ.
  3. ಸುಬ್ರಮಣ್ಯ ರಂಗರಾವ್: ಹಿರಿಯ ವಕೀಲರು
  4. ತಡಗವಾಡಿ ಪ್ರಕಾಶ್ ವಿವೇಕಾನಂದ: ಕರ್ನಾಟಕ ಹೈಕೋರ್ಟ್​​ನ ವಕೀಲರಾಗಿ ಖ್ಯಾತಿ.
  5. ಬಕ್ಕೇಶ್ವರ ಪ್ರಮೋದ್: ಬೆಂಗಳೂರಿನ ಖ್ಯಾತ ಕಾನೂನು ತಜ್ಞ ಹಾಗೂ ಹಿರಿಯ ವಕೀಲರು.
  6. ಹೊಂಬೆಗೌಡ ಶಾಂತಿ ಭೂಷಣ್: ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಕಾನೂನು ತಜ್ಞರಾಗಿದ್ದು, ಈ ಹಿಂದೆ ಕರ್ನಾಟಕ ಹೈಕೋರ್ಟ್‌ಗೆ ಭಾರತ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: “ಕೈ-ಕಾಲು ಕತ್ತರಿಸಿದಾಗಷ್ಟೇ ಜನಕ್ಕೆ ಕಾನೂನಿನ ಭಯ ಬರತ್ತೆ”; ಲೈಂಗಿಕ ದೌರ್ಜನ್ಯ ಆರೋಪಿ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಆಕ್ರೋಶ!

ಇತ್ತೀಚೆಗೆ ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಅನುಮೋದನೆ ನೀಡಿತ್ತು. ಇದರೊಂದಿಗೆ ಹೈಕೋರ್ಟ್‌ನ ಕಾರ್ಯನಿರ್ವಹಣಾ ನ್ಯಾಯಮೂರ್ತಿಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದ್ದು, ಮಂಜೂರಾದ ಒಟ್ಟು 62 ಹುದ್ದೆಗಳ ಪೈಕಿ ಇನ್ನೂ ಹಲವು ಹುದ್ದೆಗಳು ಖಾಲಿಯಾಗಿವೆ ಎಂದು ಬಾರ್​​ ಆ್ಯಂಡ್​​ ಬೆಂಚ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:29 pm, Wed, 3 June 26

Source link

ಅನ್ನ ನೀರಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರೊಳಗೆ ಲಾಕ್ ಆಗಿದ್ದ ಶ್ವಾನವನ್ನು ರಕ್ಷಿಸಿದ ಜನ – Kannada News

ಗುವಾಹಟಿ, ಜೂನ್ 03: ನಾಯಿ(Dog)ಯೊಂದು ಅನ್ನ, ನೀರಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಾಕ್​ ಮಾಡಿದ್ದ ಕಾರಿನೊಳಗೆ ಕುಳಿತು ಕಷ್ಟ ಎದುರಿಸಿರುವ ವಿಡಿಯೋ ವೈರಲ್ ಆಗಿದೆ. ಕಾರಿನೊಳಗೆ ನಾಯಿಯನ್ನು ಇರಿಸಿ ಮಾಲೀಕ ಲಾಕ್ ಮಾಡಿಕೊಂಡು ಮಾಡಿಕೊಂಡು ಹೋಗಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅದು ಕಾರಿನಲ್ಲಿಯೇ ಇತ್ತು. ತಾಪಮಾನ ಏರಿಕೆಯಾಗುತ್ತಿದ್ದಂತೆ ಉಸಿರುಗಟ್ಟುವ ಸ್ಥಿತಿ ಉದ್ಭವವಾಗಿತ್ತು. ಕೂಡಲೇ ಸ್ಥಳೀಯರು ನಾಯಿಯನ್ನು ರಕ್ಷಿಸಿದ್ದಾರೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಬೆಳಗ್ಗೆಯಿಂದಲೇ ನಾಯಿ ಕಾರೊಳಗೆ ಇತ್ತು. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗಿ ಕಾರಿನೊಳಗಿನ ತಾಪಮಾನ ಅಪಾಯಕಾರಿ ಮಟ್ಟಕ್ಕೆ ತಲುಪಿತ್ತು. ನಾಯಿಯು ಗಾಳಿ ಇಲ್ಲದೆ ದಣಿದು, ತೀವ್ರ ತೊಂದರೆಯಲ್ಲಿರುವುದನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಎಚ್ಚೆತ್ತುಕೊಂಡರು. ನಾಯಿಯ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಾದಂತೆ, ಇಡೀ ನೆರೆಹೊರೆಯ ಜನರು ಕಾರಿನ ಸುತ್ತಲೂ ಒಟ್ಟುಗೂಡಿ ಅದನ್ನು ಹೊರತರುವ ಪ್ಲ್ಯಾನ್ ಮಾಡಿದ್ದಾರೆ.

