All posts by nagaraj11081993

ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ, ಕಾರಣವೇನು? – Kannada News | Harihara panchamasali swamiji Vachanananda Shri POCSO Case investigation officer PSI Manjula transferred

ದಾವಣಗೆರೆ, (ಮೇ 19): ಹರಿಹರ (Harihara) ಪಂಚಮಸಾಲಿ ಪೀಠದ ವಚನಾನಂದಶ್ರೀ (Vachananand Shri) ವಿರುದ್ಧ ಫೋಕ್ಸೋ ಪ್ರಕರಣದ ತನಿಖೆ ಮುಂದುವರೆದಿದ್ದು, ಈಗಾಗಲೇ ಆರೋಪಿ ಸ್ಥಾನದಲ್ಲಿರುವ ವಚನಾನಂದ ಸ್ವಾಮೀಜಿಯನ್ನು ಎರಡು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದ ತನಿಖೆ ಚುರುಕೊಂಡಿರುವ ನಡುವೆ ತನಿಖಾಧಿಕಾರಿ ವರ್ಗಾವಣೆಯಾಗಿದೆ. ಹೌದು… ವಚನಾನಂದಶ್ರೀ ವಿರುದ್ಧದ ಪೋಕ್ಸೋ ಕೇಸ್‌ನ ತನಿಖಾಧಿಕಾರಿಯಾಗಿದ್ದ ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ಅವರನ್ನ ದಿಢೀರ್ ವರ್ಗಾವಣೆ ಮಾಡಿ ದಾವಣಗೆರೆ  (Davanagere) ಎಸ್‌ಪಿ H.T.ಶೇಖರ್ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶ

  • ಪಂಚಮಸಾಲಿ ಪೀಠದ  ವಚನಾನಂದಶ್ರೀ ವಿರುದ್ಧದ ಪೋಕ್ಸೋ ಕೇಸ್‌ನ ತನಿಖಾಧಿಕಾರಿ ವರ್ಗಾವಣೆ
  • ದಾವಣಗೆರೆ ಜಿಲ್ಲೆಯ  ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ದಿಢೀರ್ ವರ್ಗಾವಣೆ ಮಾಡಿ ಎಸ್ಪಿ H.T.ಶೇಖರ್ ಆದೇಶ.
  • ಮಂಜುಳಾ ಜಾಗಕ್ಕೆ ಆಜಾದ್‌ನಗರ ಠಾಣೆ ಪಿಎಸ್‌ಐ ಜಯರತ್ನಮ್ಮ ನೇಮಕ
  • ವಚನಾನಂದಶ್ರೀ ವಿರುದ್ಧದ ಕೇಸ್‌ನ ತನಿಖಾ ಜವಾಬ್ದಾರಿ ಹೊತ್ತ ಜಯರತ್ನಮ್ಮ

ಮಂಜುಳಾ ಜಾಗಕ್ಕೆ ಜಯರತ್ನಮ್ಮ ನೇಮಕ

ಪ್ರಕರಣದ ತನಿಖೆ ಸರಿಯಾಗಿ ಮಾಡುತ್ತಿಲ್ಲ ಎಂದು ಹರಿಹರ (Harihara) ಪಂಚಮಸಾಲಿ ಪೀಠ ಟ್ರಸ್ಟ್​​ನ ಪದಾಧಿಕಾರಿಗಳು ಪೂರ್ವ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಅವರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ತನಿಖಾಧಿಕಾರಿಯನ್ನು ಬದಲಾವಣೆ ಮಾಡುವಂತೆ ಎಸ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರ ಮೇರೆಗೆ ದಾವಣಗೆರೆ ಎಸ್ಪಿ H.T.ಶೇಖರ್ ಅವರು ಪಿಎಸ್‌ಐ ಮಂಜುಳಾ ಅವರನ್ನು ವರ್ಗಾವಣೆ ಮಾಡಿದ್ದು, ಇವರ ಜಾಗಕ್ಕೆ  ದಾವಣಗೆರೆಯ ಆಜಾದ್‌ನಗರ ಠಾಣೆಯ ಪಿಎಸ್‌ಐ ಜಯರತ್ನಮ್ಮ ಅವರನ್ನ ನೇಮಕ ಮಾಡಿ ಆದೇಶ ಹೊಡಿಸಿದ್ದಾರೆ.

ಇದನ್ನೂ ನೋಡಿ: ಪೋಕ್ಸೋ ಕೇಸ್: ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಪೋಸ್ಕೋ ಪ್ರಕರಣದ ತನಿಖಾಧಿಕಾರಿ ಆಗಿದ್ದ ಎಸ್ ಐ ಮಂಜುಳಾ ಅವರನ್ನ ದಾವಣಗೆರೆ ಅಜಾದ್ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ದಾವಣಗೆರೆ ಅಜಾದ್ ನಗರ ಠಾಣೆ ಎಸ್ ಐ ಜಯರತ್ನಮ್ಮ ಅವರನ್ನ ನೇಮಕ ಮಾಡಲಾಗಿದ್ದು, ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಜಯರತ್ನಮ್ಮ ಅವರಿಗೆ ನೀಡಲಾಗಿದೆ.

