All posts by nagaraj11081993

ಮಾವಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ಮಾವಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ಬೇಸಿಗೆ ಸಮಯದಲ್ಲಿ ಯಥೇಚ್ಛವಾಗಿ ಲಭ್ಯವಿರುವಂತಹ ಮಾವಿನ ಹಣ್ಣನ್ನು ಬಹುತೇಕ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಣ್ಣುಗಳ ರಾಜ  (mango) ತಿನ್ನಲಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ.  ಅದೇ ರೀತಿ ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುವಂತಹ ಮಾವಿನ ಕಾಯಿ ಕೂಡ ಆರೋಗ್ಯಕ್ಕೆ ಹಿತಕರ ಎಂಬುದು ನಿಮಗೆ ತಿಳಿದಿದೆಯಾ? ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ನಾರು, ತಾಮ್ರ, ಪೊಟ್ಯಾಸಿಯಮ್ ಮತ್ತು ಸೋಡಿಯಂನಂತಹ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಸಿ ಮಾವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆಯಂತೆ. ಹಾಗಿದ್ರೆ ಮಾವಿನಕಾಯಿಯ ಹಿತಮಿತ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ.

ಮಾವಿನಕಾಯಿ ಸೇವನೆಯಿಂದ ಲಭಿಸುವ ಪ್ರಯೋಜನಗಳೇನು?

ದೃಷ್ಟಿ ಸುಧಾರಿಸುತ್ತದೆ: ವಿಟಮಿನ್ ಎ ಯಿಂದ ಸಮೃದ್ಧವಾಗಿರುವ ಹಸಿ ಮಾವು ದೃಷ್ಟಿ ಸುಧಾರಿಸಲು ಮತ್ತು ಕಣ್ಣುಗಳ ಆರೋಗ್ಯಕ್ಕೆ  ತುಂಬಾನೇ ಪ್ರಯೋಜನಕಾರಿ. ಅಲ್ಲದೆ ಮಾವಿನಕಾಯಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿದ್ದು, ಇದು ಮೂಳೆಗಳ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ.

ಶಾಖದ ಹೊಡೆತದಿಂದ ರಕ್ಷಣೆ: ಬೇಸಿಗೆಯಲ್ಲಿ ಬಿಸಿಲಿನ ಹೊಡೆತ ಮತ್ತು ಶಾಖದ ಹೊಡೆತಕ್ಕೆ ಹಸಿ ಮಾವು ಅತ್ಯುತ್ತಮ ಪರಿಹಾರವಾಗಿದೆ. ಹಸಿ ಮಾವಿನಕಾಯಿಯ ಪಾನೀಯವನ್ನು ಕುಡಿಯುವುದರಿಂದ ಶಾಖದ ಹೊಡೆತದಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು.  ಇದಲ್ಲದೆ ಈ ಸಮಯದಲ್ಲಿ ಚಟ್ನಿ, ಆಮ್‌ ಪನ್ನಾ ರೂಪದಲ್ಲಿಯೂ ಮಾವಿನಕಾಯಿ ಸೇವನೆ ಮಾಡಬಹುದು. ಮಾವಿನಕಾಯಿಯ ಸೇವನೆಯು ದೇಹವನ್ನು ತಂಪಾಗಿಸುತ್ತದೆ ಮತ್ತು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ.

ಆಮ್ಲೀಯತೆಯನ್ನು ನಿವಾರಿಸುತ್ತದೆ:  ಮಾವಿನಕಾಯಿ ಆಮ್ಲೀಯತೆಯನ್ನು ನಿವಾರಿಸಲು ತುಂಬಾನೇ ಸಹಕಾರಿ. ಆಮ್ಲೀಯತೆಯನ್ನು ನಿವಾರಿಸಲು, ಕಪ್ಪು ಉಪ್ಪಿನೊಂದಿಗೆ ಹಸಿ ಮಾವಿನಹಣ್ಣನ್ನು ಸೇವಿಸಿ.. ಇದಲ್ಲದೆ, ಇದು ತೂಕ ನಷ್ಟಕ್ಕೂ ಪ್ರಯೋಜನಕಾರಿಯಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಹಸಿ ಮಾವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಅದನ್ನು ಬಲಪಡಿಸುವ ಅನೇಕ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ, ಬೇಸಿಗೆಯಲ್ಲಿ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು, ಮಾವಿನಕಾಯಿಯನ್ನು ಮಿತ ಪ್ರಮಾಣದಲ್ಲಿ ಸೇವಿಸಿ.

ಜೀರ್ಣಕ್ರಿಯೆಗೆ ಸಹಕಾರಿ: ಹಸಿ ಮಾವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಮತ್ತು ಪೆಕ್ಟಿನ್ ಇದ್ದು, ಇದು ಮಲಬದ್ಧತೆ, ಗ್ಯಾಸ್ ಮತ್ತು ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸುಡು ಬೇಸಿಗೆಯಲ್ಲಿ ಅನಾನಸ್‌ ಜ್ಯೂಸ್‌ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಯಕೃತ್ತನ್ನು ನಿರ್ವಿಷಗೊಳಿಸುತ್ತದೆ: ಹಸಿ ಮಾವು ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ಇದು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ ಮತ್ತು ಪಿತ್ತರಸ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಯಕೃತ್ತಿನ ಕಾರ್ಯವನ್ನು ಉತ್ತಮಗೊಳಿಸುತ್ತದೆ.

ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ: ಹಸಿ ಮಾವಿನಲ್ಲಿರುವ ಉತ್ಕರ್ಷಣ ನಿರೋಧಕ ಜೀವಸತ್ವಗಳು ಚರ್ಮ ಮತ್ತು ಕೂದಲನ್ನು ಬಲಪಡಿಸುತ್ತವೆ ಮತ್ತು ಹೊಳಪು ನೀಡುತ್ತವೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ, ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನ್ನ ಹಾಕಿದ ಅಜ್ಜಿ ಇನ್ನಿಲ್ಲ:ಮುಖದ ಮೇಲೆ ಮುಖ ಇಟ್ಟು ದುಃಖಿಸಿದ ಮೂಕಪ್ರಾಣಿ

ರಾಮನಗರ, (ಮಾರ್ಚ್ 31): ವೃದ್ಧೆ ಸಾವಿಗೆ ಕೋತಿಯೊಂದು ಮರುಗಿ, ಮೃತದೇಹದ ಮೇಲೆ ಮಲಗಿ ರೋಧನೆ ವ್ಯಕ್ತಪಡಿಸಿರುವ ವಿಚಿತ್ರ ಘಟನೆ ಜಿಲ್ಲೆಯ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯ ಚನ್ನಪಟ್ಟಣ (Channapatna) ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ 80 ವರ್ಷದ ಪಾರ್ವತಮ್ಮ ಮೃತದೇಹದ ಹತ್ತಿರ ಕಪಿರಾಯ ಕುಳಿತುಕೊಂಡು ಮನುಷ್ಯರ ರೀತಿ ಮುಖಕ್ಕೆ ಮುಖ ಕೊಡುತ್ತ ಕಣ್ಣೀರು ಹಾಕಿದ್ದಾನೆ. ಈ ದೃಶ್ಯ ನೋಡುಗರ ಕಣ್ಣಲ್ಲಿ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿತು.

