All posts by nagaraj11081993

April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ನವದೆಹಲಿ, ಮಾರ್ಚ್ 31: ನಾಳೆ ಹೊಸ ಹಣಕಾಸು ವರ್ಷದ ಆರಂಭ. ಏಪ್ರಿಲ್ 1ರಿಂದ ಡಿಜಿಟಲ್ ಪೇಮೆಂಟ್, ಪ್ಯಾನ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎಟಿಎಂ ಬಳಕೆ ಇತ್ಯಾದಿ ಕೆಲ ನಿಯಮಗಳಲ್ಲಿ ಬದಲಾವಣೆ ಇರಲಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ವಿತ್​ಡ್ರಾಯಲ್, ಲಾಕರ್, ಎಫ್​ಡಿ, ಸಾಲ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಿವೆ. ಕೆಲ ಕ್ರೆಡಿಟ್ ಕಾರ್ಡ್​ಗಳ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಬದಲಾವಣೆ ಇದೆ. ಏಪ್ರಿಲ್ 1ರಿಂದ ಕೆಲ ಮಹತ್ವದ ಹಣಕಾಸು ನಿಯಮಗಳ (Financial Rules) ಬದಲಾವಣೆ ಏನೇನು ಎನ್ನುವ ವಿವರ ಇಲ್ಲಿದೆ:

ಡಿಜಿಟಲ್ ಪೇಮೆಂಟ್ ನಿಯಮಗಳು

ಆರ್​ಬಿಐ ಮಾರ್ಗಸೂಚಿ ಪ್ರಕಾರ ಡಿಜಿಟಲ್ ಪೇಮೆಂಟ್ಸ್ ನಿಯಮಗಳಲ್ಲಿ ಏಪ್ರಿಲ್ 1ರಿಂದ ಕೆಲ ಬದಲಾವಣೆ ಇರಲಿದೆ. ಯುಪಿಐ ಪೇಮೆಂಟ್ಸ್, ಕಾರ್ಡ್ ಪೇಮೆಂಟ್, ವ್ಯಾಲಟ್ ಪೇಮೆಂಟ್​ಗಳಲ್ಲಿ ಎರಡು ಹಂತದ ದೃಢೀಕರಣ ವ್ಯವಸ್ಥೆ ಇರುತ್ತದೆ. ಒಟಿಪಿ ಜೊತೆಗೆ ಪಿನ್ ಅಥವಾ ಪಾಸ್ವರ್ಡ್ ಅಥವಾ ಬಯೋಮೆಟ್ರಿಕ್ ಅಥವಾ ಸೆಕ್ಯೂರಿಟಿ ಟೋಕನ್​ಗಳನ್ನು ಸಲ್ಲಿಸುವ ಅವಶ್ಯಕತೆ ಇರುತ್ತದೆ. ಒಟಿಪಿ ಇಲ್ಲದೆಯೂ ಅಥೆಂಟಿಕೇಶನ್ ಸಾಧ್ಯ. ಪಿನ್ ಮತ್ತು ಬಯೋಮೆಟ್ರಿಕ್ ಮೂಲಕ ಟ್ರಾನ್ಸಾಕ್ಷನ್ ದೃಢೀಕರಿಸಬಹುದು. ಯಾವುದಾದರೂ ಎರಡು ಫ್ಯಾಕ್ಟರ್ ದೃಢೀಕರಣವನ್ನು ಆಯ್ದುಕೊಳ್ಳಬಹುದು.

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ಹೊಸ ಪ್ಯಾನ್ ಕಾರ್ಡ್ ನಿಯಮಗಳು

ಈ ಮೊದಲು ನೀವು ಹೊಸ ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ದಾಖಲೆ ಕೊಟ್ಟರೆ ಸಾಕಿತ್ತು. ಆದರೆ, ಏಪ್ರಿಲ್ 1ರಿಂದ ನಿಯಮ ಕಠಿಣಗೊಳ್ಳುತ್ತದೆ. ಪ್ಯಾನ್​ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಜೊತೆಗೆ ಇನ್ನೊಂದು ಹೆಚ್ಚುವರಿ ದಾಖಲೆ ಸಲ್ಲಿಸಬೇಕಾಗುತ್ತದೆ. ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಆಧಾರ್​ನಲ್ಲಿರುವಂತೆಯೇ ಸ್ಪೆಲ್ಲಿಂಗ್ ಸಮೇತ ಹೆಸರು ಪ್ಯಾನ್​ನಲ್ಲಿ ಇರಬೇಕು. ಇಲ್ಲದಿದ್ದರೆ ಅರ್ಜಿ ರಿಜೆಕ್ಟ್ ಆಗಬಹುದು.

ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಹೆಚ್ಚಳ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್​ಎಚ್​ಎಐ) 2026-27ರ ಹಣಕಾಸು ವರ್ಷಕ್ಕೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್​ನ ದರ ಪರಿಷ್ಕರಣೆ ಮಾಡಿದೆ. ಏಪ್ರಿಲ್ 1ರಿಂದ ಪಾಸ್ ತುಸು ದುಬಾರಿಯಾಗಲಿದೆ. ಈಗ 3,000 ರೂ ಇರುವ ಫಾಸ್​ಟ್ಯಾಗ್ ವಾರ್ಷಿಕ ಪಾಸ್​ನ ಬೆಲೆ 3,075 ರೂಗೆ ಏರಲಿದೆ.

ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಡಿಜಿಟಲ್ ಪೇಮೆಂಟ್ ಪಾವತಿ ಮತ್ತು ಪ್ಲಾಟ್​ಫಾರ್ಮ್​ಗಳ ನಿರ್ವಹಣೆ ವಿಚಾರದಲ್ಲಿ ಆರ್​ಬಿಐ ಮಾರ್ಗಸೂಚಿ ಗಮನಾರ್ಹವೆನಿಸಿದೆ. ಡಿಜಿಟಲ್ ಇಕೋಸಿಸ್ಟಂನಲ್ಲಿರುವ ಸಂಸ್ಥೆಗಳು ಸೆಕ್ಯೂರಿಟಿ ಸ್ಟ್ಯಾಂಡರ್ಡ್​ಗಳನ್ನು ಸರಿಯಾಗಿ ಪಾಲಿಸಬೇಕು. ಸಿಸ್ಟಂ ದೋಷದಿಂದ ಯಾವುದಾದರೂ ವಂಚನೆಯಾದಲ್ಲಿ ಗ್ರಾಹಕರಿಗೆ ಬ್ಯಾಂಕುಗಳೇ ಪರಿಹಾರ ನೀಡಬೇಕು. ಗ್ರಾಹಕರ ವ್ಯಾಜ್ಯ ಪರಿಹಾರ ವ್ಯವಸ್ಥೆ ವೇಗವಾಗಿ ಆಗಬೇಕು. ಇವೇ ಮುಂತಾದ ನಿಯಮಗಳನ್ನು ಆರ್​ಬಿಐ ರೂಪಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

