All posts by nagaraj11081993

ಕರ್ನಾಟಕ ಉಪಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಯಾರು ಗೊತ್ತಾ?

ಕರ್ನಾಟಕ ಉಪಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಯಾರು ಗೊತ್ತಾ?

ಬೆಂಗಳೂರು, ಮಾ.19: ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 9ರಂದು ನಡೆಯಲಿರುವ ಈ ಚುನಾವಣೆಗೆ ಬಿಜೆಪಿ ಹಳೆಯ ಹುಲಿ ಮತ್ತು ಹೊಸ ಮುಖಕ್ಕೆ ಅವಕಾಶ ನೀಡಿದೆ. ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ್ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನ ನಂತರ ಉಪಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್​​​​ನಲ್ಲಿ ಭಾರೀ ಗದ್ದಲ ಉಂಟಾಗಿದೆ. ಇದರ ನಡುವೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ರಾಜಕೀಯ ನೇರ ಪೈಪೋಟಿಗೆ ವೇದಿಕೆ ಸಿದ್ಧ ಮಾಡಿದೆ.

ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರ ಅಭ್ಯರ್ಥಿಯಾಗು ಬಿಜೆಪಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್​ ನೀಡಿದೆ. ಇಲ್ಲಿ ಬಿಜೆಪಿ ‘ವಾಲ್ಮೀಕಿ’ (ST) ಸಮುದಾಯಕ್ಕೆ ಆದ್ಯತೆ ನೀಡಿದೆ. ಎಸ್.ಟಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಲಾಗಿದ್ದು, ಕ್ಷೇತ್ರದಲ್ಲಿ ಸಾಮಾಜಿಕ ಸಮತೋಲನ ಕಾಪಾಡಲು ಬಿಜೆಪಿ ಪ್ರಯತ್ನಿಸಿದೆ ಎಂದು ಹೇಳಲಾಗಿದೆ. ಇಲ್ಲಿಯೂ ಕೂಡ ಈ ಹಿಂದೆ ಕಾಂಗ್ರೆಸ್​​​ ಪ್ರಬಲ್ಯ ಇತ್ತು. ಕಾಂಗ್ರೆಸ್​​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನವಾದ ನಂತರ ಇಲ್ಲಿಯೂ ಕೂಡ ಕಾಂಗ್ರೆಸ್​​​ಗೆ ಇಲ್ಲಿ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ.

 

 

Source link

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೇಷ ರಾಶಿಯವರಿಗೆ ಹೇಗಿರಲಿದೆ?

2026ರ ಯುಗಾದಿ ಭವಿಷ್ಯದ ಪ್ರಕಾರ, ಮೇಷ ರಾಶಿಯವರಿಗೆ ಈ ವರ್ಷ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಶ್ರೀ ಕೆ. ವೆಂಕಟೇಶ್ ಶರ್ಮಾ ಗುರೂಜಿ ಅವರು ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಖರ್ಚುಗಳು ಸ್ವಲ್ಪ ಹೆಚ್ಚಾಗಬಹುದಾದರೂ, ಆದಾಯವೂ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾಗಬಹುದು.

ಗ್ರಹಗಳ ಸ್ಥಾನಗಳ ಪರಿಣಾಮಗಳ ಕುರಿತು ಹೇಳುವುದಾದರೆ, ಮೂರನೇ ಗುರು ಆರೋಗ್ಯವನ್ನು ಸ್ವಲ್ಪ ಕೆಡಿಸಬಹುದು, ಇದಕ್ಕೆ ಗುರು ಆರಾಧನೆ ಅಗತ್ಯ. ಐದನೇ ಕೇತು ಕೆಲವು ಕಷ್ಟಗಳನ್ನು ತರಬಹುದಾಗಿದ್ದು, ಗಣಪತಿ ಆರಾಧನೆಯಿಂದ ಪರಿಹಾರ ದೊರೆಯಲಿದೆ. ಆರನೇ ಚಂದ್ರ ಮತ್ತು ಹನ್ನೊಂದನೇ ರಾಹು ದ್ರವ್ಯಲಾಭವನ್ನು ನೀಡಿದರೆ, ಹತ್ತನೇ ಬುಧ ಸಂತೋಷವನ್ನು ತರಲಿದ್ದಾನೆ. ಹನ್ನೆರಡನೇ ಸ್ಥಾನದಲ್ಲಿರುವ ಶನಿ ಖರ್ಚುಗಳನ್ನು ಹೆಚ್ಚಿಸಿ, ಶತ್ರುಭಯವನ್ನು ಉಂಟುಮಾಡಬಹುದು. ಇದಕ್ಕೆ ಆಂಜನೇಯ ಸ್ವಾಮಿ ಮತ್ತು ಲಕ್ಷ್ಮೀನರಸಿಂಹರ ಪ್ರಾರ್ಥನೆ ಮಾಡುವುದು ಉತ್ತಮ. ಶುಕ್ರನು ಸೌಖ್ಯವನ್ನು ನೀಡಲಿದ್ದಾನೆ.

ಮೇಷ ರಾಶಿಯ ಅಶ್ವಿನಿ, ಭರಣಿ, ಕೃತಿಕ ಒಂದನೇ ಪಾದದವರು ಈ ಭವಿಷ್ಯವನ್ನು ಅನುಸರಿಸಬಹುದು. ಪರಿಹಾರವಾಗಿ “ಭೂಮಿಪುತ್ರೋ ಮಹಾತೇಜಾ…” ಮಂತ್ರ ಅಥವಾ “ಓಂ ಮಂಗಳಾಯ ನಮಃ” ಜಪಿಸುವುದು ಉತ್ತಮ. ತೊಗರಿಬೇಳೆ, ಹುರುಳಿಕಾಳು, ಎಳ್ಳು ದಾನ ಮಾಡುವುದರಿಂದ ಶುಭ ಫಲ ಸಿಗುತ್ತದೆ. ಮೇಷ ರಾಶಿಯವರಿಗೆ ದಕ್ಷಿಣ ದಿಕ್ಕು ಶುಭವಾಗಿದ್ದು, 1, 2, 3, 9 ಶುಭ ಸಂಖ್ಯೆಗಳು. ಕೆಂಪು, ಹಳದಿ, ಕೇಸರಿ ಬಣ್ಣಗಳು ಶುಭಕಾರಿ. 1, 10, 17ನೇ ತಾರೀಖುಗಳಲ್ಲಿ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Love Mocktail 3 Review: ನಗಿಸುತ್ತಾ ಅಳಿಸುವ ತಂದೆ-ಮಗಳ ಎಮೋಷನಲ್ ಕಹಾನಿ

