All posts by nagaraj11081993

ಹುಡುಗಿ ಕೈಕೊಟ್ಟಿದ್ದಕ್ಕೆ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಯುವಕನ ಹೈಡ್ರಾಮಾ: ಪ್ರೇಮಿಯ ಹುಚ್ಚಾಟಕ್ಕೆ ಜನರು ಕಂಗಾಲು – Kannada News | Anekal Love Failure Drama: Dejected Lover Climbs High Tension Electric Pole After Girl Rejects Marriage Proposal

ಹೈಟೆನ್ಷನ್ ಕಂಬ ಹತ್ತಿದ ಭಗ್ನ ಪ್ರೇಮಿImage Credit source: tv9

ಆನೇಕಲ್, ಮೇ 20: ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿ ಕೈಕೊಟ್ಟಿದ್ದಾಳೆಂಬ ಕಾರಣಕ್ಕೆ ಬೇಸತ್ತ ಯುವಕನೊಬ್ಬ ಅಪಾಯಕಾರಿ ಸಾಹಸ ಮಾಡಿದ್ದಾನೆ. ಆತ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ. ಚಿನ್ನಯ್ಯನಪಾಳ್ಯದ ನಿವಾಸಿಯಾದ ಸೋಮಶೇಖರ್ ಎಂಬಾತನೇ ವಿದ್ಯುತ್ ಕಂಬದ ಮೇಲೇರಿ ಹೈಡ್ರಾಮಾ ಸೃಷ್ಟಿಸಿರುವ ಪ್ರೇಮಿ. ಈತನ ಹುಚ್ಚಾಟದಿಂದಾಗಿ ಇಡೀ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಗಂಟೆಗಟ್ಟಲೆ ಆತಂಕದಲ್ಲಿ ಕಳೆಯುವಂತಾಯಿತು.

ಮುಖ್ಯಾಂಶಗಳು

  • ಕಳೆದ 3 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಸೋಮಶೇಖರ್.
  • ಆಕೆ ಮದುವೆ ನಿರಾಕರಿಸಿ ಲವ್ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಮನನೊಂದು ಈ ಕೃತ್ಯ .
  • ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ.

ಸ್ಥಳೀಯ ಮೂಲಗಳ ಪ್ರಕಾರ, ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಯುವತಿಯು ಮದುವೆಗೆ ನಿರಾಕರಿಸಿ, ಪ್ರೇಮ ಸಂಬಂಧವನ್ನು ಮುರಿದುಕೊಳ್ಳಲು (ಲವ್ ಬ್ರೇಕಪ್) ಮುಂದಾಗಿದ್ದಾಳೆ. ಇದರಿಂದ ತೀವ್ರ ಆಕ್ರೋಶಗೊಂಡ ಸೋಮಶೇಖರ್, ಮೊದಲು ತನ್ನ ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ದಾಂಧಲೆ ನಡೆಸಿದ್ದಾನೆ. ಅದಾದ ಬಳಿಕವೂ ಆಕ್ರೋಶ ತಣಿಯದೇ, ಮನೆ ಸಮೀಪದಲ್ಲೇ ಇದ್ದ ಭಾರಿ ಗಾತ್ರದ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೇರಿದ್ದಾನೆ. ‘ತಾನು ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರುವವರೆಗೂ ತಾನು ಯಾವುದೇ ಕಾರಣಕ್ಕೂ ಕೆಳಗೆ ಇಳಿಯುವುದಿಲ್ಲ’ ಎಂದು ಕಂಬದ ಮೇಲಿಂದಲೇ ಪಟ್ಟು ಹಿಡಿದು ಕಿರುಚಾಡಿದ್ದಾನೆ.

ಹೈಟೆನ್ಷನ್ ಕಂಬದಲ್ಲಿ ಯುವಕ: ವಿಡಿಯೋ ಇಲ್ಲಿ ನೋಡಿ

ವಿಷಯ ತಿಳಿಯುತ್ತಿದ್ದಂತೆಯೇ ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಕಂಬದ ಸುತ್ತಲೂ ನೂರಾರು ಗ್ರಾಮಸ್ಥರು ಜಮಾಯಿಸಿದ್ದು, ಯುವಕನಿಗೆ ತಿಳಿಹೇಳಿ ಕೆಳಗಿಳಿಸಲು ಶತಪ್ರಯತ್ನ ನಡೆಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಯುವಕ ಮಾತ್ರ ಕೆಳಗಿಳಿಯಲು ಒಪ್ಪದೆ ಹಠ ಹಿಡಿದಿದ್ದಾನೆ. ಕಂಬದಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಆಪಾಯವಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂ ಎನ್​​ಟಿಆರ್​​ಗೆ ಏನಾಗಿದೆ? ಕಾಡುತ್ತಿದ್ದೆಯೇ ಅನಾರೋಗ್ಯ?

ಇಂದು (ಮೇ 20) ತೆಲುಗು ಚಿತ್ರರಂಗದ ಸ್ಟಾರ್ ನಟ ಜೂ ಎನ್​​ಟಿಆರ್ (Jr NTR) ಹುಟ್ಟುಹಬ್ಬ. ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಜೂ ಎನ್​​ಟಿಆರ್ ಆಚರಿಸಿಕೊಳ್ಳುತ್ತಿದ್ದಾರೆ. ಭಾರಿ ಸಂಖ್ಯೆಯ ಅಭಿಮಾನಿಗಳು ನಟನ ಮನೆ ಬಳಿ ತೆರಳಿ ನೆಚ್ಚಿನ ನಟನಿಗೆ ಶುಭಾಶಯಗಳನ್ನು ತಿಳಿಸಿದರು. ಜೂ ಎನ್​​ಟಿಆರ್ ಸಹ ಮಧ್ಯರಾತ್ರಿ ಎದ್ದು ಬಂದು ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ಹೇಳಿದರು. ಜೂ ಎನ್​​ಟಿಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ಜೊತೆಗೆ ಅವರ ಬಗ್ಗೆ ಅವರ ಆರೋಗ್ಯದ ಬಗ್ಗೆ ಕೆಲವರು ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ವರ್ಷಗಳಿಂದಲೂ ಜೂ ಎನ್​​ಟಿಆರ್ ಅವರನ್ನು ನೋಡುತ್ತಾ ಬಂದವರಿಗೆ ಇತ್ತೀಚೆಗೆ ಅವರಲ್ಲಾಗಿರುವ ಬದಲಾವಣೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜೂ ಎನ್​​ಟಿಆರ್ ಖಂಡಿತ ಹೀಗಿರಲಿಲ್ಲ. ಅವರಿಗೆ ಏನೋ ಆಗಿದೆ.

