All posts by nagaraj11081993

ನಟಿ ಕೀರ್ತಿ ಸುರೇಶ್​ಗೆ ಬಾಡಿ ಶೇಮಿಂಗ್; ಸರ್ಜರಿ ವದಂತಿಗಳಿಗೆ ಖಡಕ್ ತಿರುಗೇಟು – Kannada News | Keerthy Suresh addresses body shaming and surgery rumours on instagram post

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರು ಚಿತ್ರರಂಗದಲ್ಲಿ ತಾವು ಎದುರಿಸಿದ ಬಾಡಿ ಶೇಮಿಂಗ್ (Body Shaming) ಮತ್ತು ಪ್ಲಾಸ್ಟಿಕ್ ಸರ್ಜರಿ ವದಂತಿಗಳ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮನದ ಮಾತುಗಳನ್ನು ಹೊರಹಾಕಿದ್ದಾರೆ. ಸದಾ ಸೌಮ್ಯವಾಗಿ ಕಾಣಿಸಿಕೊಳ್ಳುವ ನಟಿ, ಇತ್ತೀಚೆಗೆ ತಮಗಾದ ದೈಹಿಕ ಮತ್ತು ಮಾನಸಿಕ ಹಿನ್ನಡೆಯ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ಜಿಮ್‌ನಲ್ಲಿ ತಾವು ಕಷ್ಟಪಟ್ಟು ವರ್ಕೌಟ್ ಮಾಡುತ್ತಿರುವ ಹಳೆಯ ವಿಡಿಯೋವನ್ನು ಹಂಚಿಕೊಂಡಿರುವ ಕೀರ್ತಿ ಸುರೇಶ್ (Keerthy Suresh), ‘ಫಿಟ್‌ನೆಸ್ ಎಂಬುದು ನನ್ನ ಜೀವನದ ಅತಿ ದೊಡ್ಡ ಗುರು’ ಎಂದು ಬರೆದುಕೊಂಡಿದ್ದಾರೆ.

‘2013ರಲ್ಲಿ ನಾನು ನಟಿಯಾಗಿ ಕೆರಿಯರ್ ಆರಂಭಿಸಿದಾಗ ನನಗೇನೂ ತಿಳಿಯದ ಮಗುವಿನಂತಿದ್ದೆ. ಜಿಮ್ ನನಗೆ ಒಗ್ಗುವುದಿಲ್ಲ ಎಂದೇ ನಾನು ಭಾವಿಸಿದ್ದೆ. ಆದರೆ 2018ರ ಮಹಾನಟಿ ಸಿನಿಮಾ ಮುಗಿದ ಬಳಿಕ ಸಿಕ್ಕ ಬಿಡುವಿನಲ್ಲಿ, ನಾನೇಕೆ ಜಿಮ್​ಗೆ ಹೋಗಬಾರದು ಎಂದು ಯೋಚಿಸಿದೆ’ ಎಂದು ಕೀರ್ತಿ ಬರೆದಿದ್ದಾರೆ. ಕಠಿಣ ಶ್ರಮವಹಿಸಿ ಕೀರ್ತಿ ಅವರು ಕೇವಲ 9 ತಿಂಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡಿದ್ದರು.

ತೂಕ ಇಳಿಸಿಕೊಂಡು ಫಿಟ್ ಆದಾಗ ತಮಗೆ ಎದುರಾದ ಕಹಿ ಅನುಭವವನ್ನು ಹಂಚಿಕೊಂಡ ಕೀರ್ತಿ, ‘ನಾನು ತೂಕ ಇಳಿಸಿಕೊಂಡಾಗ ಜನರು ನನ್ನನ್ನು ವೀಕ್ ಎಂದು ಕರೆದರು. ಅಷ್ಟೇ ಅಲ್ಲದೇ, ನಾನು ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂಬ ವದಂತಿ ಹಬ್ಬಿಸಿದರು. ನಾನು ನನ್ನ ಮುಖ ಸೇರಿದಂತೆ ಎಲ್ಲವನ್ನೂ ನೈಸರ್ಗಿಕವಾಗಿಯೇ ಇಟ್ಟುಕೊಂಡಿದ್ದೇನೆ. ಹೀಗಿರುವಾಗ ನನ್ನ ಕಠಿಣ ಶ್ರಮಕ್ಕೆ ಸರ್ಜರಿಯ ಪಟ್ಟ ಕಟ್ಟಿದಾಗ ನಿಜಕ್ಕೂ ತುಂಬಾ ಬೇಸರವಾಯಿತು’ ಎಂದು ತಮಗಾದ ನೋವನ್ನು ತೋಡಿಕೊಂಡಿದ್ದಾರೆ. ಜಿಮ್ ಜೊತೆಗೆ 2020ರಲ್ಲಿ ತಾವು ಯೋಗಾಭ್ಯಾಸ ಶುರು ಮಾಡಿದ್ದು, ಅದು ತಮ್ಮ ಜೀವನವನ್ನೇ ಬದಲಾಯಿಸಿತು ಎಂದು ಅವರು ಹೇಳಿದ್ದಾರೆ.

‘ಇಂದು ನಾನು ಫಿಟ್ ಆಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಆದರೆ ಈಗಲೂ ಕೆಲವರು ಬಂದು, ನೀನು ದಪ್ಪಗಿದ್ದಾಗ ಚೆನ್ನಾಗಿ ಕಾಣುತ್ತಿದ್ದೆ ಎಂದು ಬಿಟ್ಟಿ ಸಲಹೆ ನೀಡುತ್ತಾರೆ. ನಾವು ದಪ್ಪಗಿದ್ದರೆ ಫಿಟ್ ಆಗಿ ಎಂದೂ, ತೆಳ್ಳಗಾದರೆ ದಪ್ಪಗಾಗಿ ಎಂದೂ ಜನರು ಹೇಳುತ್ತಾರೆ. ಈ ಜಗತ್ತು ಹೇಗೆ ವರ್ತಿಸುತ್ತದೆ ಎಂಬುದೇ ನನಗೆ ಅರ್ಥವಾಗುವುದಿಲ್ಲ’ ಎಂದು ಕೀರ್ತಿ ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ರೌಡಿ ಜನಾರ್ದನ’ ವಿಜಯ್ ದೇವರಕೊಂಡ ಎದೆ ಮೇಲೆ ಕಾಲಿಟ್ಟ ನಟಿ ಕೀರ್ತಿ ಸುರೇಶ್

ಇದೇ ಪೋಸ್ಟ್‌ನಲ್ಲಿ ಇತ್ತೀಚಿನ ತಮ್ಮ ಆರೋಗ್ಯದ ಏರುಪೇರಿನ ಬಗ್ಗೆಯೂ ಕೀರ್ತಿ ಸುಳಿವು ನೀಡಿದ್ದಾರೆ. ‘ಕಳೆದ ಕೆಲವು ತಿಂಗಳುಗಳಿಂದ ನಾನು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದೆ. ಇತ್ತೀಚೆಗೆ ನಾನು ದೈಹಿಕ ಮತ್ತು ಮಾನಸಿಕವಾಗಿ ದೊಡ್ಡ ಹಿನ್ನಡೆ ಅನುಭವಿಸಿದ್ದೇನೆ. ಆದರೆ ಈ ಪ್ರಯಾಣ ನನಗೆ ನೆನಪಿಸುವುದೇನೆಂದರೆ, ಒಂದು ವೇಳೆ ನಾನು ಎಲ್ಲಾದರೂ ಬಿದ್ದರೆ, ಕೊಂಚ ವಿರಾಮ ತೆಗೆದುಕೊಳ್ಳಬಹುದೇ ಹೊರತು, ಯಾವುದೇ ಕಾರಣಕ್ಕೂ ನಾನು ಸೋಲೊಪ್ಪಿಕೊಳ್ಳುವುದಿಲ್ಲ ’ ಎಂದು ಸವಾಲೊಡ್ಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ – Kannada News | Hyderabad man quits Rs 38 lakh salary job in Bengaluru

