All posts by nagaraj11081993

Vasthu Tips: ಮಲಗುವ ಕೋಣೆಯ ವಾಸ್ತು ದೋಷ; ದಂಪತಿ ನಡುವಿನ ಜಗಳಕ್ಕೆ ಅಟ್ಯಾಚ್ಡ್ ಬಾತ್ರೂಮ್ ಕಾರಣವೇ?

Vasthu Tips: ಮಲಗುವ ಕೋಣೆಯ ವಾಸ್ತು ದೋಷ; ದಂಪತಿ ನಡುವಿನ ಜಗಳಕ್ಕೆ ಅಟ್ಯಾಚ್ಡ್ ಬಾತ್ರೂಮ್ ಕಾರಣವೇ?

ಮನೆ ಕಟ್ಟುವಾಗ ಮುಖ್ಯದ್ವಾರ ಮತ್ತು ಅಡುಗೆಮನೆಗೆ ನೀಡುವಷ್ಟು ಮಹತ್ವವನ್ನು ಅನೇಕರು ಮಲಗುವ ಕೋಣೆ ಮತ್ತು ಸ್ನಾನಗೃಹದ ವಾಸ್ತುಗೆ ನೀಡುವುದಿಲ್ಲ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆ ಮತ್ತು ಸ್ನಾನಗೃಹದ ದಿಕ್ಕು ಸರಿಯಿಲ್ಲದಿದ್ದರೆ, ಅದು ಮನೆಯ ನೆಮ್ಮದಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಸ್ನಾನಗೃಹವನ್ನು ‘ರಾಹು’ವಿನ ಪ್ರಭಾವಕ್ಕೆ ಒಳಪಟ್ಟ ಸ್ಥಳ ಮತ್ತು ನೀರಿನ ಅಂಶ ಹೆಚ್ಚಾಗಿರುವ ಜಾಗ ಎಂದು ಪರಿಗಣಿಸಲಾಗುತ್ತದೆ. ಮಲಗುವ ಕೋಣೆಯಲ್ಲಿ ಹಾಸಿಗೆಯ ನೇರ ಎದುರಿಗೆ ಸ್ನಾನಗೃಹದ ಬಾಗಿಲು ಇದ್ದರೆ, ಅಲ್ಲಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ನೇರವಾಗಿ ಹಾಸಿಗೆಯ ಮೇಲೆ ಮಲಗುವವರ ಮೇಲೆ ಪ್ರಭಾವ ಬೀರುತ್ತದೆ. ಅನೇಕರು ಸ್ನಾನಗೃಹದ ಬಾಗಿಲನ್ನು ಸದಾ ತೆರೆದಿಡುವ ತಪ್ಪು ಮಾಡುತ್ತಾರೆ, ಇದು ನಕಾರಾತ್ಮಕ ಶಕ್ತಿ ಕೋಣೆಯಾದ್ಯಂತ ಹರಡಲು ಕಾರಣವಾಗಿ ಮಾನಸಿಕ ಶಾಂತಿಯನ್ನು ಭಂಗಗೊಳಿಸುತ್ತದೆ.

ಉಂಟಾಗುವ ಪರಿಣಾಮಗಳು:

  • ಕೌಟುಂಬಿಕ ಕಲಹಗಳು: ದಂಪತಿಗಳ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಅನಗತ್ಯ ಜಗಳಗಳು ಉದ್ಭವಿಸಬಹುದು.
  • ಆರ್ಥಿಕ ನಷ್ಟ: ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವವಿದ್ದರೆ, ಸಂಪಾದಿಸಿದ ಹಣ ಉಳಿಯುವುದಿಲ್ಲ. ಅನಗತ್ಯ ಖರ್ಚುಗಳು ಹೆಚ್ಚಾಗಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಸುಲಭ ಪರಿಹಾರಗಳು:

ನಿಮ್ಮ ಮನೆಯಲ್ಲಿ ಇಂತಹ ವಾಸ್ತು ದೋಷವಿದ್ದರೆ ಗಾಬರಿಯಾಗಬೇಕಿಲ್ಲ. ಈ ಕೆಳಗಿನ ಸರಳ ಬದಲಾವಣೆಗಳ ಮೂಲಕ ಆ ದೋಷದ ಪರಿಣಾಮವನ್ನು ತಗ್ಗಿಸಬಹುದು:

  • ಬಾಗಿಲನ್ನು ಮುಚ್ಚಿಡಿ: ಸ್ನಾನಗೃಹವನ್ನು ಬಳಸಿದ ಕೂಡಲೇ ಅದರ ಬಾಗಿಲನ್ನು ಮುಚ್ಚುವ ಅಭ್ಯಾಸ ಮಾಡಿಕೊಳ್ಳಿ. ಇದು ನಕಾರಾತ್ಮಕ ಶಕ್ತಿಯ ಹರಿವನ್ನು ತಡೆಯುವ ಮೊದಲ ಮತ್ತು ಮುಖ್ಯ ಹೆಜ್ಜೆ.
  • ಪರದೆಗಳ ಬಳಕೆ: ಹಾಸಿಗೆ ಮತ್ತು ಸ್ನಾನಗೃಹದ ಬಾಗಿಲು ನೇರ ಮುಖಾಮುಖಿಯಾಗಿದ್ದರೆ, ಸ್ನಾನಗೃಹದ ಬಾಗಿಲಿನ ಮೇಲೆ ಒಂದು ದಪ್ಪನೆಯ ಪರದೆಯನ್ನು ನೇತುಹಾಕಿ. ಇದು ಶಕ್ತಿಯ ಹರಿವನ್ನು ನಿರ್ಬಂಧಿಸಿ ಕೋಣೆಗೆ ಪ್ರವೇಶಿಸದಂತೆ ತಡೆಯುತ್ತದೆ.
  • ಅಲಂಕಾರಿಕ ವಸ್ತುಗಳು: ವಾಸ್ತು ತಜ್ಞರ ಸಲಹೆಯಂತೆ, ಸ್ನಾನಗೃಹದ ಬಳಿ ಅಥವಾ ಬಾಗಿಲಿನ ಮೇಲೆ ವಾಸ್ತುಗೆ ಸಂಬಂಧಿಸಿದ ಸಕಾರಾತ್ಮಕ ಚಿಹ್ನೆಗಳನ್ನು ಇರಿಸುವುದು ಕೂಡ ಉತ್ತಮ ಫಲ ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶದಿಂದ ಬರುವ ಎಲ್​ಪಿಜಿ ಗ್ಯಾಸ್ ಪ್ರತಿಯೊಬ್ಬರ ಮನೆಗೆ ತಲುಪಲು ಎಷ್ಟು ದಿನ ಬೇಕು? ಇಲ್ಲಿದೆ ಮಾಹಿತಿ

ಪ್ರತಿ ನಿತ್ಯವು ಲಕ್ಷಾಂತರ ಕುಟುಂಬವು ಅಡುಗೆಗಾಗಿ ಎಲ್​ಪಿಜಿ ಸಿಲಿಂಡರ್​(LPG Cylinder)ಗಳ ಮೇಲೆ ಅವಲಂಬಿತವಾಗಿವೆ. ಆದರೆ ಆ ಗ್ಯಾಸ್ ನಿಮ್ಮ ಅಡುಗೆ ಮನೆಗೆ ತಲುಪುವ ಮೊದಲು ಅದು ಎಷ್ಟು ದೂರದ ಪ್ರಯಾಣ ಮಾಡುತ್ತದೆ ಎಂಬುದರ ಬಗ್ಗೆ ಬಹುತೇಕ ಜನರು ಆಲೋಚಿಸುವುದಿಲ್ಲ. ನಮ್ಮ ಮನೆಗಳಿಗೆ ಬರುವ ಎಲ್​ಪಿಜಿಯ ಒಂದು ದೊಡ್ಡ ಭಾಗವು ವಿದೇಶಗಳಿಂದಲೇ ಬರುತ್ತದೆ.