ಜೂ ಎನ್​​ಟಿಆರ್ ಮೊದಲು ಬಹಳ ದಪ್ಪ ಇದ್ದರು. ಆದರೆ 2007 ರಲ್ಲಿ ತೂಕ ಇಳಿಸಿಕೊಂಡು ಸಣ್ಣಗಾದರು. ಬಳಿಕ ಅವರ ವೃತ್ತಿ ಜೀವನ ಇನ್ನೂ ಏರುಗತಿ ಹಿಡಿಯಿತು. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದರು. ತೆರೆಯ ಮೇಲೆ ಮತ್ತು ತೆರೆಯಾಚೆಯ ವ್ಯಕ್ತಿತ್ವದಿಂದಲೂ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದರು. ಜೂ ಎನ್​​ಟಿಆರ್ ಅನ್ನು ತೆರೆಯ ಮೇಲೆ ನೋಡುವುದೇ ಒಂದು ಆನಂದವಾಗಿತ್ತು.

ಅವರ ಸಿನಿಮಾಗಳಷ್ಟೆ ಅವರ ಸಂದರ್ಶನಗಳು ಸಹ ಬಹಳ ಮಜವಾಗಿರುತ್ತಿದ್ದವು. ಜೂ ಎನ್​​ಟಿಆರ್ ಅದ್ಭುತವಾದ ಮಾತುಗಾರ. ಬಹಳ ತಮಾಷೆ ಪ್ರವೃತ್ತಿಯ ವ್ಯಕ್ತಿತ್ವ ಅವರದ್ದು. ಮುಖದ ಮೇಲೆ ಸದಾ ನಗು ಇದ್ದೇ ಇರುತ್ತಿತ್ತು. ಆದರೆ ಅದೆಲ್ಲ ಈಗ ಮಾಯವಾದಂತೆ ಕಾಣುತ್ತಿದೆ. ಇತ್ತೀಚೆಗಿನ ಜೂ ಎನ್​​ಟಿಆರ್ ಅವರ ವಿಡಿಯೋ, ಫೋಟೊಗಳು ನೋಡಿದರೆ ಜೂ ಎನ್​​ಟಿಆರ್ ಯಾವುದೋ ನೋವಿನಲ್ಲಿರುವಂತೆ ಭಾಸವಾಗುತ್ತದೆ. ಅವರ ಮುಖದಲ್ಲಿ ಹಿಂದಿನ ಕಳೆಯೇ ಇಲ್ಲವಲ್ಲ ಎನಿಸುತ್ತದೆ. ಮುಖ್ಯವಾದ ಅವರ ಮುಖದಲ್ಲಿ ಆ ಅದ್ಭುತ ನಗು ಮಾಯವಾಗಿದೆ.

ಇದನ್ನೂ ಓದಿ:ನಟ ಜೂ ಎನ್​ಟಿಆರ್ ಸಿಎಂ ಆಗಲಿದ್ದಾರೆ: ಶಾಸಕ ಹೇಳಿಕೆ

ಜೂ ಎನ್​​ಟಿಆರ್ ಅವರಿಗೆ ಅದ್ಭುತವಾದ ಚುರುಕುತನ, ಎನರ್ಜಿ ಇತ್ತು. ಅವರು ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಂಡರು ಆ ಎನರ್ಜಿ, ಚುರುಕುತನ ಎದ್ದು ಕಾಣುತ್ತಿತ್ತು. ನಗುತ್ತಾ, ಜೊತೆಗಿದ್ದವರ ನಗಿಸುತ್ತಾ ಇರುತ್ತಿದ್ದರು. ‘ಆರ್​ಆರ್​​ಆರ್’ ಸಿನಿಮಾ ಸಮಯದ ಯಾವುದೇ ಸಂದರ್ಶನ ತೆಗೆದು ನೋಡಿ, ಅಲ್ಲಿ ಶೈನ್ ಆಗಿದ್ದೇ ಜೂ ಎನ್​​ಟಿಆರ್. ತಮ್ಮ ತಮಾಷೆ ಉತ್ತರಗಳು, ರಾಮ್ ಚರಣ್ ಜೊತೆಗೆ ತುಂಟಾಟ ಸಖತ್ ಮಜಾ ಕೊಡುತ್ತಿದ್ದವು. ಆದರೆ ಇತ್ತೀಚೆಗೆ ಜೂ ಎನ್​​ಟಿಆರ್ ಮುಖದಲ್ಲಿ ಸಪ್ಪೆ ತನ ತುಂಬಿಕೊಂಡಿದೆ.

