All posts by nagaraj11081993

ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸವಾಲು: ವಿಜಯೇಂದ್ರಗೆ ಸಿಎಂ ಅಂಕಿ-ಸಂಖ್ಯೆ ಸಮೇತ ತಿರುಗೇಟು

ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸವಾಲು: ವಿಜಯೇಂದ್ರಗೆ ಸಿಎಂ ಅಂಕಿ-ಸಂಖ್ಯೆ ಸಮೇತ ತಿರುಗೇಟು

ಬೆಂಗಳೂರು, (ಮಾರ್ಚ್ 31): ಕರ್ನಾಟಕದ ಆರ್ಥಿಕ (karnataka economy) ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  (BY Vijayendra) ಆಗ್ರಹಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಸಹ ಅಂಕಿ-ಸಂಖ್ಯೆ ಸಮೇತ ಮಾಧ್ಯಮ ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ. ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ. ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತೆ. ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ಮಂಡಿಸಿದ್ದೇನೆ. ಅದು ಅಂಕಿ-ಅಂಶಗಳ ಕಾಗದದ ಕಂತೆ ಅಲ್ಲ. ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಬಜೆಟ್‌ನ್ನು ವಿಧಾನಮಂಡಲ ಒಪ್ಪಿ ಅಂಗೀಕರಿಸಿದ್ದು, ಇದೇ ನಮ್ಮ ಶ್ವೇತಪತ್ರ. ಈ ಬಗ್ಗೆ ಇನ್ನೂ ನಿಮಗೆ ಅನುಮಾನಗಳಿದ್ದರೆ ವಿವರಣೆ ಕೊಡಲು ಸಿದ್ಧನಿದ್ದೇನೆ. ಉಪಚುನಾವಣೆ ಅಖಾಡದಲ್ಲಿಯೇ ನಿಮ್ಮ ಜೊತೆ ಬಹಿರಂಗ ಚರ್ಚೆಗೂ ಸಿದ್ಧ ಎಂದಿದ್ದಾರೆ. ಅಲ್ಲದೇ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೊದಲು ಸ್ವಲ್ಪ ಹೋಮ್ ವರ್ಕ್ ಮಾಡಿಕೊಂಡು ಬನ್ನಿ ಎಂದು ಟಾಂಗ್ ಕೊಟ್ಟಿದ್ದಾರೆ.

ವಿವರಣೆ ಕೊಡಲು ನಾನು ಸಿದ್ಧ

ವಿಜಯೇಂದ್ರ ಶ್ವೇತ ಪತ್ರದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿಎಂ, ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ನಾನು ಮಂಡಿಸಿದ್ದು, ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಆಯವ್ಯಯವನ್ನು ವಿಧಾನಮಂಡಲದ ಉಭಯ ಸದನಗಳು ಒಪ್ಪಿಕೊಂಡು ಅಂಗೀಕರಿಸಿವೆ. ಇದರ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಕೂಲಂಕಷವಾಗಿ ಚರ್ಚೆ ನಡೆದಿದೆ. ವಿಜಯೇಂದ್ರ ಪಕ್ಷದವರೂ ಸೇರಿ 21 ಜನ ವಿರೋಧ ಪಕ್ಷದ ಸದಸ್ಯರೂ ಮಾತನಾಡಿ ಎತ್ತಿದ್ದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದೇನೆ. ಇದರ ಬಗ್ಗೆ ಇನ್ನೂ ನಿಮಗೆ ಅನುಮಾನಗಳಿದ್ದರೆ ವಿವರಣೆ ಕೊಡಲು ನಾನು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ವಿಧಾನ ಸಭೆಯಲ್ಲಿ ದೋಸ್ತಿ, ಹೊರಗಡೆ ಕುಸ್ತಿ: ಸಿದ್ದರಾಮಯ್ಯ ಮತ್ತು ಅಶೋಕ್​​ ನಡುವೆ ಕಳ್ಳೆತ್ತು, ಕುಂಟೆತ್ತು ಕಾಳಗ

ದಯವಿಟ್ಟು ಕೇವಲ ರಾಜಕೀಯ ಮಾತನಾಡಬೇಕೆಂಬ ಬಾಯಿ ಚಪಲಕ್ಕಾಗಿ ಆಯವ್ಯಯ ಪತ್ರದ ಪಾವಿತ್ರ್ಯವನ್ನು ಹಾಳು ಮಾಡಲು ಹೋಗಬೇಡಿ. ರಾಜ್ಯ ದಿವಾಳಿ ಸ್ಥಿತಿಯಲ್ಲಿದೆ ಎಂಬ ಆರೋಪದ ಹಿಂದೆ ನಮ್ಮ ಸರ್ಕಾರವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ನಾಯಕರ ಅಸಹಾಯಕತೆ, ಹತಾಶೆ ಮತ್ತು ಅಸೂಯೆ ಇದೆ. ಯಾವ ಇಲಾಖೆಯೂ ನೌಕರರಿಗೆ ಸಂಬಳ ನೀಡಲಾಗದ ದಿವಾಳಿ ಸ‍್ಥಿತಿಯಲ್ಲಿಲ್ಲ. ನಮ್ಮ ಸರ್ಕಾರ ಆರ್ಥಿಕವಾಗಿ ಮಾತ್ರವಲ್ಲ ರಾಜಕೀಯವಾಗಿಯೂ ಸುಭದ್ರವಾಗಿದೆ. ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ. ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 38,455 ಕೋಟಿ ರೂ. ಗಳಷ್ಟು ಹೆಚ್ಚಿನದ್ದಾಗಿದೆ.
ನಮ್ಮ ಬಜೆಟ್ ಗಾತ್ರದಲ್ಲಿ ಶೇ.9.4ರಷ್ಟು ಬೆಳವಣಿಗೆಯಾಗಿದ್ದರೆ, ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚು

ಕಳೆದ ವರ್ಷ 50.66 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ ಈ ವರ್ಷ 53.47 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ. ನಮ್ಮ ಬಜೆಟ್ ಗಾತ್ರ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತಿದೆ. ಆರ್ಥಿಕ ಹಿಂಜರಿತ ಇದ್ದಿದ್ದರೆ ಈ ಪ್ರಗತಿ ಸಾಧ್ಯವಾಗುತ್ತಿತ್ತೇ? 2025-26 ರಲ್ಲಿ ದೇಶದ ಜಿಡಿಪಿಯ ಬೆಳವಣಿಗೆ ಶೇ.7.4 ರಷ್ಟಿದ್ದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್‌ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿರುವುದು ನಮ್ಮ ಸರ್ಕಾರದ ಆರ್ಥಿಕ ಸುಭದ್ರತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಕೇಂದ್ರದ ವಿತ್ತೀಯ ಕೊರತೆ ಶೇ.4.3 ರಷ್ಟಿದೆ

ಈ ವರ್ಷ ನಮ್ಮ ಜಿ.ಎಸ್.ಡಿ.ಪಿ 33,05,500 ಕೋಟಿಯಷ್ಟಿದೆ. ನಾನು ಮಂಡಿಸಿರುವ ಹದಿನೇಳು ಬಜೆಟ್ ಗಳಲ್ಲಿಯೂ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೇನೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮಕ್ಕೆ ಅನುಗುಣವಾಗಿ ನಮ್ಮ ಒಟ್ಟು ಹೊಣೆಗಾರಿಕೆಗಳು ಜಿ.ಎಸ್.ಡಿ.ಪಿ.ಯ ಶೇಕಡಾ 25 ರೊಳಗೆ ಇರಬೇಕು. ನಮ್ಮದು ಶೇ.24.94 ರಷ್ಟಿದೆ. ಕೇಂದ್ರ ಸರ್ಕಾರದ ಹೊಣೆಗಾರಿಕೆಗಳು ಜಿ.ಡಿ.ಪಿ.ಯ ಶೇಕಡಾ 40ರೊಳಗೆ ಇರಬೇಕಾಗುತ್ತದೆ. ಅದು ಶೇ.55.6 ರಷ್ಟಿದೆ. ದಿವಾಳಿಯಾಗಿರುವುದು ಯಾವ ಸರ್ಕಾರ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 16ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ವಿತ್ತೀಯ ಕೊರತೆ ರಾಜ್ಯಗಳಲ್ಲಿ ಜಿಎಸ್‌ಡಿಪಿಯ ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಜಿಡಿಪಿಯ ಶೇ.4.2 ರೊಳಗೆ ಇರಬೇಕು. ನಮ್ಮ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ರ ಒಳಗೆ ಇದೆ. ಆದರೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3 ರಷ್ಟಿದೆ. ವಿಜಯೇಂದ್ರ ಅವರೇ ದಯವಿಟ್ಟು ಒಮ್ಮೆ ನಿಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳ ಆರ್ಥಿಕತೆಯ ಮೇಲೆ ಕಣ್ಣಾಡಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದ್ದಾರೆ.