TV9-Sensodyne Campaign |ಈ ಅಭಿಯಾನದ ಮೂಲಕ ನಿಮ್ಮ ದಂತ ವಯಸ್ಸನ್ನು ತಿಳಿಯಿರಿ: ಉತ್ತಮ ಬಾಯಿ ಆರೋಗ್ಯಕ್ಕೆ ಮೊದಲ ಹೆಜ್ಜೆ

ಬೆಂಗಳೂರು. ಮಾ.31: ಬಾಯಿ ಆರೋಗ್ಯ ಸಮಸ್ಯೆಗಳು ಸಾರ್ವತ್ರಿಕವಾಗಿ ಹೆಚ್ಚುತ್ತಿರುವ ಸವಾಲಾಗಿದೆ. ಹಿಂದಿನ ಅಂದಾಜಿಗಿಂತಲೂ ಆರೋಗ್ಯ ರಕ್ಷಣೆಯು ಇಂದು ದೊಡ್ಡ ಸವಾಲಾಗಿರುವುದರಿಂದ, ತಡೆಗಟ್ಟುವ ಆರೋಗ್ಯ ರಕ್ಷಣೆಯು ಎಲ್ಲರ ಮಿಷನ್ ಆಗಿದೆ. ಈ ನಿಟ್ಟಿನಲ್ಲಿ, TV9 ನೆಟ್‌ವರ್ಕ್ ಮತ್ತು ಸೆನ್ಸೋಡೈನ್‌ನಂತಹ ಸಂಸ್ಥೆಗಳು, ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸವಾಲನ್ನು ಎದುರಿಸಲು ಮುಂದಾಗಿವೆ. ನಿಮ್ಮ ದಂತ ವಯಸ್ಸನ್ನು ತಿಳಿದುಕೊಳ್ಳುವುದು ಮತ್ತು ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಬಾಯಿ ಆರೋಗ್ಯದ ಕಡೆಗೆ ತೆಗೆದುಕೊಳ್ಳುವ ಪ್ರಮುಖ ಮೊದಲ ಹೆಜ್ಜೆಯಾಗಿದೆ. ಬಾಯಿ ಆರೋಗ್ಯವಿಲ್ಲದೆ ಆರೋಗ್ಯವಿಲ್ಲ ಎಂಬ ಸಂದೇಶವನ್ನು ದೇಶಾದ್ಯಂತ ಪ್ರಚಾರ ಮಾಡಲಾಗುತ್ತಿದೆ. ಎಲ್ಲರಿಗೂ ಉತ್ತಮ ಬಾಯಿ ಆರೋಗ್ಯವನ್ನು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ. ಇದು ಸೆನ್ಸೋಡೈನ್‌ನ ತಡೆಗಟ್ಟುವ ಆರೋಗ್ಯ ರಕ್ಷಣೆಯ ಗುರಿಯೊಂದಿಗೆ ಹೊಂದಿಕೆಯಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರನ್ನು ತಲುಪುವ ಮೂಲಕ ಈ ಕ್ರಮವನ್ನು ಪ್ರಜಾಸತ್ತಾತ್ಮಕಗೊಳಿಸಲಾಗುತ್ತಿದೆ, ಇದರಿಂದ ಪ್ರತಿಯೊಬ್ಬರೂ ತಮ್ಮ ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಂಡು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಲಸದಿಂದ ತೆಗೆದ ಸಿಟ್ಟಿಗೆ ಮ್ಯಾನೇಜರ್​​​ಗೆ ಚಾಕುವಿನಿಂದ 10 ಬಾರಿ ಇರಿದ, ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಕೃತ್ಯ

ಬೆಂಗಳೂರು, (ಮಾರ್ಚ್ 31): ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ, ಕಂಪನಿಯ ಮ್ಯಾನೇಜರ್​​​ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಬೆಂಗಳೂರಿನ (Bengaluru) ತಿಗಳರಪಾಳ್ಯದಲ್ಲಿ ನಡೆದಿದೆ.  ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮ್ಯಾನೇಜರ್ ರಾಹುಲ್(38) ಹತ್ಯೆಯಾದ ವ್ಯಕ್ತಿ. ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಉದ್ಯೋಗಿ ಯಾದಗಿರಿ ಮೂಲದ ಹನುಮಂತಪ್ಪ, ನಿನ್ನೆ (ಮಾರ್ಚ್ 30) ಮ್ಯಾನೇಜರ್ ರಾಹುಲ್ ಗೆ ಚಾಕುವಿನಿಂದ ಇರಿದಿದ್ದ. ಇದರಿಂದ ಗಾಯಗೊಂಡ ರಾಹುಲ್​ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮ್ಯಾನೇಜರ್ ರಾಹುಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹನುಮಂತಪ್ಪ ಎನ್ನುವಾತ ಬೆಂಗಳೂರಿನ ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೆಟ್ ಲಿಮಿಟೆಡ್ ಎನ್ನುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ, ಏಕಾಏಕಿ ಹನುಮಂತಪ್ಪನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಿಂದ ಕೋಪಗೊಂಡ ಹನುಮಂತಪ್ಪ, ನಿನ್ನೆ(ಮಾರ್ಚ್ 30) ಕಂಪನಿಯಲ್ಲಿದ್ದ ಮ್ಯಾನೇಜರ್ ರಾಹುಲ್​​ಗೆ ಸುಮಾರು 10 ಬಾರಿ ಚಾಕುವಿನಿಂದ ಇರಿದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ರಾಹುಲ್, ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ದುರದೃಷ್ಟವಶಾತ್, ಚಿಕಿತ್ಸೆ ಫಲಿಸದೇ ಮ್ಯಾನೇಜರ್ ರಾಹುಲ್ ಮಂಗಳವಾರ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ಮೃತ ರಾಹುಲ್ ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸದ್ಯ  ರಾಜಗೋಪಾಲ್ ನಗರ ಪೊಲೀಸರು, ಯಾದಗಿರಿ ಮೂಲಕದ ಆರೋಪಿ ಹನುಮಂತಪ್ಪನನ್ನ ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಸ್​​ಗೆ ಬೈಕ್​​ ಡಿಕ್ಕಿಯಾಗಿ ಯುವಕ ಸಾವು: ಇದು ಅಪಘಾತವೋ? ಆತ್ಮಹತ್ಯೆಯೋ? ಎಂಬುದೇ ಈಗ ಅನುಮಾನ