ಈ ಪ್ರಯಾಣವು ನೈಸರ್ಗಿಕ ಅನಿಲ ಸಮೃದ್ಧವಾಗಿರುವ ದೇಶಗಳಿಂದ ಆರಂಭವಾಗುತ್ತದೆ. ಅಲ್ಲಿ ಅನಿಲವನ್ನು ಹೊರತೆಗೆದು ಪ್ರಕ್ರಿಯೆಗೊಳಿಸಿ Liquefied Petroleum Gas (LPG) ಅಥವಾ Liquefied Natural Gas (LNG) ಆಗಿ ಪರಿವರ್ತಿಸಲಾಗುತ್ತದೆ. ಇದರಿಂದ ಅನಿಲವನ್ನು ಸುರಕ್ಷಿತವಾಗಿ ಮತ್ತು ಸುಲಭವಾಗಿ ಸಾಗಿಸಬಹುದು. ನಂತರ ಅದನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ದೊಡ್ಡ ಟ್ಯಾಂಕರ್ ಹಡಗುಗಳಲ್ಲಿ ತುಂಬಲಾಗುತ್ತದೆ. ಈ ಹಡಗುಗಳು ಅನಿಲವನ್ನು ಅತ್ಯಲ್ಪ ತಾಪಮಾನದಲ್ಲಿ ಮತ್ತು ನಿಯಂತ್ರಿತ ಒತ್ತಡದಲ್ಲಿ ಸುರಕ್ಷಿತವಾಗಿ ಸಾಗಿಸುತ್ತವೆ.

ಈ ಭಾರೀ ಹಡಗುಗಳು ಸಮುದ್ರ ಮಾರ್ಗದಲ್ಲಿ ಹಲವು ಸಾವಿರ ಕಿಲೋಮೀಟರ್‌ಗಳನ್ನು ದಾಟಿ ಆಮದು ಟರ್ಮಿನಲ್‌ಗಳಿಗೆ ತಲುಪುತ್ತವೆ. ದೂರ, ಹವಾಮಾನ ಮತ್ತು ಸಾಗಣೆ ಮಾರ್ಗಗಳನ್ನು ಅವಲಂಬಿಸಿ ಈ ಪ್ರಯಾಣ ಸಾಮಾನ್ಯವಾಗಿ 7 ರಿಂದ 25 ದಿನಗಳವರೆಗೆ ತೆಗೆದುಕೊಳ್ಳಬಹುದು. ಕರಾವಳಿ ಟರ್ಮಿನಲ್‌ಗಳಿಗೆ ತಲುಪಿದ ನಂತರ ಗ್ಯಾಸನ್ನು ದೊಡ್ಡ ಸಂಗ್ರಹ ಟ್ಯಾಂಕ್‌ಗಳಲ್ಲಿ ಇಳಿಸಿ ಸಂಗ್ರಹಿಸಲಾಗುತ್ತದೆ.

ಮತ್ತಷ್ಟು ಓದಿ: ಎಲ್​ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್​ ಆಗಿದ್ಯಾಕೆ ಗೊತ್ತಾ?

ಅದಾದ ನಂತರ ಗ್ಯಾಸ್ ದೇಶೀಯ ವಿತರಣೆ ವ್ಯವಸ್ಥೆಗೆ ಪ್ರವೇಶಿಸುತ್ತದೆ. ಪೈಪ್‌ಲೈನ್‌ಗಳು, ರೈಲು ಟ್ಯಾಂಕರ್‌ಗಳು ಅಥವಾ ರಸ್ತೆ ಮಾರ್ಗದ ಟ್ಯಾಂಕರ್‌ಗಳ ಮೂಲಕ ಅದನ್ನು ದೇಶದ ವಿವಿಧ ಭಾಗಗಳಲ್ಲಿರುವ ಬಾಟ್ಲಿಂಗ್ ಘಟಕಗಳಿಗೆ ಸಾಗಿಸಲಾಗುತ್ತದೆ. ಅಲ್ಲಿ ಎಲ್‌ಪಿಜಿಯನ್ನು ಸಿಲಿಂಡರ್‌ಗಳಲ್ಲಿ ತುಂಬಿ, ಅವುಗಳನ್ನು ಪರಿಶೀಲಿಸಿ, ಮುಚ್ಚಿ ವಿತರಣೆಗೆ ಸಿದ್ಧಪಡಿಸಲಾಗುತ್ತದೆ.

ಕೊನೆಯಲ್ಲಿ ಈ ಸಿಲಿಂಡರ್‌ಗಳನ್ನು ಸ್ಥಳೀಯ ವಿತರಕರಿಗೆ ಕಳುಹಿಸಿ, ಟ್ರಕ್‌ಗಳ ಮೂಲಕ ಮನೆಗಳಿಗೆ ತಲುಪಿಸಲಾಗುತ್ತದೆ. ವಿದೇಶದಲ್ಲಿನ ಗ್ಯಾಸ್ ಕ್ಷೇತ್ರದಿಂದ ಆರಂಭವಾದ ಈ ಪ್ರಯಾಣ, ನಿಮ್ಮ ಅಡುಗೆಮನೆಗೆ ಸಿಲಿಂಡರ್ ತಲುಪುವವರೆಗೆ ಹಲವಾರು ವಾರಗಳನ್ನು ತೆಗೆದುಕೊಳ್ಳಬಹುದು.

