All posts by nagaraj11081993

ಓವರ್‌ ಆ್ಯಕ್ಟಿಂಗ್ ಮಾಡಿದ್ರೆ 50 ಪೈಸೆ ಕಟ್ ಮಾಡ್ತೀವಿ: ರಿಝ್ವಾನ್ ಫುಲ್ ಟ್ರೋಲ್! – Kannada News | Bangladesh Players Trolls Mohammad Rizwan

ಸಿಲ್ಹೆಟ್‌ನಲ್ಲಿ ನಡೆದ ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಹೈ-ಡ್ರಾಮಾ ನಡೆದಿದೆ. ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಅವರ ವರ್ತನೆಗೆ ಬೇಸತ್ತ ಬಾಂಗ್ಲಾದೇಶ್ರ ಆಟಗಾರರು, ಬಾಲಿವುಡ್‌ನ ಪ್ರಸಿದ್ಧ ‘ಹೇರಾ ಫೇರಿ’ ಸಿನಿಮಾದ ಡೈಲಾಗ್ ಬಳಸಿ ಮೈದಾನದಲ್ಲೇ ಕಾಲೆಳೆದಿದ್ದಾರೆ.

 ಮೊಹಮ್ಮದ್ ರಿಝ್ವಾನ್ ಟ್ರೋಲ್:

ಪಾಕಿಸ್ತಾನ್ ತಂಡವು 437 ರನ್‌ಗಳ ಬೃಹತ್ ಗುರಿ ಬೆನ್ನಟ್ಟುತ್ತಿದ್ದಾಗ, 72ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಬೌಲಿಂಗ್ ಮಾಡಲು ಬಂದರು. ಈ ವೇಳೆ ಸೈಟ್‌ಸ್ಕ್ರೀನ್ ಬಳಿ ಏನೋ ತೊಂದರೆಯಾಗಿದೆ ಎಂದು ರಿಝ್ವಾನ್ ಕೊನೆ ಕ್ಷಣದಲ್ಲಿ ಕ್ರೀಸ್​ನಿಂದ ಹಿಂದೆ ಸರಿದರು.

ರಿಝ್ವಾನ್ ಪದೇ ಪದೇ ಹೀಗೆ ಸಮಯ ವ್ಯರ್ಥ ಮಾಡುತ್ತಿರುವುದನ್ನು ಕಂಡು ಸಿಟ್ಟಾದ ಬಾಂಗ್ಲಾದೇಶ್ ವಿಕೆಟ್ ಕೀಪರ್ ಲಿಟನ್ ದಾಸ್, “ನಿಮ್ಮ ಸಮಸ್ಯೆಯಾದರೂ ಏನು? ನಿರಂತರವಾಗಿ ಬೌಲರ್‌ಗೆ ತೊಂದರೆ ಕೊಡುತ್ತಿದ್ದೀರಿ” ಎಂದು ಆಕ್ರೋಶ ಹೊರಹಾಕಿದರು.

ಇದರೊಂದಿಗೆ ಮೊಹಮ್ಮದ್ ರಿಝ್ವಾನ್ ಹಾಗೂ ಲಿಟ್ಟನ್ ದಾಸ್ ನಡುವೆ ಮಾತಿನ ಚಕಮಕಿ ಶುರುವಾಯಿತು. ಈ ವೇಳೆ ಅಂಪೈರ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆದರೆ ಆ ಬಳಿಕ ಶುರುವಾಗಿದ್ದೇ ಅಸಲಿ ಟ್ರೋಲ್.

“50 ರನ್ ಮುಗಿಯಿತು, ಇನ್ನು ಆ್ಯಕ್ಟಿಂಗ್ ಶುರು” ಎಂದು ಲಿಟ್ಟನ್ ದಾಸ್ ರಿಝ್ವಾನ್​ಗೆ ಟಾಂಗ್ ನೀಡಿದರು. ಇನ್ನು ಕೇಳಿಸಿಕೊಂಡ ಪಾಕ್ ಆಟಗಾರ ಓವರ್ ಮುಗಿದ ನಂತರ ಅಂಪೈರ್‌ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Vaibhav Sooryavanshi: ಸರ್, ಅದರ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ಲ..!

ಇದೇ ಸಮಯವನ್ನು ಬಳಸಿಕೊಂಡ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂತೊ ಮತ್ತು ಇತರ ಫೀಲ್ಡರ್‌ಗಳು ರಿಝ್ವಾನ್ ಅವರ ಕಾಲೆಳೆಯಲು ಬಾಲಿವುಡ್ ಡೈಲಾಗ್‌ಗಳನ್ನು ಬಳಸಿದ್ದಾರೆ.

  • “ಹಮ್ ಇಸ್ ಓವರ್‌ ಆಕ್ಟಿಂಗ್ ಕಾ ಫಿಫ್ಟಿ ಪೈಸಾ ಕಾಟೇಂಗೆ!” (ಈ ಓವರ್‌ ಆ್ಯಕ್ಟಿಂಗ್​ಗೆ ನಾವು 50 ಪೈಸೆ ಕಟ್ ಮಾಡ್ತೀವಿ! – ಹೇರಾ ಫೇರಿ ಸಿನಿಮಾ ಡೈಲಾಗ್)
  •  “ಬಾಲಿವುಡ್ ಮೇ ಜಗಾ ನಹೀ ಹೈ!” (ನಿಮಗೆ ಬಾಲಿವುಡ್‌ನಲ್ಲಿ ಜಾಗ ಸಿಗಲ್ಲ!)
  •  “ಅಚ್ಛಾ ಆ್ಯಕ್ಟಿಂಗ್ ಕರ್ ರಹಾ ಹೈ, ಸಬ್ಕೋ ಸಿಖಾ ರಹಾ ಹೈ.” (ಚೆನ್ನಾಗಿ ಆ್ಯಕ್ಟಿಂಗ್ ಮಾಡ್ತಿದ್ದಾನೆ, ಎಲ್ಲರಿಗೂ ಹೇಳಿಕೊಡ್ತಿದ್ದಾನೆ.)

ಹೀಗೆ ಹಾಸ್ಯಮಯವಾಗಿ ಮೊಹಮ್ಮದ್ ರಿಝ್ವಾನ್ ಅವರನ್ನು ಕಾಲೆಳೆಯುವ ಮೂಲಕ ಬಾಂಗ್ಲಾದೇಶ್ ಆಟಗಾರರು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಒದಗಿಸಿದ್ದಾರೆ. ಇದೀಗ ಈ ಸ್ಲೆಡ್ಜಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಂಗ್ಲಾದೇಶ್ ಆಟಗಾರರ ಹಾಸ್ಯಪ್ರಜ್ಞೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

Published On – 1:40 pm, Wed, 20 May 26

Source link

ಬಾಲಕೃಷ್ಣ ಸಿನಿಮಾನಲ್ಲಿ ವಿಲನ್ ಆದ ‘ನಾಯಕ ನಟ’, ಭರ್ಜರಿ ಆಕ್ಷನ್ ನಿರೀಕ್ಷೆ – Kannada News | Manchu Manoj is getting ready to play villain in Nandamuri Balakrishna’s movie

ನಂದಮೂರಿ ಬಾಲಕೃಷ್ಣ (Nandamuri Balakrishna) ತಮ್ಮ 111ನೇ ಸಿನಿಮಾನಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡಲಿದ್ದು, ಅದ್ಧೂರಿ ಆಕ್ಷನ್ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ವಿಶೇಷವೆಂದರೆ ಈ ಸಿನಿಮಾಕ್ಕೆ ತೆಲುಗು ಚಿತ್ರರಂಗದಲ್ಲಿ ನಾಯಕನಾಗಿ ಹೆಸರು ಮಾಡಿದ್ದ ನಟನನ್ನು ವಿಲನ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಬಾಲಯ್ಯ ಎದುರು ಮಂಚು ಮನೋಜ್ ಅವರು ವಿಲನ್ ಆಗಿ ನಟಿಸಲಿದ್ದಾರೆ.