ಯಶಸ್ವಿ ರಕ್ಷಣಾ ಕಾರ್ಯಾಚರಣೆ ಮತ್ತು ಆರೈಕೆ
ನಿವಾಸಿಗಳು ಮತ್ತು ಪ್ರಾಣಿ ಪ್ರೇಮಿಗಳು ಒಟ್ಟಾಗಿ ಸೇರಿ ಮಧ್ಯಾಹ್ನ 1.30 ರ ಸುಮಾರಿಗೆ ಕಾರಿನ ಲಾಕ್ ತೆಗೆದು ನಾಯಿಯನ್ನು ಸುರಕ್ಷಿತವಾಗಿ ಹೊರತೆಗೆದರು. ಪ್ರಾಣಿ ಕಲ್ಯಾಣ ಸಂಸ್ಥೆಯ ಆಸರೆ: ರಕ್ಷಣೆ ಮಾಡಿದ ತಕ್ಷಣವೇ ನಾಯಿಗೆ ನೀರು ಮತ್ತು ಪ್ರಥಮ ಚಿಕಿತ್ಸೆ ನೀಡಿ, ಅತ್ಯಂತ ಜವಾಬ್ದಾರಿಯುತವಾಗಿ ಸ್ವಯಂಸೇವಾ ಪ್ರಾಣಿ ಕಲ್ಯಾಣ ಸಂಸ್ಥೆಗೆ  ಹಸ್ತಾಂತರಿಸಲಾಯಿತು.

ಮತ್ತಷ್ಟು ಓದಿ: Video: ಹೈದರಾಬಾದ್ ಏರ್​ಪೋರ್ಟ್​ನ ವಿಐಪಿ ಲಾಂಜ್​ಗೆ ನುಗ್ಗಿದ ಬೀದಿ ನಾಯಿ

ಪ್ರಸ್ತುತ ಪ್ರಾಣಿ ಕಲ್ಯಾಣ ಸಂಸ್ಥೆಯು ನಾಯಿಯನ್ನು ಆರೈಕೆ ಮಾಡುತ್ತಿದ್ದು, ನುರಿತ ವೈದ್ಯರ ಮೇಲ್ವಿಚಾರಣೆಯಲ್ಲಿ ಅದಕ್ಕೆ ಅಗತ್ಯವಿರುವ ಪೋಷಣೆ ಮತ್ತು ಚೇತರಿಕೆ ಬೆಂಬಲವನ್ನು ನೀಡಲಾಗುತ್ತಿದೆ. ನಾಯಿ ಈಗ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ವಯಂಸೇವಕರು ತಿಳಿಸಿದ್ದಾರೆ.

ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನೊಳಗಿನ ತಾಪಮಾನ ಕೆಲವೇ ನಿಮಿಷಗಳಲ್ಲಿ ದುಪ್ಪಟ್ಟಾಗುತ್ತದೆ. ಇದು ಸಾಕುಪ್ರಾಣಿಗಳಿಗೆ ಉಸಿರುಗಟ್ಟುವಿಕೆ ಮತ್ತು ಶಾಖದ ಹೊಡೆತವನ್ನು ಉಂಟುಮಾಡಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಮೂಕಪ್ರಾಣಿಗಳನ್ನು ಕಾರಿನೊಳಗೆ ಒಂಟಿಯಾಗಿ ಬಿಡಬೇಡಿ ಎಂದು ಪ್ರಾಣಿ ಕಲ್ಯಾಣ ವಕೀಲರು ಜಾಗೃತಿ ಮೂಡಿಸುತ್ತಿದ್ದಾರೆ. ದಿಸ್ಪುರ್ ಜನರ ಈ ಶ್ಲಾಘನೀಯ ಕಾರುಣ್ಯದ ಕೃತ್ಯವು ಕೇವಲ ಒಂದು ಅಮೂಲ್ಯ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೆ, ಪ್ರಾಣಿಗಳ ಸುರಕ್ಷತೆಯ ಕುರಿತು ಸಮಾಜದಲ್ಲಿ ಒಂದು ಉತ್ತಮ ಸಂದೇಶವನ್ನು ಸಾರಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ – Kannada News