ಡಾರ್ಲಿಂಗ್ ಕೃಷ್ಣ ಅವರು ನಟಿಸಿ, ನಿರ್ದೇಶನ ಮಾಡಿದ ‘ಲವ್ ಮಾಕ್ಟೇಲ್’ ಚಿತ್ರಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಇದರ ಮೂರನೇ ಇನ್​ಸ್ಟಾಲ್​ಮೆಂಟ್ ಈಗ ಬಿಡುಗಡೆ ಆಗಿದೆ. ಹೌದು, ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’ (Love Mocktail 3) ತೆರೆಕಂಡಿದೆ. ಟ್ರೇಲರ್​​ನಲ್ಲಿ ಕಥೆಯ ಬಗ್ಗೆ ಹೆಚ್ಚೇನೂ ಬಿಟ್ಟುಕೊಟ್ಟಿರಲಿಲ್ಲ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಅಪ್ಪ-ಮಗಳ ಎಮೋಷನಲ್ ಕಹಾನಿ ಕಾಣಿಸುತ್ತದೆ. ಎಮೋಷನಲ್ ದೃಶ್ಯಗಳ ಜೊತೆಗೆ ಕಾಮಿಡಿಗೂ ಕೊರತೆ ಮಾಡಿಲ್ಲ. ‘ಲವ್ ಮಾಕ್ಟೇಲ್ 3’ ವಿಮರ್ಶೆ (Love Mocktail 3 Movie Review) ಇಲ್ಲಿದೆ..

ಯಾವುದೇ ಸಿನಿಮಾಗೆ ಸೀಕ್ವೆಲ್ ಮಾಡಿದಾಗ ಸೇಮ್ ಶೈಲಿಯನ್ನು ಮುಂದುವರಿಸುವುದು ಸಹಜ. ಆದರೆ ಡಾರ್ಲಿಂಗ್ ಕೃಷ್ಣ ಅವರು ಪ್ರತಿ ಸೀಕ್ವೆಲ್ ಮಾಡಿದಾಗಲೂ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಾರೆ. ‘ಲವ್ ಮಾಕ್ಟೇಲ್’ ಚಿತ್ರದ ಕಥೆ ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಮುಂದುವರಿಯಿತು. ಆದರೆ ಸ್ವಲ್ಪ ಗಂಭೀರತೆಯನ್ನು ಪಡೆದುಕೊಂಡಿತ್ತು. ಈಗ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಕೂಡ ಕಥೆ ಮತ್ತು ಪಾತ್ರಗಳು ಮುಂದುವರಿದಿವೆ. ಈ ಬಾರಿ ಪ್ರೇಕ್ಷಕರಿಗೆ ಬೇರೆಯದೇ ಫೀಲ್ ನೀಡಲು ಡಾರ್ಲಿಂಗ್ ಕೃಷ್ಣ ಅವರು ಪ್ರಯತ್ನಿಸಿದ್ದಾರೆ.

ಪತ್ನಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಆದಿ, ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಳ್ಳುವಲ್ಲಿಗೆ ‘ಲವ್ ಮಾಕ್ಟೇಲ್ 2’ ಕಥೆ ಮುಗಿದಿತ್ತು. ನಂತರ ಆದಿ ಬದುಕಿನಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದನ್ನು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ತೋರಿಸಲಾಗಿದೆ. ಇಡೀ ಸಿನಿಮಾದಲ್ಲಿ ತಂದೆ-ಮಗಳ ಪ್ರೀತಿಯೇ ಹೈಲೈಟ್ ಆಗಿದೆ. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಹುಡುಗಾಟಿಕೆ ಮಾಡುತ್ತಿದ್ದ ಆದಿ ಪಾತ್ರ ‘ಲವ್ ಮಾಕ್ಟೇಲ್ 3’ ಬರುವ ವೇಳೆಗೆ ತುಂಬಾ ಮಾಗಿದೆ. ಹೆಣ್ಣು ಮಗುವಿನ ತಂದೆಯಾಗಿ ನೋಡುಗರ ಕಣ್ಣುಗಳನ್ನು ತೇವವಾಗಿಸುವ ಆದಿ, ಈ ಬಾರಿ ಫ್ಯಾಮಿಲಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತಾನೆ.

‘ಲವ್ ಮಾಕ್ಟೇಲ್ 3’ ಸಿನಿಮಾದ ಮೊದಲಾರ್ಧಕ್ಕೂ ದ್ವಿತೀಯಾರ್ಧಕ್ಕೂ ಬಹಳ ವ್ಯತ್ಯಾಸ ಇದೆ. ಫಸ್ಟ್ ಹಾಫ್​ನಲ್ಲಿ ಮಗಳ ತರಲೆ, ತುಂಟತನ, ತಮಾಷೆಗಳೇ ತುಂಬಿಕೊಂಡಿವೆ. ಈ ಪಾತ್ರವನ್ನು ಬಾಲನಟಿ ಸಂವೃತಾ ನಿಭಾಯಿಸಿದ್ದಾಳೆ. ಆಕೆಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಆಕೆಯ ಪಾತ್ರಕ್ಕೆ ಎರಡು ಹೆಸರಿದೆ. ಒಂದು ನಿಧಿಮಾ, ಇನ್ನೊಂದು ರಮ್ಯಾ. ಸಿನಿಮಾದಲ್ಲಿ ಎಲ್ಲಿಯವರೆಗೆ ಆ ಪಾತ್ರ ನಿಧಿಮಾ ಆಗಿರುತ್ತದೋ ಅಲ್ಲಿಯವರೆಗೂ ಪ್ರೇಕ್ಷಕ ನಗುತ್ತಾನೆ. ಆ ಪಾತ್ರದ ಹೆಸರು ರಮ್ಯಾ ಎಂದು ಬದಲಾಗುವ ಸಮಯ ಬಂದಾಗ ಪ್ರೇಕ್ಷಕ ಎಮೋಷನಲ್ ಆಗುತ್ತಾನೆ! ಯಾಕೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ತಿಳಿಯಬೇಕು.

