All posts by nagaraj11081993

Monsoon Rain 2026: ಈ ಬಾರಿ ಭಾರತದಲ್ಲಿ ಮುಂಗಾರು ವಿಳಂಬ, ಎಲ್​ನಿನೋ ದೊಡ್ಡ ಸವಾಲು, ಆಧುನಿಕ ಕೃಷಿ ತಂತ್ರಜ್ಞಾನದೊಂದಿಗೆ ರೈತರು ಸಜ್ಜು

ನವದೆಹಲಿ, ಜೂನ್ 02: ಭಾರತದ ಕೃಷಿ ಮತ್ತು ಆರ್ಥಿಕತೆಯ ಜೀವಾಳವಾಗಿರುವ ನೈಋತ್ಯ  ಮುಂಗಾರು(Monsoon)  ಈ ವರ್ಷ ಪ್ರಕೃತಿಯ ವಿಭಿನ್ನ ಸವಾಲುಗಳ ನಡುವೆಯೂ ಆಧುನಿಕ ತಂತ್ರಜ್ಞಾನ ಹಾಗೂ ರೈತರ ಮುನ್ನೆಚ್ಚರಿಕೆಯೊಂದಿಗೆ ಮುನ್ನಡೆಯಲು ಸಜ್ಜಾಗಿದೆ. 1997 ರಲ್ಲಿ ಜಗತ್ತಿನಾದ್ಯಂತ ತಲ್ಲಣ ಮೂಡಿಸಿದ್ದ ಭೀಕರ ‘ಎಲ್ ನಿನೊ’ (El Nino) ಪರಿಣಾಮವನ್ನು ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾದ ‘ಹಿಂದೂ ಮಹಾಸಾಗರದ ದ್ವಿಧ್ರುವಿ’ (IOD) ಎಂಬ ರಕ್ಷಣಾ ಗುರಾಣಿ ಯಶಸ್ವಿಯಾಗಿ ತಡೆದು, ದೇಶದಲ್ಲಿ ಶೇಕಡಾ 2 ರಷ್ಟು ಅಧಿಕ ಮಳೆ ತಂದಿತ್ತು. ಆದರೆ, ಪ್ರಸ್ತುತ 2026 ರ ಸಾಲಿನಲ್ಲಿ ಹಿಂದೂ ಮಹಾಸಾಗರವು ತಟಸ್ಥವಾಗಿರಲಿದ್ದು , ಹವಾಮಾನ ಇಲಾಖೆ ಮತ್ತು ಕೃಷಿ ವಲಯವು ಮುಂಜಾಗ್ರತಾ ಕ್ರಮಗಳೊಂದಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಭೌಗೋಳಿಕವಾಗಿ ನೋಡಿದರೆ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆಯ ನಿರೀಕ್ಷೆ ಇದ್ದು, ಅದು ಎಲ್​ಪಿಎಯ 94ರಿಂದ 106 ಶೇಕಡಾ ವ್ಯಾಪ್ತಿಯಲ್ಲಿರುತ್ತದೆ. ಉಳಿದ ಭಾಗಗಳಲ್ಲಿ ದಕ್ಷಿಣ ಹಾಗೂ ಮಧ್ಯ ಭಾರತದಲ್ಲಿ ಎಲ್​ಪಿಎಯ 94 ಶೇಕಡಕ್ಕಿಂತ ಮಳೆ ಕಡಿಮೆಯಾಗುವ ನಿರೀಕ್ಷೆ ಇದೆ. ವಾಯುವ್ಯ ಭಾರತದಲ್ಲಿ ಇದು 92 ಶೇಕಡಕ್ಕಿಂತಲೂ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಇದಲ್ಲದೆ, ಮುಂಗಾರು ಆಗಮನವೂ ಒಂದು ವಾರ ತಡವಾಗಿದೆ. ಕೇರಳ ಕರಾವಳಿಗೆ ಮೇ 26ರಂದು ಮುಂಗಾರು ಪ್ರವೇಶಿಸಲಿದೆ ಎಂದು IMD ಮೊದಲು ಅಂದಾಜಿಸಿತ್ತು. ಆದರೆ ಸಾಮಾನ್ಯವಾಗಿ ಮುಂಗಾರು ಜೂನ್ 3ರ ಬಳಿಕ ಕೇರಳ ಪ್ರವೇಶಿಸುತ್ತದೆ ಎನ್ನಲಾಗಿದೆ.

ಪ್ರಕೃತಿಯ ಆಟ: ಎಲ್ ನಿನೊ ಮತ್ತು ಐಒಡಿ
ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ನೀರು ಅತಿಯಾಗಿ ಬಿಸಿಯಾಗುವುದನ್ನು ‘ಎಲ್ ನಿನೊ’ ಎನ್ನಲಾಗುತ್ತದೆ. ಇದು ಭಾರತದ ಮಾನ್ಸೂನ್ ಮಳೆಯನ್ನು ತಗ್ಗಿಸುವ ಸಾಮರ್ಥ್ಯ ಹೊಂದಿದೆ. ಇತಿಹಾಸವನ್ನು ಗಮನಿಸಿದರೆ, 1951 ರಿಂದ 2022 ರವರೆಗಿನ ಎಲ್ ನಿನೊ ವರ್ಷಗಳಲ್ಲಿ ಶೇ. 60 ರಷ್ಟು ಬಾರಿ ಸರಾಸರಿಗಿಂತ ಕಡಿಮೆ ಮಳೆಯಾಗಿದೆ.

ಮತ್ತಷ್ಟು ಓದಿ: ಬಿಸಿಲ ಬೇಗೆಯ ನಡುವೆ ತಂಪು ಸುದ್ದಿ: ಮೇ ಮಧ್ಯಭಾಗದಲ್ಲೇ ಮುಂಗಾರು ಎಂಟ್ರಿ!

ಆದರೆ, ಭಾರತದ ಮನೆಬಾಗಿಲಲ್ಲಿರುವ ಹಿಂದೂ ಮಹಾಸಾಗರದ ಪಶ್ಚಿಮ ಭಾಗ ಬೆಚ್ಚಗಾಗಿ, ಪೂರ್ವ ಭಾಗ ತಂಪಾಗುವ ಪ್ರಕ್ರಿಯೆಯನ್ನು ‘ ಪಾಸಿಟಿವ್ ಐಒಡಿ’ (Positive IOD) ಎನ್ನಲಾಗುತ್ತದೆ. ಇದು ಮಾನ್ಸೂನ್ ಮಳೆಗೆ ಹೆಚ್ಚುವರಿ ಬಲ ತುಂಬುತ್ತದೆ. 1997 ರಲ್ಲಿ ಈ ಐಒಡಿ ಅತ್ಯಂತ ಬಲವಾಗಿದ್ದರಿಂದ ಎಲ್ ನಿನೊ ಸೋತು ಮಳೆ ಗೆದ್ದಿತ್ತು. ಆದರೆ, ಈ ವರ್ಷ (ಮೇ 24 ರ ಮಾಹಿತಿ ಪ್ರಕಾರ) ಐಒಡಿ ಸೂಚ್ಯಂಕವು ಮೈನಸ್ 0.34 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದು, ಮಾನ್ಸೂನ್ ಅವಧಿಯಲ್ಲಿ ತಟಸ್ಥವಾಗಿರಲಿದೆ. ಚಳಿಗಾಲದ ಆರಂಭದಲ್ಲಿ ಮಾತ್ರ ಇದು ಧನಾತ್ಮಕ ರೂಪ ಪಡೆಯುವ ಸಾಧ್ಯತೆ ಇದೆ.

ಜೂನ್ ತಿಂಗಳಲ್ಲಿ ಉಷ್ಣ ಅಲೆ ದಿನಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂದು IMD ತಿಳಿಸಿದೆ. ದೇಶದ ಹಲವೆಡೆ 2ರಿಂದ 3 ದಿನಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆಯಿದ್ದು, ಇದರಿಂದ ಹೀಟ್‌ವೇವ್ ಪರಿಸ್ಥಿತಿ ನಿರ್ಮಾಣವಾಗಬಹುದು.

ಮುಂಗಾರು ಮುನ್ಸೂಚನೆ ಮತ್ತು ರೈತರ ಜಾಗೃತಿ
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ

ಮಳೆ ಪ್ರಮಾಣ: 2026 ರ ನೈಋತ್ಯ ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿಯ (87 ಸೆಂಟಿಮೀಟರ್) ಶೇಕಡಾ 90 ರಷ್ಟಿರಲಿದ್ದು, ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಇರಲಿದೆ.

ಎಲ್ ನಿನೊ ಕಾಲಾವಧಿ: ಜೂನ್‌ನಲ್ಲಿ ದುರ್ಬಲವಾಗಿರುವ ಎಲ್ ನಿನೊ, ಜುಲೈ-ಆಗಸ್ಟ್‌ನಲ್ಲಿ ಸಾಧಾರಣ ಹಾಗೂ ಸೆಪ್ಟೆಂಬರ್ ವೇಳೆಗೆ ಸ್ವಲ್ಪ ಬಲಗೊಳ್ಳುವ ಸಾಧ್ಯತೆ ಇದೆ.