ನವದೆಹಲಿ, ಜೂನ್ 3: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಸುಮಾರು 12 ಬಿಲಿಯನ್ ಯುಎಸ್ ಡಾಲರ್ (ಸುಮಾರು ₹1 ಲಕ್ಷ ಕೋಟಿಗೂ ಅಧಿಕ) ಮೌಲ್ಯದ ಚಿನ್ನವನ್ನು (Gold) ಮಾರಾಟ ಮಾಡಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಅಧಿಕೃತವಾಗಿ ತಿರಸ್ಕರಿಸಿವೆ. ಈ ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿರುವ ಬ್ಯಾಂಕ್, ದೇಶದ ಭೌತಿಕ ಚಿನ್ನದ ದಾಸ್ತಾನು 880.52 ಮೆಟ್ರಿಕ್ ಟನ್‌ಗಳಷ್ಟು ಯಾವುದೇ ಬದಲಾವಣೆಯಿಲ್ಲದೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ.

ಬ್ಲೂಮ್‌ಬರ್ಗ್ (Bloomberg) ಮಾಧ್ಯಮ ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿದ ವರದಿಯೊಂದರಲ್ಲಿ, ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಆರ್‌ಬಿಐ ಮೇ 22 ಕ್ಕೆ ಕೊನೆಗೊಂಡ ಎರಡು ವಾರಗಳಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿರಬಹುದು ಎಂದು ಅಂದಾಜಿಸಿತ್ತು.

ಆರ್‌ಬಿಐ ಮತ್ತು ಸರ್ಕಾರದ ಅಧಿಕೃತ ಸ್ಪಷ್ಟನೆ

ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಇದರ ಫ್ಯಾಕ್ಟ್-ಚೆಕ್ ನಡೆಸಿ, ಈ ವರದಿಯನ್ನು “ಫೇಕ್” (ಸುಳ್ಳು) ಎಂದು ಘೋಷಿಸಿದೆ.

ಇದನ್ನೂ ಓದಿ: ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ

ಆರ್‌ಬಿಐ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ:

  • ದಾಸ್ತಾನು ಸುರಕ್ಷಿತ: ಭಾರತದ ಒಟ್ಟು ಭೌತಿಕ ಚಿನ್ನದ ದಾಸ್ತಾನು ಪ್ರಸ್ತುತ 880.52 ಮೆಟ್ರಿಕ್ ಟನ್​ಗಳಷ್ಟೇ ಇದ್ದು, ಅದರಲ್ಲಿ ಯಾವುದೇ ಕಡಿತವಾಗಿಲ್ಲ.
  • ಹೆಚ್ಚಿದ ಚಿನ್ನದ ಪಾಲು: ಭಾರತದ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ (Forex Reserves) ಚಿನ್ನದ ಪಾಲು ಸೆಪ್ಟೆಂಬರ್ 2025 ರ ಕೊನೆಯಲ್ಲಿ ಶೇ. 13.92 ರಷ್ಟಿತ್ತು. ಅದು ಮಾರ್ಚ್ 31, 2026 ರ ವೇಳೆಗೆ ಶೇ. 16.70 ಕ್ಕೆ ಮತ್ತು ಮೇ 22, 2026 ರ ವೇಳೆಗೆ ಶೇ. 16.85 ಕ್ಕೆ ಏರಿಕೆಯಾಗಿದೆ.
  • ವಾರ್ಷಿಕ ವರದಿ ದಾಖಲೆ: ಆರ್‌ಬಿಐನ 2025-26ರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಹಿಂದಿನ ವರ್ಷಕ್ಕೆ (879.58 ಮೆಟ್ರಿಕ್ ಟನ್) ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಚಿನ್ನದ ದಾಸ್ತಾನು 0.94 ಮೆಟ್ರಿಕ್ ಟನ್‌ನಷ್ಟು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ.

ಫಾರೆಕ್ಸ್ ಕುಸಿತಕ್ಕೆ ಅಸಲಿ ಕಾರಣವೇನು?