ಅನುದಾನದಲ್ಲಿ ನಿರಂತರ ಮಲತಾಯಿ ಧೋರಣೆ

ಮಹಾರಾಷ್ಟ್ರದ ಸಾಲ ಬಾಕಿ ರೂ.11.02 ಲಕ್ಷ ಕೋಟಿಯಷ್ಟಿದ್ದರೆ, ಬಿಹಾರದ ವಿತ್ತೀಯ ಕೊರತೆ ಜಿಎಸ್ ಡಿಪಿ ಶೇ.11.8ರಷ್ಟಿದೆ. ರಾಜಸ್ತಾನ ಮತ್ತು ಮಧ್ಯಪ್ರದೇಶದ ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇಕಡಾ 3.7ರಷ್ಟಿದೆ.
ಬಿಜೆಪಿ ಆಳ್ವಿಕೆಯ ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರಗಳಿರಲಿ ಆರ್ಥಿಕ ದಿವಾಳಿತನವೇ ಬಿಜೆಪಿ ಆಡಳಿತದ ಮುಖ್ಯ ಗುರುತಾಗಿದೆ. ನಮ್ಮನ್ನು ರಾಜಕೀಯವಾಗಿ ಹಣಿಯಬೇಕೆಂಬ ದುರುದ್ದೇಶದಿಂದ ಕೇಂದ್ರ ಸರ್ಕಾರ ಸತತವಾಗಿ ಕರ್ನಾಟಕಕ್ಕೆ ಹೊಡೆತದ ಮೇಲೆ ಹೊಡೆತ ಕೊಡುತ್ತಿದೆ. ತೆರಿಗೆ ಹಂಚಿಕೆ, ಜಿಎಸ್ ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನದಲ್ಲಿ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ. ಹದಿನಾಲ್ಕನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪಾಲನ್ನು ಶೇಕಡಾ 4.72ಕ್ಕೆ ನಿಗದಿಗೊಳಿಸಿತ್ತು, ಹದಿನೈದನೇ ಹಣಕಾಸು ಆಯೋಗ 3.64ಕ್ಕೆ ಇಳಿಸಿತ್ತು.

ನಮ್ಮ ತೀವ್ರ ಪ್ರತಿಭಟನೆಯ ನಂತರ ಹದಿನಾರನೇ ಹಣಕಾಸು ಆಯೋಗ ಈಗ ತೆರಿಗೆ ಹಂಚಿಕೆಯ ಪಾಲನ್ನು ಶೇಕಡಾ 4.13ಕ್ಕೆ ನಿಗದಿಗೊಳಿಸಿದೆ. ಅತ್ಯಂತ ಹೆಚ್ಚು ತೆರಿಗೆ ಸಂಗ್ರಹಿಸುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ದುರುದ್ದೇಶದಿಂದ ಈ ಅನ್ಯಾಯ ಎಸಗಿದರೂ ರಾಜ್ಯದ ಬಿಜೆಪಿ ನಾಯಕರಾಗಲಿ, ಆ ಪಕ್ಷದ ಸಂಸದರಾಗಲಿ ಬಾಯಿ ಬಿಚ್ಚದೆ ಕರ್ನಾಟಕ ರಾಜ್ಯದ ಜನತೆಗೆ ದ್ರೋಹ ಎಸಗುತ್ತಿದ್ದಾರೆ. ಜಿ.ಎಸ್.ಟಿ. ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದು ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್‌‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸಿನಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ.

ಕೇಂದ್ರ ಜಿಎಸ್​​​ಟಿ ಪರಿಹಾರ ನೀಡುವುದು ನಿಲ್ಲಿಸಿದೆ

ಕೇಂದ್ರ ಸರ್ಕಾರವು 2023-24ರಿಂದ ಜಿ.ಎಸ್.ಟಿ. ಪರಿಹಾರ ಸ್ಥಗಿತಗೊಳಿಸಿದ್ದರಿಂದ, ಕೇಂದ್ರ ಸರ್ಕಾರ ಅಂದಾಜಿಸಿದ್ದ ಜಿ.ಎಸ್.ಟಿ. ಸಂಗ್ರಹಣೆಗೆ ಹೋಲಿಸಿದರೆ, ರಾಜ್ಯದ ಜಿ.ಎಸ್.ಟಿ ಸಂಗ್ರಹಣೆಯು 2023-24ರಲ್ಲಿ 30,871 ಕೋಟಿ ರೂ.ಗಳು ಮತ್ತು 2024-25ರಲ್ಲಿ 40,368 ಕೋಟಿ ರೂ.ಗಳು ಕೊರತೆಯಾಗಿರುತ್ತದೆ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 2023-24ರಿಂದ 2025-26ರವರೆಗೆ 39,500 ಕೋಟಿ ರೂ.ಗಳು ನಷ್ಟವಾಗಿರುತ್ತದೆ. ಇದರ ಪರಿಣಾಮವಾಗಿ, 2023-24ರಿಂದ ರಾಜಸ್ವ ಕೊರತೆಯನ್ನು ಎದುರಿಸುವಂತಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-2022) ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡಿತ್ತು. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಒಟ್ಟು ಪರಿಹಾರ 57,351 ಕೋಟಿ ರೂ.ಗಳು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2023ರಿಂದ ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡುವುದನ್ನು ನಿಲ್ಲಿಸಿರುತ್ತದೆ. ಆದಕಾರಣ ರಾಜ್ಯದ ರಾಜಸ್ವ ಸಂಗ್ರಹಣೆ ಕಡಿಮೆಯಾಗಿ ರಾಜಸ್ವ ಕೊರತೆಯನ್ನು ಎದುರಿಸಬೇಕಾಯಿತು.

2017ರಲ್ಲಿ ಜಿಎಸ್‌ಟಿ ಜಾರಿಯಾದಾಗಿನಿಂದ, 15ನೇ ಹಣಕಾಸು ಆಯೋಗ ಮಾಡಿದ ಅನ್ಯಾಯದಿಂದ, 15ನೇ ಹಣಕಾಸು ಆಯೋಗ ಮಾಡಿದ ಶಿಫಾರಸ್ಸುಗಳನ್ನು ಜಾರಿ ಮಾಡದೆ ಕೇಂದ್ರವು ಮಾಡಿದ ದ್ರೋಹದಿಂದ, ಜಿಎಸ್‌ಟಿ ಪರಿಹಾರ ನೀಡದ ಕಾರಣ ಸುಮಾರು 2,00,000 ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ರಾಜ್ಯಕ್ಕೆ ಉಂಟಾಗಿದೆ. ಕೇಂದ್ರ ಸರ್ಕಾರ ಅನುಸರಿಸುತ್ತಾ ಬಂದಿರುವ ಒಕ್ಕೂಟ ವಿರೋಧಿ ಧೋರಣೆಯ ಹೊರತಾಗಿಯೂ ರಾಜ್ಯದ ಆರ್ಥಿಕತೆ ಎಲ್ಲಿಯೂ ಹಳಿ ತಪ್ಪದಂತೆ ಎಚ್ಚರಿಕೆ ಮತ್ತು ಬದ್ಧತೆಯಿಂದ ಮುನ್ನಡೆಸುತ್ತಾ ಬಂದಿದ್ದೇವೆ.