ನಿತ್ಯ ಮನೆ ಬಳಿ ಬರುತ್ತಿದ್ದ ಕೋತಿಯನ್ನ ತಿಂಡಿ ಕೊಟ್ಟು ವೃದ್ಧೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ಇಂದು (ಮಾರ್ಚ್ 31) ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಇದರಿಂದ ಕೋತಿ ವೃದ್ಧೆ ಸಾವಿಗೆ ಮೂಕರೋಧನೆ ವ್ಯಕ್ತಪಡಿಸಿದೆ. ಇದನ್ನು ಕಂಡ ಜನ ನಿಬ್ಬೆರಗಾಗಿದ್ದಾರೆ. ಇನ್ನು  ಪ್ರಾಣಿಗಳಿಗೂ ಮನುಷ್ಯರ ಪ್ರೀತಿ ಅರ್ಥವಾಗುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ ‘ಪುನೀತ್ ನಿವಾಸ’ ಸಿನಿಮಾ

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿಗಳ ಮನದಲ್ಲಿ ಅವರು ಶಾಶ್ವತವಾಗಿ ಇರುತ್ತಾರೆ. ಒಂದಲ್ಲಾ ಒಂದು ರೂಪದಲ್ಲಿ ಅವರನ್ನು ಸ್ಮರಿಸುವ ಕೆಲಸ ಆಗುತ್ತಿದೆ. ಅದಕ್ಕೆ ‘ಪುನೀತ್ ನಿವಾಸ’ (Puneeth Nivasa) ಸಿನಿಮಾವೇ ಹೊಸ ಉದಾಹರಣೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಶೀರ್ಷಿಕೆಯ ಮೂಲಕ ಈ ಸಿನಿಮಾ ಕೌತುಕ ಮೂಡಿಸಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಹಿರಿಯ ನಟ ಅಭಿಜಿತ್ (Abhijith) ಅವರು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಏಪ್ರಿಲ್ 24ರಂದು ಡಾ. ರಾಜ್​ಕುಮಾರ್ ಅವರ ಜನ್ಮದಿನ. ಆ ಪ್ರಯುಕ್ತ ‘ಪುನೀತ್ ನಿವಾಸ’ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂಬುದು ವಿಶೇಷ. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಎಂ.ಎನ್. ಕೃಪಾಕರ್ ಅವರ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಸ್. ಬಾಲು ಅವರ ಛಾಯಾಗ್ರಹಣ ಈ ಸಿನಿಮಾಗಿದೆ.

ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ಮಾತ್ರವಲ್ಲದೇ ಹಿರಿಯ ನಟ ಶಂಕರ್ ಭಟ್, ಗಂಡಸಿ ಸದಾನಂದಸ್ವಾಮಿ, ಕರಿಸುಬ್ಬು ಶ್ರೇಯಸ್, ಐಶ್ವರ್ಯಾ, ಡಿಂಗ್ರಿ ನಾಗರಾಜ್, ಎಂ.ಎಸ್. ಉಮೇಶ್, ಟೆನ್ನಿಸ್ ಕೃಷ್ಣ, ರೇಖಾದಾಸ್, ಗಣೇಶ್‌ರಾವ್ ಕೇಸರಕರ್ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

‘ಪುನೀತ್ ನಿವಾಸ’ ಸಿನಿಮಾದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಕಥೆಯೇ ಇದೆ. ನಾಗೇಂದ್ರ ಪ್ರಸಾದ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ‘ಶ್ರೀಪಂಚಮಿ ಸಿನಿ ಕ್ರಿಯೇಷನ್ಸ್’ ಮೂಲಕ ಪುನೀತ್ ಅಭಿಮಾನಿ ಎಸ್. ಮೋಹನ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಥೆಯ ಬಗ್ಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ ಅಶ್ವಿನಿ

‘ಪುನೀತ್ ಅವರ ಅಪ್ಪಟ ಅಭಿಮಾನಿ ಮಲ್ಲು ಅನಾಥ ಹುಡುಗ. ಕಟ್ಟಡ ಕೂಲಿ ಕೆಲಸ ಮಾಡಿಕೊಂಡಿರುವ ಆತ ತನ್ನ ಮಾಲೀಕನ ಮನೆ ಮಾರಾಟ ಮಾಡಿಸಿಕೊಡುತ್ತಾನೆ. ಆಗ ಮಾಲೀಕ ನೀಡಿದ 5 ಲಕ್ಷ ರೂಪಾಯಿ ಕಮಿಷನ್ ಹಣದಲ್ಲಿ ಕನಸಿನ ಪುನೀತ್ ನಿವಾಸವನ್ನು ನಿರ್ಮಿಸುತ್ತಾನೆ. ನಂತರ ಆ ಪುನೀತ್‌ ನಿವಾಸದ ಒಳಗೆ ಬಂದಾಗ ಅಲ್ಲಿ ಆತನಿಗೆ ಪುನೀತ್ ಅವರೇ ಕಾಣಿಸ್ತಾರೆ. ಹೇಗೆ ಕಾಣಿಸುತ್ತಾರೆ ಎಂಬುದೇ ಚಿತ್ರದ ಕುತೂಹಲ’ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕದ ಭೂದಾಳಿ ಸಾಧ್ಯತೆ; ಇರಾನ್​ಗೆ ಬೆಂಬಲವಾಗಿ ನಿಲ್ಲಲು ಸಿದ್ಧವಾಗಿದ್ದಾರಾ ರಷ್ಯನ್ ಬೆಂಬಲಿತ ಚೆಚೆನ್ ಹೋರಾಟಗಾರರು