ಇಂದು (ಮೇ 20) ಮಂಚು ಮನೋಜ್ ಅವರ ಜನ್ಮದಿನವಾಗಿದ್ದು, ವಿಶೇಷ ಸಂದರ್ಭದಲ್ಲಿ ಚಿತ್ರತಂಡವು ಈ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ಚಿತ್ರವನ್ನು ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಅವರು ಅತ್ಯಂತ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ಮನೋಜ್ ಅವರಿಗಾಗಿ ಅತ್ಯಂತ ಕ್ರೂರ ಹಾಗೂ ಪವರ್‌ಫುಲ್ ಆದ ನೆಗೆಟಿವ್ ಪಾತ್ರವನ್ನು ಸೃಷ್ಟಿಸಿದ್ದು, ಕಥೆ ಕೇಳಿದ ತಕ್ಷಣವೇ ಮನೋಜ್ ಈ ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರಂತೆ.

ಈ ವಿಶೇಷ ಪಾತ್ರಕ್ಕಾಗಿ ಮಂಚು ಮನೋಜ್ ದೊಡ್ಡ ಮಟ್ಟದ ದೈಹಿಕ ಬದಲಾವಣೆಗೆ ಒಳಗಾಗುತ್ತಿದ್ದಾರೆ. ದೇಹವನ್ನು ಇನ್ನಷ್ಟು ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಶರವೇಗದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಆದಷ್ಟು ಬೇಗ ಮನೋಜ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಬೆಳ್ಳಿತೆರೆಯ ಮೇಲೆ ನಂದಮೂರಿ ಬಾಲಕೃಷ್ಣ ಮತ್ತು ಮಂಚು ಮನೋಜ್ ಅವರ ನಡುವಿನ ಮುಖಾಮುಖಿ ಮತ್ತು ಇಬ್ಬರ ರಗಡ್ ಎನರ್ಜಿ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ತಮ್ಮದೇ ಮಿಮಿಕ್ರಿ ನೋಡಿ ಖುಷಿ ಪಟ್ಟ ನಂದಮೂರಿ ಬಾಲಕೃಷ್ಣ: ವಿಡಿಯೋ ನೋಡಿ

ವಾಸ್ತವದಲ್ಲಿ ಬಾಲಕೃಷ್ಣ ಮತ್ತು ಮಂಚು ಮನೋಜ್ ನಡುವೆ ಅತ್ಯಂತ ಆಪ್ತವಾದ ಬಾಂಧವ್ಯವಿದೆ. ಈ ಹಿಂದೆ ಮಂಚು ಮನೋಜ್ ನಟನೆಯ ‘ಊ ಕೊಡತಾರಾ ಉಲಿಕ್ಕಿ ಪಡತಾರಾ’ ಚಿತ್ರದಲ್ಲಿ ಬಾಲಕೃಷ್ಣ ಅವರು ಪ್ರಮುಖ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರಕ್ಕೆ ದೊಡ್ಡ ಶಕ್ತಿ ತುಂಬಿದ್ದರು. ಈಗ ಬಾಲಯ್ಯ ಅವರ ಚಿತ್ರದಲ್ಲೇ ಮನೋಜ್ ವಿಲನ್ ಆಗಿ ನಟಿಸುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

ಈ ಪ್ರಾಜೆಕ್ಟ್‌ಗೆ ಆಯ್ಕೆಯಾಗಿರುವುದರ ಬಗ್ಗೆ ಮಂಚು ಮನೋಜ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಗಾಡ್ ಫಾದರ್, ಲಯನ್ ನಂದಮೂರಿ ಬಾಲಕೃಷ್ಣ ಅವರೊಂದಿಗೆ ನಟಿಸಬೇಕೆಂಬುದು ನನ್ನ ಹಲವು ವರ್ಷಗಳ ಕನಸಾಗಿತ್ತು. ಈ ಜನ್ಮದಿನದಂದು ನನಗೆ ಸಿಕ್ಕ ಅತ್ಯಂತ ಸುಂದರ ಉಡುಗೊರೆ ಇದಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ‘ಮಿರಾಯ್’ ಮತ್ತು ‘ಭೈರವಂ’ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಮಂಚು ಮನೋಜ್ ಈಗಾಗಲೇ ನಟಿಸಿದ್ದು, ಎರಡೂ ಸಿನಿಮಾಗಳಲ್ಲಿ ಅವರ ಪಾತ್ರ ಹಿಟ್ ಆಗಿದೆ. ಈಗ ಮತ್ತೊಮ್ಮೆ ದೊಡ್ಡ ಸಿನಿಮಾನಲ್ಲಿ ವಿಲನ್ ಆಗಿ ಮಿಂಚಲು ಬಾಲಯ್ಯ ರೆಡಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Solar Eclipse: ಆಗಸ್ಟ್ 12 ರಂದು ಸಂಭವಿಸಲಿದೆ ಸಂಪೂರ್ಣ ಸೂರ್ಯಗ್ರಹಣ; ಭಾರತದಲ್ಲಿ ಇದು ಗೋಚರಿಸುತ್ತಾ? – Kannada News | August 12, 2026 Total Solar Eclipse: Global Spectacle and Scientific Insights

ಖಗೋಳಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳಿಗೆ 2026ರ ವರ್ಷ ಅತ್ಯಂತ ರೋಮಾಂಚನಕಾರಿ ವರ್ಷವಾಗಿದೆ. ಈ ಒಂದೇ ವರ್ಷದಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣಗಳು ಸೇರಿದಂತೆ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸುತ್ತಿವೆ. ಕೆಲವು ಗ್ರಹಣಗಳು ಈಗಾಗಲೇ ಮುಗಿದಿದ್ದು, ಈಗ ವಿಶ್ವದಾದ್ಯಂತ ಎಲ್ಲರ ಕಣ್ಣು ಆಗಸ್ಟ್ 12 ರಂದು ಸಂಭವಿಸಲಿರುವ ವರ್ಷದ ಎರಡನೇ ಹಾಗೂ ಅತ್ಯಂತ ಪ್ರಮುಖ ಸಂಪೂರ್ಣ ಸೂರ್ಯಗ್ರಹಣ (Total Solar Eclipse) ಮೇಲಿದೆ.

ವಿಜ್ಞಾನ ಲೋಕದಲ್ಲಿ ಈ ಘಟನೆಯನ್ನು ಒಂದು ದೊಡ್ಡ ಹಬ್ಬದಂತೆ ಆಚರಿಸಲಾಗುತ್ತಿದೆ. ಈ ಗ್ರಹಣದ ಸಂಪೂರ್ಣ ಅವಧಿ ಸುಮಾರು 1 ನಿಮಿಷ 53 ಸೆಕೆಂಡುಗಳು ಇರಲಿದ್ದು, ಈ ಸಮಯದಲ್ಲಿ ಚಂದ್ರನು ಸೂರ್ಯನನ್ನು ಪೂರ್ಣವಾಗಿ ಮರೆಮಾಚಲಿದ್ದಾನೆ. ಪರಿಣಾಮವಾಗಿ ಭೂಮಿಯ ಕೆಲವು ಭಾಗಗಳಲ್ಲಿ ಹಗಲಿನಲ್ಲೇ ದಟ್ಟ ಕತ್ತಲೆ ಆವರಿಸಲಿದೆ!

ಈ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?

ಆಗಸ್ಟ್ 12 ರ ಈ ಭವ್ಯ ಖಗೋಳ ವಿದ್ಯಮಾನವು ಮುಖ್ಯವಾಗಿ ಉತ್ತರ ಗೋಳಾರ್ಧದ (Northern Hemisphere) ದೇಶಗಳಲ್ಲಿ ಕಂಡುಬರಲಿದೆ.