ಮಾಧ್ಯಮಗಳ ವರದಿಗೆ ಮೂಲ ಕಾರಣವಾಗಿದ್ದು ಆರ್‌ಬಿಐನ ಚಿನ್ನದ ಮೌಲ್ಯದಲ್ಲಾದ ಏರಿಳಿತ. ಮೇ 8 ರಂದು ಸುಮಾರು 120 ಬಿಲಿಯನ್ ಡಾಲರ್‌ನಷ್ಟಿದ್ದ ಆರ್‌ಬಿಐ ಚಿನ್ನದ ದಾಸ್ತಾನಿನ ಒಟ್ಟು ಮೌಲ್ಯವು, ಮೇ 22 ರ ವೇಳೆಗೆ 114.8 ಬಿಲಿಯನ್ ಡಾಲರ್‌ಗೆ ಕುಸಿದಿತ್ತು.

ಆದರೆ, ಈ ಫಾರೆಕ್ಸ್ ಮೌಲ್ಯದ ಕುಸಿತವು ಚಿನ್ನವನ್ನು ಮಾರಾಟ ಮಾಡಿದ್ದರಿಂದ ಆಗಿದ್ದಲ್ಲ. ಬದಲಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳಲ್ಲಿ ಉಂಟಾದ ಏರಿಳಿತಗಳು (International Gold Prices) ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ವ್ಯತ್ಯಾಸದಿಂದಾಗಿ ಈ ಮೌಲ್ಯ ಬದಲಾಗಿದೆಯೇ ಹೊರತು, ಬ್ಯಾಂಕಿನ ಬಳಿ ಇರುವ ಭೌತಿಕ ಚಿನ್ನದ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ

ಬಂಗಾರ ಎಲ್ಲಿದೆ?

ಆರ್‌ಬಿಐ ಹೊಂದಿರುವ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದಲ್ಲಿ, ಶೇಕಡಾ 77 ರಷ್ಟು ಭಾಗವನ್ನು ಭಾರತದ ಒಳಗೇ ಸುರಕ್ಷಿತವಾಗಿ ಇಡಲಾಗಿದೆ. ವಿದೇಶಗಳಲ್ಲಿರುವ ಇನ್ನುಳಿದ ಭಾರತೀಯ ಚಿನ್ನದ ದಾಸ್ತಾನುಗಳನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ (Bank of England) ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) ಸಂಸ್ಥೆಗಳಲ್ಲಿ ಇರಿಸಲಾಗಿದೆ.

ಇಂತಹ ಸೂಕ್ಷ್ಮ ಆರ್ಥಿಕ ವಿಷಯಗಳ ಕುರಿತು ಸಾರ್ವಜನಿಕರು ಮಾಧ್ಯಮಗಳ ಊಹಾಪೋಹಗಳನ್ನು ನಂಬದೆ, ಆರ್‌ಬಿಐ ನಿಯತಕಾಲಿಕವಾಗಿ ಬಿಡುಗಡೆ ಮಾಡುವ ಅಧಿಕೃತ ಬುಲೆಟಿನ್ ಹಾಗೂ ಮಾಹಿತಿಗಳನ್ನು ಮಾತ್ರ ಅವಲಂಬಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಜನರಲ್ಲಿ ಮನವಿ ಮಾಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಡಗು ಭೀಕರ ಪ್ರವಾಹ ಸಂತ್ರಸ್ತರಿಗೆ 7 ವರ್ಷಗಳಾದರೂ ಸಿಗದ ಪುನರ್ವಸತಿ ಆಸರೆ: ಮಳೆಗಾಲದಲ್ಲಿ ಪ್ರವಾಹದ ಭೀತಿ – Kannada News

ಪ್ಲಾಸ್ಟಿಕ್ ಶೀಟ್ ಹೊದಿಸಿದ ಶೆಡ್​​ನಲ್ಲಿ ಕೊಡಗು ಪ್ರವಾಹ ಸಂತ್ರಸ್ತರುImage Credit source: tv9