ಕೃಷಿ ತಜ್ಞರ ಸಲಹೆ: ಸೆಪ್ಟೆಂಬರ್ ತಿಂಗಳು ಅಕ್ಕಿ, ದ್ವಿದಳ ಧಾನ್ಯಗಳು, ಹತ್ತಿ ಮತ್ತು ಎಣ್ಣೆಬೀಜಗಳಂತಹ ಖಾರಿಫ್ ಬೆಳೆಗಳಿಗೆ ‘ಧಾನ್ಯ ತುಂಬುವ’ (Grain Filling) ಅತ್ಯಂತ ಸೂಕ್ಷ್ಮ ಹಂತವಾಗಿದೆ. ಈ ಸಮಯದಲ್ಲಿ ನೀರಿನ ಕೊರತೆಯಾಗದಂತೆ ತಡೆಯಲು ಆಧುನಿಕ ಹನಿ ನೀರಾವರಿ ಪದ್ಧತಿ, ಮಳೆ ನೀರು ಕೊಯ್ಲು ಮತ್ತು ಬರ ನಿರೋಧಕ ತಳಿಗಳ ಬಿತ್ತನೆಗೆ ಸರ್ಕಾರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಮುಂಚಿತವಾಗಿಯೇ ಯಶಸ್ವಿ ಮಾರ್ಗದರ್ಶನ ನೀಡುತ್ತಿವೆ.

ಪ್ರಕೃತಿಯ ಬದಲಾವಣೆಗಳನ್ನು ಮೊದಲೇ ಅರಿತಿರುವುದರಿಂದ, ಕರಾರುವಕ್ಕಾದ ಮುನ್ಸೂಚನೆಗಳ ನೆರವಿನಿಂದ ಭಾರತೀಯ ಕೃಷಿ ವಲಯವು ಈ ವರ್ಷದ ಜಲಸಂಪನ್ಮೂಲವನ್ನು ಸೂಕ್ತವಾಗಿ ನಿರ್ವಹಿಸಲು ಮತ್ತು ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಲು ಸಂಪೂರ್ಣ ಸಿದ್ಧವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:05 am, Tue, 2 June 26

Source link

‘ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು?’ ಸಿಎಂ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಜಿ ಪರಮೇಶ್ವರ್ ಮಾರ್ಮಿಕ ವಿಡಿಯೋ ವೈರಲ್

ಡಾ ಜಿ ಪರಮೇಶ್ವರ್ ಹಳೆಯ ವಿಡಿಯೋ ವೈರಲ್Image Credit source: tv9

ತುಮಕೂರು, ಜೂನ್ 2: ರಾಜ್ಯ ರಾಜಕಾರಣದಲ್ಲಿ ತೀವ್ರ ಬದಲಾವಣೆಗಳಾಗುತ್ತಿದ್ದು, ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ಬಳಿಕ ಡಿ.ಕೆ. ಶಿವಕುಮಾರ್ (DK Shivakumar) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್ (G Parameshwara) ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿರುವುದಕ್ಕೆ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿದೆ. ಇತ್ತೀಚೆಗಷ್ಟೇ ಪರಮೇಶ್ವರ್ ಅವರನ್ನು ಮಹಾಭಾರತದ ‘ಕರ್ಣ’ನಿಗೆ ಹೋಲಿಸಿ ವಿಡಿಯೋ ಮಾಡಿದ್ದ ಅಭಿಮಾನಿಗಳು, ಈಗ ಅವರ ಹಳೆಯ ಮಾರ್ಮಿಕ ಭಾಷಣದ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಡಾ. ಜಿ. ಪರಮೇಶ್ವರ್ ಫ್ಯಾನ್ಸ್ ಎಂಬ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಿರಿಯ ನಾಯಕನ ಅಳಲಿನ ವಿಡಿಯೋ ಅಪ್‌ಲೋಡ್.
  • ‘ಮಲ್ಲಿಕಾರ್ಜುನ ಖರ್ಗೆ ಒಂದು ಕಾಲು ಎತ್ತಿ ಇಟ್ಟಿದ್ದರೆ ಸಿಎಂ ಆಗುತ್ತಿದ್ದರು’ ಎಂದಿದ್ದ ಪರಮೇಶ್ವರ್
  • ಡಿಕೆಶಿ ನೂತನ ಸಂಪುಟ ರಚನೆಯ ಕಸರತ್ತಿನ ನಡುವೆಯೇ ದಲಿತ ನಾಯಕನ ಹಳೇ ವಿಡಿಯೋ ವೈರಲ್.

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಡಾ. ಜಿ. ಪರಮೇಶ್ವರ್ ಅವರು ಸಮುದಾಯದ ಹೋರಾಟ ಹಾಗೂ ರಾಜಕೀಯ ಅನ್ಯಾಯದ ಕುರಿತು ಅತ್ಯಂತ ಬೇಸರದಿಂದ ಮಾತನಾಡಿದ್ದಾರೆ. ‘ತುಳಿತಾರೆ, ತುಳಿಸಿಕೊಳ್ಳಬೇಕು. ಆದರೆ ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಕಾಲು ಎತ್ತಿ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ರೀ. ಆದರೆ ಅವರು ತಪ್ಪಿಸಿಕೊಂಡರು. ಇನ್ನು ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿ ಹೋಯಿತು. ಅಪ್ಪಾ! ಹಂಗೂ ಹಿಂಗೂ ಹೆಂಗೋ ಮಾಡಿಕೊಂಡು, ಕೊನೆಗೆ ಬೇಡ ಬೇಡ ಅಂದರೂ ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಆದರೆ ಇಂತಹ ಸ್ಥಿತಿಯನ್ನು ಎದುರಿಸಲು ಹೋರಾಟ ಎನ್ನುವುದು ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಬರಬೇಕು’ ಎಂದು ಪರಮೇಶ್ವರ್ ಭಾಷಣ ಮಾಡುತ್ತಿರುವುದು ವಿಡಿಯೋದಲ್ಲಿವೆ.

ವೈರಲ್ ವಿಡಿಯೋ ಇಲ್ಲಿ ನೋಡಿ

ರಾಜಕೀಯ ವಲಯದಲ್ಲಿ ಭಾರಿ ಸಂಚಲನ

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಿರುವ ಈ ನಿರ್ಣಾಯಕ ಸಂದರ್ಭದಲ್ಲೇ, ಪರಮೇಶ್ವರ್ ಅವರ ಅಭಿಮಾನಿಗಳ ಅಧಿಕೃತ ಖಾತೆಯಿಂದ ಈ ವಿಡಿಯೋ ಹೊರಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ. ಸದ್ಯ ದೆಹಲಿಯಲ್ಲಿ ಸಚಿವ ಸಂಪುಟದ ಬಿರುಸಿನ ಚರ್ಚೆಗಳು ನಡೆಯುತ್ತಿದ್ದು, ಸಿದ್ದರಾಮಯ್ಯ ಅವರು ತಮ್ಮ ಬಣದ ಪರಮೇಶ್ವರ್ ಅವರಿಗೆ ಮತ್ತೊಮ್ಮೆ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಪದೇ ಪದೇ ಹಿರಿಯ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪುತ್ತಿರುವುದರ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Shastra: ಕುರ್ಚಿಯ ಮೇಲೆ ಬಟ್ಟೆಗಳನ್ನು ರಾಶಿ ಹಾಕುವ ಅಭ್ಯಾಸ ನಿಮಗಿದ್ಯಾ? ವಾಸ್ತು ಎಚ್ಚರಿಕೆ ಇಲ್ಲಿದೆ

ಸಾಮಾನ್ಯವಾಗಿ ದಿನನಿತ್ಯದ ಬದುಕಿನಲ್ಲಿ ಈ ತಪ್ಪನ್ನು ಮಾಡುತ್ತಲೇ ಇರುತ್ತೇವೆ. ಆಫೀಸ್ ಅಥವಾ ಹೊರಗಡೆಯಿಂದ ಸುಸ್ತಾಗಿ ಮನೆಗೆ ಬಂದ ತಕ್ಷಣ, ಬಟ್ಟೆಗಳನ್ನು ಬದಲಾಯಿಸಿ ಅವುಗಳನ್ನು ಸರಿಯಾದ ಜಾಗದಲ್ಲಿಡುವ ಬದಲಿಗೆ ಪಕ್ಕದಲ್ಲೇ ಇರುವ ಕುರ್ಚಿ ಅಥವಾ ಸೋಫಾದ ಮೇಲೆ ಎಸೆದುಬಿಡುತ್ತೇವೆ. ಒಂದೆರಡು ದಿನಗಳಲ್ಲಿ ಆ ಒಂದು ಶರ್ಟ್, ಬಟ್ಟೆಗಳ ದೊಡ್ಡ ಬೆಟ್ಟವಾಗಿ ಮಾರ್ಪಟ್ಟಿರುತ್ತದೆ.