ಈ ಪ್ರಕ್ರಿಯೆ ಬಹಳ ಹಂತಗಳನ್ನು ಒಳಗೊಂಡಿದ್ದರೂ ಉತ್ಪಾದನೆ, ಸಾಗಣೆ, ಸಂಗ್ರಹ, ಬಾಟ್ಲಿಂಗ್ ಮತ್ತು ವಿತರಣೆ—ಜಾಗತಿಕ ಸರಬರಾಜು ವ್ಯವಸ್ಥೆ ಮತ್ತು ದೇಶೀಯ ಲಾಜಿಸ್ಟಿಕ್ಸ್‌ನ ಸಹಕಾರದಿಂದ ಸುಗಮವಾಗಿ ನಡೆಯುತ್ತದೆ. ಮುಂದಿನ ಬಾರಿ ನಿಮ್ಮ ಮನೆಗೆ ಸಿಲಿಂಡರ್ ಬಂದಾಗ, ಅದು ಮಾಡಿದ ಈ ಅದ್ಭುತ ಪ್ರಯಾಣದ ಬಗ್ಗೆ ಒಮ್ಮೆ ಆಲೋಚಿಸಿ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹನಿಟ್ರ್ಯಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರಭಾವಿ ವ್ಯಕ್ತಿಯೊಬ್ಬರ ಸಂಚು, ಕಣ್ಣೀರು ಹಾಕಿದ ಮಹಿಳೆ

ದಾವಣಗೆರೆ, ಮಾ.14: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಹನಿಟ್ರ್ಯಾಪ್ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಖಾಸಗಿ ಆಸ್ಪತ್ರೆ ನರ್ಸ್​​ ಎಂದು ಹೇಳಿಕೊಂಡು ಕಷ್ಟ ಅಂತ ಹೇಳಿಕೊಂಡು ಉದ್ಯಮಿ ಹನಿಟ್ರ್ಯಾಪ್ ಮಾಡಲು ಹೋಗಿದ್ದ ಮಹಿಳೆ ಮತ್ತು ಆಕೆಯ ಜತೆಗೆ ಇದ್ದ ವ್ಯಕ್ತಿಗಳು ಇದೀಗ ತಮ್ಮ ತಪ್ಪಿನ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂದು ಹೇಳಿದ್ದಾರೆ. ಆರೋಪ ಹೊತ್ತಿರುವ ಬಿಳಿಚೋಡು ಚನ್ನಬಸಪ್ಪ ಮತ್ತು ಸಂಬಂಧಪಟ್ಟ ಮಹಿಳೆ ಇಂದು ಸುದ್ದಿಗೋಷ್ಠಿ ನಡೆಸಿ, “ನಾವು ಹನಿಟ್ರ್ಯಾಪ್ ಮಾಡಿಲ್ಲ, ಬದಲಾಗಿ ನಮ್ಮನ್ನು ಪ್ರಭಾವಿಗಳು ಸಂಚು ರೂಪಿಸಿ ಸಿಲುಕಿಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಮಹಿಳೆ, “ಓರ್ವ ಪ್ರಭಾವಿ ವ್ಯಕ್ತಿಯಿಂದ ನಮಗೆ ತೊಂದರೆಯಾಗಿತ್ತು.

ಈ ಬಗ್ಗೆ ನ್ಯಾಯ ಪಡೆಯಲು ನಾವು ವಕೀಲರ ಮನೆಗೆ ಹೋಗಿದ್ದೆವು. ಆದರೆ ಆ ವ್ಯಕ್ತಿ ತನ್ನ ಕೃತ್ಯ ಎಲ್ಲಿ ಬಹಿರಂಗವಾಗುತ್ತದೆಯೋ ಎಂಬ ಭಯದಿಂದ, ತಾನೇ ನನ್ನ ಮಾನಭಂಗ ಮಾಡಿ ಈಗ ಪೊಲೀಸರ ಮೂಲಕ ನಮ್ಮನ್ನು ಬಂಧಿಸುವಂತೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. “ನಮ್ಮ ಮೇಲಿನ ಹಳೆಯ ದ್ವೇಷ ತೀರಿಸಿಕೊಳ್ಳಲು ಪೊಲೀಸ್ ಅಧಿಕಾರಿಯೊಬ್ಬರು ಈ ಕೃತ್ಯಕ್ಕೆ ಸಾಥ್ ನೀಡಿದ್ದಾರೆ. ಹನಿಟ್ರ್ಯಾಪ್ ಎಂಬ ಹಣೆಪಟ್ಟಿ ಕಟ್ಟಿ ನಮ್ಮ ಜೀವನದ ಜೊತೆ ಆಟವಾಡಲಾಗುತ್ತಿದೆ” ಎಂದು ಬಿಳಿಚೋಡು ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ಬಡ ಹೆಣ್ಣು ಮಕ್ಕಳ ಮತ್ತು ಸಾಮಾನ್ಯ ಜನರ ಜೀವನದ ಜೊತೆ ಆಟವಾಡುವ ಪ್ರಭಾವಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಆರೋಪಿತರು ಪೂರ್ವ ವಲಯ ಐಜಿಪಿ (IGP) ಅವರಿಗೆ ಸಮಗ್ರ ತನಿಖೆ ಕೋರಿ ಮನವಿ ಸಲ್ಲಿಸಿದ್ದಾರೆ.ಈ ಹಿಂದೆ ಇದೇ ಪ್ರಕರಣದಲ್ಲಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ದೂರು ದಾಖಲಾಗಿತ್ತು. ಆದರೆ ಈಗ ಆರೋಪಿಗಳೇ ತಿರುಗಿಬಿದ್ದು ತಮಗಾದ ಅನ್ಯಾಯದ ಬಗ್ಗೆ ದ್ವನಿ ಎತ್ತಿರುವುದು ಪ್ರಕರಣವನ್ನು ಮತ್ತಷ್ಟು ನಿಗೂಢಗೊಳಿಸಿದೆ.

ಇದನ್ನೂ ಓದಿ: ಕಷ್ಟ ಅಂತ ಹೇಳಿಕೊಂಡು ದಾವಣೆಗೆರೆ ಉದ್ಯಮಿಗೆ ಹನಿಟ್ರ್ಯಾಪ್‌: ನರ್ಸ್‌ ಸೇರಿ ನಾಲ್ವರು ಅರೆಸ್ಟ್‌

ಹನಿಟ್ರ್ಯಾಪ್ ನಡೆಸಿದ ಯಾರನ್ನು? ಹೇಗೆ?

ನಗರದ ಪ್ರತಿಷ್ಠಿತ ಉದ್ಯಮಿಯೊಬ್ಬರನ್ನು ಬಲೆಗೆ ಬೀಳಿಸಿ, ಅವರಿಂದ ಹಣ ವಸೂಲಿ ಮಾಡಲು ಯತ್ನಿಸಿದ ಹನಿಟ್ರ್ಯಾಪ್‌ ಜಾಲವನ್ನು ದಾವಣಗೆರೆ ಪೊಲೀಸರು ಪತ್ತೆಹಚ್ಚಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರು ಮಹಿಳಾ ನರ್ಸ್‌ ಹಾಗೂ ಚನ್ನಬಸಪ್ಪ ಸೇರಿದಂತೆ ಮೂವರು ಪುರುಷರನ್ನು ಬಂಧಿಸಲಾಗಿತ್ತು. ಆರೋಪಿತ ಮಹಿಳೆಯು ತಾನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಉದ್ಯಮಿಯ ಬಳಿ ಸಹಾಯ ಕೇಳಿದ್ದಳು. ಪರಿಚಯ ಬೆಳೆಸಿಕೊಂಡು ನಂಬಿಕೆ ಗಳಿಸಿದ ಬಳಿಕ, ಉದ್ಯಮಿಯನ್ನು ಏಕಾಂತಕ್ಕೆ ಕರೆಸಿಕೊಳ್ಳಲಾಗಿತ್ತು. ಉದ್ಯಮಿ ಮಹಿಳೆಯೊಂದಿಗೆ ಇದ್ದ ಸಂದರ್ಭವನ್ನು ಆರೋಪಿಗಳ ತಂಡ ರಹಸ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿತ್ತು ಎನ್ನಲಾಗಿದೆ. ವಿಡಿಯೋ ಸಿದ್ಧವಾಗುತ್ತಿದ್ದಂತೆ ತನ್ನ ಅಸಲಿ ರೂಪ ತೋರಿಸಿದ ತಂಡ, “ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ ಮತ್ತು ಕುಟುಂಬದವರಿಗೆ ತಿಳಿಸುತ್ತೇವೆ” ಎಂದು ಬೆದರಿಸಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಉದ್ಯಮಿ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಲೆ ಬೀಸಿ ನರ್ಸ್ ಸೇರಿದಂತೆ ನಾಲ್ವರನ್ನು ಅರೆಸ್ಟ್ ಮಾಡಿದ್ದರು. ಇದೀಗ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಇದರಲ್ಲಿ ಪ್ರಭಾವಿ ವ್ಯಕ್ತಿಯ ಕೈವಾಡ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Hotel Close: ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !

ಬೆಂಗಳೂರು, ಮಾರ್ಚ್​ 14: ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವಂತಹ ಯುದ್ಧದ ಪರಿಣಾಮ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ರಾಜಧಾನಿ ಬೆಂಗಳೂರಿನ ಬಹುತೇಕ ಹೋಟೆಲ್‌ಗಳು ಎಲ್‌ಪಿಜಿ ಗ್ಯಾಸ್ ಪೂರೈಕೆ ವ್ಯತ್ಯಯದಿಂದಾಗಿ ಬಂದ್ ಆಗಿವೆ.

ಗಾಂಧಿನಗರದಲ್ಲಿರುವ ಜನಪ್ರಿಯ ಐಡಿಸಿ (ಇಡ್ಲಿ, ದೋಸೆ, ಕಾಫಿ) ಹೋಟೆಲ್ ಕೂಡ ನಿನ್ನೆ ಮತ್ತು ಇಂದು ಬಂದ್ ಆಗಿದೆ. ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ದೊಡ್ಡ ಮಟ್ಟದ ಕೊರತೆ ಕಾಡುತ್ತಿದ್ದು, ಇದು ಹೋಟೆಲ್‌ಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಪ್ರಸ್ತುತ ಪರಿಸ್ಥಿತಿ ಇನ್ನೂ ಒಂದು ವಾರದಿಂದ ಹತ್ತು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಹೋಟೆಲ್ ಸನ್ಮಾನ್‌ನಲ್ಲಿ ಗ್ಯಾಸ್ ಅಭಾವದ ಕಾರಣ ಸೌತ್ ಇಂಡಿಯನ್ ಮೀಲ್ಸ್ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಲಿಮಿಟೆಡ್ ಆಹಾರ ಮಾತ್ರ ಲಭ್ಯವಿದೆ ಎಂದು ಗ್ರಾಹಕರಿಗೆ ಸೂಚನಾ ಫಲಕ ಹಾಕಲಾಗಿದೆ. ಇದೇ ವೇಳೆ ಗದಗ ಎಪಿಎಂಸಿ ಆವರಣದಲ್ಲಿ ಸಹ ಸಿಲಿಂಡರ್ ಕೊರತೆಯಿಂದ ಬಹುತೇಕ ಹೋಟೆಲ್‌ಗಳು ಬಂದ್ ಆಗಿವೆ. ಶನಿವಾರ ಜಾನುವಾರು ಸಂತೆ ಹಿನ್ನೆಲೆ ಸಾವಿರಾರು ರೈತರು ಬಂದಿದ್ದರೂ, ಓಪನ್ ಇರುವ ಒಂದೇ ಹೋಟೆಲ್ ಮುಂದೆ ಉಪಹಾರಕ್ಕಾಗಿ ಕ್ಯೂ ಕಾಣಿಸಿಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಲ್ಲು ಅರ್ಜುನ್ ವ್ಯಕ್ತಿತ್ವ ಎಂಥದ್ದು? ವಿವರಿಸಿದ ಮ್ಯಾನೇಜರ್

ಕೆಲವು ದಿನಗಳ ಹಿಂದೆ, ಟಾಲಿವುಡ್ ಸ್ಟಾರ್ ಹೀರೋ ಅಲ್ಲು ಅರ್ಜುನ್ ಬಗ್ಗೆ ಬ್ರಾಂಡ್ ಸ್ಟ್ರಾಟಜಿಸ್ಟ್ ಕಾವೇರಿ ಬರುವಾ ಅವರ ಹೇಳಿಕೆಗಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದವು. ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು 42 ನಿಯಮಗಳನ್ನು ಪಾಲಿಸಬೇಕು ಎಂಬ ಅವರ ಹೇಳಿಕೆಗಳು ಸಂಚಲನ ಸೃಷಟಿಸಿದವು. ಆದಾಗ್ಯೂ, ಅಲ್ಲು ಅರ್ಜುನ್ ತಂಡವು ತಕ್ಷಣವೇ ಇವುಗಳಿಗೆ ಪ್ರತಿಕ್ರಿಯಿಸಿ ಕಾವೇರಿ ಬರುವಾ ಅವರ ಹೇಳಿಕೆಗಳನ್ನು ನಿರಾಕರಿಸಿತು. ಇತ್ತೀಚೆಗೆ, ಅಲ್ಲು ಅರ್ಜುನ್ ಅವರ ಮ್ಯಾನೇಜರ್ ಶರತ್ಚಂದ್ರ ನಾಯ್ಡು ಅವರು ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ‘ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು ಪ್ರೋಟೋಕಾಲ್‌ಗಳಿವೆ ಎಂಬ ಚರ್ಚೆ ನಡೆಯುತ್ತಿದೆಯಲ್ಲ, ಅದು ನಿಜವೇ?’ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶರತ್ಚಂದ್ರ ನಾಯ್ಡು, ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಸಂಪೂರ್ಣ ಸ್ಪಷ್ಟನೆ ನೀಡಿದರು. ಅಲ್ಲು ಅರ್ಜುನ್ ಅವರನ್ನು ಭೇಟಿಯಾಗುವುದು ಕಷ್ಟ ಎಂದು ನೀವು ಭಾವಿಸಿದರೆ, ನೀವು ತಪ್ಪು ಎಂದು ಅವರು ಹೇಳಿದರು. ಪ್ರಸ್ತುತ, ಈ ಕಾಮೆಂಟ್‌ಗಳು ವೈರಲ್ ಆಗಿವೆ.

