All posts by nagaraj11081993

1956ರಿಂದ ರಾಜ್ಯದಲ್ಲಿ ಪೂರ್ಣಾವಧಿ ಸಿಎಂ ಆಗಿದ್ದು ಕೇವಲ ಮೂವರು!: ಉಳಿದವರದ್ದೆಲ್ಲ ಅಲ್ಪಾವಧಿ ಅಧಿಕಾರ

ಕರ್ನಾಟಕದ ಪೂರ್ಣಾವಧಿ ಮುಖ್ಯಮಂತ್ರಿಗಳು

ಬೆಂಗಳೂರು, ಮೇ 29: 2013-18ರ ವರೆಗೆ ಕರ್ನಾಟಕದ ಸಿಎಂ ಆಗಿ ಅವಧಿ ಪೂರ್ಣಗೊಳಿಸಿದ್ದ ಸಿದ್ದರಾಮಯ್ಯ (Siddaramaiah) ಈ ಬಾರಿ ಕೇವಲ 3 ವರ್ಷವಷ್ಟೇ ಆಡಳಿತ ನಡೆಸಿ ಪದತ್ಯಾಗ ಮಾಡಿದ್ದಾರೆ. ಅಷ್ಟಕ್ಕೂ ರಾಜಕೀಯ ಅಸ್ಥಿರತೆ, ನಾಯಕತ್ವ ಬದಲಾವಣೆಗಳು ಕರ್ನಾಟಕ ರಾಜಕೀಯದಲ್ಲಿ ಹೊಸತೇನಲ್ಲ. 1956ರಿಂದ ಇಂದಿನವರೆಗೆ ಕೇವಲ 3 ಮುಖ್ಯಮಂತ್ರಿಗಳು ಮಾತ್ರ ಪೂರ್ಣಾವಧಿಯ ಆಡಳಿತ ನಡೆಸಿದ್ದಾರೆ. ಎಸ್​​. ನಿಜಲಿಂಗಪ್ಪ (1962-68), ಡಿ. ದೇವರಾಜ ಅರಸ್​​ (1972-77) ಮತ್ತು ಸಿದ್ದರಾಮಯ್ಯ (2013-18) ಅವರನ್ನು ಬಿಟ್ಟರೆ ಉಳಿದವರೆಲ್ಲ ಅಲ್ಪಾವಧಿಯ ಸಿಎಂಗಳೆ!

ಎಸ್. ನಿಜಲಿಂಗಪ್ಪ (1956-1958)

ಮೈಸೂರು ರಾಜ್ಯ ಏಕೀಕರಣದ ಬಳಿಕ ಮುಖ್ಯಮಂತ್ರಿ ಪಟ್ಟಕ್ಕೇರಿದ ಕಾಂಗ್ರೆಸ್ ಹಿರಿಯ ನಾಯಕ ಎಸ್. ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್‌ನ ಲಿಂಗಾಯತ ಶಾಸಕರ ಬಂಡಾಯ ಮುಳುವಾಗಿತ್ತು. ಹೈಕಮಾಂಡ್ ಬಂಡಾಯಗಾರರ ಪರ ನಿಂತ ಪರಿಣಾಮ, ಅವಧಿ ಪೂರ್ಣಗೊಳಿಸುವ ಮುನ್ನವೇ ನಿಜಲಿಂಗಪ್ಪ ರಾಜೀನಾಮೆ ನೀಡಬೇಕಾಯಿತು. ಬಳಿಕ ಬಿ.ಡಿ. ಜತ್ತಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.

ವೀರೇಂದ್ರ ಪಾಟೀಲ್ (1968-71)

1969ರ ಕಾಂಗ್ರೆಸ್ ವಿಭಜನೆಯ ಬಳಿಕ ಕಾಂಗ್ರೆಸ್ (ಆರ್ಗನೈಸೇಶನ್) ಬಣದೊಂದಿಗೆ ಗುರುತಿಸಿಕೊಂಡಿದ್ದ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಆದರೆ 1971ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಭರ್ಜರಿ ಗೆಲುವು ಸಾಧಿಸಿದ ನಂತರ ಹಲವಾರು ಸಚಿವರು ಮತ್ತು ಶಾಸಕರು ಅವರ ಬಣಕ್ಕೆ ಸೇರ್ಪಡೆಯಾದರು. ಸರ್ಕಾರ ಬಹುಮತ ಕಳೆದುಕೊಂಡ ಪರಿಣಾಮ ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು.

ಇದನ್ನೂ ಓದಿ: ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ದರಾಮಯ್ಯ ರಾಜೀನಾಮೆ?; ಹೀಗೊಂದು ಲೆಕ್ಕಾಚಾರ

ದೇವರಾಜ್ ಅರಸು (1978-80)

ಹಿಂದುಳಿದ ವರ್ಗಗಳ ಪ್ರಬಲ ನಾಯಕನಾಗಿದ್ದ ದೇವರಾಜ್ ಅರಸು ಇಂದಿರಾ ಗಾಂಧಿಯವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ ಕಾಂಗ್ರೆಸ್ (ಅರಸು) ಬಣ ಸ್ಥಾಪಿಸಿದ್ದರು. ಆದರೆ 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ಅರಸು ಬಣದ ಅನೇಕ ಶಾಸಕರು ಕಾಂಗ್ರೆಸ್‌ಗೆ ಮರಳಿದರು. ಸರ್ಕಾರ ಬಹುಮತ ಕಳೆದುಕೊಂಡು ಅರಸು ರಾಜೀನಾಮೆ ನೀಡಿದರು. ನಂತರ ಆರ್​​. ಗುಂಡೂರಾವ್​ ಅಧಿಕಾರ ವಹಿಸಿಕೊಂಡರು.

ರಾಮಕೃಷ್ಣ ಹೆಗಡೆ (1985-88)

ರಾಮಕೃಷ್ಣ ಹೆಗಡೆ ಅವರು ಕರ್ನಾಟಕದ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿ. ವಿರೋಧ ಪಕ್ಷದ ನಾಯಕರು ಹಾಗೂ ತಮ್ಮ ಪಕ್ಷದ ಅಸಮಾಧಾನಿತ ನಾಯಕರ ಫೋನ್ ಟ್ಯಾಪಿಂಗ್ ಆರೋಪದ ನಡುವೆ ನೈತಿಕ ಹೊಣೆ ಹೊತ್ತು ಮಧ್ಯಾವಧಿಯಲ್ಲೇ ಅವರು ರಾಜೀನಾಮೆ ನೀಡಿದ್ದರು. ಬಳಿಕ ಎಸ್​​.ಆರ್​​. ಬೊಮ್ಮಾಯಿ ಮುಖ್ಯಮಂತ್ರಿಯಾದರು.