  • ಸಂಪೂರ್ಣ ಗ್ರಹಣ ಗೋಚರಿಸುವ ಪ್ರದೇಶಗಳು: ಆರ್ಕ್ಟಿಕ್ ಪ್ರದೇಶ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್ ಮತ್ತು ಸ್ಪೇನ್ ದೇಶದ ಕೆಲವು ಭಾಗಗಳ ಜನರಿಗೆ ಈ ಅದ್ಭುತ ದೃಶ್ಯ ಕಣ್ಣಿಗೆ ಕಟ್ಟಿದಂತೆ ಕಾಣಿಸಲಿದೆ.
  • ಭಾಗಶಃ ಗ್ರಹಣ ಗೋಚರಿಸುವ ಪ್ರದೇಶಗಳು: ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕದ ಬಹುತೇಕ ಭಾಗಗಳಲ್ಲಿ ಇದು ಭಾಗಶಃ ಸೂರ್ಯಗ್ರಹಣವಾಗಿ ಗೋಚರಿಸುತ್ತದೆ. ಕೆಲವು ಕಡೆಗಳಲ್ಲಿ ಸೂರ್ಯನ ಸುತ್ತಲೂ ಹೊಳೆಯುವ ಉಂಗುರದಂತಹ ಆಕೃತಿ ಕಾಣಿಸಲಿದ್ದು, ಇದನ್ನು ‘ಬೆಂಕಿಯ ಉಂಗುರ’ (Ring of Fire) ಎಂದು ಕರೆಯಲಾಗುತ್ತದೆ.

ಸಂಪೂರ್ಣ ಸೂರ್ಯಗ್ರಹಣದ ವೇಳೆ ಏನಾಗುತ್ತದೆ?

ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ನೇರವಾಗಿ ಬಂದು, ಸೂರ್ಯನ ಬೆಳಕು ಭೂಮಿಗೆ ಬೀಳದಂತೆ ಸಂಪೂರ್ಣವಾಗಿ ತಡೆದಾಗ ‘ಸಂಪೂರ್ಣ ಸೂರ್ಯಗ್ರಹಣ’ ಸಂಭವಿಸುತ್ತದೆ. ಈ ಸಮಯದಲ್ಲಿ ಪ್ರಕೃತಿಯಲ್ಲಿ ಕೆಲವು ಆಶ್ಚರ್ಯಕರ ಬದಲಾವಣೆಗಳಾಗುತ್ತವೆ. ಹಗಲು ವೇಳೆಯಲ್ಲೇ ದಿಢೀರನೆ ಕತ್ತಲೆ ಆವರಿಸಿ ರಾತ್ರಿಯ ವಾತಾವರಣ ನಿರ್ಮಾಣವಾಗುತ್ತದೆ. ವಾತಾವರಣದ ತಾಪಮಾನದಲ್ಲಿ ದಿಢೀರ್ ಇಳಿಕೆ ಕಂಡುಬರುತ್ತದೆ. ಆಕಾಶದಲ್ಲಿ ಹಗಲಿನಲ್ಲೇ ನಕ್ಷತ್ರಗಳು ಮತ್ತು ಗ್ರಹಗಳು ಕಣ್ಣಿಗೆ ಕಾಣಿಸುತ್ತವೆ.

ಸೂರ್ಯನ ಅತ್ಯಂತ ಹೊರಗಿನ ಪದರವಾದ ‘ಕರೋನಾ’ (Corona) ಈ ಸಮಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ವಿಜ್ಞಾನಿಗಳಿಗೆ ಸೂರ್ಯನ ವಾತಾವರಣವನ್ನು ಅಧ್ಯಯನ ಮಾಡಲು ಸಿಗುವ ಅತ್ಯುತ್ತಮ ಅವಕಾಶವಾಗಿದೆ.

ಈ ಗ್ರಹಣ ವಿಜ್ಞಾನಿಗಳಿಗೆ ಏಕೆ ಇಷ್ಟೊಂದು ವಿಶೇಷ?

ಸಾಮಾನ್ಯವಾಗಿ ಭೂಮಿಯ ಮೇಲೆ ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ಎಲ್ಲೋ ಒಂದು ಕಡೆ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಆದರೆ, ಅದು ಮನುಷ್ಯರು ವಾಸಿಸುವ ಜನನಿಬಿಡ ಪ್ರದೇಶಗಳಲ್ಲಿ ಗೋಚರಿಸುವುದು ತೀರಾ ಅಪರೂಪ. ಹೀಗಾಗಿ ಈ ಆಗಸ್ಟ್ 2026 ರ ಗ್ರಹಣಕ್ಕೆ ಜಾಗತಿಕವಾಗಿ ಭಾರಿ ಮಹತ್ವವಿದೆ.

ಯುರೋಪಿನ ಪಾಲಿಗೆ ಹಿಸ್ಟಾರಿಕ್ ಮೂಮೆಂಟ್:

ಯುರೋಪಿನ ದೊಡ್ಡ ಭಾಗದಲ್ಲಿ 1999 ರ ನಂತರ ಸಂಭವಿಸುತ್ತಿರುವ ಮೊದಲ ಸಂಪೂರ್ಣ ಸೂರ್ಯಗ್ರಹಣ ಇದಾಗಿದೆ. ಇನ್ನು ಐಸ್‌ಲ್ಯಾಂಡ್ ದೇಶವು ಬರೋಬ್ಬರಿ 1954 ರ ನಂತರ ಅಂದರೆ ಸುಮಾರು 72 ವರ್ಷಗಳ ಬಳಿಕ ಇಂತಹ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತಿದೆ. ಇದೇ ಕಾರಣಕ್ಕೆ ಜಗತ್ತಿನಾದ್ಯಂತದ ಪ್ರವಾಸಿಗರು ಮತ್ತು ಖಗೋಳಶಾಸ್ತ್ರಜ್ಞರು ಈ ದಿನಕ್ಕಾಗಿ ಕಾಯುತ್ತಿದ್ದಾರೆ.

ಈ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸುತ್ತದೆಯೇ?

ಇಲ್ಲ, ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆಗಸ್ಟ್ 12 ರಂದು ವಿದೇಶಗಳಲ್ಲಿ ಈ ಗ್ರಹಣ ಸಂಭವಿಸುವ ಸಮಯದಲ್ಲಿ ಭಾರತದಲ್ಲಿ ರಾತ್ರಿಯಿರುತ್ತದೆ. ಸೂರ್ಯನು ದಿಗಂತದ ಕೆಳಗೆ ಇರುವುದರಿಂದ ಭಾರತದ ಜನರಿಗೆ ಈ ಆಕಾಶ ವಿಸ್ಮಯವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಭಾರತದಲ್ಲಿ ‘ಸೂತಕ ಅವಧಿ’ (Sutak Period) ಅನ್ವಯವಾಗುತ್ತದೆಯೇ?

ಧಾರ್ಮಿಕ ಮತ್ತು ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಪ್ರಕಾರ, ಗ್ರಹಣವು ಯಾವ ದೇಶ ಅಥವಾ ಪ್ರದೇಶದಲ್ಲಿ ಕಣ್ಣಿಗೆ ಕಾಣಿಸುತ್ತದೆಯೋ, ಅಲ್ಲಿ ಮಾತ್ರ ‘ಸೂತಕ ಕಾಲ’ ಅಥವಾ ಧಾರ್ಮಿಕ ನಿಯಮಗಳು ಅನ್ವಯವಾಗುತ್ತವೆ. ಈ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸದೇ ಇರುವುದರಿಂದ ಇಲ್ಲಿ ಯಾವುದೇ ಸೂತಕ ಅವಧಿ ಇರುವುದಿಲ್ಲ.