ಮಾಸ್ಕೋ, ಮಾರ್ಚ್ 31: ಇರಾನ್ ಮೇಲೆ ಅಮೆರಿಕ ಭೂದಾಳಿಗೆ ಅಣಿಗೊಳ್ಳುತ್ತಿರುವ ಶಂಕೆ ಇದೆ. ಕೆಲ ದಿನಗಳಿಂದ ಅಮೆರಿಕವು ಇರಾನ್ ಸುತ್ತಲೂ ತನ್ನ ಸೈನಿಕರನ್ನು ಸಜ್ಜುಗೊಳಿಸುತ್ತಿದೆ. ಯಾವುದೇ ಕ್ಷಣದಲ್ಲೂ ಅದು ಗ್ರೌಂಡ್ ಇನ್ವೇಶನ್ ಅಥವಾ ಭೂ ದಾಳಿ (Ground Invasion) ಆರಂಭಿಸಬಹುದು ಎನ್ನುವ ವದಂತಿಗಳಿವೆ. ಇರಾನ್ ಕೂಡ ತಾನು ಈ ದಾಳಿ ಎದುರಿಸಲು ಸಿದ್ಧ ಇರುವುದಾಗಿ ಹೇಳುತ್ತಿದೆ. ಇದೇ ವೇಳೆ, ಇರಾನ್ ಮೇಲೆ ಅಮೆರಿಕವೇನಾದರೂ ಭೂದಾಳಿಗೆ ಇಳಿದರೆ ರಷ್ಯಾ ತನ್ನ ಚೆಚೆನ್ ಹೋರಾಟಗಾರರನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಇದು ಇರಾನ್​ನ ಪ್ರೆಸ್ ಟಿವಿ ವಾಹಿನಿಯ ವರದಿಯಲ್ಲಿ ತಿಳಿಸಲಾಗಿರುವ ಸುದ್ದಿ.

ಈ ವರದಿ ಪ್ರಕಾರ, ಅಮೆರಿಕದ ತುಕಡಿಗಳು ಇರಾನ್ ನೆಲದ ಮೇಲೆ ಕಾಲಿಟ್ಟರೆ ತಾವು ಅಖಾಡಕ್ಕೆ ಇಳಿಯಲು ಸಿದ್ಧ ಇರುವುದಾಗಿ ಚೆಚನ್ಯಾದ ಮಿಲಿಟರಿ ಘಟಕಗಳು ಹೇಳಿವೆ ಎಂದು ಹೇಳಲಾಗುತ್ತಿದೆ. ಇದೇನಾದರೂ ನಿಜವೇ ಆದಲ್ಲಿ ಇರಾನ್ ಯುದ್ಧವು ಹೆಚ್ಚು ವ್ಯಾಪಕತೆ ಪಡೆಯುವ ಅಪಾಯ ಇದ್ದು, ಜಾಗತಿಕ ಆರ್ಥಿಕತೆಗೆ ಧಕ್ಕೆಯಾಗುವುದು ಹೆಚ್ಚಾಗುತ್ತದೆ.

ಇದನ್ನೂ ಓದಿ: ಅಮೆರಿಕದಿಂದ ತೈಲ ಪಡೆಯಿರಿ, ಇಲ್ಲವೇ ಹಾರ್ಮುಜ್​ಗೆ ಹೋಗಿ ಪಡೆದುಕೊಳ್ಳಿ: ಬ್ರಿಟನ್ ಮತ್ತಿತರ ರಾಷ್ಟ್ರಗಳನ್ನು ಚುಚ್ಚಿದ ಟ್ರಂಪ್

ಯಾರು ಈ ಚೆಚನ್ಯಾ ಹೋರಾಟಗಾರರು?

ಚೆಚನ್ಯಾ ರಿಪಬ್ಲಿಕ್ ಎನ್ನುವುದು ರಷ್ಯಾದ ಭಾಗವಾಗಿರುವ ಒಂದು ಪ್ರಾಂತ್ಯ. ಇದರ ಮುಖ್ಯಸ್ಥ ರಮಜಾನ್ ಕಡಿರೋವ್. ಈತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಆಪ್ತ. ಕಡಿರೋವ್ ಅವರ ಬಳಿ ಪ್ರಬಲ ಮಿಲಿಟರಿ ಪಡೆಯೇ ಇದೆ. ಈ ಪಡೆಯು ರಷ್ಯಾಗಿಂತ ಹೆಚ್ಚಾಗಿ ಕಡಿರೋವ್​ಗೆ ನಿಷ್ಠವಾಗಿದೆ.

ಈ ಪಡೆಯ ಹಿಂದಿನ ಕಥೆಯೂ ರೋಚಕವೇ ಇದೆ. 80, 90ರ ದಶಕದಲ್ಲಿ ಸೋವಿಯತ್ ಯೂನಿಯನ್ ಒಡೆದಾಗ ಉಕ್ರೇನ್, ಪೋಲ್ಯಾಂಡ್ ಇತ್ಯಾದಿ ಹಲವು ದೇಶಗಳು ಸ್ವತಂತ್ರ ದೇಶಗಳಾಗಿ ಬೇರ್ಪಟ್ಟವು. ಚೆಚನ್ಯಾ ಕೂಡ ಬೇರೆಯಾಗಲು ಯತ್ನಿಸಿತು. ರಷ್ಯಾ ಮತ್ತು ಚೆಚನ್ಯಾ ಮಧ್ಯೆ ಎರಡು ಯುದ್ಧಗಳೇ ನಡೆದವು. ಎರಡನೇ ಯುದ್ಧದ ನಂತರ ರಷ್ಯಾ ಚೆಚನ್ಯಾದ ಪ್ರತ್ಯೇಕತಾವಾದಿಗಳ ಹುಟ್ಟಡಗಿಸಿತು. ರಷ್ಯಾ ಪರ ಇದ್ದ ಕಡಿರೋವ್ ಕುಟುಂಬವನ್ನು ಚೆಚನ್ಯಾದ ಆಡಳಿತಕ್ಕೆ ಕೂರಿಸಿತು.