ಉದ್ಯೋಗ ಎಲ್ಲರಿಗೂ ಅವಶ್ಯಕ. ಹೀಗಾಗಿ ಎಷ್ಟೋ ಯುವಕರು ಊರು ಬಿಟ್ಟು ದೂರದ ಬೆಂಗಳೂರು, ಮುಂಬೈ ಹೀಗೆ ಇತರ ಊರುಗಳಿಗೆ ಹೋಗ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೊಬ್ಬರು ಒಂದೊಳ್ಳೆ ಉದ್ಯೋಗ ಆಫರ್ ತಿರಸ್ಕರಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಅಧಿಕ ಸಂಬಳದ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಬದಲು ಹೈದರಾಬಾದ್‌ನಲ್ಲಿ (Hyderabad) ಕಡಿಮೆ ಸಂಬಳದ ಉದ್ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಈ ವ್ಯಕ್ತಿಯ ಪೋಸ್ಟ್ ಆನ್ಲೈನ್ ನಲ್ಲಿ ಚರ್ಚೆ ಹುಟ್ಟುಹಾಕಿದೆ.

ಮದನ್ ಮೋಹನ್ (Madan Mohan) ಎಂಬ ವ್ಯಕ್ತಿ ತನ್ನ ಎಕ್ಸ್ ಖಾತೆಯಲ್ಲಿ ಉದ್ಯೋಗ ಆಯ್ಕೆಯ ಅನುಭವ ಹಂಚಿಕೊಂಡಿದ್ದಾನೆ. ನನ್ನ ಪ್ರಸ್ತುತ ಸಂಸ್ಥೆಗೆ ಸೇರುವ ಮೊದಲು ನನ್ನ ಕೈಯಲ್ಲಿ ಎರಡು ಆಫರ್‌ಗಳಿದ್ದವು. ಆಫರ್ 1: ಪ್ಯಾಕೇಜ್ 38 ಲಕ್ಷ ರೂ , ಸ್ಥಳ ಬೆಂಗಳೂರು. ಆಫರ್ 2: ಪ್ಯಾಕೇಜ್ 30 ಲಕ್ಷ ರೂ , ಸ್ಥಳ ಹೈದರಾಬಾದ್. ನನ್ನ ಸುತ್ತಲಿನ ಹೆಚ್ಚಿನ ಜನರು, ನೀವು ಇನ್ನೂ 38 ಲಕ್ಷ ರೂ ಸಂಬಳದ ಉದ್ಯೋಗ ಏಕೆ ಬಿಡುತ್ತೀರಿ?” ಎಂದು ಕೇಳಿದರು, ಆದರೆ ನಾನು ಅರಿತುಕೊಂಡದ್ದು ಇಲ್ಲಿದೆ ಕೆಲವೊಮ್ಮೆ, ಉತ್ತಮ ನಿರ್ಧಾರವೆಂದರೆ ಅತ್ಯುನ್ನತ ಪ್ಯಾಕೇಜ್ ಅಲ್ಲ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ನಾನು ಕಳೆದ 15 ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದೇನೆ. ನನಗೆ, ಇಲ್ಲಿನ ಜೀವನ ಎಂದರೆ ಉತ್ತಮ ಆಹಾರ, ಕಡಿಮೆ ಜೀವನ ವೆಚ್ಚ, ಕಡಿಮೆ ಒತ್ತಡ, ಸೌಕರ್ಯ ಮತ್ತು ಪರಿಚಿತತೆ, ಹತ್ತಿರದ ಕುಟುಂಬ, ಸ್ನೇಹಿತರು ಹಾಗೂ ನಿಜವಾಗಿಯೂ ಮನೆಯಂತೆ ಭಾಸವಾಗುವ ನಗರ ಎಂದಿದ್ದಾರೆ.

ದೊಡ್ಡ ಸಂಬಳವು ಆಕರ್ಷಕವಾಗಿ ಕಾಣುತ್ತದೆ, ಆದರೆ ಮನಸ್ಸಿನ ಶಾಂತಿ, ಜೀವನಶೈಲಿ, ಸಂತೋಷ ಹಾಗೂ ಮಾನಸಿಕ ನೆಮ್ಮದಿ ಕೂಡ ಮೌಲ್ಯವನ್ನು ಹೊಂದಿರುತ್ತದೆ. ಆದರೆ ಅವು ಹೆಚ್ಚು ಮುಖ್ಯವಾಗುತ್ತವೆ. ಅನೇಕ ಜನರು ಸಂಬಳವನ್ನು ಮಾತ್ರ ಲೆಕ್ಕ ಹಾಕುತ್ತಾರೆ. ಬಹಳ ಕಡಿಮೆ ಜನರು ಜೀವನದ ಗುಣಮಟ್ಟವನ್ನು ಲೆಕ್ಕ ಹಾಕುತ್ತಾರೆ ಎಂದು ಹೇಳಿದ್ದಾರೆ.

ಇಂದು, ನಾನು ತೆಗೆದುಕೊಂಡ ನಿರ್ಧಾರದಿಂದ ನನಗೆ ಸಂತೋಷವಾಗಿದೆ ಏಕೆಂದರೆ ಯಶಸ್ಸು ಕೇವಲ ಹೆಚ್ಚು ಗಳಿಸುವುದಲ್ಲ. ನೀವು ಆನಂದಿಸುವ ಜೀವನವನ್ನು ನಿರ್ಮಿಸುವುದರಲ್ಲಿ ಇರುತ್ತದೆ. ಒತ್ತಡದ ಬದಲು ಶಾಂತಿಯನ್ನು ಆರಿಸಿಕೊಳ್ಳುವುದು ವೃತ್ತಿಜೀವನದ ಅತ್ಯಂತ ಬುದ್ಧಿವಂತ ನಡೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಊರು ಬದಲಾಯಿಸುವುದು ಸುಲಭದ ಕೆಲಸವಲ್ಲ; ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ದಂಪತಿ ಹೀಗೆಂದಿದ್ದೇಕೆ?

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹೈದರಾಬಾದ್ ಎಲ್ಲಕ್ಕಿಂತ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಹೈದರಾಬಾದ್ ನನಗೆ ಮನೆಯಂತೆ ಅನಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು, ನನಗೆ ಬೆಂಗಳೂರು ಉತ್ತಮವಾಗಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK vs SRH IPL 2026 Live Score: ಟಾಸ್ ಗೆದ್ದ ಸಿಎಸ್​ಕೆ ಬ್ಯಾಟಿಂಗ್ ಆಯ್ಕೆ – Kannada News | Chennai Super Kings vs Sunrisers Hyderabad IPL 2026 Live Cricket Score CSK vs SRH Match on 18th May latest news in Kannada

  • 18 May 2026 07:34 PM (IST)

    CSK vs SRH IPL 2026: ಸನ್​ರೈಸರ್ಸ್​

    ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

  • 18 May 2026 07:33 PM (IST)

    CSK vs SRH IPL 2026: ಸಿಎಸ್​ಕೆ ತಂಡ

    ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್.

