ಬೆಂಗಳೂರು, (ಮಾರ್ಚ್ 25): ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಕೆಲ ಸ್ವಾರಸ್ಯಕರ ಪ್ರಸಂಗಗಳು ಜರುಗಿವೆ. ಅದರಲ್ಲೂ ಮುಖ್ಯವಾಗಿ ಡಿಕೆ ಶಿವಕುಮಾರ್ ಶಾಲ್ ಹಾಕುತ್ತಿರುವ ಬಗ್ಗೆ ಚರ್ಚೆಯಾಗಿದ್ದು, ಬಿಜೆಪಿ ಶಾಸಕ ಸುನೀಲ್ಕುಮಾರ್ ಮಧ್ಯಪ್ರವೇಶಿಸಿ, ನೀವು ಶಾಲು ಹಾಕಿದಮೇಲೆ ಮುಖ್ಯಮಂತ್ರಿ ಆಗಿದ್ದೀರಿ. ಅದಕ್ಕೆ ಡಿಕೆ ಕೂಡ ಶಾಲು ಹಾಕ್ತಿದ್ದಾರೆಂದು ಸಿದ್ದರಾಮಯ್ಯನವರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲು ಟವೆಲ್ ಹಾಕುತ್ತಿದ್ದೆ. ಅದು ಯಾವಾಗಲೂ ಬಿದ್ದು ಹೋಗುತ್ತಿತ್ತು. ಅವತ್ತಿನಿಂದ ನಾನು ಶಾಲು ಹಾಕ್ತಿರೋದು, ಬೇರೆ ಅರ್ಥ ಬೇಡ. ನಾನು ದೇವರಿದ್ದಾನೆ ಎನ್ನುಉದನ್ನು ಒಪ್ಪುತ್ತೇನೆ. ಆದರೆ ದೇವಸ್ಥಾನದಲ್ಲಿಲ್ಲ. ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಯ್ಯ, ಈ ಬಗ್ಗೆ ಬಸವಣ್ಣ ಅವರು ಹೇಳಿದ್ರು ಎಂದು ಬಸವಣ್ಣನ ವಚನದ ಮೂಲಕ, ಸುನೀಲ್ ಕುಮಾರ್ ಹೆ ಟಾಂಗ್ ಕೊಟ್ಟರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಧಾರವಾಡ, ಮಾರ್ಚ್ 25: ಜಿಲ್ಲೆಯಲ್ಲಿ ಮಾಜಿ ಶಾಸಕನ ಪುತ್ರನ ಹತ್ಯೆ ಪ್ರಕರಣ ಭಾರೀ ತಿರುವು ಪಡೆದಿದ್ದು, ಘಟನೆ ಪೂರ್ವನಿಯೋಜಿತ ಕೊಲೆ ಎಂಬ ಶಂಕೆ ಮತ್ತಷ್ಟು ಗಾಢವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವ ಧಾರವಾಡ (Dharwad)ತಾಲೂಕಿನ ರಾಮಾಪುರ ಅರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಮೂವರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಗೆ ಸಾಲದ ರೂಪದಲ್ಲಿ ಹಣ ನೀಡಿದ್ದ ರಾಜು
ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಗುರುತು ಸಿಗದಷ್ಟು ಸ್ಥಿತಿಯಲ್ಲಿ ಸುಟ್ಟು ಕರಕಲಾದ ರಾಜುನ ಶವ ಸಿಕ್ಕಿತ್ತು. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆಯಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಮೃತನಿಗಿದ್ದ ಅನೈತಿಕ ಸಂಬಧದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದೆ.
ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರಾಜು ಬೋಳಶೆಟ್ಟಿ, ದೈಹಿಕ ಸಂಪರ್ಕಕ್ಕೆ ಬಂದಾಗ ಆಕೆಗೆ ಹಣ ನೀಡುತ್ತಿದ್ದ. ಸಾಲದ ರೂಪದಲ್ಲಿಯೇ ಮಹಿಳೆಗೆ ಹಣ ನೀಡುತ್ತದ್ದ ರಾಜು, 2 ಲಕ್ಷ ರೂ. ಗೂ ಹೆಚ್ಚು ಹಣ ಕೊಟ್ಟಿದ್ದ. ಇದೇ ವಿಚಾರಕ್ಕೆ ಮಹಿಳೆ ಹಾಗೂ ರಾಜು ನಡುವೆ ಮನಸ್ತಾಪ ಆಗಿತ್ತು. ನಿನ್ನೆಯೂ ಆತ ದೈಹಿಕ ಸಂಪರ್ಕಕ್ಕಾಗಿ ಹೊಲಕ್ಕೆ ಮಹಿಳೆಯನ್ನು ಕರೆದಿದ್ದ. ಇದೇ ವೇಳೆ ಮಹಿಳೆ, ಆಕೆಯ ಮಗ ಹಾಗೂ ಆಕೆಯ ಪ್ರಿಯಕರ ಸೇರಿ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
ರಾಜು ಬೋಳಶೆಟ್ಟಿಯ ಕಾರಿನಲ್ಲೇ ರಾಮಾಪುರ ಅರಣ್ಯಕ್ಕೆ ಆತನ ಶವವನ್ನು ತಂದ ಈ ಮೂವರು, ಹಿಂದಿನ ಸೀಟಿನಲ್ಲಿ ಶವವಿಟ್ಟು, ತಾವು ತಂದಿದ್ದ 10 ಲೀ. ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಘಟನೆ ಬಳಿಕ ಮೂವರೂ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಕೆಲವೇ ಘಂಟೆಗಳಲ್ಲಿ ಮೂವರನ್ನೂ ಸೆರೆ ಹಿಡಿಯಲಾಗಿದೆ.