ಮೊದಲಾರ್ಧ ಸ್ವಲ್ಪ ಜಾಳು ಎನಿಸಿದರೂ ದ್ವಿತೀಯಾರ್ಧವನ್ನು ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ. ಫ್ಲ್ಯಾಶ್​ಬ್ಯಾಕ್ ತೆರೆದುಕೊಂಡಾಗ ಕಥೆಯ ಗಂಭೀರತೆ ಹೆಚ್ಚುತ್ತದೆ. ಅಪ್ಪ, ಮಗಳು, ಶಾಲೆ, ಸ್ನೇಹಿತರ ನಡುವೆ ತಮಾಷೆಯಾಗಿ ಸುತ್ತುತ್ತಿದ್ದ ಕಥೆ ಏಕಾಏಕಿ ಕೋರ್ಟ್ ಕಟಕಟೆಗೆ ಬಂದು ನಿಲ್ಲುತ್ತದೆ. ಈಗಾಗಲೇ ಎಲ್ಲವನ್ನೂ ಕಳೆದುಕೊಂಡಿರುವ ಆದಿ ಈಗ ಮಗಳನ್ನೂ ಕಳೆದುಕೊಳ್ಳುತ್ತಾನಾ ಎಂಬ ಪ್ರಶ್ನೆ ಮೂಡುತ್ತದೆ. ಮುಂದೇನಾಗಬಹುದು ಎಂಬ ಕುತೂಹಲದಿಂದಾಗಿ ಈ ಸಿನಿಮಾ ಕೊನೆವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ: ಇದನ್ನು ನಿರೀಕ್ಷಿಸಿರಲಿಲ್ಲ; ‘ಲವ್ ಮಾಕ್ಟೇಲ್ 3’ ಸಿನಿಮಾ ಸೂಪರ್ ಎಂದ ಸೆಲೆಬ್ರಿಟಿಗಳು

ಯಾವುದೇ ಗೊಂದಲ ಇಲ್ಲದೇ ಕೆಲವೇ ಕೆಲವು ಪಾತ್ರಗಳ ಮೂಲಕ ಡಾರ್ಲಿಂಗ್ ಕೃಷ್ಣ ಅವರು ಕಥೆ ಹೇಳಿ ಮುಗಿಸಿದ್ದಾರೆ. ‘ಲವ್ ಮಾಕ್ಟೇಲ್’ ಪ್ರಪಂಚಕ್ಕೆ ಒಂದೆರಡು ಹೊಸ ಪಾತ್ರಗಳು ಕೂಡ ಎಂಟ್ರಿ ನೀಡಿವೆ. ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಸಂದೇಶ ನೀಡುವ ಪ್ರಯತ್ನವನ್ನೂ ಡಾರ್ಲಿಂಗ್ ಕೃಷ್ಣ ಮಾಡಿದ್ದಾರೆ. ಬಾಲ ನಟಿ ಸಂವೃತಾ ಹೆಚ್ಚು ಇಷ್ಟ ಆಗುತ್ತಾಳೆ. ಕೆಲವು ಕಡೆಗಳಲ್ಲಿ ಆ ಪಾತ್ರದ ವಯಸ್ಸಿಗೂ ಮೀರಿದ ಸಂಭಾಷಣೆ ಮತ್ತು ದೃಶ್ಯಗಳಿಂದಾಗಿ ಸ್ವಲ್ಪ ಅಸಹಜ ಎನಿಸುತ್ತದೆ.

ಒಟ್ಟಾರೆಯಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ‘ಲವ್ ಮಾಕ್ಟೇಲ್ 3’ ಸಿನಿಮಾ ಸೆಳೆದುಕೊಳ್ಳುತ್ತದೆ. ಮೊದಲಾರ್ಧವನ್ನು ಇನ್ನಷ್ಟು ಉತ್ತಮವಾಗಿಸುವ ಅವಕಾಶ ನಿರ್ದೇಶಕರಿಗೆ ಇತ್ತು ಎನಿಸುತ್ತದೆ. ಆ ಬಗ್ಗೆ ಗಮನ ಹರಿಸಬಹುದಿತ್ತು. ಸಂಗೀತ, ಸಂಕಲನ, ಛಾಯಾಗ್ರಹಣ ಮುಂತಾದ ತಾಂತ್ರಿಕ ವಿಭಾಗಗಳಲ್ಲಿ ಈ ಸಿನಿಮಾ ಅಚ್ಚುಕಟ್ಟಾಗಿದೆ. ಮಿಲನಾ ನಾಗರಾಜ್ ಅವರು ಹೀಗೆ ಬಂದು ಹಾಗೆ ಮಾಯವಾಗುತ್ತಾರೆ. ಅವರ ಅಭಿಮಾನಿಗಳಿಗೆ ಇದೊಂದು ಕೊರತೆ ಎನಿಸಹುದು. ಜಗ್ಗ ಮಮ್ಮಿ ಎಂಬ ಪಾತ್ರ ಮಾಡಿರುವ ಜಗದೀಶ್ ಅವರು ಹೆಚ್ಚು ನಗಿಸುತ್ತಾರೆ. ಅವರಿಗೆ ಅಭಿಲಾಷ್ ಮತ್ತು ಸಂವೃತಾ ಚೆನ್ನಾಗಿ ಸಾಥ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಸ್ರೇಲ್ ಇರಾನ್​​ನ ಅನಿಲ ಸ್ಥಾವರಗಳ ಮೇಲೆ ದಾಳಿ ನಡೆಸುವ ಬಗ್ಗೆ ನಮಗೆ ತಿಳಿದಿರಲಿಲ್ಲ, ನಮ್ಮ ಪಾತ್ರ ಏನೂ ಇಲ್ಲ ಎಂದ ಟ್ರಂಪ್