ವಿಜಯಪುರ, ಮಾರ್ಚ್​​ 31: ಸಾರಿಗೆ ಬಸ್​, ಬೈಕ್​ ನಡುವೆ ಡಿಕ್ಕಿಯಾದ ಪರಿಣಾಮ ಹೊತ್ತಿಕೊಂಡ ಬೆಂಕಿಯಲ್ಲಿ ಬೈಕ್​​ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಟೋಲ್‌ಗೇಟ್ ಬಳಿ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಮೂಲದ ಅಭಿಷೇಕ ನಾಗರಾಳ (25) ಮೃತ ಯುವಕನಾಗಿದ್ದು, ಬಸ್​​ನ ಚಾಲಕ ಮತ್ತು ನಿರ್ವಾಹಕ ಸೇರಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್​​ನಿಂದ ಕೆಳಗೆ ಇಳಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಬಸ್​​ ಕೂಡ ಬೆಂಕಿಗೆ ಆಹುತಿಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಭೀಕರ ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕೆಲ ಕಾಲ ಟ್ರಾಫಿಕ್​​ ಜಾಮ್​​ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಮೃತ ಬೈಕ್​​ ಸವಾರ ಯಾರೆಂಬ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಆ ಬಗ್ಗೆ ತನಿಖೆಗಿಳಿದ ಪೊಲೀಸರು ಮೃತನನ್ನು ಅಭಿಷೇಕ ನಾಗರಾಳ ಎಂದು ಖಚಿತಪಡಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ವಿಜಯಪುರದಲ್ಲೊಂದು ಮನಕಲಕುವ ಘಟನೆ; ಪುಟ್ಟ ಪುಟ್ಟ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಆತ್ಮಹತ್ಯೆ ಶಂಕೆ

ಇನ್ನು ಮೇಲ್ನೋಟಕ್ಕೆ ಇದೊಂದು ಅಪಘಾತ ಎಂಬಂತೆ ಕಂಡುಬಂದರೂ ಪ್ರೀತಿ ವಿಚಾರಕ್ಕೆ ಅಭಿಷೇಕ್​ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಂಜನಾ ಎಂಬ ಯುವತಿಯನ್ನು‌ ನನ್ನಿಂದ ದೂರ ಮಾಡಿದ್ದಾರೆ. ಹಾಗಾಗಿ ನಾನು ಬದುಕಲ್ಲ ಎಂದು ವಿಡಿಯೋ ಮಾಡಿ ಅದನ್ನು ಆತ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದ. ಹೀಗಾಗಿ ಬೇಕಂತಲೇ ಬಸ್​ಗೆ ಬೈಕ್​ ಡಿಕ್ಕಿ ಹೊಡೆದಿರುವ ಅನುಮಾನ ಬಂದಿದೆ. ಸಂಜನಾಳನ್ನು ನನ್ನಿಂದ ದೂರು ಮಾಡಿದವರೇ ನನ್ನ ಸಾವಿಗೆ ಕಾರಣ. ವೀರೇಶ್ ನಂದೂರ್, ಚೈತ್ರಾ ನಂದೂರ್, ಸಂಬಂಧಿ ನವೀನ್‌ಕುಮಾರ್ ಪಾಟೀಲ್ ಅವರೇ ಆಕೆಯನ್ನು ತನ್ನಿಂದ ದೂರ ಮಾಡಿದ್ದು. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ಸಾಯುತ್ತೇನೆ ಎಂದು ಅಭಿಷೇಕ್ ವಿಡಿಯೋ ಪೋಸ್ಟ್ ಮಾಡಿದ್ದ. ಹೀಗಾಗಿ ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇದು ನಿಜಕ್ಕೂ ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದು ಆ ಬಳಿಕವೇ ಗೊತ್ತಾಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿದೇಶಿ ಪ್ರೇಕ್ಷಕರಿಗೆ ಮೊದಲು ‘ರಾಮಾಯಣ’ ಟೀಸರ್ ದರ್ಶನ: ರಾಮನ ಪಾತ್ರಕ್ಕೆ ಫಿದಾ

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷೆಯ ಸಿನಿಮಾ ‘ರಾಮಾಯಣ’ (Ramayana) ಬಗ್ಗೆ ಈಗ ವಿದೇಶದಲ್ಲೂ ಚರ್ಚೆ ಶುರುವಾಗಿದೆ. ಚಿತ್ರತಂಡವು ಇತ್ತೀಚೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಚಿತ್ರದ ಟೀಸರ್ ಪ್ರದರ್ಶಿಸಿದೆ. ಈ ಮೂಲಕ ಚಿತ್ರದ ದೃಶ್ಯ ವೈಭವವನ್ನು ಮೊದಲ ಬಾರಿಗೆ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.

ಟೀಸರ್ ಪ್ರದರ್ಶನದ ಬಳಿಕ ಮಾತನಾಡಿದ ನಟ ರಣಬೀರ್ ಕಪೂರ್ ಅವರು ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ‘ಇದು ನಮ್ಮ ಪ್ರೀತಿಯ ಶ್ರಮದ ಫಲ. ಈ ದೃಶ್ಯಗಳನ್ನು ಮೊದಲು ನೋಡುತ್ತಿರುವ ಅದೃಷ್ಟವಂತರು ನೀವು. ಶತಮಾನಗಳಿಂದಲೂ ಶ್ರೀರಾಮ ಕೋಟ್ಯಂತರ ಜನರ ಆತ್ಮಸಾಕ್ಷಿಯಾಗಿದ್ದಾನೆ. ಅವನು ಮಾನವ ಚೇತನದ ವಿಜಯವನ್ನು ಸಾರುತ್ತಾನೆ. ಸಹಾನುಭೂತಿ, ಧೈರ್ಯ ಮತ್ತು ಧರ್ಮದ ಸಂಕೇತವಾಗಿರುವ ರಾಮನನ್ನು ಮರ್ಯಾದಾ ಪುರುಷೋತ್ತಮ ಅಂತ ಕರೆಯಲಾಗುತ್ತದೆ’ ಎಂದು ರಣಬೀರ್ ಭಾವನಾತ್ಮಕವಾಗಿ ನುಡಿದರು.