ಇದು ನಮಗೆ ಕೇವಲ ಒಂದು ಸಾಮಾನ್ಯ ಸೋಮಾರಿತನದ ಅಭ್ಯಾಸವಾಗಿ ಕಾಣಿಸಬಹುದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಒಂದು ಸಣ್ಣ ತಪ್ಪು ಮನೆಯ ನೆಮ್ಮದಿ ಮತ್ತು ಧನಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ಹಾಳುಗೆಡವುತ್ತದೆ. ವಾಸ್ತು ಪ್ರಕಾರ, ಮನೆಯ ಪೀಠೋಪಕರಣಗಳು ಕೇವಲ ಕುಳಿತುಕೊಳ್ಳಲು ಮಾತ್ರವಲ್ಲ, ಅವು ಗೌರವ ಮತ್ತು ಸ್ಥಿರತೆಯ ಸಂಕೇತಗಳಾಗಿವೆ. ಹಾಗಾದರೆ, ಕುರ್ಚಿಯ ಮೇಲೆ ಬಟ್ಟೆಗಳನ್ನು ರಾಶಿ ಹಾಕುವುದರಿಂದ ನಿಮ್ಮ ಮಾನಸಿಕ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಕುರ್ಚಿಗಳು ಗೌರವ ಮತ್ತು ಸ್ಥಿರತೆಯ ಸಂಕೇತ:

ವಾಸ್ತು ಶಾಸ್ತ್ರದಲ್ಲಿ ಕುರ್ಚಿ ಮತ್ತು ಸೋಫಾಗಳಿಗೆ ವಿಶೇಷ ಸ್ಥಾನವಿದೆ. ಅವುಗಳನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅವುಗಳ ಮೇಲೆ ಅಸ್ತವ್ಯಸ್ತವಾಗಿ ಬಟ್ಟೆಗಳನ್ನು ಹಾಕಿ ಮುಚ್ಚಿದಾಗ, ಆ ಜಾಗದಲ್ಲಿ ಶಕ್ತಿಯ ಚಲನೆ ನಿಂತುಹೋಗುತ್ತದೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಮನೆಯವರಲ್ಲಿ ವಿನಾಕಾರಣ ಕೋಪ, ಕಿರಿಕಿರಿ ಮತ್ತು ಸೋಮಾರಿತನ ಹೆಚ್ಚಾಗುತ್ತದೆ. ಸಣ್ಣಪುಟ್ಟ ವಿಷಯಗಳಿಗೂ ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಮತ್ತು ಜಗಳಗಳು ಉಂಟಾಗುತ್ತವೆ. ಯಾವುದೇ ಕೆಲಸದಲ್ಲೂ ಗಮನ ಹರಿಸಲು ಸಾಧ್ಯವಾಗದೆ, ಮಾನಸಿಕವಾಗಿ ಸದಾ ಆಯಾಸದ ಅನುಭವವಾಗುತ್ತದೆ.

ಆರ್ಥಿಕ ನಷ್ಟ ಮತ್ತು ಸಾಲದ ಸುಳಿ:

ಕುರ್ಚಿಯ ಮೇಲಿನ ಬಟ್ಟೆಗಳ ರಾಶಿ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಬಟ್ಟೆಗಳನ್ನು ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಹಾಕುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಕಡಿಮೆಯಾಗಿ, ಧನಾಗಮನಕ್ಕೆ ಅಡ್ಡಿಯಾಗುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಇದರಿಂದ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಿ, ಕಷ್ಟಪಟ್ಟು ಗಳಿಸಿದ ಹಣ ನೀರಿನಂತೆ ಪೋಲಾಗುತ್ತದೆ. ಕೈಯಲ್ಲಿ ಹಣ ನಿಲ್ಲದೆ ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಇರುತ್ತದೆ. ಎಷ್ಟೇ ಕಷ್ಟಪಟ್ಟು ದುಡಿದರು ಸಹ ಆರ್ಥಿಕವಾಗಿ ಯಾವುದೇ ಪ್ರಗತಿ ಕಾಣಿಸುವುದಿಲ್ಲ.

ಮಾನಸಿಕ ಗೊಂದಲಗಳು:

ಮನೋವಿಜ್ಞಾನದ ಪ್ರಕಾರವೂ, ದಿನಾಲೂ ಕಣ್ಣೆದುರೇ ಇರುವ ಇಂತಹ ಅಸ್ತವ್ಯಸ್ತವಾದ ಬಟ್ಟೆಗಳ ರಾಶಿ ನಮ್ಮ ಮೆದುಳಿನ ಮೇಲೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದು ನಿಮ್ಮ ಆಲೋಚನೆಗಳಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ. ವೃತ್ತಿಜೀವನದಲ್ಲಾಗಲಿ ಅಥವಾ ವೈಯಕ್ತಿಕ ಜೀವನದಲ್ಲಾಗಲಿ ಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅಡ್ಡಿಯಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸರಳ ವಾಸ್ತು ಪರಿಹಾರಗಳು:

ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದು ಕಷ್ಟವೇನಲ್ಲ. ಈ ಕೆಳಗಿನ ಸರಳ ನಿಯಮಗಳನ್ನು ಪಾಲಿಸುವ ಮೂಲಕ ಮನೆಯಲ್ಲಿ ಮತ್ತೆ ಸಂತೋಷವನ್ನು ಮರುಕಳಿಸುವಂತೆ ಮಾಡಬಹುದು:

  • ಕುಳಿತುಕೊಳ್ಳುವ ಜಾಗವನ್ನು ಸದಾ ಮುಕ್ತವಾಗಿಡಿ. ಮನೆಯ ಕುರ್ಚಿಗಳು ಯಾವಾಗಲೂ ಸ್ವಚ್ಛವಾಗಿದ್ದು, ಯಾರಾದರೂ ಅತಿಥಿಗಳು ಬಂದರೆ ತಕ್ಷಣ ಕುಳಿತುಕೊಳ್ಳಲು ಸಿದ್ಧವಾಗಿರಬೇಕು.
  • ಬಟ್ಟೆಗಳನ್ನು ಒಗೆದು ಒಣಗಿದ ತಕ್ಷಣ, ಅವುಗಳನ್ನು ಅಲ್ಲೇ ಬಿಡದೆ ಮಡಚಿ ವಾರ್ಡ್‌ರೋಬ್ ಅಥವಾ ಕಪಾಟಿನಲ್ಲಿ ವ್ಯವಸ್ಥಿತವಾಗಿ ಇಡಿ.
  • ಬಿಚ್ಚಿದ ಕೊಳಕು ಬಟ್ಟೆಗಳನ್ನು ಕುರ್ಚಿಯ ಮೇಲೆ ಹಾಕುವ ಬದಲಿಗೆ, ಕಣ್ಣಿಗೆ ಕಾಣಿಸದಂತೆ ಒಂದು ಮುಚ್ಚಳವಿರುವ ಲಾಂಡ್ರಿ ಬಾಸ್ಕೆಟ್ (ಬಟ್ಟೆ ಬುಟ್ಟಿ) ಒಳಗೆ ಹಾಕಿಡಿ.

ದಿನಕ್ಕೆ 5 ನಿಮಿಷ ಮೀಸಲಿಡಿ:

ಪ್ರತೀ ದಿನ ಸಂಜೆ ಮನೆಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ವಸ್ತುಗಳನ್ನು ತೆಗೆದು ಸರಿಯಾದ ಜಾಗದಲ್ಲಿಡಲು ಕೇವಲ 5 ನಿಮಿಷ ಮೀಸಲಿಡಿ. ಮನೆ ಎಷ್ಟು ಸ್ವಚ್ಛವಾಗಿರುತ್ತದೋ, ಅಷ್ಟೇ ವೇಗವಾಗಿ ಧನಾತ್ಮಕ ಶಕ್ತಿ ಮತ್ತು ಐಶ್ವರ್ಯ ನಿಮ್ಮ ಮನೆಗೆ ಹರಿದುಬರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GBA 1KmChallenge: ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್; ಮೊದಲು ಫುಟ್‌ಪಾತ್ ಸರಿ ಮಾಡಿ ಎಂದ ಜನ!

ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್

ಬೆಂಗಳೂರು, ಜೂನ್ 02: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ಒಂದು ವಿಶಿಷ್ಟ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿದೆ. ಜೂನ್ ತಿಂಗಳ ಪೂರ್ತಿ ನಡೆಯಲಿರುವ ಈ ಅಭಿಯಾನಕ್ಕೆ #1KmChallenge (ಒಂದು ಕಿಲೋಮೀಟರ್ ಚಾಲೆಂಜ್) ಎಂದು ಹೆಸರಿಡಲಾಗಿದ್ದು, 1 ಕಿಲೋಮೀಟರ್ ವ್ಯಾಪ್ತಿಯ ಸಂಚಾರಕ್ಕೆ ವಾಹನ ಬಳಸಬೇಡಿ, ನಡೆದುಕೊಂಡು ಹೋಗಿ ಎಂದು ಜಿಬಿಎ ಜನರಲ್ಲಿ ಮನವಿ ಮಾಡಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮಾಲಿನ್ಯ ತಗ್ಗಿಸಲು ಜಿಬಿಎ ಸಂಸ್ಥೆಯಿಂದ ಹೊಸ ಪರಿಸರ ಅಭಿಯಾನ.
  • ಒಂದು ಕಿಲೋಮೀಟರ್ ವ್ಯಾಪ್ತಿಯ ಸಂಚಾರಕ್ಕೆ ವಾಹನ ಬಳಸದಂತೆ ಜನರಲ್ಲಿ ಮನವಿ.
  • ಕಳಪೆ ಫುಟ್‌ಪಾತ್‌ಗಳನ್ನು ನೆನೆದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ನಾಗರಿಕರು.

ಏನಿದು ‘#1KmChallenge’ ಅಭಿಯಾನ?

ಗ್ರೇಟರ್ ಬೆಂಗಳೂರು ಅಥಾರಿಟಿಯ ಕ್ಲೈಮೇಟ್ ಆಕ್ಷನ್ ಸೆಲ್ (ಹವಾಮಾನ ಕ್ರಿಯಾ ಕೋಶ) ಈ ನೂತನ ಅಭಿಯಾನವನ್ನು ಹಮ್ಮಿಕೊಂಡಿದೆ. ನಗರದಲ್ಲಿ ಜನರು ಕೇವಲ ಅರ್ಧ ಅಥವಾ ಒಂದು ಕಿಲೋಮೀಟರ್ ದೂರದ ಅಂಗಡಿ, ಕಚೇರಿ ಅಥವಾ ಮೆಟ್ರೋ ನಿಲ್ದಾಣಗಳಿಗೆ ಹೋಗಲು ಸಹ ಬೈಕ್ ಅಥವಾ ಕಾರುಗಳನ್ನು ಅವಲಂಬಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಹಾಗೂ ಮಾಲಿನ್ಯ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು, 1 ಕಿಲೋಮೀಟರ್ ಒಳಗಿನ ದೂರಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಕಾಲಿಗೆ ಕೆಲಸಕೊಡುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಈ ಅಭಿಯಾನದ ಪ್ರಮುಖ ಉದ್ದೇಶಗಳೇನು?

  1. ವಾಹನಗಳ ಬಳಕೆ ಕಡಿಮೆ ಮಾಡಿ ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವುದು.
  2. ದೈನಂದಿನ ನಡಿಗೆಯಿಂದ ಜಡ ಜೀವನಶೈಲಿ ಬದಲಾಯಿಸಿ ದೈಹಿಕ ಆರೋಗ್ಯ ಸುಧಾರಿಸುವುದು.
  3. ರಸ್ತೆಗಳ ಮೇಲಿನ ವಾಹನಗಳ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸುವುದು.

ಅಭಿಯಾನದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ!

ಜಿಬಿಎ ಸಂಸ್ಥೆಯು ಜೂನ್ ತಿಂಗಳ ಈ ಸವಾಲನ್ನು ಸ್ವೀಕರಿಸಿ, ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಸವಾಲು ಹಾಕುವಂತೆ ಬೆಂಗಳೂರಿಗರಲ್ಲಿ ವಿನಂತಿಸಿದೆ. ಆದರೆ, ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಭಿಯಾನದ ಆಶಯವನ್ನು ಒಪ್ಪಿಕೊಂಡರೂ, ಬೆಂಗಳೂರಿನ ರಸ್ತೆಗಳ ವಾಸ್ತವ ಸ್ಥಿತಿಯನ್ನು ನೆಟ್ಟಿಗರು ಜಿಬಿಎಗೆ ನೆನಪಿಸಿದ್ದಾರೆ. ನಗರದ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್‌ಗಳು ಧ್ವಂಸವಾಗಿವೆ. ಕಸದ ರಾಶಿ ಬಿದ್ದಿದೆ. ಅಲ್ಲದೆ ತೆರೆದ ಚರಂಡಿಗಳು ಮತ್ತು ರಸ್ತೆ ತುಂಬಾ ಇರುವ ಗುಂಡಿಗಳಿಂದಾಗಿ ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ನಡೆಯುವುದು ಹೇಗೆ ಸುರಕ್ಷಿತ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ ರೇಸ್ ಕೋರ್ಸ್ ರಸ್ತೆ ಕಾಮಗಾರಿ: 8 ತಿಂಗಳಾದರೂ ಮುಗಿಯದ ಕೆಲಸಕ್ಕೆ ಸಾರ್ವಜನಿಕರ ಹಿಡಿಶಾಪ!

ಮೊದಲು ಪಾದಚಾರಿಗಳಿಗೆ ಸುರಕ್ಷಿತ, ವಿಶಾಲವಾದ ಮತ್ತು ನಿರಂತರವಾದ ಫುಟ್‌ಪಾತ್‌ಗಳನ್ನು ನಿರ್ಮಿಸಿಕೊಡಿ, ಆಮೇಲೆ ಇಂತಹ ಅಭಿಯಾನಗಳನ್ನು ಮಾಡಿ ಎಂದು ನಾಗರಿಕರು ಜಿಬಿಎ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕನ್ನಡದಲ್ಲೂ ಮಧುರ ಗೀತೆಗಳನ್ನು ಹಾಡಿದ್ದ ಖ್ಯಾತ ಗಾಯಕಿ ಸುಮನ್ ಕಲ್ಯಾಣ್‌ಪುರ್ ಇನ್ನಿಲ್ಲ

ಭಾರತೀಯ ಚಿತ್ರರಂಗದ ಪ್ರಸಿದ್ಧ ಗಾಯಕಿ ಸುಮನ್ ಕಲ್ಯಾಣ್‌ಪುರ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೇ 31ರಂದು ಮುಂಬೈನ ಲೋಖಂಡ್‌ವಾಲಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಂಗೀತ ಲೋಕವನ್ನು ತಮ್ಮ ಸುಮಧುರ ಧ್ವನಿಯಿಂದ ಆಳಿದ್ದ ಖ್ಯಾತಿ ಇವರಿಗೆ ಇದೆ. ಸುಮನ್ ನಿರ್ಗಮನದೊಂದಿಗೆ ಸಂಗೀತ ಕ್ಷೇತ್ರದ ಅಪರೂಪದ ಕೊಂಡಿಯೊಂದು ಕಳಚಿದಂತಾಗಿದೆ.

ಬಾಂಗ್ಲಾದೇಶದ ಢಾಕಾದಲ್ಲಿ ಜನಿಸಿ, ನಂತರ ಮುಂಬೈನಲ್ಲಿ ನೆಲೆಸಿದ್ದ ಸುಮನ್ ಕಲ್ಯಾಣ್‌ಪುರ್ ಅವರು ಹಿಂದಿ, ಮರಾಠಿ, ಕನ್ನಡ, ಬೆಂಗಾಲಿ ಮತ್ತು ಒಡಿಯಾ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿದ್ದರು. ಅವರ ಕಲಾ ಸೇವೆಗೆ ಹಲವು ರಾಷ್ಟ್ರೀಯ ಹಾಗೂ ಚಲನಚಿತ್ರ ಪ್ರಶಸ್ತಿಗಳು ಒಲಿದುಬಂದಿದ್ದವು. ಸದ್ಯ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಕೋಟ್ಯಂತರ ಸಂಗೀತ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

ಸುಮನ್ ಕಲ್ಯಾಣ್‌ಪುರ್ ಅವರು ಕನ್ನಡ ಚಿತ್ರರಂಗದಲ್ಲೂ ತಮ್ಮ ಮಧುರ ಕಂಠದ ಛಾಪು ಮೂಡಿಸಿದ್ದಾರೆ ಎಂಬುದು ವಿಶೇಷ. ಕನ್ನಡದಲ್ಲಿ ಅವರು ಒಟ್ಟು 3 ಅದ್ಭುತ ಹಾಡುಗಳನ್ನು ಹಾಡಿದ್ದು, ಕನ್ನಡಿಗರ ಮನ ಗೆದ್ದಿದ್ದರು. ಕೇವಲ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣದ ಭಾಷೆಗಳಲ್ಲೂ ಸುಶ್ರಾವ್ಯವಾಗಿ ಹಾಡಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದರು.