ಸಾಮಾನ್ಯ ದಿನಚರಿ:

ಭಾರತದಾದ್ಯಂತ ಜನರು ಎಂದಿನಂತೆ ತಮ್ಮ ದೈನಂದಿನ ಕೆಲಸಗಳನ್ನು ಮಾಡಬಹುದು. ಪೂಜೆ ಪುನಸ್ಕಾರಗಳು, ಅಡುಗೆ ಮಾಡುವುದು, ಊಟ ಮಾಡುವುದು ಅಥವಾ ದೇವಸ್ಥಾನಗಳನ್ನು ಮುಚ್ಚುವ ಯಾವುದೇ ಧಾರ್ಮಿಕ ನಿರ್ಬಂಧಗಳು ಇರುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಭಾರತೀಯರ ಪಾಲಿಗೆ ಈ ಗ್ರಹಣವು ಧಾರ್ಮಿಕವಾಗಿ ಯಾವುದೇ ಪ್ರಭಾವ ಬೀರುವುದಿಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:18 pm, Wed, 20 May 26

Source link

ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ! ಹಿಂದೂ ಮಹಿಳೆಯಿಂದ ತರಾಟೆ – Kannada News | Badami Temple Controversy: Muslim Woman Questioned for Wearing Slippers Inside Historic Temple, Viral Video

ಬಾಗಲಕೋಟೆ, ಮೇ 20: ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ ಪಟ್ಟಣದ ಪ್ರಸಿದ್ಧ ದೇಗುಲವೊಂದರಲ್ಲಿ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ ಧರಿಸಿ ಕುಳಿತಿದ್ದಕ್ಕೆ ಹಿಂದೂ ಪ್ರವಾಸಿ ಮಹಿಳೆಯೊಬ್ಬರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರೋಷನಿ ಮುಸ್ತಾಫಿ ಎಂಬ ಯುವತಿ ದೇಗುಲದ ಆವರಣದಲ್ಲಿ ಚಪ್ಪಲಿ ಧರಿಸಿ ಕೂತಿದ್ದಾಗ, ಹಿಂದೂ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ದರ್ಗಾಕ್ಕೆ ಚಪ್ಪಲಿ ಹಾಕಿಕೊಂಡು ಹೋಗುತ್ತೇವಾ? ಎಷ್ಟು ಹೇಳಿದ್ರೂ ಕೇಳಲ್ಲ, ಕೇಳಿದ್ರೆ ‘ಸ್ಟಾಪ್’ ಅಂತೀಯಾ ಎಂದು ತರಾಟೆಗೆ ಪಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ತದನಂತರ, ಮುಸ್ಲಿಂ ಯುವತಿಯು ಪತ್ರದ ಮೂಲಕ ತನ್ನ ತಪ್ಪೊಪ್ಪಿಗೆ ಬರೆದುಕೊಟ್ಟ ಬಳಿಕ ಹಿಂದೂ ಮಹಿಳೆ ಶಾಂತರಾಗಿದ್ದು, ವಿವಾದ ತಿಳಿಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾರ್ಮುಜ್ ಜಲಸಂಧಿ ಯಾಕೆ ಬೇಕು? ಅದರ ಅವಶ್ಯಕತೆಯೇ ಇಲ್ಲವಾಗುತ್ತದೆ: ಆರ್ಥಿಕ ತಜ್ಞ ಆಂಡ್ರ್ಯೂ ಫ್ರೆರಿಸ್ ಅನಿಸಿಕೆ – Kannada News | Hormuz Strait might become irrelevant in coming days, says Andrew Freris

ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿರುವ ಹಡಗುImage Credit source: AP

ನವದೆಹಲಿ, ಮೇ 20: ಅಮೆರಿಕವು ಇರಾನ್ ಮೇಲೆ ಯುದ್ಧ ಮಾಡುತ್ತಿರುವ ಪರಿಣಾಮ ಹಾರ್ಮುಜ್ ಜಲಸಂಧಿಗೆ (Strait of Hormuz) ತಡೆಯಾಗುತ್ತಿದ್ದು, ಜಗತ್ತಿನ ಶೇ. 20ಕ್ಕೂ ಅಧಿಕ ತೈಲ ಪೂರೈಕೆ ವ್ಯತ್ಯಯವಾಗುತ್ತಿದೆ. ಭಾರತ ಸೇರದಂತೆ ಹಲವು ಏಷ್ಯನ್ ದೇಶಗಳಿಗೆ ಪೆಟ್ರೋಲ್, ಗ್ಯಾಸ್ ಕೊರತೆಯ ಸಂಕಷ್ಟ ಎದುರಾಗಿದೆ. ಅದರ ಸೈಡ್ ಎಫೆಕ್ಟ್​ಗಳಾಗಿ ಹಣದುಬ್ಬರ ಇತ್ಯಾದಿ ಆರ್ಥಿಕ ಸಮಸ್ಯೆಗಳು ತಲೆದೋರಿವೆ. ಇರಾನ್ ಅಮೆರಿಕ ಯುದ್ಧ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲದಿರುವುದು ಜಗತ್ತಿಗೆ ತಲೆನೋವು ತಂದಿದೆ. ಅರೇಬಿಯನ್ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯನ್ನು ಸಂಪರ್ಕಿಸುವ ಈ ಕಿರಿದಾದ ಜಲಮಾರ್ಗ ಮುಂದೆ ಅಬಾಧಿತವಾಗಿರುತ್ತದೆ ಎನ್ನುವ ಖಾತ್ರಿ ಏನು? ಇಕೋಗ್ನಾಸಿಸ್ ಅಡ್ವೈಸರಿ ಸಿಇಒ ಆಂಡ್ರೂ ಫ್ರೆರಿಸ್ (Andrew Freris) ಪ್ರಕಾರ, ಮುಂದಿನ ದಿನಗಳಲ್ಲಿ ಹಾರ್ಮುಜ್ ಜಲಸಂಧಿಯ ಅವಶ್ಯಕತೆಯೇ ಇರದಂತೆ. ಅದು ಹೇಗೆ?

ಯುಎಇ, ಸೌದಿ, ಓಮನ್, ಕತಾರ್ ಇತ್ಯಾದಿ ಗಲ್ಫ್ ದೇಶಗಳಿಂದ ತೈಲಗಳು ಹೊರಗೆ ರಫ್ತಾಗುವ ಜಲಮಾರ್ಗದಲ್ಲೇ ಇದೆ ಹಾರ್ಮುಜ್ ಜಲಸಂಧಿ. ಕೆಲವೇ ಕಿಮೀಯಷ್ಟು ಈ ಮಾರ್ಗ ಕಿರಿದಾಗಿದೆ. ಹೀಗಾಗಿ, ಇರಾನ್ ಬಹಳ ಸುಲಭವಾಗಿ ಇದನ್ನು ನಿಯಂತ್ರಿಸುತ್ತದೆ. ಯುದ್ಧದ ಪರಿಣಾಮವಾಗಿ ಇರಾನ್ ಈ ಜಲಸಂಧಿಗೆ ತಡೆ ಹಾಕಿದೆ. ಜಗತ್ತಿನ ಶೇ. 20ರಷ್ಟು ತೈಲ ಪೂರೈಕೆ ನಿಂತು ಹೋಗುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಆಂಡ್ರ್ಯೂ ಫ್ರೆರಿಸ್ ಅವರು ಹಾರ್ಮುಜ್ ಬದಲು ಪರ್ಯಾಯ ಮಾರ್ಗ ರೂಪುಗೊಳ್ಳುವ ಸಾಧ್ಯತೆಯನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್

ತೈಲ ಪೂರೈಕೆ: ಇನ್ನೊಂದು ವರ್ಷದಲ್ಲಿ ಸಿದ್ಧವಾಗುತ್ತೆ ಪರ್ಯಾಯ ವ್ಯವಸ್ಥೆ

ಈಗಿನ ಬಿಕ್ಕಟ್ಟು ಪರ್ಯಾಯ ರಫ್ತು ಮಾರ್ಗದ ರಚನೆಗೆ ಅನುವು ಮಾಡಿಕೊಡಬಲ್ಲುದು. ಇನ್ನು 9 ತಿಂಗಳಿಂದ 1 ವರ್ಷದಲ್ಲಿ ಹಾರ್ಮುಜ್​ಗೆ ಪರ್ಯಾಯ ವ್ಯವಸ್ಥೆ ಬರಬಹುದು. ಹಲವು ಹೂಡಿಕೆದಾರರು ಎಣಿಸುವುದಕ್ಕಿಂತ ವೇಗವಾಗಿ ಜಾಗತಿಕ ಇಂಧನ ವ್ಯವಸ್ಥೆ ಹೊಂದಾಣಿಕೆ ಮಾಡುತ್ತದೆ ಎಂದು ಆರ್ಥಿಕ ತಜ್ಞರೂ ಆಗಿರುವ ಆಂಡ್ರ್ಯೂ ಫ್ರೆರಿಸ್ ಅಭಿಪ್ರಾಯಪಟ್ಟಿದ್ದಾರೆ.