ಈ ಸಿನಿಮಾದಲ್ಲಿ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ನಟ ‘ರಾಕಿಂಗ್ ಸ್ಟಾರ್’ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರತೀಯ ಸಿನಿಪ್ರಿಯರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಟೀಸರ್ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

‘ಸ್ಕ್ರೀನ್ ಮೇಲೆ ಕೇವಲ 2 ಸೆಕೆಂಡ್ ರಣಬೀರ್ ಕಪೂರ್ ಅವರನ್ನು ಶ್ರೀರಾಮನಾಗಿ ನೋಡಿದಾಗ ಥಿಯೇಟರ್‌ನಲ್ಲಿ ಜನರ ಪ್ರತಿಕ್ರಿಯೆ ಅದ್ಭುತವಾಗಿತ್ತು. ನಮಗೆ ರೋಮಾಂಚನ ಆಯಿತು. ಇದು ಕೇವಲ ಸಿನಿಮಾ ಅಲ್ಲ, ಒಂದು ಎಮೋಷನ್’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಭಾರತದಲ್ಲಿರುವ ಪ್ರೇಕ್ಷಕರು ಈ ಸಿನಿಮಾದ ಟೀಸರ್ ನೋಡಲು ಕಾದಿದ್ದಾರೆ.

ಇದನ್ನೂ ಓದಿ: ಯಶ್ ಇಲ್ಲದೆ ಲಾಸ್ ಏಂಜಲೀಸ್​​ಗೆ ತೆರಳಿದ ‘ರಾಮಾಯಣ’ ಟೀಂ; ಪ್ರಚಾರದಲ್ಲಿ ಭಾಗಿ

ಏಪ್ರಿಲ್ 2ರಂದು ಹನುಮ ಜಯಂತಿ ಪ್ರಯುಕ್ತ ‘ರಾಮಾಯಣ: ಪಾರ್ಟ್ 1’ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಈ ವರ್ಷದ ದೀಪಾವಳಿ ಹಬ್ಬದ ಪ್ರಯಕ್ತ ಈ ಸಿನಿಮಾ ತೆರೆಕಾಣಲಿದೆ. ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು: ಖರ್ಚಿಗೆ ಹಣ ಕೊಡದ್ದಕ್ಕೆ ಮಂಗಳಮುಖಿಯ ಮುಖವನ್ನೇ ಕೊಚ್ಚಿ ಹಾಕಿದ ಯುವಕರ ಗುಂಪು

ಮೈಸೂರು, ಮಾ. 31: ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಯುವಕರ ತಂಡವೊಂದು ಮಂಗಳಮುಖಿಯರ ಮೇಲೆ ತಲ್ವಾರ್ ಮತ್ತು ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದಿದೆ. ಅಮೃತ ಬಡಾವಣೆ ನಿವಾಸಿಯಾದ ಆನಮ್ ಎಂಬ ಮಂಗಳಮುಖಿಯ ಬಳಿ ಕೆಲವು ಯುವಕರು ತಮ್ಮ ವೈಯಕ್ತಿಕ ಖರ್ಚಿಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಆನಮ್ ಹಣ ನೀಡಲು ನಿರಾಕರಿಸಿದಾಗ ಯುವಕರು ಗಲಾಟೆ ಆರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡು ಆನಮ್ ತನ್ನ ಸ್ನೇಹಿತೆ ಪಾರಿ ಎಂಬಾಕೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಾಳೆ. ಗೌಸಿಯಾನಗರದ ನಿವಾಸಿಯಾದ ಪಾರಿ ಸ್ಥಳಕ್ಕೆ ಬರುತ್ತಿದ್ದಂತೆಯೇ, ಆಕ್ರೋಶಗೊಂಡಿದ್ದ ಯುವಕರು ತಲ್ವಾರ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪಾರಿ ಅವರ ಮುಖಕ್ಕೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಲಾಗಿದೆ. ಸದ್ಯ ಗಾಯಾಳು ಪಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಮಂಗಳಮುಖಿಯರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ದಕ್ಷಿಣ (ಸೌತ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಿಡಿಗೇಡಿ ಯುವಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs KRR ಪಂದ್ಯದ ಬಳಿಕ ಐಪಿಎಲ್ ಬ್ರಾಡ್​ಕಾಸ್ಟ್ ಇಂಜಿನಿಯರ್ ಸಾವು

ಐಪಿಎಲ್ 2026ರ ಪಂದ್ಯಗಳ ನೇರ ಪ್ರಸಾರ ತಂಡದ ಭಾಗವಾಗಿದ್ದ ಬ್ರಿಟನ್ ಮೂಲದ ಹಿರಿಯ ಬ್ರಾಡ್​ಕಾಸ್ಟ್ ಇಂಜಿನಿಯರ್ ಇಯಾನ್ ವಿಲಿಯಮ್ಸ್ ಲ್ಯಾಂಗ್‌ಫೋರ್ಡ್ (76) ಅವರು ಮೃತಪಟ್ಟಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಪಂದ್ಯದ ಬಳಿಕ ಮುಂಬೈನ ಹೋಟೆಲ್ ಕೊಠಡಿಗೆ ಮರಳಿದ್ದ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆಯ ಹಿನ್ನೆಲೆ:

ಇಯಾನ್ ವಿಲಿಯಮ್ಸ್ ಅವರು ಬಿಸಿಸಿಐ ಪರವಾಗಿ ಐಪಿಎಲ್ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮಾರ್ಚ್ 29ರ ಭಾನುವಾರ ರಾತ್ರಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್  ನಡುವಿನ ಪಂದ್ಯದ ಕರ್ತವ್ಯ ಮುಗಿಸಿ ಅವರು ದಕ್ಷಿಣ ಮುಂಬೈನ ನರಿಮನ್ ಪಾಯಿಂಟ್‌ನಲ್ಲಿರುವ ಟ್ರೈಡೆಂಟ್ ಹೋಟೆಲ್‌ಗೆ ಮರಳಿದ್ದರು. ಅವರು ಮಾರ್ಚ್ 24 ರಿಂದ ಇದೇ ಹೋಟೆಲ್‌ನ 2715ನೇ ಸಂಖ್ಯೆಯ ಕೊಠಡಿಯಲ್ಲಿ ತಂಗಿದ್ದರು.

ಮಾರ್ಚ್ 30ರ ಸೋಮವಾರ ಬೆಳಿಗ್ಗೆ, ಹೋಟೆಲ್ ಸಿಬ್ಬಂದಿ ಲ್ಯಾಂಗ್‌ಫೋರ್ಡ್ ಅವರ ಕೊಠಡಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅನುಮಾನಗೊಂಡ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೊಠಡಿಯನ್ನು ತೆರೆದಾಗ, ಅವರು ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಹೋಟೆಲ್‌ನ ವೈದ್ಯರನ್ನು ಕರೆಯಿಸಲಾಯಿತು, ಈ ವೇಳೆ ಅವರು ಲ್ಯಾಂಗ್‌ಫೋರ್ಡ್ ಮೃತಪಟ್ಟಿರುವುದನ್ನು ಖಚಿತಪಡಿಸಿದರು. ನಂತರ ಅವರನ್ನು ಮುಂಬೈನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದರು.