ನವದೆಹಲಿ, ಮಾರ್ಚ್ 25: ಎಲ್ಪಿಜಿ ಪೂರೈಕೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಈಗ ಭಾರತದಲ್ಲಿ ಪರ್ಯಾಯ ವ್ಯವಸ್ಥೆ ಹೆಚ್ಚಿಸಲು ಅನಿವಾರ್ಯವಾಗಿಸಿದೆ. ಸರ್ಕಾರವು ನೈಸರ್ಗಿಕ ಅನಿಲ (Natural Gas) ಸೌಕರ್ಯಗಳಾದ ಪಿಎನ್ಜಿ ಮತ್ತು ಸಿಎನ್ಜಿ ಲಭ್ಯತೆ ಹೆಚ್ಚಿಸಲು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಬೇಕಾದ ಸುಧಾರಣೆಗಳನ್ನು ತರುತ್ತಿದೆ. ಪಿಎನ್ಜಿ ಸೌಕರ್ಯವನ್ನು ವೇಗವಾಗಿ ಹೆಚ್ಚಿಸಲು ಈ ಸುಧಾರಣೆ ತರಲಾಗಿದೆ. ಈ ಸಂಬಂಧ ಸರ್ಕಾರವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಆದೇಶ 2026 ಅನ್ನು ಹೊರಡಿಸಿದೆ.
ವಿವಿಧ ಪ್ರದೇಶಗಳಿಗೆ ನ್ಯಾಚುರಲ್ ಗ್ಯಾಸ್ ಪೈಪ್ಲೈನ್ ಹಾಕಲು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟರ್ಗಳಿಗೆ ಅನೇಕ ತಡೆಗಳು, ಸಮಸ್ಯೆಗಳಿವೆ. ಭೂಮಿ ಸಿಗದೇ ಇರುವುದು, ಅನುಮೋದನೆ ದೊರಕದೇ ಇರುವುದು, ಅಧಿಕ ಶುಲ್ಕ ಇರುವುದು ಇತ್ಯಾದಿ ತಡೆಗಳನ್ನು ನಿವಾರಿಸಿ, ನ್ಯಾಚುರಲ್ ಗ್ಯಾಸ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೆ ಪೈಪ್ಲೈನ್ ಅಳವಡಿಸುವ ಕಾರ್ಯಗಳನ್ನು ಸುಗಮಗೊಳಿಸಲು ಸರ್ಕಾರವು ಏಕರೀತಿಯ ಒಂದು ಫ್ರೇಮ್ವರ್ಕ್ ರೂಪಿಸುವುದು ಅಗತ್ಯ ಇದೆ ಎಂದು ಪೆಟ್ರೋಲಿಯಂ ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಪಿಜಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವನ್ನು ಸರಿದೂಗಿಸಲು ಸರ್ಕಾರವು ನೈಸರ್ಗಿಕ ಅನಿಲದತ್ತ ಗಮನ ಹರಿಸಿದೆ. ನ್ಯಾಚುರಲ್ ಗ್ಯಾಸ್ಗೆ ಭಾರತವು ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬನೆ ಕಡಿಮೆ ಇದೆ. ಹೀಗಾಗಿ, ಎಲ್ಪಿಜಿಗೆ ಹೋಲಿಸಿದರೆ ಎಲ್ಎನ್ಜಿ ಮತ್ತು ಪಿಎನ್ಜಿ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಆದರೆ, ಪಿಎನ್ಜಿ ಅಥವಾ ಪೈಪ್ಡ್ ಗ್ಯಾಸ್ ನೆಟ್ವರ್ಕ್ ಎಲ್ಲೆಡೆ ಸಾಕಷ್ಟು ಮಟ್ಟದಲ್ಲಿ ಲಭ್ಯ ಇಲ್ಲದಿರುವುದು ಪ್ರಮುಖ ಹಿನ್ನಡೆಯಾಗಿದೆ.
