All posts by nagaraj11081993

ರಾಹುಕಾಲ ಬಿಟ್ಟು ಬಜೆಟ್ ಮಂಡಿಸಿದ್ದು ನಿಜವೆಂದ ಸಿದ್ದರಾಮಯ್ಯ! ಕೊಟ್ಟ ಕಾರಣ ಏನು ಗೊತ್ತಾ?

ರಾಹುಕಾಲ ಬಿಟ್ಟು ಬಜೆಟ್ ಮಂಡಿಸಿದ್ದು ನಿಜವೆಂದ ಸಿದ್ದರಾಮಯ್ಯ! ಕೊಟ್ಟ ಕಾರಣ ಏನು ಗೊತ್ತಾ?

ಬೆಂಗಳೂರು, ಮಾರ್ಚ್ 25: ರಾಹುಕಾಲವನ್ನು (Rahu Kaal) ತಪ್ಪಿಸುವುದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆಳಗ್ಗೆ 10.15ಕ್ಕೆ ಬಜೆಟ್ (Karnataka Budget) ಮಂಡನೆ ಸಮಯ ನಿಗದಿಪಡಿಸಿದ್ದು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದರು. ಇದೀಗ ವಿಧಾನಸಭೆಯಲ್ಲಿ ಕೂಡ ಆ ವಿಚಾರ ಚರ್ಚೆಯಾಗಿದೆ. ರಾಹುಕಾಲ ತಪ್ಪಿಸುವುದಕ್ಕಾಗಿಯೇ ಆ ಸಮಯ ನಿಗದಿ ಮಾಡಿದ್ದು ನಿಜ ಎಂದು ಖುದ್ದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ! ಅಲ್ಲದೆ, ಅದಕ್ಕೆ ಕಾರಣವನ್ನು ಕೂಡ ಕೊಟ್ಟಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬುಧವಾರ ಉತ್ತರ ನೀಡಿದರು. ಇದೇ ವೇಳೆ, ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಹುಕಾಲ ನೋಡಿಕೊಂಡು ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದ ಬಗ್ಗೆ ಉಲ್ಲೇಖಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಹೌದು, ‘ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಾರೆ’ ಎಂಬುದು ನಿಜ ಎಂದರು.

ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಕ್ಕೆ ಸಿದ್ಧರಾಮಯ್ಯ ಕೊಟ್ಟ ಕಾರಣವೇನು?

ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಾರೆ ಎಂಬುದು ನಿಜ. ಮನೆಯವರು, ಅಧಿಕಾರಿಗಳ ಮಾತು ಕೇಳಬೇಕು ಅಲ್ಲವೇ? ನಿಮ್ಮಂಥವರ ಮಾತು ಕೇಳಬೇಕು ಅಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಅಶೋಕ್, ಅವತ್ತಿನ ಪರಿಸ್ಥಿತಿ ಬೇರೆ ಇತ್ತು. ಇಂದಿನ ಪರಿಸ್ಥಿತಿ ಬೇರೆ ಇದೆ. ಮುಂದೆಯೂ ನೀವು ಬಜೆಟ್ ಮಂಡನೆ ಮಾಡಬೇಕು ಅಲ್ಲವೇ? ಅದಕ್ಕಾಗಿ ಈ ಬಾರಿ ಕಾಲ ನೋಡಿದ್ದೀರಿ ಎಂದರು.

ಸಿದ್ದರಾಮಯ್ಯ ಹೇಳಿದ್ದೇನು?

ಅಶೋಕ್ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ರಾಹುಕಾಲ, ಯಮಗಂಡಕಾಲ ಮತ್ತು ಗುಳಿಕಕಾಲ ಇದನ್ನೆಲ್ಲಾ ನಾನು ನಂಬಲ್ಲ. ಅಧಿಕಾರಿಗಳ ಹಾಗೂ ಮನೆಯವರ ಮಾತು ಕೇಳಿ ಸಮಯ ನೋಡಿದ್ದೇನೆ ಅಷ್ಟೇ. ನಾನು ಶಿವರಾತ್ರಿ ಹಾಗೂ ಯುಗಾದಿಯಲ್ಲಿ ಮಾಂಸ ತಿಂದಿದ್ದೇನೆ. ನೀವು ತಿಂದಿದ್ದೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 10.15ಕ್ಕೇ ಸಿದ್ದರಾಮಯ್ಯ ಬಜೆಟ್ ಮಂಡನೆ ಏಕೆ? ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೊಟ್ಟರು ಅಚ್ಚರಿಯ ಕಾರಣ! ನಿಜವಿರಬಹುದೇ?

ಸಾಮಾನ್ಯವಾಗಿ ಬಜೆಟ್ ಮಂಡನೆ ಬೆಳಗ್ಗೆ 10 ಗಂಟೆ ಅಥವಾ 11 ಗಂಟೆಗೆ ಮಾಡುತ್ತಾರೆ. ಆದರೆ ಈ ಬಾರಿ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ ಸಮಯ ನಿಗದಿ ಮಾಡಿಕೊಂಡಿದ್ದಾರೆ. ಏಕೆಂದು ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು, ಬೆಳಗ್ಗೆ 10. 30 ರಿಂದ ರಾಹು ಕಾಲ ಇದೆ ಎಂಬುದು. ಬೆಳಗ್ಗೆ 7.30 ಗಂಟೆ ಯಿಂದ 9 ಗಂಟೆಯವರೆಗೂ ಗುಳಿಕಾಲ. #ಮೂಢನಂಬಿಕೆ ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಬಜೆಟ್ ದಿನವೇ ಫೇಸ್​​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣೆ ಫಲಿತಾಂಶದ ಮೇಲೆ ದಳಪತಿ ವಿಜಯ್ ಸಿನಿಮಾ ಭವಿಷ್ಯ ನಿರ್ಧಾರ

ದಳಪತಿ ವಿಜಯ್ ಕೊನೆಯ ಸಿನಿಮಾ ಎನ್ನಲಾಗಿದ್ದ ‘ಜನ ನಾಯಗನ್’ ರಿಲೀಸ್​​ಗೆ ಅಭಿಮಾನಿಗಳು ಕಾದಿದ್ದರು. ಆದರೆ, ಸಿನಿಮಾ ಸದ್ಯಕ್ಕಂತೂ ರಿಲೀಸ್ ಆಗೋದು ಅನುಮಾನವೇ. ಸದ್ಯ ವಿಜಯ್ ಅವರು ತಮಿಳುನಾಡು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರ ಸಿನಿಮಾ ಭವಿಷ್ಯ ಈಗಲೇ ಮುಗಿದಿಲ್ಲ ಎಂದು ಹೇಳಲಾಗುತ್ತಾ ಇದೆ. ಚುನಾವಣೆ ಫಲಿತಾಂಶ ಎಲ್ಲವನ್ನೂ ನಿರ್ಧಾರ ಮಾಡಲಿದೆ.