ಮಡಿಕೇರಿ, ಜೂನ್ 3: ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು ಕೊಡಗು (Kodagu) ಜಿಲ್ಲೆಯ ನಿವಾಸಿಗಳಲ್ಲಿ, ಅದರಲ್ಲೂ ಕುಶಾಲನಗರ ಭಾಗದಲ್ಲಿ ಜಲಪ್ರಳಯದ ಕರಾಳ ನೆನಪುಗಳು ಮತ್ತೆ ನಡುಕ ಹುಟ್ಟಿಸಿವೆ. ನದಿತೀರದ ಗ್ರಾಮಸ್ಥರಿಗೆ ವರ್ಷದ 365 ದಿನಗಳೂ ಕಾಡುಪ್ರಾಣಿಗಳ ಉಪಟಳ ಒಂದೆಡೆಯಾದರೆ, ಮುಂಗಾರು ಮಳೆ ಚುರುಕಾಗುತ್ತಿದ್ದಂತೆಯೇ ಉಕ್ಕಿ ಹರಿಯುವ ಕಾವೇರಿ ನದಿ ತಮ್ಮ ಬದುಕನ್ನು ಎಲ್ಲಿ ಕಸಿದುಕೊಳ್ಳುತ್ತದೋ ಎಂಬ ಜೀವಭಯ ಮತ್ತೊಂದೆಡೆ ಕಾಡುತ್ತಿದೆ. ಸುರಕ್ಷಿತ ಜಾಗದಲ್ಲಿ ಆಶ್ರಯ ಕಲ್ಪಿಸಿಕೊಡಿ ಎಂದು ಈ ಭಾಗದ ನಿರಾಶ್ರಿತರು ವರ್ಷಗಳಿಂದ ಅದೆಷ್ಟು ಚೀರಿಕೊಂಡರೂ, ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮಾತ್ರ ಇವರ ಕರುಣಾಜನಕ ಕೂಗು ಕೇಳಿಸುತ್ತಲೇ ಇಲ್ಲ.

ಮುಖ್ಯಾಂಶಗಳು

  • 2018ರ ಮಹಾಪ್ರವಾಹದಲ್ಲಿ ಮನೆ ಕಳೆದುಕೊಂಡು ಪ್ಲಾಸ್ಟಿಕ್ ಶೆಡ್‌ಗಳಲ್ಲೇ ವಾಸಿಸುತ್ತಿರುವ ನದಿತೀರದ ನೂರಾರು ಕುಟುಂಬಗಳು.
  • ಸಂತ್ರಸ್ತರ ಪುನರ್ವಸತಿಗಾಗಿ ಅಭ್ಯತ್ ಮಂಗಳ ಗ್ರಾಮದಲ್ಲಿ 7 ಎಕರೆ ಜಾಗ ಗುರುತಿಸಿದರೂ 7 ವರ್ಷಗಳಿಂದ ಅನುಷ್ಠಾನಗೊಳ್ಳದ ವಸತಿ ಯೋಜನೆ.
  • ಕಂದಾಯ ಇಲಾಖೆ ಹಾಗೂ ವಸತಿ ಸಚಿವಾಲಯದ ನಡುವಿನ ಸಮನ್ವಯದ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದ ಸರ್ಕಾರದ ಆಶ್ರಯ ಯೋಜನೆ.

ಬೀದಿಗೆ ಬಿದ್ದ ಹೊಳೆಯಂಚಿನ ಬದುಕು: ಆಡಳಿತದ ನಿರ್ಲಕ್ಷ್ಯ

2018 ಮತ್ತು ತದನಂತರದ ಪ್ರವಾಹದ ಸಂದರ್ಭದಲ್ಲಿ ಕುಶಾಲನಗರ ತಾಲ್ಲೂಕಿನ ಸಿದ್ದಾಪುರ, ನೆಲ್ಲಿಹುದಿಕೇರಿ, ಕರಡಿಗೋಡು, ಕುಂಬಾರಗುಂಡಿ ಹಾಗೂ ನಲ್ವತ್ತೆಕರೆ ಸೇರಿದಂತೆ ಹತ್ತಾರು ಗ್ರಾಮಗಳ ನೂರಾರು ನಿವಾಸಿಗಳು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಸಂಪೂರ್ಣ ನಿರಾಶ್ರಿತರಾಗಿದ್ದರು. ಅಕ್ಷರಶಃ ಬೀದಿಗೆ ಬಿದ್ದಿದ್ದ ಈ ಸಂತ್ರಸ್ತರ ಪೈಕಿ ಕಾವೇರಿ ನದಿ ತಟದಲ್ಲಿ ವಾಸವಿದ್ದ ಸುಮಾರು 140 ಜನರಿಗೆ ಪರ್ಯಾಯ ವಸತಿ ಕಲ್ಪಿಸಲು ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಇದೇ ತಾಲ್ಲೂಕಿನ ಅಭ್ಯತ್ ಮಂಗಳ ಸಮೀಪ 7 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿತ್ತು.