ಪತ್ರಕರ್ತರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಶರತ್ ಚಂದ್ರ, ನಂತರ ಉದ್ಯಮಕ್ಕೆ ಪ್ರವೇಶಿಸಿದರು. ಕಳೆದ ಕೆಲವು ವರ್ಷಗಳಿಂದ ಅವರು ಅಲ್ಲು ಅರ್ಜುನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ನಿರ್ಮಾಪಕರಾಗಿದ್ದಾರೆ. ಶರತ್ ಚಂದ್ರ ಅವರು ಜನಪ್ರಿಯ ತೆಲುಗು OTT ಪ್ಲಾಟ್‌ಫಾರ್ಮ್ ETV ವಿನ್ ಅಲ್ಲಿ ಪ್ರಸಾರ ಆಗಲಿರುವ ‘ಗುರ್ತುಕೋಷ್ಟುನ್ನೈ’ ಸರಣಿಯ ನಿರ್ಮಾಪಕರಾಗಿದ್ದಾರೆ. ಬೇಬಿ ಖ್ಯಾತಿಯ ವಿರಾಜ್ ಅಶ್ವಿನ್ ಇದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ವಿನೋದ್ ಗಾಲಿ ಇದನ್ನು ನಿರ್ದೇಶಿಸಿದ್ದಾರೆ. ‘ಗುರ್ತುಕೋಷ್ಟುನ್ನೈ’ ಸರಣಿಯ ಟೀಸರ್ ಅನ್ನು ಶುಕ್ರವಾರ (ಮಾರ್ಚ್ 13) ಬಿಡುಗಡೆ ಮಾಡಲಾಯಿತು. ಈ ಸರಣಿಯು ಶೀಘ್ರದಲ್ಲೇ ETV ವಿನ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಇದನ್ನೂ ಓದಿ: ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ಅಲ್ಲು ಅರ್ಜುನ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ ಅವರು, ಅಟ್ಲೀ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೆ, ಕಾಲಿವುಡ್ ಸ್ಟಾರ್ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತೊಂದು ಸಿನಿಮಾಗೆ ಅಲ್ಲು ಅರ್ಜುನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಎರಡು ಸಿನಿಮಾಗಳ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸನ್​ರೈಸರ್ಸ್’ ​ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್?

ದಿ ಹಂಡ್ರೆಡ್ ಲೀಗ್​ನಲ್ಲಿ ಪಾಕಿಸ್ತಾನ್ ಆಟಗಾರ ಅಬ್ರಾರ್ ಅಹ್ಮದ್​ ಅವರನ್ನು ಖರೀದಿಸಿ ಇದೀಗ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇಕ್ಕಟಿಗೆ ಸಿಲುಕಿದೆ.  ಮಾರ್ಚ್ 12, 2026 ರಂದು ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರನ್ನುಎಸ್​ಆರ್​ಹೆಚ್ ಮಾಲೀಕತ್ವದ ಸನ್​ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಬರೋಬ್ಬರಿ £1,90,000 (ಸುಮಾರು ₹2.34 ಕೋಟಿ) ಮೊತ್ತಕ್ಕೆ ಖರೀದಿಸಿದೆ.

ಇತ್ತ ಭಾರತೀಯ ವಿರೋಧಿ ಮನಸ್ಥಿತಿ ಹೊಂದಿರುವ ಪಾಕ್ ಆಟಗಾರನನ್ನು ಖರೀದಿಸಿರುವುದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಆಕ್ರೋಶದೊಂದಿಗೆ ಸನ್​ರೈಸರ್ಸ್​ ಲೀಡ್ಸ್‌ನ ‘X’ (ಟ್ವಿಟರ್) ಖಾತೆಯನ್ನು ರಿಪೋರ್ಟ್ ಮಾಡಿದ್ದ ಪರಿಣಾಮ ಎಸ್​ಆರ್​ಎಲ್​ ತಂಡದ ಸೋಷಿಯಲ್ ಮೀಡಿಯಾ ಖಾತೆಯು ತಾತ್ಕಾಲಿಕ ಸ್ಥಗಿತವಾಗಿತ್ತು.

ಇದೀಗ ಭಾರತ ಸೇರಿದಂತೆ ಎಲ್ಲೆಡೆಯಿಂದ ಎಸ್​ಆರ್​ಹೆಚ್​ ಅಭಿಮಾನಿಗಳ ಒತ್ತಡ ಹೆಚ್ಚಾಗುತ್ತಿರುವುದರಿಂದ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪಾಕ್ ಆಟಗಾರನನ್ನು ಕೈ ಬಿಡುವ ಬಗ್ಗೆ ಚಿಂತಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅದಕ್ಕೂ ಮುನ್ನ ಒಂದಷ್ಟು ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಎಸ್​ಆರ್​ಹೆಚ್ ಫ್ರಾಂಚೈಸಿ ಮುಂದಿದೆ.

ಕೈಬಿಡಲು ಇರುವ ಕಾರಣಗಳು:

  • ಭಾರತೀಯ ಅಭಿಮಾನಿಗಳ ಆಕ್ರೋಶ: ಸನ್‌ರೈಸರ್ಸ್ ಹೈದರಾಬಾದ್ (SRH) ಭಾರತೀಯ ಮೂಲದ ಫ್ರಾಂಚೈಸಿ. ಅಬ್ರಾರ್ ಅವರ ಹಳೆಯ ವಿವಾದಾತ್ಮಕ ಪೋಸ್ಟ್‌ಗಳಿಂದಾಗಿ ಭಾರತೀಯ ಅಭಿಮಾನಿಗಳು ತಂಡವನ್ನು ಬಹಿಷ್ಕರಿಸುವಂತೆ  ಒತ್ತಾಯಿಸುತ್ತಿದ್ದಾರೆ. ಇದು ಫ್ರಾಂಚೈಸಿಯ ಬ್ರ್ಯಾಂಡ್ ಮೌಲ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
  • ಪ್ರಾಯೋಜಕರ ಒತ್ತಡ: ಅಭಿಮಾನಿಗಳ ಆಕ್ರೋಶ ಹೆಚ್ಚಾದರೆ, ತಂಡಕ್ಕೆ ಬೆಂಬಲ ನೀಡುವ ಕಂಪನಿಗಳು ತಮ್ಮ ಹೆಸರಿಗೆ ಧಕ್ಕೆ ಬರುತ್ತದೆ ಎಂದು ಒಪ್ಪಂದದಿಂದ ಹಿಂದೆ ಸರಿಯಬಹುದು. ಅಂತಹ ಸಂದರ್ಭದಲ್ಲಿ ಮಾಲೀಕರು ಅನಿವಾರ್ಯವಾಗಿ ಅಬ್ರಾರ್ ಅವರನ್ನು ಕೈಬಿಡಬೇಕಾಗುತ್ತದೆ.

ಕೈಬಿಡಲು ಇರುವ ಅಡೆತಡೆಗಳು:

  • ಕಾನೂನು ಮತ್ತು ಆರ್ಥಿಕ ಸಮಸ್ಯೆ: ಅಬ್ರಾರ್ ಅಹ್ಮದ್ ಅವರನ್ನು ಹರಾಜಿನಲ್ಲಿ £190,000 (ಸುಮಾರು ₹2.34 ಕೋಟಿ) ನೀಡಿ ಅಧಿಕೃತವಾಗಿ ಖರೀದಿಸಲಾಗಿದೆ. ಯಾವುದೇ ಬಲವಾದ ಶಿಸ್ತುಕ್ರಮದ ಕಾರಣವಿಲ್ಲದೆ ಅವರನ್ನು ಕೈಬಿಟ್ಟರೆ, ಫ್ರಾಂಚೈಸಿ ಅವರಿಗೆ ಪೂರ್ಣ ಹಣವನ್ನು ನೀಡಬೇಕಾಗುತ್ತದೆ.
  • ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿಯಮ: ‘ದಿ ಹಂಡ್ರೆಡ್’ ಟೂರ್ನಿಯು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿಯಮದಡಿ ನಡೆಯುತ್ತದೆ. ಕೇವಲ ಸೋಶಿಯಲ್ ಮೀಡಿಯಾ ಆಕ್ರೋಶದ ಕಾರಣಕ್ಕೆ ಆಟಗಾರನನ್ನು ತೆಗೆದುಹಾಕಲು ಇಸಿಬಿ ಅನುಮತಿ ನೀಡುತ್ತದೆಯೇ ಎಂಬುದು ಮುಖ್ಯ.