ವಿಜಯ್ ಅವರು ರಾಜಕೀಯಕ್ಕೆ ಕಾಲಿಡಬೇಕು ಎಂದು ನಿರ್ಧರಿಸಿಯಾಗಿದೆ. ಟಿವಿಕೆ ಹೆಸರಿನ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಪಕ್ಷ ತಮಿಳುನಾಡಿನಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಗುರಿ ಹೊಂದಿದ್ದಾರೆ. ದಳಪತಿ ವಿಜಯ್​​ಗೆ ರಾಜಕೀಯ ಹೊಸದು. ಅವರು ತಮ್ಮ ಜನಪ್ರಿಯತೆ ಬಳಸಿ ಮೊದಲ ಚುನಾವಣೆಯಲ್ಲೇ ಗೆದ್ದೇ ಬಿಡುತ್ತಾರೆ ಎಂದು ಹೇಳೋದು ಕಷ್ಟ.

ಒಂದೊಮ್ಮೆ ಟಿವಿಕೆ ಪಕ್ಷ ಚುನಾವಣೆಯಲ್ಲಿ ಬಹುಮತ ಪಡೆದರೆ ವಿಜಯ್ ತಮಿಳುನಾಡು ಸಿಎಂ ಆಗಲಿದ್ದಾರೆ. ಒಂದೊಮ್ಮೆ ರಾಜಕೀಯ ಕೈ ಹಿಡಿಯದೇ ಇದ್ದರೆ ಮುಂದಿನ ಐದು ವರ್ಷಗಳ ಕಾಲ ಅವರು ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡುವ ಗುರಿ ಹೊಂದಿದ್ದಾರೆ. ಈ ವೇಳೆ ಅವರು ಹಿಂಬದಿಯಲ್ಲಿ ಪಕ್ಷ ಬೆಳೆಸುವ ಕಾರ್ಯವನ್ನೂ ಮಾಡಲಿದ್ದಾರೆ.

ಇದನ್ನೂ ಓದಿ: ಇಫ್ತಾರ್​​ಕೂಟದಲ್ಲಿ ಭಾಗಿ ಆದ ದಳಪತಿ ವಿಜಯ್; ವಿವಾದದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ

ಅಟ್ಲಿ ಅವರು ಸದ್ಯ ಅಲ್ಲು ಅರ್ಜುನ್ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ಒಂದೊಮ್ಮೆ ವಿಜಯ್ ರಾಜಕೀಯ ಭವಿಷ್ಯ ಅತಂತ್ರವಾದರೆ ಅಟ್ಲಿ ಜೊತೆ ವಿಜಯ್ ಸಿನಿಮಾ ಮಾಡುವ ಸಾಧ್ಯತೆ ಇದೆಯಂತೆ. ರಾಜಕೀಯದಲ್ಲಿ ಯಶಸ್ಸು ಸಿಗದೆ ಇದ್ದರೆ ಅಕ್ಟೋಬರ್​ ಅಲ್ಲಿ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ.
ವಿಜಯ್ ಅವರು ಟಿವಿಕೆ ಪಕ್ಷ ಕಟ್ಟಿ ಅದನ್ನು ಬೆಳೆಸುತ್ತಿದ್ದಾರೆ. ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ. ಈ ಪ್ರಕರಣದಲ್ಲಿ ಅವರು ಇನ್ನೂ ತನಿಖೆ ಎದುರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್ ಮುಖಂಡನ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾರವಾರ, ಮಾರ್ಚ್ 25: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿ ಬಳಿ ಕಾಂಗ್ರೆಸ್ (Congress) ಮುಖಂಡ ಗೋಪಾಲಕೃಷ್ಣ ನಾಯ್ಕ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗೋಪಾಲಕೃಷ್ಣ ನಾಯ್ಕ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಗೋವಾ ನೋಂದಣಿಯ ಫೋರ್ಡ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಮೊದಲು ರಾಡ್‌ನಿಂದ ಹಲ್ಲೆ ನಡೆಸಿದ ಬಳಿಕ, ಚಾಕುವಿನಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಸದ್ಯ, ಗಂಭೀರ ಗಾಯಗೊಂಡಿರುವ ಗೋಪಾಲಕೃಷ್ಣ ನಾಯ್ಕರನ್ನು ಅಂಕೋಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ದಾಳಿ ನಡೆಸಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಅಂಕೋಲ ಠಾಣೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ದಾಳಿಯ ಹಿಂದಿನ ಕಾರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲೂ ಆತಂಕ ಉಂಟುಮಾಡಿದೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೋರ್​ವೆಲ್ ಕೊರೆಯಲು ಹೋಗಿ ಮೆಟ್ರೋ ಸುರಂಗದಲ್ಲಿ 6 ಇಂಚು ರಂಧ್ರ ಸೃಷ್ಟಿ