ಶ್ರೀಗಳನ್ನ ಎರಡು ಬಾರಿ ವಿಚಾರಣೆ ನಡೆಸಿದ್ದ ಮಂಜುಳಾ

ವಚನಾನಂದ ಸ್ವಾಮೀಜಿ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ಅವರ ವಚನಾನಂದಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪ್ರಕರಣದ ತನಿಖೆ ಸಲುವಾಗಿ ಸ್ವಾಮೀಜಿಯನ್ನು ಹರಿಹರ ಠಾಣೆಗೆ 2 ಸಲ ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ಇದೀಗ ಹೊಸ ತನಿಖಾಧಿಕಾರಿ ಬಂದಿದ್ದು, ಯಾವ ರೀತಿ ತನಿಖೆ ನಡೆಯುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:13 pm, Tue, 19 May 26

Source link

Video: 3 ಗಂಟೆಗೂ ಹೆಚ್ಚು ಕಾಲ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ವ್ಯಕ್ತಿ, ಹೇಳಿದ್ದೇನು ನೋಡಿ – Kannada News | Bengaluru: Man stuck in Bengaluru traffic for over 3 hours

ಬೆಂಗಳೂರು, ಮೇ 19: ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್ ಹೀಗೆ ಹೇಳುತ್ತಿದ್ದಂತೆ ಕಣ್ಣ ಮುಂದೆ ಬರುವುದೇ ಬೆಂಗಳೂರು (Bengaluru). ಈ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಹೊಸದೇನಲ್ಲ. ಆದರೆ ವ್ಯಕ್ತಿಯೊಬ್ಬರಿಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕಹಿ ಅನುಭವವಾಗಿದೆ. ಸಂಜೆ 5:17 ಕ್ಕೆ ಬೆಳ್ಳಂದೂರಿನಿಂದ ಹೊರಟ್ರು ನಗರದ ಹೊರ ವರ್ತುಲ ರಸ್ತೆಯಲ್ಲಿ ಸಿಲುಕಿಕೊಂಡೆ ಎಂದು ಟ್ರಾಫಿಕ್ ಸಮಸ್ಯೆಯನ್ನು ವಿವರಿಸಿದ್ದಾರೆ. ಈ ಪೋಸ್ಟ್ ಆನ್ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ವರುಣ್ ರಂಗರಾಜನ್ (Varun Rangarajan) ಅವರು ಎಕ್ಸ್ ಪೋಸ್ಟ್‌ನಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಇಂದು ಸಂಜೆ 5:17 ಕ್ಕೆ ಬೆಳ್ಳಂದೂರಿನಿಂದ ಹೊರಟೆ ಮತ್ತು ಇನ್ನೂ ನಗರದ ಹೊರ ವರ್ತುಲ ರಸ್ತೆಯಲ್ಲಿ ಸಿಲುಕಿಕೊಂಡಿದ್ದೇನೆ. ಕಲ್ಯಾಣ್ ನಗರದಿಂದ ಮಾನ್ಯತಾಗೆ ಹೋಗಲು ಸುಮಾರು 1.5 ಗಂಟೆಗಳು ತೆಗೆದುಕೊಂಡಿವೆ. ಒಬ್ಬ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೂ ಕಾಣಿಸುತ್ತಿಲ್ಲ. ಮನೆಗೆ ನಡೆದುಕೊಂಡು ಹೋಗಲು ನನಗೆ ಬಹುತೇಕ ಅದೇ ಸಮಯ ಬೇಕಾಗುತ್ತಿತ್ತು ಎಂದು ಗೂಗಲ್ ನಕ್ಷೆಗಳು ಹೇಳುತ್ತವೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬೆಂಗಳೂರಿನ ಜನರಿಗೆ ಇದು ಕಾಮನ್ ಎಂದಿದ್ದಾರೆ. ಮತ್ತೊಬ್ಬರು, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಆಫೀಸ್ ಗೆ ಹೋಗುವಾಗ ನನ್ನದು ಪರಿಸ್ಥಿತಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್? ಹೊರ್ಮುಜ್ ಆಳದಲ್ಲಿರುವ ಅಂತರ್ಜಾಲ ಕೇಬಲ್​ಗೂ ಆಪತ್ತು

ನವದೆಹಲಿ, ಮೇ 19: ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧ ಹಾಗೂ ಸದ್ಯದ ಬಿಕ್ಕಟ್ಟು ಜಗತ್ತಿನ ಇಂಟರ್ನೆಟ್‌ ಕಡಿತಕ್ಕೂ ಕಾರಣವಾಗುವ ಸಾಧ್ಯತೆ ಇದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಜಗತ್ತಿನ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರದಾಳದಲ್ಲಿರುವ ಆಪ್ಟಿಕಲ್ ಫೈಬರ್ ಡೇಟಾ ಕೇಬಲ್‌ಗಳಿಗೆ ಸುಂಕ ವಿಧಿಸಲು ಇರಾನ್ ಚಿಂತನೆ ನಡೆಸುತ್ತಿದೆ. ಈ ಜಲಸಂಧಿಯು ಕೇವಲ ಕಚ್ಚಾ ತೈಲ ಸಾಗಣೆಯ ಮಾರ್ಗ ಮಾತ್ರವಲ್ಲದೆ, ಇಡೀ ಮಧ್ಯ ಪ್ರಾಚ್ಯದ ಡಿಜಿಟಲ್ ಮತ್ತು ಆರ್ಥಿಕ ಜೀವನಾಡಿಯಾಗಿದೆ. ಇಂಟರ್ನೆಟ್ ಕೇಬಲ್‌ಗಳ ಮೇಲೆ ಶುಲ್ಕ ವಿಧಿಸುವುದಾಗಿ ಇರಾನ್‌ನ ಸೇನಾ ವಕ್ತಾರ ಇಬ್ರಾಹಿಂ ಕಳೆದ ವಾರವೇ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಜಗತ್ತಿನ ಶೇ 95 ಕ್ಕಿಂತ ಹೆಚ್ಚು ಇಂಟರ್ನೆಟ್ ಮತ್ತು ಡೇಟಾ ಸಂಪರ್ಕವು ಸಮುದ್ರದಾಳದಲ್ಲಿರುವ ಈ ಕೇಬಲ್‌ಗಳ ಮೂಲಕವೇ ನಡೆಯುತ್ತದೆ. ಇರಾನ್ ಹೊಸ ನಿಯಮಗಳನ್ನು ರೂಪಿಸುತ್ತಿದ್ದು, ಸಮುದ್ರದಾಳದ ಕೇಬಲ್‌ಗಳನ್ನು ನಿರ್ವಹಿಸಲು ಪರವಾನಿಗೆ ಮತ್ತು ಶುಲ್ಕ ಕಡ್ಡಾಯಗೊಳಿಸುತ್ತಿದೆ. ಅಂತರಾಷ್ಟ್ರೀಯ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಇರಾನ್, ತನ್ನ ಭೌಗೋಳಿಕ ಗಡಿಯ ಲಾಭ ಪಡೆದು ಆದಾಯ ಗಳಿಸುವ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಿದೆ. ಶುಲ್ಕ ಪಾವತಿಸದಿದ್ದರೆ ಕೇಬಲ್‌ಗಳನ್ನು ಕಡಿತಗೊಳಿಸುವ ಬೆದರಿಕೆ ಇದೆ. ಇದು ಜಾಗತಿಕ ಇಂಟರ್ನೆಟ್, ಆನ್‌ಲೈನ್ ಸೇವೆಗಳು ಮತ್ತು ಬ್ಯಾಂಕಿಂಗ್ ವಹಿವಾಟಿಗೆ ಭಾರಿ ಅಡ್ಡಿಪಡಿಸಬಹುದು ಎಂಬ ಆತಂಕ ಎದುರಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್, ಗ್ಯಾಸ್ ಬಗ್ಗೆ ಎದ್ದಿರುವ ಅಂತೆ ಕಂತೆಗಳಿಗೆ ತೆರೆ – Kannada News | Fuel distribution continues without any restrictions across the State Clarified By Karnataka Oil Industry Coordinator