ಹಾರ್ಮುಜ್ ಜಲಸಂಧಿ ತಡೆಯಿಂದಾಗಿ ಜಾಗತಿಕ ಕಚ್ಚಾ ತೈಲವು ಬ್ಯಾರಲ್​ಗೆ 110 ಡಾಲರ್​ಗಿಂಲೂ ಹೆಚ್ಚಿನ ಬೆಲೆ ಪಡೆದಿದೆ. ಈ ಮಧ್ಯೆ ಅಮೆರಿಕ ಮತ್ತು ಇರಾನ್ ಯುದ್ಧ ನಿಲ್ಲಿಸಲು ನಡೆಯುತ್ತಿರುವ ಸಂಧಾನ ಮಾತುಕತೆಗಳು ಇನ್ನೂವರೆಗೆ ಫಲಪ್ರದವಾಗಿಲ್ಲ. ಯುದ್ಧ ವಿರಾಮ ಯಾವಾಗ ಬೇಕಾದರೂ ಮುರಿದುಬೀಳಬಹುದು.

ಇದನ್ನೂ ಓದಿ: ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ

ಈ ಎರಡೂ ದೇಶಗಳು ಪರಸ್ಪರ ಆರೋಪ ಪ್ರತ್ಯಾರೋಪ, ಎಚ್ಚರಿಕೆ ಮಾತುಗಳನ್ನು ಮುಂದುವರಿಸುತ್ತಲೇ ಇವೆ. ಇರಾನ್ ಅನ್ನು ಹೊಸಕಿ ಹಾಕುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಪದೇ ಪದೇ ಧಮಕಿ ಹಾಕುತ್ತಿದ್ದಾರೆ. ತನ್ನನ್ನು ಟಚ್ ಮಾಡಿದರೆ ಅಮೆರಿಕವು ಹೊಸ ಆಯಾಮದಲ್ಲಿ ದಾಳಿ ಎದುರಿಸಬೇಕಾಗುತ್ತದೆ. ಊಹಿಸಲೂ ಆಗದಂತೆ ಆಘಾತ ಕೊಡುತ್ತೇವೆ ಎಂದು ಇರಾನ್ ಎಚ್ಚರಿಕೆ ಕೊಡುತ್ತಿದೆ. ಈ ದೇಶಗಳ ಜಂಗೀಕುಸ್ತಿಯಲ್ಲಿ ಜಗತ್ತು ಬಡವಾಗುತ್ತಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಉದ್ಭವವಾಗುತ್ತಿರುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ನಿಮ್ಮ ಕಣ್ಣಿಗೊಂದು ಸವಾಲ್;‌ ಗೂಬೆಗಳ ನಡುವೆ ಅಡಗಿರುವ ಬೆಕ್ಕನ್ನು ಹುಡುಕಬಲ್ಲಿರಾ? – Kannada News | Optical Illusion: Can you find the cat hiding among the owls

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: TinEye

ನಿಮ್ಮ ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆ ಪರೀಕ್ಷಿಸಲು ನೀವು ಮುಂದಾಗಿದ್ದೀರಾ. ಹಾಗಾದ್ರೆ ನೀವು ಈ ಇಲ್ಯೂಷನ್ ಚಿತ್ರವನ್ನು ಏಕಾಗ್ರತೆಯಿಂದ ನೋಡುವುದು ಒಳ್ಳೆಯದು. ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೀಗ ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಗೂಬೆಗಳ ನಡುವೆ ಇರುವಾಗ ಬೆಕ್ಕನ್ನು 10 ಸೆಕೆಂಡುಗಳೊಳಗೆ ಹುಡುಕಬೇಕು. ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ.

ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?

ಈ ಮೋಜಿನ ಆಟಗಳ ಮೂಲಕ ಕಣ್ಣುಗಳು ಮತ್ತು ಬುದ್ಧಿ ಎಷ್ಟು ಚುರುಕಾಗಿದೆ ತಿಳಿಯಬಹುದು. ಈ ಚಿತ್ರ ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಕಾಣುವುದೇ ಗೂಬೆಗಳ ಗುಂಪು. ಈ ಗೂಬೆಗಳ ನಡುವೆ ಕಳ್ಳ ಬೆಕ್ಕೊಂದು ಅಡಗಿ ಕುಳಿತಿದ್ದು, ನೀವು ಈ ಸಾಕು ಪ್ರಾಣಿಯನ್ನು ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ಇರುವ ಸಮಯಾವಕಾಶ 10 ಸೆಕೆಂಡುಗಳು ಮಾತ್ರ ಎಂಬುದು ಮರೆಯದಿರಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ

ಬೆಕ್ಕು ನಿಮಗೆ ಕಾಣಿಸಿತೇ?

ಗೂಬೆಗಳ ಗುಂಪಿನಲ್ಲಿ ಬೆಕ್ಕು ಎಲ್ಲಿದೆ ಎಂದು ಹುಡುಕುವುದು ಹೇಳಿದ್ದಷ್ಟು ಸುಲಭವಲ್ಲ. ಟ್ರಿಕ್ಕಿಯಾಗಿರುವ ಈ ಒಗಟು ನಿಮ್ಮ ತಲೆಗೆ ಹುಳ ಬಿಡಬಹುದು. ಈ ಸಾಕು ಪ್ರಾಣಿಯನ್ನು ಹುಡುಕಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳುತ್ತೇವೆ. ಒಂದು ವೇಳೆ ನೀವು ವಿಫಲರಾಗಿದ್ದೀರಿ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಾವೇ ನಿಮಗೆ ಕಳ್ಳ ಬೆಕ್ಕು ಎಲ್ಲಿದೆ ಎಂದು ತಿಳಿಸುತ್ತೇವೆ. ಈ ಕೆಳಗಿನ ಚಿತ್ರ ನೋಡಿ ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಿಮ್ನಾಸ್ಟಿಕ್ ಬೆಲ್ಟ್​​ನಿಂದ ನೇಣು ಬಿಗಿದುಕೊಂಡು ತ್ವಿಶಾ ಸಾವು, ಮರಣೋತ್ತರ ವರದಿಯಲ್ಲಿ ಹಲವು ವಿಚಾರಗಳು ಬಹಿರಂಗ – Kannada News | New Forensic Details Surface in Twisha Sharma Death Investigation

ಭೋಪಾಲ್, ಮೇ 20: ಮಧ್ಯಪ್ರದೇಶದ ಭೋಪಾಲ್‌ನ ಕಟಾರಾ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ತ್ವಿಶಾ ಶರ್ಮಾ(Twisha Sharma) ಅವರ ಅನುಮಾನಾಸ್ಪದ ಸಾವು ಪ್ರಕರಣ ಈಗ ಇಡೀ ದೇಶದ ಗಮನ ಸೆಳೆದಿದೆ. ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರ ಸೊಸೆಯಾಗಿರುವ ತ್ವಿಶಾ ಅವರ ಸಾವು ಕೇವಲ ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಹೆತ್ತ ಕುಟುಂಬ ಆಕ್ರೋಶ ಹೊರಹಾಕಿದೆ. ನ್ಯಾಯಕ್ಕಾಗಿ ಆಗ್ರಹಿಸಿ ತ್ವಿಶಾ ಅವರ ಕುಟುಂಬಸ್ಥರು ಮಂಗಳವಾರ ಸತತ ಏಳನೇ ದಿನವೂ ಮಗಳ ಶವವನ್ನು ಸ್ವೀಕರಿಸಲು ನಿರಾಕರಿಸಿ ಭೀಕರ ಪ್ರತಿಭಟನೆಗೆ ಇಳಿದಿದ್ದಾರೆ.