ವೀರೇಂದ್ರ ಪಾಟೀಲ್ (1989-90)

1989ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ವೀರೇಂದ್ರ ಪಾಟೀಲ್ ಮತ್ತೆ ಮುಖ್ಯಮಂತ್ರಿಯಾದರು. ಆದರೆ ಚನ್ನಪಟ್ಟಣ ಮತ್ತು ದಾವಣಗೆರೆಯಲ್ಲಿ ನಡೆದ ಕೋಮು ಗಲಭೆಗಳು ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿತ್ತು. ಪಾರ್ಶ್ವವಾಯು ಚಿಕಿತ್ಸೆಯಲ್ಲಿದ್ದ ಪಾಟೀಲ್ ಅವರನ್ನು ಬದಲಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಜೀವ್​​ ಗಾಂಧಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲೇ ಘೋಷಿಸಿದ್ದರು. ನಂತರ ಎಸ್​​. ಬಂಗಾರಪ್ಪ ಅವರನ್ನು ಸಿಎಂ ಮಾಡಲಾಗಿತ್ತು.

ಇದನ್ನೂ ಓದಿ: 40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ; ಯಾರ್ಯಾರು? ಇಲ್ಲಿದೆ ಲಿಸ್ಟ್​

ಎಸ್. ಬಂಗಾರಪ್ಪ (1990-92)

ಭ್ರಷ್ಟಾಚಾರ ಆರೋಪಗಳು ಮತ್ತು ಒಳಬಂಡಾಯದಿಂದ ಬಂಗಾರಪ್ಪ ಅವರ ಆಡಳಿತ ಸಂಕಷ್ಟಕ್ಕೆ ಸಿಲುಕಿತು. ಹಿರಿಯ ನಾಯಕ ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಅಸಮಾಧಾನಿತರು ಮುಕ್ತವಾಗಿ ವಿರೋಧ ವ್ಯಕ್ತಪಡಿಸಿದರು. ಹೈಕಮಾಂಡ್ ಸೂಚನೆಯ ಮೇರೆಗೆ ಬಂಗಾರಪ್ಪ ರಾಜೀನಾಮೆ ನೀಡಿ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದರು.

ಹೆಚ್.ಡಿ. ದೇವೇಗೌಡ (1994-96)

1994ರಲ್ಲಿ ಜನತಾದಳ ಕಾಂಗ್ರೆಸ್‌ನ್ನು ಸೋಲಿಸಿದ ಬಳಿಕ ಹೆಚ್​​.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ 1996ರ ಲೋಕಸಭೆ ಚುನಾವಣೆಯ ಬಳಿಕ ಅವರು ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಜೆ.ಹೆಚ್​​. ಪಟೇಲ್​​ ಅಧಿಕಾರ ವಹಿಸಿಕೊಂಡರು.

ಎನ್. ಧರ್ಮಸಿಂಗ್ ( 2004-06)

2004ರ ಚುನಾವಣೆಯಲ್ಲಿ ತ್ರಿಶಂಕು ಸ್ಥಿತಿ ಉಂಟಾದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿತು. ಎನ್. ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಆದರೆ 2006ರಲ್ಲಿ ಜೆಡಿಎಸ್ ಬೆಂಬಲ ಹಿಂಪಡೆದು ಬಿಜೆಪಿಯೊಂದಿಗೆ ಕೈಜೋಡಿಸಿದ ಪರಿಣಾಮ ಧರ್ಮಸಿಂಗ್ ರಾಜೀನಾಮೆ ನೀಡಿದರು.

ಹೆಚ್.ಡಿ. ಕುಮಾರಸ್ವಾಮಿ (2006-07)

20 ತಿಂಗಳ ಆಡಳಿತದ ಬಳಿಕ ಮೈತ್ರಿ ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದರು. ಹೀಗಾಗಿ ಉಂಟಾದ ರಾಜಕೀಯ ಗೊಂದಲದ ಕಾರಣಕ್ಕೆ ಅವರು ರಾಜೀನಾಮೆ ನೀಡಬೇಕಾಯಿತು. ಬಳಿಕ ಬಿ.ಎಸ್​​. ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಜೆಡಿಎಸ್ ಬೆಂಬಲ ಹಿಂಪಡೆಯುತ್ತಿದ್ದಂತೆ ಸರ್ಕಾರ ಪತನಗೊಂಡಿತ್ತು.

ಯಡಿಯೂರಪ್ಪ – ಸದಾನಂದ ಗೌಡ – ಜಗದೀಶ್​​ ಶೆಟ್ಟರ್ (2008-2013)

2008ರಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದ ಬಳಿಕ ಬಿಜೆಪಿ ಹೈಕಮಾಂಡ್ ಅವರು ರಾಜೀನಾಮೆ ನೀಡುವಂತೆ ಸೂಚಿಸಿತು. ಬಳಿಕ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾದರೂ, ಪಕ್ಷದ ಒಳ ಅಸಮಾಧಾನದಿಂದ 11 ತಿಂಗಳಲ್ಲೇ ರಾಜೀನಾಮೆ ನೀಡಿದರು. ನಂತರ ಜಗದೀಶ್​​ ಶೆಟ್ಟರ್​​ ಕೊನೆಯ ಒಂದು ವರ್ಷ ಆಡಳಿತ ನಡೆಸಿದ್ದರು.

ಕುಮಾರಸ್ವಾಮಿ – ಯಡಿಯೂರಪ್ಪ – ಬಸವರಾಜ ಬೊಮ್ಮಾಯಿ (2019-2023)

2018ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಯಾರಿಗೂ ಸಿಗದ ಹಿನ್ನೆಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಮೈತ್ರಿ ಸರ್ಕಾರ ರಚಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಅಸಮಾಧಾನ ಮತ್ತು 17 ಶಾಸಕರ ರಾಜೀನಾಮೆಯಿಂದ ಸರ್ಕಾರ ಬಹುಮತ ಕಳೆದುಕೊಂಡಿತು. ಬಳಿಕ ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರು. 2021ರಲ್ಲಿ ಅವರನ್ನು ಬದಲಿಸಿ ಬಿಜೆಪಿ ಹೈಕಮಾಂಡ್ ಬಸವರಾಜ್​​ ಬೊಮ್ಮಾಯಿ ಅವರನ್ನು ಸಿಎಂ ಆಗಿ ನೇಮಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:45 pm, Fri, 29 May 26

Source link

ಬೆಂಗಳೂರಿನಲ್ಲಿ ಕೋಟ್ಯಂತರ ರೂ ಮೌಲ್ಯದ ಬಿಡಿಎ ಸೈಟ್ ಕಬಳಿಕೆ ಪ್ರಕರಣ ಬೆಳಕಿಗೆ: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಬೆಂಗಳೂರು, ಮೇ 29: ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿದ ಬೃಹತ್ ಭೂಗಳ್ಳತನ (Land)  ಹಗರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ವಂಚಕ ಶಾಲೂಮ್ ಕುಮಾರ್ ಎಂಬಾತನನ್ನು ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸದ್ಯ ಶೇಷಾದ್ರಿಪುರಂ ಠಾಣೆಯಲ್ಲಿ ಈ ಕುರಿತು ಎಫ್​​ಐಆರ್​ ದಾಖಲಾಗಿದೆ.