ಪುಣೆ, ಮಾರ್ಚ್​ 25: ಮೆಟ್ರೋ(Metro) ಮಾರ್ಗದ ಮೇಲೆ ಬೋರ್​ವೆಲ್ ಕೊರೆಯಲು ಹೋಗಿ ಕೆಳಗೆ ಸುರಂಗ ಮಾರ್ಗದಲ್ಲಿ 6 ಇಂಚುಗಳಷ್ಟು ರಂಧ್ರ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಖಡಕ್ ಪೊಲೀಸರು ಬೋರ್‌ವೆಲ್ ಗುತ್ತಿಗೆದಾರ ಮತ್ತು ಮನೆಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಿವಾಜಿ ರಸ್ತೆಯ ಬಳಿ ಘಟನೆ ನಡೆದಿದೆ. ಶಿವಾಜಿನಗರ ಮತ್ತು ಸ್ವರ್ಗೇಟ್ ನಡುವಿನ ಭೂಗತ ಕಾರಿಡಾರ್‌ನ ಭಾಗವಾಗಿರುವ ಮಂಡೈ ಮೆಟ್ರೋ ನಿಲ್ದಾಣದ ಬಳಿಯ ಸುರಂಗ ರಚನೆಗೆ ಕೊರೆಯುವಿಕೆಯು ಹಾನಿಯನ್ನುಂಟುಮಾಡಿದೆ ಎಂದು ವರದಿಯಾಗಿದೆ.

ಕೊರೆಯುವಿಕೆಯು 80 ರಿಂದ 100 ಅಡಿ ಆಳದಲ್ಲಿರುವ ಮೆಟ್ರೋ ಸುರಂಗದಲ್ಲಿ ಸುಮಾರು ಆರು ಇಂಚು ವ್ಯಾಸದ ರಂಧ್ರವನ್ನು ಸೃಷ್ಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರೆಯುವಿಕೆಯು ಮೆಟ್ರೋ ಮಾರ್ಗದ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮೆಟ್ರೋ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ, ಬೋರ್​ವೆಲ್ ಕೊರೆಯುವಿಕೆಯನ್ನು ಸ್ಥಗಿತಗೊಳಿಸಿದ್ದಾರೆ.ಮೆಟ್ರೋ ಅಧಿಕಾರಿ ಶಾಂತನು ಗೋರಟ ಅವರು ಮಾತನಾಡಿ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125 ಮತ್ತು 324 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ, ಇದು ಜೀವಕ್ಕೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯದ ಕೃತ್ಯಗಳಿಗೆ ಇದು ಸಂಬಂಧಿಸಿದೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು

 

ಗುತ್ತಿಗೆದಾರ ಮತ್ತು ಮನೆಮಾಲೀಕ ಇಬ್ಬರೂ ಅಲ್ಲೇ ಕೆಲಗಡೆ ಮೆಟ್ರೋ ಸುರಂಗ ಮಾರ್ಗ ಇರುವ ಬಗ್ಗೆ ಅರಿತಿದ್ದರು, ಆದರೂ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸುರಂಗ ಮಾರ್ಗಗಳ ಬಳಿ ಕೊರೆಯುವ ಬಗ್ಗೆ ಈಗಾಗಲೇ ಏಜೆನ್ಸಿಗಳು ಮತ್ತು ನಾಗರಿಕರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಮಹಾ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಸುರಂಗ ಮಾರ್ಗಗಳ ಉದ್ದಕ್ಕೂ ಬೋರ್‌ವೆಲ್‌ಗಳನ್ನು ಅಗೆಯುವಾಗ ಮುನ್ನೆಚ್ಚರಿಕೆ ವಹಿಸುವಂತೆ ನಾವು ಅಂತರ್ಜಲ ಸಮೀಕ್ಷಾ ಸಂಸ್ಥೆ ಮತ್ತು ನಾಗರಿಕ ಆಡಳಿತಕ್ಕೆ ಸೂಚನೆ ನೀಡುತ್ತಿದ್ದೆವು.
ನಮಗೆ 24 ಅಡಿ ಆಳದಲ್ಲಿ ನೀರಿನ ವರತೆ ಇರುವುದು ಗೊತ್ತಾಗಿತ್ತು, ಆದರೆ ಅದು ಮೆಟ್ರೋ ಸುರಂಗ ಮಾರ್ಗವನ್ನು ಕೊರೆಯಬಹುದು ಎನ್ನುವ ಊಹೆ ನಮಗಿರಲಿಲ್ಲ. ನಾವು ಅಪರಾಧಿಗಳಲ್ಲ. ಅಧಿಕಾರಿಗಳು ನಮ್ಮೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಬೇಕಿತ್ತು ಎಂದು ಮನೆ ಮಾಲೀಕ ಹೇಳಿಕೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಸಚಿವರಾಗಿದ್ದೂ ಸಿನಿಮಾಗಳಲ್ಲಿ ನಟನೆ: ಪವನ್ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್ (Pawan Kalyan), ಕೆಲವು ಪ್ರಮುಖ ಸಚಿವ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಮೇಲೆ ಭಾರಿ ದೊಡ್ಡ ಜವಾಬ್ದಾರಿ ಇದೆ. ಜನಸೇವೆಯನ್ನು ಮಾಡಲೆಂದು ಜನ ನಂಬಿಕೆ ಇಟ್ಟು ಅವರನ್ನು ಆರಿಸಿ ಕಳಿಸಿದ್ದಾರೆ. ಆದರೆ ಪವನ್ ಕಲ್ಯಾಣ್ ಅವರು ಡಿಸಿಎಂ ಆದ ಬಳಿಕ ಸಿನಿಮಾನಲ್ಲಿ ನಟಿಸುತ್ತಿದ್ದು, ಡಿಸಿಎಂ ಆದ ಬಳಿಕ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಇದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಮಯ ಹಾಗೂ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಹೈಕೋರ್ಟ್ ಈ ಬಗ್ಗೆ ತೀರ್ಪು ಪ್ರಕಟಿಸಿದೆ.