ಸದ್ಯದ ಪರಿಸ್ಥಿತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಾಲೀಕರಾದ ಕಾವ್ಯ ಮಾರನ್  ಮೌನವಾಗಿದ್ದಾರೆ. ಅಲ್ಲದೆ ಫ್ರಾಂಚೈಸಿ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸನ್​ರೈಸರ್ಸ್ ಫ್ರಾಂಚೈಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೊತೆ ಕೂಡ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Jitesh Sharma: ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು!

ಒಂದು ವೇಳೆ ಐಪಿಎಲ್ ಆರಂಭಕ್ಕೂ ಮುನ್ನ ‘ಸನ್​ರೈಸರ್ಸ್’​ ಫ್ರಾಂಚೈಸಿ ಮೇಲೆ ಪ್ರಾಯೋಜಕರ ಒತ್ತಡ ಹೆಚ್ಚಾದರೆ  “ವೈಯಕ್ತಿಕ ಕಾರಣ” ಅಥವಾ “ಗಾಯದ ಸಮಸ್ಯೆ” ಎಂಬ ಕಾರಣ ನೀಡಿ ಅಬ್ರಾರ್ ಅಹ್ಮದ್ ಅವರನ್ನು ದಿ ಹಂಡ್ರೆಡ್  ಟೂರ್ನಿಯಿಂದ ಕೈಬಿಡಲು ಚಿಂತಿಸಲಾಗಿದೆ. ಹೀಗಾಗಿ ದಿ ಹಂಡ್ರೆಡ್ ಟೂರ್ನಿ ಆರಂಭಕ್ಕೂ ಮುನ್ನವೇ ಸನ್​ರೈಸರ್ಸ್​ ಲೀಡ್ಸ್ ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್ ಸಿಗುವ ಸಾಧ್ಯತೆ ಹೆಚ್ಚಿದೆ.

 

Source link

ಜೈಲುಗಳಲ್ಲಿ ಡ್ರಗ್ಸ್ ನೆಟ್​ವರ್ಕ್​ ಬ್ರೇಕ್ ಹಾಕಲು ಡಿಜಿಪಿ ಪ್ಲಾನ್; ರಾಜ್ಯದ ಎಲ್ಲಾ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಟೆಸ್ಟ್!

ಬೆಂಗಳೂರು, ಮಾರ್ಚ್ 14: ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಕಾರಾಗೃಹ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ (Alok Kumar) ಅವರ ಸೂಚನೆಯಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈಗಾಗಲೇ ರಾಜ್ಯದ ಶೇ10 ಕೈದಿಗಳಿಗೆ ಟೆಸ್ಟ್

ಪರಪ್ಪನ ಅಗ್ರಹಾರದಲ್ಲಿ ಮಾರ್ಚ್ 9 ರಂದು ಸಿಬ್ಬಂದಿಯೇ ತನ್ನ ಒಳುಡುಪಿನಲ್ಲಿ ಮಾದಕ ವಸ್ತುಗಳನ್ನು ಜೈಲಿನೊಳಗೆ ತಂದ ಘಟನೆ ನಡೆದಿತ್ತು. ಇದೊಂದೇ ಅಲ್ಲದೆ ಹಲವು ಬಾರಿ ರಾಜ್ಯದ ಜೈಲುಗಳಲ್ಲಿ ಈ ರೀತಿಯ ಅಕ್ರಮಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆ ನಿಮ್ಹಾನ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಡ್ರಗ್ಸ್ ಮುಕ್ತ ಕಾರಾಗೃಹ ನಿರ್ಮಾಣ ಮಾಡುವ ಗುರಿಯಿಂದ ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈ ಯೋಜನೆಯಡಿ ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಗಾಂಜಾ, ಹೆರೊಯಿನ್, ಕೊಕೈನ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸದ್ಯ ಮೊದಲ ಹಂತದಲ್ಲಿ ಎಲ್ಲಾ ಜೈಲುಗಳಲ್ಲಿ ಸುಮಾರು ಶೇ10ರಷ್ಟು ಕೈದಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕಾರಾಗೃಹ ಇಲಾಖೆ ನೀಡಿರುವ ವಿಶೇಷ ಕಿಟ್‌ಗಳ ಮೂಲಕ ಜೈಲು ವೈದ್ಯಾಧಿಕಾರಿಗಳು ಈ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ ಒಳ ಉಡುಪಿನಲ್ಲಿ ಗಾಂಜಾ ತಂದು ಕೈದಿಗಳಿಗೆ ಸಪ್ಲೈ! ಪರಪ್ಪನ ಅಗ್ರಹಾರದಲ್ಲಿ ವಾರ್ಡನ್​ನಿಂದಲೇ ಕಳ್ಳಾಟ

ಮಾದಕ ವಸ್ತು ಸೇವನೆ ಪತ್ತೆಯಾದರೆ ಕೌನ್ಸೆಲಿಂಗ್

ಪರೀಕ್ಷೆಯಲ್ಲಿ ಕೈದಿಗಳು ಮಾದಕ ವಸ್ತು ಸೇವಿಸಿರುವುದು ಪತ್ತೆಯಾದರೆ ತಕ್ಷಣವೇ ಅವರಿಗೆ ಕೌನ್ಸೆಲಿಂಗ್ ನೀಡಲಾಗುತ್ತದೆ. ಹೆಚ್ಚು ಅಡಿಕ್ಟ್ ಆಗಿರುವ ಕೈದಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಮಾಡಲಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಪತ್ತೆಯಾದ ಕೈದಿಗಳ ಮೇಲೆ ಸದ್ಯಕ್ಕೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದಲಿಗೆ ಕೌನ್ಸೆಲಿಂಗ್ ಮತ್ತು ಚಿಕಿತ್ಸೆಯ ಮೂಲಕ ಕೈದಿಗಳನ್ನು ಸರಿಯಾದ ದಾರಿಗೆ ತರಲು ಕಾರಾಗೃಹ ಇಲಾಖೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಧುರಂಧರ್ 2’ ಜೊತೆ ಕ್ಲ್ಯಾಶ್ ಮಿಸ್ ಮಾಡಿಕೊಂಡ ‘ಟಾಕ್ಸಿಕ್’ ಎದುರು ಬರ್ತಿವೆ ಡಜನ್ ಸಿನಿಮಾಗಳು

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​​ಗೆ ವಿಘ್ನ ಎದುರಾಗಿತ್ತು. ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರಣ ನೀಡಿ ಇವರು ಸಿನಿಮಾನ ಮುಂದಕ್ಕೆ ಹಾಕಿಕೊಂಡರು. ಇದರಿಂದ ‘ಧುರಂಧರ್ 2’ ಸಿನಿಮಾ ಜೊತೆಗಿನ ಕ್ಲ್ಯಾಶ್ ಮಿಸ್ ಆಗಿದೆ. ಆದರೆ, ಕೆಲವು ವರದಿಗಳ ಪ್ರಕಾರ ‘ಟಾಕ್ಸಿಕ್’ ಸಿನಿಮಾ ಈಗ ಡಜನ್ ಸಿನಿಮಾಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ‘ಟಾಕ್ಸಿಕ್’ ತುಂಬಾನೇ ದೊಡ್ಡ ಚಾಲೆಂಜ್ ಎದುರಿಸುವ ಸೂಚನೆ ಪಡೆದಿದೆ.