ತಮಗೂ ಸ್ವಂತ ಭೂಮಿ ಸಿಗುತ್ತದೆ, ಮನೆ ಕಟ್ಟಲು ಹಣ ಸಿಗುತ್ತದೆ ಎಂದು ಸಂತ್ರಸ್ತರು ಆಸೆಯಿಂದ ಕಾಯುತ್ತಿದ್ದಾರೆ. ಆದರೆ, ಈ ಭರವಸೆ ನೀಡಿ ಏಳು ವರ್ಷಗಳಾಗುತ್ತಾ ಬಂದರೂ ಇದುವರೆಗೆ ಸಂತ್ರಸ್ತರಿಗೆ ಭೂಮಿಯೂ ಸಿಕ್ಕಿಲ್ಲ, ಹಣವೂ ಮಂಜೂರಾಗಿಲ್ಲ. ಇದರ ನಡುವೆ ಸ್ಥಳೀಯಾಡಳಿತವು ನದಿ ತೀರದ ಜನರಿಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲು ಸಜ್ಜಾಗಿರುವುದು ಇವರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇಲಾಖೆಗಳ ಮುನಿಸು; ಜನರ ಬದುಕು ಅತಂತ್ರ

ಈ ಕುರಿತು ಅಳಲು ತೋಡಿಕೊಂಡಿರುವ ಸಂತ್ರಸ್ತೆ ರುಕ್ಮಿಣಿ, ‘ಪ್ರತಿ ವರ್ಷ ಮಳೆಗಾಲ ಬಂದಾಗ ನಾವು ಮನೆ ಬಿಟ್ಟು ಎಲ್ಲೆಲ್ಲೋ ಕಂಡವರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಗಿದೆ. ಇದರಿಂದ ಮಕ್ಕಳ ಶಿಕ್ಷಣ, ನಿತ್ಯದ ಕೆಲಸ ಕಾರ್ಯಗಳೆಲ್ಲವೂ ಏರುಪೇರಾಗುತ್ತವೆ. ಮಳೆ ಕಡಿಮೆಯಾಗಿ ವಾಪಸ್ ಬರುವಷ್ಟರಲ್ಲಿ ನಮ್ಮ ಮನೆಗಳು ಕುಸಿಯುವ ಹಂತ ತಲುಪಿರುತ್ತವೆ’ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರಿಗೆ ಫಟಾಫಟ್ ಪರಿಹಾರ! ಚಿಕ್ಕಮಗಳೂರು, ಮಡಿಕೇರಿ ಪ್ರವಾಹ ಸಂತ್ರಸ್ತರಿಗೆ ಮನೆ ಯಾವಾಗ? 

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಜಾಕ್ ಮಾತನಾಡಿ, ‘ಇವರೆಲ್ಲರೂ ಕಳೆದ 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಮಾನವೀಯ ಉದ್ದೇಶದಿಂದ ಇವರನ್ನು ತೆರವುಗೊಳಿಸಿ ಹೊಸ ಜಾಗ ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ, ಕಳೆದ ಸರ್ಕಾರದ ಅವಧಿಯಲ್ಲೂ ಇವರನ್ನು ನಿರ್ಲಕ್ಷಿಸಲಾಯಿತು. ಈಗಿನ ಸರ್ಕಾರ ಬಂದು ಎರಡೂವರೆ ವರ್ಷ ಕಳೆದರೂ ಭೂಮಿ ನೀಡಲು ಮೀನ-ಮೇಷ ಎಣಿಸುತ್ತಿದೆ. ಕಂದಾಯ ಇಲಾಖೆ ಹಾಗೂ ವಸತಿ ಸಚಿವಾಲಯದ ನಡುವಿನ ಹೊಂದಾಣಿಕೆ ಕೊರತೆಯೇ ಈ ಯೋಜನೆ ನೆನೆಗುದಿಗೆ ಬೀಳಲು ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹವಾಮಾನ ಇಲಾಖೆ ಮಳೆಗಾಲದ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ಈ ಜನರ ಅತಂತ್ರ ಬದುಕು ಮತ್ತೆ ಬೀದಿಗೆ ಬೀಳುವ ಆತಂಕ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:14 pm, Wed, 3 June 26

Source link