ಮುಖ್ಯಾಂಶಗಳು

  • ಕೋಟ್ಯಂತರ ರೂಪಾಯಿ ಮೌಲ್ಯದ ಭೂಗಳ್ಳತನ ಪ್ರಕರಣ ರಿವೀಲ್​​
  • ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಆಸ್ತಿ ಕಬಳಿಸಲು ಯತ್ನ
  • ಶೇಷಾದ್ರಿಪುರಂ ಠಾಣೆ ಪೊಲೀಸರಿಂದ ಆರೋಪಿ ಬಂಧನ

ಎಫ್‌ಐಆರ್ ದಾಖಲು

ಬಿಡಿಎ ವಿಜಿಲೆನ್ಸ್ ವಿಭಾಗದ ಅಧಿಕಾರಿ ಗೋವಿಂದರಾಜು ದೂರಿನ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಆರೋಪಿ ಶಾಲೂಮ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 471, 419, 465, 420, 120B, 468 ಹಾಗೂ 34ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ತದನಂತರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ.

ನಕಲಿ ಜಿಪಿಎ ದಂಧೆ: ಸಾರ್ವಜನಿಕರಿಂದ ದೂರು

ಬಂಧಿತ ಆರೋಪಿ ಶಾಲೂಮ್ ಕುಮಾರ್ ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರಿನಲ್ಲಿ ನಕಲಿ ದಾಖಲೆ ಹಾಗೂ ನಕಲಿ ಜಿಪಿಎ ಪತ್ರಗಳನ್ನು ಸೃಷ್ಟಿಸುತ್ತಿದ್ದ. ಈ ನಕಲಿ ದಾಖಲೆಗಳ ಮೂಲಕ ಅರ್ಕಾವತಿ ಲೇಔಟ್ ಹಾಗೂ ಒಎಂಬಿಆರ್ ಲೇಔಟ್‌ಗಳಲ್ಲಿರುವ ಬಿಡಿಎಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಸೈಟ್‌ಗಳನ್ನು ಕಬಳಿಸಲು ಸಂಚು ರೂಪಿಸಿದ್ದ. ಈ ಅಕ್ರಮ ದಂಧೆ ಬಗ್ಗೆ ತಿಳಿದ ಸಾರ್ವಜನಿಕರು ಬಿಡಿಎ ವಿಜಿಲೆನ್ಸ್ ವಿಭಾಗಕ್ಕೆ ದೂರು ನೀಡಿದ್ದರು.

ಇದನ್ನೂ ಓದಿ: ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಕಟ್ಟಡವನ್ನೇ ಕಬ್ಜ ಮಾಡಿದ ಭಲೇ ಕಿಲಾಡಿಗಳು

ಸಾರ್ವಜನಿಕರ ದೂರು ಬೆನ್ನಲ್ಲೇ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಬಿಡಿಎ ವಿಜಿಲೆನ್ಸ್ ವಿಭಾಗದ ಎಸ್‌ಪಿ ನಾಗರಾಜ್, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದರು. ತನಿಖೆ ಪೂರ್ಣಗೊಳಿಸಿದ ಎಸ್‌ಪಿ ನಾಗರಾಜ್, ಅಕ್ರಮ ನಡೆದಿರುವುದನ್ನು ದೃಢಪಡಿಸಿ, ಬಿಡಿಎ ಆಯುಕ್ತರಾದ ಮೇಜರ್ ಮಣಿವಣ್ಣನ್ ಅವರಿಗೆ ವರದಿ ಸಲ್ಲಿಸಿದ್ದರು. ವಿಜಿಲೆನ್ಸ್ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್, ವಂಚಕನ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.

ಇತರರ ಬಂಧನಕ್ಕಾಗಿ ವಿಶೇಷ ತಂಡ ರಚನೆ

ಇನ್ನು ಈ ಕೋಟ್ಯಂತರ ರೂ ಮೌಲ್ಯದ ಭೂಕಬಳಿಕೆ ದಂಧೆಯಲ್ಲಿ ಕೇವಲ ಶಾಲೂಮ್ ಕುಮಾರ್ ಮಾತ್ರವಲ್ಲದೆ, ಬಿಡಿಎ ಒಳಗಿನ ಸಿಬ್ಬಂದಿ ಅಥವಾ ಇತರ ಪ್ರಭಾವಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಪ್ರಕರಣದಲ್ಲಿ ಶಾಮೀಲಾಗಿರುವ ಉಳಿದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಶೇಷಾದ್ರಿಪುರಂ ಠಾಣೆ ಪೊಲೀಸರು ಈಗಾಗಲೇ ವಿಶೇಷ ಅಧಿಕಾರ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಟ್ಟಿಗೆ ಎರಡು ಸಿನಿಮಾಗಳಲ್ಲಿ ‘ಪಿಶಾಚಿ’ ಆಗಲಿದ್ದಾರೆ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ (Rashmika Mandanna) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಒಟ್ಟೊಟ್ಟಿಗೆ ಮೂರು 1000 ಕೋಟಿ ಸಿನಿಮಾಗಳಲ್ಲಿ ನಟಿಸಿರುವ ಏಕೈಕ ನಟಿ ಎನಿಸಿಕೊಂಡಿದ್ದಾರೆ ಅವರು. ಪ್ರಸ್ತುತ ಚಿತ್ರರಂಗದ ಕ್ಯೂಟ್ ನಟಿಯರಲ್ಲಿ ಒಬ್ಬರು. ಹಲವು ಒಳ್ಳೆಯ ಪ್ರೇಮಕತೆಗಳು, ರೊಮ್ಯಾಂಟಿಕ್, ಗ್ಲಾಮರಸ್ ಸಿನಿಮಾಗಳು ಅವರಿಗೆ ಆಫರ್ ಆಗುತ್ತಿವೆ. ಆದರೆ ರಶ್ಮಿಕಾ ಇವುಗಳ ನಡುವೆ ಒಟ್ಟಿಗೆ ಎರಡು ಸಿನಿಮಾನಲ್ಲಿ ದೆವ್ವ-ಭೂತದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ರಶ್ಮಿಕಾಗೆ ಹಾರರ್ ಸಿನಿಮಾ ಹೊಸದಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಥಾಮ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಅವರು ಭೂತದ (ವ್ಯಾಂಪೈರ್) ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಆ ಸಿನಿಮಾನಲ್ಲಿ ಸಖತ್ ಹಾಟ್ ಆಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಇದೀಗ ರಶ್ಮಿಕಾ ಅವರು ಒಟ್ಟಿಗೆ ಎರಡು ಹಾರರ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ರಶ್ಮಿಕಾ ಇದೀಗ ತಮಿಳಿನ ‘ಕಾಂಚನಾ 4’ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಸಿನಿಮಾನಲ್ಲಿ ರಶ್ಮಿಕಾ ಮತ್ತೊಮ್ಮೆ ಭೂತದ ಪಾತ್ರದಲ್ಲಿ ನಟಿಸಲಿದ್ದಾರೆ. ಆದರೆ ಸಿನಿಮಾನಲ್ಲಿ ಅವರದ್ದು ಒಂದು ರೀತಿ ಅತಿಥಿ ಪಾತ್ರವಂತೆ. ಅವರು ಕೇವಲ ಫ್ಲ್ಯಾಷ್​​ಬ್ಯಾಕ್​ ನಲ್ಲಿ ದೆವ್ವವಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಅನ್ನು ರಾಘವ್ ಲಾರೆನ್ಸ್ ನಿರ್ದೇಶನ ಮಾಡುತ್ತಿದ್ದು, ಖುದ್ದು ನಾಯಕನಾಗಿ ನಟಿಸಲಿದ್ದಾರೆ.