‘ಒಡನಾಡಿ ಬೇಕೆಂದು’, ‘ಹನಿ ಹನಿ ಹೀರಿ ತಣಿ ಹರೆಯ’, ‘ತಲ್ಲಣ ನೂರು ಬಗೆ’ ಹಾಡನ್ನು ಅವರು ಹಾಡಿದ್ದರು. ಸುಮನ್ ಅವರು ತಮ್ಮ ಕೊನೆಯ ದಿನಗಳನ್ನು ತಮಗೆ ಅಪಾರ ಕೀರ್ತಿ ತಂದುಕೊಟ್ಟ ಸಂಗೀತದ ಮಧ್ಯೆಯೇ ಕಳೆದಿದ್ದರು. ಕೊನೆಯುಸಿರೆಳೆಯುವ ಮುನ್ನ ಅವರು ತಾವು ಹಾಡಿದ್ದ ಹಳೆಯ ಗೀತೆಗಳನ್ನು ಕೇಳುತ್ತಲೇ ಕಾಲ ಕಳೆದಿದ್ದರು ಎಂದು ವರದಿ ಆಗಿದೆ.

ಇದನ್ನೂ ಓದಿ: ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಅಪ್ರತಿಮ ಶಾಸ್ತ್ರೀಯ ಸಂಗೀತ ಜ್ಞಾನ ಮತ್ತು ಮಧುರ ಧ್ವನಿಗೆ ಹೆಸರಾಗಿದ್ದ ಸುಮನ್ ಅವರು ಹಿಂದಿಯ ‘ಆಜ್ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೆ’, ‘ನಾ ನಾ ಕರ್ತೆ ಪ್ಯಾರ್ ತುಮ್ಹೀ ಸೆ’, ‘ತುಮ್ನೆ ಪುಕಾರಾ ಔರ್ ಹಮ್ ಚಲೆ ಆಯೇ’ ನಂತಹ ಸಾರ್ವಕಾಲಿಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

33 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ತಾರ್ಕಿಕ ಅಂತ್ಯ: ಕೊಲೆ ಯತ್ನ ಪ್ರಕರಣದಲ್ಲಿ 84 ವರ್ಷದ ವ್ಯಕ್ತಿ ದೋಷಿ

ವೈಶಾಲಿ, ಜೂನ್ 02: ಬಿಹಾರದ ವೈಶಾಲಿ ಜಿಲ್ಲೆಯ ನ್ಯಾಯಾಲಯ 33 ವರ್ಷಗಳ ಹಿಂದಿನ ಕೊಲೆ(Murder) ಯತ್ನ ಪ್ರಕರಣವೊಂದಕ್ಕೆ ತಾರ್ಕಿಕ ಅಂತ್ಯ ಹಾಡಿದ್ದು, ತನಿಖೆ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ 84 ವರ್ಷದ ವೃದ್ಧನನ್ನು ದೋಷಿ ಎಂದು ತೀರ್ಪು ನೀಡಿದೆ. ದಶಕಗಳ ಕಾಲ ನಡೆದ ಕಾನೂನು ಪ್ರಕ್ರಿಯೆಯು ಅಂತಿಮವಾಗಿ ಸಂತ್ರಸ್ಥರಿಗೆ ನ್ಯಾಯ ಒದಗಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.

ಪ್ರಕರಣದ ಹಿನ್ನೆಲೆ
ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ಘಟನೆಯು ನವೆಂಬರ್ 10, 1992 ರಂದು ರಾಘವ್‌ಪುರ ಗ್ರಾಮದಲ್ಲಿ ನಡೆದಿತ್ತು. ಆರೋಪಿ ದೀಪ್ ರೈ ಮತ್ತು ಆತನ ಸಹಚರರು ಅದಾಲತ್ ರಾಯ್ ಹಾಗೂ ಅವರ ಪತ್ನಿ ರಾಮ್‌ಶಕಿ ದೇವಿ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಒಡೆದ ಗಾಜಿನ ಚೂರುಗಳನ್ನು ಹಾಕುತ್ತಿದ್ದರು. ಇದನ್ನು ದಂಪತಿ ಆಕ್ಷೇಪಿಸಿದಾಗ, ಅವರ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಲಾಗಿತ್ತು.

ದೀರ್ಘ ಕಾನೂನು ಪ್ರಕ್ರಿಯೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾರ್ಚ್ 12, 1993 ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಜೂನ್ 1999 ರಲ್ಲಿ ನ್ಯಾಯಾಲಯವು ಆರೋಪಗಳನ್ನು ದಾಖಲಿಸಿಕೊಂಡು ಸುದೀರ್ಘ ವಿಚಾರಣೆ ನಡೆಸಿತ್ತು. ಈ ದೀರ್ಘಾವಧಿಯ ಕಾನೂನು ಹೋರಾಟದ ಮಧ್ಯೆ ಪ್ರಕರಣದಲ್ಲಿದ್ದ ಇತರ ನಾಲ್ವರು ಆರೋಪಿಗಳು ಈಗಾಗಲೇ ಮರಣ ಹೊಂದಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು ರೋಡ್ ರೇಜ್: ಕಾಲೇಜು ವಿದ್ಯಾರ್ಥಿ ಮೇಲೆ ನಡುರಸ್ತೆಯಲ್ಲೇ ಚಾಕು ಇರಿತ!

ಸಾಕ್ಷ್ಯಾಧಾರಗಳ ವಿಶ್ಲೇಷಣೆ ಮತ್ತು ತೀರ್ಪು
ವಿಚಾರಣೆಯ ಸಮಯದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಒಟ್ಟು ಹತ್ತು ಪ್ರಮುಖ ಸಾಕ್ಷಿಗಳನ್ನು ಕೂಲಂಕಷವಾಗಿ ವಿಚಾರಣೆಗೆ ಒಳಪಡಿಸಲಾಯಿತು. ಎಲ್ಲಾ ಸಾಕ್ಷ್ಯಗಳು ಮತ್ತು ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವು, ಆರೋಪಿ ದೀಪ್ ರೈ ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ಸಾರಿತು.

ನ್ಯಾಯಾಲಯವು ಆತನನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 147 (ಗಲಭೆ), 148 (ಮಾರಕ ಆಯುಧಗಳೊಂದಿಗೆ ಗಲಭೆ) ಮತ್ತು ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ತಪ್ಪಿತಸ್ಥನೆಂದು ಘೋಷಿಸಿದೆ.

ವಿಡಿಯೋ

ಮುಂದಿನ ಕ್ರಮ: ಪ್ರಸ್ತುತ 84ವರ್ಷದವರಾಗಿರುವ ದೀಪ್ ರೈ ಅವರ ವಯಸ್ಸು ಮತ್ತು ದೈಹಿಕ ಸ್ಥಿತಿಯ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದ್ದು, ಅವರು ನಡೆಯಲು ಇತರರ ಸಹಾಯ ಅವಲಂಬಿಸಿದ್ದಾರೆ ಎಂದು ವರದಿಯಾಗಿದೆ. ಅಪರಾಧಿಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣವನ್ನು ಕಾನೂನುಬದ್ಧವಾಗಿ ನಿರ್ಧರಿಸಲು ನ್ಯಾಯಾಲಯವು ಜೂನ್ 2 ರಂದು (ಇಂದು) ಅಂತಿಮ ವಿಚಾರಣೆಯನ್ನು ನಿಗದಿಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Ambati Rayudu: ಯಾವುದೇ ತಂಡ RCB ಹತ್ತಿರಕ್ಕೂ ಬರಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್​ ಪಟ್ಟದೊಂದಿಗೆ ಬ್ಯಾಕ್ ಟು ಬ್ಯಾಕ್ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಎನಿಸಿಕೊಂಡಿದೆ. 2025 ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ್ದ ಆರ್​ಸಿಬಿ ಈ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗು ಬಡಿದಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಬಳಿಕ ಸತತವಾಗಿ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಸಾಧನೆ ಬೆನ್ನಲ್ಲೇ ಆರ್​ಸಿಬಿ ತಂಡವನ್ನು ಅಂಬಾಟಿ ರಾಯುಡು ಹಾಡಿ ಹೊಗಳಿದ್ದಾರೆ.

” ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನವನ್ನು ಪ್ರಶಂಸಿರುವ ಅಂಬಾಟಿ ರಾಯುಡು, ಪ್ರಸ್ತುತ ಐಪಿಎಲ್​ನ ಬಲಿಷ್ಠ ತಂಡ ಎಂದರೆ ಅದು ಆರ್​ಸಿಬಿ. ಐಪಿಎಲ್​ನ ಈ ಯುಗವನ್ನು ಆರ್​ಸಿಬಿ ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ” .