ಮ್ಮ ರಾಜಸ್ವ ಕೊರತೆಗೆ ಪ್ರಮುಖ ಕಾರಣ ಇದು

ಕಳೆದ ವರ್ಷ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಮಾಡಿದ ಜಿಎಸ್‌ಟಿ ದರಗಳ ಪರಿಷ್ಕರಣೆಯಿಂದಾಗಿ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿತ್ತು. ಈ ಪರಿಷ್ಕರಣೆಗೆ ಮುನ್ನ, ರಾಜ್ಯದ ಸರಾಸರಿ ಮಾಸಿಕ ಜಿ.ಎಸ್.ಟಿ ಸಂಗ್ರಹಣೆಯು ಶೇ.10ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ದರ ಪರಿಷ್ಕರಣೆಯ ನಂತರ, ಜಿ.ಎಸ್.ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯು ಶೇ.4ರಷ್ಟು ಕಡಿಮೆಯಾಗಿದೆ. 2025-26ನೇ ಸಾಲಿನಲ್ಲಿ ಸುಮಾರು ₹10,000 ಕೋಟಿ ಕೊರತೆಯಾದರೆ, 26-27ರಲ್ಲಿ 15,000 ಕೋಟಿ ರೂ.ಗಳಷ್ಟು ಕೊರತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದು ನಮ್ಮ ರಾಜಸ್ವ ಕೊರತೆಗೆ ಪ್ರಮುಖ ಕಾರಣ.

ಕೇಂದ್ರ ಸರ್ಕಾರ ನಡೆಸಿದ ಜಿಎಸ್‌ಟಿ ದರ ಪರಿಷ್ಕರಣೆಯಿಂದ ಸಾಮಾನ್ಯ ಜನರಿಗೆ ಯಾವ ಲಾಭವೂ ಆಗಿಲ್ಲ. ಕಾರು, ಬೈಕುಗಳ ಖರೀದಿ ಮಾಡಿದವರಿಗೆ ಸ್ವಲ್ಪ ಲಾಭವಾಗಿರಬಹುದು. ಇದರ ಬಹುತೇಕ ಲಾಭವನ್ನು ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೊರೇಟ್ ಕುಳಗಳು ಹೊತ್ತುಕೊಂಡು ಹೋಗುತ್ತಿವೆ. ಇಷ್ಟರ ನಡುವೆಯೂ ಕಳೆದ ವರ್ಷದ ಆಯವ್ಯಯಕ್ಕಿಂತ ಸುಮಾರು 22,573 ಕೋಟಿ ರೂ. ಹೆಚ್ಚಿನ ರೆವಿನ್ಯೂ ಸಂಗ್ರಹವಾಗಬಹುದೆಂದು ಅಂದಾಜಿಸಿದ್ದೇವೆ. ನಾನು ಎಂದೂ ಸಾಲ ಮಾಡಬಾರದು ಎಂದು ಹೇಳಿಲ್ಲ, ಹೇಳುವುದೂ ಇಲ್ಲ. ಎಲ್ಲ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲೂ ಸಾಲ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ ಮಾಡುವ ಸಾಲದ ಹಣವನ್ನು ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗಾಗಿ ಹೂಡಿಕೆ ಮಾಡಿದಾಗ ಅದರಿಂದ ಬರುವ ಪ್ರತ್ಯಕ್ಷ ಮತ್ತು ಪರೋಕ್ಷ ಗಳಿಕೆ ಆರ್ಥಿಕತೆಯನ್ನು ಇನ್ನಷ್ಟು ಸದೃಡಗೊಳಿಸುತ್ತದೆ.

ಕೇಂದ್ರ ಸರ್ಕಾರ ಸಾಲದ ಮೇಲೆ ಅವಲಂಬಿತವಾಗಿದೆ

ಕೇಂದ್ರ ಸರ್ಕಾರವೂ ತನ್ನ ವೆಚ್ಚ ನಿರ್ವಹಣೆಗೆ ಸಾಲದ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರ ಮಾಡಿದ ಸಾಲ 2014 ರ ಮಾರ್ಚ್ ಗೆ ಹೋಲಿಸಿದರೆ 2027 ರ ಮಾರ್ಚ್ ವೇಳೆಗೆ 165.52 ಲಕ್ಷ ಕೋಟಿ ರೂಗಳಷ್ಟು ಹೆಚ್ಚಾಗಿದೆ. ರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಇದ್ದ 53.11 ಲಕ್ಷ ಕೋಟಿ ರೂ. ಸಾಲ ಈಗ 218.63 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಮೋದಿಯವರು ದೇಶವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ. ಈ ವರ್ಷ 16,96,000 ಕೋಟಿ ಸಾಲ ಮಾಡಿದ್ದಾರೆ. ನಿಯಮಗಳ ಪ್ರಕಾರ ಸಾಲದ ಮೊತ್ತ 40 ರಷ್ಟಿರಬೇಕಿದ್ದು, ಕೇಂದ್ರದ ಈ ಪ್ರಮಾಣ 56 ರಷ್ಟು ಹೆಚ್ಚಿದೆ ಎಂದು ಅಂಕಿ ಸಂಖ್ಯೆ ಬಿಚ್ಚಿಟ್ಟಿದ್ದಾರೆ.

ಬಿಜೆಪಿ ಅವಧಿಯ ಸಾಲ ಲೆಕ್ಕ  ಹೇಳಿದ ಸಿಎಂ

ವಿಜಯೇಂದ್ರ ಅವರೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ್ದ ಸಾಲವನ್ನೊಮ್ಮೆ ಹಿಂದಿರುಗಿ ಹೋಗಿ ನೋಡಿ. ಕೊರೋನ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದ ನಾವು ಪ್ರತಿ ಕುಟುಂಬಕ್ಕೆ 10,000 ರೂ. ಕೊಡಿ ಜನರ ಕೈಯಲ್ಲಿ ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟ ಸ್ವಲ್ಪವಾದರೂ ಕಡಿಮೆಯಾಗಲಿ ಎಂದು ಹೇಳಿದರೆ ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಕೇಳಲಿಲ್ಲ. ಆದರೂ ಸಾಲ ಮಾಡಿ ಮಾಡಿದ್ದೇನು? ಒಂದು ರಸ್ತೆ ಸರಿ ಮಾಡಲಿಲ್ಲ. ತಮ್ಮ 4 ವರ್ಷಗಳ 2019-23 ರ ಅವಧಿಯಲ್ಲಿ ಹಿಂದುಳಿದ ವರ್ಗದವರಿಗೆ ಕೇವಲ 5 ಹಾಸ್ಟೆಲ್‌ಗಳನ್ನು ಕೊಟ್ಟಿದ್ದೀರಿ. 2,832 ಹೊಸ ಬಸ್ಸುಗಳನ್ನು ಕೊಂಡುಕೊಳ್ಳಲಾಯಿತು. ನಾಲ್ಕು ವರ್ಷಗಳಲ್ಲಿ 5.75 ಲಕ್ಷ ಮನೆಗಳನ್ನು ನಿರ್ಮಿಸಿದರು. ಹೊಸ ಆಸ್ಪತ್ರೆಗಳಿರಲಿಲ್ಲ. ವೈದ್ಯರ ನೇಮಕಾತಿ ಇರಲಿಲ್ಲ. ಹೀಗಿದ್ದರೂ ಬಿಜೆಪಿ ಸರ್ಕಾರ 2023ರಲ್ಲಿ 5,53,363 ಕೋಟಿ ರೂಗಳಷ್ಟು ಬಾಕಿ ಸಾಲವನ್ನು ಉಳಿಸಿಹೋಗಿತ್ತು.ಬಿಜೆಪಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅರ್ಥಿಕತೆಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಯಾರು ಆರ್ಥಿಕತೆಯನ್ನು ದಿವಾಳಿ ಸ್ಥಿತಿಗೆ ತಳ್ಳಿದವರು ಎನ್ನುವುದು ಸ್ಪಷ್ಟವಾಗುತ್ತದೆ. ವಿಜಯೇಂದ್ರ ಅವರೇ ಇನ್ನೊಮ್ಮೆ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೊದಲು ಸ್ವಲ್ಪ ಹೋಮ್ ವರ್ಕ್ ಮಾಡಿಕೊಂಡು ಬನ್ನಿ, ಮಾತನಾಡೋಣ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯ ಮಗಳು ರಾಧ್ಯಾ ಬರ್ತ್​ಡೇ ವಿಡಿಯೋ ನೋಡಿ..

ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಯ ಪುತ್ರಿ ರಾಧ್ಯಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ರಿಷಬ್ ಶೆಟ್ಟಿ (Rishab Shetty) ಅವರು ಸಿನಿಮಾದ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಕುಟುಂಬಕ್ಕೆ ಸಮಯ ನೀಡುತ್ತಾರೆ. ಮಕ್ಕಳ ಹುಟ್ಟುಹಬ್ಬವನ್ನು ಅವರು ಸಂಭ್ರಮದಿಂದ ಆಚರಿಸುತ್ತಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಅವರಿಗೆ ಇನ್ನಷ್ಟು ಬೇಡಿಕೆ ಹೆಚ್ಚಿದೆ. ಹೊಸ ಸಿನಿಮಾದ ಕೆಲಸಗಳತ್ತ ಅವರು ಗಮನ ಹರಿಸಿದ್ದಾರೆ. ಪರಭಾಷೆಯಿಂದಲೂ ಅವರಿಗೆ ಬೇಡಿಕೆ ಬಂದಿದೆ. ಈ ಎಲ್ಲ ಕೆಲಸಗಳ ನಡುವೆ ಅವರು ಪುತ್ರಿ ರಾಧ್ಯಾ (Raadya) ಹುಟ್ಟುಹಬ್ಬವನ್ನು ಭರ್ಜರಿಯಾಗಿ ಸೆಲಬ್ರೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾದಗಿರಿ: ಎರಡು ಎಕರೆ ಜಮೀನಿಗಾಗಿ ರಕ್ತಚರಿತ್ರೆ; ದೊಡ್ಡಪ್ಪನ ಕುಟುಂಬದಿಂದಲೇ ಯುವಕನ ಬರ್ಬರ ಹತ್ಯೆ!

ಸುರಪುರ, ಮಾ.31: ಕೇವಲ ಎರಡು ಎಕರೆ ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹವೊಂದು ಯುವಕನ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ 27 ವರ್ಷದ ಪರಮೇಶ್ವರ ಎಂಬ ಯುವಕನನ್ನು ಆತನ ದೊಡ್ಡಪ್ಪ ಹನುಮಂತರಾಯ ಮತ್ತು ಆತನ ಮಕ್ಕಳು ಸೇರಿ ತಲ್ವಾರ್, ಬರ್ಚಿ ಹಾಗೂ ಕಲ್ಲುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕೊಲೆಯಾದ ಪರಮೇಶ್ವರನ ತಂದೆ ಮಲ್ಲಪ್ಪ ಮತ್ತು ಆರೋಪಿ ಹನುಮಂತರಾಯ ಸಹೋದರರು. ತಲಾ 13 ಎಕರೆ ಜಮೀನು ಹಂಚಿಕೆಯಾಗಿದ್ದರೂ, ಮಲ್ಲಪ್ಪನ ಹೆಸರಿಗಿದ್ದ ಹೆಚ್ಚುವರಿ 2 ಎಕರೆ ಜಮೀನನ್ನು ಹನುಮಂತರಾಯ ಕಳೆದ 20 ವರ್ಷಗಳಿಂದ ಬಲವಂತವಾಗಿ ಉಳುಮೆ ಮಾಡುತ್ತಿದ್ದ. ತಂದೆಯ ಸಾವಿನ ನಂತರ ಮಗ ಪರಮೇಶ್ವರ ಪಂಚಾಯಿತಿ ನಡೆಸಿ, ಕಾನೂನು ಹೋರಾಟದ ಮೂಲಕ ಆ 2 ಎಕರೆ ಜಮೀನನ್ನು ವಾಪಸ್ ಪಡೆದಿದ್ದ. ಇದು ಹನುಮಂತರಾಯನ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿತ್ತು.

ನಿನ್ನೆ ರಾತ್ರಿ ಪರಮೇಶ್ವರ ಮನೆ ಬಳಿ ನಿಂತಿದ್ದಾಗ, ಹನುಮಂತರಾಯ ತನ್ನ ಮಕ್ಕಳು ಮತ್ತು ಸಂಬಂಧಿಕರ ಗುಂಪು ಕಟ್ಟಿಕೊಂಡು ಅಟ್ಯಾಕ್ ಮಾಡಿದ್ದಾನೆ. ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲೇ ಪರಮೇಶ್ವರನನ್ನು ಎಳೆದಾಡಿ, ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಪರಮೇಶ್ವರನ ಸಹೋದರ ರೇವಣಸಿದ್ದನ ಮೇಲೂ ಹಲ್ಲೆ ನಡೆದಿದ್ದು, ಆತ ಗಾಯಗೊಂಡಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ ಪರಮೇಶ್ವರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಮಾರಕಾಸ್ತ್ರಗಳ ಆರ್ಭಟಕ್ಕೆ ಹೆದರಿ ಗ್ರಾಮಸ್ಥರು ಜಗಳ ಬಿಡಿಸಲು ಹೋಗದ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!

ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಒಟ್ಟು 21 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಿತ್ ಶೆಟ್ಟಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್; ಹಾಡು ಬಳಸಿದ್ದಕ್ಕೆ 25 ಲಕ್ಷ ರೂ. ದಂಡ

ಕನ್ನಡದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ (Rakshit Shetty) ಅವರ ನಿರ್ಮಾಣ ಸಂಸ್ಥೆಯಾದ ‘ಪರಂವಾ ಸ್ಟುಡಿಯೋಸ್‌’ಗೆ ದೆಹಲಿ ಹೈಕೋರ್ಟ್ ದೊಡ್ಡ ಮೊತ್ತದ ದಂಡ ವಿಧಿಸಿದೆ. ‘ಬ್ಯಾಚುಲರ್ ಪಾರ್ಟಿ’ (Bachelor Party) ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 25 ಲಕ್ಷ ರೂಪಾಯಿ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ ಎಂದು ‘ಬಾರ್​ ಆ್ಯಂಡ್ ಬೆಂಚ್’ ವರದಿ ಮಾಡಿದೆ.

ಖ್ಯಾತ ಮ್ಯೂಸಿಕ್ ಕಂಪನಿ ‘ಎಮ್‌ಆರ್‌ಟಿ ಮ್ಯೂಸಿಕ್’ ಈ ದೂರು ದಾಖಲಿಸಿತ್ತು. 2020ರ ಹಕ್ಕುಸ್ವಾಮ್ಯ ಒಪ್ಪಂದದ ಪ್ರಕಾರ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಎರಡು ಹಾಡುಗಳ ಮಾಲೀಕತ್ವ ತಮ್ಮದಾಗಿದೆ ಎಂದು ಸಂಸ್ಥೆ ವಾದಿಸಿತ್ತು. ಆದರೆ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಈ ಹಾಡುಗಳನ್ನು ಅನುಮತಿ ಪಡೆಯದೇ ಬಳಸಿಕೊಳ್ಳಲಾಗಿತ್ತು ಎಂದು ಎಮ್‌ಆರ್‌ಟಿ ಮ್ಯೂಸಿಕ್ ಆರೋಪಿಸಿತ್ತು.