ಭಾರತದಲ್ಲಿ ಒಂದೂವರೆ ಕೋಟಿಗೂ ಸ್ವಲ್ಪ ಹೆಚ್ಚು ಮನೆಗಳಿಗೆ ಪಿಎನ್ಜಿ ಕನೆಕ್ಷನ್ ಇದೆ. ಹೆಚ್ಚಿನ ನಗರಗಳಲ್ಲಿ ಪಿಎನ್ಜಿ ಪೂರೈಕೆ ಇದೆಯಾದರೂ ವ್ಯಾಪಕವಾಗಿ ಪೈಪ್ಲೈನ್ ಅಳವಡಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಕೆಲ ಪ್ರದೇಶಗಳಲ್ಲಿ ಪೈಪ್ಲೈನ್ ಇದ್ದರೆ, ಮತ್ತಷ್ಟು ಪ್ರದೇಶಗಳಲ್ಲಿ ಅಳವಡಿಕೆಯೇ ಆಗಿಲ್ಲ. ಹೀಗಾಗಿ, ಹೆಚ್ಚಿನ ಮನೆಗಳಿಗೆ ಪಿಎನ್ಜಿ ಸಂಪರ್ಕವೇ ಲಭ್ಯ ಇಲ್ಲದಂತಾಗಿದೆ. ಈ ಸಮಸ್ಯೆ ನೀಗಿಸಲು ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ.
ಈ ಆದೇಶವು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ಸಿಗಲಿದೆ. ತ್ವರಿತವಾಗಿ ಪೈಪ್ಲೈನ್ಗಳನ್ನು ಅಳವಡಿಸಲು ಸಾಧ್ಯವಾಗಬಹುದು. ಇದರಿಂದ ಜನರನ್ನು ಎಲ್ಪಿಜಿಯಿಂದ ಪಿನ್ಜಿ ಸಂಪರ್ಕಕ್ಕೆ ವರ್ಗಾಯಿಸುವುದು ಸುಲಭವಾಗುತ್ತದೆ. ಎಲ್ಪಿಜಿ ತಂದಿರುವ ಬಿಕ್ಕಟ್ಟು ಈಗ ಪಿಎನ್ಜಿ ಸೌಕರ್ಯ ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದೆ.
ಬೆಂಗಳೂರು, ಮಾರ್ಚ್ 25: ಕರ್ನಾಟಕ ಬಜೆಟ್ 2026 ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ರಾಹುಕಾಲ ನೋಡಿಕೊಂಡು ಸಮಯ ನಿಗದಿ ಮಾಡಿದ್ದರು ಎಂಬ ಪ್ರತಿಪಕ್ಷ ನಾಯಕರ ಟೀಕೆ ಬುಧವಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ನಾಂದಿಹಾಡಿತು. ಈ ವಿಚಾರವಾಗಿ, ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು. ಅದಕ್ಕುತ್ತರಿಸಿದ ಸಿದ್ದರಾಮಯ್ಯ, ಅಧಿಕಾರಿಗಳು ಹಾಗೂ ಮನೆಯವರ ಮಾತು ಕೇಳಿ ರಾಹುಕಾಲ ನೋಡಿದ್ದು ನಿಜ. ಆದರೆ, ವೈಯಕ್ತಿಕವಾಗಿ ರಾಹುಕಾಲ, ಗುಳಿಕಕಾಲ ಅಥವಾ ಯಾವುದೇ ರೀತಿಯ ಗ್ರಹಣ ಕಾಲಗಳಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರು.
ಈ ಹಿಂದೆ ಹಲವು ಬಾರಿ ರಾಹುಕಾಲದಲ್ಲೇ ಬಜೆಟ್ ಮಂಡಿಸಿದ್ದ ಉದಾಹರಣೆಗಳನ್ನೂ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಅಲ್ಲದೆ, ‘ಯುಗಾದಿ ದಿನ ಹಾಗೂ ಶಿವರಾತ್ರಿ ದಿನ ಯಾರಾದರೂ ಮಾಂಸ ಸೇವನೆ ಮಾಡುತ್ತಾರಾ? ನಾನು ತಿನ್ನುತ್ತೇನೆ, ನನ್ನಿಷ್ಟ’ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 25: ಶ್ರೀರಾಮನವಮಿ (Ram Navami) ಹಬ್ಬದ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ಸಾರ್ವಜನಿಕ ಸೂಚನೆಯನ್ನು ಹೊರಡಿಸಿದೆ. ಮಾರ್ಚ್ 27, ಶುಕ್ರವಾರದಂದು ನಗರಾದ್ಯಂತ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಪ್ರಾಧಿಕಾರದ ಪಶುಸಂಗೋಪನಾ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಜಿಬಿಎ ಹೊರಡಿಸಿದ ಆದೇಶದಲ್ಲೇನಿದೆ?
ಎಲ್ಲಾ ಕಸಾಯಿಖಾನೆಗಳನ್ನು ಆ ದಿನ ಮುಚ್ಚುವಂತೆ ಜಿಬಿಎ ಆದೇಶ ಹೊರಡಿಸಿದ್ದು, ಮಾಂಸ ಮಾರಾಟ ಮಾಡುವ ಅಂಗಡಿಗಳು ಹಾಗೂ ಔಟ್‌ಲೆಟ್‌ಗಳಲ್ಲಿ ಯಾವುದೇ ರೀತಿಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎನ್ನಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಎಲ್ಲ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಎ ಆದೇಶ
ನಿಯಮ ಉಲ್ಲಂಘಿಸಿದರೆ ಕ್ರಮ!