” ಪ್ರಸ್ತುತ ಇರುವ ಆರ್‌ಸಿಬಿ ತಂಡವು ತುಂಬಾ ಬಲಿಷ್ಠವಾಗಿದೆ. ತಂಡದಲ್ಲಿ ಸ್ಫೋಟಕ ದಾಂಡಿಗರ ಬಳಗವೇ ಇದೆ. ಇದರ ಜೊತೆಗೆ ವಿಶ್ವದ ಅತ್ಯುತ್ತಮ ಬೌಲರ್​ಗಳಿದ್ದಾರೆ. ಹೀಗಾಗಿ ಬಲಿಷ್ಠತೆಯ ವಿಷಯದಲ್ಲಿ ಬೇರೆ ಯಾವುದೇ ತಂಡ ಆರ್​​ಸಿಬಿ ಹತ್ತಿರಕ್ಕೂ ಬರಲ್ಲ. ಅವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ಸಾಮರ್ಥ್ಯ ಹೊಂದಿಲ್ಲ” ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಅಂದರೆ ಈಗಿರುವ ಆರ್​ಸಿಬಿ ವಿರುದ್ಧ ಗೆಲ್ಲಲು ಇತರೆ ತಂಡಗಳಿಗೆ ಅಂದುಕೊಂಡಷ್ಟು ಸುಲಭವಲ್ಲ. ಅವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ಮತ್ತೊಂದು ತಂಡವಿಲ್ಲ. ಇತರೆ 9 ತಂಡಗಳಿಗಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಕ್ಕಾಪಟ್ಟೆ ಬಲಿಷ್ಠವಾಗಿದೆ ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಗೆದ್ದಾಗ ಇದೇ ಅಂಬಾಟಿ ರಾಯುಡು ಆರ್​ಸಿಬಿ ತಂಡವನ್ನು ಹೀಯಾಳಿಸಿದ್ದರು.

“ನಿಮಗೆ ಒಂದು ಕಪ್ ಗೆಲ್ಲಲು 18 ವರ್ಷ ಬೇಕಾಯಿತು, ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 5 ಟ್ರೋಫಿಗಳ ದಾಖಲೆ ಸರಿಗಟ್ಟಲು ನಿಮಗೆ 72 ವರ್ಷ ಬೇಕಾಗಬಹುದು” ಎಂದು ಅಂಬಾಟಿ ರಾಯುಡು ಆರ್​ಸಿಬಿಯನ್ನು ಲೇವಡಿ ಮಾಡಿದ್ದರು.

ಇದನ್ನೂ ಓದಿ: ಇದು ಅನ್ಯಾಯ… ಫೈನಲ್ ಮ್ಯಾಚ್ ಮುಂದೂಡಬೇಕಿತ್ತು: ಸುನಿಲ್ ಗವಾಸ್ಕರ್

ಆದರೆ ಇದೀಗ ಆರ್​ಸಿಬಿ ತಂಡವು ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲ್ಲುತ್ತಿದ್ದಂತೆ ಅಂಬಾಟಿ ರಾಯುಡು ತಮ್ಮ ಹಳೆಯ ಡೈಲಾಗ್ ಮರೆತಿದ್ದಾರೆ. ಬದಲಾಗಿ ಇದು ಆರ್​ಸಿಬಿ ತಂಡದ ಯುಗ, ಪ್ರಸ್ತುತ ಐಪಿಎಲ್​ನಲ್ಲಿ ಆರ್​ಸಿಬಿಗೆ ಸರಿಸಾಟಿಯಾಗಿ ಯಾವುದೇ ತಂಡವಿಲ್ಲ. ಯಾವುದೇ ತಂಡದ ಬಲಿಷ್ಠತೆ ಅವರ ಹತ್ತಿರಕ್ಕೂ ಬರಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Source link

ಸೂಟು-ಬೂಟು ಧರಿಸುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ವಿಜಯ್; ಕಾರಣ ಬೇರೆಯೇ ಇದೆ

ನಟನೆಯಿಂದ ರಾಜಕೀಯಕ್ಕೆ ಬಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಇತ್ತೀಚೆಗೆ ತಾವು ಹಾಕುವ ಉಡುಗೆ ಮೂಲಕ ಸುದ್ದಿಯಲ್ಲಿದ್ದರು. ಸಾಮಾನ್ಯವಾಗಿ ತಮಿಳುನಾಡು ರಾಜಕಾರಣಿಗಳು ಧರಿಸುವ ಸಾಂಪ್ರದಾಯಿಕ ಬಿಳಿ ಶರ್ಟ್ ಮತ್ತು ಪಂಚೆ ಬದಲಿಗೆ, ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಮತ್ತು ಬಿಳಿ ಬಣ್ಣದ ಕೋಟ್-ಸೂಟ್ ಧರಿಸಿ ಗಮನ ಸೆಳೆದಿದ್ದರು. ಆ ಬಳಿಕ ನಡೆದ ಎಲ್ಲಾ ಸರ್ಕಾರಿ ಸಭೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಅವರು ಇದೇ ಶೈಲಿಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಿಎಂ ವಿಜಯ್ ಅವರೇ ಈ ಚರ್ಚೆಗಳಿಗೆ ಖುದ್ದಾಗಿ ಉತ್ತರಿಸಿದ್ದಾರೆ.

‘ನಾವು ಕೋಟ್ ಹಾಕಬಾರದೇ?’: ವಿಜಯ್ ಪ್ರಶ್ನೆ

ತಿರುಚಿರಾಪಳ್ಳಿಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ ಪಕ್ಷದ ಬೃಹತ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, ತಮ್ಮ ಉಡುಪಿನ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ‘ನಾವು ಕೋಟ್ ಮತ್ತು ಸೂಟ್ ಧರಿಸಬಾರದೇ? ಅದು ಕೇವಲ ಅಧಿಕಾರದಲ್ಲಿರುವ ದೊಡ್ಡ ಜನರಿಗೆ ಮಾತ್ರ ಸೀಮಿತವೇ? ಅಂತಹದ್ದೇನೂ ಇಲ್ಲ. ನಾನು ಹತ್ತಾರು ಬಣ್ಣಗಳ ಉಡುಪು ಧರಿಸುತ್ತಿಲ್ಲ. ನಮ್ಮೆಲ್ಲರ ಹೃದಯದಂತೆ ಕೇವಲ ಕಪ್ಪು ಮತ್ತು ಬಿಳಿ ಬಣ್ಣದ ಉಡುಪನ್ನು ಮಾತ್ರ ಧರಿಸುತ್ತಿದ್ದೇನೆ. ಆಡಳಿತದಲ್ಲಿ ನಾನು ಅತ್ಯಂತ ಸರಳವಾಗಿ ಮತ್ತು ಪಾರದರ್ಶಕವಾಗಿ ಇರುತ್ತೇನೆ ಎಂಬುದನ್ನು ತೋರಿಸಲು ಈ ಬ್ಲ್ಯಾಕ್ ಆ್ಯಂಡ್ ವೈಟ್ ಸೂಟ್ ಧರಿಸುತ್ತಿದ್ದೇನೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಂದ ಭರಪೂರ ಚಪ್ಪಾಳೆ ಗಿಟ್ಟಿಸಿಕೊಂಡರು.

ವಿಜಯ್ ವೈರಲ್ ಸ್ಯೂಟ್ ಡಿಸೈನ್ ಮಾಡಿದ್ದು ಯಾರು?

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ವಿಜಯ್ ಧರಿಸಿದ್ದ ಈ ಕಪ್ಪು ಬಣ್ಣದ ಸ್ಯೂಟ್, ಅವರು ನಟಿಸಿದ್ದ ‘ಬೀಸ್ಟ್’ ಸಿನಿಮಾದ ರಾ ಏಜೆಂಟ್ ಲುಕ್‌ನಿಂದ ಪ್ರೇರಿತವಾಗಿದೆ ಎನ್ನಲಾಗಿದೆ. ಈ ಐಕಾನಿಕ್ ಉಡುಪನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳಾದ ‘ಜಾಫಿರ್ ಮತ್ತು ಶಾದಾಬ್’ ವಿನ್ಯಾಸಗೊಳಿಸಿದ್ದಾರೆ. .

ವಿರೋಧ ಪಕ್ಷಗಳಿಗೆ ದಳಪತಿ ತಿರುಗೇಟು

ಇದೇ ವೇದಿಕೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ವಿಜಯ್, ‘ನಾವು ಅಧಿಕಾರಕ್ಕೆ ಬಂದು ಇನ್ನು ಕೆಲವು ವಾರಗಳೂ ಆಗಿಲ್ಲ. ಆರು ತಿಂಗಳು ಸುಮ್ಮನಿರುತ್ತೇವೆ ಎಂದವರು ಆರು ದಿನವೂ ಕಾಯದೆ, ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯಲ್ಲೇ ದೂರು ನೀಡಲು ಆರಂಭಿಸಿದ್ದಾರೆ. ಇಷ್ಟು ವರ್ಷಗಳ ಕಾಲ ತಮಿಳುನಾಡನ್ನು ಆಳುತ್ತಾ ಜನರನ್ನು ವಂಚಿಸಿದ ಎರಡು ಪ್ರಮುಖ ಪಕ್ಷಗಳನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ನೀವು ವಿಜಯ್‌ನನ್ನು ಕೇವಲ ಮುಖ್ಯಮಂತ್ರಿಯಾಗಿ ಅಲ್ಲ, ನಿಮ್ಮ ಮನೆಯ ಅಣ್ಣನಾಗಿ, ತಮ್ಮನಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವ ಮುಖ್ಯ ಸೇವಕನಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ಈ ಬೆಂಬಲಕ್ಕೆ ನಾನು ಸದಾ ಚಿರಋಣಿ’ ಎಂದು ಭಾವುಕರಾಗಿ ನುಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಸಾಯುವ ಮುನ್ನ ಕೊನೇ ಗಳಿಗೆಯಲ್ಲಿ ಗಂಗಾಜಲವನ್ನು ಬಿಡುವುದು ಯಾಕೆ? ಶಾಸ್ತ್ರಗಳು ಹೇಳುವುದೇನು?