ಇದನ್ನೂ ಓದಿ:ಕೃತಿ ಸನೋನ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರಶ್ಮಿಕಾ ಮಂದಣ್ಣ

‘ಕಾಂಚನಾ 4’ ಮಾತ್ರವೇ ಅಲ್ಲದೆ, ‘ಥಾಮ’ ಸಿನಿಮಾದ ಸೀಕ್ವೆಲ್​​ನಲ್ಲಿಯೂ ನಟಿಸಲಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಥಾಮ’ ಸಿನಿಮಾದ ಸೀಕ್ವೆಲ್ ಕೆಲವೇ ತಿಂಗಳಲ್ಲಿ ಘೋಷಣೆ ಆಗಲಿದ್ದು, ಸೀಕ್ವೆಲ್​​ನಲ್ಲಿ ರಶ್ಮಿಕಾ ಮತ್ತೊಮ್ಮೆ ಭೂತವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ‘ಮೈಸಾ’ ಹೆಸರಿನ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ರಶ್ಮಿಕಾ ಈ ಸಿನಿಮಾನಲ್ಲಿ ಭಿನ್ನ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಲವು ನಟಿಯರು ಮದುವೆ ಆದ ಬಳಿಕ ತಮ್ಮನ್ನು ಕೆಲ ರೀತಿಯ ಪಾತ್ರಗಳಿಗೆ ಸೀಮಿತಗೊಳಿಸಿಕೊಳ್ಳುತ್ತಾರೆ. ಕೇವಲ ಮಹಿಳಾ ಪ್ರಧಾನ ಸಿನಿಮಾಗಳು, ಗ್ಲಾಮರ್ ರಹಿತ ಪಾತ್ರಗಳಲ್ಲಿ ಮಾತ್ರವೇ ನಟಿಸುತ್ತಾರೆ. ಆದರೆ ರಶ್ಮಿಕಾ, ತಮ್ಮ ಮೇಲೆ ಆ ರೀತಿಯ ಯಾವುದೇ ಮಿತಿಗಳನ್ನು ಹೇರಿಕೊಂಡಿಲ್ಲ. ಮದುವೆಯ ಬಳಿಕ ಬಿಡುಗಡೆ ಆಗುತ್ತಿರುವ ರಶ್ಮಿಕಾರ ಸಿನಿಮಾ ‘ಕಾಕ್​​ಟೇಲ್ 2’ ನಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಪತಿ ವಿಜಯ್ ಜೊತೆಗೆ ‘ರಣಬಲಿ’ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ‘ಮೈಸಾ’ ಅವರ ಕೈಯಲ್ಲಿದೆ. ಅಜಿತ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾಕ್ಕೂ ರಶ್ಮಿಕಾ ನಾಯಕಿ. ಹಿಂದಿಯಲ್ಲಿ ಮತ್ತೊಂದು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಮೇಲೆ ವಯಸ್ಸಿನ ವಂಚನೆಯ ಆರೋಪ; ಬಿಸಿಸಿಐ ಪರೀಕ್ಷೆಯಲ್ಲಿ ಹೊರಬಂದ ಸತ್ಯಾಂಶವೇನು?

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT  vs RR) ತಂಡಗಳು ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಬಗ್ಗೆ ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಆರೋಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ ವೈಭವ್ ಅದ್ಭುತ ಪ್ರದರ್ಶನ ನೀಡಿದಾಗಲೆಲ್ಲ ಅವರ ವಯಸ್ಸಿನ ಬಗ್ಗೆಗಿನ ಆರೋಪಗಳು ಸದ್ದು ಮಾಡುತ್ತವೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೆಟರ್ ಪಂದ್ಯದಲ್ಲಿ ವೈಭವ್ 29 ಎಸೆತಗಳಲ್ಲಿ 97 ರನ್ ಬಾರಿಸಿದ್ದನ್ನು ನೋಡಿದವರು ಮತ್ತೆ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಹಾಗೆಯೇ ವೈಭವ್ ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಟ್ಟು ಎಲ್ಲರನ್ನೂ ವಂಚಿಸುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸುತ್ತಿದ್ದಾರೆ.

ವೈಭವ್ ಮೇಲೆ ವಯಸ್ಸಿನ ವಂಚನೆಯ ಆರೋಪ

ವಾಸ್ತವವಾಗಿ ವೈಭವ್ ಅವರ ಬಗ್ಗೆ ಈ ರೀತಿಯ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಯಾವಾಗ ವೈಭವ್ ತಮ್ಮ ವಯಸ್ಸಿಗೂ ಮೀರಿದ ಪ್ರದರ್ಶನ ನೀಡಲಾರಂಭಿಸಿದರೋ ಆಗಿನಿಂದಲೂ ಅವರ ವಯಸ್ಸಿನ ಬಗ್ಗೆ ನಾನಾ ಅನುಮಾನಗಳು ಹುಟ್ಟಿಕೊಂಡಿವೆ. ನೆಟ್ಟಿಗರಿಂದ ಹಿಡಿದು, ಮಾಜಿ ಕ್ರಿಕೆಟಿಗರು, ಮಾಜಿ ಕುಸ್ತಿಪಟುಗಳು ಕೂಡ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಂಡರ್ 19 ಏಷ್ಯಾಕಪ್‌ನಲ್ಲಿ ವೈಭವ್ ಅವರ ಅಬ್ಬರದ ಆಟ ನೋಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್ ವೈಭವ್ ಮೇಲೆ ವಯಸ್ಸಿನ ವಂಚನೆ ಆರೋಪ ಹೊರಿಸಿದ್ದರು. 13 ವರ್ಷದ ಬಾಲಕನೊಬ್ಬ ಇಂತಹ ಶಕ್ತಿಯನ್ನು ಹೊಂದಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಇವರ ಜೊತೆಗೆ ಭಾರತದ ಮಾಜಿ ಬಾಕ್ಸರ್ ಒಲಂಪಿಕ್ ಗೇಮ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಕೂಡ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳ ಎತ್ತಿದ್ದರು.