ಇಂದು ‘ಡ್ರ್ಯಾಗನ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್​​ನಲ್ಲಿ ಜೂ ಎನ್​​ಟಿಆರ್ ಸಖತ್ ಫಿಟ್ ಆಗಿ ಕಾಣುತ್ತಿದ್ದಾರೆ ಆದರೆ ಮುಖದಲ್ಲಿ ಹಿಂದೆ ಇದ್ದ ಕಳೆ ಮಾಯವಾಗಿದೆ. ಜೂ ಎನ್​​ಟಿಆರ್ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆಯೇ? ಅಥವಾ ಮಾನಸಿಕ ಸಮಸ್ಯೆಗಳು ಏನಾದರೂ ಎದುರಾಗಿದೆಯೇ ಎಂದು ಅಭಿಮಾನಿಗಳು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಹಿಂದಿನ ಜೂ ಎನ್​​ಟಿಆರ್ ಅನ್ನು ಕಾಣಲು ಬಯಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಿತಾ ಶೆಟ್ಟಿ ಶ್ವಾನ ಪ್ರೇಮ; ಕೋಳಿ ಬೇಯಿಸಿಕೊಟ್ಟ ಬಿಗ್ ಬಾಸ್ ರನ್ನರ್ ಅಪ್ – Kannada News | Bigg Boss Fame Rakshita Shetty feed Chicken To Dogs

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More

Source link

Gold Rate: ಚಿನ್ನದ ಬೆಲೆ ಸತತ ಏರಿಕೆ; ಬೆಳ್ಳಿ ಬೆಲೆ ಸತತ ಇಳಿಕೆ – Kannada News | Gold Price Today on 20th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 20: ಚಿನ್ನದ ಬೆಲೆ ಮತ್ತೆ ಏರಿದೆ. ನಿನ್ನೆ 75 ರೂ ಹೆಚ್ಚಿದ್ದ ಇದರ ಬೆಲೆ ಇವತ್ತು ಬುಧವಾರ 120 ರೂಗಳಷ್ಟು ಏರಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ತುಸು ಇಳಿದಿದೆ. ಭಾರತದಲ್ಲಿ ಬಂಗಾರದ ದರ (Gold Rate) ಹಿಗ್ಗಿದೆ. ರುಪಾಯಿ ಮೌಲ್ಯ ಕುಸಿತದಿಂದ ಬೆಲೆ ಏರಿಕೆ ಹೆಚ್ಚು ಅಗಾಧವಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಇಂದು ಗ್ರಾಮ್​ಗೆ 5 ರೂನಿಂದ 15 ರೂವರೆಗೆ ಕುಸಿತ ಕಂಡಿದೆ. ನಿನ್ನೆಯೂ ಇದರ ಬೆಲೆಯಲ್ಲಿ ಇಳಿಕೆ ಆಗಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,45,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,58,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,45,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 20ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,835 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,515 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,876 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,835 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,515 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,515 ರೂ
  • ಚೆನ್ನೈ: 14,750 ರೂ
  • ಮುಂಬೈ: 14,515 ರೂ
  • ದೆಹಲಿ: 14,530 ರೂ
  • ಕೋಲ್ಕತಾ: 14,515 ರೂ
  • ಕೇರಳ: 14,515 ರೂ
  • ಅಹ್ಮದಾಬಾದ್: 14,520 ರೂ
  • ಜೈಪುರ್: 14,530 ರೂ
  • ಲಕ್ನೋ: 14,530 ರೂ
  • ಭುವನೇಶ್ವರ್: 14,515 ರೂ

ಇದನ್ನೂ ಓದಿ: ಅಮೆರಿಕದ ಡೆಟ್ ಮಾರುಕಟ್ಟೆಯನ್ನು ತೊರೆಯುತ್ತಿರುವ ಹೂಡಿಕೆದಾರರು; ಏನು ಕಾರಣ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 549 ರಿಂಗಿಟ್ (13,375 ರುಪಾಯಿ)
  • ದುಬೈ: 502 ಡಿರಾಮ್ (13,241 ರುಪಾಯಿ)
  • ಅಮೆರಿಕ: 140.50 ಡಾಲರ್ (13,605 ರುಪಾಯಿ)
  • ಸಿಂಗಾಪುರ: 181.50 ಸಿಂಗಾಪುರ್ ಡಾಲರ್ (13,710 ರುಪಾಯಿ)
  • ಕತಾರ್: 499.50 ಕತಾರಿ ರಿಯಾಲ್ (13,288 ರೂ)
  • ಸೌದಿ ಅರೇಬಿಯಾ: 511 ಸೌದಿ ರಿಯಾಲ್ (13,192 ರುಪಾಯಿ)
  • ಓಮನ್: 53.75 ಒಮಾನಿ ರಿಯಾಲ್ (13,525 ರುಪಾಯಿ)
  • ಕುವೇತ್: 41.42 ಕುವೇತಿ ದಿನಾರ್ (12,979 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 285 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 285 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 285 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಟ್ರಾಫಿಕ್​​ನಲ್ಲಿ 3 ಗಂಟೆ ಪರದಾಟ: ನಡೆದೇ ಮನೆಗೆ ಹೋಗಬಹುದಿತ್ತು ಎಂದ ವ್ಯಕ್ತಿ; ಪೋಸ್ಟ್​​ ವೈರಲ್​​ – Kannada News | Bengaluru Man’s Post On 3 Hour Traffic Nightmare Goes Viral in Social Media

ಬೆಂಗಳೂರು, ಮೇ 20: ಮಳೆ ಬಂತೆಂದರೆ ಸಾಕು ಬೆಂಗಳೂರಿನ (Bengaluru) ರಸ್ತೆಗಳು ಹೊಳೆಯಂತಾಗೋದು ನಗರ ನಿವಾಸಿಗಳಿಗೆ ಹೊಸದೇನೂ ಅಲ್ಲ. ಈ ವೇಳೆ ಉಂಟಾಗುವ ಟ್ರಾಫಿಕ್​​ ಸಮಸ್ಯೆಯ ಕುರಿತಂತೂ ಮತ್ತೆ ಹೇಳಬೇಕಿಲ್ಲ. ಯಾವಾಗ ಮನೆ, ಕಚೇರಿ ಅಥವಾ ಗಮ್ಯ ಸ್ಥಾನ ತಲುಪುತ್ತೇವೆ ಎಂದು ವಾಹನ ಸವಾರರು ಹೇಳಲು ಸಾಧ್ಯವೇ ಇಲ್ಲ. ಈ ನಡುವೆ ಮೊನ್ನೆ ಬೆಂಗಳೂರಲ್ಲಿ ಸುರಿದ ಮಳೆಯ ವೇಳೆ ಕಲ್ಯಾಣನಗರದಿಂದ ಮಾನ್ಯತಾ ಟೆಕ್ ಪಾರ್ಕ್‌ವರೆಗೆ ಸುಮಾರು 4 ಕಿ.ಮೀ. ಕ್ರಮಿಸಲು ವ್ಯಕ್ತಿಯೋರ್ವರು ಒಂದೂವರೆ ಗಂಟೆ ಸಮಯ ತೆಗೆದುಕೊಂಡ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​​ ಆಗಿದೆ.