  • 18 May 2026 07:25 PM (IST)

    CSK vs SRH IPL 2026: ಟಾಸ್ ಗೆದ್ದ ಸಿಎಸ್​ಕೆ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ಬ್ಯಾಟಿಂಗ್ ಆಯ್ದುಕೊಂಡಿದೆ.

  • Source link

    ನರೇಂದ್ರ ಮೋದಿಗೆ ನಾರ್ವೆಯ ಅತ್ಯುನ್ನತ ಪ್ರಶಸ್ತಿ ಪ್ರದಾನ; ಭಾರತದ ಪ್ರಧಾನಿಗೆ 32ನೇ ಜಾಗತಿಕ ಗೌರವ – Kannada News | PM Narendra Modi Receives Norways Top Civilian award 32nd global honour So Far

    ನವದೆಹಲಿ, ಮೇ 18: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ನಾರ್ವೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್’ (Grand Cross of the Royal Norwegian Order) ಗೌರವವನ್ನು ನೀಡಿ ಗೌರವಿಸಲಾಗಿದೆ. ಇದು ಪ್ರಧಾನಿ ಮೋದಿಯವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಡೆದ 32ನೇ ಜಾಗತಿಕ ಗೌರವವಾಗಿದೆ.

    ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್’ ನಾರ್ವೆ ದೇಶವು ವಿದೇಶಿ ರಾಷ್ಟ್ರಗಳ ಮುಖ್ಯಸ್ಥರಿಗೆ ಮತ್ತು ಜಾಗತಿಕ ನಾಯಕರಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಭಾರತ ಮತ್ತು ನಾರ್ವೆ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು, ಹಸಿರು ಇಂಧನ (Green Energy), ಕಡಲ ಆರ್ಥಿಕತೆ (Maritime Economy) ಮತ್ತು ಜಾಗತಿಕ ಶಾಂತಿಗಾಗಿ ಪ್ರಧಾನಿ ಮೋದಿ ನೀಡಿದ ಕೊಡುಗೆಯನ್ನು ಶ್ಲಾಘಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

    ಇದನ್ನೂ ಓದಿ: ಭಾರತ-ಸ್ವೀಡನ್ ಬಾಂಧವ್ಯಕ್ಕೆ ಹೊಸ ವೇಗ: ಪ್ರಧಾನಿ ಮೋದಿ ಪ್ರವಾಸದ ಪ್ರಮುಖ ಒಪ್ಪಂದಗಳ ಬಗ್ಗೆ ಮಾಹಿತಿ ಇಲ್ಲಿದೆ

    32ನೇ ಜಾಗತಿಕ ಗೌರವ:

    ವಿಶ್ವದ ವಿವಿಧ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಧಾನಿ ಮೋದಿಯವರಿಗೆ ನೀಡಿದ ಒಟ್ಟಾರೆ ಜಾಗತಿಕ ಪ್ರಶಸ್ತಿಗಳ ಸಂಖ್ಯೆ ಈಗ 32ಕ್ಕೆ ತಲುಪಿದೆ. ಇವುಗಳಲ್ಲಿ ಹಲವು ಪ್ರಶಸ್ತಿಗಳು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ವಿವಿಧ ಶಕ್ತಿಶಾಲಿ ದೇಶಗಳ ಅತ್ಯುನ್ನತ ನಾಗರಿಕ ಗೌರವಗಳಾಗಿವೆ.

    ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ ಮತ್ತು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಸಿಕ್ಕ ದೊಡ್ಡ ಮನ್ನಣೆ ಇದಾಗಿದೆ. ನಾರ್ವೆ ಸೇರಿದಂತೆ ಉತ್ತರದ ದೇಶಗಳೊಂದಿಗೆ (Nordic Countries) ಭಾರತದ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಇದು ಮತ್ತಷ್ಟು ಉತ್ತೇಜನ ನೀಡುತ್ತದೆ. ಇದಕ್ಕೂ ಮುನ್ನ ಭೂತಾನ್, ಗ್ರೀಸ್, ಪಪುವಾ ನ್ಯೂಗಿನಿಯಾ ಮತ್ತು ಫಿಜಿ ದೇಶಗಳು ಕೂಡ ತಮ್ಮ ಅತ್ಯುನ್ನತ ಪ್ರಶಸ್ತಿಗಳನ್ನು ಪ್ರಧಾನಿ ಮೋದಿಯವರಿಗೆ ನೀಡಿ ಗೌರವಿಸಿದ್ದವು.

    ಇದನ್ನೂ ಓದಿ: ಸ್ವೀಡನ್​​​​​ನಲ್ಲಿ ಮೋದಿಗೆ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿ

    ಪ್ರಧಾನಿ ಮೋದಿಗೆ ನೀಡಲಾಗಿರುವ ಪ್ರಮುಖ ಪ್ರಶಸ್ತಿಗಳು:

    ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ (ರಷ್ಯಾ) – ರಷ್ಯಾದ ಅತ್ಯುನ್ನತ ಗೌರವ.

    ಆರ್ಡರ್ ಆಫ್ ದಿ ನೈಲ್ (ಈಜಿಪ್ಟ್) – ಈಜಿಪ್ಟ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ.

    ಗ್ರಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ (ಫ್ರಾನ್ಸ್) – ಫ್ರಾನ್ಸ್‌ನ ಅತ್ಯುನ್ನತ ಗೌರವ.

    ಲೀಜನ್ ಆಫ್ ಮೆರಿಟ್ (ಅಮೆರಿಕ) – ಅಮೆರಿಕ ಸಶಸ್ತ್ರ ಪಡೆಗಳ ಪ್ರಮುಖ ಗೌರವ.

    ಕಿಂಗ್ ಅಬ್ದುಲಜೀಸ್ ಸ್ಯಾಶ್ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ.

    ಆರ್ಡರ್ ಆಫ್ ಜಾಯೆದ್ (ಯುಎಇ) – ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತ್ಯುನ್ನತ ನಾಗರಿಕ ಗೌರವ.

    ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಎಲ್ಲಿಗೆ ಬಂತು? ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ? – Kannada News | Karnataka Power Tussle: CM Siddaramaiah Met Rahul Gandhi In Kerala for cabinet reshuffle, And here Is Political developments of leadership change

    ಖರ್ಗೆ, ಡಿಕೆಶಿ, ರಾಹುಲ್, ಸಿದ್ದರಾಮಯ್ಯ

    ಬೆಂಗಳೂರು, (ಮೇ 18): ಕರ್ನಾಟಕ ಕಾಂಗ್ರೆಸ್‌ನಲ್ಲಿ (karnataka Congress) ಸಚಿವ ಸಂಪುಟ ಪುನಾರಚನೆ ( cabinet reshuffle) ಹಾಗೂ ನಾಯಕತ್ವ ಬದಲಾವಣೆ ಗೊಂದಲ ಮುಂದುವರೆದಿದೆ. ಇಷ್ಟು ದಿನ ಹೈಕಮಾಂಡ್ ನೋಡೋಣ ನೋಡೋಣ ಎಂದೇ ಮುಂದಕ್ಕೆ ತಳ್ಳುತ್ತಾ ಬಂದಿದೆ. ಆದ್ರೆ, ಇದೀಗ ಕೇರಳ ಚುನಾವಣೆ ಮುಗಿದು ಸರ್ಕಾರ ರಚನೆಯಾಗಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿದೆ. ಕೇರಳದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    • ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದುವರಿದ ನಾಯಕತ್ವ ಗೊಂದಲ
    • ಸಂಪುಟ ಪುನಾರಚನೆ ಚರ್ಚೆಗೆ ಕೇರಳಂನಲ್ಲೇ ಸಿದ್ದರಾಮಯ್ಯ ಮನವಿ..?
    • ತುಮಕೂರು ಸಾಧನಾ ಸಮಾವೇಶದ ಸುತ್ತ ರಾಜಕೀಯ
    • ಜಿ. ಪರಮೇಶ್ವರ್ ಸಿಎಂ ಮಾಡಲು ವೇದಿಕೆ ಸಿದ್ಧತೆ?

    ಕೇರಳಂನಲ್ಲಿ ಕರ್ನಾಟಕ ಸಂಪುಟ ಪುನಾರಚನೆ ಚರ್ಚೆ

    ಕೇರಳಂನಲ್ಲಿ ಇಡೀ ಹೈಕಮಾಂಡ್ ನಾಯಕರೇ ಬೀಡು ಬಿಟ್ಟಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತು ಅಧಿಕೃತ ಚರ್ಚೆ ನಡೆಸಲು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬಹಳ ಸಮಯ ಹೈಕಮಾಂಡ್ ನಾಯಕರ ಜೊತೆ ಕಾಲ ಕಳೆದಿರುವುದರಿಂದ ಕೇರಳದಲ್ಲೇ ಕರ್ನಾಟಕದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆದಿರಬಹುದು ಮಾತುಗಳು ಕೇಳಿಬರುತ್ತಿವೆ.

    ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಕರ್ನಾಟಕ ಯೂತ್ ಕಾಂಗ್ರೆಸ್​ ಗಲಾಟೆ: ಅಧ್ಯಕ್ಷ ವಿರುದ್ಧ ಗಂಭೀರ ಆರೋಪ

    ಸಾಧನಾ ಸಮಾವೇಶದ ಸುತ್ತ ರಾಜಕೀಯ

    ಈ ಮಧ್ಯೆ ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶದ ನೆಪದಲ್ಲಿ ಕೈ ನಾಯಕರ ನಡುವೆ ಹೊಸ ಸಮರ ಶುರುವಾಗಿದೆ. ತುಮಕೂರಿನಲ್ಲಿ ನಡೆಯಲಿರುವ ಸಮಾವೇಶದ ಕುರಿತು ಪಕ್ಷದ ಒಳಗೇ ಪರ,ವಿರೋಧದ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಹೌದು..ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾಳೆ (ಮೇ 19) ತುಮಕೂರಿನಲ್ಲಿ ಬೃಹತ್ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಆದರೆ, ತುಮಕೂರಿನಲ್ಲೇ ಈ ಸಮಾವೇಶ ನಡೆಯುತ್ತಿರುವುದರಿಂದ ಜಿ. ಪರಮೇಶ್ವರ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ ಎಂಬ ವ್ಯಾಖ್ಯಾನಗಳು ಶುರುವಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿದ್ದರಾಮಯ್ಯ ಬದಲಾವಣೆಯಾದರೆ ಪರಮೇಶ್ವರ್ ಸಿಎಂ ಆಗಲಿ, ನಾವು ಅದನ್ನೇ ಬಯಸುತ್ತೇವೆ ಎಂದು ಹೇಳಿಕೆ ನೀಡಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಸಿಎಂ ಸ್ಥಾನ ಯಾರ ಮನೆ ಆಸ್ತಿಯೂ ಅಲ್ಲ ಎಂದ ರಾಜಣ್ಣ

    2013ರಲ್ಲಿ ಜಿ. ಪರಮೇಶ್ವರ್ ಗೆದ್ದಿದ್ದರೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುತ್ತಿದ್ದರಾ ಎಂಬ ಪ್ರಶ್ನೆಗೆ ಕೆ.ಎನ್. ರಾಜಣ್ಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನ ಬಿಟ್ಟುಕೊಡದೇ ಇರಲು ಸಿದ್ದರಾಮಯ್ಯ ಅವರ ಮನೆ ಆಸ್ತಿ ಅಲ್ಲ, ಅದು ಜನರು ಕೊಡುವ ಭಿಕ್ಷೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನ ಯಾವುದೇ ರಾಜಕಾರಣಿಗಳ ಸ್ವಂತ ಆಸ್ತಿಯಲ್ಲ ಎನ್ನುವ ಮೂಲಕ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಗಂಭೀರವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

    ಶಿವಕುಮಾರ್‌ಗೆ ಟಾಂಗ್ ಕೊಟ್ಟ ರಾಜಣ್ಣ

    ಇನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಈ ಸ್ಪೋಟಕ ಹೇಳಿಕೆಗಳ ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆ ಅಡಗಿದೆ. “ಇದ್ದರೆ ಸಿದ್ದರಾಮಯ್ಯ ಇರಲಿ, ಬದಲಾದರೆ ಪರಮೇಶ್ವರ್ ಆಗಲಿ” ಎಂದು ಹೇಳುವ ಮೂಲಕ, ಕೆ.ಎನ್. ರಾಜಣ್ಣ ಅವರು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ತಮಗೆ ಇಷ್ಟವಿಲ್ಲ ಎಂಬುದನ್ನು ಮತ್ತೊಮ್ಮೆ ಬಹಿರಂಗವಾಗಿ ಗಟ್ಟಿಯಾಗಿ ಹೇಳಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರ ಬಣದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

    ಒಂದು ಕಡೆ ಕೇರಳ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಜೊತೆ ನಾಯಕತ್ವದ ಕುರಿತು ಪ್ರತ್ಯೇಕ ಚರ್ಚೆ ನಡೆಸುತ್ತಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಪರಮೇಶ್ವರ್ ಪರ ಬ್ಯಾಟಿಂಗ್ ಶುರುವಾಗಿದೆ. ಹೈಕಮಾಂಡ್ ನಾಯಕರ ನಡೆ ಹಾಗೂ ತುಮಕೂರಿನ ಸಾಧನಾ ಸಮಾವೇಶದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.