ಬೆಂಗಳೂರು, (ಮೇ 19): ತೈಲ ಮತ್ತು ಅನಿಲ ವಲಯದ ಮೇಲೆ ಪ್ರಸ್ತುತ ಪರಿಣಾಮ ಬೀರುತ್ತಿರುವ ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ, ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಸಿಪಿಎಲ್ ಮತ್ತು ಎಚ್‌ಪಿಸಿಎಲ್, ಕರ್ನಾಟಕದಾದ್ಯಂತ ಪೆಟ್ರೋಲ್ (MS), ಡೀಸೆಲ್ (HSD) ಮತ್ತು ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ನಿರಂತರ ಪೂರೈಕೆಯನ್ನು ಕಾಯ್ದುಕೊಂಡಿವೆ ಎಂದು ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ (IOCL, BPCL & HPCL) ಸಿದ್ಧಾರ್ಥ್ ಅಗರ್ವಾಲ್ ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಯುದ್ಧದ ಪರಿಣಾಮ ಪೆಟ್ರೀಲ್-ಡೀಸೆಲ್ ಹಾಗೂ ಗ್ಯಾಸ್ ಅಭಾವ ವದಂತಿ
  • ಹೆಚ್ಚಿನ ಇಂಧನ ಶೇಖರಿಸಿಕೊಳ್ಳಲು ಬಂಕ್​​ಗಳಲ್ಲಿ ಮುಗಿಬೀಳುತ್ತಿರುವ ಸಾರ್ವಜನಿಕರು
  • ಅಭಾವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ
  • ಕರ್ನಾಟಕದಾದ್ಯಂತ ಯಾವುದೇ ನಿರ್ಬಂಧಗಳಿಲ್ಲದೆ ಇಂಧನ ವಿತರಣೆ ಮುಂದುವರಿಕೆ ಎಂದು ಸ್ಪಷ್ಟನೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಟರ್ಮಿನಲ್‌ಗಳು, ಡಿಪೋಗಳು, ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಒಳಗೊಂಡಿರುವ ತನ್ನ ವ್ಯಾಪಕ ಪೂರೈಕೆ ಜಾಲದ ಮೂಲಕ ಇಂಧನದ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತೈಲ ಉದ್ಯಮವು ಸಂಪೂರ್ಣವಾಗಿ ಸಜ್ಜಾಗಿದೆ. ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ವಿತರಣಾ ಕಾರ್ಯಾಚರಣೆಗಳು ಸುಗಮವಾಗಿ ಮುಂದುವರಿದಿದ್ದು, ನಿಗದಿತ ಸುರಕ್ಷತೆ ಮತ್ತು ಕಾರ್ಯಾಚರಣೆಯ ಮಾನದಂಡಗಳಿಗೆ ಅನುಗುಣವಾಗಿ ಯಾವುದೇ ನಿರ್ಬಂಧಗಳಿಲ್ಲದೆ ಪೂರೈಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಿತಿಮೀರಿ ಇಂಧನ ಖರೀದಿಸದಿರಿ: ಕರ್ನಾಟಕದ ಜನತೆಗೆ ಈ ವಿಶೇಷ ಮನವಿಗೆ ಕಾರಣವೇನು?

ಇದಲ್ಲದೆ, ಪೂರೈಕೆ ಸರಪಳಿಯಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಸಮರ್ಪಕ ದಾಸ್ತಾನು ಲಭ್ಯವಿದೆ. ಗ್ರಾಹಕರ ನೈಜ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ದಾಸ್ತಾನು ಮರುಪೂರಣ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ದೇಶೀಯ ಗ್ರಾಹಕರಿಗೆ ಎಲ್‌ಪಿಜಿ ಪೂರೈಕೆಯನ್ನು ಸಹ ಸಹಜ ಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದ್ದು, ಇಡೀ ರಾಜ್ಯಾದ್ಯಂತ ವಿತರಣೆಗಳು ಸುಗಮವಾಗಿ ಪ್ರಗತಿಯಲ್ಲಿವೆ ಎಂದಿದ್ದಾರೆ.