ಪೊಲೀಸ್ ತನಿಖೆ ಮತ್ತು ಪ್ರಾಥಮಿಕ ವರದಿ:

ಮುಂಬೈನ ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಆಕಸ್ಮಿಕ ಸಾವು (ADR – Accidental Death Report) ಪ್ರಕರಣ ದಾಖಲಾಗಿದೆ.

  • ಅನುಮಾನಾಸ್ಪದ ಅಂಶಗಳಿಲ್ಲ: ಪ್ರಾಥಮಿಕ ತನಿಖೆಯ ಪ್ರಕಾರ, ಕೊಠಡಿಯಲ್ಲಿ ಯಾವುದೇ ಅಸಹಜ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
  • ಆರೋಗ್ಯ ಸಮಸ್ಯೆ: 76 ವರ್ಷ ವಯಸ್ಸಿನ ಇಯಾನ್ ಅವರು ವಯೋಸಹಜ ಆರೋಗ್ಯ ಸಮಸ್ಯೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
  • ಮರಣೋತ್ತರ ಪರೀಕ್ಷೆ: ಸಾವಿನ ನಿಖರ ಕಾರಣ ತಿಳಿಯಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಲ್ಯಾಂಗ್‌ಫೋರ್ಡ್ ವೃತ್ತಿಜೀವನ:

ಇಯಾನ್ ವಿಲಿಯಮ್ಸ್ ಲ್ಯಾಂಗ್‌ಫೋರ್ಡ್ ಅವರು ದಶಕಗಳಿಂದ ಕ್ರೀಡಾ ಪ್ರಸಾರ ಕ್ಷೇತ್ರದಲ್ಲಿ ಅನುಭವ ಹೊಂದಿದ್ದ ತಂತ್ರಜ್ಞರಾಗಿದ್ದರು. ಐಪಿಎಲ್‌ನಂತಹ ಬೃಹತ್ ಟೂರ್ನಿಗಳ ತಾಂತ್ರಿಕ ಗುಣಮಟ್ಟವನ್ನು ಕಾಪಾಡುವಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ಇದೀಗ ಅವರ ಸಾವು ಕ್ರೀಡಾ ಪ್ರಸಾರ ಕ್ಷೇತ್ರದಲ್ಲಿ ತುಂಬಲಾರದ ನಷ್ಟ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಇನ್ನು ಈ ಸಾವಿನ ಕುರಿತು ಪೊಲೀಸರು ಈಗಾಗಲೇ ಬ್ರಿಟಿಷ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದು, ಅವರ ಕುಟುಂಬದ ಸದಸ್ಯರಿಗೆ ಈ ಸಂಬಂಧ ಸಂದೇಶ ರವಾನಿಲಾಗಿದೆ.

 

Source link

ಒಂದು ಪೈರಸಿ ಲಿಂಕ್​​ನಿಂದ ಬಾಲಿವುಡ್​​ಗೆ ಆಯ್ತು ಸಾವಿರಾರು ಕೋಟಿ ಲಾಭ

ಚಿತ್ರರಂಗದವರ ಮೊದಲ ಶತ್ರು ಎಂದರೆ ಪೈರಸಿ (Piracy), ಅದರಿಂದ ಸಾವಿರಾರು ಕೋಟಿ ನಷ್ಟವಾಗುತ್ತಿದೆ ಎಂದು ದೂರುತ್ತಲೇ ಇರುತ್ತಾರೆ ಚಿತ್ರರಂಗದವರು. ಆದರೆ ಅದೇ ಒಂದು ಪೈರಸಿ ಲಿಂಕಿನಿಂದಾಗಿ ಭಾರತೀಯ ಚಿತ್ರರಂಗಕ್ಕೆ ವಿಶೇಷವಾಗಿ ಬಾಲಿವುಡ್​​ಗೆ ಈ ವರೆಗೆ ಸುಮಾರು 5000 ಕೋಟಿ ಲಾಭ ಆಗಿದೆ. ಲಕ್ಷಾಂತರ ಕೋಟಿ ಲಾಭದ ಅವಕಾಶ ತೆರೆದುಕೊಂಡಿದೆ ಎಂಬುದು ಗೊತ್ತೆ? ಅದು ಹೇಗೆ ಸಾಧ್ಯ? ವಿವರ ಇಲ್ಲಿದೆ ನೋಡಿ…

ಚೀನಾ, ವಿಶ್ವದ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಗಳಲ್ಲಿ ಒಂದು. ಚೀನಾ ಒಂದರಲ್ಲೇ 90 ಸಾವಿರಕ್ಕೂ ಹೆಚ್ಚು ಸ್ಕ್ರೀನ್​​ಗಳು ಇವೆ. ಭಾರತಕ್ಕಿಂತಲೂ ಬಹಳ ಹೆಚ್ಚು ಮಂದಿ ಇಲ್ಲಿ ಸಿನಿಮಾ ನೋಡುತ್ತಾರೆ. ಆದರೆ ಭಾರತದ ಸಿನಿಮಾಗಳು ಚೀನಾದಲ್ಲಿ ಬಿಡುಗಡೆ ಆಗುತ್ತಿದ್ದಿದ್ದೇ ಬಹಳ ಕಡಿಮೆ. 1951ರಲ್ಲಿ ರಾಜ್ ಕಪೂರ್ ಅವರ ‘ಆವಾರ’ ಸಿನಿಮಾ ಇಲ್ಲಿ ‘ಸಾಂಸ್ಕೃತಿಕ ವಿನಿಮಯ’ ಯೋಜನೆಯಡಿ ಪ್ರದರ್ಶನಗೊಂಡು ದೊಡ್ಡ ಹಿಟ್ ಆಗಿತ್ತು. ಇದೇ ಸಿನಿಮಾ ರಷ್ಯಾ, ಜಪಾನ್​​ಗಳಲ್ಲಿಯೂ ಭಾರಿ ದೊಡ್ಡ ಹಿಟ್ ಆಗಿತ್ತು. ಆದರೆ ಈ ಆ ಬಳಿಕ ಚೀನಾದಲ್ಲಿ ಭಾರತೀಯ ಸಿನಿಮಾಗಳು ಹೆಚ್ಚು ಸದ್ದು ಮಾಡಿರಲಿಲ್ಲ. ಆದರೆ 2009-10ರಲ್ಲಿ ಚಿತ್ರಣವೇ ಬದಲಾಯ್ತು. ಅದೂ ಒಂದು ಪೈರಸಿ ಲಿಂಕ್​​ನಿಂದ.