    ಒಟ್ಟಿನಲ್ಲಿ ಸಂಪುಟ ಪುನಾರಚನೆಗೆ ಏನೋ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬಹುದು. ಆದ್ರೆ, ಕರ್ನಾಟಕ ಕಾಂಗ್ರೆಸ್​​ನಲ್ಲಿನ ನಾಯಕತ್ವ ಗೊಂದಲ ಇನ್ನೂ ಮುಂದುರೆದಿದ್ದು, ಇದಕ್ಕೆ ಹೈಕಮಾಂಡ್ ಯಾವಾಗ ತೆರೆ ಎಳೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    ಆಧಾರ್ ಅಪ್​ಡೇಟ್ ಮಾಡದಿರುವವರ ಗಮನಕ್ಕೆ; ಉಚಿತ ಅಪ್​ಡೇಟ್ ಅವಕಾಶ ಮತ್ತೆ 1 ವರ್ಷ ವಿಸ್ತರಣೆ – Kannada News | Free Aadhaar Update Deadline Extended for One Year: Available upto 2027 June 14th

    ನವದೆಹಲಿ, ಮೇ 18: ಕೋಟಿಗಟ್ಟಲೆ ಆಧಾರ್ ಕಾರ್ಡ್ (Aadhaar) ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಭರ್ಜರಿ ಸಿಹಿ ಸುದ್ದಿ ನೀಡಿದೆ. ಮೈಆಧಾರ್ (myAadhaar) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ದಾಖಲೆಗಳನ್ನು ನವೀಕರಿಸಲು (Document Update) ನೀಡಲಾಗಿದ್ದ ಕೊನೆಯ ದಿನಾಂಕವನ್ನು ಯುಐಡಿಎಐ ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಕಳೆದ ಕೆಲ ವರ್ಷಗಳಿಂದ ಈ ಅವಕಾಶವನ್ನು ವಿಸ್ತರಿಸುತ್ತಲೇ ಬರಲಾಗುತ್ತಿದೆ.

    ಈ ಸುದ್ದಿಯ ಮುಖ್ಯಾಂಶಗಳು

    • ಈ ಹಿಂದೆ ನಿಗದಿಪಡಿಸಲಾಗಿದ್ದ ಉಚಿತ ಆಧಾರ್ ಅಪ್‌ಡೇಟ್ ಗಡುವನ್ನು ಈಗ ಮತ್ತೊಂದು ವರ್ಷದವರೆಗೆ ವಿಸ್ತರಿಸಲಾಗಿದೆ.
    • ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು ಈಗ 2027ರ ಜೂನ್ 14 ರವರೆಗೆ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನವೀಕರಿಸಬಹುದು.
    • ಈ ಉಚಿತ ಸೌಲಭ್ಯವು ಕೇವಲ ಅಧಿಕೃತ ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದ್ದು, ಆಫ್‌ಲೈನ್ ಕೇಂದ್ರಗಳಲ್ಲಿ ಎಂದಿನಂತೆ ಶುಲ್ಕ ಅನ್ವಯವಾಗುತ್ತದೆ.

    ವಿಸ್ತರಣೆಗೆ ಕಾರಣ ಮತ್ತು ಪ್ರಯೋಜನ

    ಯುಐಡಿಎಐ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಮೈಆಧಾರ್ ಪೋರ್ಟಲ್ ಮೂಲಕ ಲಕ್ಷಾಂತರ ನಾಗರಿಕರು ತಮ್ಮ ವಿವರಗಳನ್ನು ಯಶಸ್ವಿಯಾಗಿ ನವೀಕರಿಸುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಧನಾತ್ಮಕ ಸ್ಪಂದನೆಯನ್ನು ಪರಿಗಣಿಸಿ, ಇನ್ನುಳಿದ ಜನರಿಗೂ ಅವಕಾಶ ಕಲ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ತಮ್ಮ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದು, ಇದುವರೆಗೆ ಒಮ್ಮೆಯೂ ಯಾವುದೇ ದಾಖಲೆಗಳನ್ನು ನವೀಕರಿಸದ ನಾಗರಿಕರು ತಮ್ಮ ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆಗಳನ್ನು (PoA) ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.

    ಇದನ್ನೂ ಓದಿ: ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?

    ಆನ್‌ಲೈನ್ ಮತ್ತು ಆಫ್‌ಲೈನ್ ವ್ಯತ್ಯಾಸ

    ಸಾರ್ವಜನಿಕರು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಉಚಿತ ಸೌಲಭ್ಯವು ಕೇವಲ ಆನ್‌ಲೈನ್‌ನಲ್ಲಿ (myaadhaar.uidai.gov.in/) ಸ್ವತಃ ಅಪ್‌ಡೇಟ್ ಮಾಡುವವರಿಗೆ ಮಾತ್ರ ಸೀಮಿತವಾಗಿದೆ. ಒಂದು ವೇಳೆ ನಾಗರಿಕರು ತಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆಗಳನ್ನು ನವೀಕರಿಸಲು ಬಯಸಿದರೆ, ಅಲ್ಲಿ ನಿಯಮಿತ ಸೇವಾ ಶುಲ್ಕವಾದ 75 ರೂ ಅನ್ನು ಪಾವತಿಸಬೇಕಾಗುತ್ತದೆ. ಆಧಾರ್ ಡೇಟಾಬೇಸ್‌ನ ನಿಖರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ವಿವರಗಳನ್ನು ನವೀಕರಿಸಿಕೊಳ್ಳುವಂತೆ ಯುಐಡಿಎಐ ಮನವಿ ಮಾಡಿದೆ.

    ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

    Source link

    ಗರ್ಭಾವಸ್ಥೆಯಲ್ಲಿ ಬಿಪಿ ಪರೀಕ್ಷೆ ಮಾಡಿಸುವುದು ಎಷ್ಟು ಅಗತ್ಯ ಗೊತ್ತಾ? ಇಲ್ಲದಿದ್ದರೆ ಏನ್ ಆಗುತ್ತೆ ನೋಡಿ – Kannada News | Normal Blood Pressure Range For Pregnant Women: Doctor’s Safety Guide

    ಗರ್ಭಾವಸ್ಥೆಯಲ್ಲಿಯೂ ರಕ್ತದೊತ್ತಡವನ್ನು (Blood Pressure) ನಿಯಮಿತವಾಗಿ ಪರೀಕ್ಷಿಸುವುದು ಬಹಳ ಮುಖ್ಯ ಎಂಬುದು ನಿಮಗೆ ತಿಳಿದಿರಬಹುದು. ಆರೋಗ್ಯ ತಜ್ಞರು ಕೂಡ ಇದನ್ನೇ ಹೇಳುತ್ತಾರೆ. ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುವುದರಿಂದ ಬಿಪಿ ಏರಿಳಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಹಲವಾರು ಸಂದರ್ಭಗಳಲ್ಲಿ ಹೈ ಬಿಪಿಗೆ ಆರಂಭದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಆದ್ದರಿಂದ ಕೇವಲ ದೇಹದ ಲಕ್ಷಣಗಳನ್ನು ಆಧರಿಸಿ ಸಮಸ್ಯೆಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಪ್ರತಿಯೊಂದು ಆಂಟಿನೇಟಲ್ ತಪಾಸಣೆಯಲ್ಲೂ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲ್ವಿಚಾರಣೆ ಸುಲಭವಾಗುತ್ತದೆ. ಆದರೆ ಯಾಕೆ ಗರ್ಭಾವಸ್ಥೆಯಲ್ಲಿ ಹೈ ಬಿಪಿ ಅಪಾಯಕಾರಿಯಾಗಿರುತ್ತದೆ, ಯಾರು ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

    ಗರ್ಭಾವಸ್ಥೆಯಲ್ಲಿ ಹೈ ಬಿಪಿ ಏಕೆ ಅಪಾಯಕಾರಿ?

    ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಿದ ರಕ್ತದೊತ್ತಡ ಜಸ್ಟೇಷನಲ್ ಹೈಪರ್‌ಟೆನ್ಷನ್ ಅಥವಾ ಪ್ರೀ- ಎಕ್ಲಾಂಪ್ಸಿಯಾ ಎಂಬ ಗಂಭೀರ ಸಮಸ್ಯೆಗಳ ಸೂಚನೆಯಾಗಿರಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಮೆದುಳು, ಮೂತ್ರಪಿಂಡ, ಯಕೃತ್ ಮತ್ತು ರಕ್ತ ಗಟ್ಟಿಯಾಗುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರ ಪರಿಣಾಮ ಗರ್ಭದಲ್ಲಿರುವ ಮಗುವಿನ ಮೇಲೂ ಬೀಳಬಹುದು. ಮಗುವಿನ ಬೆಳವಣಿಗೆ ನಿಧಾನವಾಗುವುದು, ಜನನ ಸಮಯದಲ್ಲಿ ತೂಕ ಕಡಿಮೆ ಇರುವುದು ಅಥವಾ ಅವಧಿಗೆ ಮುನ್ನ ಹೆರಿಗೆ ಅಗತ್ಯವಾಗುವ ಪರಿಸ್ಥಿತಿ ಉಂಟಾಗಬಹುದು.

    ಇದನ್ನೂ ಓದಿ: ಹೈ ಬಿಪಿ ಮತ್ತು ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತಾ? ಈ ಬಗ್ಗೆ ವೈದ್ಯರು ಏನ್ ಹೇಳ್ತಾರೆ ನೋಡಿ

    ಯಾರು ಹೆಚ್ಚು ಜಾಗ್ರತೆ ವಹಿಸಬೇಕು?

    ಹಿಂದಿನಿಂದಲೇ ಹೈ ಬಿಪಿ, ಡಯಾಬಿಟೀಸ್, ಕಿಡ್ನಿ ಸಮಸ್ಯೆ, ಅತಿಯಾದ ತೂಕ ಅಥವಾ ಜೋಡಿ ಗರ್ಭಧಾರಣೆ ಇರುವ ಮಹಿಳೆಯರು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಹೈ ಬಿಪಿ ಇತಿಹಾಸ ಇದ್ದರೂ ಅಪಾಯ ಹೆಚ್ಚಾಗಬಹುದು. ಇಂತಹ ಮಹಿಳೆಯರಿಗೆ ವೈದ್ಯರು ಹೆಚ್ಚುವರಿ ಬಿಪಿ ಪರೀಕ್ಷೆ, ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಸಲಹೆ ನೀಡಬಹುದು. ಇದರಿಂದ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

    ನಿಯಮಿತ ಬಿಪಿ ಪರೀಕ್ಷೆಯಿಂದ ಏನು ಲಾಭ?

    ಸಾಮಾನ್ಯವಾಗಿ ನಿಯಮಿತ ಬಿಪಿ ತಪಾಸಣೆಯಿಂದ ಗಂಭೀರ ಸಮಸ್ಯೆಗಳನ್ನು ತುರ್ತು ಪರಿಸ್ಥಿತಿಗೆ ತಲುಪುವ ಮುನ್ನವೇ ಗುರುತಿಸಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಆರಂಭಿಸಿದರೆ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಹೆಚ್ಚಿಸಬಹುದು. ಇದು ಸರಳ ಮತ್ತು ಕಡಿಮೆ ವೆಚ್ಚದ ಪರೀಕ್ಷೆಯಾಗಿದ್ದರೂ, ಹಲವಾರು ಬಾರಿ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ? – Kannada News | Know How India’s LPG Shortage Is Effecting California’s Fuel Prices

    ಅಮೆರಿಕದಲ್ಲಿ ಪೆಟ್ರೋಲ್ (ಗ್ಯಾಸೊಲಿನ್)Image Credit source: Getty Images

    ಕ್ಯಾಲಿಫೋರ್ನಿಯಾ, ಮೇ 18: ಜಾಗತಿಕ ಆರ್ಥಿಕತೆಯು ಒಂದಕ್ಕೊಂದು ಹೇಗೆ ಬೆಸೆದುಕೊಂಡಿದೆ ಎಂಬುದಕ್ಕೆ ಅತ್ಯಂತ ಆಶ್ಚರ್ಯಕರ ಉದಾಹರಣೆಯೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸದ್ಯ ಎದುರಾಗಿರುವ ಅಡುಗೆ ಅನಿಲ (LPG) ಕೊರತೆಯು, ಅಮೆರಿಕದ ಪ್ರಮುಖ ರಾಜ್ಯವಾದ ಕ್ಯಾಲಿಫೋರ್ನಿಯಾದಲ್ಲಿ ಗ್ಯಾಸೋಲಿನ್ (ಪೆಟ್ರೋಲ್) ಬೆಲೆ ಗಗನಕ್ಕೇರಲು ನೇರ ಕಾರಣವಾಗಿದೆ. ಇರಾನ್ ಮತ್ತು ಯುಎಸ್-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿ (fuel supply chain) ಉಂಟಾಗಿರುವ ವ್ಯತ್ಯಯವೇ ಇದಕ್ಕೆ ಮುಖ್ಯ ಕಾರಣ ಎಂದು ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ.

    ಈ ಸುದ್ದಿಯ ಮುಖ್ಯಾಂಶಗಳು

    • ಭಾರತದ ಎಲ್‌ಪಿಜಿ ಕೊರತೆ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಗ್ಯಾಲನ್‌ಗೆ $6 ದಾಟಿದ ಇಂಧನ ದರಕ್ಕೆ ಪಶ್ಚಿಮ ಏಷ್ಯಾದ ಯುದ್ಧವೇ ಪ್ರಮುಖ ಕಾರಣವಾಗಿದೆ.
    • ಅಡುಗೆ ಅನಿಲದ ಬಿಕ್ಕಟ್ಟು ನಿವಾರಿಸಲು ಭಾರತೀಯ ತೈಲ ಕಂಪನಿಗಳು ‘ಅಲ್ಕಿಲೇಟ್ಸ್’ (Alkylate) ಎಂಬ ಪೆಟ್ರೋಲ್ ರಾಸಾಯನಿಕದ ಉತ್ಪಾದನೆಯನ್ನು ಕಡಿತಗೊಳಿಸಿವೆ.
    • ಕ್ಯಾಲಿಫೋರ್ನಿಯಾದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಳಸುವ ವಿಶೇಷ ಪೆಟ್ರೋಲ್ ತಯಾರಿಕೆಗೆ ಭಾರತದ ಈ ‘ಅಲ್ಕಿಲೇಟ್ಸ್’ ರಫ್ತು ಅತ್ಯಂತ ನಿರ್ಣಾಯಕವಾಗಿತ್ತು.

    ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

    ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟು ಸೃಷ್ಟಿಯಾಗಿದ್ದು ಹೇಗೆ?