ಪ್ಲಾನ್ ಮಾಡಿ ವಿದೇಶಕ್ಕೆ ಹಾರಲು ನೋಡಿದ್ದ ಪತಿ: ಲುಕ್ ಔಟ್ ನೋಟಿಸ್ ಜಾರಿ
ಪ್ರಕರಣದ ಮುಖ್ಯ ಆರೋಪಿಯಾಗಿರುವ ತ್ವಿಶಾ ಪತಿ ಸಮರ್ಥ್ ಸಿಂಗ್ ವಿರುದ್ಧ ಪೊಲೀಸರು ಈಗ ಕೊನೆಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಆರೋಪಿ ಸಮರ್ಥ್ ದೇಶ ಬಿಟ್ಟು ಪಲಾಯನ ಮಾಡದಂತೆ ಆತನ ಪಾಸ್‌ಪೋರ್ಟ್ ಅನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲು ಪಾಸ್‌ಪೋರ್ಟ್ ಕಚೇರಿಗೆ ಪೊಲೀಸರು ತುರ್ತು ಪತ್ರ ಬರೆದಿದ್ದಾರೆ. ಇಷ್ಟಾದರೂ ಪೊಲೀಸರು ಪ್ರಭಾವಿ ಆರೋಪಿಗಳನ್ನು ರಕ್ಷಿಸಲು ಒಲವು ತೋರುತ್ತಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ನಾಲ್ಕು ದಿನ ತಡವಾಗಿ ಸಿಕ್ಕ ಜಿಮ್ನಾಸ್ಟಿಕ್ಸ್ ಬೆಲ್ಟ್, ಎಸ್‌ಐಟಿ ಹೇಳುವುದೇನು?
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಎಸಿಪಿ ರಜನೀಶ್ ಕಶ್ಯಪ್ ಪ್ರಕಾರ, ಘಟನೆ ನಡೆದ ನಾಲ್ಕು ದಿನಗಳ ನಂತರ ಅಂದರೆ ಭಾನುವಾರ ತನಿಖಾಧಿಕಾರಿಗಳು ತ್ವಿಶಾ ಕುತ್ತಿಗೆಗೆ ಬಿಗಿದಿದ್ದ ನೇಣಿನ ಹಗ್ಗವನ್ನು (ಲಿಗೇಚರ್) ವಶಪಡಿಸಿಕೊಂಡಿದ್ದಾರೆ. ಈ ಲಿಗೇಚರ್ ತ್ವಿಶಾ ಕುತ್ತಿಗೆಯ ಮೇಲಿದ್ದ ಕಲೆಗಳಿಗೆ ನಿಖರವಾಗಿ ಹೊಂದಿಕೆಯಾಗುತ್ತಿದ್ದು, ಅವರು ‘ಜಿಮ್ನಾಸ್ಟಿಕ್ಸ್ ಬೆಲ್ಟ್’ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್‌ಐಟಿ ಹೇಳಿದೆ.

ಮತ್ತಷ್ಟು ಓದಿ: ಮಹಿಳೆಯ ಅನುಮಾನಾಸ್ಪದ ಸಾವು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಎಚ್ಚರಿಕೆ

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಹಾರರ್ ಸತ್ಯ
ಪೊಲೀಸರ ಈ ಆತ್ಮಹತ್ಯೆ ವಾದವನ್ನು ತ್ವಿಶಾ ಕುಟುಂಬ ಸಂಪೂರ್ಣವಾಗಿ ತಳ್ಳಿಹಾಕಿದೆ. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತ್ವಿಶಾ ಅವರ ತಲೆಯಲ್ಲಿ ತೀವ್ರವಾಗಿ ರಕ್ತ ಹೆಪ್ಪುಗಟ್ಟಟ್ಟಿರುವುದು , ದೇಹದ ಹಲವಾರು ಭಾಗಗಳಲ್ಲಿ ಭೀಕರ ಗಾಯಗಳು ಮತ್ತು ಸಾವಿಗೂ ಮುನ್ನ ತೀವ್ರ ಹೊಡೆದಾಟ ನಡೆದಿರುವ ಲಕ್ಷಣಗಳು ಪತ್ತೆಯಾಗಿವೆ.

ಒಂದು ವೇಳೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮೈಮೇಲೆ ಇಷ್ಟೊಂದು ಗಾಯಗಳು ಹೇಗೆ ಬಂದವು, ಘಟನೆ ನಡೆದ ನಾಲ್ಕು ದಿನಗಳ ನಂತರ ಪೊಲೀಸರಿಗೆ ಜಿಮ್ನಾಸ್ಟಿಕ್ಸ್ ಬೆಲ್ಟ್ ಸಿಕ್ಕಿದೆ ಎಂದರೆ ಅದನ್ನ ನಂಬಬೇಕೇ,ಸಾಕ್ಷಿ ನಾಶಪಡಿಸಲು ಇಷ್ಟು ಸಮಯ ತಗೆದುಕೊಳ್ಳಲಾಗಿದೆಯೇ? ಎಂದು ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಪ್ರಶ್ನಿಸಿದ್ದಾರೆ.

ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಮತ್ತು ಸಹೋದರ ಮೇಜರ್ ಹರ್ಷಿತ್ ಶರ್ಮಾ ಅವರು ಆರೋಪಿಗಳ ಕುಟುಂಬವು ತಮ್ಮ ಕಾನೂನು ಹಾಗೂ ರಾಜಕೀಯ ಪ್ರಭಾವ ಬಳಸಿ ತನಿಖೆಯನ್ನು ಹಳ್ಳ ಹಿಡಿಸುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಕುಟುಂಬ ಪಟ್ಟು ಹಿಡಿದಿದೆ.

ಆದರೆ, ಎರಡನೇ ಶವಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ವಿಳಂಬವಾದಷ್ಟೂ ತ್ವಿಶಾ ಅವರ ಮೃತದೇಹದ ಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ಮೈಮೇಲಿರುವ ಗಾಯದ ಗುರುತುಗಳು ಮಸುಕಾಗುತ್ತವೆ ಎಂಬುದು ಪ್ರಭಾವಿ ಆರೋಪಿಗಳ ಕರಾಳ ಯೋಜನೆಯಾಗಿದೆ. ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆದರೆ ಕೊಲೆಯ ಸತ್ಯ ಜಗತ್ತಿಗೆ ತಿಳಿಯುತ್ತದೆ ಎಂಬ ಭಯ ಆರೋಪಿಗಳಿಗಿದೆ ಎಂದು ಸೋದರ ಹರ್ಷಿತ್ ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವ ಹೆತ್ತವರು, ದೆಹಲಿ ಏಮ್ಸ್‌ನಲ್ಲಿ ಎರಡನೇ ಶವಪರೀಕ್ಷೆ ನಡೆಸುವವರೆಗೂ ಮಗಳ ದೇಹವನ್ನು ಮುಟ್ಟುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಭಿಮಾನಿಗಳು ತಳ್ಳಲು ಬಂದ ಬೌನ್ಸರ್​​ಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡ ಜೂ.ಎನ್​ಟಿಆರ್ – Kannada News | Jr. NTR Defends Fans, Scolds Bouncers for Rude Behavior On His Birthday

ನೆಚ್ಚಿನ ಸ್ಟಾರ್ ನಟನನ್ನು ಕಣ್ತುಂಬಿಕೊಳ್ಳಲು ನೂರಾರು ಕಿಲೋಮೀಟರ್ ದೂರದಿಂದ ಬರುವ ಅಭಿಮಾನಿಗಳ ಮೇಲೆ ನಟರಿಗೆ ಸಾಕಷ್ಟು ಪ್ರೀತಿ ಇರುತ್ತದೆ. ಆದರೆ, ಅವರ ಭದ್ರತಾ ಸಿಬ್ಬಂದಿ ಮಾತ್ರ ಉದ್ಧಟತನ ತೋರುತ್ತಿರುತ್ತಾರೆ. ಸಾರ್ವಜನಿಕವಾಗಿ ಅಭಿಮಾನಿಗಳನ್ನು ದೂಡುವುದು, ಮುಗಿಬೀಳುವುದು ಬೌನ್ಸರ್‌ಗಳಿಗೆ ಸಾಮಾನ್ಯ ಎಂಬಂತಾಗಿದೆ. ಜೂನಿಯರ್ ಎನ್​​ಟಿಆರ್ (JR NTR) ಬೌನ್ಸರ್ ಕೂಡ ಇದೇ ರೀತಿ ನಡೆದುಕೊಂಡರು. ಆದರೆ, ಈ ಸಂದರ್ಭದಲ್ಲಿ ಅವರು ತಮ್ಮ ಅಭಿಮಾನಿಗಳ ಪರವಾಗಿ ನಿಂತು, ದುರ್ವರ್ತನೆ ತೋರಿದ ಭದ್ರತಾ ಸಿಬ್ಬಂದಿಗೆ ಎಲ್ಲರೆದುರೇ ಕ್ಲಾಸ್ ತಗೊಂಡಿದ್ದಾರೆ.