ಹಬ್ಬದ ದಿನದ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗಳನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.ನಗರದಲ್ಲಿ ಯಾವುದೇ ರೀತಿಯ ಅಸಭ್ಯತೆ ಅಥವಾ ಅಕ್ರಮ ನಡೆಯದಂತೆ ನಿಗಾ ವಹಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಸಹಕರಿಸಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನವದೆಹಲಿ, ಮಾರ್ಚ್ 25: ಗಲ್ಫ್ ಭಾಗದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲದ ಹಿನ್ನೆಲೆಯಲ್ಲಿ ಭಾರತವು ತನ್ನ ಕಚ್ಛಾ ತೈಲ ಅಗತ್ಯಗಳನ್ನು ರಷ್ಯಾದಿಂದ ಪಡೆಯುತ್ತಿದೆ. ಮುಂದಿನ ತಿಂಗಳಿಗಾಗಿ ಭಾರತವು ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲವನ್ನು (Russian crude oil) ಖರೀದಿ ಮಾಡಿದೆ ಎಂದು ಬ್ಲೂಮ್ಬರ್ಗ್ ಸುದ್ದಿ ಏಜೆನ್ಸಿಯು ವರದಿ ಮಾಡಿದೆ.
ಇರಾನ್ ಯುದ್ಧಕ್ಕೆ ಮುನ್ನ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿ ಮಾಡುತ್ತಿದ್ದ ಭಾರತ ಈಗ ಹೆಚ್ಚಿನ ದರ ತೆರಬೇಕಾಗಿದೆ. ಬ್ರೆಂಟ್ ಕ್ರೂಡ್ ದರಗಳಿಗೆ ಹೋಲಿಸಿದರೆ ಒಂದು ಬ್ಯಾರಲ್ಗೆ 5ರಿಂದ 15 ಡಾಲರ್ನಷ್ಟು ಹೆಚ್ಚಿನ ಬೆಲೆಗೆ ತೈಲ ಪಡೆಯಲಾಗುತ್ತಿದೆ. ಜಾಗತಿಕವಾಗಿ ತೈಲ ಮತ್ತು ಅನಿಲಗಳಿಗೆ ಬಹಳ ಬೇಡಿಕೆ ಬಂದಿದೆ. ಇವುಗಳ ಪೂರೈಕೆಯೂ ಕೂಡ ಕಷ್ಟಕರ ಸ್ಥಿತಿಯಲ್ಲಿದೆ.
ಭಾರತವು ಏಪ್ರಿಲ್ ತಿಂಗಳ ಡೆಲಿವರಿಗಾಗಿ 60 ಮಿಲಿಯನ್ ಕಚ್ಛಾ ತೈಲ ಖರೀದಿಸಿದೆ. ಮಾರ್ಚ್ ತಿಂಗಳಿಗಾಗಿಯೂ ಇದೇ ಪ್ರಮಾಣದ ತೈಲ ಪಡೆಯಲಾಗಿತ್ತು. ಇರಾನ್ ಯುದ್ಧ ಶುರುವಾದ ಬಳಿಕ ತೈಲ ಪೂರೈಕೆಗೆ ವ್ಯತ್ಯಯ ಆಗುತ್ತಿದ್ದಂತೆಯೇ ಭಾರತವು ರಷ್ಯಾದಿಂದ ತೈಲ ಪಡೆಯಲು ಆರಂಭಿಸಿತು. ಚೀನಾ ಮತ್ತಿತರೆಡೆ ಹೋಗಲು ಅಣಿಯಾಗಿದ್ದ ರಷ್ಯನ್ ತೈಲ ಹಡಗುಗಳು ಭಾರತದ ಬಂದರುಗಳ ಕಡೆಗೆ ಬಂದಿದ್ದವು.
ಹಾರ್ಮುಜ್ ಜಲಸಂಧಿಯಲ್ಲಿ ತಡೆ ಇರುವುದರಿಂದ ರಷ್ಯಾದಿಂದ ತೈಲ ಪಡೆಯಲು ಭಾರತಕ್ಕೆ ಅನುಮತಿಸಿರುವುದಾಗಿ ಅಮೆರಿಕ ತಿಳಿಸಿತ್ತು. ಇದಾದ ಬಳಿಕ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತಕ್ಕೆ ಅಗತ್ಯವಿರುವ ಹೆಚ್ಚಿನ ತೈಲವನ್ನು ರಷ್ಯಾದಿಂದ ಪಡೆಯಲಾಗುತ್ತಿದೆ.
ಭಾರತದ ರಿಫೈನರಿ ಕಂಪನಿಗಳಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್, ಹಿಂದೂಸ್ತಾನ್ ಮಿಟ್ಟಲ್ ಎನರ್ಜಿ ಮೊದಲಾದವು ಈಗ ರಷ್ಯನ್ ಕಚ್ಛಾ ತೈಲದ ಖರೀದಿ ಪುನಾರಂಭಿಸಿವೆ. ಅಮೆರಿಕದ ಒತ್ತಡದ ಕಾರಣಕ್ಕೆ ಈ ರಿಫೈನರಿಗಳು ರಷ್ಯಾದಿಂದ ತೈಲ ಖರೀದಿಯನ್ನು ಡಿಸೆಂಬರ್ನಲ್ಲಿ ನಿಲ್ಲಿಸಿದ್ದವು. ಸೌದಿ ಅರೇಬಿಯಾ, ಇರಾಕ್ನಿಂದ ತೈಲ ಪೂರೈಕೆ ಪಡೆಯುತ್ತಿದ್ದವು. ಈ ಗಲ್ಫ್ ದೇಶಗಳಿಂದ ಬುಕ್ ಮಾಡಲಾಗಿದ್ದ ತೈಲವು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿರುವುದರಿಂದ ರಷ್ಯಾದಿಂದ ತೈಲ ಪಡೆಯುವುದು ಅನಿವಾರ್ಯವಾಗಿದೆ.