ವಿಚಾರಣೆ ವೇಳೆ ರಕ್ಷಿತ್ ಶೆಟ್ಟಿ ಮತ್ತು ತಂಡವು ತಮ್ಮ ಸಮರ್ಥನೆಯಾಗಿ ಕೆಲವು ವಾದಗಳನ್ನು ಮಂಡಿಸಿತ್ತು. ‘ನ್ಯಾಯ ಎಲ್ಲಿದೆ’ ಹಾಡನ್ನು ಕೇವಲ 7 ಸೆಕೆಂಡ್ ಮತ್ತು ‘ಒಮ್ಮೆ ನಿನ್ನನ್ನು’ ಹಾಡನ್ನು 31 ಸೆಕೆಂಡ್ ಮಾತ್ರ ಬಳಸಲಾಗಿದೆ. ಇದು ಅತೀ ಕಡಿಮೆ ಅವಧಿ ಆಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುವುದಿಲ್ಲ ಎಂದು ವಾದಿಸಲಾಗಿತ್ತು.

ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ‘ಹಾಡುಗಳ ಬಳಕೆಯು ಕೇವಲ ಕಾಕತಾಳೀಯವಲ್ಲ. ಬದಲಾಗಿ ಸಿನಿಮಾದ ಕಥೆಯ ನಿರೂಪಣೆಗೆ ಪೂರಕವಾಗಿ ಮತ್ತು ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಳಸಲಾಗಿದೆ’ ಎಂದು ಅಭಿಪ್ರಾಯಪಟ್ಟಿತು. ನಾಯಕ ಸಂಕಷ್ಟದಲ್ಲಿರುವಾಗ ‘ನ್ಯಾಯ ಎಲ್ಲಿದೆ’ ಹಾಡನ್ನು ಹಿನ್ನೆಲೆಯಲ್ಲಿ ಹಾಕಿರುವುದು ಒಂದು ಸೃಜನಾತ್ಮಕ ನಿರ್ಧಾರವಾಗಿದ್ದು, ಇದು ಹಕ್ಕುಸ್ವಾಮ್ಯದ ಅಡಿ ಬರುತ್ತದೆ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ

ನ್ಯಾಯಾಲಯವು ರಕ್ಷಿತ್ ಶೆಟ್ಟಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದರಿಂದ ವಿನಾಯಿತಿ ನೀಡಿದೆಯಾದರೂ, ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಈಗಾಗಲೇ ಠೇವಣಿ ಇರಿಸಲಾಗಿರುವ 20 ಲಕ್ಷ ರೂಪಾಯಿಗಳನ್ನು ಎಮ್‌ಆರ್‌ಟಿ ಮ್ಯೂಸಿಕ್‌ಗೆ ನೀಡಲು ಸೂಚಿಸಿದೆ. ನ್ಯಾಯಾಲಯದ ಆದೇಶವನ್ನು ಸಮಯಕ್ಕೆ ಸರಿಯಾಗಿ ಪಾಲಿಸದ ಕಾರಣಕ್ಕೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾಹನ ಸವಾರರ ಗಮನಕ್ಕೆ: ಕರಗ ಶಕ್ತ್ಯೋತ್ಸವ ಅಂಗವಾಗಿ ಈ ರಸ್ತೆಯ ಮಾರ್ಗ ಬದಲಾವಣೆ

ಬೆಂಗಳೂರು, (ಮಾರ್ಚ್ 31): ಈಗಾಗಲೇ ಬೆಂಗಳೂರು ಕರಗ ಶಕ್ತ್ಯೋತ್ಸವ (Bengaluru Karaga 2026) ಶುರುವಾಗಿದ್ದು, ನಾಳೆ (ಏ.1) ಕರ್ಪೂರ ಪೂಜೆ ನೆರವೇರಲಿದ್ದು, ಬಳಿಕ ಬುಧವಾರ ಮಧ್ಯರಾತ್ರಿ 12.30ರಿಂದ ಹೂವಿನ ಕರಗದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 1ರ ರಾತ್ರಿ 9 ರಿಂದ ಮರುದಿನ ಅಂದರೆ ಏಪ್ರಿಲ್ ಬೆಳಗ್ಗೆ 7 ರವರೆಗೆ ಕರಗ ಉತ್ಸವ ಹೊರಡುವ ಕೆಲವು ರಸ್ತೆಯಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ಈ ಕೆಳಗೆ ನೀಡಿರುವ ರಸ್ತೆಗಳಲ್ಲಿ ಸಂಚರಿಸುವ ಬದಲು ಬೇರೆ ಮಾರ್ಗವಾಗಿ ತೆರಳಬೇಕು.

ಯಾವೆಲ್ಲಾ ರಸ್ತೆಯ ಮಾರ್ಗ ಬದಲು?

ಮಾರ್ಕೆಟ್ ಸರ್ಕಲ್​ನಿಂದ ಅವೆನ್ಯೂ ಸರ್ಕಲ್​ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್​ವರೆಗೂ ರಸ್ತೆ ಏಪ್ರಿಲ್ 1ರ ರಾತ್ರಿ 9ರಿಂದ ಏಪ್ರಿಲ್ 2ರ ಬೆಳಗ್ಗೆ 7ರವರೆಗೆ ಬಂದ್ ಇರಲಿದೆ. ಹೀಗಾಗಿ SPG ರಸ್ತೆ, ಟೌನ್​ ಹಾಲ್ ಹಾಗೂ ಕೆಂಪೇಗೌಡ ರಸ್ತೆ ಮಾರ್ಗದಲ್ಲಿ ಸಂಚರಿಸಬೇಕೆಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಕರಗ ದೇಗುಲದಿಂದ ಹೊರಟು ಮರಳಿ ಬರುವವರಿಗೆ ಅಕ್ಕಿಪೇಟೆ, ಓಟಿಸಿ ಮುಖ್ಯ ರಸ್ತೆಗಳು ಸಹ ಸಂಪೂರ್ಣ ಬಂದ್ ಆಗಲಿವೆ. ಇದರಿಂದ ಈ ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸಬೇಕು ಎಂದು ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ನೋಡಿ: Bengaluru Karaga: ಇಂದು ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ; ಹಸಿ ಕರಗ ಹೊತ್ತು ದ್ರೌಪದಿ ದೇವಿ ದರ್ಶನ!

ದೇಗುಲಕ್ಕೆ ಕಮಿಷನರ್ ಭೇಟಿ

ಬೆಂಗಳೂರು ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು ಪೊಲೀಸ್ ಕಮಿಷನರ್ ಗೆ ಜಂಟಿ ಪೊಲೀಸ್ ಆಯುಕ್ತ ವಂಶೀಕೃಷ್ಣ, ಡಿಸಿಪಿ ಅಕ್ಷಯ್, ಯತೀಶ್ ಎನ್ ಸಾಥ್ ನೀಡಿದ್ದು, ಈ ವೇಳೆ ಕಗರ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಕರಗ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕಣ್ಗಾವಲು

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ಕರಗ ಬೆಂಗಳೂರಿನ ಕೇಂದ್ರ ಹಾಗೂ ಪಶ್ಚಿಮ ಭಾಗದಲ್ಲಿ ಸುಮಾರು 22 ಕಿ.ಲೋ. ದೂರ ಸಾಗಲಿದೆ. ಹೀಗಾಗಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಗದುದ್ದಕ್ಕೂ ಸಿಸಿಟಿವಿ ಅಳವಡಿಸಲಾಗಿದೆ. ಹಾಗೇ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಇನ್ನು ಕರಗ ಭದ್ರತೆಗೆಗಾಗಿ 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ

ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2: ದ ರಿವೆಂಜ್’ (Dhurandhar 2: The Revenge) ಚಿತ್ರ ಈಗ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಚಿತ್ರದ ಕಥೆಯು ತಾವು 2023ರಲ್ಲಿ ಬರೆದ ಸ್ಕ್ರಿಪ್ಟ್ ಅನ್ನು ಆಧರಿಸಿದೆ ಎಂದು ನಿರ್ದೇಶಕ ಸಂತೋಷ್ ಕುಮಾರ್ ಆರ್.ಎಸ್. ಅವರು ಆರೋಪಿಸಿದ್ದಾರೆ. ಅಲ್ಲದೇ ‘ಧುರಂಧರ್ 2’ (Dhurandhar 2) ಚಿತ್ರತಂಡದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ಕುಮಾರ್ ಈ ಬಗ್ಗೆ ಪೂರ್ತಿ ವಿವರ ನೀಡಿದ್ದಾರೆ. ‘ನೀವೆಲ್ಲರೂ ಧುರಂಧರ್ 2 ಸಿನಿಮಾ ನೋಡಿರಬಹುದು. ಅದು ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ ಆ ಸಿನಿಮಾ ನೋಡಿದ ನಂತರವಷ್ಟೇ ಅದು ನನ್ನ ಕಥೆ ಎಂಬುದು ನನಗೆ ತಿಳಿಯಿತು. ನಾನು 2023ರಲ್ಲಿ ತುಂಬಾ ಕಷ್ಟಪಟ್ಟು ಈ ಸ್ಕ್ರಿಪ್ಟ್ ಬರೆದಿದ್ದೆ. ದೊಡ್ಡ ನಟರನ್ನು ಆಯ್ಕೆ ಮಾಡಬೇಕು ಎಂದರೆ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲ ಬೇಕು ಎಂದು ತಿಳಿಸಿದ್ದರಿಂದ ನಾನು ಹಲವು ದೊಡ್ಡ ಪ್ರೊಡಕ್ಷನ್ ಕಂಪನಿಗಳಿಗೆ ಈ ಕಥೆ ವಿವರಿಸಿದ್ದೆ’ ಎಂದು ಹೇಳಿದ್ದಾರೆ.

ಸಂತೋಷ್ ಕುಮಾರ್ ಪ್ರಕಾರ ಅವರು ಈ ಸ್ಕ್ರಿಪ್ಟ್ ಅನ್ನು ಸೋನಿ ಪಿಕ್ಚರ್ಸ್, ಜೀ ಸ್ಟುಡಿಯೋಸ್, ಟಿ-ಸಿರೀಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳಿಗೆ ಹೋಗಿ ಹೇಳಿದ್ದರು. ಅಷ್ಟೇ ಅಲ್ಲದೇ, ಈ ಚಿತ್ರಕ್ಕೆ ನಟ ಆದಿತ್ಯ ರಾಯ್ ಕಪೂರ್ ಅವರನ್ನು ನಾಯಕನನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲಾ ಪುರಾವೆಗಳು ತಮ್ಮ ಬಳಿ ಇವೆ ಎಂದು ಅವರು ಹೇಳಿದ್ದಾರೆ. ‘ನಾನು ನನ್ನ ಕಥೆಯನ್ನು ನವೆಂಬರ್ 2023ರಲ್ಲಿ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ಇಮೇಲ್ ದಾಖಲೆಗಳು ಮತ್ತು ಇತರ ಪುರಾವೆಗಳು ನನ್ನ ಬಳಿ ಇವೆ. ಕಥೆಯನ್ನು ಕಳ್ಳತನ ಮಾಡಿ ಈಗ ಸಿನಿಮಾ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ತೀವ್ರ ಗತಿಯಲ್ಲಿ ಕುಸಿದ ‘ಧುರಂಧರ್ 2’ ಗಳಿಕೆ; ಆ ದಾಖಲೆ ಮುರಿಯೋದು ಕಷ್ಟ?

ಸಿನಿಮಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿರುವ ಸಂತೋಷ್, ‘ನಾನು ಈ ಕಥೆಯನ್ನು ಸಿನಿಮಾ ಮತ್ತು ಮನರಂಜನೆಗಾಗಿ ಬರೆದಿದ್ದೆ. ಆದರೆ ಅವರು ಇದನ್ನು ರಾಜಕೀಯ ಪ್ರಚಾರದ ವಸ್ತುವನ್ನಾಗಿ ಮಾಡಿದ್ದಾರೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಕಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಅದಕ್ಕಾಗಿಯೇ ನಾನು ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದ ಮೂರು ತಿಂಗಳ ನಂತರ: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ, ಮಾ.31: ಉಪಚುನಾವಣೆ ಹಿನ್ನೆಲೆಯಲ್ಲಿ ಮುಗಳ್ಳೊಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಯವರಿಗೆ ಬಡವರ, ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಬಗ್ಗೆ ಯಾವುದೇ ಕಳಕಳಿ ಅಥವಾ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು. ಬಿಜೆಪಿಯು ಬಡವರ ವಿರೋಧಿಗಳು ಮತ್ತು ಮಹಿಳೆಯರ ವಿರೋಧಿಗಳು ಎಂದು ಸಿಎಂ ಬಣ್ಣಿಸಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ನ ಕೊಡುಗೆಯನ್ನು ಸಿಎಂ ಸಿದ್ದರಾಮಯ್ಯ ನೆನಪಿಸಿದರು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ನಗರಪಾಲಿಕೆಗಳಲ್ಲಿ ಇವತ್ತು 50% ಮೀಸಲಾತಿ ಜಾರಿಯಲ್ಲಿದ್ದರೆ, ಅದಕ್ಕೆ ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಂದ 73ನೇ ಮತ್ತು 74ನೇ ತಿದ್ದುಪಡಿಗಳೇ ಕಾರಣ ಎಂದು ಅವರು ಹೇಳಿದರು. ಬಿಜೆಪಿ ಯವರಿಗೆ ಬಡವರ ಕಷ್ಟ ಸುಖ ಗೊತ್ತಿಲ್ಲ ಎಂದು ಪ್ರತಿಪಾದಿಸಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಕ್ಷದ ಪಾತ್ರದ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳನ್ನು ಎತ್ತಿದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಬಿಜೆಪಿ ಎಂದಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತೇ ಎಂದು ಅವರು ಕೇಳಿದರು. 1925ರಲ್ಲಿ ಆರ್.ಎಸ್.ಎಸ್ ಉದ್ಭವವಾಗಿದ್ದರೂ, ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಭಾಗವಹಿಸಿರಲಿಲ್ಲ ಎಂದು ಅವರು ಆರೋಪಿಸಿದರು. ಬದಲಾಗಿ, ಬಿಜೆಪಿಯವರು ಬ್ರಿಟಿಷರ ಜೊತೆ ಸೇರಿಕೊಂಡಿದ್ದರು. ಬ್ರಿಟಿಷರನ್ನು ಈ ದೇಶದಿಂದ ತೊಲಗಿಸಿದವರು ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್‌ನವರು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ, ನರಸಿಂಹರಾವ್ ಮತ್ತು ಮನ್ಮೋಹನ್ ಸಿಂಗ್ ಅವರ ಕಾಲದಿಂದಲೂ ದೇಶದಲ್ಲಿ ಜಾತಿ ಪದ್ಧತಿ, ಬಡತನ, ನಿರುದ್ಯೋಗ ಮತ್ತು ಅನಕ್ಷರತೆ ನಿವಾರಣೆಗೆ ಸತತವಾಗಿ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ವಿಧಾನದ ಬಗ್ಗೆಯೂ ಸಿಎಂ ಟೀಕಿಸಿದರು. ಬಿಜೆಪಿಯವರು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದದ ಮೂಲಕ ನೇರವಾಗಿ ಅಧಿಕಾರಕ್ಕೆ ಬರಲಿಲ್ಲ ಎಂದು ಅವರು ಹೇಳಿದರು. 2008ರಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ 110 ಸ್ಥಾನಗಳನ್ನು ಮಾತ್ರ ಗೆದ್ದಿದ್ದರು. ನಂತರ ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡರು ಮುಖ್ಯಮಂತ್ರಿಗಳಾದರು. ಈ ಮೂವರೂ ಮುಖ್ಯಮಂತ್ರಿಗಳಾದರೂ ಯಾವುದೇ ಗಣನೀಯ ಕೆಲಸ ಮಾಡಲಿಲ್ಲ ಎಂದು ಸಿಎಂ ಆರೋಪಿಸಿದರು. 2019ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೂ, ನಾಲ್ಕು ವರ್ಷ ಅಧಿಕಾರದಲ್ಲಿದ್ದುಕೊಂಡು ಯಾವುದೇ ಪ್ರಮುಖ ಕೆಲಸ ಮಾಡಲಿಲ್ಲ ಎಂದು ದೂರಿದರು. ನಿರ್ದಿಷ್ಟವಾಗಿ, ಅಪ್ಪರ್ ಕೃಷ್ಣ ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದರು. 2010ರಲ್ಲಿ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಬಂದಿದ್ದರೂ, ಕಳೆದ 13 ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ (ಡಬಲ್ ಇಂಜಿನ್ ಸರಕಾರ) ಈ ಕೆಲಸವನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ರೈತರು ಜಮೀನು ಕಳೆದುಕೊಂಡಿದ್ದರೂ ಅವರಿಗೆ ಪರಿಹಾರವನ್ನೂ ನೀಡಿಲ್ಲ. ತಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ, ಸಚಿವ ಎಸ್.ಆರ್. ನಾಯಕ್, ಎಸ್.ಆರ್. ಪಾಟೀಲ್, ತಿಮ್ಮಾಪುರ, ಶಿವಾನಂದ ಪಾಟೀಲ್ ಅವರೊಂದಿಗೆ ಸೇರಿ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಪರಿಹಾರ ನೀಡಲು ತೀರ್ಮಾನ ಮಾಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂಪಾಯಿ, ಒಣ ಜಮೀನಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದ್ದು, 16 ಮಂದಿಗೆ ಈಗಾಗಲೇ ಚೆಕ್‌ಗಳನ್ನು ನೀಡಲಾಗಿದೆ ಎಂದರು. ಬಿಜೆಪಿ ಯವರು ಇದನ್ನು ಮಾಡಿಲ್ಲ, ಹಾಗಾಗಿ ಅವರಿಗೆ ಮತ ನೀಡಬಾರದು ಎಂದು ಸಿದ್ದರಾಮಯ್ಯ ಜನರಿಗೆ ಕರೆ ನೀಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫ್ಯಾಟಿ ಲಿವರ್ ಯಾವಾಗ ಅಪಾಯಕಾರಿಯಾಗಬಹುದು? ಲಕ್ಷಣಗಳು ಹೇಗಿರುತ್ತವೆ ತಿಳಿದುಕೊಳ್ಳಿ