ಮೇ 18ರ ಸೋಮವಾರ ಸಂಜೆ ಸುರಿದ ಭಾರೀ ಮಳೆಯು ನಗರದ ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿತು. ಇದರಿಂದ ಬೇಸತ್ತ ವರುಣ್​​ ರಂಗರಾಜನ್​​ ಎಂಬವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಪ್ರಕಾರ, ಅವರು ಸಂಜೆ 5:17ಕ್ಕೆ ಬೆಳ್ಳಂದೂರಿನಿಂದ ಹೊರಟಿದ್ದು, ಔಟರ್ ರಿಂಗ್ ರೋಡ್‌ನಲ್ಲಿ ಭಾರೀ ಟ್ರಾಫಿಕ್‌ಗೆ ಸಿಲುಕಿದ್ದಾರೆ. ಹೀಗಾಗಿ ಬರೋಬ್ಬರಿ 3 ಗಂಟೆಗಳ ಕಾಲ ತಾನು ಟ್ರಾಫಿಕ್​​ನಲ್ಲಿ ಸಿಲುಕಿದ್ದೆ. ಕೇವಲ ಕಲ್ಯಾಣನಗರದಿಂದ ಮಾನ್ಯತಾ ಟೆಕ್ ಪಾರ್ಕ್‌ವರೆಗೆ ಬರಲು ಸುಮಾರು ಒಂದೂವರೆ ಗಂಟೆ ಸಮಯ ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ವಿಡಿಯೋ ವೈರಲ್ ಬೆನ್ನಲ್ಲೇ ಹುಳಿಮಾವು ಪೊಲೀಸರಿಂದ ಆರೋಪಿಯ ಬಂಧನ 

ಪರಿಸ್ಥಿತಿ ಹೀಗಿದ್ದರೂ ಮಾರ್ಗಮಧ್ಯೆ ಒಬ್ಬ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೂ ಕಾಣಿಸಲಿಲ್ಲ. ಗೂಗಲ್ ಮ್ಯಾಪ್ ಪ್ರಕಾರ ಮನೆಗೆ ನಡೆದು ಹೋದರೂ ಇದೇ ಸಮಯ ತೆಗೆದುಕೊಳ್ಳುತ್ತಿತ್ತು ಎಂದು ಎಕ್ಸ್​​ ಪೋಸ್ಟ್​​ನಲ್ಲಿ ವರುಣ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಈ ಪೋಸ್ಟ್​​ಗೆ ಅನೇಕರು ಪ್ರತಿಕ್ರಿಯಿಸಿದ್ದು, ಹಲವರು ಇದು ನಮ್ಮ ದೈನಂದಿನ ಕಥೆ ಎಂದು ಹೇಳಿಕೊಂಡಿದ್ದಾರೆ. ಮಳೆ ಬಂತೆಂದರೆ ಬೆಂಗಳೂರಿನ ಅನೇಕ ರಸ್ತೆಗಳು ಜಲಾವೃತಗೊಂಡು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳೂವುದು ಹೊಸತೇನಲ್ಲ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು – Kannada News | Rs 6.5 Crore for 3BHK Flat in Bengaluru’s Miller’s Road Goes Viral on Reddit

ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ!

ಬೆಂಗಳೂರು, ಮೇ 20: ನಗರದಲ್ಲಿ ಮನೆ ಕೊಳ್ಳುವುದು ಸಾಮಾನ್ಯ ಮಧ್ಯಮ ವರ್ಗದವರಿರಲಿ (Middle Class), ಲಕ್ಷ ಲಕ್ಷ ಸಂಬಳ ಪಡೆಯುವ ಐಟಿ ಉದ್ಯೋಗಿಗಳಿಗೂ ಈಗ ಮರೀಚಿಕೆಯಂತಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ರೆಡ್ಡಿಟ್‌ನ ಬೆಂಗಳೂರು ರಿಯಲ್ ಎಸ್ಟೇಟ್ಸ್ (BangaloreRealEstates) ಕಮ್ಯುನಿಟಿಯಲ್ಲಿ ಪೋಸ್ಟ್ ಮಾಡಲಾದ ಒಂದು ಅಪಾರ್ಟ್‌ಮೆಂಟ್‌ನ ಮಾರಾಟದ ಜಾಹೀರಾತು ಮತ್ತು ಅದರ ಬೆಲೆ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ಬೆನ್ಸನ್ ಟೌನ್ 3BHK ಫ್ಲ್ಯಾಟ್ ಬೆಲೆ ಇಂಟರ್ನೆಟ್‌ನಲ್ಲಿ ಭಾರಿ ವೈರಲ್.
  • 2,850 ಚದರ ಅಡಿಯ ಐಷಾರಾಮಿ ಫ್ಲ್ಯಾಟ್‌ಗೆ 6.5 ಕೋಟಿ ರೂ.
  • ದುಬಾರಿ ಬೆಲೆ ಕಂಡು ಮಧ್ಯಮ ವರ್ಗದ ನೆಟ್ಟಿಗರಿಂದ ತೀವ್ರ ಆಕ್ರೋಶ.

ಬೆಂಗಳೂರಿನ ಅತ್ಯಂತ ಐಷಾರಾಮಿ ಮತ್ತು ಪ್ರತಿಷ್ಠಿತ ಪ್ರದೇಶವಾದ ಬೆನ್ಸನ್ ಟೌನ್‌ನ (Benson Town) ಮಿಲ್ಲರ್ಸ್ ರಸ್ತೆಯಲ್ಲಿರುವ ಈ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಈ ಬೆಲೆಯನ್ನು ನೋಡಿ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ.