ಸಾಯುವ ಮುನ್ನ ಕೊನೇ ಗಳಿಗೆಯಲ್ಲಿಗಂಗಾಜಲImage Credit source: Pinterest

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಮರಣ ಅನಿವಾರ್ಯ. ಪ್ರತಿಯೊಬ್ಬರೂ ತಮ್ಮ ಜೀವನದ ಜವಾಬ್ದಾರಿಗಳು, ವೃತ್ತಿ ಮತ್ತು ಶ್ರೇಯಸ್ಸಿನಲ್ಲಿ ನಿರತರಾಗಿರುತ್ತಾರೆ. ಆದರೆ, ಮರಣದ ಅಂತಿಮ ಕಾಲವು ಎಲ್ಲರಿಗೂ ಒದಗಿ ಬರುತ್ತದೆ. ಇಂತಹ ಅಂತಿಮ ಘಟ್ಟದಲ್ಲಿ, ಹಿಂದೂ ಸನಾತನ ಸಂಪ್ರದಾಯದಲ್ಲಿ ಒಂದು ವಿಶಿಷ್ಟ ಪದ್ಧತಿಯಿದೆ. ದೇಹವು ಪ್ರಾಣವನ್ನು ತ್ಯಜಿಸುವ ಸಂದರ್ಭದಲ್ಲಿ, ತುಳಸಿ ಮತ್ತು ಗಂಗಾಜಲವನ್ನು ದೇಹಕ್ಕೆ ಅರ್ಪಿಸಲಾಗುತ್ತದೆ. ಈ ಪದ್ಧತಿಗೆ ಹಲವಾರು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಕೆಲವು ವಿಜ್ಞಾನ ಆಧಾರಿತ ಕಾರಣಗಳಿವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ತುಳಸಿಯನ್ನು ವಿಷ್ಣುಪ್ರಿಯೆ ಎಂದು ಕರೆಯಲಾಗುತ್ತದೆ, ಅಂದರೆ ಅದು ವಿಷ್ಣುವಿಗೆ ಅತ್ಯಂತ ಪ್ರಿಯವಾದ ಮತ್ತು ಪವಿತ್ರವಾದ ಸಸ್ಯವಾಗಿದೆ. ಗಂಗಾಜಲವನ್ನು ಪಾಪನಾಶಕ ಮತ್ತು ಕರ್ಮನಾಶಕ ಎಂದು ಪರಿಗಣಿಸಲಾಗುತ್ತದೆ. ದೇಹದಲ್ಲಿ ಅಂಟಿಕೊಂಡಿರುವ ಪಾಪಗಳು ಮತ್ತು ಕರ್ಮಗಳು ಪ್ರಾಣವು ಸುಗಮವಾಗಿ ದೇಹದಿಂದ ಹೊರಹೋಗುವುದನ್ನು ತಡೆಯುತ್ತವೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ದೇಹವು ತೀವ್ರವಾಗಿ ರೋಧಿಸುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ತುಳಸಿ ಮತ್ತು ಗಂಗಾಜಲವನ್ನು ಅರ್ಪಿಸಲಾಗುತ್ತದೆ.

ಈ ಆಚರಣೆಯ ಉಲ್ಲೇಖವು ಗರುಡ ಪುರಾಣದಲ್ಲಿದೆ. ಈ ಪದ್ಧತಿಯನ್ನು ಡಾಕ್ಟರ್‌ಗಳು ಕೈಚೆಲ್ಲಿದಾಗ, ರೋಗಿಯು ಪ್ರಜ್ಞಾಹೀನನಾಗಿದ್ದು, ಯಾವುದೇ ಆಹಾರವನ್ನು ಸೇವಿಸಲು ಅಸಮರ್ಥನಾಗಿದ್ದು, ತೀವ್ರ ನೋವಿನಿಂದ ಬಳಲುತ್ತಿರುವಾಗ ಮಾತ್ರ ಆಚರಿಸಲಾಗುತ್ತದೆ. ಈ ಸಂಕಷ್ಟದ ಸಮಯದಲ್ಲಿ, ಗಂಗಾಜಲವನ್ನು ಅವರ ಬಾಯಿಯಲ್ಲಿ ಮೂರು ಬಾರಿ ಹಾಕುವುದರಿಂದ ಮತ್ತು ತುಳಸಿಯನ್ನು ಅರ್ಪಿಸುವುದರಿಂದ ದೇಹದಲ್ಲಿನ ಪಾಪಗಳು ಹಾಗೂ ಕರ್ಮಗಳು ಬಿಡುಗಡೆಯಾಗುತ್ತವೆ ಎಂದು ನಂಬಲಾಗಿದೆ. ಇದು ಆತ್ಮಕ್ಕೆ ಪುನರಪಿ ಜನನಂ, ಪುನರಪಿ ಮರಣಂ ಚಕ್ರದಿಂದ ವಿಮೋಚನೆ ನೀಡಿ, ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ವಿಜ್ಞಾನದ ದೃಷ್ಟಿಯಿಂದ ನೋಡಿದಾಗ, ತುಳಸಿ ಮತ್ತು ಗಂಗಾಜಲವು ದೇಹವನ್ನು ಪ್ರವೇಶಿಸಿದಾಗ ಉಸಿರಾಟದ ತೊಂದರೆ ಇರುವವರಿಗೆ ಸ್ವಲ್ಪ ಮಟ್ಟಿಗೆ ನೆರವಾಗಬಹುದು. ಕೆಲವು ಬಾರಿ ಇದು ವ್ಯಕ್ತಿಯು ಚೇತರಿಸಿಕೊಳ್ಳಲು ಸಹ ಕಾರಣವಾಗಬಹುದು. ಆದರೆ ಮುಖ್ಯವಾಗಿ, ಪ್ರಾಣವು ನಿಲ್ಲುವ ಸಮಯದಲ್ಲಿ, ಈ ಪವಿತ್ರ ದ್ರವ್ಯಗಳು ಮತ್ತು ಸಸ್ಯಗಳು ದೇಹವನ್ನು ಮೋಕ್ಷಕ್ಕೆ ಕೊಂಡೊಯ್ಯಲು ಅಥವಾ ದೇಹವು ಬಿಡುಗಡೆ ಹೊಂದಲು ಸಹಾಯ ಮಾಡುತ್ತವೆ ಎಂಬುದು ಸನಾತನ ನಂಬಿಕೆ.