ಭಾರತ ಇದೀಗ ರಷ್ಯಾದಿಂದ ಮಾತ್ರವಲ್ಲ, ಒಂದಷ್ಟು ಪ್ರಮಾಣದ ತೈಲವನ್ನು ವೆನಿಜುವೆಲಾದಿಂದಲೂ ಪಡೆಯುತ್ತಿದೆ. ಏಪ್ರಿಲ್ನಲ್ಲಿ ವೆನಿಜುವೆಲಾದಿಂದ 8 ಮಿಲಿಯನ್ ಬ್ಯಾರಲ್ ಕಚ್ಛಾ ತೈಲ ಭಾರತಕ್ಕೆ ಬರಲಿದೆ.
ಡಾರ್ಲಿಂಗ್ ಕೃಷ್ಣ (Darling Krishna), ನಟಿಸಿ, ನಿರ್ಮಿಸಿ, ನಿರ್ದೇಶನವನ್ನೂ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾ ಕಳೆದ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್ 2’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಅಬ್ಬರದ ನಡುವೆಯೂ ಸಹ ‘ಲವ್ ಮಾಕ್ಟೆಲ್ 3’ ಸಿನಿಮಾ ಜನರನ್ನು ಸೆಳೆಯುತ್ತಿದೆ. ಅಪ್ಪ-ಮಗಳ ಬಂಧದ ಬಗ್ಗೆ ಕತೆಯನ್ನು ‘ಲವ್ ಮಾಕ್ಟೆಲ್ 3’ ಸಿನಿಮಾ ಹೊಂದಿದ್ದು, ಸಿನಿಮಾದ ಕತೆಯನ್ನು ಡಾರ್ಲಿಂಗ್ ಕೃಷ್ಣ ಅವರೇ ಬರೆದಿದ್ದಾರೆ. ಆದರೆ ಇತ್ತೀಚೆಗೆ ನಿರ್ದೇಶಕ ಗುರು ದೇಶಪಾಂಡೆ ಮತ್ತು ರಾಘವೆಂದ್ರ ನಾಯಕ್ ಅವರುಗಳು ಡಾರ್ಲಿಂಗ್ ಕೃಷ್ಣ ಅವರು ನಮ್ಮ ಕತೆ ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಯಧುನಂದನ್ ತಾವು ಗುರು ಹಾಗೂ ರಾಘವೇಂದ್ರ ವಿರುದ್ಧ ಕೇಸು ಹಾಕುವುದಾಗಿ ಹೇಳಿದ್ದಾರೆ.
ತಮ್ಮ ಮೇಲೆ ಬಂದಿರುವ ಕತೆ ಕದ್ದ ಆರೋಪಕ್ಕೆ ಸ್ಪಷ್ಟನೆ ನೀಡಲೆಂದು ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರು ಸುದ್ದಿಗೋಷ್ಠಿ ಕರೆದಿದ್ದರು, ಮಾಧ್ಯಮಗಳ ಮುಂದೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಕತೆ ಕದ್ದ ಆರೋಪ ಮಾಡುತ್ತಿರುವ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ವಿರುದ್ಧ ಸಿಟ್ಟು ಹೊರಹಾಕಿದರು. ಅಲ್ಲದೆ ಇಬ್ಬರ ಮೇಲೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
‘ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಸ್ವತಃ ರಾಘವೇಂದ್ರ ನಾಯಕ್ ಹೇಳಿದ್ದಾರೆ, ನನ್ನ ಕತೆಯ ದೃಶ್ಯಗಳನ್ನು ತೆಗೆದುಕೊಂಡಿಲ್ಲ, ಸಂಭಾಷಣೆಗಳನ್ನು ತೆಗೆದುಕೊಂಡಿಲ್ಲ ಎಂದು. ಆದರೆ ಕತೆ ಕದ್ದಿದ್ದಾರೆ ಎನ್ನುತ್ತಿದ್ದಾರೆ. ಅಸಲಿಗೆ ನಮ್ಮ ಸಿನಿಮಾನಲ್ಲಿ ಇರುವ ಕತೆ ಲಕ್ನೋನಲ್ಲಿ ನಿಜವಾಗಿ ನಡೆದಿರುವ ಕತೆ. ಅವರು ಹೇಳಿದ್ದು ಸಹ ಅದೇ ಕತೆ. ಗೋಗಲ್ನಲ್ಲಿ ಇರುವ ಕತೆಯನ್ನು ನನಗೆ ಹೇಳಿ, ಈಗ ಕತೆ ಕದ್ದಿದ್ದಾರೆ ಎನ್ನುತ್ತಿದ್ದಾರೆ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.