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಯಾವುದಾದರೂ ಒಂದು ಸಿನಿಮಾ ಮುಂದಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿತ್ತು. ಕೊನೆಗೆ, ‘ಟಾಕ್ಸಿಕ್’ ತಂಡದವರು ಚಿತ್ರವನ್ನು ಜೂನ್ 4ಕ್ಕೆ ಮುಂದಕ್ಕೆ ಹಾಕಿಕೊಂಡರು. ಯಶ್ ಈಗ 11 ಸಿನಿಮಾಗಳಿಂದ ಸ್ಪರ್ಧೆ ಎದುರಿಸಬೇಕಿದೆ.

‘ಟಾಕ್ಸಿಕ್’ ಸಿನಿಮಾದ ಬಜೆಟ್ ದೊಡ್ಡದಿದೆ. ಹೀಗಾಗಿ, ಈ ಸಿನಿಮಾ ಕನಿಷ್ಠ ಎರಡು ತಿಂಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಎರಡು ತಿಂಗಳಲ್ಲಿ ಬರೋಬ್ಬರಿ 12 ಚಿತ್ರಗಳು ಬರುತ್ತಿವೆ.

ಜೂನ್ 5ಕ್ಕೆ ಹಾಲಿವುಡ್​​ನ ‘ಮಾಸ್ಟರ್ ಆಫ್ ದಿ ಯೂನಿವರ್ಸ್’ ಬರುತ್ತಿದೆ. ಜೂನ್ 12ರಂದು ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’, ‘ಮೇ ವಾಪ್ಸ್ ಆವುಂಗಾ’ ತೆರೆಗೆ ಬರುತ್ತಿದೆ. ಜೂನ್ 19ರಂದು ‘ಕಾಕ್​​ಟೇಲ್ 2’ ಹಾಗೂ ‘ಟಾಯ್ ಸ್ಟೋರಿ 5’ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್

ಜೂನ್ 26ಕ್ಕೆ ‘ಕ್ಯಾರಿ ಆನ್ ಜಟ್ಟಾ 4’ ತೆರೆಗೆ ಬರಲಿದೆ. ಜುಲೈ 1ರಂದು ‘ಮಿನೀಯನ್ 2’, ಜುಲೈ 3ರಂದು ‘ಧಮಾಲ್ 4’, ಜುಲೈ 9ರಂದು ‘ಮೋನಾ’, ಜುಲೈ 10ರಂದು ‘ಆಲ್ಫಾ’, ಜುಲೈ 17ರಂದು ‘ದಿ ಒಡಿಸ್ಸಿ’, ಜುಲೈ 31ರಂದು ‘ಸ್ಪೈಡರ್ ಮ್ಯಾನ್, ‘ಬ್ರ್ಯಾಂಡ್ ನ್ಯೂ ಡೇ’ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುತ್ರಿಯರಿಂದಲೇ ಅಂತ್ಯಸಂಸ್ಕಾರ: ಗಂಡು ಮಕ್ಕಳಿಲ್ಲದಿದ್ದರೇನು? ತಂದೆಗೆ ಅಗ್ನಿಸ್ಪರ್ಶ ಮಾಡಿದ ಇಬ್ಬರು ಹೆಣ್ಮಕ್ಕಳು!

ಕಡೂರು, ಮಾ.14 : “ಗಂಡು ಮಕ್ಕಳಿದ್ದರೆ ಮಾತ್ರ ಮುಕ್ತಿ” ಎಂಬ ಹಳೆಯ ಸಂಪ್ರದಾಯದ ನಂಬಿಕೆಯನ್ನು ಬದಿಗೊತ್ತಿ, ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಬೀರೂರು ಪಟ್ಟಣದ ನಿವಾಸಿ ವಿಶ್ವನಾಥ್ ಅವರು ನಿನ್ನೆ ನಿಧನರಾಗಿದ್ದರು. ಇವರಿಗೆ ಗಂಡು ಮಕ್ಕಳಿರಲಿಲ್ಲ, ಕೇವಲ ಇಬ್ಬರು ಹೆಣ್ಣು ಮಕ್ಕಳಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ಪುತ್ರಿಯರು, ತಂದೆಯ ಮೇಲಿನ ಗೌರವ ಮತ್ತು ಪ್ರೀತಿಯಿಂದ ತಾವೇ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದರು. ಭಾವಸಾರ ಕ್ಷತ್ರಿಯ ಸಮಾಜದ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಇಬ್ಬರು ಪುತ್ರಿಯರು ಅತ್ಯಂತ ಶ್ರದ್ಧೆಯಿಂದ ನೆರವೇರಿಸಿದರು. ಮೃತ ವಿಶ್ವನಾಥ್ ಅವರ ಪುತ್ರಿ ಐಶ್ವರ್ಯ ಮತ್ತು ಅವರ ಸೋದರಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Saturn Combustion 2026: ಇನ್ನು 40 ದಿನಗಳ ಕಾಲ ಮೀನ ರಾಶಿಯಲ್ಲಿ ಶನಿ ಅಸ್ತಂಗತ; ಯಾವ ರಾಶಿಗೆ ಅಶುಭ?