    ಭಾರತವು ತನ್ನ ಅಡುಗೆ ಅನಿಲದ ಅಗತ್ಯಕ್ಕಾಗಿ ಶೇಕಡಾ 90 ಕ್ಕಿಂತ ಹೆಚ್ಚು ಮಧ್ಯಪ್ರಾಚ್ಯ ದೇಶಗಳನ್ನು ಅವಲಂಬಿಸಿದೆ. ಆದರೆ ಯುದ್ಧದ ಕಾರಣದಿಂದಾಗಿ ಇರಾನ್ ದೇಶವು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಸ್ಟ್ರೇಟ್ ಆಫ್ ಹಾರ್ಮುಜ್’ (Strait of Hormuz) ಅನ್ನು ಭಾಗಶಃ ಮುಚ್ಚಿರುವುದರಿಂದ ಭಾರತಕ್ಕೆ ಎಲ್‌ಪಿಜಿ ಆಮದು ಮಾಡಿಕೊಳ್ಳುವುದು ಕಷ್ಟವಾಗಿದೆ. ದೇಶೀಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದರಿಂದ, ಭಾರತ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತರಾಗಲು ದೇಶದ ತೈಲ ಶುದ್ಧೀಕರಣ ಸಂಸ್ಥೆಗಳಿಗೆ (Refiners) ಸೂಚಿಸಿತು. ಪರಿಣಾಮವಾಗಿ, ಭಾರತೀಯ ಕಂಪನಿಗಳು ದೇಶೀಯ ಬಳಕೆಗಾಗಿ ಅಡುಗೆ ಅನಿಲ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿವೆ.

    ಕ್ಯಾಲಿಫೋರ್ನಿಯಾದ ಮೇಲೆ ಇದರ ಪರಿಣಾಮವೇನು?

    ಭಾರತೀಯ ತೈಲ ಸಂಸ್ಕರಣಾಗಾರಗಳು ಅಡುಗೆ ಅನಿಲ ಉತ್ಪಾದನೆಗೆ ಆದ್ಯತೆ ನೀಡಿದ್ದರಿಂದ, ಪೆಟ್ರೋಲ್ ತಯಾರಿಕೆಯಲ್ಲಿ ಬಳಸಲಾಗುವ ‘ಅಲ್ಕಿಲೇಟ್ಸ್’ ಎಂಬ ರಾಸಾಯನಿಕದ ಉತ್ಪಾದನೆ ಮತ್ತು ರಫ್ತನ್ನು ಗಣನೀಯವಾಗಿ ಕಡಿತಗೊಳಿಸಿವೆ. ಭಾರತ ಕಚ್ಛಾ ತೈಲವನ್ನು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆದರೆ, ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳು ಕಚ್ಚಾ ತೈಲವನ್ನು ಸಂಸ್ಕರಿಸಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ತಯಾರಿಸಿ ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಸರಬರಾಜು ಮಾಡುತ್ತವೆ. ಈ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಆಲ್ಕಿಲೇಟ್ಸ್ ಕೂಡ ಒಂದು.

    ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

    ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ವಾಯು ಮಾಲಿನ್ಯವನ್ನು (Smog) ಕಡಿಮೆ ಮಾಡಲು ಅತ್ಯಂತ ಶುದ್ಧವಾದ ವಿಶೇಷ ಇಂಧನ ಮಿಶ್ರಣವನ್ನು ಬಳಸಲಾಗುತ್ತದೆ. ಈ ವಿಶೇಷ ಪೆಟ್ರೋಲ್ ತಯಾರಿಕೆಗೆ ಭಾರತದಿಂದ ರಫ್ತಾಗುತ್ತಿದ್ದ ‘ಅಲ್ಕಿಲೇಟ್ಸ್’ ಅತ್ಯಗತ್ಯವಾಗಿತ್ತು. ಈಗ ಭಾರತದಿಂದ ಇದರ ಪೂರೈಕೆ ಸ್ಥಗಿತಗೊಂಡಿರುವುದರಿಂದ, ಕ್ಯಾಲಿಫೋರ್ನಿಯಾದಲ್ಲಿ ಪೆಟ್ರೋಲ್ ಕೊರತೆ ಉಂಟಾಗಿ ದರವು 2022 ರ ನಂತರದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರತಿ ಗ್ಯಾಲನ್‌ಗೆ ಬೆಲೆ 6 ಡಾಲರ್ ಆಗಿದೆ. ಸುಮಾರು 577 ರೂ. ಒಂದು ಗ್ಯಾಲನ್ ಎಂದರೆ ಸುಮಾರು 3.785 ಲೀಟರ್ ಇರುತ್ತದೆ. ಒಂದು ಲೀಟರ್ ಪೆಟ್ರೋಲ್ ಅಥವಾ ಗ್ಯಾಸೊಲಿನ್ ಬೆಲೆ ಸುಮಾರು 150 ರುಪಾಯಿಗೆ ಏರಿದೆ. ಇದು ಅಮೆರಿಕದ ಮಟ್ಟಿಗೆ ಬಹಳ ದೊಡ್ಡ ದರ.

    ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

    Source link

    ವಿವಾಹ ವಾರ್ಷಿಕೋತ್ಸವ: ದರ್ಶನ್-ವಿಜಯಲಕ್ಷ್ಮಿ ಮುಖಾಮುಖಿ ಭೇಟಿಗೆ ಅವಕಾಶ ಇದೆಯಾ? – Kannada News | Will Darshan and Vijayalakshmi meet in Parappana Agrahara Jail on Wedding Anniversary

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಮುಖಾಮುಖಿ ಭೇಟಿ ಮಾಡಲು ಅವಕಾಶ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ‘ವಿಜಯಲಕ್ಷ್ಮಿ ಅವರು ಬಂದು ಕೇಳಿಕೊಂಡಿದ್ದಾರೆ. ಮೇ 19ರಂದು ಅವರ ವಿವಾಹ ವಾರ್ಷಿಕೋತ್ಸವ (Darshan Wedding Anniversary) ಇದೆ. ಸುಪ್ರೀಂ ಕೋರ್ಟ್​​ನಲ್ಲಿ ಜಾಮೀನು ರದ್ದಾದ ಬಳಿಕ ದರ್ಶನ್ ಅವರು ಮಾನಸಿಕವಾಗಿ ಬಹಳ ಕುಗ್ಗಿದ್ದಾರೆ. ನಮಗೆ ಮನವಿ ಕೊಟ್ಟಿದ್ದಾರೆ. ಸಂಜೆಯೊಳಗೆ ನಾವು ಒಂದು ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

    ‘ಜೈಲಿನಲ್ಲಿ ಎಲ್ಲ ಕೈದಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಸರಿಯಾಗಿ ಇರಬೇಕು. ನಡತೆ ಸರಿ ಇರುವ ಕೈದಿಗಳ ಕುಟುಂಬದವರನ್ನು ಭೇಟಿ ಮಾಡಿಸುತ್ತೇನೆ. ವಯಸ್ಸಾದ ತಂದೆ-ತಾಯಿ ಇದ್ದರೆ, ಗರ್ಭಿಣಿ ಪತ್ನಿ ಇದ್ದರೆ ಭೇಟಿ ಮಾಡಿಸುತ್ತೇವೆ. ಯಾಕೆಂದರೆ ಇಲ್ಲಿ ಎಲ್ಲರ ಮಾನಸಿಕ ಆರೋಗ್ಯ ಸರಿಯಾಗಿ ಇರಬೇಕು’ ಎಂದಿದ್ದಾರೆ ಡಿಜಿಪಿ ಅಲೋಕ್ ಕುಮಾರ್.