‘ಇವರು ಮಾಡಿರುವ ಆರೋಪದಿಂದ ಪ್ರೇಕ್ಷಕರು ನಮ್ಮನ್ನು ಅನುಮಾನದಿಂದ ನೋಡುವಂತಾಗಿದೆ. ಸತತ ನಾಲ್ಕು ವರ್ಷ ಶ್ರಮ ಹಾಕಿ ನಾವು ಕತೆ ಬರೆದಿದ್ದೀವಿ. ಮೊದಲಿಗೆ ನಾವು ಕ್ಲೈಮ್ಯಾಕ್ಸ್ ಯೋಚಿಸಿ ಆ ನಂತರವೇ ಚಿತ್ರಕತೆಗೆ ಕೂರೋದು. ನಾವು ನಾಲ್ಕು ವರ್ಷದ ಹಿಂದೆಯೇ ಸಿನಿಮಾದ ಎರಡನೇ ಅರ್ಧ ಯೋಚಿಸಿದ್ದೆವು. ಆದರೆ ಈಗ ಇವರು ಆರೋಪ ಮಾಡಿದ್ದಕ್ಕೆ ಕೆಲವು ಪ್ರೇಕ್ಷಕರು ಕತೆ ಕದ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ನಮಗೆ ಅಗೌರವ ತರುವ ವಿಷಯ, ನನಗೆ ವೈಯಕ್ತಿಕವಾಗಿ ಇದರಿಂದ ಬಹಳ ಬೇಸರ ಆಗಿದೆ’ ಎಂದಿದ್ದಾರೆ ಕೃಷ್ಣ.
‘ಸಿನಿಮಾ ಚೆನ್ನಾಗಿ ಆಗುತ್ತಿದೆ, ನಾವು ಸ್ವಲ್ಪ ಲಾಭ ಮಾಡಿಕೊಳ್ಳೋಣ ಎಂದು ಬಂದಿದ್ದರು, ಈಗ ನಮಗೆ ಹೆಸರು ಕೊಡಿ ಸಾಕು ಅಂತಿದ್ದಾರೆ. ಆದರೆ ಇದಕ್ಕೆಲ್ಲ ನಾನು ಬಗ್ಗುವುದಿಲ್ಲ. ಗುರು ದೇಶಪಾಂಡೆ ಎಂಥಹಾ ವ್ಯಕ್ತಿ ಎಂಬುದು ನನಗೆ ಗೊತ್ತು. ಇಂಥಹವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೀನಿ. ಗುರು ದೇಶಪಾಂಡೆ ನನ್ನ ಜೊತೆ ಎರಡು ಸಿನಿಮಾ ಮಾಡಿದ್ದಾರೆ, ಎರಡೂ ಸಹ ರೀಮೇಕ್ ಸಿನಿಮಾ, ಅಂಥಹವರ ಜೊತೆಗೆ ನಾನು ಕತೆ ಯಾಕೆ ಡಿಸ್ಕಸ್ ಮಾಡಲಿ’ ಎಂದಿದ್ದಾರೆ ಕೃಷ್ಣ.
‘ಸಿನಿಮಾ ರಿಲೀಸ್ ಆಗಿ ಚೆನ್ನಾಗಿ ಹೋಗುತ್ತಿತ್ತು, ಕೆಲ ದಿನ ಆದ ಮೇಲೆ ರಾತ್ರಿ 1 ಗಂಟೆಗೆ ನನಗೆ ಕಾಲ್ ಮಾಡಿ, ನನ್ನ ಕತೆ ಎತ್ತಿಬಿಟ್ಟಿದ್ದೀರ ಅಂದರು, ಅದಕ್ಕೆ ನಾನು ಯಾವ ಕತೆ ಎಂದೆ, ನನಗೆ ಇವರು ಲಕ್ನೋದ ಕತೆ ಹೇಳಿದ್ದು ಎರಡು ನಿಮಿಷದಲ್ಲಿ, ಆಗ ಒಂದು ಫೋಟೊ ಸಹ ತೋರಿಸಿದ್ದರು. ಅದಾದ ಮೇಲೆ ಒಂದು ಹಳ್ಳಿ ಕತೆ ಹೇಳಿದ್ದರು. ಇನ್ನೂ ಒಂದು ಕತೆಯನ್ನು ಡೀಟೇಲ್ ಆಗಿ ಹೇಳಿದ್ದರು. ಹಾಗಾಗಿ ನಾನು ಕತೆ ಮರೆತುಹೋಗಿದೆ ಎಂದು ಹೇಳಿದೆ. ಅವರು ಫೋನ್ ಕಟ್ ಮಾಡಿದ ಮೇಲೆ ನಾನು ಅಸ್ಪಷ್ಟ ಕೀವರ್ಡ್ ಹಾಕಿ ಗೂಗಲ್ ಮಾಡಿದಾಗ ನನಗೆ ಆ ಕತೆ ಸಿಕ್ಕಿತು. ಇವರು ಗೂಗಲ್ ನಲ್ಲಿ ಸಿಕ್ಕಿದ್ದನ್ನು ಕತೆ ಎಂದು ಹೇಳಿ, ಈಗ ಆ ಕತೆಯನ್ನು ಕದ್ದಿದ್ದೀಯ ಎನ್ನುತ್ತಿದ್ದಾರೆ’ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.