ನಾಗರಿಕರಿಗೆ ನಿರಂತರ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಸಾರ್ವಜನಿಕ ವಲಯದ ತೈಲ ಕಂಪನಿಗಳು ಲಾಜಿಸ್ಟಿಕ್ಸ್, ದಾಸ್ತಾನು ನಿರ್ವಹಣೆ ಮತ್ತು ವಿತರಣಾ ಯೋಜನೆಯಲ್ಲಿ ನಿಕಟ ಸಮನ್ವಯ ಸಾಧಿಸುತ್ತಿವೆ. ಒಟ್ಟಾರೆ ಪೂರೈಕೆ ಪರಿಸ್ಥಿತಿಯು ಸ್ಥಿರವಾಗಿದ್ದು, ನಿರಂತರ ಮೇಲ್ವಿಚಾರಣೆಯಲ್ಲಿದೆ ಎಂದು ತಿಳಿಸಿದ್ದಾರೆ.

ನಾಗರಿಕರು ಅವಶ್ಯತೆ ಇದ್ದಾಗ ಮಾತ್ರ ಇಂಧನ ಖರೀದಿ ಪ್ರವೃತ್ತಿ ಮುಂದುವರಿಸಬೇಕಿದ್ದು, ಅನಗತ್ಯ ಆತಂಕದಿಂದ ಮುಂಚಿತವಾಗಿಯೇ ಅತಿಯಾಗಿ ಖರೀದಿಸುವುದನ್ನು (panic buying) ತಪ್ಪಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಇಂಧನ ಲಭ್ಯತೆಗೆ ಸಂಬಂಧಿಸಿದಂತೆ ಅಧಿಕೃತ ಮತ್ತು ಪರಿಶೀಲಿಸಿದ ಮಾಹಿತಿಗಾಗಿ ಸಾರ್ವಜನಿಕರು ಕೇವಲ ತೈಲ ಕಂಪನಿಗಳು ಬಿಡುಗಡೆ ಮಾಡುವ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅವಲಂಬಿಸುವಂತೆ ಸಲಹೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RR vs LSG IPL 2026 Live Score: ರಾಯಲ್ಸ್​ vs ಸೂಪರ್ ಜೈಂಟ್ಸ್

ಇಂಡಿಯನ್ ಪ್ರೀಮಿಯರ್ ಲೀಗ್​ನ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯವು ರಾಜಸ್ಥಾನ್ ರಾಯಲ್ಸ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಆರ್​ಆರ್​ ಪಡೆ ಪ್ಲೇಆಫ್​ಗೇರಬಹುದು. ಒಂದು ವೇಳೆ ಸೋತರೆ ಪ್ಲೇಆಫ್​​ಗೇರುವುದು ಕಷ್ಟಸಾಧ್ಯ. ಹೀಗಾಗಿ ಇಂದಿನ ಪಂದ್ಯವು ರಾಜಸ್ಥಾನ್ ರಾಯಲ್ಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.

ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ 5 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಲಕ್ನೋ ಸೂಪರ್ ಜೈಂಟ್ಸ್ 2 ಬಾರಿ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳು ಹಾಗೂ ಪ್ರಸ್ತುತ ಫಾರ್ಮ್ ಗಮನಿಸಿದರೆ ಇಂದಿನ ಮ್ಯಾಚ್​ನಲ್ಲಿ ಆರ್​ಆರ್ ಪಡೆ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ.

ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್​, ಹಿಮ್ಮತ್ ಸಿಂಗ್,  ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ವನಿಂದು ಹಸರಂಗ, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.

Source link

Karnataka Weather Forecast: ಬೆಂಗಳೂರಿ ಸೇರಿ ಹಲವೆಡೆ ನಾಳೆಯೂ ಮಳೆ, ಕೆಲ ಜಿಲ್ಲೆಗಳಲ್ಲಿ ವಿಪರೀತ ತಾಪಮಾನದ ಎಚ್ಚರಿಕೆ – Kannada News | Karnataka Weather Forecast: Rain Expected in Bengaluru and Most Districts, Heat Alert for North

ಬೀದರ್​​ನಲ್ಲಿ ಸುರಿದ ಮಳೆImage Credit source: Tv9 Kannada

ಬೆಂಗಳೂರು, ಮೇ 19: ರಾಜ್ಯದಲ್ಲಿ ಇನ್ನೂ ಕೆಲವು ದಿನಗಳಕಾಲ ಮಳೆಯಾಗಲಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಣ ಹವೆ ಮುಂದುವರಿಯಲಿದೆ. ಮುಕ್ಕಾಲು ಕರ್ನಾಟಕದಲ್ಲಿ ನಾಳೆ ವರುಣನ (Rain) ಆಗಮನದ ನಿರೀಕ್ಷೆ ಇದ್ದು, ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆಯ ಸಾಧ್ಯತೆ ಇದೆ. ಅದಾಗಿಯೂ ಕೆಲ ಜಿಲ್ಲೆಗಳಲ್ಲಿ ವಿಪರೀತ ತಾಪಮಾನ ಕಂಡುಬರಲಿದ್ದು, ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್​​ ವರೆಗೂ ಕಂಡುಬರಲಿದೆ. ಇದೇ ರೀತಿಯ ವಾತಾವರಣ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮುಖ್ಯಾಂಶಗಳು

  • ರಾಜ್ಯದ ಹಲವೆಡೆ ಮುಂದುವರಿಯಲಿರುವ ವರುಣಾರ್ಭಟ
  • ಮುಕ್ಕಾಲು ಕರ್ನಾಟಕದಲ್ಲಿ ನಾಳೆ ವರುಣನ ಆಗಮನದ ನಿರೀಕ್ಷೆ
  • ಅದಾಗಿಯೂ ಕೆಲ ಜಿಲ್ಲೆಗಳಲ್ಲಿ ವಿಪರೀತ ತಾಪಮಾನದ ಎಚ್ಚರಿಕೆ