ಇದನ್ನೂ ಓದಿ: ತಾಹಿರ್ ಅನ್ವರ್ ಯಾರು? ಪಾಕಿಸ್ತಾನದಲ್ಲಿ ಮಸೂದ್ ಅಜರ್ ಸಹೋದರ ಅನುಮಾನಾಸ್ಪದವಾಗಿ ಸಾವು

ರಮಜಾನ್ ಕಡಿರೋವ್ ಅವರು ಬಹಳ ಗಟ್ಟಿಯಾದ ಮಿಲಿಟರಿ ಪಡೆಯನ್ನೇ ಕಟ್ಟಿಕೊಂಡಿದ್ದಾರೆ. ಈ ಪಡೆಗಳು ಕಡಿರೋವ್ ಅವರಿಗೆ ಪೂರ್ಣ ನಿಷ್ಠೆ ಹೊಂದಿವೆ. ಈ ಹೋರಾಟಗಾರರ ಬಳಿ ಭಾರೀ ಶಸ್ತ್ರಾಸ್ತ್ರಗಳಿವೆ. ಕಡಿರೋವ್ ಮೂಲಕ ರಷ್ಯಾದ ನಾಯಕತ್ವವು ಈ ಚೆಚನ್ಯಾ ಹೋರಾಟಗಾರರನ್ನು ಅಗತ್ಯವಿದ್ದೆಡೆ ಬಳಕೆ ಮಾಡುತ್ತದೆ. ಈಗ ಪುಟಿನ್ ಮನವಿ ಮೇರೆಗೆ ಕಡಿರೋವ್ ಅವರು ತಮ್ಮ ಪ್ರಬಲ ಮಿಲಿಟರಿ ಪಡೆಗಳನ್ನು ಇರಾನ್​ನಲ್ಲಿ ನಿಯೋಜಿಸಬಹುದು. ಇದರಿಂದ ರಷ್ಯಾ ನೇರವಾಗಿ ಯುದ್ಧಕ್ಕೆ ಧುಮುಕಿದಂತಾಗದೇ ಇದ್ದರೂ ಪರೋಕ್ಷವಾಗಿ ಇರಾನ್​ಗೆ ನೆರವು ಕೊಟ್ಟಂತಾಗುತ್ತದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕುತ್ತಿಗೆಯ ಭಾಗದಲ್ಲಿ ಕಪ್ಪಾಗುವುದಕ್ಕೆ ಕಾರಣವೇನು? ಇದು ಯಾವ ಕಾಯಿಲೆಯ ಮುನ್ಸೂಚನೆ?

ನೀವು ಗಮನಿಸಿರಬಹುದು ಬಹಳಷ್ಟು ಜನರಿಗೆ ಗಲ್ಲ ಮತ್ತು ಕುತ್ತಿಗೆ ಭಾಗದಲ್ಲಿ ಕಪ್ಪಾಗುತ್ತದೆ (Dark Neck). ಆರಂಭದಲ್ಲಿ ಇದು ಅಷ್ಟು ಗಾಢವಾಗಿ ಕಂಡುಬರದಿರಬಹುದು ಆದರೆ ಮುಂದೆ ಅದು ಕಪ್ಪಾಗಿರುವುದು ಎಲ್ಲರಿಗೂ ಕಂಡುಬರಬಹುದು. ಇದನ್ನು ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ಆಗುವಂತದ್ದು ಅಥವಾ ಕೊಳೆ ಇದ್ದ ಪರಿಣಾಮ ಈ ರೀತಿ ಆಗುತ್ತಿರಬಹುದು ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಈ ರೀತಿ ಸಮಸ್ಯೆಯಾದಾಗ ಅದನ್ನು ಅಸಡ್ಡೆ ಮಾಡಬಾರದು. ಏಕೆಂದರೆ ಇದು ಕೆಲವೊಮ್ಮೆ ಚರ್ಮದ ಸಮಸ್ಯೆ ಅಥವಾ ದೇಹದ ಒಳಗಿನ ಕಾಯಿಲೆಯ ಸೂಚನೆಯಾಗಿರಬಹುದು. ಈ ಸಮಸ್ಯೆಯೊಂದಿಗೆ ಕೆಲವು ಸಾಮಾನ್ಯ ಲಕ್ಷಣಗಳು ಕೂಡ ಕಾಣಿಸಬಹುದು. ಉದಾಹರಣೆಗೆ, ಚರ್ಮ ದಪ್ಪವಾಗುವುದು, ಒರಟಾಗುವುದು, ಸ್ವಲ್ಪ ತುರಿಕೆ ಉಂಟಾಗುವುದು. ಕೆಲವು ಸಂದರ್ಭಗಳಲ್ಲಿ ಚರ್ಮದಲ್ಲಿ ಉರಿ, ಹೆಚ್ಚು ಬೆವರುವುದು ಕೂಡ ಕಂಡುಬರುತ್ತದೆ. ಅಷ್ಟು ಮಾತ್ರವಲ್ಲ, ಚರ್ಮವನ್ನು ಸ್ವಚ್ಛಗೊಳಿಸಿದ ನಂತರವೂ ಈ ರೀತಿ ಕಪ್ಪು ಬಣ್ಣ ಕಂಡುಬಂದಾಗ ಅದನ್ನು ನಿರ್ಲಕ್ಷ್ಯ ಮಾಡಬೇಡಿ, ಅದರ ಬದಲು ಈ ರೀತಿಯಾಗುವುದಕ್ಕೆ ಕಾರಣವೇನು, ಹೇಗೆ ತಡೆಗಟ್ಟಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಕುತ್ತಿಗೆ ಅಥವಾ ಗಲ್ಲದ ಕೆಳಭಾಗದಲ್ಲಿ ಕಪ್ಪಾಗುವುದಕ್ಕೆ ಕಾರಣವೇನು?

ತಜ್ಞರ ಪ್ರಕಾರ, ಕುತ್ತಿಗೆ ಮತ್ತು ಗಲ್ಲದ ಕೆಳ ಭಾಗದಲ್ಲಿ ಕಪ್ಪಾಗುವುದು ಯಾವಾಗಲೂ ಚರ್ಮ ಸಂಬಂಧಿ ಕಾಯಿಲೆಯ ಲಕ್ಷಣವಲ್ಲ. ಆದರೆ ಕೆಲವೊಮ್ಮೆ ಇದು ದೇಹದ ಒಳಗಿನ ಬದಲಾವಣೆಗಳ ಸೂಚನೆಯಾಗಿರಬಹುದು. ಇದು ಪಿಗ್ಮೆಂಟೇಶನ್ ಅಥವಾ ಇತರ ಚರ್ಮದ ಸಮಸ್ಯೆಗಳ ಕಾರಣವಾಗಿರಬಹುದು, ಜೊತೆಗೆ ಹಾರ್ಮೋನ್ ಬದಲಾವಣೆಗಳು, ಮೆಟಾಬಾಲಿಸಂ ಸಮಸ್ಯೆ ಅಥವಾ ಜೀವನಶೈಲಿಯೂ ಇದಕ್ಕೆ ಕಾರಣವಾಗಬಹುದು. ಈ ರೀತಿ ಕಪ್ಪಾಗುವಿಕೆ ಒಮ್ಮೆಲೇ ಹೆಚ್ಚಾದರೆ ಅಥವಾ ಜೊತೆಗೆ ತೂಕ ಹೆಚ್ಚಳ, ದೌರ್ಬಲ್ಯ ಮುಂತಾದ ಲಕ್ಷಣಗಳು ಕಂಡುಬಂದರೆ, ದೇಹದ ಒಳಗಿನ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಿದೆ ಎಂಬುದರ ಸೂಚನೆಯಾಗಬಹುದು. ಆದ್ದರಿಂದ, ಇದನ್ನು ಕೇವಲ ಹೊರಗಿನ ಸಮಸ್ಯೆ ಎಂದುಕೊಂಡು ಕ್ರೀಮ್ ಅಥವಾ ಮನೆಮದ್ದುಗಳಿಂದ ಮಾತ್ರ ಚಿಕಿತ್ಸೆ ಮಾಡಲು ಪ್ರಯತ್ನಿಸುವುದು ಸರಿಯಲ್ಲ. ಮೂಲ ಕಾರಣವನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.