ಮಾಜಿ ಐಎಎಸ್ ಅಧಿಕಾರಿ ಜಿ ವಿಜಯ್ ಕುಮಾರ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈ ಬಗ್ಗೆ ಸಲ್ಲಿಸಿದ್ದರು. ‘ಒಬ್ಬ ವ್ಯಕ್ತಿಯು ಸಚಿವ ಅಥವಾ ಉಪಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿದ್ದಾಗ ವಾಣಿಜ್ಯ ಉದ್ದೇಶದ ಸಿನಿಮಾಗಳಲ್ಲಿ ನಟಿಸುವುದು ಅಸಂವಿಧಾನಿಕ ಮತ್ತು ನೈತಿಕವಾಗಿ ತಪ್ಪು. ಇದು ಹಿತಾಸಕ್ತಿ ಸಂಘರ್ಷಕ್ಕೆ (Conflict of Interest) ಕಾರಣವಾಗುತ್ತದೆ’ ಎಂದು ಅವರು ವಾದಿಸಿದ್ದರು. ಅಲ್ಲದೆ, ಪವನ್ ಕಲ್ಯಾಣ್ ಅವರ ಸಿನಿಮಾಗಳ ಟಿಕೆಟ್ ದರ ಏರಿಕೆ, ಹೆಚ್ಚುವರಿ ಶೋಗಳ ಪ್ರದರ್ಶನ ಮತ್ತು ಪ್ರಚಾರಕ್ಕಾಗಿ ಸರ್ಕಾರಿ ಯಂತ್ರದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಆಂಧ್ರ ಪ್ರದೇಶ ಹೈಕೋರ್ಟ್, ಮುಖ್ಯಮಂತ್ರಿಗಳು ಅಥವಾ ಸಚಿವರು ಸಿನಿಮಾಗಳಲ್ಲಿ ನಟಿಸುವುದಕ್ಕೆ ಯಾವುದೇ ಕಾನೂನುಬದ್ಧ ನಿಷೇಧವಿಲ್ಲ ಎಂದಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಟಿ ರಾಮರಾವ್ ಅವರ ವಿರುದ್ಧವೂ ಇಂತಹುದೇ ಪ್ರಕರಣ ದಾಖಲಾಗಿತ್ತು. ಆಗ ಹೈಕೋರ್ಟ್‌ನ ಪೂರ್ಣ ಪೀಠವು ‘ಮುಖ್ಯಮಂತ್ರಿ ಅಥವಾ ಸಚಿವರು ಸಿನಿಮಾಗಳಲ್ಲಿ ನಟಿಸುವುದಕ್ಕೆ ಯಾವುದೇ ಸಾಂವಿಧಾನಿಕ ಅಡ್ಡಿಯಿಲ್ಲ’ ಎಂದು ತೀರ್ಪು ನೀಡಿತ್ತು. ಅದೇ ತೀರ್ಪನ್ನು ಈಗ ಪವನ್ ಕಲ್ಯಾಣ್ ಪ್ರಕರಣದಲ್ಲೂ ಉಲ್ಲೇಖಿಸಲಾಗಿದೆ. ಅರ್ಜಿದಾರರು ಯಾವುದೇ ಬಲವಾದ ಸಾಕ್ಷ್ಯಾಧಾರಗಳನ್ನು ಒದಗಿಸದ ಕಾರಣ ಮತ್ತು ಈ ಅರ್ಜಿಯು ರಾಜಕೀಯ ಪ್ರೇರಿತವಾಗಿ ಕಾಣುತ್ತಿರುವುದರಿಂದ ನ್ಯಾಯಾಲಯವು ಇದನ್ನು ವಜಾಗೊಳಿಸಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ

ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆದ ಬಳಿಕ ಅವರ ನಟನೆಯ ‘ಹರಿ ಹರ ವೀರ ಮಲ್ಲು’, ‘OG’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಬಿಡುಗಡೆ ಆದವು. ಉಪ ಮುಖ್ಯಮಂತ್ರಿ ಆಗಿದ್ದಾಗಲೇ ಈ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟನೆ ಸಹ ಮಾಡಿದರು. ಆಡಳಿತ, ರಾಜಕೀಯದ ಕೆಲಸಗಳ ನಡುವೆ ಪವನ್ ಅವರು ಸಿನಿಮಾ ಚಿತ್ರೀಕರಣಕ್ಕಾಗಿ ಸಮಯ ಹೊಂದಿಸಿಕೊಂಡಿದ್ದರು. ಅಲ್ಲದೆ, ತಮ್ಮ ಜನಸೇವೆಯ ಕೆಲಸಗಳಿಗೆ ತೊಂದರೆ ಆಗದಂತೆ ಚಿತ್ರೀಕರಣ ಮಾಡಿರುವುದಾಗಿ ಪವನ್ ಅವರು ಹೇಳಿಕೊಂಡಿದ್ದಾರೆ.