ಬೆಂಗಳೂರು, ಮಾರ್ಚ್ 25: ರಾಹುಕಾಲವನ್ನು (Rahu Kaal) ತಪ್ಪಿಸುವುದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆಳಗ್ಗೆ 10.15ಕ್ಕೆ ಬಜೆಟ್ (Karnataka Budget) ಮಂಡನೆ ಸಮಯ ನಿಗದಿಪಡಿಸಿದ್ದು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದರು. ಇದೀಗ ವಿಧಾನಸಭೆಯಲ್ಲಿ ಕೂಡ ಆ ವಿಚಾರ ಚರ್ಚೆಯಾಗಿದೆ. ರಾಹುಕಾಲ ತಪ್ಪಿಸುವುದಕ್ಕಾಗಿಯೇ ಆ ಸಮಯ ನಿಗದಿ ಮಾಡಿದ್ದು ನಿಜ ಎಂದು ಖುದ್ದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ! ಅಲ್ಲದೆ, ಅದಕ್ಕೆ ಕಾರಣವನ್ನು ಕೂಡ ಕೊಟ್ಟಿದ್ದಾರೆ.
ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬುಧವಾರ ಉತ್ತರ ನೀಡಿದರು. ಇದೇ ವೇಳೆ, ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಹುಕಾಲ ನೋಡಿಕೊಂಡು ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದ ಬಗ್ಗೆ ಉಲ್ಲೇಖಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಹೌದು, ‘ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಾರೆ’ ಎಂಬುದು ನಿಜ ಎಂದರು.
ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಕ್ಕೆ ಸಿದ್ಧರಾಮಯ್ಯ ಕೊಟ್ಟ ಕಾರಣವೇನು?
ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಾರೆ ಎಂಬುದು ನಿಜ. ಮನೆಯವರು, ಅಧಿಕಾರಿಗಳ ಮಾತು ಕೇಳಬೇಕು ಅಲ್ಲವೇ? ನಿಮ್ಮಂಥವರ ಮಾತು ಕೇಳಬೇಕು ಅಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಅಶೋಕ್, ಅವತ್ತಿನ ಪರಿಸ್ಥಿತಿ ಬೇರೆ ಇತ್ತು. ಇಂದಿನ ಪರಿಸ್ಥಿತಿ ಬೇರೆ ಇದೆ. ಮುಂದೆಯೂ ನೀವು ಬಜೆಟ್ ಮಂಡನೆ ಮಾಡಬೇಕು ಅಲ್ಲವೇ? ಅದಕ್ಕಾಗಿ ಈ ಬಾರಿ ಕಾಲ ನೋಡಿದ್ದೀರಿ ಎಂದರು.
ಸಿದ್ದರಾಮಯ್ಯ ಹೇಳಿದ್ದೇನು?
ಅಶೋಕ್ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ರಾಹುಕಾಲ, ಯಮಗಂಡಕಾಲ ಮತ್ತು ಗುಳಿಕಕಾಲ ಇದನ್ನೆಲ್ಲಾ ನಾನು ನಂಬಲ್ಲ. ಅಧಿಕಾರಿಗಳ ಹಾಗೂ ಮನೆಯವರ ಮಾತು ಕೇಳಿ ಸಮಯ ನೋಡಿದ್ದೇನೆ ಅಷ್ಟೇ. ನಾನು ಶಿವರಾತ್ರಿ ಹಾಗೂ ಯುಗಾದಿಯಲ್ಲಿ ಮಾಂಸ ತಿಂದಿದ್ದೇನೆ. ನೀವು ತಿಂದಿದ್ದೀರಾ ಎಂದು ಪ್ರಶ್ನಿಸಿದರು.
ಸಾಮಾನ್ಯವಾಗಿ ಬಜೆಟ್ ಮಂಡನೆ ಬೆಳಗ್ಗೆ 10 ಗಂಟೆ ಅಥವಾ 11 ಗಂಟೆಗೆ ಮಾಡುತ್ತಾರೆ. ಆದರೆ ಈ ಬಾರಿ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ ಸಮಯ ನಿಗದಿ ಮಾಡಿಕೊಂಡಿದ್ದಾರೆ. ಏಕೆಂದು ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು, ಬೆಳಗ್ಗೆ 10. 30 ರಿಂದ ರಾಹು ಕಾಲ ಇದೆ ಎಂಬುದು. ಬೆಳಗ್ಗೆ 7.30 ಗಂಟೆ ಯಿಂದ 9 ಗಂಟೆಯವರೆಗೂ ಗುಳಿಕಾಲ. #ಮೂಢನಂಬಿಕೆ ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಬಜೆಟ್ ದಿನವೇ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ದಳಪತಿ ವಿಜಯ್ ಕೊನೆಯ ಸಿನಿಮಾ ಎನ್ನಲಾಗಿದ್ದ ‘ಜನ ನಾಯಗನ್’ ರಿಲೀಸ್ಗೆ ಅಭಿಮಾನಿಗಳು ಕಾದಿದ್ದರು. ಆದರೆ, ಸಿನಿಮಾ ಸದ್ಯಕ್ಕಂತೂ ರಿಲೀಸ್ ಆಗೋದು ಅನುಮಾನವೇ. ಸದ್ಯ ವಿಜಯ್ ಅವರು ತಮಿಳುನಾಡು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರ ಸಿನಿಮಾ ಭವಿಷ್ಯ ಈಗಲೇ ಮುಗಿದಿಲ್ಲ ಎಂದು ಹೇಳಲಾಗುತ್ತಾ ಇದೆ. ಚುನಾವಣೆ ಫಲಿತಾಂಶ ಎಲ್ಲವನ್ನೂ ನಿರ್ಧಾರ ಮಾಡಲಿದೆ.