ಇವು ಕೂಡ ಕಾರಣವಾಗಿರಬಹುದು!

  • ದೀರ್ಘಕಾಲ ಸೂರ್ಯನ ಬೆಳಕಿನಲ್ಲಿ ಇರುವಿಕೆ
  • ಚರ್ಮವನ್ನು ಸರಿಯಾಗಿ ಆರೈಕೆ ಮಾಡದಿರುವುದು
  • ಹೆಚ್ಚು ರಾಸಾಯನಿಕಗಳಿರುವ ಉತ್ಪನ್ನಗಳ ಬಳಕೆ
  • ಚರ್ಮದ ಮೇಲೆ ಕೊಳಕಿರುವುದು
  • ಅಸ್ವಸ್ಥ ಜೀವನಶೈಲಿ
  • ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು
  • ನಿದ್ರೆಯ ಕೊರತೆ ಮತ್ತು ಅಧಿಕ ಒತ್ತಡ

ಕೆಲವರಲ್ಲಿ ಇದು ಅನುವಂಶಿಕವಾಗಿಯೂ (ಜೆನೆಟಿಕ್) ಇರಬಹುದು. ಜೊತೆಗೆ, ದೇಹದಲ್ಲಿ ಪೋಷಕಾಂಶಗಳ ಕೊರತೆ ಅಥವಾ ಹಾರ್ಮೋನ್ ಅಸಮತೋಲನ ಕೂಡ ಈ ಸಮಸ್ಯೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಸಣ್ಣ ವಯಸ್ಸಿನ ವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಅಭ್ಯಾಸಗಳು ಕಾರಣ!

ಹೇಗೆ ತಡೆಗಟ್ಟಬೇಕು?

  • ದಿನನಿತ್ಯ ಚರ್ಮವನ್ನು ಸ್ವಚ್ಛಗೊಳಿಸಿಕೊಳ್ಳಿ
  • ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಬಳಸಿ
  • ಸೂರ್ಯನ ತೀವ್ರ ಬೆಳಕಿನಿಂದ ರಕ್ಷಣೆ ಪಡೆಯಿರಿ
  • ಆರೋಗ್ಯಕರ ಆಹಾರ ಸೇವಿಸಿ (ಹಣ್ಣು, ತರಕಾರಿಗಳು, ಸಾಕಷ್ಟು ನೀರು)
  • ಹೆಚ್ಚು ರಾಸಾಯನಿಕಗಳಿರುವ ಉತ್ಪನ್ನಗಳನ್ನು ಬಳಕೆ ಮಾಡಬೇಡಿ
  • ನಿಮ್ಮ ಚರ್ಮಕ್ಕೆ ಹೊಂದುವ ಉತ್ಪನ್ನಗಳನ್ನು ಮಾತ್ರ ಬಳಸಿ
  • ಸರಿಯಾಗಿ ನಿದ್ರೆ ಮಾಡಿ
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಈ ಸಮಸ್ಯೆ ಮುಂದುವರಿದರೆ ಅಥವಾ ಹೆಚ್ಚಾದರೆ, ಸಮಯಕ್ಕೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗ್ಯಾಂಗ್ಸ್ ಆಫ್ ಯುಕೆ’ ಸಿನಿಮಾದಲ್ಲಿ ರಕ್ತದ ಹೊಳೆ; ಟ್ರೇಲರ್ ತೋರಿಸಿ ಸ್ಪಷ್ಟನೆ ನೀಡಿದ ಚಿತ್ರತಂಡ

‘ಡೆಡ್ಲಿ ಸೋಮ’, ‘ಮಾದೇಶ’ ರೀತಿಯ ಮಾಸ್ ಸಿನಿಮಾಗಳನ್ನು ಮಾಡಿದ ನಿರ್ದೇಶಕ ರವಿ ಶ್ರೀವತ್ಸ ಅವರು ಈ ಬಾರಿ ಇನ್ನಷ್ಟು ಗಂಭೀರವಾದ ಕತೆಯನ್ನು ಪ್ರೇಕ್ಷಕರಿಗೆ ತೋರಿಸಲು ಬರುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ‘ಗ್ಯಾಂಗ್ಸ್ ಆಫ್ ಯುಕೆ’ (Gangs Of UK) ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಆ ವೇಳೆ ರವಿ ಶ್ರೀವತ್ಸ (Ravi Srivatsa) ಹಾಗೂ ಚಿತ್ರತಂಡದವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

ಏಪ್ರಿಲ್ 10ರಂದು ರಿಲೀಸ್ ಆಗಲಿರುವ ‘ಗ್ಯಾಂಗ್ಸ್ ಆಫ್ ಯುಕೆ’ ಸಿನಿಮಾವನ್ನು ಚಂದನ್‍ ಸುರೇಶ್‍ ಅವರು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೂರಪ್ಪ ಬಾಬು, ಕೆ. ಮಂಜು ಮುಂತಾದವರು ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಹಾಜರಿದ್ದರು. ‘ಒಂದು ಸಣ್ಣ ಜಗಳದಿಂದ ಶುರುವಾದ ಕಥೆಯಲ್ಲಿ ರಕ್ತ ನಿರಂತರವಾಗಿ ಹರಿಯುತ್ತದೆ. ಇದಕ್ಕೂ ಭೀಮಾತೀರದ ಹಂತಕರ ಕಥೆಗೂ ಸಂಬಂಧವಿಲ್ಲ’ ಎಂದು ರವಿ ಶ್ರೀವತ್ಸ ಅವರು ಹೇಳಿದ್ದಾರೆ.