ಇತ್ತೀಚಿನ ಕೆಲವು ವರ್ಷಗಳಲ್ಲಿ ಲಿವರ್‌ಗೆ ಸಂಬಂಧಿಸಿದ ರೋಗಗಳು ಗಮನಾರ್ಹವಾಗಿ ಹೆಚ್ಚುತ್ತಿವೆ. ಅದರಲ್ಲಿಯೂ ಲಿವರ್ ಸಮಸ್ಯೆಗಳು ಸಾಮಾನ್ಯವಾಗಿ ಫ್ಯಾಟಿ ಲಿವರ್‌ನಿಂದ (Fatty Liver) ಆರಂಭವಾಗುತ್ತವೆ, ಇದರ ಅರ್ಥ, ಲಿವರ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು (ಫ್ಯಾಟ್) ಸಂಗ್ರಹವಾಗಿರುವುದು. ಆರಂಭದಲ್ಲಿ ಇದು ಹೆಚ್ಚಿನ ತೊಂದರೆ ನೀಡದಿದ್ದರೂ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದರ ಲಕ್ಷಣಗಳನ್ನು ಅರಿತುಕೊಂಡು ಅದನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ.

ಫ್ಯಾಟಿ ಲಿವರ್‌ ಪ್ರಕಾರಗಳು

  • ನಾನ್- ಅಲ್ಕೊಹಾಲಿಕ್ ಫ್ಯಾಟಿ ಲಿವರ್
  • ಅಲ್ಕೊಹಾಲಿಕ್ ಫ್ಯಾಟಿ ಲಿವರ್ (ಮದ್ಯಪಾನದ ಪರಿಣಾಮ)

ಹಿಂದೆ ಹೆಚ್ಚು ಮದ್ಯಪಾನ ಮಾಡುವವರಲ್ಲಿ ಈ ಸಮಸ್ಯೆ ಕಂಡುಬರುತ್ತಿತ್ತು. ಆದರೆ ಈಗ ಮದ್ಯಪಾನ ಮಾಡದವರಲ್ಲೂ ಫ್ಯಾಟಿ ಲಿವರ್ ಕಾಣಿಸಿಕೊಳ್ಳುತ್ತಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಸ್ಥೂಲತೆ, ಹಾಗೂ ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಅಷ್ಟೇಅಲ್ಲ ಫಾಸ್ಟ್ ಫುಡ್ ಸೇವನೆ ಮತ್ತು ಶಾರೀರಿಕ ಚಟುವಟಿಕೆಯ ಕೊರತೆಯಿಂದ ಮಕ್ಕಳಲ್ಲೂ ಈ ಸಮಸ್ಯೆ ಹೆಚ್ಚುತ್ತಿದೆ.

ಫ್ಯಾಟಿ ಲಿವರ್ ಯಾವಾಗ ಅಪಾಯಕಾರಿಯಾಗಬಹುದು?

ಸಾಮಾನ್ಯವಾಗಿ ಫ್ಯಾಟಿ ಲಿವರ್ ಅಪಾಯಕಾರಿಯಾಗುವುದು ಲಿವರ್‌ನಲ್ಲಿ ಕೇವಲ ಕೊಬ್ಬು ಸಂಗ್ರಹವಾಗುವುದರಿಂದ ಮಾತ್ರವಲ್ಲ, ಅದರ ಜೊತೆಗೆ ಉರಿಯೂತ (ಇನ್ಫ್ಲಮೇಶನ್) ಉಂಟಾದಾಗ. ಈ ಸ್ಥಿತಿ ನಿಯಂತ್ರಣದಲ್ಲಿರದಿದ್ದರೆ ಲಿವರ್‌ಗೆ ಗಂಭೀರವಾಗಿ ಹಾನಿ ಉಂಟಾಗಬಹುದು. ಇದು ಫ್ಯಾಟಿ ಲಿವರ್‌ನ ಆರಂಭಿಕ ಹಂತದಲ್ಲಿ ಅಥವಾ ಮುಂದಿನ ಹಂತಗಳಲ್ಲಿ ಉಂಟಾಗಬಹುದು. ಹೈ ಬಿಪಿ ಅಥವಾ ಡಯಾಬಿಟಿಸ್ ಇರುವವರಲ್ಲಿ ಇದು ಇನ್ನಷ್ಟು ಅಪಾಯಕಾರಿಯಾಗಬಹುದು. ಇಂತಹ ಸಂದರ್ಭಗಳಲ್ಲಿ ಲಕ್ಷಣಗಳು ಬಹುಬೇಗ ಹೆಚ್ಚಾಗಬಹುದು ಮತ್ತು ಲಿವರ್‌ಗೆ ದೊಡ್ಡ ಮಟ್ಟದ ಹಾನಿ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!

ಲಕ್ಷಣಗಳು ಹೇಗಿರುತ್ತವೆ?

  • ನಿರಂತರ ದಣಿವು
  • ದೌರ್ಬಲ್ಯ
  • ಹೊಟ್ಟೆಯ ಮೇಲ್ಭಾಗದ ಬಲಬದಿಯಲ್ಲಿ ನೋವು
  • ಹಸಿವು ಕಡಿಮೆಯಾಗುವುದು
  • ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು
  • ದೇಹದಲ್ಲಿ ಅಸ್ವಸ್ಥತೆ

ತಡೆಗಟ್ಟುವುದು ಹೇಗೆ?