ವಿಜಯ್ ಅವರು ರಾಜಕೀಯಕ್ಕೆ ಕಾಲಿಡಬೇಕು ಎಂದು ನಿರ್ಧರಿಸಿಯಾಗಿದೆ. ಟಿವಿಕೆ ಹೆಸರಿನ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಪಕ್ಷ ತಮಿಳುನಾಡಿನಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಗುರಿ ಹೊಂದಿದ್ದಾರೆ. ದಳಪತಿ ವಿಜಯ್ಗೆ ರಾಜಕೀಯ ಹೊಸದು. ಅವರು ತಮ್ಮ ಜನಪ್ರಿಯತೆ ಬಳಸಿ ಮೊದಲ ಚುನಾವಣೆಯಲ್ಲೇ ಗೆದ್ದೇ ಬಿಡುತ್ತಾರೆ ಎಂದು ಹೇಳೋದು ಕಷ್ಟ.
ಒಂದೊಮ್ಮೆ ಟಿವಿಕೆ ಪಕ್ಷ ಚುನಾವಣೆಯಲ್ಲಿ ಬಹುಮತ ಪಡೆದರೆ ವಿಜಯ್ ತಮಿಳುನಾಡು ಸಿಎಂ ಆಗಲಿದ್ದಾರೆ. ಒಂದೊಮ್ಮೆ ರಾಜಕೀಯ ಕೈ ಹಿಡಿಯದೇ ಇದ್ದರೆ ಮುಂದಿನ ಐದು ವರ್ಷಗಳ ಕಾಲ ಅವರು ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡುವ ಗುರಿ ಹೊಂದಿದ್ದಾರೆ. ಈ ವೇಳೆ ಅವರು ಹಿಂಬದಿಯಲ್ಲಿ ಪಕ್ಷ ಬೆಳೆಸುವ ಕಾರ್ಯವನ್ನೂ ಮಾಡಲಿದ್ದಾರೆ.
ಅಟ್ಲಿ ಅವರು ಸದ್ಯ ಅಲ್ಲು ಅರ್ಜುನ್ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ಒಂದೊಮ್ಮೆ ವಿಜಯ್ ರಾಜಕೀಯ ಭವಿಷ್ಯ ಅತಂತ್ರವಾದರೆ ಅಟ್ಲಿ ಜೊತೆ ವಿಜಯ್ ಸಿನಿಮಾ ಮಾಡುವ ಸಾಧ್ಯತೆ ಇದೆಯಂತೆ. ರಾಜಕೀಯದಲ್ಲಿ ಯಶಸ್ಸು ಸಿಗದೆ ಇದ್ದರೆ ಅಕ್ಟೋಬರ್ ಅಲ್ಲಿ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ.
ವಿಜಯ್ ಅವರು ಟಿವಿಕೆ ಪಕ್ಷ ಕಟ್ಟಿ ಅದನ್ನು ಬೆಳೆಸುತ್ತಿದ್ದಾರೆ. ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ. ಈ ಪ್ರಕರಣದಲ್ಲಿ ಅವರು ಇನ್ನೂ ತನಿಖೆ ಎದುರಿಸುತ್ತಿದ್ದಾರೆ.
ಕಾರವಾರ, ಮಾರ್ಚ್ 25: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿ ಬಳಿ ಕಾಂಗ್ರೆಸ್ (Congress) ಮುಖಂಡ ಗೋಪಾಲಕೃಷ್ಣ ನಾಯ್ಕ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗೋಪಾಲಕೃಷ್ಣ ನಾಯ್ಕ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಗೋವಾ ನೋಂದಣಿಯ ಫೋರ್ಡ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಮೊದಲು ರಾಡ್‌ನಿಂದ ಹಲ್ಲೆ ನಡೆಸಿದ ಬಳಿಕ, ಚಾಕುವಿನಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಸದ್ಯ, ಗಂಭೀರ ಗಾಯಗೊಂಡಿರುವ ಗೋಪಾಲಕೃಷ್ಣ ನಾಯ್ಕರನ್ನು ಅಂಕೋಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ದಾಳಿ ನಡೆಸಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಅಂಕೋಲ ಠಾಣೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ದಾಳಿಯ ಹಿಂದಿನ ಕಾರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲೂ ಆತಂಕ ಉಂಟುಮಾಡಿದೆ.
(ಮಾಹಿತಿ ಅಪ್ಡೇಟ್ ಆಗಲಿದೆ)
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