ಫ್ಲ್ಯಾಟ್‌ನಲ್ಲೇನಿದೆ ಅಂಥಾ ವಿಶೇಷ?

ವೈರಲ್ ಆಗಿರುವ ಮಾಹಿತಿ ಪ್ರಕಾರ, ಈ ಅಪಾರ್ಟ್‌ಮೆಂಟ್ ಕಟ್ಟಡದ 6ನೇ ಮಹಡಿಯಲ್ಲಿದೆ. 2,850 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಫ್ಲ್ಯಾಟ್ ಸಂಪೂರ್ಣವಾಗಿ ಪೀಠೋಪಕರಣಗಳಿಂದ ಸಜ್ಜುಗೊಂಡಿದೆ (Fully Furnished). ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. ಯುವ ಜನತೆ ತಮಗೆ ಎದುರಾಗಿರುವ ಆರ್ಥಿಕ ಅಸಹಾಯಕತೆಯನ್ನು ಕಮೆಂಟ್‌ಗಳ ಮೂಲಕ ಹೊರಹಾಕುತ್ತಿದ್ದಾರೆ.

ನೆಟ್ಟಿಗರ ರಿಯಾಕ್ಷನ್ ಏನು?

ಒಬ್ಬ ಬಳಕೆದಾರರು ಕಮೆಂಟ್ ಮಾಡಿ, ಇದು ನಿಜಕ್ಕೂ ನನ್ನ ಕನಸಿನ ಮನೆ. ನಾನು ವರ್ಷಕ್ಕೆ 30 ಲಕ್ಷ ರೂ. ಸಂಬಳ ಪಡೆಯುತ್ತಿದ್ದೇನೆ. ಆದರೂ ನಾನು ಕೆಳ ಮಧ್ಯಮ ವರ್ಗದಿಂದ ಬಂದವನು. ಇನ್ನು ಎಷ್ಟು ವರ್ಷ ಕಷ್ಟಪಟ್ಟು ದುಡಿದರೂ ನನ್ನ ಜೀವನದಲ್ಲಿ ಇಷ್ಟೊಂದು ಹಣ ಕೊಟ್ಟು ಇಂತಹ ಮನೆ ಖರೀದಿಸಲು ಸಾಧ್ಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರು ಅಪಾರ್ಟ್‌ಮೆಂಟ್‌ನ ವಿನ್ಯಾಸವನ್ನು ಮೆಚ್ಚಿಕೊಂಡಿದ್ದಾರಾದರೂ, ಕೇವಲ ಒಂದು ಫ್ಲ್ಯಾಟ್‌ಗೆ ಇಷ್ಟೊಂದು ಕೋಟಿ ಸುರಿಯುವ ಬದಲು, ಬೇರೆ ಕಡೆ ವಿಶಾಲವಾದ ಸೈಟ್ ತಗೆದುಕೊಂಡು ಸ್ವತಂತ್ರವಾಗಿ ದೊಡ್ಡ ಬಂಗಲೆಯನ್ನೇ ಕಟ್ಟಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ ಫುಟ್​ಪಾತ್​ಗೂ ಬಂತು​ ಟಿಂಡರ್ ಮಾದರಿಯ ಆ್ಯಪ್: ಹದಿಹರೆಯದ ಬಾಲಕನ ಐಡಿಯಾಗೆ ನೆಟ್ಟಿಗರು ಫಿದಾ!

ಇಷ್ಟೆಲ್ಲಾ ಟ್ರೋಲ್‌ಗಳ ನಡುವೆ ಕೆಲವರು ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಗರದ ಹೃದಯಭಾಗದಲ್ಲಿದೆ ಮತ್ತು ಅತ್ಯಂತ ಪ್ರೀಮಿಯಂ ಏರಿಯಾ ಆಗಿದೆ. ಇಲ್ಲಿನ ಸೌಲಭ್ಯಗಳಿಗೆ ಈ ಬೆಲೆ ನಿರೀಕ್ಷಿತವೇ. ಬೆಂಗಳೂರಿನ ಐಷಾರಾಮಿ ಹೌಸಿಂಗ್ ಮಾರ್ಕೆಟ್ ಸಖತ್ ಡಿಮ್ಯಾಂಡ್‌ನಲ್ಲಿದೆ, ಇದನ್ನು ಕೊಳ್ಳುವ ಶ್ರೀಮಂತರು ಇದ್ದೇ ಇರುತ್ತಾರೆ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಡಿಒಗೆ ಫೋನ್​​ ಕರೆಯಲ್ಲೇ ಕ್ಲಾಸ್​​ ತೆಗೆದುಕೊಂಡ ಸಂಸದ ಸುನೀಲ್ ಬೋಸ್: ಕಾರಣ ಇಲ್ಲಿದೆ – Kannada News | MP Sunil Bose Scolds PDO Over Absence from Public Meeting