ವೈಭವ್ ಹಳೆಯ ವಿಡಿಯೋ ವೈರಲ್

ಇದಕ್ಕೆ ಪುಷ್ಠಿ ನೀಡುವಂತೆ ವೈಭವ್ ಅವರ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 2025 ರಲ್ಲಿ ವೈರಲ್ ಆಗಿದ್ದ ವಿಡಿಯೋ 2 ವರ್ಷ ಹಿಂದಿನದ್ದಾಗಿತ್ತು. ಅಂದರೆ ವೈಭವ್ 2023 ರಲ್ಲಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬರುವ ಸೆಪ್ಟೆಂಬರ್​ಗೆ ನನಗೆ 14 ವರ್ಷ ತುಂಬುತ್ತದೆ ಎಂದು ಹೇಳಿಕೆ ನೀಡಿದ್ದರು. ಹಾಗಿದ್ದರೆ 2023 ರಲ್ಲಿ ವೈಭವ್​ಗೆ 14 ವರ್ಷ ತುಂಬಿದರೆ ಈಗ ಅವರಿಗೆ 17 ವರ್ಷ ವಯಸ್ಸಾಗಿರಬೇಕು. ಆದರೆ ವೈಭವ್ ಬಿಸಿಸಿಐಗೆ ನೀಡಿದ ಅಧಿಕೃತ ದಾಖಲೆಗಳ ಪ್ರಕಾರ, ಅವರ ಜನ್ಮ ದಿನಾಂಕ ಮಾರ್ಚ್ 27, 2011. ಇದರರ್ಥ ದಾಖಲೆಗಳ ಪ್ರಕಾರ ವೈಭವ್ ಅವರಿಗೀಗ 15 ವರ್ಷ. ವೈರಲ್ ಆದ ಈ ವಿಡಿಯೋವನ್ನು ದಾಖಲೆಯಾಗಿ ತೋರಿಸಿ ಹಲವರು ವೈಭವ್ ಮೇಲೆ ಆರೋಪಗಳನ್ನು ಹೊರಿಸಿದ್ದರು. ಈ ಆರೋಪಗಳ ಪಟ್ಟಿ ಹೆಚ್ಚಾದ ಬಳಿಕ ಬಿಸಿಸಿಐ ಕೂಡ ವೈಭವ್ ಅವರ ನಿಜವಾದ ವಯಸ್ಸನ್ನು ಪತ್ತೆ ಹಚ್ಚಲು ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ತಿಳಿದು ಬಂದ ಫಲಿತಾಂಶವೆಂದರೆ…

ಬಿಸಿಸಿಐ ನಡೆಸುವ ಪರೀಕ್ಷೆ ಹೇಗಿರುತ್ತದೆ?

ವಾಸ್ತವವಾಗಿ ಬಿಸಿಸಿಐ ಈ ರೀತಿಯ ವಯಸ್ಸಿನ ವಂಚನೆಯನ್ನು ತಡೆಯಲು Tanner-Whitehouse 3 (TW3) ಎಂಬ ವೈಜ್ಞಾನಿಕ ಮೂಳೆ ಪರೀಕ್ಷಾ ವಿಧಾನವನ್ನು ಬಳಸುತ್ತದೆ. ಮಣಿಕಟ್ಟು ಮತ್ತು ಕೈಯಿನ ಎಕ್ಸ್‌-ರೇ ಮೂಲಕ ಮೂಳೆಯ ಬೆಳವಣಿಗೆಯನ್ನು ಪರೀಕ್ಷಿಸಿ ಆಟಗಾರರ ನಿಖರವಾದ ವಯಸ್ಸನ್ನು ನಿರ್ಧರಿಸಲಾಗುತ್ತದೆ. ಈ TW3 ಪರೀಕ್ಷೆಯಲ್ಲಿ ಆಟಗಾರನ ಎಡಗೈ ಮತ್ತು ಮಣಿಕಟ್ಟಿನ ಎಕ್ಸ್‌-ರೇ ಮೂಲಕ ಮೂಳೆಯ ಬೆಳವಣಿಗೆಯನ್ನು ಅಳೆಯಲಾಗುತ್ತದೆ.

ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?

ವೈಭವ್ ಬಾಲ್ಯದ ಕೋಚ್ ಹೇಳಿದ್ದೇನು?

ಈ ಪರೀಕ್ಷೆಯಿಂದ ಬಂದ ಫಲಿತಾಂಶಕ್ಕೆ, ಬಿಸಿಸಿಐ ನಿಯಮದಂತೆ ಹೆಚ್ಚುವರಿಯಾಗಿ 1 ವರ್ಷವನ್ನು ಸೇರಿಸುವ ಮೂಲಕ ಆಟಗಾರನ ವಯಸ್ಸನ್ನು ಅಳೆಯಲಾಗುತ್ತದೆ. ಉದಾಹರಣೆಗೆ TW3 ಪರೀಕ್ಷೆಯಲ್ಲಿ ಆಟಗಾರನ ವಯಸ್ಸು 14.8 ಆಗಿದ್ದರೆ, ಅದಕ್ಕೆ 1 ವರ್ಷವನ್ನು ಸೇರಿಸಿ ಆಟಗಾರನ ವಯಸ್ಸನ್ನು 15.8 ಎಂದು ಲೆಕ್ಕ ಹಾಕಲಾಗುತ್ತದೆ. ಆ ಪ್ರಕಾರ, ವೈಭವ್ ಸೂರ್ಯವಂಶಿ ಅವರನ್ನು ಈ ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ ಅವರು ಉತೀರ್ಣರಾಗಿದ್ದಾರೆ ಎಂದು ವೈಭವ್ ಅವರ ಬಾಲ್ಯದ ಕೋಚ್ ಈಗಾಗಲೇ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

‘2022 ರ ರಣಜಿ ಟ್ರೋಫಿಗೆ ವೈಭವ್ ಅವರನ್ನು ಬಿಹಾರ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ರಣಜಿ ಸೀಸನ್ ಆರಂಭಕ್ಕೆ ಮೂರು ವಾರಗಳ ಮೊದಲು ಬಿಸಿಸಿಐ ವೈಭವ್ ಅವರನ್ನು ಮೂಳೆ ಪರೀಕ್ಷೆಗೆಂದು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಕಳಿಸಿತ್ತು. ವಿವಿಎಸ್ ಲಕ್ಷ್ಮಣ್ ಮುಂದಾಳತ್ವದಲ್ಲಿ ನಡೆದಿದ್ದ ಈ ಪರೀಕ್ಷೆಯಲ್ಲಿ ವೈಭವ್ ಅವರು ತಮ್ಮ ವಯಸ್ಸಿನ ವಿಚಾರದಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ ಎಂಬುದು ಸಾಭೀತಾಗಿದೆ’ ಎಂದು ವೈಭವ್ ಅವರ ಬಾಲ್ಯದ ಕೋಚ್ ರವಿಪ್ರಕಾಶ್ ಝಾ ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಮುಗಿಯುವ ಮುನ್ನವೇ ರಿಷಭ್ ತಲೆದಂಡ..! ಲಕ್ನೋ ನಾಯಕತ್ವಕ್ಕೆ ಪಂತ್ ರಾಜೀನಾಮೆ

ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯ ಇಂದು ನಡೆಯಬೇಕಿದೆ. ಇದಾದ ಬಳಿಕ ಮೇ 30 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಆದರೆ ಆ ಪಂದ್ಯಕ್ಕೂ ಮುನ್ನವೇ ಲಕ್ನೋ ಸೂಪರ್​ಜೈಂಟ್ಸ್ ತಂಡದಿಂದ ಆಘಾತಕ್ಕಾರಿ ಮಾಹಿತಿಯೊಂದು ಹೊರಬಿದ್ದಿದೆ.. ಕಳೆದ ಎರಡು ಆವೃತ್ತಿಗಳಿಂದ ಲಕ್ನೋ ತಂಡದ ನಾಯಕತ್ವವಹಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಾಸ್ತವವಾಗಿ ಈ ಆವೃತ್ತಿಯಲ್ಲಿ ಲಕ್ನೋ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಐಪಿಎಲ್ ಮುಗಿದ ಬಳಿಕ ಪಂತ್ ತಲೆದಂಡ ಖಚಿತ ಎಂದು ಹೇಳಲಾಗುತ್ತಿತ್ತು. ಅದರಂತೆ ಈಗ ಫ್ರಾಂಚೈಸಿ ಹಂಚಿಕೊಂಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್​ನಲ್ಲಿ ರಿಷಭ್ ಪಂತ್ ನಾಯಕತ್ವ ತ್ಯಜಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ.