ವಾಷಿಂಗ್ಟನ್, ಮಾರ್ಚ್​ 19:ಇರಾನ್​(Iran)ನ ಅನಿಲ ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ನಡೆಸು ಬಗ್ಗೆ ನಮಗೇನೂ ತಿಳಿದಿರಲಿಲ್ಲ, ಇದು ಕೇವಲ ಇಸ್ರೇಲ್ ನಡೆಸಿರುವ ದಾಳಿಯಷ್ಟೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಅನಿಲ ಸ್ಥಾವರಗಳ ಮೇಲೆ ಇಸ್ರೇಲ್ ಇನ್ನುಮುಂದೆ ಯಾವುದೇ ದಾಳಿ ನಡೆಸುವುದಿಲ್ಲ. ಜತೆಗೆ ಹೆಚ್ಚುತ್ತಿರುವ ಹಗೆತನದ ನಡುವೆ ಕತಾರ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ ಕೋಪಗೊಂಡು ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ ಹಾಗೆಯೇ ಕತಾರ್ ಪಾತ್ರ ಕೂಡ ಇದರಲಿಲ್ಲ ಇಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆದ ಪ್ರತಿದಾಳಿಯಿಂದಾಗಿ ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿರುವ ನಡುವೆ, ಕತಾರ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಇರಾನ್‌ಗೆ ಎಚ್ಚರಿಕೆ ನೀಡುತ್ತಾ, ಇರಾನ್‌ನ ಪ್ರಮುಖ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ಇನ್ನು ಮುಂದೆ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

ಇದು ಕೇವಲ ಇಸ್ರೇಲಿ ಕಾರ್ಯಾಚರಣೆ, ಈ ನಿರ್ದಿಷ್ಟ ದಾಳಿಯ ಬಗ್ಗೆ ಅಮೆರಿಕಕ್ಕೆ ಏನೂ ತಿಳಿದಿರಲಿಲ್ಲ, ಮತ್ತು ಕತಾರ್ ದೇಶವು ಯಾವುದೇ ರೀತಿಯಲ್ಲಿ, ರೂಪದಲ್ಲಿ ಅಥವಾ ರೂಪದಲ್ಲಿ ಭಾಗಿಯಾಗಿರಲಿಲ್ಲ, ಅಥವಾ ಅದು ಸಂಭವಿಸುತ್ತದೆ ಎಂಬ ಕಲ್ಪನೆಯೂ ಅದಕ್ಕೆ ಇರಲಿಲ್ಲ ಎಂದು ಅವರು ಹೇಳಿದರು.

ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಕ್ಷೇತ್ರ ಎಂದು ಹೇಳಲಾಗುವ ಸೌತ್ ಪಾರ್ಸ್ ಮೇಲೆ ನಡೆದ ಬಾಂಬ್ ದಾಳಿಗೆ ಗಲ್ಫ್‌ನಾದ್ಯಂತ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಬಂದಿವೆ . ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್‌ನಲ್ಲಿರುವ ಐದು ಇಂಧನ ಸೌಲಭ್ಯಗಳನ್ನು ಮುಂಬರುವ ಗಂಟೆಗಳಲ್ಲಿ ಗುರಿಯಾಗಿಸಲಾಗುವುದು ಎಂದು ಇರಾನ್ ಅಧಿಕಾರಿಗಳು ಹೇಳಿಕೆಯಲ್ಲಿ ಎಚ್ಚರಿಸಿದ್ದರು.

ಮತ್ತಷ್ಟು ಓದಿ: ಹೊರನಡೆದಿದ್ದು ಒಳ್ಳೆಯದೇ ಆಯಿತು; ಜೋ ಕೆಂಟ್ ರಾಜೀನಾಮೆ ಕುರಿತು ಟ್ರಂಪ್ ಪ್ರತಿಕ್ರಿಯೆ

ಫೆಬ್ರವರಿ 28 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ , ಇಸ್ರೇಲ್ ಮತ್ತು ಅಮೆರಿಕ ತೈಲ ಸೌಲಭ್ಯಗಳು ಸೇರಿದಂತೆ ಇರಾನ್‌ನಲ್ಲಿ ಹಲವಾರು ಗುರಿಗಳ ಮೇಲೆ ದಾಳಿ ಮಾಡಿವೆ. ಗಲ್ಫ್ ರಾಷ್ಟ್ರಗಳು ಸೇರಿದಂತೆ ಪ್ರದೇಶದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಮೂಲಕ ಇರಾನ್ ಪ್ರತಿಕ್ರಿಯಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Ugadi 2026: ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ; ಹೊಸ ವರ್ಷಕ್ಕೆ ನಮೋ ಹಾರೈಕೆ!

ದೆಹಲಿ, ಮಾ.19: ಚಾಂದ್ರಮಾನ ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಸಾಧ್ಯತೆಗಳನ್ನು ಹೊತ್ತು ತರಲಿ ಎಂದು ಅವರು ಹಾರೈಸಿದ್ದಾರೆ. “ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಸಂತ ಕಾಲದ ಹಸಿರು, ಹೂವುಗಳ ಸುಗಂಧ ಮತ್ತು ಹಣ್ಣುಗಳ ಆಗಮನವು ಹೊಸ ಶಕ್ತಿಯ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಯುಗಾದಿಯು ಹೊಸ ಕೃಷಿ ಚಟುವಟಿಕೆಗಳ ಆರಂಭದ ಕಾಲ. ಈ ಸಮಯದಲ್ಲಿ ನಮ್ಮ ದೇಶದ ಕಷ್ಟಜೀವಿ ರೈತರು ಹೊಸ ಆಶಾವಾದದೊಂದಿಗೆ ಮುಂದಿನ ಕೃಷಿ ಚಕ್ರಕ್ಕೆ ಸಜ್ಜಾಗುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಯುಗಾದಿಯ ಸಾಂಪ್ರದಾಯಿಕ ಸಂದೇಶವನ್ನು ಪ್ರಧಾನಿ ನೆನಪಿಸಿದ್ದಾರೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಯಶಸ್ಸನ್ನು ಕೃತಜ್ಞತೆಯಿಂದ ಸ್ವೀಕರಿಸಲು ಈ ಹಬ್ಬ ಪ್ರೇರಣೆ ನೀಡುತ್ತದೆ ಎಂದಿದ್ದಾರೆ. ಮುಂಬರುವ ವರ್ಷವು ಎಲ್ಲರ ಜೀವನದಲ್ಲಿ ಉತ್ತಮ ಆರೋಗ್ಯ, ಸುಖ ಮತ್ತು ಶಾಂತಿಯನ್ನು ತರಲಿ ಎಂದು ಮೋದಿ ಅವರು ಪ್ರಾರ್ಥಿಸಿದ್ದಾರೆ.