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ಪವನ್ ಕಲ್ಯಾಣ್, ‘ತಮ್ಮ ಜೀವನೋಪಾಯಕ್ಕೆ ಮತ್ತು ಆರ್ಥಿಕವಾಗಿ ಸ್ವತಂತ್ರವಾಗಿರಲು ಸಿನಿಮಾ ವೃತ್ತಿಯ ಅಗತ್ಯವಿದೆ. ಆದರೆ ಆಡಳಿತಕ್ಕೆ ಯಾವುದೇ ತೊಂದರೆಯಾಗದಂತೆ ದಿನಕ್ಕೆ ಕೇವಲ ಕೆಲವು ಗಂಟೆಗಳನ್ನು ಮಾತ್ರ ಸಿನಿಮಾಗಾಗಿ ಮೀಸಲಿಡುತ್ತೇನೆ’ ಎಂದು ತಿಳಿಸಿದ್ದರು. ಅಲ್ಲದೆ, ಚುನಾವಣೆಗೆ ಧುಮುಕುವ ಮೊದಲು ಒಪ್ಪಿಕೊಂಡಿದ್ದ ಸಿನಿಮಾಗಳನ್ನಷ್ಟೆ ಪವನ್ ಕಲ್ಯಾಣ್ ಮುಗಿಸಿ ಕೊಟ್ಟಿದ್ದು, ಇನ್ನು ಮುಂದೆ ಅಧಿಕಾರದಲ್ಲಿ ಇರುವವರೆಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ನವದೆಹಲಿ, ಮಾರ್ಚ್ 25: ದೇಶದ ಹಲವೆಡೆ ಎಲ್​ಪಿಜಿಗೆ ತತ್ವಾರವಾಗಿರುವಂತೆ, ಈಗ ಪೆಟ್ರೋಲ್ ಮತ್ತು ಡೀಸಲ್​ಗೂ ಜನರು ಹಾಹಾಕಾರ ಶುರುವಿಟ್ಟುಕೊಂಡಿದ್ದಾರೆ. ಪೆಟ್ರೋಲ್, ಡೀಸಲ್ ಕೊರತೆ ಇದೆ ಎನ್ನುವ ವದಂತೆ ಕೆಲ ನಗರ ಮತ್ತು ಪ್ರದೇಶಗಳಲ್ಲಿ ದಟ್ಟವಾಗಿ ಹಬ್ಬುತ್ತಿದೆ. ಹೈದರಾಬಾದ್ ಇತ್ಯಾದಿ ಕಡೆ ಜನರು ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದು ಫುಲ್ ಟ್ಯಾಂಕ್ ತುಂಬಿಸಿಕೊಳ್ಳಲು ಯತ್ನಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಂಗಳೂರಿನಲ್ಲೂ ಹಲವೆಡೆ ಜನರು ಪೆಟ್ರೋಲ್ ಬಂಕ್​ಗಳಲ್ಲಿ (Petrol) ಎಂದಿಗಿಂತ ಹೆಚ್ಚು ಕ್ಯೂ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ. ಇದೇ ವೇಳೆ, ಪೆಟ್ರೋಲ್, ಡೀಸಲ್ ಕೊರತೆ ಎಲ್ಲಿಯೂ ಇಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ಇದೇ ವೇಳೆ ಸ್ಪಷ್ಟಪಡಿಸಿವೆ.

‘ಕೆಲ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಕೊರತೆ ಇದೆ ಎನ್ನುವ ವದಂತಿ ಆಧಾರ ರಹಿತವಾಗಿದೆ. ದೇಶಾದ್ಯಂತ ಎಲ್ಲಿಯೂ ಇಂಧನ ಕೊರತೆ ಇಲ್ಲ. ಭಾರತವು ಪೆಟ್ರೋಲ್ ಮತ್ತು ಡೀಸಲ್ ರಫ್ತು ಮಾಡುವ ದೇಶವಾಗಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದ ಕಚ್ಛಾ ತೈಲ, ಪೆಟ್ರೋಲ್, ಡೀಸಲ್ ಮತ್ತು ಎಟಿಎಫ್ ಸಂಗ್ರಹ ಇದೆ. ಸರಬರಾಜು ಸರಪಳಿ ಯಾವುದೇ ವ್ಯತ್ಯಯಗೊಳ್ಳದೆ ಕಾರ್ಯನಿರ್ವಹಿಸುತ್ತಿವೆ’ ಎಂದು ಭಾರತ್ ಪೆಟ್ರೋಲಿಯಂ ನಿಗಮ ಸಂಸ್ಥೆಯು ಹೇಳಿಕೆ ನೀಡಿದೆ.

ಇದನ್ನೂ ಓದಿ: Oil Prices: ಟ್ರಂಪ್ ವರಸೆ ಬದಲು; ಕಚ್ಛಾ ತೈಲ ಬೆಲೆ ದಿಢೀರ್ ಇಳಿಕೆ

‘ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತ ಸಂಸ್ಥೆಯು ಪೂರ್ಣವಾಗಿ ಕಾರ್ಯಾಚರಿಸುತ್ತಿದ್ದು, ತಡೆರಹಿತವಾಗಿ ಇಂಧನ ಪೂರೈಕೆ ಮಾಡಲು ಬದ್ಧವಾಗಿದೆ. ನಾಗರಿಕರು ಆತಂಕಕ್ಕೊಳಗಾಗಿ ಅನಗತ್ಯವಾಗಿ ಇಂಧನ ಖರೀದಿಗೆ ಮುಂದಾಗಬಾರದೆಂದು ಕೇಳಿಕೊಳ್ಳುತ್ತೇವೆ. ಇಂಧನ ಲಭ್ಯತೆ ಸಾಕಷ್ಟಿದೆ ಮತ್ತು ಸ್ಥಿರವಾಗಿದೆ’ ಎಂದು ಸಂಸ್ಥೆಯು ತಿಳಿಸಿದೆ.

ಕರ್ನಾಟಕದಲ್ಲಿ ಪೆಟ್ರೋಲ್, ಎಲ್​ಪಿಜಿಗೆ ನಾಗರಿಕರ ಹಾಹಾಕಾರ

ಇಂದೋರ್, ಅಹ್ಮದಾಬಾದ್, ಸೂರತ್, ಕಚ್ಛ್, ಹೈದರಾಬಾದ್, ನಾಗಪುರ್ ಮೊದಲಾದ ನಗರಗಳಲ್ಲಿ ಅನೇಕ ಪೆಟ್ರೋಲ್ ಪಂಪ್​ಗಳಲ್ಲಿ ವಾಹನ ಸವಾರರು ಪೆಟ್ರೋಲ್, ಡೀಸಲ್ ತುಂಬಿಸಿಕೊಳ್ಳಲು ಉದ್ದುದ್ದ ಸರದಿಯಲ್ಲಿ ನಿಂತಿರುವ ದೃಶ್ಯಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಎಲ್​ಪಿಜಿ ಸಿಲಿಂಡರ್ ಬುಕ್ ಆಗುತ್ತಿಲ್ಲದಿರುವುದು, ಬುಕ್ ಆದರೂ ಡೆಲಿವರಿ ಆಗುತ್ತಿಲ್ಲದೇ ಇರುವುದು ಬಹಳ ಜನರಿಗೆ ಆತಂಕ ಮೂಡಿಸಿದೆ. ಅನೇಕ ಹೋಟೆಲ್, ಮುಂಗಟ್ಟುಗಳು ಬಾಗಿಲು ಬಂದ್ ಮಾಡುವ ಸ್ಥಿತಿ ಬಂದಿದೆ. ಪೆಟ್ರೋಲ್ ಮತ್ತು ಡೀಸಲ್​ಗೂ ಇದೇ ಪರಿಸ್ಥಿತಿ ಬರಬಹುದು ಎಂಬುದು ಜನರ ಆತಂಕ.