ಬಹುಪಾಲು ಕರ್ನಾಟಕದಲ್ಲಿ ಮಳೆ

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯನ್ನು ಅಂದಾಜಿಸಲಾಗಿದೆ. ಹಾಗೆಯೇ ಬೆಳಗಾವಿ, ಬಾಗಲಕೋಟೆ, ರಾಯಚೂರು, ಧಾರವಾಡ, ಗದಗ, ಕೊಪ್ಪಳ, ಹಾವೇರಿ, ವಿಜಯನಗರ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ತುಮಕೂರು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣದಲ್ಲಿಯೂ (ರಾಮನಗರ) ಮಳೆಯ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಮನೆ ಮೇಲೆ ಬಿದ್ದ ಬೃಹತ್​ ಮರದ ಕೊಂಬೆ; ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್

ಉಷ್ಣ ತಾಪಮಾನದ ಎಚ್ಚರಿಕೆ

ಬೆಳಗಾವಿಯ ಅಥಣಿ, ಬೀದರ್​​ನ ಔರಾಸ್​​, ಭಾಲ್ಕಿ ಮತ್ತು ಕಮಲಾನಗರದಲ್ಲಿ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್​​ ಆಸುಪಾಸು ತಲುಪಲಿದೆ. ಹಾಗೆಯೇ ಬೀದರ್ ಜಿಲ್ಲೆಯ ಚಿಟಗುಪ್ಪಾ, ಬಸವಕಲ್ಯಾಣ, ಹುಲಸೂರು, ಹುಮ್ನಾಬಾದ್, ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಸೇಡಂನಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನ ಮಾನ್ವಿ, ದೇವದುರ್ಗ ಮತ್ತು ಅರಕೇರಾ ಹಾಗೆಯೇ ಯಾದಗಿರಿಯ ವಡಗೇರಾ ಮತ್ತು ಗುರುಮಿಟಕಲ್​​ನಲ್ಲಿಯೂ ಇದೇ ಮಾದರಿಯ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’ ಸಿನಿಮಾ: ‘ರಾಯ’ನ ಕಿಕ್ ಕೊಡೋ ಸ್ಟೈಲ್ – Kannada News | Toxic movie Yash’s Raya character photos released

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್’. ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೆ ಹೋಗಿದೆ. ಆದರೂ ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ‘ಟಾಕ್ಸಿಕ್’ ಸಿನಿಮಾದ ಕ್ಯಾರೆಕ್ಟರ್ ಪೋಸ್ಟರ್ ಹಾಗೂ ಎರಡು ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿವೆ. ಇದೀಗ ‘ಟಾಕ್ಸಿಕ್’​​ ತಂಡವು ಸಿನಿಮಾದಲ್ಲಿನ ಯಶ್​​ ಪಾತ್ರವಾದ ‘ರಾಯ’ನ ಆಕರ್ಷಕ ಫೋಟೊಗಳನ್ನು ಹಂಚಿಕೊಂಡಿದೆ.

ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ನಲ್ಲಿ ಯಶ್ ರಾಯನ ವೇಷದಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ. ಕಡು ಕೆಂಪು ಮತ್ತು ನಿಯಾನ್ ದೀಪಗಳ ಹಿನ್ನೆಲೆಯಲ್ಲಿ, ವಿಂಟೇಜ್ ಕಾರೊಂದರ ಮುಂದೆ ಯಶ್ ಖಡಕ್ ಆಗಿ ನಿಂತಿದ್ದಾರೆ. ಅವರ ಸುತ್ತಲೂ ಬಂದೂಕುಗಳನ್ನು ಹಿಡಿದಿರುವ ಕಾವಲುಗಾರರು ಅಥವಾ ಅಂಡರ್‌ವರ್ಲ್ಡ್ ಗ್ಯಾಂಗ್ ಸದಸ್ಯರು ಇರುವುದನ್ನು ಕಾಣಬಹುದು. ಈ ಆಕರ್ಷಕ ದೃಶ್ಯವು ಚಿತ್ರದಲ್ಲಿ ಸೃಷ್ಟಿಯಾಗಲಿರುವ ಕರಾಳ ಭೂಗತ ಲೋಕದ ವೈಭವ ಹಾಗೂ ತೀವ್ರತೆಯನ್ನು ಧ್ವನಿಸುತ್ತಿದೆ.

ಇದರ ಜೊತೆಗೆ ಯಶ್​ ಅವರ ರಾಯ ಪಾತ್ರ ಸಿಗರೇಟು ಸೇದುತ್ತಾ ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿರುವ ಕ್ಲೋಸ್ ಅಪ್ ಫೋಟೊ ಒಂದನ್ನು ಸಹ ಬಿಡುಗಡೆ ಮಾಡಲಾಗಿದೆ. ಎರಡೂ ಫೋಟೊಗಳನ್ನು ಯಶ್ ಬಲು ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡೂ ಫೋಟೊಗಳು ಅವರ ರಾಯ ಪಾತ್ರದ್ದೇ ಆಗಿವೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಪದೇ ಪದೇ ಪೋಸ್ಟ್‌ಪೋನ್; ಅಭಿಮಾನಿಗಳ ಬೇಸರದ ಬಗ್ಗೆ ಯಶ್ ಮಾತು