2009 ರಲ್ಲಿ ಆಮಿರ್ ಖಾನ್ ನಟನೆಯ ‘3 ಇಡಿಯಟ್ಸ್’ ಸಿನಿಮಾ ಬಿಡುಗಡೆ ಆಯ್ತು. ಭಾರತದಲ್ಲಿ ಇದು ದೊಡ್ಡ ಹಿಟ್, ಚೈನಾದಲ್ಲಿ ಸಿನಿಮಾ ಬಿಡುಗಡೆ ಆಗಲಿಲ್ಲ. ಆದರೆ ಅಲ್ಲಿನ ಕಾಲೇಜೊಂದರಲ್ಲಿ ಈ ಸಿನಿಮಾವನ್ನು ಪೈರಸಿ ಲಿಂಕ್ ಮೂಲಕ ಡೌನ್​​ಲೋಡ್ ಮಾಡಿಕೊಂಡು ಕೆಲವು ಭಾರತೀಯ ವಿದ್ಯಾರ್ಥಿ ನೋಡಿದರು. ಅದು ಹಾಗೆಯೇ ಹಬ್ಬಿತು. ಯಾವ ಮಟ್ಟಿಗಾಯ್ತೆಂದರೆ ‘3 ಇಡಿಯಟ್ಸ್’ ಸಿನಿಮಾ ಚೀನಾನಲ್ಲಿ ಬಿಡುಗಡೆ ಆಗದಿದ್ದರೂ ಸಹ ಈಗಲೂ ಚೀನಾದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ‘3 ಇಡಿಯಟ್ಸ್’ 12ನೇ ಸ್ಥಾನದಲ್ಲಿ ಇದೆ. ಭಾರತದ ರೀತಿಯಲ್ಲೇ ಮಕ್ಕಳನ್ನು ಶಿಕ್ಷಣಕ್ಕಾಗಿ ಅತಿಯಾಗಿ ಒತ್ತಾಯ ಮಾಡುವ, ಬಲವಂತದ ಶಿಸ್ತು ಹೇರುವ ದೇಶ ಚೀನಾ, ಇದರ ವಿರುದ್ಧ ಮಾತನಾಡುವ ‘3 ಇಡಿಯಟ್ಸ್’ ಸಿನಿಮಾ ಸಹಜವಾಗಿಯೇ ಅಲ್ಲಿನ ಜನರಿಗೆ ಬಹಳ ಇಷ್ಟವಾಯ್ತು.

ಇದನ್ನೂ ಓದಿ:ಚೀನಾದ ಡೆಹುವಾದಲ್ಲಿ ಭೀಕರ ಅಗ್ನಿ ಅವಘಡ

ಆಮಿರ್ ಖಾನ್ ಅವರು ಚೀನಾದ ದೊಡ್ಡ ಸ್ಟಾರ್ ಆಗಿಬಿಟ್ಟರು. ಚೀನಾ ಜನ ಆಮಿರ್ ಅವರನ್ನು ‘ಅಂಕಲ್ ಆಮಿರ್’ ಎಂದೇ ಕರೆಯುತ್ತಾರೆ. ಚೀನಾದಲ್ಲಿ ಸೃಷ್ಟಿಯಾಗಿರುವ ತಮ್ಮ ಜನಪ್ರಿಯತೆಯಿಂದಾಗಿ ಆಮಿರ್ ತಮ್ಮ ಮುಂದಿನ ಸಿನಿಮಾ ‘ಪಿಕೆ’ಯನ್ನು ಅಲ್ಲಿ ರಿಲೀಸ್ ಮಾಡಿದರು. ಆ ಸಿನಿಮಾ ಸುಮಾರು 100 ಕೋಟಿ ಮಾಡಿತು. ಆದರೆ ಅದಾದ ಬಳಿಕ ‘ದಂಗಲ್’ ಸಿನಿಮಾ ಬಿಡುಗಡೆ ಮಾಡಿದರು. ಅದು ಬ್ಲಾಕ್ ಬಸ್ಟರ್ ಆಯ್ತು. ಭಾರತದಲ್ಲಿ ಮತ್ತು ಇಡೀ ವಿಶ್ವದಲ್ಲಿ ಸಿನಿಮಾ ಗಳಿಕೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಹಣವನ್ನು ‘ದಂಗಲ್’ ಸಿನಿಮಾ ಕೇವಲ ಚೀನಾನಲ್ಲಿ ಮಾತ್ರವೇ ಗಳಿಕೆ ಮಾಡಿದೆ. ಇದೇ ಕಾರಣಕ್ಕೆ 2016 ರಿಂದ ಈಗಿನ ವರೆಗೆ ‘ದಂಗಲ್’ ಭಾರತದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ‘ಬಾಹುಬಲಿ’, ‘ಧುರಂಧರ್’ ಸಹ ಅದನ್ನು ಬ್ರೇಕ್ ಮಾಡಲು ಆಗಿಲ್ಲ.

‘ದಂಗಲ್’ ಹಿಟ್ ಆಗಲು ಸಹ ಕಾರಣ ಇತ್ತು. ಚೀನಾದ ಸಿಂಗಲ್ ಚೈಲ್ಡ್ ಪಾಲಿಸಿಯಿಂದಾಗಿ ಅಲ್ಲಿ ಹೆಣ್ಣು ಮಕ್ಕಳ ಪೋಷಕರಾದವರನ್ನು ಸಮಾಜ ತುಚ್ಛವಾಗಿ ನೋಡುತ್ತಿತ್ತು, ಆದರೆ ‘ದಂಗಲ್’ನಲ್ಲಿ ಆಮಿರ್, ಹೆಣ್ಣು ಮಕ್ಕಳನ್ನೇ ಗಂಡು ಮಕ್ಕಳಂತೆ ಬೆಳೆಸಿದ ಸಿನಿಮಾ ಸಹಜವಾಗಿಯೇ ಚೀನಾದ ಪೋಷಕರಿಗೆ ಭಾರಿ ಇಷ್ಟವಾಯ್ತು. ಸಿನಿಮಾ ಭಾರಿ ದೊಡ್ಡ ಗಳಿಕೆ ಮಾಡಿದೆ. ಆಮಿರ್, ಚೀನಾದಲ್ಲಿ ಇನ್ನೂ ದೊಡ್ಡ ಸ್ಟಾರ್ ಆಗಿಬಿಟ್ಟರು. ಬಳಿಕ ಆಮಿರ್ ಅವರ ‘ಸೀಕ್ರೆಟ್ ಸೂಪರ್​​ಸ್ಟಾರ್’ ಭಾರತದಲ್ಲಿ ಫ್ಲಾಪ್ ಆಯ್ತು, ಆದರೆ ಚೀನಾದಲ್ಲಿ ದೊಡ್ಡ ಹಿಟ್.