ಇದನ್ನೂ ಓದಿ: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

ಎಲ್​ಪಿಜಿಯಾದರೆ ಭಾರತ ಆಮದು ಮೇಲೆ ಹೆಚ್ಚು ಅವಲಂಬಿತವಾಗಿದೆ. ಅದರಲ್ಲೂ ಗಲ್ಫ್ ರಾಷ್ಟ್ರಗಳಿಂದ ಹೆಚ್ಚಿನ ಸರಬರಾಜು ಆಗುತ್ತದೆ. ಹೀಗಾಗಿ, ಎಲ್​ಪಿಜಿಗೆ ಕೊರತೆಯ ಸ್ಥಿತಿ ಇರುವುದು ವಾಸ್ತವವೇ. ಆದರೆ, ಕಚ್ಛಾ ತೈಲಕ್ಕೆ ಭಾರತ ರಷ್ಯಾದಿಂದ ಪೂರೈಕೆ ಪಡೆಯುತ್ತಿದೆ. ಕಚ್ಛಾ ತೈಲ ಪಡೆದು ಅದನ್ನು ಸಂಸ್ಕರಿಸಿ ಪೆಟ್​ರೋಲಿಯಂ ಉತ್ಪನ್ನಗಳನ್ನು ಭಾರತವೇ ತಯಾರಿಸುತ್ತದೆ. ಅನೇಕ ದೇಶಗಳಿಗೆ ರಫ್ತು ಕೂಡ ಮಾಡುತ್ತದೆ. ಹೀಗಾಗಿ, ಪೆಟ್ರೋಲ್ ಮತ್ತು ಡೀಸಲ್ ದಾಸ್ತಾನು ಭಾರತದಲ್ಲಿ ಸಾಕಷ್ಟಿದೆ ಎನ್ನುವುದು ಸರ್ಕಾರದ ವಾದ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಮರ್ಷಿಯಲ್ ಅಷ್ಟೇ ಅಲ್ಲ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಕಿಲೋಮೀಟರ್ ಉದ್ದದ ಕ್ಯೂ!

ಬೆಂಗಳೂರು, ಮಾರ್ಚ್ 25: ಕರ್ನಾಟಕದ ವಿವಿಧ ಕಡೆಗಳಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆ ತೀವ್ರಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಕೊರತೆ ಎದ್ದು ಕಾಣುತ್ತಿದೆ. ಕಲಬುರಗಿ, ಆಳಂದ, ಬಳ್ಳಾರಿ, ಸಂಡೂರು ಮತ್ತು ದಾವಣಗೆರೆಯ ಜಗಳೂರಿನಲ್ಲಿ ಜನರು ಗ್ಯಾಸ್ ಸಿಲಿಂಡರ್‌ಗಳಿಗಾಗಿ ಪರದಾಡುತ್ತಿದ್ದಾರೆ. ಇಂಡಿಯನ್ ಗ್ಯಾಸ್ ಏಜೆನ್ಸಿಗಳ ಮುಂದೆ ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಕಂಡುಬಂದಿವೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರೂ ಸಹ ಸಿಲಿಂಡರ್ ಪಡೆಯಲು ಮಳೆ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಕಾಯುತ್ತಿದ್ದಾರೆ. ಖಾಲಿ ಸಿಲಿಂಡರ್‌ಗಳನ್ನು ಕಿಲೋಮೀಟರ್‌ಗಟ್ಟಲೆ ದೂರದಲ್ಲಿ ಇಟ್ಟು ಸರದಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಳ್ಳಾರಿಯ ಗಗನಶ್ರೀ ಇಂಡಿಯನ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ 15ರಿಂದ 18 ದಿನಗಳಿಂದ ಸಿಲಿಂಡರ್ ಪೂರೈಕೆಯಾಗದೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೆ ಏಜೆನ್ಸಿ ಸಿಬ್ಬಂದಿಯೇ ಮನೆಗೆ ಸಿಲಿಂಡರ್ ತಲುಪಿಸುತ್ತಿದ್ದರು. ಆದರೆ, ಈಗ ಗ್ರಾಹಕರು ನೇರವಾಗಿ ಏಜೆನ್ಸಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಅಡುಗೆ ಮಾಡಲು ಸಿಲಿಂಡರ್ ಇಲ್ಲದೆ, ಹೋಟೆಲ್‌ಗಳಲ್ಲಿ ದುಪ್ಪಟ್ಟು ಬೆಲೆ ತೆತ್ತು ಊಟ ಮಾಡಬೇಕಾದ ಅನಿವಾರ್ಯತೆ ಕುರಿತು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ಕೆಲವೆಡೆ ಸಿಲಿಂಡರ್ ಸ್ಟಾಕ್ ಬಂದ ತಕ್ಷಣ ಜನರು ಮುಗಿಬಿದ್ದು ಖರೀದಿಸಲು ಯತ್ನಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಏಜೆನ್ಸಿ ಮಾಲಿಕರೊಂದಿಗೆ ಗ್ರಾಹಕರ ಮಾತಿನ ಚಕಮಕಿ ಕಂಡುಬಂದಿದೆ.

ಕೆಲವು ಗ್ಯಾಸ್ ಏಜೆನ್ಸಿಗಳು ಈ ಪರಿಸ್ಥಿತಿಯ ಲಾಭ ಪಡೆದು ಬ್ಲಾಕ್ ಮಾರ್ಕೆಟ್‌ನಲ್ಲಿ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. 950 ರೂಪಾಯಿ ಬೆಲೆಯ ಸಿಲಿಂಡರ್‌ಗೆ ಹೆಚ್ಚುವರಿ 50 ರೂಪಾಯಿ ನೀಡಿ ಖರೀದಿಸಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಹಕರು ದೂರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!