ಇಲ್ಲಿದೆ ನೋಡಿ ಪ್ರಧಾನಿ ಮೋದಿ ಪೋಸ್ಟ್​:

ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ

ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಮೂಲಕ ಅವರು ಹಂಚಿಕೊಂಡಿರುವ ಸಂದೇಶದಲ್ಲಿ ಕನ್ನಡಿಗರ ಸಂಸ್ಕೃತಿ ಮತ್ತು ಹೊಸ ಆರಂಭದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಪ್ರಧಾನಿ ಮೋದಿಯವರು ಕನ್ನಡ ಭಾಷೆಯಲ್ಲೇ ಸಂದೇಶ ನೀಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಯುಗಾದಿಯು ಹೊಸ ಭರವಸೆ ಮತ್ತು ಚೈತನ್ಯದ ಹಬ್ಬವಾಗಿದ್ದು, ಇದು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಅವರು ಹಾರೈಸಿದ್ದಾರೆ.ಮುಂಬರುವ ವರ್ಷವು ಕರ್ನಾಟಕದ ಮನೆಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯವನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಯುಗಾದಿ ಹಬ್ಬದ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ

ಉತ್ತರ ಭಾರತದ ರಾಜ್ಯಗಳಿಗೆ ಪ್ರಧಾನಿ ಮೋದಿ ವಿಶೇಷ ಪತ್ರ

ವಿಕ್ರಮ ಸಂವತ್ 2083 ಮತ್ತು ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಜನತೆಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಇರುವ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಅವರು ಶ್ಲಾಘಿಸಿದ್ದಾರೆ.ಭಾರತೀಯ ಕಾಲಗಣನೆಯ ಸಂಕೇತವಾದ ವಿಕ್ರಮ ಸಂವತ್ 2083ರ ಆರಂಭವು ದೇಶದಾದ್ಯಂತ ಹೊಸ ಭರವಸೆ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಧಾನಿ ಹಾರೈಸಿದ್ದಾರೆ.

ಕಲಿಯುಗದ ಕಾಲಗಣನೆಯಾದ ಯುಗಾಬ್ದ 5128ನೇ ವರ್ಷಕ್ಕೆ ನಾವು ಕಾಲಿಡುತ್ತಿರುವುದು ನಮ್ಮ ಪುರಾತನ ನಾಗರಿಕತೆಯ ಜೀವಂತಿಕೆಗೆ ಸಾಕ್ಷಿ ಎಂದು ಅವರು ಉಲ್ಲೇಖಿಸಿದ್ದಾರೆ. ಶಕ್ತಿ ದೇವತೆಯ ಆರಾಧನೆಯಾದ ಚೈತ್ರ ನವರಾತ್ರಿಯು ದೇಶದ ಜನರಲ್ಲಿ ಆತ್ಮವಿಶ್ವಾಸ ಮತ್ತು ದೃಢತೆಯನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಈ ದಿನವನ್ನು ‘ನವ ವರ್ಷ’ವನ್ನಾಗಿ ಆಚರಿಸುವ ಪರಂಪರೆಯನ್ನು ಸ್ಮರಿಸಿರುವ ಅವರು, ಇದು ಭಾರತದ ಸಾಂಸ್ಕೃತಿಕ ಏಕತೆಯ ಪ್ರತಿಬಿಂಬ ಎಂದಿದ್ದಾರೆ.ಹೊಸ ವರ್ಷವು ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಮೋದಿ ಅವರು ತಮ್ಮ ಪತ್ರದಲ್ಲಿ ಆಶಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ನೆರಡು ದಿನ ಕಳೆದ್ರೆ ನಂದಿನಿ ಉತ್ಪನ್ನಗಳೂ ಸಿಗೋದು ಡೌಟ್! ಕೆಎಂಎಫ್​ಗೂ ಎದುರಾಯ್ತು ಸಂಕಷ್ಟ

ಬೆಂಗಳೂರು, ಮಾರ್ಚ್ 19: ಯುಗಾದಿ (Ugadi) ಹಬ್ಬದ ಸಮಯದಲ್ಲೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಆಗಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತಕ್ಕೂ (KMF) ಸಂಕಷ್ಟ ಎದುರಾಗಿದೆ. ಇರಾನ್-ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ಇದೀಗ ನಂದಿನಿ ಉತ್ಪನ್ನಗಳ (Nandini Products) ಮೇಲೂ ತಟ್ಟತೊಡಗಿದೆ. ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಕೆಎಂಎಫ್​ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ.

ಉತ್ಪನ್ನಗಳ ತಯಾರಿಗೆ ಕೆಎಂಎಫ್ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತದೆ. ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ.

ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 20ರ ಒಳಗೆ ಕಮರ್ಷಿಯಲ್ ಎಲ್‌ಪಿಜಿ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಸಿಹಿ, ಖಾರದ ತಿಂಡಿ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ, ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ತುರ್ತು ಕ್ರಮ ಕೈಗೊಳ್ಳುವಂತೆ ಕೆಎಂಎಫ್ ಮನವಿ ಮಾಡಿದೆ. ಅಗತ್ಯ ಗ್ಯಾಸ್ ಪೂರೈಕೆ ಆಗದಿದ್ದರೆ, ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳನ್ನು ಸೀಮಿತ ಪ್ರಮಾಣದಲ್ಲೇ ಉತ್ಪಾದಿಸುವ ಅನಿವಾರ್ಯತೆ ಎದುರಾಗಬಹುದು ಎಂದು ತಿಳಿಸಲಾಗಿದೆ.

ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟ ಕೆಎಂಎಫ್

ಕೆಎಂಎಫ್​ ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟವಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಕೆಎಂಎಫ್‌ನ ವಾರ್ಷಿಕ ವಹಿವಾಟು ಸುಮಾರು 25,000 ಕೋಟಿ ರೂಪಾಯಿಗಳಿಂದ 30,000 ಕೋಟಿ ರೂಪಾಯಿಗಳವರೆಗಿದೆ. ದಿನವೊಂದಕ್ಕೆ ಸರಾಸರಿ 85 ಲಕ್ಷದಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿ ಸುಮಾರು 40 ಲಕ್ಷ ಲೀಟರ್‌ಗಿಂತಲೂ ಅಧಿಕ ಹಾಲು ಪ್ರತಿದಿನ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ನಂದಿನಿ ಸ್ವೀಟ್ಸ್‌ಗಳಂತಹ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ. ಕರ್ನಾಟಕವಷ್ಟೇ ಅಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲೂ ಕೆಎಂಎಫ್ ಬಲವಾದ ಮಾರುಕಟ್ಟೆ ಹೊಂದಿದೆ.

ಇದನ್ನೂ ಓದಿ: ಈರುಳ್ಳಿ ಬೆಲೆ ಕುಸಿತ: ರೈತರು ಈರುಳ್ಳಿಯ ಜತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ

ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಕೇವಲ ಹಾಲು ಮಾತ್ರವಲ್ಲದೆ ಸುಮಾರು 140ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಪ್ರತಿದಿನ ಲಕ್ಷಾಂತರ ಗ್ರಾಹಕರು ನಂದಿನಿ ಹಾಲಿನ ಕೇಂದ್ರಗಳ ಮೂಲಕ ವಹಿವಾಟು ನಡೆಸುತ್ತಾರೆ. ಕೇವಲ ದೇಶೀಯ ಮಾರುಕಟ್ಟೆಯಲ್ಲದೆ, ನಂದಿನಿ ಉತ್ಪನ್ನಗಳು ಅರಬ್ ರಾಷ್ಟ್ರಗಳು, ಸಿಂಗಾಪುರ ಮತ್ತು ಅಮೆರಿಕದಂತಹ ದೇಶಗಳಿಗೂ ರಫ್ತಾಗುತ್ತಿವೆ. ಯುಗಾದಿ, ದೀಪಾವಳಿಯಂತಹ ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳ ಮಾರಾಟವು ಗಣನೀಯವಾಗಿ ಏರಿಕೆಯಾಗಿ, ದಿನದ ವಹಿವಾಟು ಕೋಟ್ಯಂತರ ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಪ್ರಸ್ತುತ ಎದುರಾಗಿರುವ ಗ್ಯಾಸ್ ಅಭಾವವು ಇಂತಹ ಬೃಹತ್ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನೋರಾ ಹೇಳಿದ್ದು ತಪ್ಪು, ವಿವಾದದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿರಬಹುದು’; ಪ್ರೇಮ್

‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಚರ್ಚೆ ಹುಟ್ಟುಹಾಕಿದೆ. ನೋರಾ ಫತೇಹಿ (Nora Fatehi) ಕನ್ನಡದಲ್ಲಿ ಕಾಣಿಸಿಕೊಂಡ ಮೊದಲ ಹಾಡು ಇದು. ಈ ಹಾಡನ್ನು ನೋಡಿ ಅನೇಕರು ಅಪಸ್ವರ ಎತ್ತಿದ್ದಾರೆ. ಈ ಹಾಡನ್ನು ಈಗ ತಾತ್ಕಾಲಿಕವಾಗಿ ತೆಗೆದು ಹಾಕಲಾಗಿದ್ದು, ಹೊಸ ಸಾಹಿತ್ಯದ ಮೂಲಕ ಬರೋದಾಗಿ ಪ್ರೇಮ್ ಹೇಳಿದ್ದಾರೆ. ಈ ಮಧ್ಯೆ ಹಾಡಿನ ವಿಷಯದಲ್ಲಿ ನೋರಾ ಉಲ್ಟಾ ಹೊಡೆದಿದ್ದಾರೆ. ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿರುವುದು ಪ್ರೇಮ್ ಅಸಮಾಧಾನಕ್ಕೆ ಕಾರಣ ಆಗಿದೆ.

ವಿವಾದ ಭುಗಿಲೇಳುತ್ತಿದ್ದಂತೆ ನೋರಾ ಫತೇಹಿ ಅವರು ವಿವಾದದಿಂದ ದೂರ ಆಗಲು ಪ್ರಯತ್ನಿಸಿದ್ದರು. ‘ಮೂರು ವರ್ಷಗಳ ಹಿಂದೆಯೇ ಈ ಹಾಡು ಚಿತ್ರೀಕರಿಸಲಾಗಿತ್ತು. ಸಂಜಯ್ ದತ್ ಇರೋದ್ರಿಂದ ನಾನು ಸಿನಿಮಾ ಒಪ್ಪಿಕೊಂಡೆ. ಕನ್ನಡ ಭಾಷೆ ನನಗೆ ತಿಳಿಯಲ್ಲ. ಹೀಗಾಗಿ, ಹಾಡಿನ ಅರ್ಥವನ್ನು ತಂಡದವರ ಬಳಿ ಕೇಳಿ ತಿಳಿದುಕೊಂಡೆ’ ಎಂದು ನೋರಾ ಹೇಳಿದ್ದರು. ಹಿಂದಿ ಭಾಷೆಗೆ ಹೇಗೆ ತರ್ಜಮ್ಯ ಮಾಡಲಾಗಿದೆ ಎಂಬುದರ ಐಡಿಯಾ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ ನನ್ನ ಫೋಟೋಗಳನ್ನು ಬಳಸಿದ ರೀತಿ ಕಂಡು ನನಗೆ ಬೇಸರ ಆಯಿತು ಎಂದು ಅವರು ಹೇಳಿದ್ದಾರೆ.