ಜೂನಿಯರ್ ಎನ್​​ಟಿಆರ್ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ತಡರಾತ್ರಿಯೇ ಹೈದರಾಬಾದ್‌ನ ಅವರ ನಿವಾಸದ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಬೇಕು ಎಂದು ಗಂಟೆಗಟ್ಟಲೆ ಕಾಯುತ್ತಿದ್ದ ಅಭಿಮಾನಿಗಳನ್ನು ತಾರಕ್ ನಿರಾಸೆಗೊಳಿಸಲಿಲ್ಲ. ಮಧ್ಯರಾತ್ರಿ ನಿವಾಸದಿಂದ ಹೊರಬಂದು ಸ್ಟೀಲ್ ಬ್ಯಾರಿಕೇಡ್ ಹಿಂಭಾಗದಿಂದಲೇ ಕೈಬೀಸಿ ಶುಭಾಶಯ ಸ್ವೀಕರಿಸಿದರು.

ಇದೇ ವೇಳೆ ತಾರಕ್ ಅವರನ್ನು ಹತ್ತಿರದಿಂದ ನೋಡಲು ಕೆಲವು ಅಭಿಮಾನಿಗಳು ಮುಂದೆ ಬರಲು ಯತ್ನಿಸಿದಾಗ, ಅವರ ಸುತ್ತ ನಿಂತಿದ್ದ ಸೆಕ್ಯೂರಿಟಿ ತಂಡ ಅಭಿಮಾನಿಗಳ ಮೇಲೆ ಮುಗಿಬಿದ್ದು ಅತ್ಯಂತ ಜೋರಾಗಿ ದೂಡಲು ಹಾಗೂ ರೇಗಾಡಲು ಪ್ರಯತ್ನಿಸಿತು. ಭದ್ರತಾ ಸಿಬ್ಬಂದಿಯ ಈ ಉದ್ಧಟತನ ತಾರಕ್ ಅವರ ಕಣ್ಣಿಗೆ ಬಿದ್ದ ತಕ್ಷಣವೇ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಭದ್ರತಾ ಸಿಬ್ಬಂದಿ ಅಭಿಮಾನಿಗಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದನ್ನು ನೋಡಿದ ಜೂನಿಯರ್ ಎನ್​​ಟಿಆರ್, ಅಲ್ಲೇ ಇದ್ದ ಮುಖ್ಯ ಭದ್ರತಾ ಅಧಿಕಾರಿಯನ್ನು ಕರೆದು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇಲ್ಲಿ ಇಷ್ಟೊಂದು ಗೊಂದಲ ಮತ್ತು ಗಲಾಟೆ ಸೃಷ್ಟಿಯಾಗಲು ನಿಮ್ಮ ವರ್ತನೆಯೇ ಕಾರಣ’ ಎಂದು ಸಿಬ್ಬಂದಿಗೆ ಖಡಕ್ ಆಗಿ ಬುದ್ಧಿ ಕಲಿಸಿದ್ದಾರೆ. ನಟನೇ ನೇರವಾಗಿ ಅಭಿಮಾನಿಗಳ ಪರವಾಗಿ ನಿಂತು ಸೆಕ್ಯೂರಿಟಿ ಟೀಮ್‌ಗೆ ಕ್ಲಾಸ್ ತೆಗೆದುಕೊಂಡ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಹೊಗಳಿದ್ದಾರೆ.

ಇದನ್ನೂ ಓದಿ: ಜೂ ಎನ್​​ಟಿಆರ್​​ಗೆ ಏನಾಗಿದೆ? ಕಾಡುತ್ತಿದ್ದೆಯೇ ಅನಾರೋಗ್ಯ?

ಮತ್ತೊಂದೆಡೆ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದ ಮೊದಲ ಗ್ಲಿಂಪ್ಸ್ ಸೌಂಡ್ ಮಾಡುತ್ತಿದೆ. ಈ ಚಿತ್ರದಲ್ಲಿ ಜೂನಿಯರ್ ಎನ್​​ಟಿಆರ್ ಅವರು ಅಫೀಮು ದಂಧೆಯ ಕರಾಳ ಜಗತ್ತನ್ನು ಆಳುವ ಕ್ರೂರ ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಿಂಪ್ಸ್‌ನಲ್ಲಿ ತಾರಕ್ ಹೆಣಗಳ ರಾಶಿಯ ಮೇಲೆ ನಿಂತು ಶತ್ರುಗಳನ್ನು ಸಂಹರಿಸುವ ದೃಶ್ಯಗಳು ಕೆಜಿಎಫ್ ಹಾಗೂ ಸಲಾರ್ ಸಿನಿಮಾಗಳ ಕಲ್ಲಿದ್ದಲು ಗಣಿಯ ರಗಡ್ ಶೇಡ್ ಅನ್ನು ನೆನಪಿಸುವಂತಿದೆ. ಈ ಬಿಗ್ ಬಜೆಟ್ ಸಿನಿಮಾ ಜೂನ್ 11, 2027 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ! – Kannada News | Dubare Elephant Camp Tragedy: Expert Report Ignored by Forest Department Before Mishap

ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನ ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ!

ಕೊಡಗು, ಮೇ 20: ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಎರಡು ದಿನಗಳ ಹಿಂದೆ (ಮೇ 18) ಆನೆಗಳ ನಡುವಿನ ಕಾದಾಟಕ್ಕೆ ಚೆನ್ನೈ ಮೂಲದ ಪ್ರವಾಸಿ ಮಹಿಳೆ ತುಳಸಿ (33) ಬಲಿಯಾಗಿದ್ದರು. ಇದರ ಬೆನ್ನಲ್ಲೇ, ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಎಂಬ ಸಾಕಾನೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ದಾರುಣ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಮತ್ತು ತಜ್ಞರ ವರದಿಯ ಕಡೆಗಣನೆಯೇ ಮುಖ್ಯ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮುಖ್ಯಾಂಶಗಳು

  • ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಮತ್ತು ಆನೆ ಸಾವು.
  • ನಿಯಮ ಮೀರಿ 30 ಆನೆಗಳನ್ನು ಇರಿಸಿ ತಜ್ಞರ ವರದಿ ಕಡೆಗಣಿಸಿದ ಇಲಾಖೆ.
  • ಮಿತಿಮೀರಿದ ಪ್ರವಾಸಿಗರ ಭೇಟಿಯಿಂದ ಆನೆಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿವೆ.

2019ರಲ್ಲೇ ಎಚ್ಚರಿಸಿದ್ದ ತಜ್ಞರ ಸಮಿತಿ

ಹೈಕೋರ್ಟ್ ಆದೇಶದಂತೆ ವನ್ಯಜೀವಿ ತಜ್ಞ ಕೆ.ಎಂ. ಚಿಣ್ಣಪ್ಪ, ಪಶುವೈದ್ಯ ಸರ್ಜನ್ ಡಾ. ಕಲೈವಣ್ಣನ್ ಮತ್ತು ಮುಖ್ಯ ಪಶುವೈದ್ಯ ಡಾ. ಅಶ್ರಫ್ ಅವರನ್ನೊಳಗೊಂಡ ತಜ್ಞರ ಸಮಿತಿಯು ಕರ್ನಾಟಕದ ಎಲ್ಲಾ ಆನೆ ಶಿಬಿರಗಳಿಗೆ ಭೇಟಿ ನೀಡಿ 2019ರಲ್ಲೇ ಅರಣ್ಯ ಇಲಾಖೆಗೆ ಸಮಗ್ರ ವರದಿ ಸಲ್ಲಿಸಿತ್ತು. ಆದರೆ ಇಲಾಖೆ ಇದನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ವರದಿಯಲ್ಲಿದ್ದ ಪ್ರಮುಖ ನೆಗೆಟಿವ್ ಅಂಶಗಳು ಮತ್ತು ಶಿಫಾರಸುಗಳು