ರಾಷ್ಟ್ರಪ್ರಶಸ್ತಿ ವಿಜೇತ ಮತ್ತು ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ನಾಮನಿರ್ದೇಶನ ಪಡೆದಿದ್ದ ಚಿತ್ರಗಳ ನಿರ್ದೇಶಕಿ ಗೀತು ಮೋಹನ್‌ದಾಸ್ ‘ಟಾಕ್ಸಿಕ್’ ಸಿನಿಮಾವನ್ನು ನಿರ್ದೇಶಿಸಿದ್ದು. ಇತ್ತೀಚೆಗೆ ಕಾನ್ ಚಲನಚಿತ್ರೋತ್ಸವದಲ್ಲಿ ಚಿತ್ರದ ಪ್ರಮುಖ ನಟಿಯರಲ್ಲಿ ಒಬ್ಬರಾದ ತಾರಾ ಸುತಾರಿಯಾ ಚಿತ್ರದ ಕುರಿತು ಮಾತನಾಡುತ್ತಾ, “ಗೀತು ಮೋಹನ್‌ದಾಸ್ ಅವರಂತಹ ಮಹಿಳಾ ನಿರ್ದೇಶಕಿಯ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ. ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಮಹಿಳಾ ಪಾತ್ರಕ್ಕೂ ಅಪಾರ ಶಕ್ತಿ, ಧೈರ್ಯ ಹಾಗೂ ಆಳವಾದ ವ್ಯಕ್ತಿತ್ವವಿದೆ. ಭಾರತೀಯ ಚಿತ್ರರಂಗದಲ್ಲೇ ವಿಭಿನ್ನವಾದ ಶೈಲಿಯಲ್ಲಿ ಈ ಸಿನಿಮಾವನ್ನು ಜಾಗತಿಕ ಮಟ್ಟಕ್ಕಾಗಿ ರೂಪಿಸಲಾಗುತ್ತಿದೆ’ ಎಂದು ಹೊಗಳಿದ್ದಾರೆ.

Yash Raya

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗೆ ದೊಡ್ಡ ತಾರಾಗಣವೇ ಇದೆ. ಕಿಯಾರಾ ಅಡ್ವಾಣಿ (ನಾಡಿಯಾ ಪಾತ್ರದಲ್ಲಿ), ನಯನತಾರಾ (ಗಂಗಾ ಪಾತ್ರದಲ್ಲಿ), ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಜೊತೆಗೆ ಇನ್ನೂ ಹಲವು ಖ್ಯಾತ ನಟರುಗಳು ಸಿನಿಮಾನಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಛಾಯಾಗ್ರಾಹಕ ರಾಜೀವ್ ರವಿ ಕ್ಯಾಮೆರಾ ಸಿನಿಮಾಟೊಗ್ರಫಿ ಮಾಡಿದ್ದಾರೆ. ರವಿ ಬಸ್ರೂರ್ ಮತ್ತು ವಿಶಾಲ್ ಮಿಶ್ರಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮೊನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಭಾರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಿಸಿವೆ.

ಈ ಹಿಂದೆ ‘ಟಾಕ್ಸಿಕ್’ ಚಿತ್ರವನ್ನು 2026ರ ಮಾರ್ಚ್ 19 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ನಂತರ ಜೂನ್ 4 ಕ್ಕೆ ಮುಂದೂಡಲಾಗಿತ್ತು. ಆದರೆ, ಇತ್ತೀಚೆಗೆ ಚಿತ್ರತಂಡ ಅಧಿಕೃತ ಪ್ರಕಟಣೆ ಹೊರಡಿಸಿ, ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದರೂ ಜಾಗತಿಕ ಮಟ್ಟದ ವಿತರಣೆ ಮಾಡುವ ಹೊಂದಿಸುವ ಸಲುವಾಗಿ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದೆ. ಪ್ರಸ್ತುತ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆಗಸ್ಟ್ 14 ಕ್ಕೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ ಡೆಟ್ ಮಾರುಕಟ್ಟೆಯನ್ನು ತೊರೆಯುತ್ತಿರುವ ಹೂಡಿಕೆದಾರರು; ಏನು ಕಾರಣ? – Kannada News | Global Bond Bloodbath: Why Investors are Fleeing Safe Haven Debt Markets

ವಾಷಿಂಗ್ಟನ್, ಮೇ 19: ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಸದ್ಯ ‘ಬಾಂಡ್ ರಕ್ತಪಾತ’ (Bond Bloodbath) ನಡೆಯುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಸಾಂಪ್ರದಾಯಿಕವಾಗಿ ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತಿದ್ದ ಬಾಂಡ್ ಮತ್ತು ಸಾಲ ಮಾರುಕಟ್ಟೆಯಿಂದ (Debt Market) ಜಾಗತಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ತಮ್ಮ ಹಣವನ್ನು ಹಿಂಪಡೆಯುತ್ತಿದ್ದಾರೆ. ಇದು ಜಾಗತಿಕ ಆರ್ಥಿಕತೆಯಲ್ಲಿ ಹೊಸ ಆತಂಕವನ್ನು ಸೃಷ್ಟಿಸಿದೆ. ಅಮೆರಿಕ ಸರ್ಕಾರದ ಬಾಂಡ್​ಗಳಿಂದ ನಿರ್ಗಮಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಬಾಂಡ್ ಇಳುವರಿ (Yields) ಏರಿಕೆ – ಬಾಂಡ್ ಬೆಲೆಗಳ ಕುಸಿತ

ಬಾಂಡ್ ಮಾರುಕಟ್ಟೆಯ ಮೂಲ ನಿಯಮದಂತೆ, ಬಾಂಡ್ ಇಳುವರಿ (Bond Yields) ಹೆಚ್ಚಾದಾಗ, ಚಾಲ್ತಿಯಲ್ಲಿರುವ ಹಳೆಯ ಬಾಂಡ್‌ಗಳ ಬೆಲೆಗಳು (Bond Prices) ಕುಸಿಯುತ್ತವೆ. 10 ವರ್ಷದ ಅಮೆರಿಕನ್ ಸಾಲಪತ್ರದ ಇಳುವರಿ ದಾಖಲೆಯ ಶೇ. 4.16ಕ್ಕೆ ಏರಿದೆ. 30 ವರ್ಷದ ಬಾಂಡ್​ನ ಯೀಲ್ಡ್ ಶೇ. 5.14ಕ್ಕೆ ಏರಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟ. ಅಮೆರಿಕದ ರಿಸರ್ವ್ ಬ್ಯಾಂಕ್​ನ ಬಡ್ಡಿ ದರ ಶೇ. 3.50ರಿಂದ ಶೇ. 3.75 ಶ್ರೇಣಿಯಲ್ಲಿದೆ. ಬಾಂಡ್ ಇಳುವರಿಯು ಅದನ್ನೂ ಮೀರಿ ಮೇಲೆ ಹೋಗಿದೆ. ಇದು ಹೂಡಿಕೆದಾರರು ಬಾಂಡ್ ಮಾರಲು ಸರಿಯಾದ ಸಂದರ್ಭವೆನಿಸಿರಬಹುದು.