ನೋರಾ ಹೇಳಿಕೆಗೆ ಪ್ರೇಮ್ ಉತ್ತರ ನೀಡಿದ್ದಾರೆ. ‘ನೋರಾ ಮಾತನಾಡಿದ್ದು ತಪ್ಪು. ಸಾಹಿತ್ಯ ಗೊತ್ತಿಲ್ಲದೆ ಭಾವನೆ ಬರಲ್ಲ. ಏಕೆ ಹಾಗೆ ಮಾತಾಡಿದ್ರೋ ಗೊತ್ತಿಲ್ಲ. ವಿವಾದಿಂದ ತಪ್ಪಿಸಿಕೊಳ್ಳಬೇಕು ಎಂದು ಹೀಗೆ ಹೇಳಿರಬಹುದು. ಪ್ರೇಮ್ ಜೊತೆ ಕೆಲಸ ಮಾಡಿದ್ದು ಖುಷಿ ಆಯ್ತು ಎಂದು ಸಾಂಗ್ ರಿಲೀಸ್ ಆದಾಗ ಹೇಳಿದ್ದರು. ನೊಂದ ಜೀವ ಚೆನ್ನಾಗಿರಲಿ’ ಎಂದು ಪ್ರೇಮ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರೇಮ್​​ಗೆ ಆ ದಿನವೇ ಎಚ್ಚರಿಕೆ ನೀಡಿದ್ದೆ: ಅಶ್ಲೀಲ ಹಾಡಿನ ವಿವಾದಕ್ಕೆ ನೋರಾ ಫತೇಹಿ ತಿರುಗೇಟು

ಸದ್ಯ ‘ಸರ್ಸೆ..’ ಹಾಡನ್ನು ಯೂಟ್ಯೂಬ್​​ನಿಂದ ತೆಗೆಯಲಾಗಿದೆ. ಹೊಸ ಹಾಡನ್ನು ಬರೆದು ಅಪ್​​ಲೋಡ್ ಮಾಡುವುದಾಗಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯುಗಾದಿ ಹಬ್ಬದ ಖರೀದಿಗೆ ಕೆಆರ್​ ಮಾರ್ಕೆಟ್​ಗೆ ಮುಗಿಬಿದ್ದ ಗ್ರಾಹಕರು

ಬೆಂಗಳೂರು, ಮಾರ್ಚ್ 19: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಡಗರ ಮನೆ ಮಾಡಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಕೆಆರ್ ಮಾರ್ಕೆಟ್‌ನಲ್ಲಿ ಭಾರಿ ಖರೀದಿ ಭರಾಟೆ ಕಂಡುಬಂದಿದೆ. ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಸಿಲಿಕಾನ್ ಸಿಟಿ ಜನರು ಮಧ್ಯರಾತ್ರಿಯಿಂದಲೇ ಮಾರುಕಟ್ಟೆಗೆ ಧಾವಿಸಿದ್ದಾರೆ. ಕೆ.ಆರ್. ಮಾರ್ಕೆಟ್‌ನಲ್ಲಿ ತಾಜಾ ಮತ್ತು ವೈವಿಧ್ಯಮಯ ಹೂವುಗಳು ಹೋಲ್‌ಸೇಲ್ ದರದಲ್ಲಿ ಲಭ್ಯವಿರುವುದರಿಂದ ಜನರು ಹೆಚ್ಚಾಗಿ ಇಲ್ಲಿಗೆ ಆಗಮಿಸುತ್ತಾರೆ. ಬೆಂಗಳೂರಿನ ಸುತ್ತಮುತ್ತಲಿನ ರೈತರು ಮತ್ತು ಹೂವಿನ ವ್ಯಾಪಾರಿಗಳು ನೇರವಾಗಿ ಇಲ್ಲಿಗೆ ಬಂದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇದು ಸ್ಥಳೀಯ ಸಣ್ಣ ಮಾರುಕಟ್ಟೆಗಳಿಗಿಂತ ಇಲ್ಲಿ ಅಲ್ಪ ಕಡಿಮೆ ದರದಲ್ಲಿ ಹೂವುಗಳು ಸಿಗಲು ಕಾರಣವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ದರ ಕೊಂಚ ಏರಿಕೆಯಾಗಿದ್ದರೂ, ಮಾರುಕಟ್ಟೆಯಲ್ಲಿ ಜನಸಾಗರವೇ ಹರಿದುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈರುಳ್ಳಿ ಬೆಲೆ ಕುಸಿತ: ರೈತರು ಈರುಳ್ಳಿಯ ಜತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ

ದಾವಣಗೆರೆ, ಮಾ.19: ಎಲ್ಲಿಯೋ ನಡೆಯುತ್ತಿರುವ ಯುದ್ಧದ ಪರಿಣಾಮ ದಾವಣಗೆರೆಯ ಈರುಳ್ಳಿ ಮಾರುಕಟ್ಟೆಯ ಮೇಲೆ ಭೀಕರವಾಗಿ ಪರಿಣಾಮವನ್ನು ಉಂಟು ಮಾಡಿದೆ. ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದು, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದ ಕೂಲಿಯೂ ಸಿಗದೆ ಒದ್ದಾಡಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜೆಗೆ ಕೇವಲ 6 ರಿಂದ 12 ರೂಪಾಯಿಗೆ ಕುಸಿದಿದೆ. ಉತ್ತಮ ಗಾತ್ರದ ಈರುಳ್ಳಿಗೂ ಕೇವಲ 10-12 ರೂಪಾಯಿ ಸಿಗುತ್ತಿದ್ದರೆ, ಸಣ್ಣ ಗಾತ್ರದ ಈರುಳ್ಳಿಗೆ 6-8 ರೂಪಾಯಿ ಮಾತ್ರ ಲಭಿಸುತ್ತಿದೆ.