Source link

ಮೆಟ್ರೋ ಪ್ರಯಾಣಿಕರೇ ಗಮನಿಸಿ!: ಭಾನುವಾರ ನೇರಳೆ ಮಾರ್ಗದ ಈ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ!

ಬೆಂಗಳೂರು, ಮೇ.31: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ. ಮುಂಬರುವ ಭಾನುವಾರ (ಮೇ 31, 2026) ನೇರಳೆ ಮಾರ್ಗದ (Purple Line) ಪ್ರಮುಖ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ನೇರಳೆ ಮಾರ್ಗದಲ್ಲಿರುವ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳನ್ನು (Maintenance Works) ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಉದ್ದೇಶದಿಂದ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಯಾವ ನಿಲ್ದಾಣಗಳ ನಡುವೆ ಸಂಚಾರ ಇರಲ್ಲ?:

ಮೇ 31ರ ಭಾನುವಾರದಂದು ನೇರಳೆ ಮಾರ್ಗದ ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 07:00 ಗಂಟೆಯಿಂದ 09:00 ಗಂಟೆಯವರೆಗೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಬೆಳಿಗ್ಗೆ 09:00 ಗಂಟೆಯ ನಂತರ ಇಡೀ ನೇರಳೆ ಮಾರ್ಗದಲ್ಲಿ ಎಂದಿನಂತೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ.

ಇದನ್ನೂ ಓದಿ: ಮಂಗಳೂರಿನ ಜನರೇ ಸಂಜೆ 6ರೊಳಗೆ ಮನೆಗೆ ತಲುಪಿ!: ಇಂದು ಕರಾವಳಿ ಹಾಗೂ ಬೆಂಗಳೂರಿನಲ್ಲಿ ಭಾರೀ ಮಳೆ

ಈ ಅವಧಿಯಲ್ಲಿ ಎಲ್ಲೆಲ್ಲಿ ಮೆಟ್ರೋ ಇರಲಿದೆ?:

ಬೆಳಿಗ್ಗೆ 7 ರಿಂದ 9 ಗಂಟೆಯವರೆಗಿನ ತಾತ್ಕಾಲಿಕ ವ್ಯತ್ಯಯದ ಅವಧಿಯಲ್ಲಿ ಕೆಳಗಿನ ಮಾರ್ಗಗಳಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯಂತೆ ಮೆಟ್ರೋ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಚಲ್ಲಘಟ್ಟ – ಮೈಸೂರು ರಸ್ತೆ

ಕೆಂಪೇಗೌಡ (ಮೆಜೆಸ್ಟಿಕ್) – ವೈಟ್‌ಫೀಲ್ಡ್ (ಕಾಡುಗೋಡಿ)

ಮಾದಾವರ – ಸಿಲ್ಕ್ ಇನ್‌ಸ್ಟಿಟ್ಯೂಟ್ (ಹಸಿರು ಮಾರ್ಗ)

ಆರ್.ವಿ. ರಸ್ತೆ – ಬೊಮ್ಮಸಂದ್ರ (ಹಳದಿ ಮಾರ್ಗ)

ಭಾನುವಾರ ಬೆಳಿಗ್ಗೆ ಪ್ರಯಾಣಿಸುವ ನಾಗರಿಕರು ಈ ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನಂತಿಸಿದ್ದಾರೆ. ಉಂಟಾಗುವ ಅನಾಕೂಲತೆಗೆ ಸಂಸ್ಥೆಯು ವಿಷಾದ ವ್ಯಕ್ತಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು? ಇಲ್ಲಿದೆ ಲಿಸ್ಟ್​

ಬೆಂಗಳೂರು, (ಮೇ 29): ಈಗಾಗಲೇ ಸಿದ್ದರಾಮಯ್ಯನವರ (Siddaramaiah) ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಜೊತೆಗೆ ಸಚಿವ ಸಂಪುಟವನ್ನು ಸಹ ವಿಸರ್ಜನೆ ಮಾಡಲಾಗಿದೆ. ಹೀಗಾಗಿ ಹೊಸ ಸಿಎಂ ಹಾಗೂ ಸಚಿವರನ್ನು ಆಯ್ಕೆ ಮಾಡಬೇಕಿದ್ದು, ಈ ಸಂಬಂಧ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಯಾರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಬೇಕು? ಯಾರಿಗೆ ಸಚಿವರನ್ನಾಗಿ ಮಾಡಬೇಕು? ಎನ್ನುವ ಬಗ್ಗೆ ಮಾತುಕತೆಗಳು ನಡೆದಿವೆ. ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಈಗಾಗಲೇ ಹಲವು ಶಾಸಕರು ದೆಹಲಿಗೆ ತೆರಳಿದ್ದು, ಪ್ರಭಾವಿ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಹಾಗಾದ್ರೆ, ಸಚಿವ ಸ್ಥಾನದ ರೇಸ್​​ನಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಪಟ್ಟಿ ಹೀಗಿದೆ.

ಇದನ್ನೂ ನೋಡಿ: ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಸಜ್ಜಾಗುತ್ತಿದೆ ವಿಧಾನಸೌಧ: ಹೇಗಿದೆ ಗೊತ್ತಾ ಸಿದ್ಧತೆ?

Source link

ಜಾಗತಿಕ ಸವಾಲುಗಳ ನಡುವೆಯೂ 2026-27ರಲ್ಲಿ ಭಾರತದ ಜಿಡಿಪಿ ಶೇ. 6.9 ವೃದ್ಧಿ: ಆರ್​ಬಿಐ ವಾರ್ಷಿಕ ವರದಿಯಲ್ಲಿ ಅಂದಾಜು

ಮುಂಬೈ, ಮೇ 29: ಜಾಗತಿಕ ಮಟ್ಟದಲ್ಲಿ ತಲೆದೋರಿರುವ ತೀವ್ರ ಭೂರಾಜಕೀಯ ಉದ್ವಿಗ್ನತೆ (Geopolitical Tensions) ಮತ್ತು ಹಣದುಬ್ಬರದ ಅಪಾಯಗಳ ನಡುವೆಯೂ, ಭಾರತದ ಆರ್ಥಿಕತೆಯು (Real GDP) ಮುಂಬರುವ 2026-27ರ ಹಣಕಾಸು ವರ್ಷದಲ್ಲಿ ಶೇ. 6.9 ರಷ್ಟು ಪ್ರಗತಿಯನ್ನು ಸಾಧಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಅಂದಾಜಿಸಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯು ಮಂದಗತಿಯಲ್ಲಿದ್ದರೂ, ಪ್ರಬಲವಾದ ದೇಶೀಯ ಸ್ಥೂಲ ಆರ್ಥಿಕ ತಳಹದಿಯಿಂದಾಗಿ (Macro Economic Base) ಭಾರತದ ಆರ್ಥಿಕ ಮುನ್ನೋಟವು ಸಕಾರಾತ್ಮಕವಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಜಾಗತಿಕ ಸವಾಲುಗಳು ಮತ್ತು ಅಪಾಯಗಳು