ತುಳಸಿಯನ್ನು ಹರಿಪ್ರಿಯೆ ಎಂದೂ ಕರೆಯಲಾಗುತ್ತದೆ. ಪ್ರತಿದಿನ ಒಂದು ತುಳಸಿ ಎಲೆಯನ್ನು ಸೇವಿಸುವ ಅಭ್ಯಾಸವು ಜೀವನ ನಿರ್ವಹಣೆಯ ಅನೇಕ ವಿಷಯಗಳಲ್ಲಿ ಅನುಕೂಲಕರವಾಗಿದೆ ಎಂದು ಹೇಳಲಾಗುತ್ತದೆ. ಮರಣ ಕಾಲದಲ್ಲಿ ತುಳಸಿ ಮತ್ತು ಗಂಗಾಜಲವನ್ನು ದೇಹಕ್ಕೆ ಅರ್ಪಿಸುವುದರಿಂದ ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ ಮತ್ತು ವೈಕುಂಠ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಅಂತಿಮ ಘಟ್ಟದಲ್ಲಿರುವವರಿಗೆ ಯಮದೂತರು ಕಾಣಿಸಿಕೊಳ್ಳಬಹುದು, ಆದರೆ ಅವರ ಕೈಯಲ್ಲಿ ದೇಹವನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಯಮದೂತರಿಗೆ ತುಳಸಿಯೆಂದರೆ ಭಯ ಎಂಬ ನಂಬಿಕೆಯಿದೆ. ತುಳಸಿಯನ್ನು ಅರ್ಪಿಸಿದಾಗ ಯಮದೂತರಿಲ್ಲದೆ ಆತ್ಮವು ತನ್ನ ಮುಂದಿನ ಪಯಣವನ್ನು ಸುಗಮವಾಗಿ ಸಾಗಿಸಬಲ್ಲದು. ಮರಣ ಕಾಲದಲ್ಲಿ ಗಂಗಾಜಲವು ದೇಹವನ್ನು ಪ್ರವೇಶಿಸಿದಾಗ, ದೇಹದ ಸರ್ವ ಭಾಗವೂ ಮೋಕ್ಷವನ್ನು ಪಡೆಯುತ್ತದೆ, ದೇಹವು ಶುದ್ಧವಾಗುತ್ತದೆ ಮತ್ತು ದೈವತ್ವವನ್ನು ಪಡೆಯುತ್ತದೆ. ಆತ್ಮವು ಸುಭಿಕ್ಷವಾಗಿ ತನ್ನ ಸ್ಥಾನವನ್ನು ಸೇರಿ, ಇನ್ನೊಂದು ಆತ್ಮಕ್ಕೆ ಪ್ರವೇಶಿಸಲು ಉತ್ತಮ ದಾರಿಯಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನುಷ್ಕಾ ಶರ್ಮಾ ಧರಿಸಿದ ಬಿಳಿ ಉಡುಪು, ವಾಚ್ ಬೆಲೆ ಎಷ್ಟು?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಆಯ್ಕೆ ಮಾಡಿಕೊಂಡಿರುವ ಈ ಬಿಳಿ ಬಣ್ಣದ ಉಡುಪು ಅತ್ಯಂತ ಶಾಂತ ಹಾಗೂ ಕ್ಲಾಸಿ ಲುಕ್ ನೀಡುತ್ತಿದೆ. ಅವರು ಸೆಜಾನ್ನೆ ಲಿಯೊನಾರ್ಡ್ ಬ್ರ್ಯಾಂಡ್‌ನ ಬಿಳಿ ಟಾಪ್ ಮತ್ತು ವೈಡ್ ಲೆಗ್ ಪ್ಯಾಂಟ್ ಧರಿಸುವ ಮೂಲಕ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಕ್ಲಾಸಿ ಲುಕ್​​ನಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎಂಬುದನ್ನು ಅವರು ಫ್ಯಾಷನ್ ಪ್ರಿಯರಿಗೆ ತೋರಿಸಿಕೊಟ್ಟಿದ್ದಾರೆ. ಅನುಷ್ಕಾ ಧರಿಸಿರುವ ಈ ಸರಳ ಉಡುಪಿನ ಒಟ್ಟು ಮೌಲ್ಯ ಸುಮಾರು 25 ಸಾವಿರ ರೂಪಾಯಿಗಳು ಎನ್ನಲಾಗಿದೆ. ಆದರೆ, ಅವರ ಈ ಲುಕ್‌ನ ನಿಜವಾದ ಹೈಲೈಟ್ ಆಗಿ ಗಮನ ಸೆಳೆಯುತ್ತಿರುವುದು ಮಾತ್ರ ಅವರ ಕೈಯಲ್ಲಿರುವ ಆ ದುಬಾರಿ ಗಡಿಯಾರ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ಅನುಷ್ಕಾ ಶರ್ಮಾ ಅವರ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ಧರಿಸಿರುವ ಕೈಗಡಿಯಾರವು ವಿಶ್ವಪ್ರಸಿದ್ಧ ‘ಕಾರ್ಟಿಯರ್ ಪ್ಯಾಂಥರ್’ ಕಲೆಕ್ಷನ್‌ನದ್ದು ಎಂಬುದು ಸ್ಪಷ್ಟವಾಗುತ್ತದೆ. ಈ ಐಷಾರಾಮಿ ಗಡಿಯಾರದ ಮೌಲ್ಯ ಸುಮಾರು 28 ಲಕ್ಷ ರೂಪಾಯಿಗಳು ಎಂದು ಫ್ಯಾಷನ್ ತಜ್ಞರು ಅಂದಾಜಿಸಿದ್ದಾರೆ.

ಇದು ಕೇವಲ ಸಮಯ ನೋಡುವ ಗಡಿಯಾರವಲ್ಲ, ಬದಲಿಗೆ ಅದ್ಭುತವಾದ ಒಂದು ಅಪರೂಪದ ಆಭರಣದಂತಿದೆ. 1980ರ ದಶಕದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದ ಈ ಪ್ಯಾಂಥರ್ ಕಲೆಕ್ಷನ್, ತನ್ನ ವಿಶಿಷ್ಟವಾದ ಬ್ರೇಸ್ಲೆಟ್ ವಿನ್ಯಾಸ ಮತ್ತು ಸೊಬಗಿನಿಂದಾಗಿ ಜಾಗತಿಕ ಮಟ್ಟದ ಸೆಲೆಬ್ರಿಟಿಗಳ ನೆಚ್ಚಿನ ಆಯ್ಕೆಯಾಗಿದೆ. ಈ ವಾಚ್ ಅವರ ಬಿಳಿ ಉಡುಪಿನ ಮಧ್ಯೆ ಎದ್ದು ಕಾಣುತ್ತಿದ್ದು, ಅವರ ಒಟ್ಟಾರೆ ಸೌಂದರ್ಯಕ್ಕೆ ಮತ್ತಷ್ಟು ಭವ್ಯತೆಯನ್ನು ತಂದುಕೊಟ್ಟಿದೆ.

ಫ್ಯಾಷನ್ ಎಂದರೆ ಯಾವಾಗಲೂ ತೂಕದ ಆಭರಣಗಳು ಅಥವಾ ಬ್ರ್ಯಾಂಡ್‌ಗಳ ದೊಡ್ಡ ದೊಡ್ಡ ಲೋಗೋಗಳನ್ನು ಪ್ರದರ್ಶಿಸುವುದಲ್ಲ ಎಂಬುದನ್ನು ಅನುಷ್ಕಾ ಶರ್ಮಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಸೂಕ್ತವಾದ ಉಡುಪನ್ನು ಆಯ್ದುಕೊಂಡು ಅದರಲ್ಲಿ ಕಂಫರ್ಟಬಲ್ ಆಗಿರುವುದು ಮತ್ತು ಒಂದೇ ಒಂದು ಅತ್ಯುತ್ತಮ ಐಷಾರಾಮಿ ಆಕ್ಸಸರಿಯೊಂದಿಗೆ ಮಿಂಚುವುದು ಹೇಗೆ ಎಂಬುದಕ್ಕೆ ಅವರ ಈ ಸ್ಟೈಲ್ ಸಾಕ್ಷಿಯಾಗಿದೆ.

ಶ್ರೀಮಂತರು ಹಾಗೂ ಐಷಾರಾಮಿ ವಸ್ತುಗಳ ಸಂಗ್ರಹಕಾರರಿಗೆ ಈ ಕಾರ್ಟಿಯರ್ ಗಡಿಯಾರವು ಕೇವಲ ಫ್ಯಾಷನ್ ಅಲ್ಲ, ಬದಲಿಗೆ ಇದೊಂದು ಉತ್ತಮ ಹೂಡಿಕೆಯೂ ಹೌದು. ಯಾವುದೇ ರೀತಿಯ ಸಮಾರಂಭಗಳಿಗೂ ಧರಿಸಬಹುದಾದ ಈ ಗಡಿಯಾರದ ಆಯ್ಕೆಯು ಅನುಷ್ಕಾ ಅವರ ಕ್ಲಾಸಿಕ್ ಅಭಿರುಚಿಯನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಸಿನಿಮಾದಿಂದ ದೂರ ಉಳಿದಿರುವುದು ಯಾಕೆ? ಇಲ್ಲಿದೆ ಅಸಲಿ ಕಾರಣ

ಪಂದ್ಯ ವೀಕ್ಷಣೆಯ ದಿನದಂದು ಅನುಷ್ಕಾ ಶರ್ಮಾ ಅವರು ಪ್ರದರ್ಶಿಸಿದ ಈ ಸರಳ ಹಾಗೂ ಶ್ರೀಮಂತ ಶೈಲಿಯು ಫ್ಯಾಷನ್ ಪ್ರಿಯರಿಗೆ ಹೊಸ ಪಾಠಗಳನ್ನು ಕಲಿಸುತ್ತಿದೆ. ಅತಿಯಾದ ಅಲಂಕಾರವಿಲ್ಲದೆ ಅತ್ಯಂತ ಸರಳ ನೋಟದಲ್ಲೂ ಹೇಗೆ ಅದ್ಭುತವಾದ ಇಂಪ್ರೆಷನ್ ಸೃಷ್ಟಿಸಬಹುದು ಎಂಬುದನ್ನು ಅವರು ಮನದಟ್ಟು ಮಾಡಿದ್ದಾರೆ. ಪ್ರಸ್ತುತ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿರುವ ಅವರ ಈ ಫೋಟೋಗಳು ಫ್ಯಾಷನ್ ಜಗತ್ತಿನಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿದ್ದು, ಅಭಿಮಾನಿಗಳು ಅವರ ಸರಳತೆ ಮತ್ತು ಐಷಾರಾಮಿ ಶೈಲಿಯ ಕಾಂಬಿನೇಷನ್‌ಗೆ ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link