ಜಾಗತಿಕ ಯುದ್ಧದ ಭೀತಿಯಿಂದಾಗಿ ಇಂಧನ ಮತ್ತು ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಹಲವು ಹೋಟೆಲ್‌ಗಳು ವಹಿವಾಟು ಸ್ಥಗಿತಗೊಳಿಸಿವೆ. ಇದು ಈರುಳ್ಳಿಯ ಬೇಡಿಕೆಯ ಮೇಲೆ ನೇರ ಪರಿಣಾಮ ಬೀರಿದೆ. ಈರುಳ್ಳಿ ಬೆಲೆ ಕುಸಿದಿದ್ದರೆ, ಅದನ್ನು ತುಂಬುವ ಖಾಲಿ ಚೀಲದ ಬೆಲೆ ಮಾತ್ರ 18 ರಿಂದ 20 ರೂಪಾಯಿಗೆ ಏರಿಕೆಯಾಗಿದೆ. ರೈತರು ಈರುಳ್ಳಿಯ ಜೊತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!

ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಹೊಸಪೇಟೆಯಿಂದ ನೂರಾರು ಕ್ವಿಂಟಾಲ್ ಈರುಳ್ಳಿ ಹೊತ್ತು ತಂದ ರೈತರು ದರ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಸ್ಥಳೀಯವಾಗಿ ಬೆಳೆದ ಈರುಳ್ಳಿಗೆ ನಾಸಿಕ್ ಈರುಳ್ಳಿಯ ಅರ್ಧದಷ್ಟು ದರವೂ ಸಿಗುತ್ತಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi 2026: ಯುಗಾದಿ ಹಬ್ಬದ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ

ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ, ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ.  ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಪ್ರತಿಯೊಬ್ಬರೂ ಬೇವು ಬೆಲ್ಲವನ್ನು ಹಂಚುತ್ತಾರೆ.ಇಂತಹ ಸಂಭ್ರಮದ ಗಳಿಗೆಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಮನಸಾರೆ ಹಬ್ಬದ ಶುಭಾಶಯಗಳನ್ನು ಕೋರಲು ಬಯಸಿದರೆ ನಿಮಗಾಗಿ ಇಲ್ಲಿದೆ ಅರ್ಥಪೂರ್ಣ ಸಂದೇಶಗಳು.

ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಹಬ್ಬದ ಶುಭಾಶಯಗಳನ್ನು ತಿಳಿಸಿ:

  • ಹೊಸತನವ ಹೊತ್ತು ಯುಗಾದಿ ಬಂದಿದೆ, ಈ ಯುಗಾದಿ ಎಲ್ಲರ ಬಾಳಲ್ಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ… ಯುಗಾದಿ ಹಬ್ಬದ ಶುಭಾಶಯಗಳು.
  • ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ, ಬೇವು ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ, ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
  • ಬೇವು ಬೆಲ್ಲ ಸವಿಯುತ್ತ ಕಹಿ ನೆನಪು ಮರೆಯುತ, ಸಿಹಿ ನೆನಪು ಚಿಗುರಲಿ, ನೀವು ಕಂಡ ಕನಸುಗಳೆಲ್ಲಾ ನನಸಾಗಲಿ, ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಹೊಸ ವರ್ಷವು ನಿಮ್ಮೆಲ್ಲಾ ಕನಸುಗಳನ್ನು ನನಸು ಮಾಡಲಿ, ಶಾಂತಿ, ಸಮೃದ್ಧಿ, ಸಂತೋಷ ತರಲಿ. ಯುಗಾದಿ ಹಬ್ಬದ ಶುಭಾಶಯಗಳು.
  • ಬೇವು ಬೆಲ್ಲದಂತೆ ನೋವು-ನಲಿವು ಬೆರೆಯಲಿ, ಸುಖ, ಶಾಂತಿ, ಸಂತೋಷ ತುಂಬಿದ ಬದುಕು ನಿಮ್ಮದಾಗಲಿ, ಹೊಸ ವರ್ಷದ ಶುಭಾಶಯಗಳು.
  • ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ… ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
  • ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲಿ ನೀವು ಕಂಡ ಕನಸು ನನಸಾಗಲಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಬದುಕಿನ ಕಷ್ಟಗಳೆಂಬ ಕಹಿ ದೂರವಾಗಲಿ, ಬರೀ ಖುಷಿ ಸಿಹಿಯಷ್ಟೇ ತುಂಬಿರಲಿ. ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.
  • ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ, ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ ಯುಗಾದಿ ಹಬ್ಬದ ಶುಭಾಶಯಗಳು. ಯುಗಾದಿ ಹಬ್ಬದ ಸಂಭ್ರಮದಲ್ಲಿ ನೋವೆಲ್ಲಾ ಬತ್ತು ಹೋಗಲಿ, ನಿಮ್ಮೆಲ್ಲರ ಬಾಳಲ್ಲಿ ಸಂತೋಷ ಚಿಮ್ಮಲಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಹಳೆಯ ನೋವನ್ನೆಲ್ಲಾ ಮರೆಸಿ, ಹೊಸ ಆಶಯಗಳ ಕೊಟ್ಟು ಎಲ್ಲರಿಗೂ ಶುಭವ ತರಲಿ ಯುಗಾದಿ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
  • ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.
  • ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಬೇವು ಬೆಲ್ಲದಂತೆ ಜೀವನದಲ್ಲಿ ಬರುವ ಕಹಿ, ಸಿಹಿಗಳನ್ನು ಸಮನಾಗಿ ಸ್ವೀಕರಿಸೋಣ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
  • ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಾಗಲಿ. ಸುಖ, ಶಾಂತಿ, ಸಮೃದ್ಧಿ, ಯಶಸ್ಸು ನಿಮ್ಮ ಜೀವನದಲ್ಲಿ ಹೆಚ್ಚಾಗಲಿ. ಯುಗಾದಿಯ ಶುಭಾಶಯಗಳು.
  • ಯುಗಾದಿಯ ಸೂರ್ಯನ ಬೆಳಕು ಅಂಧಕಾರವನ್ನು ಹೋಗಲಾಡಿಸಿ, ನಿಮಗೆ ಉಜ್ವಲ ಭವಿಷ್ಯದ ಹಾದಿಯನ್ನು ಬೆಳಗಿಸಲಿ, ಯುಗಾದಿ ಹಬ್ಬದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link