ಹಣದುಬ್ಬರದ ಆತಂಕ

ಅಮೆರಿಕದ ಸಾಲಪತ್ರಗಳ ಇಳುವರಿ ಹೆಚ್ಚಿದೆ ಎಂದರೆ ಅಲ್ಲಿ ಹಣದುಬ್ಬರ ಧಾವಿಸುತ್ತಿರುವ ಸೂಚನೆ ಎಂದು ಭಾವಿಸಲಾಗುತ್ತದೆ. ಇದರಿಂದ ಎರಡು ಪರಿಣಾಮಗಳಾಗಬಹುದು. ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಕಡಿತಗೊಳಿಸಲು ಮುಂದಾಗದೇ ಹೋಗಬಹುದು. ಮತ್ತೊಂದು ಪರಿಣಾಮವೆಂದರೆ, ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿದ್ದರೆ ಹಾಲಿ ಹೂಡಿಕೆದಾರರಿಗೆ ಸಿಗುವ ಭವಿಷ್ಯದ ಬಡ್ಡಿ ಪಾವತಿಯ ಅಸಲಿ ಮೌಲ್ಯ ಕುಂದುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ದೇಶಕ್ಕೆ ಅಪ್ಪಳಿಸುತ್ತಿದೆ ಆರ್ಥಿಕ ಚಂಡಮಾರುತ; ಕುಸಿಯಲಿದೆ ಅರ್ಥ ವ್ಯವಸ್ಥೆ: ರಾಹುಲ್ ಗಾಂಧಿ ಆತಂಕ

ಬಡ್ಡಿ ದರಗಳು ಹೆಚ್ಚಾದಾಗ ಮಾರುಕಟ್ಟೆಗೆ ಬರುವ ಹೊಸ ಬಾಂಡ್‌ಗಳು ಹೆಚ್ಚಿನ ಲಾಭ ನೀಡುತ್ತವೆ. ಇದರಿಂದಾಗಿ ಹೂಡಿಕೆದಾರರು ಹಳೆಯ ಕಡಿಮೆ ಲಾಭದ ಬಾಂಡ್‌ಗಳನ್ನು ಮಾರಿ ಹೊರಬರುತ್ತಿದ್ದಾರೆ.

ಸರ್ಕಾರಗಳ ಅತಿಯಾದ ಸಾಲ ಮತ್ತು ವಿತ್ತೀಯ ಕೊರತೆ

ಅಮೆರಿಕ ಸೇರಿದಂತೆ ಹಲವು ಪ್ರಮುಖ ದೇಶಗಳ ಸರ್ಕಾರಗಳು ತಮ್ಮ ವೆಚ್ಚಗಳಿಗಾಗಿ ಮಾರುಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ಸಾಲವನ್ನು ಪಡೆಯುತ್ತಿವೆ (Deficit Spending). ಮಾರುಕಟ್ಟೆಗೆ ಅತಿಯಾದ ಹೊಸ ಬಾಂಡ್‌ಗಳ ಪೂರೈಕೆಯಾಗುತ್ತಿರುವುದರಿಂದ, ಹಳೆಯ ಬಾಂಡ್‌ಗಳ ಬೇಡಿಕೆ ಕುಸಿದು ಅವುಗಳ ಮೌಲ್ಯ ಮತ್ತಷ್ಟು ರಕ್ತಪಾತಕ್ಕೆ ಈಡಾಗುತ್ತಿದೆ.

ಷೇರು ಮಾರುಕಟ್ಟೆ ಮತ್ತು ಪರ್ಯಾಯ ಹೂಡಿಕೆಗಳ ಆಕರ್ಷಣೆ

ಬಾಂಡ್ ಮಾರುಕಟ್ಟೆಯಲ್ಲಿ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ರಿಸ್ಕ್ ಇದ್ದರೂ ಉತ್ತಮ ಲಾಭ ನೀಡುವ ಷೇರು ಮಾರುಕಟ್ಟೆ (Equities) ಅಥವಾ ಇತರ ಆಲ್ಟರ್ನೇಟಿವ್ ಆಸ್ತಿಗಳತ್ತ (Alternative Assets) ಹೂಡಿಕೆದಾರರು ಮುಖ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ?

ಉದಯೋನ್ಮುಖ ಮಾರುಕಟ್ಟೆಗಳಿಗೂ ಹೊಡೆತ

ಅಧಿಕ ಬಾಂಡ್ ಯೀಲ್ಡ್​ನಿಂದ ಡಾಲರ್ ಮೌಲ್ಯ ಹೆಚ್ಚುತ್ತದೆ. ಇದರಿಂದ ಭಾರತದಂತಹ ಉದಯೋನ್ಮುಖ ಆರ್ಥಿಕತೆಯ ಮಾರುಕಟ್ಟೆಗಳಿಂದ ಹೂಡಿಕೆಗಳು ಹೊರಹೋಗುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಿಸಲಾಗುತ್ತದೆ.