ಪಶ್ಚಿಮ ಏಷ್ಯಾದಲ್ಲಿ (ದಕ್ಷಿಣ ಏಷ್ಯಾ/ಮಧ್ಯಪ್ರಾಚ್ಯ) ದೀರ್ಘಕಾಲದಿಂದ ನಡೆಯುತ್ತಿರುವ ಸಂಘರ್ಷಗಳು ಜಾಗತಿಕ ಆರ್ಥಿಕತೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿವೆ. ಕಚ್ಚಾ ತೈಲ ಬೆಲೆಗಳ ಏರಿಕೆ, ಜಾಗತಿಕ ಪೂರೈಕೆ ಸರಪಳಿಯಲ್ಲಿನ (Supply Chain) ಅಡಚಣೆಗಳು ಮತ್ತು ಜಾಗತಿಕ ವ್ಯಾಪಾರ ನೀತಿಗಳಲ್ಲಿನ ಅನಿಶ್ಚಿತತೆಯು ಭಾರತದ ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಆರ್‌ಬಿಐ ಎಚ್ಚರಿಸಿದೆ.

ಇದನ್ನೂ ಓದಿ: ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ

ಪ್ರಗತಿಗೆ ಪೂರಕವಾಗಿರುವ ಅಂಶಗಳು

ರಿಸರ್ವ್ ಬ್ಯಾಂಕ್ ಪ್ರಕಾರ, ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಬಲವಾದ ದೇಶೀಯ ಬೇಡಿಕೆ (Domestic Demand), ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ವಲಯಗಳ ಆರೋಗ್ಯಕರ ಬ್ಯಾಲೆನ್ಸ್ ಶೀಟ್ ಹಾಗೂ ಸರ್ಕಾರದ ನಿರಂತರ ಬಂಡವಾಳ ವೆಚ್ಚಗಳು (Capital Expenditure) ದೇಶದ ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸಲಿವೆ.

ಸುಧಾರಿಸುತ್ತಿರುವ ಗ್ರಾಮೀಣ ಬೇಡಿಕೆ ಮತ್ತು ಸ್ಥಿರವಾದ ನಗರ ಅನುಭೋಗ ಪ್ರವೃತ್ತಿಯಿಂದಾಗಿ ಖಾಸಗಿ ಅನುಭೋಗ (Private Consumption) ಆರ್ಥಿಕತೆಯ ಪ್ರಮುಖ ಪ್ರೇರಕ ಶಕ್ತಿಯಾಗಲಿದೆ.

ಹಣದುಬ್ಬರದ ಅಂದಾಜು

2026-27ರ ಹಣಕಾಸು ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಶೇ. 4.6 ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಆಹಾರ ಧಾನ್ಯಗಳ ಸಾಕಷ್ಟು ದಾಸ್ತಾನು ಮತ್ತು ಸ್ಥಿರ ಕೃಷಿ ಮುನ್ನೋಟದ ಕಾರಣ ಹಣದುಬ್ಬರ ನಿಯಂತ್ರಣದಲ್ಲಿರಲಿದೆಯಾದರೂ, ಇಂಧನ ಬೆಲೆಗಳ ಏರಿಕೆಯು ಸವಾಲಾಗಿ ಪರಿಣಮಿಸಬಹುದು.

ಇದನ್ನೂ ಓದಿ: ಭಾರತಕ್ಕೆ ಬರಲಿದೆ ಅತ್ಯಾಧುನಿಕ ಸಬ್‌ಸ್ಟ್ರೇಟ್ ತಂತ್ರಜ್ಞಾನ: ಒಡಿಶಾ ಸರ್ಕಾರ, ಇಂಟೆಲ್ ಮತ್ತು 3DGS ಒಪ್ಪಂದಕ್ಕೆ ಅಶ್ವಿನಿ ವೈಷ್ಣವ್ ಶ್ಲಾಘನೆ

ಆರ್‌ಬಿಐ ವಿದೇಶಿ ವಿನಿಮಯ ಗಳಿಕೆ ಜಂಪ್

ವಿದೇಶಿ ವಿನಿಮಯ ವಹಿವಾಟುಗಳಿಂದ ಆರ್‌ಬಿಐ ಗಳಿಸಿದ ಲಾಭವು ಶೇಕಡಾ 52 ರಷ್ಟು ಜಿಗಿದು 1.69 ಲಕ್ಷ ಕೋಟಿ ರೂಗೆ ತಲುಪಿದೆ. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ರೂಪಾಯಿ ಮೌಲ್ಯದಲ್ಲಿ ತೀವ್ರ ಏರಿಳಿತ ಉಂಟಾದಾಗ, ರೂಪಾಯಿಯನ್ನು ಸ್ಥಿರಗೊಳಿಸಲು ಆರ್‌ಬಿಐ ಮಾರುಕಟ್ಟೆಯಲ್ಲಿ ಡಾಲರ್‌ಗಳನ್ನು ಮಾರಾಟ ಮಾಡಿ ಈ ಗಳಿಕೆ ಸಾಧಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತದ ಪ್ರಗತಿ ದರವನ್ನು ಶೇ. 6.5 ಎಂದು ಅಂದಾಜಿಸಿದ್ದರೆ, ಆರ್‌ಬಿಐ ಅದಕ್ಕಿಂತಲೂ ಹೆಚ್ಚಿನ ಅಂದರೆ ಶೇ. 6.9 ಪ್ರಗತಿಯ ಭರವಸೆ ವ್ಯಕ್ತಪಡಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಶೇ. 7.6 ರಷ್ಟು ಪ್ರಗತಿ ಸಾಧಿಸಿದ್ದ ಭಾರತವು, ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಭದ್ರವಾಗಿ ಕಾಯ್ದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಕೆಳಗೆ ನೀರು, ಮೇಲೆ ಆಕಾಶ, ತುತ್ತ ತುದಿಯಲ್ಲಿ ನಿಂತೇ ಬಿಡ್ತು ರೋಲರ್ ಕೋಸ್ಟರ್, ಜೀವ ಕೈಯಲ್ಲಿ ಹಿಡಿದು ಕುಳಿತ ಜನ

ಟೆಕ್ಸಾಸ್, ಮೇ 29: ಅಮೆರಿಕದ ಟೆಕ್ಸಾಸ್​ನಲ್ಲಿ ರೋಲರ್ ಕೋಸ್ಟರ್ ತುತ್ತ ತುದಿ ತಲುಪುತ್ತಿದ್ದಂತೆ ಕೆಟ್ಟು ನಿಂತೇ ಬಿಟ್ಟಿತ್ತು. ಪರಿಣಾಮವಾಗಿ, ರೈಡ್‌ನಲ್ಲಿದ್ದ ಎಂಟು ಮಂದಿ ಪ್ರವಾಸಿಗರು ನೆಲದಿಂದ ಹಲವು ಮಹಡಿಗಳ ಎತ್ತರದಲ್ಲಿ, ನಡು ಆಕಾಶದಲ್ಲಿ ತಲೆಕೆಳಗಾಗಿ ತೂಗಾಡುವಂತಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಭೀಕರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು.ಅಷ್ಟು ಎತ್ತರದಲ್ಲಿದ್ದ ಪ್ರವಾಸಿಗರನ್ನು ತಲುಪಲು ಅಗ್ನಿಶಾಮಕ ದಳದವರು ಅತ್ಯಂತ ಉದ್ದವಾದ ಏಣಿಯಿರುವ ಟ್ರಕ್ ಅನ್ನು ಬಳಸಿದರು.