ಮೈಸೂರು, ಮೇ 20: ಸಾರ್ವಜನಿಕ ಸಭೆಯಲ್ಲಿ ಗೈರುಹಾಜರಿಯ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು (ಪಿಡಿಒ) ಸಂಸದ ಸುನೀಲ್ ಬೋಸ್ ತರಾಟೆಗೆ ಪಡೆದ ಪ್ರಸಂಗ ನಡೆದಿದೆ. ಕೊತ್ತನಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಸಂಸದ ಸುನಿಲ್ ಬೋಸ್ ಅವರಿಗೆ ಸ್ಥಳೀಯರು ಸಮಸ್ಯೆಗಳ ಅರ್ಜಿ ನೀಡಿದ್ದರು.  ಸಂಸದರು ಬಂದರೂ ಪಿಡಿಒ ಗೈರಾಗಿದ್ದ ಕಾರಣ ಸಿಟ್ಟಾದ ಸುನೀಲ್ ಬೋಸ್, ನಂಜನಗೂಡು ದೇವರಾಯಶೆಟ್ಟಿ ಪುರ ಗ್ರಾಮ ಪಂಚಾಯ್ತಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಡಿಒಗೆ ದೂರವಾಣಿ ಕರೆ ಮಾಡಿ ಗೈರಿನ ಬಗ್ಗೆ ವಿಚಾರಿಸಿದ್ದು, ಈ ವೇಳೆ ಕೆಡಿಪಿ ಸಭೆಯಲ್ಲಿ ಇರೋದಾಗಿ ಉತ್ತರ ಬಂದಿದೆ.  ಕೂಡಲೇ ಗರಂ ಆದ ಸಂಸದರು ನಾನು ಮಾಡದ ಕೆಡಿಪಿ ಸಭೆಯಾ? ಕೆಡಿಪಿ ಸಭೆಗೆ ಇಒಗಳು ಏಕೆ ಹೋಗಬೇಕು? ನಿನಗೇನು ಕೆಲಸ? ಯಾವ ಪಿಡಿಓ ಕೆಡಿಪಿ ಸಭೆಗೆ ಹೋಗಿದ್ದಾನೆ? ಕಥೆ ಹೇಳಬೇಡ, ನೀವೆಲ್ಲಾ ನಾಟಕ ಆಡ್ತಿದ್ದೀರ. ಯಾರಿಗಯ್ಯ ಹೂವು ಮುಡಿಸ್ತಿದ್ದೀಯ ಎಂದು ಕ್ಲಾಸ್​​ ತೆಗೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಎಂಟಿಸಿ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ವಿಡಿಯೋ ವೈರಲ್ ಬೆನ್ನಲ್ಲೇ ಹುಳಿಮಾವು ಪೊಲೀಸರಿಂದ ಆರೋಪಿಯ ಬಂಧನ – Kannada News | Bengaluru BMTC Bus Driver Assault: Hulimavu Police Arrest Main Accused After Viral Video Sparks Outrage

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ಬೆಂಗಳೂರು, ಮೇ 20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ ಚಾಲಕರೊಬ್ಬರ ಮೇಲೆ ರಸ್ತೆಯಲ್ಲೇ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಭೀಕರ ಘಟನೆಗೆ ಸಂಬಂಧಿಸಿದಂತೆ ಹುಳಿಮಾವು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಶೋಯಿಬ್ (26) ಎಂದು ಗುರುತಿಸಲಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಈತನನ್ನು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.

ಮುಖ್ಯಾಂಶಗಳು

  • ಬನ್ನೇರುಘಟ್ಟಕ್ಕೆ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಚಾಲಕನ ಮೇಲೆ ಹಲ್ಲೆ ಪ್ರಕರಣ.
  • ಆರೋಪಿ ಅಬ್ದುಲ್ ಶೋಯಿಬ್​ನನ್ನು ಬಂಧಿಸಿದ ಪೊಲೀಸರು.
  • ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮೇ 12ರಂದು ಮಧ್ಯಾಹ್ನ 2:30ರ ಸುಮಾರಿಗೆ ಬನಶಂಕರಿಯಿಂದ ಬನ್ನೇರುಘಟ್ಟಕ್ಕೆ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಅನ್ನು ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ಬಳಿ ಬೈಕ್‌ನಲ್ಲಿ ಬಂದ ಮೂವರು ತಡೆದು, ಚಾಲಕನೊಂದಿಗೆ ಗಲಾಟೆ ತೆಗೆದಿದ್ದರು. ಆರೋಪಿಗಳು ರಸ್ತೆಯಲ್ಲೇ ಚಾಲಕನಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಮಾರಕಾಸ್ತ್ರಗಳನ್ನು (ಸ್ಪ್ಯಾನರ್ ಇತ್ಯಾದಿ) ತೋರಿಸಿ ಭೀತಿ ಸೃಷ್ಟಿಸಿ, ಬಸ್ ಒಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು.

ಹಲ್ಲೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ನಂತರ ಹುಳಿಮಾವು ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ವಿಶೇಷ ಪಡೆಗಳಿಂದ ಕಾರ್ಯಾಚರಣೆ : ಇಬ್ಬರಿಗಾಗಿ ತಲಾಶ್

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ಹುಳಿಮಾವು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಮೇ 17 ರಂದು ಬಿಲ್ವರದಹಳ್ಳಿಯ ಟಿಪ್ಪು ಸರ್ಕಲ್ ಬಳಿ ಆರೋಪಿ ಅಬ್ದುಲ್ ಶೋಯಿಬ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಹಲ್ಲೆಗೆ ಬಳಸಿದ್ದ ಸ್ಪ್ಯಾನರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ ಆರೋಪಿ, ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಮೇ 18 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Guru Transit 2026: ಗುರು ಸಂಚಾರ; ಜೂ.2ರಿಂದ ವೃಷಭ ರಾಶಿಯ ಭವಿಷ್ಯ ಹೇಗಿರಲಿದೆ ಗೊತ್ತಾ?

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ವೃಷಭ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, 2026ರ ಜೂನ್ 2ರಿಂದ ವೃಷಭ ರಾಶಿಯವರಿಗೆ ಗುರುಬಲ ಇರುವುದಿಲ್ಲ. ಗುರುವು ಮೂರನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಈ ಅವಧಿಯಲ್ಲಿ ಮಾನಸಿಕ ಪ್ರಚೋದನೆಗೆ ಒಳಗಾಗದೆ, ಸಮಾಧಾನ ಚಿತ್ತದಿಂದ ಕಾರ್ಯನಿರ್ವಹಿಸುವುದು ಮುಖ್ಯ. ಆರ್ಥಿಕ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಎದುರಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಅನುಕೂಲಕರ ಸಮಯವಾಗಿದ್ದು, ವಿಶೇಷವಾಗಿ ಮಾರ್ಕೆಟಿಂಗ್, ಆನ್‌ಲೈನ್ ವ್ಯವಹಾರಗಳಿಗೆ ಶುಭವಾಗಲಿದೆ. ಬರವಣಿಗೆ, ಸಾಹಿತ್ಯ, ಸಿನಿಮಾ, ಕಲೆ ಮತ್ತು ಪತ್ರಕರ್ತರಿಗೆ ಉತ್ತಮ ಫಲಗಳು ಸಿಗಲಿವೆ.