ಗ್ರಹಗಳ ವಿಷಯದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಲಿದೆ. ಕರ್ಮ ಕಾರಕ ಮತ್ತು ನ್ಯಾಯಾಧೀಶನಾಗಿರುವ ಶನಿ ಗ್ರಹವು ಅಸ್ತಂಗತನಾಗಲಿದ್ದಾನೆ. ಅಸ್ತಂಗತ ಎಂದರೆ ಸೂರ್ಯನಿಗೆ ಹತ್ತಿರ ಬಂದಾಗ ಯಾವುದೇ ಗ್ರಹವು ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಳ್ಳುವುದು. ಶನಿ ಗ್ರಹವು ನಿನ್ನೆ ಅಂದರೆ ಮಾರ್ಚ್ 13 ರಂದು ಸಂಜೆ 7 ಗಂಟೆ 13 ನಿಮಿಷದಿಂದ ಏಪ್ರಿಲ್ 22 ರ ಬೆಳಗಿನ ಜಾವ 4 ಗಂಟೆ 43 ನಿಮಿಷದವರೆಗೆ ಅಸ್ತಂಗತ ಸ್ಥಿತಿಯಲ್ಲಿ ಇರಲಿದ್ದು, ಈ ಅವಧಿಯಲ್ಲಿ ಅದರ ಪ್ರಭಾವ ಕಡಿಮೆಯಾಗಲಿದೆ. ಈ ಅವಧಿಯು ಸುಮಾರು 40 ದಿನಗಳ ಕಾಲ ಮೀನ ರಾಶಿಯಲ್ಲಿ ಸಂಭವಿಸಲಿದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಶನಿ ಗ್ರಹವು 15 ಡಿಗ್ರಿಗಳೊಳಗೆ ಸೂರ್ಯನಿಗೆ ಹತ್ತಿರ ಬಂದಾಗ ಅಸ್ತಂಗತನಾಗುತ್ತದೆ. ರಾಹು ಮತ್ತು ಕೇತು ಗ್ರಹಗಳು ಅಸ್ತಂಗತವಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಗುರು ಮತ್ತು ಶುಕ್ರ ಅಸ್ತವಾದಾಗ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅದೇ ರೀತಿ, ಶನಿ ಅಸ್ತಂಗತನಾದಾಗ ಕೆಲವು ಕ್ಷೇತ್ರಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆ ಇದೆ. ಸಿಸ್ತು ಮತ್ತು ಪರಿಶ್ರಮದ ಸಂಕೇತವಾಗಿರುವ ಶನಿಯು ಅಸ್ತಂಗತನಾದಾಗ ಪೊಲೀಸ್, ಆರ್ಮಿ, ಹಾಗೂ ಸಾರ್ವಜನಿಕ ಜೀವನದಂತಹ ಕ್ಷೇತ್ರಗಳಲ್ಲಿ ಶಿಸ್ತಿನ ಬಗ್ಗೆ ಹೆಚ್ಚು ಗಮನ ನೀಡಬೇಕಾಗಬಹುದು.

ಈ ಶನಿ ಅಸ್ತಂಗತದ ಪರಿಣಾಮವಾಗಿ ಯುದ್ಧಗಳು, ಗ್ಯಾಸ್ ಸಿಲಿಂಡರ್‌ಗಳ ಕೊರತೆ, ಉದ್ಯೋಗ, ವ್ಯಾಪಾರ, ವ್ಯವಹಾರ ಮತ್ತು ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳು, ಕೆಲವು ಆರೋಗ್ಯ ಸಮಸ್ಯೆಗಳು ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಏರುಪೇರುಗಳು ಸಂಭವಿಸಬಹುದು.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ದ್ವಾದಶ ರಾಶಿಗಳ ಮೇಲೆ ಶನಿ ಅಸ್ತಂಗತದ ಪರಿಣಾಮಗಳು:

  • ಮೇಷ ರಾಶಿ: ಧನ ಹಾನಿ ಮತ್ತು 12ನೇ ಮನೆಯಲ್ಲಿ ಉದ್ಯೋಗದಲ್ಲಿ ಕಷ್ಟಗಳ ಸಾಧ್ಯತೆ.
  • ವೃಷಭ ರಾಶಿ: 11ನೇ ಮನೆಯಲ್ಲಿ ಆದಾಯದಲ್ಲಿ ಏರುಪೇರುಗಳು.
  • ಮಿಥುನ ರಾಶಿ: 10ನೇ ಮನೆಯಲ್ಲಿ ಜವಾಬ್ದಾರಿಗಳು ಮತ್ತು ವೃತ್ತಿಯಲ್ಲಿ ಬದಲಾವಣೆಗಳು.
  • ಕರ್ಕಾಟಕ ರಾಶಿ: 9ನೇ ಮನೆಯಲ್ಲಿ ಪಿತ್ರಾರ್ಜಿತ ಆಸ್ತಿಗಳ ಸಮಸ್ಯೆಗಳು.
  • ಸಿಂಹ ರಾಶಿ: 8ನೇ ಮನೆಯಲ್ಲಿ ಅಷ್ಟಮ ಶನಿ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಮಯ.
  • ಕನ್ಯಾ ರಾಶಿ: 7ನೇ ಮನೆಯಲ್ಲಿ ವಿವಾಹ ಮತ್ತು ಪಾಲುದಾರಿಕೆ ವಿಷಯಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಯ.
  • ತುಲಾ ರಾಶಿ: 6ನೇ ಮನೆಯಲ್ಲಿ ದುಸ್ಥಾನ, ಶತ್ರು ಸ್ಥಾನ, ಸಾಲಬಾಧೆಗಳು ಕಡಿಮೆಯಾಗಬಹುದು.
  • ವೃಶ್ಚಿಕ ರಾಶಿ: 5ನೇ ಸ್ಥಾನದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡಬೇಕಾದ ಅವಧಿ.
  • ಧನುಸ್ಸು ರಾಶಿ: 4ನೇ ಸುಖ ಸ್ಥಾನದಲ್ಲಿ ಶುಭಸುದ್ದಿಗಳು, ಮನೆ ಯೋಗ, ತಂದೆತಾಯಿಗಳ ಆಶೀರ್ವಾದ ಸಿಗುತ್ತದೆ, ಸಾಕಷ್ಟು ಶುಭ ಫಲಗಳು.
  • ಮಕರ ರಾಶಿ: 3ನೇ ಸ್ಥಾನದಲ್ಲಿ ಅಣ್ಣತಮ್ಮಂದಿರ ಜೊತೆ ಭಿನ್ನಾಭಿಪ್ರಾಯಗಳು, ಆದರೆ ಆತ್ಮವಿಶ್ವಾಸ ವೃದ್ಧಿ.
  • ಕುಂಭ ರಾಶಿ: 2ನೇ ವಾಕ್‌ಸ್ಥಾನ, ಧನಸ್ಥಾನ, ಕುಟುಂಬ ಸ್ಥಾನದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಶುಭ ಫಲ.
  • ಮೀನ ರಾಶಿ: 1ನೇ ಮನೆಯಲ್ಲಿ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಜಾಗರೂಕರಾಗಿದ್ದರೆ ಒಳ್ಳೆಯದು.

ಈ ಎಲ್ಲಾ ಫಲಗಳು ದಶಾಭುಕ್ತಿಗಳನ್ನೂ ಅವಲಂಬಿಸಿರುತ್ತವೆ. ಶನಿ ಅಸ್ತಂಗತನಾದಾಗ ಶನಿಯ ಮಂತ್ರ, ಶನಿಯ ಸ್ತೋತ್ರ, ಎಳ್ಳಿನ ದೀಪ ಹಚ್ಚುವುದು, ದೇವಿಯ ದರ್ಶನ ಮತ್ತು ಹನುಮನ ಆರಾಧನೆ ಮಾಡುವುದರಿಂದ ಬಹಳಷ್ಟು ಶುಭಫಲಗಳನ್ನು ಪಡೆಯಬಹುದು. ಈ 40 ದಿನಗಳಲ್ಲಿ ಭೂಗೋಳ ಮತ್ತು ಪ್ರಪಂಚದಲ್ಲಿ ಸಾಕಷ್ಟು ಪರಿವರ್ತನೆಗಳು ಆಗುತ್ತವೆ. ಇವೆಲ್ಲವೂ ಶಾಸ್ತ್ರಬದ್ಧವಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link