ಕೇವಲ ಆಮಿರ್ ಸಿನಿಮಾ ಮಾತ್ರವಲ್ಲ, ಎಲ್ಲ ಒಳ್ಳೆಯ ಭಾರತೀಯ ಸಿನಿಮಾಗಳನ್ನು ಚೀನಾ ಜನ ನೋಡಲು ಆರಂಭಿಸಿದರು. ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸಿನಿಮಾ ಚೀನಾ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ ಅನ್ನೇ ಮಾಡಿತು. 500 ಕೋಟಿಗೂ ಹೆಚ್ಚು ಮೊತ್ತವನ್ನು ಆ ಸಿನಿಮಾ ಚೀನಾನಲ್ಲಿ ಗಳಿಕೆ ಮಾಡಿತು. ಭಾರತದಲ್ಲಿ ಫ್ಲಾಪ್ ಆದ ‘ಹಿಂದಿ ಮೀಡಿಯಂ’ ಸಿನಿಮಾ ಸಹ ಚೀನಾದಲ್ಲಿ ದೊಡ್ಡ ಹಿಟ್, ಏಕೆಂದರೆ ಅದು ಇಂಗ್ಲೀಷ್ ಭಾಷೆಯ ಕಲಿಕೆ, ಪೋಷಕರು ಮತ್ತು ಮಕ್ಕಳ ನಡುವಿನ ಕತೆ ಹೊಂದಿತ್ತು.

ಸಲ್ಮಾನ್ ಖಾನ್ ನಟನೆಯ ‘ಭಜರಂಗಿ ಭಾಯಿಜಾನ್’, ‘ಅಂದಾಧುನ್’, ‘ಟಾಯ್ಲೆಟ್: ಏಕ್ ಪ್ರೇಮ್​​ಕಥಾ’ ಇನ್ನೂ ಹಲವು ಸಿನಿಮಾಗಳು ಚೀನಾನಲ್ಲಿ ಭಾರಿ ದೊಡ್ಡ ಹಿಟ್ ಆದವು. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಪೈರಸಿ ಲಿಂಕ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Hanuman Jayanti 2026: ಏಪ್ರಿಲ್ 02 ಹನುಮ ಜಯಂತಿ; ಈ ದಿನ ತಪ್ಪದೇ ಈ ಸರಳ ಪರಿಹಾರ ಅನುಸರಿಸಿ!

ಹಿಂದೂ ಧರ್ಮದಲ್ಲಿ ಚೈತ್ರ ಮಾಸದ ಹುಣ್ಣಿಮೆಗೆ ಅಪಾರ ಪ್ರಾಮುಖ್ಯತೆಯಿದೆ. ಪುರಾಣಗಳ ಪ್ರಕಾರ, ಶ್ರೀರಾಮನ ಪರಮ ಭಕ್ತ ಹನುಮಂತನು ಜನಿಸಿದ ಈ ಪವಿತ್ರ ದಿನವನ್ನು ‘ಹನುಮ ಜಯಂತಿ‘ ಅಥವಾ ‘ಹನುಮಾನ್ ಜನ್ಮೋತ್ಸವ’ ಎಂದು ದೇಶಾದ್ಯಂತ ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 2 ರಂದು ಹನುಮಾನ್ ಜಯಂತಿ ಬಂದಿದ್ದು, ಈ ದಿನದಂದು ಬಜರಂಗಬಲಿಯನ್ನು ಆರಾಧಿಸುವುದರಿಂದ ಜೀವನದ ಸಕಲ ಭಯ ಹಾಗೂ ಕಷ್ಟಗಳು ದೂರವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ. ವಿಶೇಷವಾಗಿ ಜಾತಕದಲ್ಲಿರುವ ಮಂಗಳ ದೋಷದ ಪ್ರಭಾವವನ್ನು ತಗ್ಗಿಸಲು ಈ ದಿನದ ಪೂಜೆ ಅತ್ಯಂತ ಫಲಪ್ರದವಾಗಿದೆ.

ಹನುಮಾನ್ ಜಯಂತಿಯಂದು ಕೆಲವು ವಿಶೇಷ ಧಾರ್ಮಿಕ ಕ್ರಮಗಳನ್ನು ಕೈಗೊಳ್ಳುವುದರಿಂದ ಗ್ರಹಗತಿಗಳ ಅಶುಭ ಫಲಗಳನ್ನು ದೂರ ಮಾಡಬಹುದು. ಅಂತಹ ಕೆಲವು ಪರಿಣಾಮಕಾರಿ ಪರಿಹಾರಗಳು ಇಲ್ಲಿವೆ:

ಸಿಂಧೂರ ಮತ್ತು ಮಲ್ಲಿಗೆ ಎಣ್ಣೆ ಸಮರ್ಪಣೆ:

ಹನುಮಂತನಿಗೆ ಮಲ್ಲಿಗೆ ಎಣ್ಣೆಯಲ್ಲಿ ಬೆರೆಸಿದ ಸಿಂಧೂರವನ್ನು (ಚೋಳ) ಅರ್ಪಿಸುವುದು ಅತ್ಯಂತ ಶ್ರೇಷ್ಠ. ಇದು ಮಂಗಳ ಗ್ರಹದ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಿ, ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ.

ಸುಂದರಕಾಂಡ ಪಠಣೆ:

ಈ ದಿನ ಸುಂದರಕಾಂಡವನ್ನು ಪಠಿಸುವುದರಿಂದ ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಮಾಡಿದ ಪಾಪಕರ್ಮಗಳು ದೂರವಾಗಿ ಶಾಂತಿ ಲಭಿಸುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ರಾಮ ನಾಮ ಜಪ:

ಹನುಮಂತನಿಗೆ ರಾಮ ನಾಮವೆಂದರೆ ಅತ್ಯಂತ ಪ್ರಿಯ. ಆದ್ದರಿಂದ “ರಾಮ್-ರಾಮ್” ಎಂದು 108 ಬಾರಿ ಜಪಿಸುವುದರಿಂದ ಹನುಮಂತನ ಕೃಪೆ ಬೇಗನೆ ದೊರೆಯುತ್ತದೆ ಮತ್ತು ಮಂಗಳ ದೋಷ ನಿವಾರಣೆಯಾಗುತ್ತದೆ.