ಮೂರನೇ ಮನೆಯ ಗುರು ಸಂಚಾರವು ಸ್ವಪ್ರಯತ್ನದಿಂದ ಯಶಸ್ಸನ್ನು ತರುತ್ತದೆ. ಪ್ರೀತಿಯ ವಾತಾವರಣ, ಸಹೋದರರ ಬೆಂಬಲ ಚೆನ್ನಾಗಿರುತ್ತದೆ. ಮನೆ ನಿರ್ಮಾಣದಲ್ಲಿ ಗೊಂದಲಗಳಿದ್ದರೂ ಕೊನೆಗೆ ಶುಭವಾಗಲಿದೆ. ವಾಹನ ಯೋಗ ಉತ್ತಮವಾಗಿದೆ. ಸಂತಾನ ವಿಷಯದಲ್ಲಿ ಸ್ವಲ್ಪ ವಿಳಂಬ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ಹೂಡಿಕೆಗಳಿಂದ ಲಾಭ, ಮಕ್ಕಳಿಗೆ ವಿವಾಹ ಯೋಗ ಇರುತ್ತದೆ. ದುರ್ಯೋಧನನ ಉದಾಹರಣೆಯಂತೆ, ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವುದು ಅತಿಮುಖ್ಯ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವುದು, ಓಂ ಧನಾಧ್ಯಕ್ಷಾಯ ನಮಃ ಮಂತ್ರ ಜಪಿಸುವುದು, ಹಸುವಿಗೆ ನೆನೆಸಿದ ಹೆಸರು ಕಾಳು ತಿನ್ನಿಸುವುದು ಹಾಗೂ ಹಳದಿ ಕರವಸ್ತ್ರ ಇಟ್ಟುಕೊಳ್ಳುವುದು ಶುಭ ಫಲಗಳನ್ನು ನೀಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vaibhav Sooryavanshi: ಸರ್, ಅದರ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ಲ..! – Kannada News | Don’t Care About Publicity: Vaibhav Sooryavanshi

ಟಿ20 ಕ್ರಿಕೆಟ್ ಅಂದರೆ ಕೇವಲ ಅಬ್ಬರವಲ್ಲ, ಅದೊಂದು ಲೆಕ್ಕಾಚಾರದ ಆಟ ಎಂಬುದನ್ನು 15 ವರ್ಷದ ಹರೆಯದ ವೈಭವ್ ಸೂರ್ಯವಂಶಿ (Vaibhav Sooryavanshi) ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದಾನೆ! ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 221 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ರಾಜಸ್ಥಾನ್ ರಾಯಲ್ಸ್ ಒತ್ತಡಕ್ಕೆ ಸಿಲುಕಬಹುದು ಎಂಬ ಪ್ರೇಕ್ಷಕರ ಲೆಕ್ಕಾಚಾರವನ್ನು ಯುವ ದಾಂಡಿಗ ತಲೆಕೆಳಗಾಗಿಸಿದ್ದಾನೆ. ಅದು ಕೂಡ ಕೇವಲ 38 ಎಸೆತಗಳಲ್ಲಿ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಗಗನಚುಂಬಿ ಸಿಕ್ಸರ್‌ಗಳ ನೆರವಿನಿಂದ 93 ರನ್ ಚಚ್ಚಿದ್ದರು. ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

  • ಆರೆಂಜ್ ಕ್ಯಾಪ್ ಒಡೆಯ: ಪ್ರಸಕ್ತ ಸರಣಿಯಲ್ಲಿ 13 ಇನ್ನಿಂಗ್ಸ್‌ಗಳಿಂದ ಒಟ್ಟು 579 ರನ್ ಗಳಿಸುವ ಮೂಲಕ ವೈಭವ್ ಸೂರ್ಯವಂಶಿ ಸದ್ಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
  • 500 ರನ್​ಗಳ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ (15 ವರ್ಷ) 500 ರನ್‌ಗಳ ಗಡಿ ದಾಟಿದ ಭರ್ಜರಿ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
  • ಸಿಕ್ಸರ್‌ಗಳ ಸರದಾರ: ಒಂದೇ ಸೀಸನ್‌ನಲ್ಲಿ 50 ಸಿಕ್ಸ್ ಸಿಡಿಸಿದ ಮೊದಲ ಭಾರತೀಯ ಹಾಗೂ ಅತಿ ಕಿರಿಯ ಬ್ಯಾಟರ್ ಎಂಬ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ.

ಇನ್ನು ಈ ಪಂದ್ಯದ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, ಮೈದಾನದ ಹೊರಗಿನ ಪ್ರಶಂಸೆ ಹಾಗೂ ಒತ್ತಡವನ್ನು ತಾವು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ:

ಗಾಬರಿಯಿಲ್ಲದ ನಿಧಾನಗತಿಯ ಆರಂಭ:

“ನಾನು ಬೌಲಿಂಗ್ ಇನ್ನಿಂಗ್ಸ್ ವೇಳೆ ಹೊರಗೆ ಕುಳಿತು ಪಿಚ್ ಗಮನಿಸುತ್ತಿದ್ದೆ. ವಿಕೆಟ್ ಬ್ಯಾಟಿಂಗ್‌ಗೆ ಸಹಕಾರಿಯಾಗಿದೆ ಎಂಬುದು ತಿಳಿಯಿತು. ಆರಂಭದಲ್ಲೇ ಅವಸರ ಮಾಡದೆ, ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದು ದೀರ್ಘ ಇನ್ನಿಂಗ್ಸ್ ಆಡಬೇಕು ಎಂದು ನಿರ್ಧರಿಸಿದ್ದೆ. ನಾನು ಯಾವಾಗ ಬೇಕಾದರೂ ಸಿಕ್ಸರ್, ಫೋರ್ ಹೊಡೆಯಬಲ್ಲೆ ಎಂಬ ನಂಬಿಕೆ ನನಗಿತ್ತು. ಹಾಗಾಗಿ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯುವುದು ನನ್ನ ಯೋಜನೆಯಾಗಿತ್ತು ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ದೂರ:

“ಸರ್, ನನಗೆ ಸಿಗುತ್ತಿರುವ ಪ್ರಚಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ದಿನಪತ್ರಿಕೆಗಳನ್ನು ಓದುವುದಿಲ್ಲ, ಸಾಮಾಜಿಕ ಜಾಲತಾಣಗಳನ್ನೂ ನೋಡುವುದಿಲ್ಲ. ಇದು ಕೇವಲ ಆರಂಭವಷ್ಟೇ. ನನ್ನ ವೃತ್ತಿಜೀವನ ಸುದೀರ್ಘವಾಗಿದ್ದರೆ ಜನರು ಇನ್ನೂ ಏನೇನೋ ಮಾತನಾಡುತ್ತಾರೆ. ನನ್ನ ಗಮನ ಕೇವಲ ಕ್ರಿಕೆಟ್‌ನ ಮೇಲಿರಬೇಕು. ಹೀಗಾಗಿ ಇಂತಹವುಗಳ ಬಗ್ಗೆ ನಾನು ತಲೆನೇ ಕೆಡಿಸಿಕೊಳ್ಳುವುದಿಲ್ಲ” ಎಂದು ವೈಭವ್ ಹೇಳಿದ್ದಾರೆ.

ಅರ್ಥವಿಲ್ಲದ ವಿಚಿತ್ರ ಸಂಭ್ರಮ:

ಇನ್ನು ಅರ್ಧಶತಕದ ಬಳಿಕ ಅವರು ಮಾಡಿದ ವಿಶಿಷ್ಟ ಕೈ ಸನ್ನೆಯ ಆಚರಣೆಯ ಬಗ್ಗೆ ಕೇಳಿದಾಗ, “ಅದಕ್ಕೆ ಯಾವುದೇ ವಿಶೇಷ ಅರ್ಥವಿಲ್ಲ. ನಾನು ಪ್ರತಿ ಪಂದ್ಯದಲ್ಲೂ ಹೊಸದನ್ನು ಪ್ರಯತ್ನಿಸುತ್ತೇನೆ, ಅಷ್ಟೇ,” ಎಂದು ನಗುತ್ತಾ ಉತ್ತರಿಸಿದ್ದರು. ಆ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಅದು ತಾಯಿಯ ಹೆಸರಿನ ಮೊದಲಾಕ್ಷ (A- ಆರತಿ) ತೋರಿಸಿದ ಸಂಭ್ರಮವಾಗಿತ್ತು ಎಂದು ತಿಳಿಸಿದ್ದಾರೆ.

ಮುಂದಿನ ಗುರಿ ಪ್ಲೇ-ಆಫ್:

“ನಮ್ಮ ತಂಡದ ಗಮನ ಈಗ ಮುಂದಿನ ಪಂದ್ಯದ ಮೇಲಿದೆ. ಯಾವುದೇ ಒತ್ತಡವಿಲ್ಲದೆ, ಟೂರ್ನಿ ಆರಂಭದಿಂದ ಆಡಿದಂತೆಯೇ ಆಟವನ್ನು ಆನಂದಿಸುತ್ತಾ ಕ್ರಿಕೆಟ್ ಆಡುವುದು ಮತ್ತು ಪಂದ್ಯಗಳನ್ನು ಗೆಲ್ಲುವುದಷ್ಟೇ ನಮ್ಮ ಮುಂದಿರುವ ಗುರಿ.” ಈ ಮೂಲಕ ಮುಂದಿನ ಮ್ಯಾಚ್​ನಲ್ಲಿ ಗೆದ್ದು ಪ್ಲೇಆಫ್​ಗೇರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ನಾಲ್ವರು ಹೊಸ ಆಟಗಾರರು ಎಂಟ್ರಿ..!

ಒಟ್ಟಾರೆಯಾಗಿ ಹೇಳುವುದಾದರೆ, 15ರ ಹರೆಯದ ವೈಭವ್ ಸೂರ್ಯವಂಶಿ ಅವರ ಈ ಆಟ ಮತ್ತು ಮಾತುಗಳು ಕೇವಲ ರನ್‌ಗಳ ಗಳಿಕೆಯಷ್ಟೇ ಅಲ್ಲ, ಭಾರತೀಯ ಕ್ರಿಕೆಟ್‌ಗೆ ಒಬ್ಬ ಜವಾಬ್ದಾರಿಯುತ ಮತ್ತು ಅಪಾರ ಮಾನಸಿಕ ಪ್ರಬುದ್ಧತೆಯುಳ್ಳ ಆಟಗಾರ ಸಿಕ್ಕಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮೈದಾನದ ಹೊರಗಿನ ಅತಿಯಾದ ಪ್ರಚಾರ ಮತ್ತು ಒತ್ತಡಗಳಿಗೆ ಕಿವಿಗೊಡದೆ, ಕೇವಲ ತನ್ನ ಆಟದ ಮೇಲೆ ಗಮನ ಹರಿಸುವ ಅವರ ಜಾಣ್ಮೆ ನಿಜಕ್ಕೂ ಶ್ಲಾಘನೀಯ.

ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿಟ್ಟಿರುವ ಈ ‘ರನ್ ಮಷಿನ್’, ಮುಂಬರುವ ಪಂದ್ಯಗಳಲ್ಲೂ ಇದೇ ರೀತಿ ಅಬ್ಬರಿಸಿ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಲಿ ಎಂಬುದೇ ಅಭಿಮಾನಿಗಳ ಆಶಯ.

Source link