  • ಮೈದಾ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ
  • ಪ್ರತಿದಿನ ವ್ಯಾಯಾಮ ಮಾಡಿ
  • ಹೊಟ್ಟೆ ನೋವನ್ನು ನಿರ್ಲಕ್ಷ್ಯ ಮಾಡಬೇಡಿ
  • ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಫ್ಯಾಟಿ ಲಿವರ್ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಸರಿಯಾದ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಮುಖ್ಯ. ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆಹಾರ ಪದ್ಧತಿಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್ ಟ್ರಬಲ್: ನಾಡಿನಿಂದ ಕಾಡಿಗೆ, ಅರಣ್ಯದಲ್ಲಿ ಸೌದೆಗಾಗಿ ಮುಗಿಬಿದ್ದ ಜನ

ಕಾರವಾರ, (ಮಾರ್ಚ್ 31): ಗಲ್ಫ್​ ರಾಷ್ಟ್ರಗಳ ಕಾಳಗ ಕೊನೆ ಆಗುತ್ತಿಲ್ಲ. ಜನರ ಪರದಾಟ ಅಂತ್ಯವಾಗುತ್ತಿಲ್ಲ. ಗ್ಯಾಸ್​​ ಅಭಾವದಿಂದ ಹತ್ತಾರು ಸಮಸ್ಯೆ ಉದ್ಭವ ಆಗಿವೆ. ಗ್ಯಾಸ್ ಸಿಲಿಂಡರ್ (lpg Gas cylinder) ಸಿಗದಿದ್ದಕ್ಕೆ ಹಳ್ಳಿ ಕಡೆ ಜನರು ಸೌದೆ ಒಲೆ ಮೊರೆ ಹೋಗಿದ್ದು, ಸೌದೆಗಾಗಿ (Wood) ಅರಣ್ಣದಲ್ಲಿ ಮುಗಿಬಿದ್ದಿದ್ದಾರೆ. ಹೌದು…ಉತ್ತರ ಕನ್ನಡ (Uttara Kananda) ಜಿಲ್ಲೆಯ ಮುಂಡಗೋಡಿನ ಕೆಎಫ್​ಡಿಸಿ ಅರಣ್ಯ ಪ್ರದೇಶದಲ್ಲಿ ಜನರು ಸೌದೆಗಾಗಿ ಮುಗಿದ್ದಿದ್ದಾರೆ.

ಪ್ರತಿ ವರ್ಷ ಅಕೇಶಿಯಾ ಮರಗಳ ಕಟಾವಿನ ಬಳಿಕ ಅರಣ್ಯ ಇಲಾಖೆ, ಸಣ್ಣಪುಟ್ಟ ಕಟ್ಟಿಗೆಗೆ ಬೆಂಕಿ ಹಾಕುತ್ತಿತ್ತು.ಆದ್ರೆ ಇದೀಗ ಗ್ಯಾಸ್ ಸಿಗದಿದ್ದಕ್ಕೆ ಸೌದೆಯನ್ನ ಕೊಂಡೊಯ್ಯಲು ಜನರಿಗೆ ಅನುಮತಿ ಕೊಟ್ಟಿದೆ. ಹೀಗಾಗಿ, ಜನರು ವಾಹನದ ಜತೆ ಅರಣ್ಯಕ್ಕೆ ಬಂದು ಕಟ್ಟಿಗೆ ತುಂಬಿಕೊಂಡು ಹೋಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!

ರಾಯಚೂರು, ಮಾ.31: ಮಂತ್ರಾಲಯಕ್ಕೆ ಭೇಟಿ ನೀಡುವ ಕನ್ನಡಿಗರಿಗಾಗಿ ನಿರ್ಮಿಸಲಾದ ‘ಕರ್ನಾಟಕ ಅತಿಥಿ ಗೃಹ’ವು ಈಗ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಅತಿಥಿ ಗೃಹದ ದುರವಸ್ಥೆಯನ್ನು ಕಂಡು ಆಘಾತಕ್ಕೊಳಗಾದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಸೂಚನೆಯಂತೆ, ರಾಯಚೂರು ಲೋಕಾಯುಕ್ತ ಡಿವೈಎಸ್‌ಪಿ ರವಿ ಪುರುಷೋತ್ತಮ್ ಅವರು ನೀಡಿದ ವರದಿಯ ಆಧಾರದ ಮೇಲೆ ಇದೀಗ ಸ್ವಯಂಪ್ರೇರಿತ ದೂರು ದಾಖಲಾಗಿದೆ.

2022ರ ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಂಡ ಈ ಸುಸಜ್ಜಿತ ಅತಿಥಿ ಗೃಹವು ಕೇವಲ ಮೂರೇ ವರ್ಷಗಳಲ್ಲಿ ಪಾಳುಬಿದ್ದಂತಾಗಿದೆ. ಲೋಕಾಯುಕ್ತರ ತನಿಖಾ ವರದಿಯಲ್ಲಿ ಈ ಕೆಳಗಿನ ಗಂಭೀರ ಲೋಪಗಳು ಪತ್ತೆಯಾಗಿವೆ. 50 ಶೌಚಾಲಯಗಳ ಸ್ವಚ್ಛತೆಗೆ ಇರುವುದು ಕೇವಲ ಇಬ್ಬರು ಸಿಬ್ಬಂದಿ. ಫ್ಲಷ್ ವ್ಯವಸ್ಥೆಯೇ ಇಲ್ಲದೆ ಶೌಚಾಲಯಗಳು ನಾರುತ್ತಿವೆ.

ನೀರಿಗಾಗಿ ಇಟ್ಟಿದ್ದ 8 ಸಿಂಟೆಕ್ಸ್ ಪೈಕಿ 5 ಒಡೆದು ಹೋಗಿವೆ. ಡ್ರೈನೇಜ್ ಪೈಪ್‌ಗಳು ಒಡೆದು ಯಾತ್ರಾರ್ಥಿಗಳು ದುರ್ವಾಸನೆಯಲ್ಲಿ ಕಾಲ ಕಳೆಯುವಂತಾಗಿದೆ. ಗೀಸರ್ ವೈರಿಂಗ್ ಲೋಪದಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತಿದ್ದು, ನಲ್ಲಿ ನೀರಿನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಇದು ಜೀವಹಾನಿಗೆ ಆಹ್ವಾನ ನೀಡುವಂತಿದೆ.

ಇನ್ನು ಸ್ನಾನಕ್ಕೆ ಒಂದು ಬಕೆಟ್ ಬಿಸಿನೀರಿಗೆ 30 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಹಾಸಿಗೆಗಳಲ್ಲಿ ತಿಗಣೆ ಮತ್ತು ಸೊಳ್ಳೆಗಳ ಕಾಟವಿದ್ದು, ಬೆಡ್ ಶೀಟ್‌ಗಳನ್ನು ದಿನನಿತ್ಯ ಸ್ವಚ್ಛಗೊಳಿಸುತ್ತಿಲ್ಲ. 10 ಎಸಿ ರೂಮ್‌ಗಳಲ್ಲಿ 6 ಎಸಿಗಳು ಕೆಟ್ಟುಹೋಗಿದ್ದರೂ ಯಾತ್ರಾರ್ಥಿಗಳಿಂದ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಸಿದ ಮಾಜಿ ಎಂ.ಡಿಗೆ ಶಾಕ್: ವಿ. ಮುನಿಯಪ್ಪಗೆ 3 ವರ್ಷ ಜೈಲು, 4.5 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್!

ಈ ಭ್ರಷ್ಟಾಚಾರ ಮತ್ತು ದುರಾಡಳಿತದ ಹಿನ್ನೆಲೆಯಲ್ಲಿ ಅತಿಥಿ ಗೃಹದ ಪತ್ರಾಂಕಿತ ವ್ಯವಸ್ಥಾಪಕ ಆಂಜನೇಯಲು ಮತ್ತು ಸಹಾಯಕ ನರಸನಗೌಡ ವಿರುದ್ಧ ಪ್ರಕರಣ ದಾಖಲಿಸಲು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಆದೇಶಿಸಿದ್ದಾರೆ. ಅಲ್ಲದೆ, ಈ ಆದೇಶದ ಪ್ರತಿಯನ್ನು ಮುಜರಾಯಿ ಸಚಿವರಿಗೂ ಕಳುಹಿಸಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link