ಬೆಂಗಳೂರು, ಮಾರ್ಚ್​ 25: ಕರ್ನಾಟಕ ವಿಧಾನಸಭೆಯ ಮುಂಬರುವ ಬಜೆಟ್ 2026ರ ಅಧಿವೇಶನಕ್ಕೆ ಮುನ್ನ, ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಶಾಸಕರ ಸಮೂಹ ಫೋಟೋಶೂಟ್ ಆಯೋಜಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಶಾಸಕರು ಮತ್ತು ಸಚಿವರು ಭಾಗವಹಿಸಿದರು. ವಿಧಾನಸಭೆಯ ಸದಸ್ಯರು ಒಟ್ಟಾಗಿ ಕ್ಯಾಮರಾ ಮುಂದೆ ನಿಂತು ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾವು ತಲೆ ಬಾಗುವುದಿಲ್ಲ, ಟ್ರಂಪ್ ಶಾಂತಿ ಪ್ರಸ್ತಾಪಕ್ಕೆ ಕಠಿಣ ಷರತ್ತುಗಳ ವಿಧಿಸಿದ ಇರಾನ್

ಟೆಹ್ರಾನ್, ಮಾರ್ಚ್​ 25:ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಸಂಭಾವ್ಯ ಕದನ ವಿರಾಮಕ್ಕೆ ಇರಾನ್(Iran) ಹೆಚ್ಚಿನ ಮತ್ತು ಕಠಿಣ ಷರತ್ತುಗಳನ್ನು ವಿಧಿಸಿದೆ. ಡೊನಾಲ್ಡ್ ಟ್ರಂಪ್ ಅವರ ಹೊಸ ಮಾತುಕತೆಗಳ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, ಗಲ್ಫ್‌ನಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವುದರಿಂದ ಹಿಡಿದು ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಪ್ರಮುಖ ಹಡಗು ಮಾರ್ಗದ ಮೇಲೆ ನಿಯಂತ್ರಣ ಸಾಧಿಸುವವರೆಗೆ ಇರಾನ್ ವ್ಯಾಪಕ ಬೇಡಿಕೆಗಳನ್ನು ಮುಂದಿಟ್ಟಿದೆ.

ಅಮೆರಿಕ ಮತ್ತು ಇಸ್ರೇಲ್ ಜತೆಗಿನ ನೇರ ಮುಖಾಮುಖಿ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ತಾನು ಮಣಿಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಮೆರಿಕ ಸಿದ್ಧಪಡಿಸಿದ ಶಾಂತಿ ಪ್ರಸ್ತಾವನೆಯನ್ನು ಇರಾನ್​ಗೆ ಕಳುಹಿಸಲಾಗಿದೆ, ಇರಾನ್‌ನ ಸೇನೆಯು ಅಮೆರಿಕ ನಿರ್ಧಾರಗಳನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಿದ್ದರಿಂದ, ಪಶ್ಚಿಮ ಏಷ್ಯಾದಲ್ಲಿ ತೀವ್ರ ಮಾತಿನ ಸಮರ ಭುಗಿಲೆದ್ದಿದೆ.

ಇರಾನ್‌ನ ಸಶಸ್ತ್ರ ಪಡೆಗಳ ಏಕೀಕೃತ ಕಮಾಂಡ್ ಆಗಿರುವ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಇಬ್ರಾಹಿಂ ಝೋಲ್ಫಾಕರಿ, ಅಮೆರಿಕವನ್ನು ಅಪಹಾಸ್ಯ ಮಾಡಿದ್ದರು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಒಪ್ಪಂದವನ್ನು ಬಯಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಒಂದು ದಿನದ ನಂತರ ಅವರ ಹೇಳಿಕೆಗಳು ಬಂದಿವೆ.

ಮತ್ತಷ್ಟು ಓದಿ: ಇಂಧನದ ಬೆಲೆ ಕಡಿಮೆ ಮಾಡುವ ಪ್ಲಾನ್; ಟ್ರಂಪ್ ಜೊತೆ ಯಾವ ಮಾತುಕತೆಯೂ ನಡೆದಿಲ್ಲ ಎಂದ ಇರಾನ್

ಇರಾನ್ ಬೇಡಿಕೆಗಳೇನು?

ಇರಾನ್​ನ ಮೊದಲ ಬೇಡಿಕೆ ಎಂದರೆ ಅಮೆರಿಕ ಮತ್ತು ಇಸ್ರೇಲ್ ತನ್ನ ಮಿಲಿಟರಿ ನೆಲೆಗಳು, ಇಂಧನ ಮೂಲಸೌಕರ್ಯ ಮತ್ತು ಪರಮಾಣು ಸ್ಥಾವರಗಳ ಮೇಲಿನ ಎಲ್ಲಾ ವಾಯು ಮತ್ತು ಕ್ಷಿಪಣಿದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಸ್ರೇಲ್ ಮತ್ತು ಅಮೆರಿಕವು ತಮ್ಮ ಉಳಿದ ಉನ್ನತ ನಾಯಕರನ್ನು ಗುರಿಯಾಗಿಸಬಾರದು. ಹಾಗಾಗಿ ಮಾತುಕತೆಗೆ ಬರುವ ಮುನ್ನ ತಮ್ಮ ನಾಯಕರ ಸುರಕ್ಷತೆ ಬಗ್ಗೆ ಖಾತ್ರಿ ಬಯಸುತ್ತಿದ್ದಾರೆ.

ಗಲ್ಫ್​ ರಾಷ್ಟ್ರಗಳಲ್ಲಿನ ಸೇನಾ ನೆಲೆಗಳನ್ನು ಮುಚ್ಚಬೇಕು, ಯುದ್ಧ ಪರಿಹಾರವನ್ನು ಪಾವತಿಸಬೇಕು, ಇರಾನ್ ಮೇಲಿನ ಎಲ್ಲಾ ಅಂತಾರಾಷ್ಟ್ರೀಯ ಮತ್ತು ಯುಎಸ್ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಇರಾನ್ ತನ್ನ ಕ್ಷಿಪಣಿ ಕಾರ್ಯಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ಮುಂದುವರೆಸಲು ಅವಕಾಶ ನೀಡಬೇಕು ಎಂದು ಇರಾನ್ ಕೇಳಿದೆ.