ನೈವೇದ್ಯ ಮತ್ತು ದಾನ:

ಬಜರಂಗಬಲಿಗೆ ಕೆಂಪು ಗುಲಾಬಿ ಹಾಗೂ ಬೂಂದಿ ಅಥವಾ ಕಡಲೆಹಿಟ್ಟಿನ ಲಡ್ಡುಗಳನ್ನು ಅರ್ಪಿಸುವುದು ಮಂಗಳ ಗ್ರಹವನ್ನು ಶಾಂತಗೊಳಿಸಲು ಸಹಕಾರಿ. ಇದರೊಂದಿಗೆ ಅಗತ್ಯವಿರುವವರಿಗೆ ಕೆಂಪು ಬೇಳೆ ಮತ್ತು ಬೆಲ್ಲವನ್ನು ದಾನ ಮಾಡುವುದರಿಂದ ಗ್ರಹಗಳ ಋಣಾತ್ಮಕ ಪರಿಣಾಮಗಳು ದೂರವಾಗುತ್ತವೆ.

ಬಜರಂಗ ಬಾಣ ಮತ್ತು ಹನುಮಾನ್ ಚಾಲೀಸಾ:

ಮದುವೆಯಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ಭಕ್ತಿಯಿಂದ ಬಜರಂಗ ಬಾಣ ಪಠಿಸಬೇಕು. ಹಾಗೆಯೇ ದೇವಸ್ಥಾನಕ್ಕೆ ಭೇಟಿ ನೀಡಿ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗಿ ಧನಾತ್ಮಕತೆ ನೆಲೆಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐವರು ಮಹಿಳೆಯರಿಂದ ಥಿಯೇಟರ್‌ ಮಾಲೀಕನ ಸುಲಿಗೆ: ಬ್ಲ್ಯಾಕ್​​ಮೇಲ್​​ ಮಾಡಿ ಪೀಕಿದ್ದು 25 ಲಕ್ಷ ರೂ.!

ರಾಮನಗರ, ಮಾರ್ಚ್​​ 31:  ಐದು ಮಹಿಳೆಯರ ಗುಂಪೊಂದು ಬೆದರಿಸಿ ಚಿತ್ರಮಂದಿರದ ಮಾಲೀಕರೊಬ್ಬರಿಂದ 25 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಬಗ್ಗೆ ಪಟ್ಟಣದ ಅಗ್ರಹಾರ ಬಡಾವಣೆ ನಿವಾಸಿಯಾಗಿರುವ 52 ವರ್ಷದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಏಳು ವರ್ಷಗಳ ಹಿಂದೆ ಪತ್ನಿ ದೂರವಾದ ಬಳಿಕ ಅವರು ಒಬ್ಬರೇ ವಾಸವಾಗಿದ್ದರು. ತಾಯಿ-ತಂದೆ ಅಥವಾ ಮಕ್ಕಳು ಯಾರೂ ಅವರಿಗೆ ಇಲ್ಲ. ಈ ನಡುವೆ ಆರೋಪಿಗಳ ಪೈಕಿ ಓರ್ವಳು ಮೊದಲು ಮದುವೆಯಾಗುವ ಆಸೆ ವ್ಯಕ್ತಪಡಿಸಿ ಸಂತ್ರಸ್ತರನ್ನು ಸಂಪರ್ಕಿಸಿದ್ದಳು. ಬಳಿಕ ಉಳಿದ ನಾಲ್ವರ ಪರಿಚಯವಾಗಿತ್ತು ಎನ್ನಲಾಗಿದೆ. ಆದರೆ ಬ್ಲ್ಯಾಕ್‌ಮೇಲ್‌ನ ನಿಖರ ಕಾರಣ ಏನೆಂಬುದು ತನಿಖೆ ಬಳಿಕ ಸ್ಪಷ್ಟವಾಗಬೇಕಿದೆ.

ಸಂತ್ರಸ್ತ ವ್ಯಕ್ತಿ ನೀಡಿರುವ ದೂರಿನ ಪ್ರಕಾರ, ಆರೇಳು ತಿಂಗಳ ಹಿಂದೆ ಕೋಟಿಪುರ ಪ್ರದೇಶದ ಮಹಿಳೆ ಸಿನಿಮಾ ನೋಡುವ ನೆಪದಲ್ಲಿ ಅವರ ಥಿಯೇಟರ್‌ಗೆ ಬಂದಿದ್ದಳು. ತನ್ನನ್ನು ಪರಿಚಯಿಸಿಕೊಂಡು ಮದುವೆಯಾಗಲು ಇಚ್ಛೆ ಇದೆ ಎಂದು ಹೇಳಿದ್ದಳು. ಆದರೆ ಇವರು ಅದನ್ನು ನಿರಾಕರಿಸಿದ ನಂತರ, ಆಕೆ ಮತ್ತಿಬ್ಬರು ಮಹಿಳೆಯರೊಂದಿಗೆ ಮತ್ತೆ ಭೇಟಿ ನೀಡಿದ್ದಳು. ಬಳಿಕ ವಿವಿಧ ನೆಪಗಳಲ್ಲಿ ಬೆದರಿಕೆ ಹಾಕಿ ಹಣ ಹಾಗೂ ಚಿನ್ನವನ್ನು ಪಡೆದುಕೊಳ್ಳಲು ಆರೋಪಿಗಳು ಯತ್ನಿಸಿದ್ದರು. ಮೊದಲು ಚಿಕ್ಕ ಮೊತ್ತಗಳನ್ನು ಪಡೆದುಕೊಳ್ಳುತ್ತಿದ್ದ ಆರೋಪಿಗಳು, ನಂತರ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಂತ್ರಸ್ತ ವ್ಯಕ್ತಿ ಒಪ್ಪದಿದ್ದಾಗ ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 500 ಗ್ರಾಂ ಚಿನ್ನಾಭರಣಗಳನ್ನು ಕೂಡ ಆರೋಪಿ ಮಹಿಳೆಯರು ಪೀಕಿರೋದಾಗಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಕೌಟಿಂಬಿಕ ಕಲಹ; ಬೆಂಕಿ ಹಚ್ಚಿಕೊಂಡು ರಾಮನಗರದಲ್ಲಿ 5 ತಿಂಗಳ ಗರ್ಭಿಣಿ ಆತ್ಮಹತ್ಯೆ

ಇದರ ಜೊತೆಗೆ ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ ಆನ್‌ಲೈನ್‌ನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಇಜೂರು ಪೊಲೀಸ್ ಠಾಣೆಯಲ್ಲಿ BNS 308 ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಐದು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ 52 ವರ್ಷದ ವ್ಯಕ್ತಿಯು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಗೆ 15 ದಿನಗಳ ಕಾಲ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎಂಬ ವಿಚಾರವೂ ಈ ವೇಳೆ ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link