ಏಣಿಯ ತುದಿಯಲ್ಲಿದ್ದ ಬಾಸ್ಕೆಟ್ ಮೂಲಕ ಸಿಬ್ಬಂದಿ ಪ್ರತಿಯೊಬ್ಬ ಸವಾರನನ್ನು ಅತ್ಯಂತ ಜಾಗರೂಕತೆಯಿಂದ ಕೆಳಗಿಳಿಸಲಾಯಿತು. ರೋಲರ್ ಕೋಸ್ಟರ್ ತಾಂತ್ರಿಕ ದೋಷದಿಂದಾಗಿ ಹಳಿ ತಪ್ಪಿತ್ತೇ ಅಥವಾ ವಿದ್ಯುತ್ ಕೈಕೊಟ್ಟಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹಲವು ಗಂಟೆಗಳ ಕಾಲ ಆಕಾಶದಲ್ಲೇ ಪ್ರಾಣ ಕೈಯಲ್ಲಿ ಹಿಡಿದು ಕುಳಿತಿದ್ದ ಪ್ರವಾಸಿಗರು ಸುರಕ್ಷಿತವಾಗಿ ಕೆಳಗಿಳಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರತ್ಯಕ ಪಾಲಿಕೆ ಹೋರಾಟಕ್ಕೆ ತೆರೆ: ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಠರಾವು ರದ್ದು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
Image Credit source: tv9 kannada

ಹುಬ್ಬಳ್ಳಿ, ಮೇ 29: ರಾಜ್ಯದಲ್ಲೇ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC)  ವಿಭಜನೆಗೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಇತ್ತೀಚೆಗೆ ಪಾಲಿಕೆ ವಿಭಜನೆಗೆ ಷರತ್ತುಬದ್ಧ ಅನುಮೋದನೆ ಕೂಡ ದೊರೆತಿತ್ತು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್​ ಪ್ರತ್ಯಕ ಪಾಲಿಕೆ ಕಡಿತಕ್ಕೆ ಸಹಿ ಬೆನ್ನಲ್ಲೇ ಬೃಹತ್ ಮಹಾನಗರ ಪಾಲಿಕೆಯ ಠರಾವು ಅಸಿಂಧುಗೊಂಡಿದೆ. ಹೀಗಾಗಿ ಈ ಹಿಂದೆ ಕೈಗೊಳ್ಳಲಾಗಿದ್ದ ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆಯ ಠರಾವು ರದ್ದಾಗಿದೆ.

ಮುಖ್ಯಾಂಶಗಳು

  • ಬೃಹತ್ ಹುಬ್ಬಳ್ಳಿ-ಧಾರವಾಡ ಪಾಲಿಕೆ ಠರಾವು ರದ್ದು
  • ಪ್ರತ್ಯಕ ಪಾಲಿಕೆ ಹೋರಾಟಕ್ಕೆ ತೆರೆ
  • ಪ್ರತ್ಯಕ ಧಾರವಾಡ ಪಾಲಿಕೆಗೆ ಎಲ್ಲರಿಗೂ ಸಮ್ಮತಿ ಎಂದ ಮೇಯರ್

ಪಾಲಿಕೆ ಮೇಯರ್ ಜೋತಿ ಪಾಟೀಲ್ ಹೇಳಿದ್ದಿಷ್ಟು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪಾಲಿಕೆ ಮೇಯರ್ ಜೋತಿ ಪಾಟೀಲ್, ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಮಾಡಲು ಕೈಗೊಳ್ಳಲಾಗಿದ್ದ ಠರಾವು ಅಧಿಕೃತವಾಗಿ ರದ್ದಾಗಲಿದ್ದು, ಅವಳಿ ನಗರಗಳ ಪಾಲಿಕೆ ವಿಭಜನೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ತಿಳಿಸಿದರು.

ಬೃಹತ್ ಪಾಲಿಕೆ ನಿರ್ಧಾರಕ್ಕೆ ಕಾರಣವೇನು?

ನಾವು ಈ ಹಿಂದೆ ಪಾಲಿಕೆ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಕೋರಿದ್ದೆವು. ಆದರೆ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬಿಡುಗಡೆಯಾಗಿರಲಿಲ್ಲ. 16ನೇ ಹಣಕಾಸು ಆಯೋಗದ ನಿಯಮಾವಳಿಗಳ ಪ್ರಕಾರ, 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳಿಗೆ ಹೆಚ್ಚಿನ ಅನುದಾನ ದೊರೆಯುತ್ತದೆ. ಈ ತಾಂತ್ರಿಕ ಕಾರಣದಿಂದಾಗಿ ಹುಬ್ಬಳ್ಳಿ-ಧಾರವಾಡವನ್ನು ಒಳಗೊಂಡ ಬೃಹತ್ ಮಹಾನಗರ ಪಾಲಿಕೆ ಮಾಡಲು ಈ ಹಿಂದೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಷರತ್ತುಬದ್ಧ ಅನುಮೋದನೆ

ಇನ್ನು ಈ ವೇಳೆ ಧಾರವಾಡವನ್ನು ಪ್ರತ್ಯೇಕ ಪಾಲಿಕೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ವ್ಯಾಪಕ ಹೋರಾಟಗಳು ನಡೆದಿದ್ದವು. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಪ್ರತ್ಯೇಕ ಪಾಲಿಕೆ ರಚನೆಯ ಕಡತಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ರಾಜ್ಯಪಾಲರ ಈ ನಿರ್ಧಾರದಿಂದಾಗಿ, ಈ ಹಿಂದೆ ಕೈಗೊಳ್ಳಲಾಗಿದ್ದ ಬೃಹತ್ ಮಹಾನಗರ ಪಾಲಿಕೆ ರಚನೆಯ ಠರಾವು ಇದೀಗ ತಾನಾಗಿಯೇ ಅಸಿಂಧುವಾಗುತ್ತದೆ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವ ನಿರ್ಧಾರಕ್ಕೆ ಎಲ್ಲರೂ ಸಮ್ಮತಿ ನೀಡಿದ್ದಾರೆ ಎಂದು ತಿಳಿಸಿದರು.

ಸರ್ಕಾರಕ್ಕೆ ಅನುದಾನದ ಬೇಡಿಕೆ

ಹುಬ್ಬಳ್ಳಿ ಮತ್ತು ಧಾರವಾಡ ಪಾಲಿಕೆಗಳ ವಿಭಜನೆಯ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸರ್ಕಾರವು ಎರಡೂ ಪಾಲಿಕೆಗಳಿಗೆ ಪ್ರತ್ಯೇಕವಾಗಿ ಹೆಚ್ಚಿನ ಅಭಿವೃದ್ಧಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮೇಯರ್ ಜ್ಯೋತಿ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link