Gangs Of Uk Movie Team

‘ನಾನೊಬ್ಬನೇ ಈ ಸಿನಿಮಾ ಮಾಡಿದ್ದರೆ ಇನ್ನಷ್ಟು ಕ್ರೌರ್ಯ ಹೆಚ್ಚಾಗುತ್ತಿತ್ತು. ಬಹುಶಃ ಆಗ ಚಿತ್ರದ ಸೆನ್ಸಾರ್ ಆಗುತ್ತಿರಲಿಲ್ಲವೇನೋ. ಅದೇ ಕಾರಣಕ್ಕೆ ಗುರುಗಳಾದ ಎಂ.ಎಸ್. ರಮೇಶ್‍ ಅವರನ್ನು ಇಟ್ಟುಕೊಂಡು ಹೋದೆ. ಅವರು ಮತ್ತು ಇಡೀ ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ರೂಪುಗೊಂಡಿದೆ’ ಎಂದಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ.

‘ಗ್ಯಾಂಗ್ಸ್ ಆಫ್ ಯುಕೆ’ ಟ್ರೇಲರ್:

ಈ ಸಿನಿಮಾವನ್ನು ರವಿ ಶ್ರೀವತ್ಸ ಅವರು ‘ಡೆಡ್ಲಿ ಆರ್ಟ್ಸ್’ ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಒರಟ ಪ್ರಶಾಂತ್‍, ಮುನಿ, ಪದ್ಮಾ ವಾಸಂತಿ, ಪ್ರವೀಣ್, ಸೋನು ಉಪಾಧ್ಯ, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ಪ್ರಜ್ವಲ್ ಮಸ್ಕಿ, ನವೀನ್, ಉಮೇಶ್, ವಿಕಾಸ್, ಅಮೋಘ್‍ ಮುಂತಾದವರು ಅಭಿನಯಿಸಿದ್ದಾರೆ. ಆರ್‍. ಗಿರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಈಡೇರಲೇ ಇಲ್ಲ ಮುತ್ತಪ್ಪ ರೈ ಬಯೋಪಿಕ್ ಆಸೆ: ಆ ದಿನಗಳನ್ನು ವಿವರಿಸಿದ ರವಿ ಶ್ರೀವತ್ಸ

‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರಕ್ಕೆ ಎಂ.ಎಸ್. ರಮೇಶ್ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬಹಳಷ್ಟು ಜನರು ಚಿತ್ರದ ಟ್ರೇಲರ್ ನೋಡಿ ತುಂಬಾ ಕ್ರೌರ್ಯವಿದೆ ಎಂದರು. ಟ್ರೇಲರ್‍ ನೋಡಿದವರೆಲ್ಲರೂ ನನಗೆ ಮತ್ತು ರವಿಗೆ ಬೈದಿದ್ದಾರೆ. 2 ನಿಮಿಷದ ಟ್ರೇಲರ್‍ ನೋಡಿ, 2 ಗಂಟೆಯ ಚಿತ್ರದ ಬಗ್ಗೆ ಮಾತನಾಡುವುದು ಕಷ್ಟ. ಶಾಂತಿ ಬೇಕು ಎಂದರೆ ಕ್ರಾಂತಿ ಆಗಲೇಬೇಕು ಎನ್ನುವ ಮಾತಿದೆ. ಆ ತಿರುಳು ಈ ಕಥೆಯಲ್ಲಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಲಯಾಳಂಗೆ ಭರ್ಜರಿ ಎಂಟ್ರಿ ಕೊಟ್ಟ ನಟಿ ಅನುಷ್ಕಾ ಶೆಟ್ಟಿ

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ (Anushka Shetty) ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದವರು. ಅದರಲ್ಲೂ ತೆಲುಗು ರಾಜ್ಯಗಳಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಅನುಷ್ಕಾ ಹೊಂದಿದ್ದಾರೆ. ‘ಅರುಂಧತಿ’ ಸೇರಿದಂತೆ ಕೆಲವು ಮಹಿಳಾ ಪ್ರಧಾನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿರುವ ಅನುಷ್ಕಾ ಶೆಟ್ಟಿ, ಒಂದು ಭರ್ಜರಿ ಕಮ್​​ಬ್ಯಾಕ್​​ಗಾಗಿ ಪ್ರಯತ್ನಿಸುತ್ತಿದ್ದಾರೆ. ಅನುಷ್ಕಾರ ಈ ಹಿಂದಿನ ಸಿನಿಮಾ ‘ಘಾಟಿ’ ಸಿನಿಮಾ ನಿರೀಕ್ಷೆ ಮೂಡಿಸಿತ್ತಾದರೂ ಬಾಕ್ಸ್ ಆಫೀಸ್​​ನಲ್ಲಿ ಧಾರುಣ ಸೋಲು ಕಂಡಿತು, ಇದೀಗ ಮಲಯಾಳಂ ಚಿತ್ರರಂಗಕ್ಕೆ ಅನುಷ್ಕಾ ಎಂಟ್ರಿ ಕೊಟ್ಟಿದ್ದು, ಸಿನಿಮಾದ ಟ್ರೈಲರ್ ಭರವಸೆ ಮೂಡಿಸಿದೆ.

ಅನುಷ್ಕಾ ಶೆಟ್ಟಿ ಇದೇ ಮೊದಲ ಬಾರಿಗೆ ಮಲಯಾಳಂ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹೆಸರು ‘ಕಥನಾರ್’. ಫ್ಯಾಂಟಸಿ ಶೈಲಿಯ ಕತೆಯನ್ನು ಹೊಂದಿರುವ ಈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸುಮಾರು 2 ನಿಮಿಷ 58 ಸೆಕೆಂಡ್‌ಗಳ ಈ ಟ್ರೈಲರ್ ಪ್ರೇಕ್ಷಕರನ್ನು ಒಂದು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. ಕೇರಳದ ಜಾನಪದ ಕಥೆಗಳಲ್ಲಿ ಬರುವ ಪ್ರಸಿದ್ಧ ಮಾಂತ್ರಿಕ ಪಾದ್ರಿ ‘ಕಡಮತ್ತತ್ತು ಕಥನಾರ್’ ಜೀವನ ಆಧರಿಸಿ ಈ ಸಿನಿಮಾ ರೂಪಿಸಲಾಗಿದೆ. ಆದರೆ, ಇದು ಸಾಮಾನ್ಯ ಜಾನಪದ ಕಥೆಯಂತಿರದೆ, ಹಾರರ್ ಮತ್ತು ಫ್ಯಾಂಟಸಿ ಶೈಲಿಯ ಪ್ರಭಾವವನ್ನು ಹೊಂದಿದೆ.