ಯುದ್ಧ ಮತ್ತು ನಿರಂತರ ನಿರ್ಬಂಧಗಳಿಂದಾಗಿ ಇರಾನ್ ಆರ್ಥಿಕತೆಯು ಒತ್ತಡದಲ್ಲಿದೆ. ಯಾವುದೇ ಒಪ್ಪಂದದ ಭಾಗವಾಗಿ ತನ್ನ ತೈಲರಫ್ತು ಮತ್ತು ಇಂಧನಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಹೇಳಿದೆ.

ಇತ್ತೀಚೆಗಷ್ಟೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತನಾಡಿ, ಇರಾನ್ ಎಂದಿಗೂ ಕದನವಿರಾಮಕ್ಕಾಗಿ ಅಮೆರಿಕವನ್ನು ಬೇಡಿಕೊಂಡಿಲ್ಲ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಿರುವಷ್ಟು ಕಾಲ ಹೋರಾಡಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಕೇಂದ್ರ ಸ್ಪಷ್ಟನೆ

ನವದೆಹಲಿ, ಮಾರ್ಚ್​ 25: ಎಲ್​ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ನಡುವೆ, ಅನಿಲ ಕಂಪನಿಗಳು ತಮ್ಮ ಬುಕಿಂಗ್ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿವೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಅಂತಹ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸರ್ಕಾರ  ಹೇಳಿದೆ.

ತಮ್ಮ ಮುಂದಿನ ಸಿಲಿಂಡರ್ ಬುಕ್ ಮಾಡಲು ಹೆಚ್ಚು ಸಮಯ ಕಾಯಬೇಕಾಗುತ್ತದೆ ಎಂದು ಹೇಳಲಾಗಿತ್ತು.
ಗ್ರಾಹಕರು ನಿಗದಿತ ಸಮಯಕ್ಕಿಂತ ಮೊದಲು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಪೂರೈಕೆಯನ್ನು ಸಮತೋಲನಗೊಳಿಸಲು ಮತ್ತು ಅಗತ್ಯವಿರುವವರಿಗೆ ಅನಿಲ ಲಭ್ಯವಾಗುವಂತೆ ನೋಡಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂದು ವರದಿಗಳು ಹೇಳಿದ್ದವು.

ವರದಿಗಳಲ್ಲಿ ಏನಿತ್ತು?
14.2 ಕೆಜಿ ಗೃಹಬಳಕೆ ಸಿಲಿಂಡರ್‌ಗಳ ಬುಕಿಂಗ್ ಅಂತರವನ್ನು ಈಗ ಹೆಚ್ಚಿಸಲಾಗಿದೆ. ಹಿಂದಿನ 25 ದಿನಗಳ ಅವಧಿಯನ್ನು ಈಗ 35 ದಿನಗಳವರೆಗೆ ವಿಸ್ತರಿಸಲಾಗಿದೆ. ಇದರರ್ಥ ನೀವು ಒಂದು ಸಿಲಿಂಡರ್ ಖರೀದಿಸಿದ್ದರೆ, ಮುಂದಿನ ಬುಕಿಂಗ್‌ಗಾಗಿ ನೀವು ಕನಿಷ್ಠ 35 ದಿನಗಳು ಕಾಯಬೇಕಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಡಿಯಲ್ಲಿ, ಈ ನಿಯಮವು ನಿರ್ದಿಷ್ಟವಾಗಿ ಎರಡು ಸಿಲಿಂಡರ್ ಸಂಪರ್ಕವನ್ನು ಹೊಂದಿರುವವರಿಗೆ ಅನ್ವಯಿಸುತ್ತದೆ, ಅಂದರೆ ಡಬಲ್-ಬಾಟಮ್ ಸಂಪರ್ಕವನ್ನು ಹೊಂದಿರುವವರಿಗೆ ಅನ್ವಯವಾಗುತ್ತೆ ಎಂದು ಹೇಳಲಾಗಿತ್ತು.

ಮತ್ತಷ್ಟು ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಅನಿಲ ಕಂಪನಿಗಳು ವಿವಿಧ ರೀತಿಯ ಗ್ರಾಹಕರಿಗೆ ವಿಭಿನ್ನ ನಿಯಮಗಳನ್ನು ನಿಗದಿಪಡಿಸಿವೆ. ಉಜ್ವಲ ಯೋಜನೆಯ ಫಲಾನುಭವಿಗಳು ಈಗ ಇನ್ನೂ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಈ ಯೋಜನೆಯಡಿಯಲ್ಲಿ ದಾಖಲಾದವರು ತಮ್ಮ ಮುಂದಿನ ಬುಕಿಂಗ್‌ಗಾಗಿ 45 ದಿನಗಳು ಕಾಯಬೇಕಾಗುತ್ತದೆ. ಸಿಂಗಲ್-ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಹಿಂದಿನ ವಿತರಣೆಯ 25 ದಿನಗಳ ನಂತರ ಮಾತ್ರ ಹೊಸ ಸಿಲಿಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎನ್ನಲಾಗಿತ್ತು.

ಆದರೆ, ಅಸ್ತಿತ್ವದಲ್ಲಿರುವ ಮರುಪೂರಣ ಬುಕಿಂಗ್ ಸಮಯ ಮಿತಿಗಳು ಬದಲಾಗದೆ ಉಳಿದಿವೆ ಮತ್ತು ಮುಂದುವರಿಯುತ್ತವೆ. ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಲ್ಲಿ ಮತ್ತೊಂದು ಸಿಲಿಂಡರ್ ಬುಕ್ ಮಾಡಬಹುದು. ದೇಶದಲ್ಲಿ ಸಾಕಷ್ಟು LPG ಸ್ಟಾಕ್‌ಗಳು ಲಭ್ಯವಿದೆ. ಯಾವುದೇ ವದಂತಿಯನ್ನು ನಂಬಬಾರದು ಎಂದು ಪಿಐಬಿಯಲ್ಲಿ ಬರೆಯಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link