ದುಬಾರೆ ಶಿಬಿರಕ್ಕೆ ಮಿತಿಮೀರಿ ಭೇಟಿ ನೀಡುವ ಪ್ರವಾಸಿಗರಿಂದಾಗಿ ಆನೆಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿವೆ. ಪ್ರವಾಸಿಗರ ಅತಿಯಾದ ಒಡನಾಟದಿಂದ ಆನೆಗಳ ನಡವಳಿಕೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗುತ್ತಿವೆ ಎಂದು ಚಿತ್ರಸಹಿತ ವರದಿ ನೀಡಲಾಗಿತ್ತು. ಪ್ರವಾಸಿಗರನ್ನು ಆನೆಗಳ ತೀರಾ ಹತ್ತಿರಕ್ಕೆ ಬಿಡಬಾರದು ಮತ್ತು ಅವುಗಳಿಂದ ದೂರವಿಡಬೇಕು ಎಂದು ಸಮಿತಿ ಸ್ಪಷ್ಟವಾಗಿ ತಿಳಿಸಿತ್ತು. ಒಂದು ಶಿಬಿರದಲ್ಲಿ ಗರಿಷ್ಠ 15 ಆನೆಗಳಿಗಿಂತ ಹೆಚ್ಚು ಇರಬಾರದು ಎಂದು ಶಿಫಾರಸು ಮಾಡಲಾಗಿತ್ತು. ಆದರೆ, ಪ್ರಸ್ತುತ ದುಬಾರೆ ಶಿಬಿರದಲ್ಲಿ ನಿಯಮ ಮೀರಿ ಬರೋಬ್ಬರಿ 30 ಆನೆಗಳನ್ನು ಇರಿಸಲಾಗಿದೆ.

ಇದನ್ನೂ ಓದಿ ಕಾದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಸಾವು

ದುರಂತ ನಡೆದಿದ್ದು ಹೇಗೆ?

ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ವೇಳೆ ‘ಕಂಜನ್’ ಮತ್ತು ‘ಮಾರ್ತಾಂಡ’ ಆನೆಗಳ ನಡುವೆ ದಿಢೀರ್ ಕಾದಾಟ ಆರಂಭವಾಗಿತ್ತು. ಕಂಜನ್ ದಾಳಿಗೆ ಸಿಲುಕಿ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದ ದಂಡೆಯಲ್ಲಿದ್ದ ಪ್ರವಾಸಿಗರ ಮೇಲೆ ಬಿದ್ದಿತ್ತು. ಇದರ ಅಡಿಯಲ್ಲಿ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಪತಿ ಮತ್ತು ಮಗು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಕಾದಾಟದಲ್ಲಿ ತೀವ್ರ ಆಂತರಿಕ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಮಾರ್ತಾಂಡ ಆನೆಯೂ ಮೃತಪಟ್ಟಿದೆ. ತಜ್ಞರ ಸಮಿತಿಯ ವರದಿಯನ್ನು ಅರಣ್ಯ ಇಲಾಖೆ ಸಕಾಲದಲ್ಲಿ ಜಾರಿಗೊಳಿಸಿದ್ದರೆ ಈ ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು ಎಂದು ಸಾರ್ವಜನಿಕರು ಹಾಗೂ ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಎಫೆಕ್ಟ್​​: ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರದ ಕೊರತೆ – Kannada News | Middle East War Impact: Karnataka Faces 38,000 Ton Fertilizer Shortage Ahead of Monsoon Sowing

ಬೆಂಗಳೂರು, ಮೇ 20: ಮಧ್ಯಪ್ರಾಚ್ಯದಲ್ಲಿನ ಯುದ್ಧ ಕೇವಲ ಇಂಧನಗಳ ಅಭಾವದ ಸಮಸ್ಯೆಯನ್ನು ಮಾತ್ರ ಸೃಷ್ಟಿಸಿಲ್ಲ. ಹತ್ತು ಹಲವು ತೊಂದರೆಗಳಿಗೆ ಕಾರಣವಾಗಿದ್ದು, ಅನ್ನದಾತರನ್ನೂ ಸಂಕಷ್ಟಕ್ಕೆ ತಳ್ಳಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಸಂಕಷ್ಟದ ಪರಿಣಾಮ ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರ ಕೊರತೆ ಎದುರಾಗಿದೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

14 ಸಾವಿರ ಟನ್ ಯೂರಿಯಾ ಕೊರತೆಯೂ ಇರುವುದಾಗಿ ತಿಳಿಸಿದ ಸಚಿವರು, ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಪರ್ಯಾಯ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ರಸಗೊಬ್ಬರ ವಿತರಣೆಯಲ್ಲಿ ಅಕ್ರಮ, ದಾಸ್ತಾನು ಹಾಗೂ ಬೇರೆಡೆಗೆ ತಿರುಗಿಸುವಿಕೆ ತಪ್ಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಲಾಗಿದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆಯಿದ್ದು, ರಸಗೊಬ್ಬರ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಿದ್ಧತೆಗಳು ನಡೆಯುತ್ತಿವೆ. ನಿಜವಾದ ರೈತರಿಗೆ ಮಾತ್ರ ರಸಗೊಬ್ಬರ ವಿತರಣೆ ಆಗುವಂತೆ FRUITS ಐಡಿ ಆಧಾರಿತ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ರೀತಿಯ ರಸಗೊಬ್ಬರ ಹಂಚಿಕೆ ಮಾಡಿದೆ. ಇದರಲ್ಲಿ 11.10 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 4 ಲಕ್ಷ ಮೆಟ್ರಿಕ್ ಟನ್ ಡಿಎಪಿ, 2.12 ಲಕ್ಷ ಮೆಟ್ರಿಕ್ ಟನ್ ಎಂಒಪಿ, 11.88 ಲಕ್ಷ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಹಾಗೂ 0.95 ಲಕ್ಷ ಮೆಟ್ರಿಕ್ ಟನ್ ಎಸ್‌ಎಸ್‌ಪಿ ಸೇರಿವೆ. ಆದರೆ ಈ ವರ್ಷ ಯೂರಿಯಾ ಆರಂಭಿಕ ದಾಸ್ತಾನು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ. 2023ರಲ್ಲಿ 3.91 ಲಕ್ಷ ಮೆಟ್ರಿಕ್ ಟನ್ ಹಾಗೂ 2024ರಲ್ಲಿ 5.41 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಆರಂಭಿಕ ದಾಸ್ತಾನು ಇದ್ದರೆ, ಈ ವರ್ಷ ಅದು ಕೇವಲ 2.80 ಲಕ್ಷ ಮೆಟ್ರಿಕ್ ಟನ್‌ಗೆ ಇಳಿದಿದೆ ಎಂದವರು ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿರಾಜ್ಯವು 4.02 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇಟ್ಟಿದ್ದರೂ, ಕೇಂದ್ರದಿಂದ ಕೇವಲ 2.54 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಇದರಿಂದ 1.48 ಲಕ್ಷ ಮೆಟ್ರಿಕ್ ಟನ್ ಕೊರತೆ ಉಂಟಾಗಿದೆ. ಇದರಲ್ಲಿ 0.38 ಲಕ್ಷ ಮೆಟ್ರಿಕ್ ಟನ್ ಡಿಎಪಿ ಹಾಗೂ 0.14 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊರತೆ ಸೇರಿದೆ. ಅದೇ ರೀತಿ ಮೇ ತಿಂಗಳಲ್ಲಿ 4.54 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದ್ದರೂ, ಇದುವರೆಗೆ ಕೇಂದ್ರವು ಕೇವಲ 1.77 ಲಕ್ಷ ಮೆಟ್ರಿಕ್ ಟನ್ ಪೂರೈಕೆ ಮಾಡಿದೆ. ಇನ್ನೂ 2.77 ಲಕ್ಷ ಮೆಟ್ರಿಕ್ ಟನ್ ಬಾಕಿಯಿದೆ. ಇದರಲ್ಲಿ 0.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಹಾಗೂ 0.78 ಲಕ್ಷ ಮೆಟ್ರಿಕ್ ಟನ್ ಡಿಎಪಿ ಪೂರೈಕೆ ಆಗಬೇಕಿದೆ. ಈ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸದಿದ್ದರೆ ಬಿತ್ತನೆ ಸಮಯದ ಅವಧಿಯಲ್ಲಿ ರೈತರು ಗಂಭೀರ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link