ಒಟ್ಟಾರೆಯಾಗಿ, ನಿರಂತರ ಹಣದುಬ್ಬರ, ಹೆಚ್ಚುತ್ತಿರುವ ಬಡ್ಡಿ ದರಗಳು ಮತ್ತು ಸರ್ಕಾರಗಳ ವಿಪರೀತ ಸಾಲದ ನೀತಿಗಳಿಂದಾಗಿ ಜಾಗತಿಕ ಬಾಂಡ್ ಮಾರುಕಟ್ಟೆಯು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕಠಿಣ (Bear Market) ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸುರಕ್ಷಿತ ಹೂಡಿಕೆಯಾಗಿದ್ದ ಬಾಂಡ್‌ಗಳು ಸದ್ಯ ಹೂಡಿಕೆದಾರರಿಗೆ ನಷ್ಟದ ತಾಣವಾಗಿ ಮಾರ್ಪಟ್ಟಿರುವುದರಿಂದ ಜಾಗತಿಕ ನಿಧಿಗಳು ಸಾಲದ ಮಾರುಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ಹೊರನಡೆಯುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ ನೋಡಿ

ಇಂದು (ಮೇ 19) ದರ್ಶನ್ ಹಾಗೂ ವಿಜಯಲಕ್ಷ್ಮಿ (Vijayalakshmi Darshan) ಅವರ ವಿವಾಹ ವಾರ್ಷಿಕೋತ್ಸವ. ಆ ಪ್ರಯುಕ್ತ ಜೈಲಿನಲ್ಲಿ ಮುಖಾಮುಖಿ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಮಗ ವಿನೀಶ್ ಜೊತೆ ಬಂದ ವಿಜಯಲಕ್ಷ್ಮಿ ಅವರು ದರ್ಶನ್ ಭೇಟಿ ಮಾಡಿ ವಾಪಸ್ ತೆರಳಿದ್ದಾರೆ. ಈ ಭೇಟಿಗಾಗಿ ದರ್ಶನ್ ಅವರು ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇದ್ದಾರೆ. ಜಾಮೀನು ಪಡೆಯಲು ಅವರು ಇತ್ತೀಚೆಗೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿತು. ಬಳಿಕ ದರ್ಶನ್ ಅವರು ಮಾನಸಿಕವಾಗಿ ಬಹಳ ಕುಗ್ಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ – Kannada News | Russian President Vladimir Putin to visit India in September for BRICS Summit in Delhi

ನವದೆಹಲಿ, ಮೇ 19: ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12 ಮತ್ತು 13ರಂದು ಪುಟಿನ್ ನವದೆಹಲಿಗೆ ಆಗಮಿಸಲಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಒಂದೇ ವರ್ಷದ ಅವಧಿಯಲ್ಲಿ ಪುಟಿನ್ ಅವರು ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಆಳವಾದ ರಾಜತಾಂತ್ರಿಕ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. ಇದಕ್ಕೂ ಮುನ್ನ ಡಿಸೆಂಬರ್ 2025ರಲ್ಲಿ ನಡೆದ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಅವರು ಭಾರತಕ್ಕೆ ಬಂದಿದ್ದರು.

ಬ್ರಿಕ್ಸ್ ಶೃಂಗಸಭೆಯ ಜೊತೆಗೆ, ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಪ್ರತ್ಯೇಕ ದ್ವಿಪಕ್ಷೀಯ ಸಭೆ ನಡೆಯಲಿದೆ. ಜಾಗತಿಕ ರಾಜಕೀಯ ಒತ್ತಡಗಳ ನಡುವೆಯೂ ಭಾರತ ಮತ್ತು ರಷ್ಯಾ ನಡುವೆ ಡಾಲರ್ ಬದಲಿಗೆ ರೂಪಾಯಿ-ರೂಬಲ್ ಮೂಲಕ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ ಕೋವಿಡ್​ನಂತಹ ಜಾಗತಿಕ ಪರಿಣಾಮ ಬೀರಬಹುದು: ಪುಟಿನ್

ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ, ಕಲ್ಲಿದ್ದಲು ಮತ್ತು ರಸಗೊಬ್ಬರಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಉಭಯ ನಾಯಕರು ಚರ್ಚಿಸಲಿದ್ದಾರೆ. ರಕ್ಷಣಾ ಸಹಕಾರ ಮತ್ತು ತಂತ್ರಜ್ಞಾನ: ರಷ್ಯಾದ ಅತ್ಯಾಧುನಿಕ S-400 ಕ್ಷಿಪಣಿ ವ್ಯವಸ್ಥೆಯ ಪೂರೈಕೆ ಹಾಗೂ ರಕ್ಷಣಾ ವಲಯದಲ್ಲಿ ಜಂಟಿ ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆಗಳು ಮುಂದುವರಿಯಲಿವೆ.

ಇದನ್ನೂ ಓದಿ: ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ; ರಷ್ಯಾದಿಂದ ಮೊದಲ ವಿಡಿಯೋ ಬಿಡುಗಡೆ

ಇತ್ತೀಚೆಗಷ್ಟೇ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಅವರು ನವದೆಹಲಿಗೆ ಭೇಟಿ ನೀಡಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರು ಸಹ ಈ ವರ್ಷದ ಕೊನೆಯಲ್ಲಿ ವಾರ್ಷಿಕ ಶೃಂಗಸಭೆಗಾಗಿ ರಷ್ಯಾದ ರಾಜಧಾನಿ ಮಾಸ್ಕೋಗೆ ಭೇಟಿ ನೀಡುವುದನ್ನು ಖಚಿತಪಡಿಸಿದ್ದರು. ಜಾಗತಿಕವಾಗಿ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ನಡುವೆಯೂ ಭಾರತ ಮತ್ತು ರಷ್ಯಾ ತಮ್ಮ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುವುದು ಇಡೀ ವಿಶ್ವದ ಗಮನ ಸೆಳೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link