ಸಿನಿಮಾನಲ್ಲಿ ದೃಶ್ಯ ವೈಭವಕ್ಕೆ ಹೆಚ್ಚಿನ ಒತ್ತು ನೀಡಲಾಗಿರುವುದು ಟ್ರೈಲರ್​​ನಿಂದ ತಿಳಿಯುತ್ತಿದೆ. ಸಿಜಿಐ ಮತ್ತು ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಸಮೃದ್ಧವಾಗಿ ಸಿನಿಮಾನಲ್ಲಿ ಬಳಸಲಾಗಿದೆ. ರೋಜನ್ ಥಾಮಸ್ ನಿರ್ದೇಶನದ ಈ ಚಿತ್ರಕ್ಕೆ ರಾಹುಲ್ ಸುಬ್ರಮಣಿಯನ್ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:ವಿವಾಹ ವದಂತಿಗೆ ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ

ಸಿನಿಮಾನಲ್ಲಿ ಜಯಸೂರ್ಯ ನಾಯಕನಾಗಿ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ, ನೀಲಿ ಹೆಸರಿನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭುದೇವ, ವಿನೀತ್ ಮತ್ತು ಸಂದೀಪ್ ಮಾಸ್ಟರ್ ಅವರಂತಹ ಅನುಭವಿ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

‘ಶ್ರೀ ಗೋಕುಲಂ ಮೂವೀಸ್’ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ. ಕೇರಳದ 9ನೇ ಶತಮಾನದ ದಂತಕಥೆಯಾದ ಕಥನಾರ್, ತನ್ನ ಮಾಂತ್ರಿಕ ಶಕ್ತಿಯಿಂದ ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸುತ್ತಿದ್ದ ಎಂಬ ಜನಪದ ಕತೆಗಳಿದ್ದು, ಅವುಗಳನ್ನೇ ಮೂಲವಾಗಿರಿಸಿಕೊಂಡು ಸಿನಿಮಾದ ಕತೆ ಮಾಡಲಾಗಿದೆ. ಇದು ಅನುಷ್ಕಾ ಶೆಟ್ಟಿ ಅವರ ಮೊದಲ ಮಲಯಾಳಂ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮ ಆಸ್ತಿ ಗಳಿಸಿದ ಮಾಜಿ ಎಂ.ಡಿಗೆ ಶಾಕ್: ವಿ. ಮುನಿಯಪ್ಪಗೆ 3 ವರ್ಷ ಜೈಲು, 4.5 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್!

ಬೆಂಗಳೂರು, ಮಾ.31: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ (MD) ವಿ. ಮುನಿಯಪ್ಪ ದೋಷಿ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಈ ತೀರ್ಪು ಹೊರಬಿದ್ದಿದೆ.

ಬೆಂಗಳೂರಿನ ಬಸವ ಭವನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ. ಮುನಿಯಪ್ಪ ವಿರುದ್ಧ 2014ರಲ್ಲಿ ಭ್ರಷ್ಟಾಚಾರ ಮತ್ತು ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಮುನಿಯಪ್ಪ ಅವರು ತಮ್ಮ ಅಧಿಕೃತ ಆದಾಯದ ಮೂಲಗಳಿಗಿಂತ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಸಂಪಾದಿಸಿರುವುದು ಸಾಬೀತಾಗಿತ್ತು.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮುನಿಯಪ್ಪ ಅವರಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 4.5 ಕೋಟಿ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ವಿಧಿಸಲಾದ ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ, ಆರೋಪಿಯು ಹೆಚ್ಚುವರಿಯಾಗಿ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2014ರಲ್ಲಿ ದಾಖಲಾಗಿದ್ದ ಈ ಭ್ರಷ್ಟಾಚಾರದ ಕಲೆಗೆ 2026ರಲ್ಲಿ ಅಂತಿಮವಾಗಿ ಶಿಕ್ಷೆಯ ಮುದ್ರೆ ಬಿದ್ದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆಯ ಹವಾಮಾನ: ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ; ಉತ್ತರ ಒಳನಾಡಿನ ಹಲವೆಡೆ ಸುಡು ಬಿಸಲು

ಬೆಂಗಳೂರು, ಮಾರ್ಚ್​​ 31: ತೀವ್ರ ಬಿಸಿಲಿನ ವಾತಾವರಣದ ನಡುವೆಯೂ ನಾಳೆ (ಏಪ್ರಿಲ್​​ 1) ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಇದೆ. ಸುಮಾರು 12 ಜಿಲ್ಲೆಗಳಲ್ಲಿ ವರುಣನ ಆಗಮನದ ನಿರೀಕ್ಷೆ ಇದ್ದು, ರಾಜ್ಯದಲ್ಲಿ ಬಿಸಿಲು ಮತ್ತು ಮಳೆಯ ಮಿಶ್ರ ಹವಾಮಾನ ಕಂಡುಬರಲಿದೆ. ಕೆಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದರೆ, ಮತ್ತೆ ಕೆಲವು ಕಡೆ  ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ?

ದಕ್ಷಿಣ ಒಳನಾಡು ಭಾಗದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 30-40 ಕಿಲೋ ಮೀಟರ್​​ ಇರಬಹುದೆಂದು ಅಂದಾಜಿಸಲಾಗಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಕಂಡುಬರಲಿದ್ದರೂ, ಬಳ್ಳಾರಿ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿಯೂ ಸಾಧಾರಣ ಮಳೆಯನ್ನು ಹವಾಮಾನ ಇಲಾಖೆ ಅಂದಾಜಿಸಿದೆ. ಮುಂದಿನ ಕೆಲ ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಆತಂಕಕಾರಿ ಮಟ್ಟದಲ್ಲಿದೆ ಮೈಸೂರಿನ ಏರ್ ಕ್ವಾಲಿಟಿ!