    ಇಷ್ಟು ದಿನಗಳ ಕಾಲ ವಿಜಯಲಕ್ಷ್ಮಿ ಅವರು ಪ್ರತಿ ವಾರ ಬಂದು ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದರು. ಆದರೆ ಈಗ ಅವರು ಮನವಿ ಮಾಡಿರುವ ಭೇಟಿ ಯಾವ ರೀತಿ ಇರಲಿದೆ ಎಂಬ ಬಗ್ಗೆಯೂ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ‘ಸಾಮಾನ್ಯ ಭೇಟಿಯಲ್ಲಿ ಕೈದಿಗಳ ಹಾಗೂ ಕುಟುಂಬದವರ ನಡುವೆ ಗಾಜಿನ ಗೋಡೆ ಇರುತ್ತದೆ. ಇಂಟರ್​ಕಾಮ್ ಮೂಲಕ ಮಾತನಾಡಬೇಕು. ಆದರೆ ವಿಶೇಷ ಸಂದರ್ಭದಲ್ಲಿ ಆ ಗೋಡೆ ಇಲ್ಲದೇ ಮುಖಾಮುಖಿಯಾಗಿ ಭೇಟಿ ಮಾಡಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

    ‘ವಯಸ್ಸಾದವರು, ಚಿಕ್ಕ ಮಕ್ಕಳು, ಗರ್ಭಿಣಿಯರು, ದಿವ್ಯಾಂಗರು ಇದ್ದಾಗ ನಾವು ಸೌಕರ್ಯ ನೀಡುತ್ತೇವೆ. ಈ ರೀತಿಯ ಭೇಟಿಯಿಂದಾಗಿ ಕೈದಿಗಳಿಗೆ ತಮ್ಮ ಅಪರಾಧದ ಬಗ್ಗೆ ಆತ್ಮಾವಲೋಕನ ಮಾಡಲು ಅವಕಾಶ ಸಿಗುತ್ತದೆ. ಮುಂದಿನ ಬದುಕನ್ನು ಅವರು ತಿದ್ದಿಕೊಳ್ಳುತ್ತಾರೆ. ಆ ಉದ್ದೇಶದಿಂದ ನಾವು ಈ ರೀತಿಯ ಭೇಟಿಯನ್ನು ಉತ್ತೇಜಿಸುತ್ತೇವೆ’ ಎಂದು ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

    ಇದನ್ನೂ ಓದಿ: ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ

    ದರ್ಶನ್ ಅವರನ್ನು ಕ್ವಾರೆಂಟೈನ್ ಸೆಲ್​ನಲ್ಲಿ ಇಡಲಾಗಿದೆ ಎಂಬ ಆರೋಪ ಬಂದಿತ್ತು. ಅದು ತಪ್ಪು ತಿಳಿವಳಿಕೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ‘ಕೋವಿಡ್ ಸಮಯದಲ್ಲಿ ಅದು ಕ್ವಾರಂಟೈನ್ ಸೆಲ್ ಆಗಿತ್ತು. ಆದರೆ ಅದು ಹೊಸ ಕಟ್ಟಡ. ಅದನ್ನು ಎನ್​ಎಕ್ಸ್ 1 ಎಂದು ಕರೆಯಬಹುದು. ಅದನ್ನು ಕ್ವಾರಂಟೈನ್ ಸೆಲ್ ಎಂದು ಹೇಳುವುದು ಸರಿಯಲ್ಲ. ಅಲ್ಲಿ ಎಲ್ಲ ಸೌಲಭ್ಯ ಇದೆ. ಆದರೆ ಕ್ವಾರಂಟೈನ್ ಸೆಲ್ ಎಂಬ ಹೆಸರಿನ ಕಾರಣಕ್ಕೆ ಜನರಿಗೆ ತಪ್ಪು ಭಾವನೆ ಬರುತ್ತಿದೆ’ ಎಂದಿದ್ದಾರೆ ಅಲೋಕ್ ಕುಮಾರ್.

    ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

    Source link

    Karnataka Weather Forecast: 7 ಜಿಲ್ಲೆಗಳಲ್ಲಿ ನಾಳೆ ಆರೆಂಜ್​​ ಅಲರ್ಟ್​​, ಒಂದು ವಾರ ರಾಜ್ಯದಲ್ಲಿ ವರುಣನ ಅಬ್ಬರ – Kannada News | Karnataka Weather Alert: 7 Districts Under Orange Alert Tomorrow, Heavy Rain Likely for Next 7 Days

    ಬೆಂಗಳೂರಲ್ಲಿ ಸುರಿದ ಮಳೆImage Credit source: Tv9 Kannada

    ಬೆಂಗಳೂರು, ಮೇ 18: ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆ, ಗುಡುಗು-ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರಿ ಮಳೆಯ ಸಾಧ್ಯತೆ ಹಿನ್ನೆಲೆ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್​​ ಮತ್ತು ಕಲಬುರಗಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ನಾಳೆ (ಮೇ 19) ಮಳೆಯಾಗಲಿದ್ದು, ಆ ಪೈಕಿ 7 ಜಿಲ್ಲೆಗಳಲ್ಲಿ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ.

    ಮುಖ್ಯಾಂಶಗಳು

    • ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳು ಮಳೆ
    • ಭಾರೀ ಮಳೆ ಜೊತೆಗೆ ಗುಡುಗು-ಮಿಂಚು & ಬಿರುಗಾಳಿ ಸಾಧ್ಯತೆ
    • ರಾಜ್ಯದ 7 ಜಿಲ್ಲೆಗಳಲ್ಲಿ ನಾಳೆ ಆರೆಂಜ್​​ ಅಲರ್ಟ್​​ ಘೋಷಣೆ

    ಎಲ್ಲೆಲ್ಲಿ ಮಳೆ ಅಬ್ಬರ?

    ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉಳಿದಂತೆ ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ನೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಮೈಸೂರಿನಲ್ಲಿಯೂ ಮಳೆಯ ಮುನ್ಸೂಚನೆ ಇದೆ.

    ಇದನ್ನೂ ಓದಿ: ಬೆಂಗಳೂರಿನ ವಿವಿಧೆಡೆ ಗಾಳಿ ಮಳೆ; ಸಂಚಾರ ಅಸ್ತವ್ಯಸ್ತ, ವಾಹನ ಸವಾರರ ಪರದಾಟ

    ಮುಂದಿನ 7 ದಿನಗಳು ಮಳೆ ಸಾಧ್ಯತೆ

    ಉತ್ತರ ಒಳನಾಡು ಭಾಗದಲ್ಲಿ ಮೇ 21ರವರೆಗೆ ಮಳೆಯ ಚಟುವಟಿಕೆ ಮುಂದುವರಿಯುವ ನಿರೀಕ್ಷೆಯಿದ್ದು, ಬಳಿಕ ಹವಾಮಾನದಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು. ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯೊಂದಿಗೆ ಗುಡುಗು-ಮಿಂಚಿನ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮಧ್ಯಾಹ್ನದ ಬಳಿಕ ಮೋಡಗಟ್ಟುವಿಕೆ ಹಾಗೂ ಸಂಜೆ ವೇಳೆಗೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

    Source link