ಬೆಂಗಳೂರಲ್ಲೂ ವರುಣನ ಅಬ್ಬರ

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಗರದ ಗರಿಷ್ಠ ಗರಿಷ್ಠ ತಾಪಮಾನ 34ರಿಂದ 36 ಡಿಗ್ರಿ ಸೆಲ್ಸಿಯಸ್​​ ಮತ್ತು ಕನಿಷ್ಠ ತಾಪಮಾನ 21ರಿಂದ 22 ಡಿಗ್ರಿ ಸೆಲ್ಸಿಯಸ್​​ ಇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮೆರಿಕದಿಂದ ತೈಲ ಪಡೆಯಿರಿ, ಇಲ್ಲವೇ ಹಾರ್ಮುಜ್​ಗೆ ಹೋಗಿ ಪಡೆದುಕೊಳ್ಳಿ: ಬ್ರಿಟನ್ ಮತ್ತಿತರ ರಾಷ್ಟ್ರಗಳನ್ನು ಚುಚ್ಚಿದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 31: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್​ಗೆ ನೆರವಾಗದ ಇತರ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ (Donald Trump) ಕೆಂಡಕಾರುವುದು ಮುಂದುವರಿದಿದೆ. ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್​ನಲ್ಲಿ ಬ್ರಿಟನ್ ಮತ್ತಿತರ ದೇಶಗಳನ್ನು ತರಾಟೆಗೆ ತೆಗೆದುಕೊಂಡ ಟ್ರಂಪ್, ಒಂದೋ ನೀವು ಅಮೆರಿಕದ ತೈಲ ಖರೀದಿಸಿ, ಇಲ್ಲವೇ ಹಾರ್ಮುಜ್ ಜಲಸಂಧಿಗೆ ಹೋಗಿ ತೈಲ ಪಡೆದುಕೊಳ್ಳಿ ಎಂದು ತಾಕೀತು ಮಾಡಿದ್ದಾರೆ.

‘ಇರಾನ್ ಯುದ್ಧದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಬ್ರಿಟನ್​ನಂತಹ ದೇಶಗಳು ಹಾರ್ಮುಜ್ ಜಲಸಂಧಿ ತಡೆದಿರುವ ಕಾರಣಕ್ಕೆ ತೈಲ ಸಿಗದೇ ಪರದಾಡುತ್ತಿವೆ. ಈ ದೇಶಗಳಿಗೆ ನನ್ನ ಸಲಹೆ ಹೀಗಿದೆ: ಒಂದು, ನೀವು ಅಮೆರಿಕದಿಂದ ತೈಲ ಖರೀದಿಸಿ. ನಮ್ಮಲ್ಲಿ ಸಾಕಷ್ಟು ತೈಲ ಇದೆ. ಎರಡನೆಯದು, ಧೈರ್ಯ ಇದ್ದರೆ ಜಲಸಂಧಿಗೆ ಹೋಗಿ ತೈಲ ತೆಗೆದುಕೊಳ್ಳಿ’ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ತಾಹಿರ್ ಅನ್ವರ್ ಯಾರು? ಪಾಕಿಸ್ತಾನದಲ್ಲಿ ಮಸೂದ್ ಅಜರ್ ಸಹೋದರ ಅನುಮಾನಾಸ್ಪದವಾಗಿ ಸಾವು

ನೀವೇ ಹೋರಾಡುವುದನ್ನು ಕಲಿಯಿರಿ

‘ನಿಮಗಾಗಿ ಹೋರಾಡುವುದು ಹೇಗೆಂದು ಕಲಿಯಲು ಆರಂಭಿಸಬೇಕಾಗಬಹುದು. ಹೇಗೆ ನೀವು ಅಮೆರಿಕದ ಸಹಾಯಕ್ಕೆ ನಿಂತಿಲ್ಲವೋ, ಹಾಗೆ ನಿಮಗೆ ಸಹಾಯ ಮಾಡಲು ಅಮೆರಿಕ ಇರುವುದಿಲ್ಲ. ಇರಾನ್ ಅನ್ನು ನೆಲಸಮ ಮಾಡಿದ್ದೇವೆ. ಕಷ್ಟದ ಭಾಗ ಮುಗಿದಿದೆ. ಈಗ ನಿಮ್ಮ ತೈಲವನ್ನು ಪಡೆದುಕೊಳ್ಳಿ ಹೋಗಿ’ ಎಂದು ತಮ್ಮ ಮಿತ್ರ ದೇಶಗಳನ್ನು ಟ್ರಂಪ್ ಟಾಂಟ್ ಮಾಡಿದ್ದಾರೆ.

ಫೆಬ್ರುವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಆರಂಭಿಸಿವೆ. ಸಾವಿರಾರು ಮಿಸೈಲ್, ಡ್ರೋನ್​ಗಳಿಂದ ದಾಳಿಗಳಾಗಿವೆ. ಇರಾನ್ ದೇಶವೂ ಕೂಡ ಸಮರ್ಪಕವಾಗಿ ಪ್ರತಿರೋಧ ಮತ್ತು ಪ್ರತಿದಾಳಿಗಳನ್ನು ಮಾಡುತ್ತಿದೆ. ತಿಂಗಳು ಉರುಳಿದರೂ ಯುದ್ಧ ಮುಗಿಯುತ್ತಿಲ್ಲ. ವಿಶ್ವದ ಪ್ರಮುಖ ತೈಲ ಸಾಗಣೆ ದಾರಿಯಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ತಡೆದು ನಿಲ್ಲಿಸಿದೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಇದರಿಂದ ಪೆಟ್ರೋಲ್, ಎಲ್​ಪಿಜಿ ಬಿಕ್ಕಟ್ಟು ಸ್ಥಿತಿ ಉದ್ಭವಿಸಿದೆ.

ಇದನ್ನೂ ಓದಿ: ಭಾರತದ ವಿರುದ್ಧದ ಭಯೋತ್ಪಾದನಾ ಸಂಘಟನೆಗೆ ಪಾಕಿಸ್ತಾನ ಆಶ್ರಯ ನೀಡುತ್ತಲೇ ಇದೆ; ಅಮೆರಿಕದ ಸಂಶೋಧನಾ ವರದಿ

ಇದೇ ವೇಳೆ, ಇರಾನ್​ನ ಅಳಿದುಳಿದ ನಾಯಕರೊಂದಿಗೆ ಅಮೆರಿಕ ಸಂಧಾನ ನಡೆಸಲು ಯತ್ನಿಸಿದೆ. ಸಂಧಾನ ಏರ್ಪಡದಿದ್ದರೆ ಇರಾನ್ ಮೇಲೆ ಇನ್ನೂ ದೊಡ್ಡ ಪ್ರಹಾರ ಆಗುತ್ತದೆ. ಆ ದೇಶದ ಇಂಧನ ಸೌಕರ್ಯಗಳನ್ನು ನಾಶ ಮಾಡುತ್ತೇವೆ ಎಂದು ಅಮೆರಿಕ ಬೆದರಿಕೆ ಹಾಕುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link